varthabharthi

ಬುಡಬುಡಿಕೆ

ಕರಾವಳಿ ಕಾಂಗ್ರೆಸ್‌ಗೆ ಆಸ್ಕರ್ ಪ್ರಶಸ್ತಿ ಬಂತಂತೆ..!

ವಾರ್ತಾ ಭಾರತಿ : 20 Dec, 2015
*ಚೇಳಯ್ಯ

‘ಕರಾವಳಿ ಕಾಂಗ್ರೆಸ್‌ಗೆ ಆಸ್ಕರ್ ಪ್ರಶಸ್ತಿ’ ಎನ್ನುವುದು ಬೆಂಗಳೂರಿನಲ್ಲಿದ್ದ ಪತ್ರಕರ್ತ ಎಂಜಲು ಕಾಸಿಯ ಕಿವಿಗೆ ಬಿದ್ದು ಬೆಚ್ಚಿ ಬಿದ್ದ. ಅತ್ಯುತ್ತಮ ಸಿನಿಮಾಗಳಿಗೆ ಸಿಗುವ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಕರಾವಳಿ ಕಾಂಗ್ರೆಸ್‌ಗೆ ಯಾಕೆ ನೀಡಲಾಯಿತು? ಬಹುಶಃ ರಮಾನಾಥ ರೈ, ಯು.ಟಿ. ಖಾದರ್, ವಿನಯಕುಮಾರ್ ಸೊರಕೆ ಮೊದಲಾದವರ ಅತ್ಯುತ್ತಮ ಅಭಿನಯವನ್ನು ಕಂಡು, ಕಾಂಗ್ರೆಸ್ ಪಕ್ಷವೇ ಒಂದು ಬಾಲಿವುಡ್ ಸಿನೆಮಾ ಆಗಿರಬಹುದು ಎಂದು ಭಾವಿಸಿ ಕೊಟ್ಟಿರಬಹುದೇ ಎಂದು ಕಾಸಿ ಅನುಮಾನಪಟ್ಟ. ಆದರೂ ಇದು ಚಿತ್ರೀಕರಣವಾಗಿ, ಭಾರತದಿಂದ ಆಯ್ಕೆಯಾಗಿ ಹೋಗಬೇಕಲ್ಲವೇ? ಅದಕ್ಕೆ ಮೋದಿ ಸರಕಾರ ಅವಕಾಶ ಕೊಟ್ಟದ್ದು ಹೇಗೆ? ಕ್ಯಾಮರಾದ ಮುಂದೆ ಅತ್ಯುತ್ತಮವಾಗಿ ನರೇಂದ್ರ ಮೋದಿಯವರು ಅಭಿನಯಿಸುತ್ತಿರುವಾಗ, ಸಹನಟನ ಪಾತ್ರಗಳಲ್ಲಿ, ಕಾಮೆಡಿ ಪಾತ್ರಗಳಲ್ಲಿ ನಟಿಸುತ್ತಿರುವ ಕರಾವಳಿ ಕಾಂಗ್ರೆಸ್ಸಿಗರಿಗೆ ಆಸ್ಕರ್ ಪ್ರಶಸ್ತಿ ಸಿಕ್ಕಿದ್ದು ಹೇಗೆ? ಎಂಬಿತ್ಯಾದಿಯಾಗಿ ಚಿಂತಿಸುತ್ತಾ ಒಂದಿಡೀ ದಿನವನ್ನು ಕಳೆದ. ಅತ್ಯುತ್ತಮವಾಗಿ ನಟಿಸಿದ ರಾಜಕಾರಣಿಗಳಿಗೂ ಆಸ್ಕರ್ ಪ್ರಶಸ್ತಿಯನ್ನು ನೀಡಲಾಗುತ್ತದೆಯೇ ಎಂದು ಅನುಮಾನ ಪಟ್ಟು, ಗೂಗಲ್‌ನಲ್ಲಿ ಸರ್ಚ್ ಮಾಡಿದ. ಕೊನೆಗೂ ಉತ್ತರ ತಿಳಿಯದೇ ಮಂಗಳೂರಿನ ಬಸ್ಸು ಹತ್ತಿ, ಕಾಂಗ್ರೆಸ್ ಮುಖಂಡರನ್ನು ಭೇಟಿ ಮಾಡಿದ.


ದಾರಿಯಲ್ಲಿ ಕಾಂಗ್ರೆಸ್ ಬಾವುಟ ಹಿಡಿದ ಕಾರ್ಯಕರ್ತನಲ್ಲಿ ಕೇಳಿದ ‘‘ಸಾರ್ ಅಭಿನಂದನೆಗಳು...’’


‘‘ಎಂತಕ್ಕೆ ಅಭಿನಂದನೆ...ಯಾವ ಕರ್ಮಕ್ಕೇಂತ ಹೇಳಿ...’’ ಕಾರ್ಯಕರ್ತ ಸಿಟ್ಟಿನಲ್ಲಿದ್ದಂತಿದ್ದ.
‘‘ಅದೇ ಸಾರ್...ಕರಾವಳಿ ಕಾಂಗ್ರೆಸ್‌ಗೆ ಆಸ್ಕರ್ ಪ್ರಶಸ್ತಿ ಸಿಕ್ಕಿತಂತೆ ಹೌದಾ...ಬೆಂಗಳೂರಿನಲ್ಲಿ ಭಾರೀ ಸುದ್ದಿ ಉಂಟು...’’ ಕಾಸಿ ಕೇಳಿದ.

 ‘‘ನಿನಗೆ ಮಂಡೆ ಸರಿ ಇಲ್ಲವಾ? ಆಸ್ಕರ್ ಹೆಸರು ಹೇಳಿದರೆ ನನ್ನ ತಲೆಗೆ ಏರುತ್ತದೆ...ಸುಮ್ಮನೆ ಹೋಗು ನೀನು...’’ ಕಾರ್ಯಕರ್ತ ಇನ್ನೂ ಸಿಟ್ಟಾದ. ‘‘ಬೆಂಗಳೂರಿನಲ್ಲಿ ತುಂಬಾ ಸುದ್ದಿ ಉಂಟು. ರಾಜ್ಯಾಧ್ಯಕ್ಷರು ಆಸ್ಕರ್ ಪ್ರಶಸ್ತಿ ತೆಗೆದುಕೊಂಡು ಹೋಗಲು ಹಾಲಿವುಡ್‌ಗೆ ಹೋಗುತ್ತಾರೆ ಎನ್ನುವ ಸುದ್ದಿ ಉಂಟು...’’ ಕಾಸಿ ಇನ್ನಷ್ಟು ಕೆದಕಿದ.


‘‘ನೀವೆಂತ ಪತ್ರಕರ್ತರು ಮಾರಾಯರೆ...ಕುಸಾಲು ಯಾವುದು, ಸೀರಿಯಸ್ ಯಾವುದು ಎಂದು ಗೊತ್ತಾಗುವುದಿಲ್ಲವೇ? ಕರಾವಳಿ ಕಾಂಗ್ರೆಸ್‌ನಲ್ಲಿ ಬಂಡಾಯ, ಪಕ್ಷದ ನಾಯಕ ಆಸ್ಕರ್ ಅವರು ಕೊಟ್ಟ ಪ್ರಶಸ್ತಿ ಎಂದು ಜನರು ತಮಾಷೆ ಮಾಡಿ ನಗುತ್ತಿದ್ದಾರೆ...ಇದನ್ನೇ ನೀವು ಆಸ್ಕರ್ ಪ್ರಶಸ್ತಿ ಎಂದು ನಮ್ಮತ್ರ ಬಂದು ಕೇಳಿ, ನಮಗೆ ಮತ್ತಷ್ಟು ಸಿಟ್ಟು ಬರಿಸುವುದಾ?’’
‘‘ಹಾಗಾದರೆ ಆಸ್ಕರ್ ಪ್ರಶಸ್ತಿ ಸಿಕ್ಕಿದ್ದು ಸುಳ್ಳಾ?’’ ಕಾಸಿ ನಿರಾಸೆಯಿಂದ ಕೇಳಿದ.


‘‘ನಿನ್ನ ಬೊಜ್ಜ. ಕರಾವಳಿಯಲ್ಲಿ ಎಲ್ಲ ಸರಿ ಉಂಟು ಎಂದು ಗೊತ್ತಾದದ್ದೇ ದಿಲ್ಲಿಯಲ್ಲಿ ಕೂತ ಆಸ್ಕರಣ್ಣ, ಒಳಗೊಳಗೆ ಯೋಗಾಸನ ಮಾಡುವುದಕ್ಕೆ ಶುರು ಮಾಡಿದರು. ಎಲ್ಲಿ ಜಯಪ್ರಕಾಶ ಹೆಗ್ಡೆಯವರು ಮೇಲೆ ಬಂದು ಬಿಡುತ್ತಾರ ಎಂದು ರಾಹುಲ್ ಗಾಂಧಿಯ ಕಿವಿಯಲ್ಲಿ ಹಾರ್ಮೋನಿಯಂ ನುಡಿಸತೊಡಗಿದರು. ಇದೀಗ ಆಸ್ಕರ್ ಅವರು ಕಾಂಗ್ರೆಸ್‌ಗೆ ಕೊಟ್ಟ ಕೊಡುಗೆಯೇ ಇಲ್ಲಿನ ಬಂಡಾಯ....’’


‘‘ಆದರೂ ಅವರು ಹಿರಿಯರಲ್ಲವಾ? ಅವರು ಹೇಳಿದರೆ ಮುಗಿಯಿತು. ಅದನ್ನು ಬಾಯಿ ಮುಚ್ಚಿ ಪಾಲಿಸುವುದು ಕಾಂಗ್ರೆಸ್ ಪರಂಪರೆಯಲ್ಲವೇ? ಆ ಪರಂಪರೆಯನ್ನು ಕಾಪಾಡುವುದು ನಿಮ್ಮೆಲ್ಲರ ಕರ್ತವ್ಯವಲ್ಲವೇ?’’ ಕಾಸಿ ಕೇಳಿದ.
‘‘ನೀವೆಂತ ಆಸ್ಕರಣ್ಣನ ಸೀಕ್ರೆಟ್ ಏಜೆಂಟಾ? ಅಧಿಕಾರ ಉಂಟು ಅಂತ ಮನೆಗೆ ಬೆಂಕಿ ಕೊಟ್ಟರೆ ನಾವು ನೋಡಿ ಸುಮ್ಮನಿರುವುದಕ್ಕಾಗುತ್ತದಾ? ಮತ್ತೆ ಇಲ್ಲಿ ಜನರ ಬಳಿಗೆ ಓಟು ಕೇಳುವುದಕ್ಕೆ ಆಸ್ಕರಣ್ಣ ಬರ್ತಾರ? ನಾವೇ ಹೋಗಿ ಉಗಿಸಿಕೊಳ್ಳಬೇಕು...ಇದೆಲ್ಲ ಬೇಕಾ...’’


‘‘ಆದರೂ ಹಿರಿಯರಿಗೆ ಪ್ರಾಧಾನ್ಯತೆ ಕೊಡಬೇಡವೇ?’’ ಕಾಸಿ ಕೇಳಿದ.
‘‘ಅದಕ್ಕೆ ಅಲ್ಲವಾ ಆಸ್ಕರಣ್ಣನನ್ನು ಹಿರಿಯರು ಎಂದು ನಾವು ಹಿಂಬಾಗಿಲಿಂದ ರಾಜ್ಯಸಭೆಗೆ ಕಳುಹಿಸುತ್ತಾ ಬಂದದ್ದು. ಕಾಂಗ್ರೆಸ್‌ನಲ್ಲಿ ವಯಸ್ಸಾದರೆ ಅದಕ್ಕೆ ಹಿರಿಯರು ಎಂದು ಹೇಳುವುದಾ? ಅದರಿಂದ ನಮಗೇನಾದರೂ ಪ್ರಯೋಜನವಾಗುವುದು ಬೇಡವಾ....ನಮ್ಮ ಜಿಲ್ಲಾ ಕಾಂಗ್ರೆಸ್ ಕಚೇರಿಯ ಒಳಗೆ ಇರುವ ಗೋದ್ರೇಜ್ ಕಪಾಟಿಗೆ 40 ವರ್ಷ ಆಗಿದೆ. ಗಟ್ಟಿ ಮುಟ್ಟಾಗಿದೆ. ಹಾಗೆ ಅಂತ ಅದನ್ನು ಹಿರಿಯರು ಎಂದು ವಿಧಾನಪರಿಷತ್ ಚುನಾವಣೆಗೆ ನಿಲ್ಲಿಸುವುದಕ್ಕೆ ಆಗುತ್ತದ? ಒಬ್ಬ ಪತ್ರಕರ್ತರಾಗಿ ನೀವು ಮಾತನಾಡುವ ರೀತಿಯ ಇದು...ನಿಮಗಾದರೂ ಒಂದಿಷ್ಟು ಅಕಲ್ ಬೇಡವಾ?’’
‘‘ಆದರೆ ಸೋನಿಯಾಗಾಂಧಿ ಹೇಳಿದ ಹಾಗೆ ಕೇಳುವುದು ನಿಮ್ಮ ಕರ್ತವ್ಯ ಅಲ್ಲವಾ? ಅವರು ಇಂದಿರಾಗಾಂಧಿಯ ಸೊಸೆಯಲ್ಲವಾ?’’ ಕಾಸಿ ಪ್ರತಿಯಾಗಿ ಪ್ರಶ್ನಿಸಿದ.


‘‘ಸೋನಿಯಾಗಾಂಧಿಗೆ ತುಳು ಗೊತ್ತುಂಟಾ...ಇಂಗ್ಲಿಸ್‌ನಲ್ಲಿ ಎಂತೆಂತೆಲ್ಲ ಚಾಡಿ ಹೇಳಿ ಆ ಅಮ್ಮನನ್ನು ಆಸ್ಕರ್ ಡೋಂಗಿ ಮಾಡುವುದಲ್ಲವಾ? ಅಂದರೆ ಅವರು ಹೇಳಿದರೂ ಎಂದರೆ ನಾವು ಗೋದ್ರೆಜ್ ಕಪಾಟಿಗೆ ಓಟು ಹಾಕುವುದೇಯಾ?’’ ಕಾರ್ಯಕರ್ತ ಸಿಟ್ಟಿನಿಂದ ಕೇಳಿದ.


‘‘ಅಂದರೆ ಪ್ರತಾಪ ಚಂದ್ರ ಶೆಟ್ಟರು ಗೋದ್ರೇಜ್ ಕಪಾಟು ಅಂತ ಹೇಳುವುದಾ?’’ ಕಾಸಿ ಅಚ್ಚರಿಯಿಂದ ಕೇಳಿದ.
‘‘ಎಬಿ...ನಾನು ಹಾಗೆ ಎಲ್ಲಿ ಹೇಳಿದೆ? ಗೋದ್ರೆಜ್ ಕಪಾಟು ಎಷ್ಟು ಪ್ರಯೋಜನ ಉಂಟು ಗೊತ್ತುಂಟಾ? ಅದರಲ್ಲಿ ಪುಸ್ತಕ ಇಡಲಿಕ್ಕೆ ಆಗುತ್ತದೆ. ಫೈಲ್ ಇಡಲಿಕ್ಕೆ ಆಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಹಣ ಇಡಲಿಕ್ಕೆ ಆಗುತ್ತದೆ. ಆದರೆ ಪ್ರತಾಪ ಚಂದ್ರ ಶೆಟ್ಟರಿಗೆ ಆ ಕೆಲಸ ಮಾಡುವುದಕ್ಕೆ ಬರುತ್ತದಾ...ಹಾಗೆ ನೋಡಿದರೆ ಪ್ರತಾಪಚಂದ್ರ ಶೆಟ್ಟರ ಎದುರು ಗೋದ್ರೇಜ್ ಕಪಾಟು ನಿಂತರೆ ನಾವು ಗೋದ್ರೇಜ್ ಕಪಾಟಿಗೆ ಓಟು ಹಾಕುವುದು. ಅದರಲ್ಲಿ ಎರಡು ಮಾತಿಲ್ಲ....’’
‘‘ಅಂದರೆ ಕಪಾಟೇ ಇವರಿಗಿಂತ ವಾಸಿ ಎನ್ನುವುದಾ?’’ ಕಾಸಿ ಮತ್ತೊಮ್ಮೆ ಸ್ಪಷ್ಟಪಡಿಸಿದ.


‘‘ಮತ್ತೆಂತ. ಕಪಾಟು ಒಟ್ಟೆ ಆದರೆ ಗುಜರಿಗೆ ಹಾಕಬಹುದು. ಇವರನ್ನು ಗುಜರಿಗೆ ಹಾಕಲಿಕ್ಕೆ ಗೊತ್ತುಂಟಾ? ಅದಕ್ಕೆ ಆಸ್ಕರ್ ಬಿಡುವುದಿಲ್ಲ. ಗುಜರಿ ಕಪಾಟಿನಲ್ಲಿ ಸಾಮಾನು ಇಡಲಿಕ್ಕೆ ಆಗುತ್ತದಾ? ನೀವೇ ಹೇಳಿ. ಗುಜರಿ ಸೇರಬೇಕಾದ ವಸ್ತುಗಳೆಲ್ಲ ಇನ್ನೂ ಕಾಂಗ್ರೆಸ್‌ನಲ್ಲಿ ಜೀವಂತ ಇರುವುದರಿಂದಲೇ ಅಲ್ಲವಾ ಈ ಕಾಂಗ್ರೆಸ್ ಪಕ್ಷ ಗುಜರಿ ಸೇರಿರುವುದು’’ ಕಾರ್ಯಕರ್ತ ಕೇಳಿದ. ‘‘ಸರಿ. ಆದೇನೇ...ದಿಲ್ಲಿಯಲ್ಲಿ ಕೂತು ಆಸ್ಕರ್ ಅವರು ಕೊಟ್ಟ ಈ ಕೊಡುಗೆಯನ್ನು ಏನು ಮಾಡುತ್ತೀರಿ...?’’ ಕಾಸಿ ಕೇಳಿದ. ‘‘ಮಾಡುವುದೆಂತ...ಗುಜರಿಗೆ ಹಾಕುವ ಎಂದರೆ, ಅಲ್ಲಿಯೂ ಒಂದು ಕೇಜಿ ಬೆಲೆ ಬಾಳದ ಕ್ಯಾಂಡಿಡೇಟನನ್ನು ನಾವು ಮಾಡುವುದಾದರೂ ಎಂತ ಅಂತ ಬೇಕಲ್ಲ? ಗೊಬ್ಬರಕ್ಕೆ ಬೇಕಾದರೆ ಬಳಸಬಹುದು...ನೋಡುವ...ಅದಕ್ಕಾಗದಿದ್ದರೆ ಮತ್ತೆಂತ ಮಾಡುವುದು...ಪ್ಲಾಸ್ಟಿಕ್ ಜೊತೆಗೆ ರೀ ಸೈಕಲ್ ಕೂಡ ಮಾಡುವುದಕ್ಕೆ ಆಗ್ಲಿಕ್ಕಿಲ್ಲ...ಒಟ್ಟಾರೆ ಪರಿಸರ ಸಮಸ್ಯೆಗೆ ಒಂದು ಹೊಸ ಸವಾಲಾಗಿ ಬಿಟ್ಟಿದ್ದಾರೆ ಈ ಹಳೆಯ ಕಾಂಗ್ರೆಸ್‌ನ ಹಿರಿಯ ನಾಯಕರು...’’ ಕಾಂಗ್ರೆಸ್ ಕಾರ್ಯಕರ್ತ ತಲೆಚಚ್ಚಿಕೊಂಡ.
ಮರು ಉತ್ತರ ನೀಡಲಾಗದ ಕಾಸಿ, ಬೆಂಗಳೂರು ಬಸ್ ಹತ್ತಿದ.


 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)