varthabharthi

ಬುಡಬುಡಿಕೆ

ಇದನ್ನು ಅಮೆರಿಕದಲ್ಲಿ ಯಾರು, ಯಾರಿಗೆ ಯಾವಾಗ ಹೇಳಿದರು?

ವಾರ್ತಾ ಭಾರತಿ : 9 Dec, 2015

ಎಲ್ಲಿ ನೋಡಿದರಲ್ಲಿ ‘ಐಸಿಸ್ ಉಗ್ರರಿಂದ ರಿಕ್ರೂಟ್‌ಮೆಂಟ್’ ‘ಐಸಿಸ್ ಉಗ್ರ ಸಂಘಟನೆಗೆ ನೇಮಕಾತಿ’ ಇತ್ಯಾದಿಗಳೇ ಮಾಧ್ಯಮಗಳಲ್ಲಿ ಸುದ್ದಿ. ಭಟ್ಕಳದಿಂದ ಐಸಿಸ್‌ಗೆ ನೇಮಕಾತಿ, ಬೆಂಗಳೂರಿನಿಂದ ನೇಮಕಾತಿ ಎಂಬಿತ್ಯಾದಿಯಾಗಿ ಬರೆದು ಪತ್ರಕರ್ತ ಎಂಜಲು ಕಾಸಿಗೆ ಸಾಕಾಗಿತ್ತು. ಈ ನೇಮಕಾತಿ ಎಲ್ಲಿ ನಡೆಯುತ್ತದೆ, ಯಾವ ಹಾಲ್‌ನಲ್ಲಿ ಎಕ್ಸಾಂ ನಡೆಯುತ್ತದೆ ಎಂದೆಲ್ಲ ಅವನು ತಲೆಕೆಡಿಸಿಕೊಳ್ಳುತ್ತಿದ್ದ. ಹೀಗಿರುತ್ತಾ...ಒಂದು ದಿನ ಮಹತ್ವದ ಮಾಹಿತಿಯೊಂದು ಎಂಜಲು ಕಾಸಿಗೆ ದೊರಕಿತು. ಈ ಬಾರಿ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿರುವುದರಿಂದ ಭಾರತದ ಐಸಿಸ್ ನೇಮಕಾತಿಗಳನ್ನು ಹಿಂಪಡೆಯಲಾಗಿದೆ. ಹೊಸದಾಗಿ ಪರೀಕ್ಷೆ ಮಾಡಿ, ಬಳಿಕ ನೇಮಕಾತಿ ಮಾಡಲಾಗುತ್ತದೆ ಎಂದು ಸಿರಿಯಾದ ಮುಖ್ಯ ಸಂದರ್ಶನಾಧಿಕಾರಿ ಘೋಷಿಸಿದ್ದ. ಈ ಸ್ಕೂಪಿನ ಹಿಂದೆ ಹೊರಟ ಎಂಜಲು ಕಾಸಿಗೆ ಐಸಿಸ್ ಸಂಘಟನೆಯ ಸೋರಿಕೆಯಾದ ಪ್ರಶ್ನೆ ಪತ್ರಿಕೆ ದೊರಕಿ ಬಿಟ್ಟಿತು. ಅವನ ಖುಷಿಗೆ ಪಾರವೇ ಇಲ್ಲ. ಐಸಿಸ್ ನೇಮಕಾತಿಯ ಸೋರಿಕೆಯಾದ ಪ್ರಶ್ನೆ ಪತ್ರಿಕೆಯ ಪ್ರಶ್ನೆಗಳ ವಿವರ ಕೆಳಗಿನಂತಿದೆ.

    ಪರೀಕ್ಷೆಗೆ ಕುಳಿತುಕೊಳ್ಳಲು ಬೇಕಾಗಿರುವ ಅರ್ಹತೆಗಳು: 1.ಕನಿಷ್ಠ ಪಕ್ಷ ಪ್ರಾದೇಶಿಕವಾದ ತಮ್ಮ ತಮ್ಮ ಪ್ರದೇಶಗಳಲ್ಲಿರುವ ಯಾವುದಾದರೂ ಉಗ್ರ ಸಂಘಟನೆಗಳಲ್ಲಿ (ಮಾನ್ಯತೆ ಪಡೆದ)ಎರಡು ವರ್ಷ ಕೆಲಸ ಮಾಡಿರುವ ಅನುಭವವಿರಬೇಕು.
    2.ಭಾರತದಲ್ಲಿ ಸಕ್ರಿಯವಾಗಿರುವ ಅಭಿನವ ಭಾರತ, ಸನಾತನ ಸಂಸ್ಥೆಯಂತಹ ಕೇಸರಿ ಸಂಘಟನೆಗಳಲ್ಲಿ ತೊಡಗಿದವರೂ ಈ ಪರೀಕ್ಷೆಗೆ ಹಾಜರಾಗಬಹುದು.(ಆ ಸಂಘಟನೆಗಳಲ್ಲಿ ಕನಿಷ್ಠ ಒಂದೆರಡು ಸ್ಫೋಟ ಪ್ರಕರಣಗಳಲ್ಲಾದರೂ ಗುರುತಿಸಿರಬೇಕು)
    3.ಯುವಕರಿಗೆ ಆದ್ಯತೆ. ನಕಲಿ ಪಾಸ್‌ಪೋರ್ಟ್ ಗಳು ಹೊಂದಿರುವುದು ಅತ್ಯಗತ್ಯ.

***
ಮಾದರಿ ಪ್ರಶ್ನೆ ಪತ್ರಿಕೆ:
ಒಂದೇ ಒಂದು ಏಟಿಗೆ ಉತ್ತರಿಸಬೇಕಾದ ಪ್ರಶ್ನೆಗಳು.
    1.ಅಮೆರಿಕದ ಬಾಂಬ್‌ಗಳು ಸಿರಿಯಾದ 40 ಜನರನ್ನು ಕೊಲ್ಲುತ್ತವೆ. ಆಗ ಪ್ಯಾರಿಸ್‌ನಲ್ಲಿ ಐಸಿಸ್ ಆತ್ಮಹತ್ಯಾದಳಗಳು ಕೊಲ್ಲಬೇಕಾದ ಅಮಾಯಕರ ಸಂಖ್ಯೆ ಎಷ್ಟು?
    2.ಸಂಜೋತಾ ಎಕ್ಸ್ ಪ್ರೆಸ್‌ನ ಬಾಂಬ್ ಸ್ಫೋಟಕ್ಕೆ ಕೇಸರಿ ಉಗ್ರರು ಬಳಸಿರುವ ಬಾಂಬ್‌ಗಳ ಮಾದರಿ ಯಾವುದು?
    3.ಕೇಸರಿ ಉಗ್ರರು-ಐಸಿಸ್ ಉಗ್ರರ ಕೆಲವು ಸಮಾನ ಅಂಶಗಳನ್ನು ಬರೆಯಿರಿ.
    4.ಕೇಸರಿ ಉಗ್ರರು ಮತ್ತು ಹಸಿರು ಉಗ್ರರು ಇವರ ಕೊಡುಕೊಳ್ಳುವಿಕೆಗಳ ಕುರಿತಂತೆ ಬರೆಯಿರಿ.
5.ಯುರೋಪಿನ ಸೇನೆಗಳು ಒಂದು ಸಾವಿರ ಮಕ್ಕಳನ್ನು ಕೊಂದು ಹಾಕಿದರೆ, ಐಸಿಸ್ ಉಗ್ರರು ಕೊಂದು ಹಾಕಬೇಕಾದ ಮಕ್ಕಳ ಸಂಖ್ಯೆ ಎಷ್ಟು?
6.ತಾಲಿಬಾನ್ ಹೋರಾಟಗಾರರು ತಮ್ಮ ತಾಯ್ನಡಿನ ಸ್ವಾತಂತ್ರಕ್ಕಾಗಿ ಹೋರಾಡುತ್ತಿದ್ದಾರೆ.
ಇದನ್ನು ಅಮೆರಿಕದಲ್ಲಿ ಯಾರು, ಯಾರಿಗೆ ಯಾವಾಗ ಹೇಳಿದರು?

***
ಆರಿಸಿ ಬರೆಯಿರಿ:
    1.ಭಾರತದ ಉಗ್ರರು ಹಿಂಸೆಗೆ ಬಳಸುತ್ತಿರುವ ಸ್ಫೋಟಕದ ಹೆಸರೇನು
    ಅ. ಆರ್‌ಡಿಎಕ್ಸ್ ಆ. ತ್ರಿಶೂಲ ಇ. ಗೋವು
    2.ಇರಾಕ್‌ನಲ್ಲಿ ಅಮೆರಿಕ ಸೈನ್ಯ ಸೋಲಿಸಿದ್ದು ಯಾರನ್ನು?
    ಅ. ಇರಾಕ್‌ನ ಜನರನ್ನು ಆ. ಸದ್ದಾಂನ್ನು. ಇ. ವಿಶ್ವದ ಶಾಂತಿಯನ್ನು
    3.ಐಸಿಸ್‌ನ ತಾಯಿಯ ಹೆಸರನ್ನು ಬರೆಯಿರಿ
    ಅ. ಅಮೆರಿಕ ಆ. ವಿಶ್ವಸಂಸ್ಥೆ. ಇ. ಅಮೆರಿಕ ಮತ್ತು ವಿಶ್ವಸಂಸ್ಥೆ
    4.ಐಸಿಸ್‌ಗೆ ಭಾರತದಲ್ಲಿ ಸಹಕಾರ ನೀಡುತ್ತಿರುವ ಸಂಘಟನೆ ಯಾವುದು?
    ಅ. ಸನಾತನ ಸಂಸ್ಥೆ. ಆ. ಆರೆಸ್ಸೆಸ್. ಇ. ಅಭಿನವ ಭಾರತ
    5.ಅಫ್ಘಾನಿಸ್ತಾನದ ಒಂದು ಲಕ್ಷ ಮಕ್ಕಳ ಪ್ರಾಣಕ್ಕೆ ಪ್ಯಾರಿಸ್‌ನ ಎಷ್ಟು ಮಕ್ಕಳ ಪ್ರಾಣ ಸಮ?
    ಅ. ಒಂದು. ಆ. ಎರಡು. 3. ನಾಲ್ಕು ಮಕ್ಕಳು.

***
ಗಣಿತ:
1. ರಶ್ಯಾವು ಐಸಿಸ್‌ಗೆ ನೂರು ಕೋಟಿ ರೂಪಾಯಿಯ ಶಸ್ತ್ರಾಸ್ತ್ರ ಪೂರೈಸುತ್ತದೆ. ಅಮೆರಿಕ ಐನೂರು ಕೋಟಿಯ ಶಸ್ತ್ರಾಸ್ತ್ರ ಪೂರೈಸುತ್ತದೆ. ಇವುಗಳನ್ನು ಒಂದು ಸಾವಿರ ಐಸಿಸ್ ಕಾರ್ಯಕರ್ತರಿಗೆ ಸಮಾನವಾಗಿ ಹಂಚಿ.
    2.ರಶ್ಯಾದ ದಾಳಿಗೆ ಸಿರಿಯಾದಲ್ಲಿ ಒಂದು ಸಾವಿರ ಮಕ್ಕಳು ಸಾಯುತ್ತಾರೆ. ಅಮೆರಿಕದ ದಾಳಿಗೆ 3 ಸಾವಿರ ಸಿರಿಯಾದ ಮಕ್ಕಳು ಸಾಯುತ್ತಾರೆ. ಈಗ ಐಸಿಸ್ ಕೊಲ್ಲಬೇಕಾದ ಉಳಿದ ಮಕ್ಕಳ ಸಂಖ್ಯೆ ಏನು?
    3.ಪ್ಯಾರಿಸ್‌ನಲ್ಲಿ ಹತ್ಯೆಗೀಡಾದ ಅಮಾಯಕರಿಗಾಗಿ ಫ್ರಾನ್ಸ್ ಒಂದು ಲಕ್ಷ ಕ್ಯಾಂಡಲ್ ಹಚ್ಚುತ್ತದೆ. ಅಮೆರಿಕ, ಎರಡು ಲಕ್ಷ ಕ್ಯಾಂಡಲ್ ಹಚ್ಚುತ್ತದೆ. ಹಾಗಾದರೆ ಸಿರಿಯಾದ ಅಮಾಯಕರ ಸಾವಿಗಾಗಿ ಅಮೆರಿಕ ಮತ್ತು ಪ್ಯಾರಿಸ್ ಹಚ್ಚಬಹುದಾದ ಕ್ಯಾಂಡಲ್‌ಗಳ ಸಂಖ್ಯೆ ಎಷ್ಟು?
    4.ಪಾಕಿಸ್ತಾನದ ಉಗ್ರರು ಪಾಕಿಸ್ತಾನವನ್ನು ಸರ್ವನಾಶ ಮಾಡಲು 50 ವರ್ಷ ತೆಗೆದುಕೊಂಡರು. ಅಫ್ಘಾನಿಸ್ತಾನದ ತಾಲಿಬಾನ್‌ಗಳು ಐದು ವರ್ಷ ತೆಗೆದುಕೊಂಡರು. ಐಸಿಸ್ ಕೇವಲ ನಾಲ್ಕು ವರ್ಷಗಳಲ್ಲಿ ಸಿರಿಯಾವನ್ನು ನಾಶ ಮಾಡಲು ಯಶಸ್ವಿಯಾಯಿತು. ಹೀಗಿರುವಾಗ ಭಾರತವನ್ನು ಸರ್ವನಾಶ ಮಾಡಲು ಕೇಸರಿ ಉಗ್ರರಿಗೆ ತಗಲಬಹುದಾದ ವರ್ಷ ಎಷ್ಟು?
    5.ಅಮೆರಿಕಕ್ಕೆ ನೂರು ಬ್ಯಾರಲ್ ತೈಲದ ಅಗತ್ಯವಿದೆ. ಈಗ ಇರಾಕ್‌ನಲ್ಲಿ ಎಷ್ಟು ಬ್ಯಾರಲ್ ರಕ್ತ ಹರಿಯಬೇಕಾಗುತ್ತದೆ?
6. ಭಾರತದ ಉಗ್ರರು ಬಾಬರೀ ಮಸೀದಿ ಧ್ವಂಸಗೊಳಿಸಲು 4 ಗಂಟೆ ತೆಗೆದುಕೊಂಡರೆ, ತಾಲಿಬಾನ್ ಉಗ್ರರು ಬಾಮಿಯಾನ್ ಧ್ವಂಸಗೊಳಿಸಲು ಬಳಸುವ ಸಮಯ ಎಷ್ಟು?
ವ್ಯಾಕರಣ:
    1.ಸಾವಿರ ಉಗ್ರರಿಗೆ ಅಮೆರಿಕದ ಸಿಐಎ ತರಬೇತಿಯನ್ನು ನೀಡುತ್ತದೆ- ಇದರ ಭವಿಷ್ಯತ್ ಕಾಲವನ್ನು ತಿಳಿಸಿರಿ.
    2.ಕಾಬೂಲ್, ಬಾಗ್ದಾದ್ ಅತ್ಯಂತ ಶ್ರೀಮಂತ ಸಾಂಸ್ಕೃತಿಕ ನಗರವಾಗಿತ್ತು- ಇದರ ವರ್ತಮಾನ ಕಾಲವನ್ನು ವಿವರಿಸಿ.
    


3.ಇರಾಕ್ ಯುದ್ಧವೂ ಒಂದು ಪ್ರಮಾದವಾಗಿತ್ತು: ಬ್ರಿಟನ್- ಇದರ ಭೂತಕಾಲವನ್ನು ವಿವರಿಸಿ. *ಚೇಳಯ್ಯ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)