varthabharthi

ಬುಡಬುಡಿಕೆ

ರಾಷ್ಟ್ರಪತಿ ಚುನಾವಣೆ: ಅಭ್ಯರ್ಥಿ ಯಾರು?

ವಾರ್ತಾ ಭಾರತಿ : 10 Jan, 2016
ಪತ್ರಕರ್ತ

 ರಾಷ್ಟ್ರಪತಿ ಚುನಾವಣೆಗೆ ಇನ್ನೂ ಕೆಲವು ಸಮಯವಿದೆ. ಆದರೆ ಚುನಾವಣಾ ಕಣಕ್ಕೆ ಯಾರು ಇಳಿಯಲಿದ್ದಾರೆಂಬ ಬಗ್ಗೆ ಈಗಾಗಲೇ ಊಹಾಪೋಹಗಳು ಹರಿದಾಡತೊಡಗಿವೆ. ಹಾಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಇನ್ನೊಂದು ಅವಧಿಗೆ ಸ್ಪರ್ಧಿಸಲಿದ್ದಾರೆಯೇ ಎಂಬ ಬಗ್ಗೆ ಯಾರಿಗೂ ಖಾತರಿಯಿಲ್ಲ. ಆದರೆ ಅವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅತೀವ ಅಭಿಮಾನವನ್ನು ಹೊಂದಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ. ಒಂದು ವೇಳೆ ಪ್ರಣವ್ ಮತ್ತೆ ಚುನಾವಣೆಗೆ ಸ್ಪರ್ಧಿಸಿದಲ್ಲಿ, ಅವರಿಗೆ ಪ್ರಧಾನಿ ಜೊತೆಗಿರುವ ಉತ್ತಮ ಬಾಂಧವ್ಯವು ಪ್ರಯೋಜನಕ್ಕೆ ಬರುವ ಸಾಧ್ಯತೆಯಿದೆ.
ಒಂದು ವೇಳೆ ಹಾಮಿದ್ ಅನ್ಸಾರಿ ಕಣಕ್ಕಿಳಿದಲ್ಲಿ, ಅವರ ವಿರುದ್ಧ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಸ್ಪರ್ಧಿಸುವ ಎಲ್ಲಾ ಸಾಧ್ಯತೆಗಳಿವೆ. ರಾಷ್ಟ್ರಪತಿ ಸ್ಥಾನಕ್ಕೆ ಅಗತ್ಯವಿರುವ ರಾಜಕೀಯ ಹಿರಿತನವು ಸುಮಿತ್ರಾ ಮಹಾಜನ್ ಅವರಲ್ಲಿದೆ. ಈ ಮಧ್ಯೆ ಶರದ್ ಪವಾರ್ ಪಾಳಯವು, ತಮ್ಮ ನಾಯಕ ಎಲ್ಲ ಪಕ್ಷಗಳ ಸಹಮತದ ಅಭ್ಯರ್ಥಿಯಾಗಲಿದ್ದಾರೆಂಬ ಆಶಾವಾದವನ್ನು ಹೊಂದಿದೆ. ಆದರೆ ಒಂದು ವೇಳೆ ಪ್ರಣವ್ ಮುಖರ್ಜಿ ಕಣಕ್ಕಿಳಿಯಲು ನಿರ್ಧರಿಸಿದಲ್ಲಿ, ರಾಷ್ಟ್ರಪತಿ ಚುನಾವಣೆಯು ನಿಜಕ್ಕೂ ಕುತೂಹಲಕಾರಿಯಾಗಲಿದೆ. ಪ್ರಣವ್ ಮುಖರ್ಜಿಯವರ ಜ್ಞಾನ ಹಾಗೂ ಪಾಂಡಿತ್ಯದ ಬಗ್ಗೆ ಪ್ರಧಾನಿ ಮೋದಿಗೆ ಮೆಚ್ಚುಗೆಯಿದೆ. ಅವರಂತಹ ವ್ಯಕ್ತಿಯು ರಾಷ್ಟ್ರಪತಿ ಭವನದಲ್ಲಿ ಇರುವ ಅಗತ್ಯವಿದೆಯೆಂದು ಮೋದಿ ಭಾವಿಸಿದಲ್ಲಿ, ಈ ಬಗ್ಗೆ ಅವರು ತನ್ನ ಪಕ್ಷದ ಮನವೊಲಿಸಲೂಬಹುದು.

ಸಮ-ಬೆಸ
ಅರವಿಂದ್ ಕೇಜ್ರಿವಾಲ್‌ರನ್ನು ಅವರ ವಿರೋಧಿಗಳು ವಿಲಕ್ಷಣ ವ್ಯಕ್ತಿಯೆಂದು ಟೀಕಿಸಬಹುದು. ಅವರು ಜಾರಿಗೊಳಿಸಿರುವ ನೀತಿಗಳೇ ಇದಕ್ಕೆ ಸಾಕ್ಷಿಯೆಂದು ಅವರು ಹೇಳುತ್ತಾರೆ. ಆದರೆ ದಿಲ್ಲಿಯನ್ನು ವಿಷಪೂರಿತವಾದ ವಾಯುವಿನಿಂದ ಮುಕ್ತಗೊಳಿಸುವ ಕೇಜ್ರಿವಾಲ್ ಅವರ ಮಹತ್ವಾಕಾಂಕ್ಷೆಯ ಉಪಕ್ರಮವು ಆರಂಭಿಕ ಯಶಸ್ಸನ್ನು ಕಂಡಿರುವುದು, ಅವರಿಗೆ ಗಣನೀಯವಾದ ರಾಜಕೀಯ ವರ್ಚಸ್ಸನ್ನು ತಂದುಕೊಟ್ಟಿದೆ. ಪ್ರಪ್ರಥಮ ಬಾರಿಗೆ ಚುನಾಯಿತ ಸರಕಾರವೊಂದು ವಾಯುಮಾಲಿನ್ಯದ ವಿರುದ್ಧ ಹೋರಾಡಲು ಇಟ್ಟ ದಿಟ್ಟ ಹೆಜ್ಜೆ ಇದಾಗಿದೆಯೆಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಭಾರೀ ಸಂಖ್ಯೆಯ ಕಾರುಗಳು ದಿಲ್ಲಿಯ ರಸ್ತೆಗಿಳಿಯದಿರುವ ಮೂಲಕ ಹೊಗೆಯ ಹೊರಸೂಸುವಿಕೆಯನ್ನು ಕಡಿಮೆಗೊಳಿಸಲು ನೆರವಾಗುತ್ತಿವೆ. ಈ ಯೋಜನೆಗೆ ಜನತೆ ತೋರಿರುವ ಪ್ರತಿಕ್ರಿಯೆಯಿಂದಾಗಿ ಕೇಂದ್ರ ಸರಕಾರ ಕೂಡಾ ಇದೇ ರೀತಿಯ ನಿಯಮವನ್ನು ತರುವುದೇ ಎಂಬ ಬಗ್ಗೆ ಹಿರಿಯ ಅಧಿಕಾರಿಗಳು ಚಿಂತಿಸತೊಡಗಿದ್ದಾರೆ. ಆದರೆ, ಕೇಜ್ರಿವಾಲ್‌ರ ಹಾದಿಯನ್ನು ಮೋದಿ ಅನುಸರಿಸುವರೇ ಎಂಬುದನ್ನು ತಿಳಿಯಲು ಇನ್ನೂ ಕೆಲವು ಸಮಯ ಕಾದುನೋಡಬೇಕಾಗಿದೆ.


ಬಿಜೆಪಿ ವಕ್ತಾರರ ಸಹಾಯಕ್ಕೆ ಬಂದ ಸುಷ್ಮಾ
  ಸುದ್ದಿ ವರದಿಗಾರರು ಬಿಜೆಪಿಯ ವಕ್ತಾರರ ಬಗ್ಗೆ ಆಗಾಗ್ಗೆ ಸಿಡಿಮಿಡಿಗೊಳ್ಳುತ್ತಿರುತ್ತಾರೆ. ಇದಕ್ಕೆ ಕಾರಣವೂ ಇದೆ. ಬಹುತೇಕ ಬಿಜೆಪಿ ವಕ್ತಾರರಿಗೆ, ಸರಕಾರದಲ್ಲಿ ಏನೇನು ನಡೆಯುತ್ತಿದೆಯೆಂಬ ಬಗ್ಗೆ ಚೆನ್ನಾಗಿ ತಿಳುವಳಿಕೆಯಿರುವುದಿಲ್ಲ. ಹೀಗಾಗಿ ಅವರು ಪತ್ರಕರ್ತರಿಗೆ ಸಮರ್ಪಕವಾದ ಮಾಹಿತಿ ನೀಡಲು ವಿಫಲರಾಗುತ್ತಾರೆ. ಇದರಿಂದಾಗಿ ಪತ್ರಕರ್ತರಿಗೆ ಯೋಗ್ಯವಾದ ಸುದ್ದಿಗಳೇ ಸಿಗದೆ ನಿರಾಶರಾಗುತ್ತಾರೆ. ಸುಷ್ಮಾಸ್ವರಾಜ್ ಹಾಗೂ ಅರುಣ್‌ಜೇಟ್ಲಿ ಬಿಜೆಪಿ ವಕ್ತಾರರಾಗಿದ್ದಾಗ, ಅವರು ತಮಗೆ ಮಹತ್ವದ ಮಾಹಿತಿಗಳನ್ನು, ಗಾಸಿಪ್ ಹಾಗೂ ಬಿಸಿಬಿಸಿ ಸುದ್ದಿಗಳನ್ನು ನೀಡುತ್ತಿದ್ದುದನ್ನು ಹಳೆಯ ಪತ್ರಕರ್ತರು ಈಗಲೂ ನೆನಪಿಸಿಕೊಳ್ಳುತ್ತಿದ್ದಾರೆ. ಆದರೆ ಅಂತಹ ದಿನಗಳು ಇತ್ತೀಚೆಗೆ ಕನಿಷ್ಠ ಒಂದು ದಿನದ ಮಟ್ಟಿಗಾದರೂ ಮರಕಳಿಸಿವೆ. ಪ್ರಧಾನಿ ನರೇಂದ್ರ ಮೋದಿ ಏಕಾಏಕಿಯಾಗಿ ಪಾಕಿಸ್ತಾನಕ್ಕೆ ಭೇಟಿ ನೀಡಿದಾಗ, ವಿದೇಶಾಂಗ ಇಲಾಖೆಯ ಅಧಿಕಾರಿಗಳು ಕಕ್ಕಾಬಿಕ್ಕಿಯಾಗಿದ್ದರು. ಇದರ ಪರಿಣಾಮವಾಗಿ ಒಂದೆರಡು ತಾಸುಗಳ ಕಾಲ ವಿದೇಶಾಂಗ ಸಚಿವಾಲಯದಿಂದ ಹೊರಡಿಸಲಾದ ಹೇಳಿಕೆಗಳು ತುಂಬಾ ಗೊಂದಲದಿಂದ ಕೂಡಿದ್ದವು. ಇದಕ್ಕೆ ವ್ಯತಿರಿಕ್ತವಾಗಿ, ಮೋದಿ-ಶರೀಫ್ ಮಾತುಕತೆಯ ಬಗ್ಗೆ ಸುಷ್ಮಾ ಸ್ವರಾಜ್ ಅವರು ಬಿಜೆಪಿ ವಕ್ತಾರರಿಗೆ ಉತ್ತಮವಾದ ವಿವರಣೆ ನೀಡಿದ್ದರು. ಇದರಿಂದಾಗಿ ಪತ್ರಿಕಾಗೋಷ್ಠಿಗೆ ಬಿಜೆಪಿಯ ವಕ್ತಾರರು ಚೆನ್ನಾಗಿಯೇ ಸಿದ್ಧತೆ ಮಾಡಿಕೊಂಡಿದ್ದರು. ಕೇವಲ ಕೆಲವು ದಿನಗಳ ಹಿಂದಿನವರೆಗೂ ಪಾಕಿಸ್ತಾನದ ಜೊತೆಗಿನ ನಂಟನ್ನು ಬಹಿಷ್ಕರಿಸುವುದನ್ನು ಬೆಂಬಲಿಸುತ್ತಿದ್ದ ಬಿಜೆಪಿ, ಈಗ ಹಿಂದುಮುಂದು ನೋಡದೆ ಮೋದಿಯ ನಡೆಯನ್ನು ಸಮರ್ಥಿಸಿಕೊಳ್ಳುತ್ತಿದೆ. ಈ ಬಗ್ಗೆ ಪತ್ರಕರ್ತರೊಂದಿಗೆ ಚೆನ್ನಾಗಿ ವಾದಿಸಲು ಸರಿಯಾದ ಮಾಹಿತಿಗಳನ್ನು ಒದಗಿಸಿಕೊಟ್ಟ ಸುಷ್ಮಾಸ್ವರಾಜ್‌ಗೆ ಪಕ್ಷದ ಅನೇಕ ನಾಯಕರು ಕೃತಜ್ಞತೆ ಸಲ್ಲಿಸುತ್ತಿದ್ದಾರೆ.


ಶರ್ಮಾರ ವೇದನೆ
    ಆನಂದ್‌ಶರ್ಮಾ ಕಾಂಗ್ರೆಸ್‌ನ ಪ್ರಮುಖ ವಕ್ತಾರ. ತಾನು ಪತ್ರಿಕಾಗೋಷ್ಠಿಯಲ್ಲಿ ಅಥವಾ ರಾಜ್ಯಸಭೆಯಲ್ಲಿ ಏನಾದರೂ ಮಾತನಾಡಿದ್ದನ್ನು ಟ್ವಿಟರ್‌ನಲ್ಲಿ ಪ್ರಸಾರ ಮಾಡಿದಾಗ ಆನ್‌ಲೈನ್‌ನಲ್ಲಿನ ಬಿಜೆಪಿ ‘ಭಕ್ತ’ರು ರೊಚ್ಚಿಗೇಳುತ್ತಾರೆ ಎಂದವರು ಹೇಳುತ್ತಾರೆ. ರಾಜ್ಯಸಭೆಯಲ್ಲಿ ಈ ವರ್ಷ ಕಾಂಗ್ರೆಸ್‌ನ ಬಲ ಗಣನೀಯವಾಗಿ ಕುಸಿಯಲಿದೆ. ಶರ್ಮಾ ಜೊತೆ ಅಂಬಿಕಾ ಸೋನಿ, ಜೈರಾಮ್ ರಮೇಶ್, ಆಸ್ಕರ್ ಫೆರ್ನಾಂಡಿಸ್ ಸಹಿತ ಹಲವು ಕಾಂಗ್ರೆಸ್ ನಾಯಕರು ರಾಜ್ಯಸಭೆಯಿಂದ ನಿರ್ಗಮಿಸುವ ಸಾಧ್ಯತೆಗಳು ದಟ್ಟವಾಗಿವೆ. ಶರ್ಮಾರ ಪರಿಸ್ಥಿತಿಯಂತೂ ತುಂಬಾ ಕ್ಲಿಷ್ಟಕರವಾಗಿದೆ. ಅವರು ಕಳೆದ ಬಾರಿ ರಾಜಸ್ಥಾನದಿಂದ ನೇಮಕಗೊಂಡಿದ್ದರು. ಆದರೆ ಈಗ ಆ ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿಗೆ ಅಲ್ಲಿ ಖಾಲಿಬೀಳಲಿರುವ ಎಲ್ಲಾ ನಾಲ್ಕು ಸ್ಥಾನಗಳನ್ನು ಗೆಲ್ಲುವಷ್ಟು ಸಂಖ್ಯಾಬಲವಿದೆ. ಕಾಂಗ್ರೆಸ್‌ಗೆ ಶರ್ಮಾರನ್ನು ಅವರ ತವರು ರಾಜ್ಯವಾದ ಹಿಮಾಚಲಪ್ರದೇಶದಿಂದ ರಾಜ್ಯಸಭೆಗೆ ಕಳುಹಿಸಲು ಸಾಧ್ಯವಿದೆ. ಆದರೆ ಹಿಮಾಚಲದ ಮುಖ್ಯಮಂತ್ರಿ ವೀರಭದ್ರ ಸಿಂಗ್ ಜೊತೆ ಶರ್ಮಾರ ಬಾಂಧವ್ಯ ಹಳಸಿದೆ. ಹೀಗಾಗಿ ಶರ್ಮಾರ ಅಭ್ಯರ್ಥಿತನಕ್ಕೆ ಮುಖ್ಯಮಂತ್ರಿಯ ಒಪ್ಪಿಗೆ ದೊರೆಯುವುದು ಕಷ್ಟ. ಇದೀಗ ಅವರು ಸೋನಿಯಾ ಹಾಗೂ ಸಿಂಗ್‌ರನ್ನು ಒಲೈಸಲು, ಸಾಕಷ್ಟು ಪ್ರಯತ್ನಿಸುತ್ತಿದ್ದಾರೆ. ಒಂದು ವೇಳೆ ಶರ್ಮಾ ತನ್ನ ಪ್ರಯತ್ನದಲ್ಲಿ ಸೋತಲ್ಲಿ ಬಿಜೆಪಿ ‘ಭಕ್ತ’ರು, ಟ್ವಿಟರ್‌ನಲ್ಲಿ ಅವರನ್ನು ನಿಂದಿಸುವ ಅವಕಾಶವನ್ನು ಮಿಸ್ ಮಾಡಿಕೊಳ್ಳಲಿದ್ದಾರೆ.

ಅಂದು ಆರ್‌ಜೆಡಿ, ಇಂದು ಆರೆಸ್ಸೆಸ್
ಕೇಂದ್ರ ಸಚಿವ ರಾಮ್‌ಕೃಪಾಲ್ ಯಾದವ್ ಇತ್ತೀಚೆಗೆ ತನ್ನ ಸಂಪುಟ ಸಹದ್ಯೋಗಿಗಳನ್ನು ತನ್ನ ನಿವಾಸಕ್ಕೆ ಆಹ್ವಾನಿಸಿದ್ದರು. 2014ರ ಲೋಕಸಭಾ ಚುನಾವಣೆಗೆ ಮೊದಲು ಆರ್‌ಜೆಡಿ ತೊರೆದು ಬಿಜೆಪಿ ಸೇರಿದ್ದ ಯಾದವ್‌ರ ಮನೆಯಲ್ಲಿ ಎಂ.ಎಸ್.ಗೋಳ್ವಲ್ಕರ್, ಹೆಡಗೇವಾರ್, ದೀನ್ ದಯಾಳ್ ಉಪಾಧ್ಯಾಯ ಸೇರಿದಂತೆ ಬಹುತೇಕ ಎಲ್ಲಾ ಪ್ರಮುಖ ಆರೆಸ್ಸೆಸ್ ನಾಯಕರ ಭಾವಚಿತ್ರಗಳು ರಾರಾಜಿಸುತ್ತಿದ್ದುದನ್ನು ನೋಡಿ ಅತಿಥಿಗಳಿಗೆ ಅಚ್ಚರಿಯಾಯಿತು. ಲಾಲು ಯಾದವ್‌ರ ಅನುಯಾಯಿಯಾಗಿದ್ದ ತಾನು ಸಂಘದ ಭಕ್ತನಾಗಿ ಮಾರ್ಪಾಡುಗೊಂಡದ್ದನ್ನು ಸಾಬೀತುಪಡಿಸಲು ರಾಮ್‌ಕೃಪಾಲ್ ಯಾದವ್ ಮಾಡುತ್ತಿರುವ ಕಸರತ್ತನ್ನು ಕಂಡು ಕೆಲವರಿಗೆ ಮೋಜೆನಿಸಿತು. ಕೆಲವು ರಾಜಕಾರಣಗಳು ಬಹಳ ಬೇಗ ಬದಲಾಗುತ್ತಾರೆಂಬುದಕ್ಕೆ ಇದೊಂದು ಒಳ್ಳೆಯ ನಿದರ್ಶನ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)