varthabharthi

ಫೋಕಸ್

ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ : ಸಮಾಜ ಬೆಳಗಿದ ಸೇವೆಗೆ ದಶಕದ ಸಂಭ್ರಮ

ವಾರ್ತಾ ಭಾರತಿ : 11 Jan, 2016
ರಫೀಕ್ ಮಾಸ್ಟರ್

ಸ್ಥಾಪನೆ: ಡಿಸೆಂಬರ್ 26 2005

ಧ್ಯೇಯ ವಾಕ್ಯ : Touching Hearts, Directing Destinies

ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಹೆಸರೇ ಸೂಚಿಸುವಂತೆ ಪ್ರತಿಭೆಯನ್ನು ಸಂಶೋಧಿಸುವ, ಅರಳಿಸುವ, ಪುರಸ್ಕರಿಸುವ, ಗುರುತಿಸುವ, ಉತ್ತೇಜಿಸುವ ಒಂದು ಸಂಸ್ಥೆ. ನಮ್ಮ ನಡುವೆ ಬೆಳಕಿಗೆ ಬಾರದ ಅದೆಷ್ಠೋ ಪ್ರತಿಭೆಯ ಗಣಿಗಳನ್ನು ಜಗತ್ತಿಗೆ ಪರಿಚಯಿಸುವ ವಿಶಿಷ್ಠ ಕಾರ್ಯವನ್ನು ಟ್ಯಾಲೆಂಟ್ ಸಂಸ್ಥೆ ಮಾಡುತ್ತಾ ಬಂದಿದೆ ಎನ್ನಲು ಸಂತೋಷವಾಗುತ್ತಿದೆ. ನಾಡಿನ ಖ್ಯಾತ ಉದ್ಯಮಿಯೂ ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ ಪುರಸ್ಕೃತರೂ ಆದ ಜನಾಬ್ ಅಬ್ದುಲ್ ರವೂಫ್ ಪುತ್ತಿಗೆಯವರ ಕನಸಿನ ಕೂಸು ಟಿಆರ್‌ಎಫ್. ತನ್ನ ವಿಭಿನ್ನ, ವಿಶಿಷ್ಟ, ವಿನೂತನ ಜನಪರ ಕಾರ್ಯಕ್ರಮಗಳ ಮೂಲಕ ನಾಡಿನ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿರುವ ಈ ಸಂಸ್ಥೆ ಇದೀಗ ತನ್ನ ದಶಮಾನೋತ್ಸವದ ಸಂಭ್ರಮದಲ್ಲಿದೆ. ಕಳೆದ ಹತ್ತು ವರ್ಷಗಳಿಂದ ಶಿಕ್ಷಣ, ಆರೋಗ್ಯ, ಸ್ವ ಉದ್ಯೋಗ, ಕೌನ್ಸೆಲಿಂಗ್, ಮೂಲಭೂತ ಸೌಕರ್ಯ, ಪರಿಸರ ಸಂರಕ್ಷಣೆ, ಅಭಿನಂದನೆ, ಮಹಿಳಾ ಸಬಲೀಕರಣ ಮುಂತಾದ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಜ್ಞಾನದಾಹಿಗಳಿಗೆ ಜ್ಞಾನದ ಬೆಳಕನ್ನು ನೀಡುವ, ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ, ಅಶಕ್ತರಿಗೆ ಆಸರೆಯಾಗುವ, ಪ್ರತಿಭೆಗಳಿಗೆ ಪೋಷಕರಾಗುವ, ಪರಿಸರದ ಸಂರಕ್ಷಕರಾಗುವ, ಸಾಧಕರನ್ನು ಗೌರವಿಸುವ ಅರ್ಥಪೂರ್ಣ ಕಾರ್ಯಕ್ರಮಗಳ ಮೂಲಕ ಸಮಾಜಕ್ಕೊಂದು ಜೀವನಾಡಿಯಾಗಿದೆ. ಸಂಸ್ಥೆಯು ನಿಗದಿತ ಧ್ಯೇಯೋದ್ದೇಶಗಳನ್ನು ಕೇಂದ್ರೀಕರಿಸಿ ಮುನ್ನಡೆಯುತ್ತಿದ್ದರೂ, ಕೆಲವೊಮ್ಮೆ ಕಾಲದ ಬೇಡಿಕೆಗೆ ಅನುಗುಣವಾಗಿ ತನ್ನ ಚಟುವಟಿಕೆಗಳಲ್ಲಿ ಕೊಂಚ ಬದಲಾವಣೆಯನ್ನು ಮಾಡಿಕೊಂಡು ಬಂದಿರುತ್ತದೆ. ಈ ದಿಸೆಯಲ್ಲಿ ಟ್ಯಾಲೆಂಟ್ ಎಲ್ಲಾ ಕ್ಷೇತ್ರಗಳಿಗೂ ಕೈ ಹಾಕುತ್ತದೆ ಎನ್ನುವ ಮಾತುಗಳು ಕೇಳಿಬರುವುದು ಸಹಜ. ಟ್ಯಾಲೆಂಟ್‌ನ ಈ ನಡೆಯಿಂದ ಹಲವು ಅಸಹಾಯಕರಿಗೆ ಪ್ರಯೋಜನವಾಗಿದೆ ಹೊರತು ಯಾರಿಗೂ ನಷ್ಠವಾಗಿಲ್ಲ ಎನ್ನುವ ಕಟುಸತ್ಯವನ್ನು ಒಪ್ಪಿಕೊಂಡಾಗ ನೈಜ ಉದ್ದೇಶ ಮನವರಿಕೆಯಾಗಬಹುದು.

ಸಂಸ್ಥೆಯ ಹುಟ್ಟು ಮತ್ತು ಬೆಳವಣಿಗೆ

ಡಿಸೆಂಬರ್ 26 2005 ರಂದು ಟಿ.ಆರ್.ಎಫ್ ಎಂಬ ಸಾಮಾಜಿಕ ಸಂಸ್ಥೆಯ ಉಗಮವಾಯಿತು. ಮಂಗಳೂರಿನ ಸ್ಟೇಟ್ ಬ್ಯಾಂಕ್ ಸಮೀಪದ ಅಲ್ ರಹಬಾ ಪ್ಲಾಝಾದಲ್ಲಿ ಒಲಿಂಪಿಕ್ ಆಟಗಾರ ಹಸನ್ ಆಸಿಫ್ ರವರು ಸಂಸ್ಥೆಯನ್ನು ಉದ್ಘಾಟಿಸಿದರು. ಬಿ.ಎಂ ಹಸನ್ ಹಾಜಿ ಸ್ಮಾರಕ ಕೇಂದ್ರವೆಂದು ಕಛೇರಿಗೆ ನಾಮಕರಣ ಮಾಡಲಾಯಿತು. ಆರಂಭದ ದಿನಗಳಲ್ಲಿ ವಿವಿಧ ತರಬೇತಿ, ಸಾಧಕರಿಗೆ ಸನ್ಮಾನ ಮೊದಲಾದ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿತ್ತು. ತದನಂತರ ಕಛೇರಿಯನ್ನು ಬಂದರ್‌ನಲ್ಲಿರುವ ಕಟ್ಟಡವೊಂದಕ್ಕೆ ವರ್ಗಾಯಿಸಲಾಯಿತು. ಕಟ್ಟಡವನ್ನು ಉಚಿತವಾಗಿ ಒದಗಿಸಿದ ಕಟ್ಟಡದ ಮಾಲಿಕ ಜನಾಬ್ ಖಲೀಲ್ ಪಾಂಡೇಶ್ವರ ರವರ ಸಹಕಾರಕ್ಕೆ ನಾವು ಸದಾ ಆಭಾರಿಗಳಾಗಿದ್ದೇವೆ. ಈ ಸಂದರ್ಭದಲ್ಲಿ ಅನೇಕ ತರಬೇತಿ ಮತ್ತು ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲು ಅಗತ್ಯ ಸಭಾಂಗಣವನ್ನು ಬದ್ರಿಯಾ ಕಾಲೇಜು ಕಂದಕ ಮತ್ತು ಬಂದರ್ ಸರಕಾರಿ ಉರ್ದು ಪ್ರೌಢಶಾಲೆಯವರು ಒದಗಿಸಿರುತ್ತಾರೆ. ಅವರ ಸಹಕಾರಕ್ಕೆ ಹೃದಯ ತುಂಬಿದ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇವೆ.

ಅಲ್ಲಾಹನ ಅಪಾರವಾದ ಅನುಗ್ರಹದಿಂದ 2009 ರಲ್ಲಿ ಕಂಕನಾಡಿಯ ವಿಶ್ವಾಸ್ ಕ್ರೌನ್ ಕಟ್ಟಡದಲ್ಲಿ ಸ್ವಂತ ಕಛೇರಿ, ಸಭಾಂಗಣ, ಸ್ಪರ್ಧಾತ್ಮಕ ಪರೀಕ್ಷೆಗಳ ವಾಚನಾಲಯ ಮುಂತಾದ ಸವಲತ್ತುಗಳನ್ನು ಹೊಂದಲು ಸಾಧ್ಯವಾಯಿತು. ಮುಂದಕ್ಕೆ ಟ್ಯಾಲೆಂಟ್ ಸಭಾಂಗಣ ನಿತ್ಯ ಚಟುವಟಿಕೆಗಳ ಕೇಂದ್ರವಾಯಿತು. ಪ್ರತಿನಿತ್ಯ ನೂರಾರು ಮಂದಿ ಭೇಟಿ ಕೊಡುವಂತಾಯಿತು. ಶಿಕ್ಷಣ, ಉದ್ಯೋಗ, ಸರಕಾರಿ ಸವಲತ್ತುಗಳ ಬಗ್ಗೆ ಮಾಹಿತಿ ಕೇಂದ್ರವಾಗಿ, ಉಚಿತ ಸೇವಾ ಕೇಂದ್ರವಾಗಿ ಎಲ್ಲರ ಗಮನ ಸೆಳೆಯಿತು. ಶಿಕ್ಷಣ ವಂಚಿತರು ಸುಶಿಕ್ಷಿತರಾದರು. ನಿರುದ್ಯೋಗಿಗಳು ಉದ್ಯೋಗಿಗಳಾದರು. ಅಸಹಾಯಕರು ಸಬಲರಾದರು. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಹೊಸ ಭರವಸೆಯನ್ನು ಪಡೆದುಕೊಂಡರು. ಕೋಟ್ಯಾಂತರ ವಿದ್ಯಾರ್ಥಿವೇತನಗಳು ಹರಿದು ಬಂದವು. ಐಎಎಸ್, ಐಪಿಎಸ್, ಕೆಎಎಸ್‌ಮೊದಲಾದ ಉನ್ನತ ಹುದ್ದೆಗಳ ಕನಸುಗಳುಹುಟ್ಟಿಕೊಂಡಿತು. ಸಾಧನೆಗೆ ಇನ್ನಷ್ಟು ಕಿಚ್ಚನ್ನು ಕೊಡಲಾಯಿತು. ಹೀಗೆ ಟ್ಯಾಲೆಂಟ್ ಕಳೆದ ಹತ್ತು ವರ್ಷಗಳಲ್ಲಿ ತನ್ನ ಸೇವಾ ಅಭಿಯಾನವನ್ನು ನಿರಂತರವಾಗಿ ಮುಂದುವರೆಸುತ್ತಿದೆ.

ಸಂಸ್ಥೆಯ ಧ್ಯೇಯೋದ್ದೇಶಗಳು

"ಶಾಲಾ ಕಾಲೇಜು, ತಾಂತ್ರಿಕ, ವೈದ್ಯಕೀಯ, ಅರೆ ವೈದ್ಯಕೀಯ ಮತ್ತು ವೈಜ್ಞಾನಿಕ ಸಂಸ್ಥೆಗಳನ್ನು ತೆರೆಯುವುದು ಹಾಗೂ ನಿರ್ವಹಿಸುವುದು.

"ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿರುವ ಜನರಲ್ಲಿ ಶೈಕ್ಷಣಿಕ ಜಾಗೃತಿಯನ್ನು ಮೂಡಿಸುವುದು.

"ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಆರ್ಥಿಕ ಸಹಾಯ, ಸಾಲ ಮತ್ತು ಇನ್ನಿತರ ಸವಲತ್ತುಗಳನ್ನು ಒದಗಿಸುವುದು.

"ಸಾರ್ವಜನಿಕರಲ್ಲಿ ಆರೋಗ್ಯ ಪ್ರಜ್ಞೆಯನ್ನು ಮೂಡಿಸುವುದು.ಅದಕ್ಕಾಗಿ ರಕ್ತದಾನ ಶಿಬಿರ, ಉಚಿತ ಆರೋಗ್ಯ ತಪಾಸಣಾ ಶಿಬಿರ, ಆರೋಗ್ಯ ಮಾಹಿತಿ ಶಿಬಿರಗಳನ್ನು ಆಯೋಜಿಸುವುದು.

"ಅರ್ಧದಲ್ಲೇ ಶಾಲೆ ಬಿಟ್ಟ ಯುವಕ ಯುವತಿಯರಿಗಾಗಿ ಮರಳಿ ಬಾ ಶಾಲೆಗೆ ಕೇಂದ್ರಗಳನ್ನು ತೆರೆದು ಶಿಕ್ಷಣವನ್ನು ಮುಂದುವರೆಸಲು ಅವಕಾಶ ಕಲ್ಪಿಸುವುದು.

"ಮಹಿಳಾ ಶಿಕ್ಷಣ ಮತ್ತು ಸಬಲೀಕರಣಕ್ಕಾಗಿ ಕಾರ್ಯಕ್ರಮಗಳನ್ನು ಆಯೋಜಿಸುವುದು.

"ಸಾಮಾಜಿಕ ಅನಿಷ್ಟಗಳ ವಿರುದ್ಧ ಹೋರಾಟ ನಡೆಸುವುದು.

"ಟೈಲರಿಂಗ್ ಸೆಂಟರ್, ಗುಡಿ ಕೈಗಾರಿಕೆ ಮುಂತಾದ ಸ್ವ ಉದ್ಯೋಗ ತರಬೇತಿ ಕೇಂದ್ರಗಳನ್ನು ತೆರೆದು ವೃತ್ತಿಪರ ತರಬೇತಿಗಳನ್ನು ನೀಡುವುದು.

"ಸರಕಾರಿ, ಅರೆ ಸರಕಾರಿ, ಖಾಸಗಿ ಮತ್ತು ಸ್ವ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡುವುದು.

"ನಿರ್ಗತಿಕ ಮಹಿಳೆ ಮತ್ತು ಮಕ್ಕಳಿಗಾಗಿ ಆಶ್ರಯಧಾಮಗಳನ್ನು ತೆರೆಯುವುದು.

"ಸಮಾಜದಲ್ಲಿ ಕೋಮು ಸೌಹಾರ್ದತೆಯನ್ನು ಬೆಳೆಸುವುದು ಮತ್ತು ಶಾಂತಿ ಸಾಮರಸ್ಯವನ್ನು ಕಾಪಾಡುವುದು.

"ವಿದ್ಯಾರ್ಥಿವೇತನ ಮತ್ತು ಸರಕಾರದಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ಪಡೆಯುವ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಮಾರ್ಗದರ್ಶನ ಮತ್ತು ಸೇವೆ ಒದಗಿಸುವುದು.

ಸಂಸ್ಥೆಯ ಕಾರ್ಯಚಟುವಟಿಕೆಯ ಕ್ಷೇತ್ರಗಳು

  • ಶಿಕ್ಷಣ
  • ಆರೋಗ್ಯ
  • ಮೂಲಭೂತ ಸೌಕರ್ಯಗಳು
  • ಸ್ವ ಉದ್ಯೋಗ
  • ಜನಜಾಗೃತಿ
  • ಪರಿಸರ ಸಂರಕ್ಷಣೆ
  • ರಾಷ್ಟ್ರೀಯ ಸಮಗ್ರತೆ
  • ಅಭಿನಂದನೆ
  • ಕೌನ್ಸೆಲಿಂಗ್
  • ಮಹಿಳಾ ಸಬಲೀಕರಣ
  • ಪುಸ್ತಕ ಪ್ರಕಾಶನ
  • ಸಾಕ್ಷ್ಯಚಿತ್ರಗಳ ನಿರ್ಮಾಣ

ಶಿಕ್ಷಣ

  • ಮರಳಿ ಬಾ ಶಾಲೆಗೆ ಯೋಜನೆ:

ಟಿಆರ್‌ಎಫ್ ಗೆ ವಿಶೇಷ ಮನ್ನಣೆಯನ್ನು ತಂದುಕೊಟ್ಟ ಯೋಜನೆ ಮರಳಿ ಬಾ ಶಾಲೆಗೆ. ನಮ್ಮ ನಡುವೆ ಅರ್ಧದಲ್ಲೇ ಶಾಲೆ ಬಿಟ್ಟು ಗುಜುರಿ ಹೆಕ್ಕುವ, ಫುಟ್‌ಪಾತ್ ವ್ಯಾಪಾರ ಮಾಡುವ, ಕೂಲಿಕೆಲಸ ಮಾಡುವ ಅದೆಷ್ಟೋ ಸಹೋದರರು, ಮನೆಯಲ್ಲೇ ಬೀಡಿ ಕಟ್ಟುವ ಸಹೋದರಿಯರು ಇದ್ದಾರೆ. ಅಂತವರಲ್ಲಿ ಮತ್ತೆ ಶಿಕ್ಷಣದ ಕನಸನ್ನು ಹುಟ್ಟಿಸಿ ಅವರಿಗೆ ನೇರ ಎಸ್‌ಎಸ್‌ಎಲ್‌ಸಿ/ಪಿಯುಸಿ ಪರೀಕ್ಷೆಗೆ ತರಬೇತಿಯನ್ನು ನೀಡುವ ಯೋಜನೆ ಇದಾಗಿದೆ. ಹೆಣ್ಮಕ್ಕಳಿಗೆ ಮದ್ರಸ ಕಟ್ಟಡದಲ್ಲಿ ಹಗಲು ಹೊತ್ತು ಹಾಗೂ ಯುವಕರಿಗೆ ರಾತ್ರಿ ಹೊತ್ತು ಸಂಘಸಂಸ್ಥೆಗಳ ಕಟ್ಟಡದಲ್ಲಿ ಸ್ಥಳೀಯ ಸ್ವಯಂಸೇವಾ ಶಿಕ್ಷಕರಿಂದ ತರಗತಿ ನಡೆಸಲಾಯಿತು.ಜಮೀಯ್ಯತುಲ್ ಫಲಾಹ್ ಬಿತ್ತಿದ ಈ ಪರಿಕಲ್ಪನೆಯನ್ನು ಸ್ಥಳೀಯ ಸಂಘಸಂಸ್ಥೆಗಳ ಸಹಕಾರದಲ್ಲಿ ರಾಜ್ಯದಾದ್ಯಂತ ಪಸರಿಸಿದ ಕೀರ್ತಿ ಟ್ಯಾಲೆಂಟ್‌ಗೆ ಸಲ್ಲುತ್ತದೆ. ಹೊಸ ಬದುಕು, ಹೊಸ ಚಿಂತನೆ, ಹೊಸ ಕಸನುಗಳಿಗೆ ನಾಂದಿ ಹಾಡಿದ ಈ ಯೋಜನೆಯ ಸಾವಿರಾರು ಫಲಾನುಭವಿ ವಿದ್ಯಾರ್ಥಿಗಳಲ್ಲಿ ಆದ ವಿಸ್ಮಯಕಾರಿ ಬದಲಾವಣೆಗಳು ನಿಜಕ್ಕೂ ಅದ್ಭುತ. ಇಲ್ಲಿ ಕಲಿತ ವಿದ್ಯಾರ್ಥಿಗಳುಹಾಗೂ ಕಲಿಸಿದ ಸ್ವಯಂಸೇವಾ ಶಿಕ್ಷಕರು ಮಾಡಿದ ಸಾಧನೆನಮಗೆ ಪ್ರೇರಕಶಕ್ತಿಯಾಗಿದೆ. ಹೀಗೆ ಟ್ಯಾಲೆಂಟ್ ಅಕ್ಷರ ವಂಚಿತರ ಬಾಳಲ್ಲಿ ಹೊಸ ಬೆಳಕನ್ನು ಮೂಡಿಸುತ್ತಿದೆ.

  • ವಿದ್ಯಾರ್ಥಿವೇತನದ ಉಚಿತ ಸೇವೆ

ಸರಕಾರದಿಂದ ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಅನೇಕ ಸವಲತ್ತುಗಳಿವೆ. ಆ ಸವಲತ್ತುಗಳು ಏನು? ಮತ್ತು ಪಡೆಯುವುದು ಹೇಗೆ? ಎಂಬ ಪ್ರಶ್ನೆಗೆ ಉತ್ತರಿಸುವಲ್ಲಿ ಟ್ಯಾಲೆಂಟ್ ಯಶಸ್ವಿಯಾಗಿದೆ. ಮೊದಲಿಗೆ ಸರಕಾರದ ಸವಲತ್ತುಗಳ ಬಗ್ಗೆ ಜಿಲ್ಲೆಯಾದ್ಯಂತ ಜಾಗೃತಿ ಕಾರ್ಯಕ್ರಮಗಳ ಮೂಲಕವಿದ್ಯಾರ್ಥಿಗಳು ಹಾಗೂ ಹೆತ್ತವರಲ್ಲಿ ಅರಿವು ಮೂಡಿಸಲಾಗುತ್ತಿದೆ. ವಿದ್ಯಾರ್ಥಿವೇತನಕ್ಕೆ ಸಂಬಂಧಿಸಿದ ಅರ್ಜಿ ಫಾರಂಗಳನ್ನು ಮುದ್ರಸಿ ಹಂಚಲಾಗುತ್ತಿದೆ. ಭರ್ತಿ ಮಾಡಿದ ಅರ್ಜಿಗಳನ್ನು ವಿದ್ಯಾರ್ಥಿಗಳಿಂದ ಪಡೆದು ಸಂಬಂಧಿಸಿದ ಇಲಾಖೆಗೆ ಸಲ್ಲಿಸಿ ಮುಂದಿನ ಅನುಪಾಲನೆಯನ್ನು ಟಿಆರ್‌ಎಫ್ ಮಾಡುತ್ತಿದೆ. ಆನ್‌ಲೈನ್ ಅರ್ಜಿಗಳನ್ನು ಸಲ್ಲಿಸುವಲ್ಲಿ ಟಿಆರ್‌ಎಫ್‌ನ ಸೇವೆ ಅನನ್ಯ. ಸರಕಾರದಿಂದ ಹಾಗೂ ಖಾಸಗಿ ಸಂಸ್ಥೆಗಳಿಂದ ಕೋಟ್ಯಾಂತರ ರೂ ಗಳ ವಿದ್ಯಾರ್ಥಿವೇತನ ಇಂದು ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಹರಿದು ಬರಲು ಜಿಲ್ಲೆಯ ಹಲವು ಸಂಘಟನೆಗಳು ಸಾಂಘಿಕವಾಗಿ ಪ್ರಯತ್ನಿಸುತ್ತಿದ್ದು, ಈ ದಿಸೆಯಲ್ಲಿ ಟಿಆರ್‌ಎಫ್ ಮೂಂಚೂಣಿಯಲ್ಲಿದೆ. ಇದರ ಫಲಶ್ರುತಿಯಾಗಿ ಸಾಮಾನ್ಯ ಕೂಲಿಕಾರ್ಮಿಕರ ಮಕ್ಕಳು ಸಹ ಇಂದು ಮೆಡಿಕಲ್, ಇಂಜಿನಿಯರಿಂಗ್, ಎಂಬಿಎ, ಎಂಸಿಎ ಮೊದಲಾದ ಕೋರ್ಸುಗಳನ್ನು ಪ್ರತಿಷ್ಠಿತ ಕಾಲೇಜುಗಳಲ್ಲಿ ಓದುತ್ತಿದ್ದಾರೆ ಎನ್ನಲು ಅಭಿಮಾನವಾಗುತ್ತಿದೆ. ಹೀಗೆ ಟಿಆರ್‌ಎಫ್ ಸಾಮಾನ್ಯ ವಿದ್ಯಾರ್ಥಿಗಳಲ್ಲಿ ಅಸಾಮಾನ್ಯ ಭರವಸೆಯನ್ನು ಮೂಡಿಸುತ್ತಿದೆ ಹಾಗೂ ಕನಸುಗಳನ್ನು ಸೃಷ್ಠಿಸುತ್ತಿದೆ. (ಅಲ್ ಹಮ್ದುಲಿಲ್ಲಾಹ್)

  • ಸ್ವ ಉದ್ಯೋಗದ ಮೂಲಕ ಸ್ವಾವಲಂಬನೆ

ಹಸಿದವನಿಗೆ ಮೀನನ್ನು ಕೊಟ್ಟರೆ ಒಂದೊತ್ತಿನ ಆಹಾರ

ಅದೇ ಮೀನು ಹಿಡಿಯಲು ಕಲಿಸಿಕೊಟ್ಟರೆ ಜೀವನಪೂರ್ತಿ ಆಹಾರ

ಟ್ಯಾಲೆಂಟ್ ಹಸಿದವನಿಗೆ ಮೀನು ಕೊಡುವ ಬದಲು ಮೀನು ಹಿಡಿಯಲು ಕಲಿಸುವ ಶ್ರೇಷ್ಠ ಕೆಲಸವನ್ನು ಮಾಡುತ್ತಿದೆ. ನಿರುದ್ಯೋಗಿಗಳಾಗಿ ಸುಮ್ಮನೆ ಕಾಲಹರಣ ಮಾಡುವ ಯುವಕರಿಗೆ ಹಾಗೂ ಬೇಕಾದಷ್ಟು ವಿರಾಮದ ಸಮಯವಿರುವ ಮೌಲವಿಗಳಿಗೆ ಅನೇಕ ಸ್ವ ಉದ್ಯೋಗ ತರಬೇತಿಯನ್ನು ಹಮ್ಮಿಕೊಳ್ಳುತ್ತಿದೆ. ಇಂದು ಬಹಳಷ್ಟು ಬೇಡಿಕೆಯಲ್ಲಿರುವ ಮೊಬೈಲ್ ಟೆಕ್ನಿಶಿಯನ್ ಕೋರ್ಸು, ಕಂಪ್ಯೂಟರ್, ಎಲೆಕ್ಟ್ರೋನಿಕ್ಸ್, ಎಲೆಕ್ಟ್ರಿಕಲ್ಸ್, ಫೊಟೋಗ್ರಫಿ, ಡ್ರೈವಿಂಗ್ ಮೊದಲಾದ ವೃತ್ತಿಪರ ತರಬೇತಿಗಳನ್ನು ಉಚಿತವಾಗಿ ಕಲಿಸಲಾಗುತ್ತಿದೆ. ಸಾವಿರಾರು ಯುವಕರು ಹಾಗೂ ಮೌಲವಿಗಳು ಈ ಯೋಜನೆಯಡಿ ಕಲಿತು ಇಂದು ಸ್ವ ಉದ್ಯೋಗಿಗಳಾಗಿದ್ದಾರೆ. ಹಲವರು ಸ್ವಂತ ನೆಲೆಯನ್ನು ಕಂಡುಕೊಂಡಿದ್ದಾರೆ. ಉತ್ತಮ ಸಂಪಾದನೆಯ ಮೂಲಕ ಕುಟುಂಬಕ್ಕೆ ಆಧಾರವಾಗಿ ಸ್ವಾಭಿಮಾನದ ಬದುಕನ್ನು ಸಾಗಿಸುತ್ತಿದ್ದಾರೆ. ಟ್ಯಾಲೆಂಟ್ ಟೆಕ್ನಿಕಲ್ ಇನ್‌ಸ್ಟಿಟ್ಯೂಟ್‌ನ ಪರಿಣತ ಶಿಕ್ಷಕರ ಸಾರ್ಥಕ ಶ್ರಮಕ್ಕೆ ನಮ್ಮ ವಿದ್ಯಾರ್ಥಿಗಳ ಸಾಧನೆಯೇ ಸಾಕ್ಷಿಯಾಗಿದೆ. ಹೀಗೆ ಟ್ಯಾಲೆಂಟ್ ಸ್ವಾಭಿಮಾನಿ ಬದುಕಿಗೆ ಸ್ಫೂರ್ತಿಯ ಸೆಲೆಯಾಗಿದೆ. 

  • IAS/KAS ಸ್ಪರ್ಧಾತ್ಮಕ ಪರೀಕ್ಷೆಗಳ ಗ್ರಂಥಾಲಯ (LIBRARY)

ನಮ್ಮ ಯುವಕರು ಇಂದು ಉನ್ನತ ವಿದ್ಯಾಭ್ಯಾಸವನ್ನು ಪಡೆಯುತ್ತಿರುವುದು ತುಂಬಾ ಸಂತಸದ ವಿಚಾರ. ಆದರೆ ಬಹತೇಕ ಮಂದಿ ಗಲ್ಫ್ ಉದ್ಯೋಗದ ಮೋಹದಿಂದ ಹೊರಬಂದಿಲ್ಲ. ನಮ್ಮ ದೇಶದ ಅತ್ಯುನ್ನತ ಐಎಎಸ್, ಐಪಿಎಸ್, ಐಎಫ್‌ಎಸ್ ಮೊದಲಾದ ಹುದ್ದೆಗಳನ್ನು ನಮ್ಮವರು ಅಲಂಕರಿಸಬೇಕೆಂಬ ಮಹದಾಸೆಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ಗ್ರಂಥಾಲಯವನ್ನು ಸ್ಥಾಪಿಸಿರುತ್ತೇವೆ. ಪೊಲೀಸ್ ಕಾನ್‌ಸ್ಟೇಬಲ್, ಕಛೇರಿ ಗುಮಾಸ್ತ, ಪಂಚಾಯತ್ ಪಿಡಿಒ ದಿಂದ ಹಿಡಿದು ಐಎಎಸ್ ಪರೀಕ್ಷೆ ವರೆಗಿನ ಎಲ್ಲಾ ಅಗತ್ಯ ಪುಸ್ತಕಗಳನ್ನು ಗ್ರಂಥಾಲಯದಲ್ಲಿಟ್ಟು ಸಾರ್ವಜನಿಕರಿಗೆ ತೆರೆದಿಡಲಾಗಿದೆ. ಸರ್ವಧರ್ಮೀಯ ಬಾಂಧವರು ಇದರ ಸದಸ್ಯರಾಗಿ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಅಲ್ಲದೆ ಈ ಗ್ರಂಥಾಲಯದ ಓದುಗರಲ್ಲಿ ಕೆಲವರು ಈಗಾಗಲೇ ಉನ್ನತ ಸರಕಾರಿ ಉದ್ಯೋಗವನ್ನು ಪಡಕೊಂಡಿದ್ದಾರೆ ಹಾಗೂ ಹಲವರು ಉಚಿತ ಐಎಎಸ್ ಪರೀಕ್ಷಾ ಪೂರ್ವ ತರಬೇತಿಗೆ ಅರ್ಹರಾಗಿ ದೆಹಲಿ, ಬೆಂಗಳೂರು, ಚೆನ್ನೈ ಮೊದಲಾದ ಮಹಾನಗರಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಹೀಗೆ ಟ್ಯಾಲೆಂಟ್ ಯುವ ಸಮುದಾಯದಲ್ಲಿ ಹೊಸ ನೋಟವನ್ನು ಹಾಗೂ ಬೃಹತ್ ಕನಸುಗಳನ್ನು ಬಿತ್ತುತ್ತಿದೆ.

  • ವೃತ್ತಿ ಮಾರ್ಗದರ್ಶನ ಮತ್ತು ಆಪ್ತ ಸಮಾಲೋಚನೆ (Career Guidance & Counseling)

ಬದುಕಿಗೊಂದು ಗುರಿ ನಿರ್ಧಾರವಿಲ್ಲದೆ ಸುಮ್ಮನೆ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ನೀಡುವ ಕೆಲಸ ಟ್ಯಾಲೆಂಟ್ ಮಾಡುತ್ತಾ ಬಂದಿದೆ. ಎಸ್‌ಎಸ್‌ಎಲ್‌ಸಿ/ಪಿಯುಸಿ/ಡಿಗ್ರಿ ಮುಂದೇನು? ಯಾವ ಕೋರ್ಸಿಗೆ ಯಾವ ಕಾಲೇಜು ಉತ್ತಮ? ಪ್ರಸ್ತುತ ಬೇಡಿಕೆ ಇರುವ ಕೋರ್ಸುಗಳು ಯಾವುವು? ಸಿಇಟಿ ಕೌನ್ಸ್‌ಲಿಂಗ್ ಹೇಗೆ? ಮುಂತಾದ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಹಾಗೂ ಹೆತ್ತವರಿಗೆ ಮಾರ್ಗದರ್ಶನವನ್ನು ಜಿಲ್ಲಾ ಹಾಗೂ ಜಮಾಅತ್ ಮಟ್ಟದಲ್ಲಿ ನಡೆಸಲಾಗುತ್ತಿದೆ. ಇದರ ಫಲಶ್ರುತಿಯಾಗಿ ಸಾವಿರಾರು ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಉನ್ನತ ಭವಿಷ್ಯವನ್ನು ಕಂಡುಕೊಂಡಿದ್ದಾರೆ. ಅಲ್ಲದೆ ಪ್ರತಿಭಾವಂತರು, ಸಾಧಕರು, ಕಲಿಕಾ ನ್ಯೂನ್ಯತೆ ಇರುವವರು, ವರ್ತನೆಯಲ್ಲಿ ಸಮಸ್ಯೆ ಇರುವವರು ಹೀಗೆ ವಿದ್ಯಾರ್ಥಿಗಳಿಗೆ ಹಾಗೂ ಅವರ ಹೆತ್ತವರಿಗೆ ಆಪ್ತ ಸಮಾಲೋಚನೆ (ಕೌನ್ಸೆಲಿಂಗ್) ಸಹ ನಡೆಸಲಾಗುತ್ತಿದೆ. ಹೀಗೆ ಟ್ಯಾಲೆಂಟ್ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ನಾಂದಿಯಾಗುತ್ತಿದೆ.

  • ಮೂಲಭೂತ ಸೌಕರ್ಯಗಳ ಅಭಿವೃದ್ಧಿ

ಕುಟುಂಬಗಳ ಶೋಚನೀಯ ಸ್ಥಿತಿಯನ್ನು ಕಣ್ಣಾರೆ ಕಂಡಾಗ ಕಲ್ಲು ಹೃದಯ ಕೂಡಾ ಕರುಗಬಲ್ಲುದು. ಮಳೆನೀರು ಮನೆಯೊಳಗೆ ಸೋರಿ ರಾತ್ರಿ ನಿದ್ದೆಯಿಲ್ಲದೆ ಕಳೆಯುವ ಪರಿಸ್ಥಿತಿ, ಮನೆಯೊಳಗೆ ಶೌಚಾಲಯವಿಲ್ಲದೆ ಬಯಲು ಶೌಚಾಲಯವನ್ನು ಆಶ್ರಯಿಸಿರುವ ಹಾಗೂ ಸ್ನಾನಗೃಹವಿಲ್ಲದೆ ಬಟ್ಟೆ ಅಡ್ಡಕಟ್ಟಿ ಭದ್ರತೆಗೆ ಕಾವಲು ನಿಲ್ಲಿಸಿ ಸ್ನಾನ ಮಾಡುವ ನಮ್ಮ ಸಹೋದರಿಯರ ಕಷ್ಠ ಹೇಳತೀರದು. ಈ ನೆಲೆಯಲ್ಲಿ ಚಿಂತಿಸಿದ ನಾವು ಜಿಲ್ಲೆಯ ವಿವಿಧೆಡೆ ಹೊಸ ಮನೆಗಳನ್ನು, ಶೌಚಾಲಯ ಮತ್ತು ಸ್ನಾನಗೃಹಗಳನ್ನು ನಿರ್ಮಿಸುತ್ತಿದ್ದೇವೆ ಹಾಗೂ ಹಳೆ ಮನೆಗಳ ದುರಸ್ತಿ ಕಾರ್ಯಗಳನ್ನು ನಡೆಸುತ್ತಿದ್ದೇವೆ. ವಿದ್ಯುತ್ ಸಂಪರ್ಕವಿಲ್ಲದೆ ಕತ್ತಲಲ್ಲಿ ಕಾಲಕಳೆಯುವ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಬೆಳಕನ್ನು ನೀಡುತ್ತಿದ್ದೇವೆ. ಹೀಗೆ ಟ್ಯಾಲೆಂಟ್ ನಿರ್ವಸಿತರ ಬಾಳಲ್ಲಿ ಹೊಂಬೆಳಕು ಚೆಲ್ಲುವ ಪುಣ್ಯದ ಕೆಲಸವನ್ನು ಮಾಡುತ್ತಿದೆ.

  • ವಿಕಲಚೇತನರಿಗೆ ನೆರವು

ಜಿಲ್ಲೆಯ ವಿಕಲಚೇತನರ ಸಮೀಕ್ಷೆ ನಡೆಸಿ ಅವರ ಶ್ರೇಯೋಭಿವೃದ್ಧಿಯ ಬಗ್ಗೆ ಚಿಂತಿಸಿದ ಟ್ಯಾಲೆಂಟ್ ಹಲವು ಯೋಜನೆಗಳನ್ನು ಹಾಕಿಕೊಂಡಿತು. ದ.ಕ ಜಿಲ್ಲಾ ಖಾಝಿ ಬಹುಮಾನ್ಯ ಅಲ್ ಹಾಜ್ ತ್ವಾಖಾ ಅಹಮದ್ ಮುಸ್ಲಿಯಾರ್ ಹಾಗೂ ಉಡುಪಿ ಜಿಲ್ಲಾ ಖಾಝಿ ಬಹುಮಾನ್ಯ ಅಲ್ ಹಾಜ್ ಇಬ್ರಾಹಿಂ ಮುಸ್ಲಿಯಾರ್ ಬೇಕಲ ರವರನ್ನು ಅವಳಿ ಜಿಲ್ಲೆಯ ಅಸಹಾಯಕರ ಹಾಗೂ ವಿಕಲಚೇತನರ ಕುಟುಂಬಗಳಿಗೆ ಭೇಟಿ ಮಾಡಿಸಿ ಸಮುದಾಯ ವಾಸ್ತವಿಕತೆಯನ್ನು ತೋರಿಸಲಾಗಿತ್ತು. ವಿಕಲಚೇತನರ ಸ್ನೇಹ ಸಮ್ಮಿಲನವನ್ನು ನಡೆಸಿ ಅವರಲ್ಲಿ ಆತ್ಮಸ್ಥೈರ್ಯವನ್ನು ತುಂಬಲಾಗುತ್ತಿದೆ. ಅಲ್ಲದೆ ಅವರ ಬದುಕಿಗೊಂದು ದಾರಿ ಕಲ್ಪಿಸಲು ಗೂಡಂಗಡಿ ಹಾಗೂ ವ್ಯಾಪಾರದ ಸಾಮಾನುಗಳನ್ನು ವಿತರಿಸಲಾಗುತ್ತಿದೆ. ವಿಕಲಚೇತನ ಸಾಧಕರಿಗೆ ಸನ್ಮಾನ, ಆವಶ್ಯಕ ಸಲಕರಣೆಗಳಾದ ವೀಲ್ ಚಯರ್, ಹಿಯರಿಂಗ್ ಏಯ್ಡಾ ವಿತರಣೆ, ಆರ್ಥಿಕ ಸಹಕಾರ ಮುಂತಾದ ಕಾರ್ಯಕ್ರಮಗಳ ಮೂಲಕ  ಅವರಲ್ಲಿ ಚೈತನ್ಯವನ್ನು ತುಂಬಲಾಗುತ್ತಿದೆ. ಹೀಗೆ ಟ್ಯಾಲೆಂಟ್ ನೊಂದವರ ಮುಖದಲ್ಲಿ ನಗು ಅರಳಿಸಲು ಪ್ರಾಮಾಣಿಕ ಪ್ರಯತ್ನವನ್ನು ನಡೆಸುತ್ತಿದೆ.

  • ಪರಿಸರ ಸಂರಕ್ಷಣೆ

ಹಸಿರು ಮತ್ತು ಸ್ವಚ್ಚ ಪರಿಸರ ತನುಮನಕ್ಕೆ ಹಿತಕರ. ಸ್ವಚ್ಚ ಹಾಗೂ ಸುಂದರ ಪರಿಸರ ನಿರ್ಮಾಣ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಬೇರೆಯವರು ಮಾಡುತ್ತಾರೆ ಎಂದು ಕಾಯುವುದಕ್ಕಿಂತಲೂ ನಾವೇ ಮಾಡುವ ಮೂಲಕ ಇತರರಿಗೆ ಮಾದರಿಯಾಗಬಹುದು. ಈ ದಿಸೆಯಲ್ಲಿ ಚಿಂತಿಸಿದ ಟ್ಯಾಲೆಂಟ್ ಪರಿಸರ ಸಂರಕ್ಷಣೆಗಾಗಿ ಹಲವು ಅರ್ಥಪೂರ್ಣ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಜಿಲ್ಲೆಯಾದ್ಯಂತ ನಡೆದ ಪರಿಸರ ಸ್ವಚ್ಚತಾ ಮಾಸಾಚರಣೆಯ ಮೂಲಕ ಸ್ವಚ್ಚತೆಯ ಜಾಗೃತಿ ಮೂಡಿಸಿದೆ. ಅಲ್ಲಲ್ಲಿ ಸ್ವಚ್ಚತಾ ಕಾರ್ಯವನ್ನು ನಡೆಸಿದೆ. ಧಾರ್ಮಿಕ ಕೇಂದ್ರಗಳಿಗೆ ಸಸಿಗಳ ವಿತರಣೆ, ಅಲ್ಲಲ್ಲಿ ವನಮಹೋತ್ಸವ, ಸುಂದರ ಮಸೀದಿ ಪರಿಸರ ಪ್ರಶಸ್ತಿ ಪ್ರದಾನ, ಪರಿಸರ ಕಾರ್ಯಕರ್ತರಿಗೆ ಅಭಿನಂದನೆ, ಸಾವಯವ ಕೃಷಿ ತರಬೇತಿ, ಮನೆ ಟೆರೇಸ್ ಮೇಲೆ ತರಕಾರಿ/ಹಣ್ಣು ಬೆಳೆಯುವ ಬಗ್ಗೆ ತರಬೇತಿ, ಬೀಜಗಳು ಮತ್ತು ಸಾವಯವ ಗೊಬ್ಬರಗಳ ವಿತರಣೆ ಮುಂತಾದ ಕಾರ್ಯಕ್ರಮಗಳ ಪರಿಸರ ಆಂದೋಲನದಲ್ಲಿ ಕೈಜೋಡಿಸುತ್ತಿದೆ. ಹೀಗೆ ಟಿಆರ್‌ಎಫ್ ಪರಿಸರ ಸಂರಕ್ಷಣೆಯ ಹಾದಿಯಲ್ಲಿ ಮುಂದೆ ಸಾಗುತ್ತಿದೆ.

  • ಆರೋಗ್ಯ ಸೇವೆ

ಶೈಕ್ಷಣಿಕವಾಗಿ ನಮ್ಮ ಸಮುದಾಯ ಮುಂದುವರೆಯುತ್ತಿದ್ದರೂ ಆರೋಗ್ಯ ಕ್ಷೇತ್ರದಲ್ಲಿ ಎದುರಿಸುತ್ತಿರುವ ಸಮಸ್ಯೆಗಳು ಬೆಟ್ಟದಷ್ಟು. ನಾನಾ ಮಾರಕ ಖಾಯಿಲೆಗಳಿಗೆ ತುತ್ತಾಗಿ ಆಸ್ಪತ್ರೆಗಳಲ್ಲಿ ನರಳುವವರು, ದುಬಾರಿ ಬಿಲ್ ಕಟ್ಟಲಾಗದೆ ಗುಣಮುಖರಾದರೂ ಡಿಸ್ಚಾರ್ಜ್ ಆಗಲು ಸಾಧ್ಯವಾಗದವರು, ಮರಣ ಹೊಂದಿದರೂ ಮೃತದೇಹವನ್ನು ಕೊಂಡೊಯ್ಯಲಾಗದವರು ಹೀಗೆ ಇಲ್ಲಿ ಸಮಸ್ಯೆಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಆರೋಗ್ಯ ಪ್ರಜ್ಞೆ ಇಲ್ಲದ ಸಮುದಾಯದಲ್ಲಿ ಆರೋಗ್ಯ ಪ್ರಜ್ಞೆಯನ್ನು ಹಾಗೂ ಲಭ್ಯವಿರುವ ಸರಕಾರದ ಸವಲತ್ತುಗಳ ಬಗ್ಗೆ ಅರಿವು ಮೂಡಿಸಲು ಪ್ರಯತ್ನಿಸಲಾಗುತ್ತಿದೆ. ಜಿಲ್ಲೆಯ ಹಲವೆಡೆ ರಕ್ತದಾನ ಶಿಬಿರಗಳನ್ನು ಮತ್ತು ಉಚಿತ ಆರೋಗ್ಯ ತಪಸಣಾ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಬಡ ರೋಗಿಗಳ ವೈದ್ಯಕೀಯ ವೆಚ್ಚಕ್ಕಾಗಿ ಧನ ಸಹಾಯ, ಸರಕಾರಿ ಆಸ್ಪತ್ರೆಗಳಿಗೆ ಅಗತ್ಯ ಸಲಕರಣೆಗಳ ಕೊಡುಗೆ, ರೋಗಿಗಳಿಗೆ ಹಣ್ಣುಹಂಪಲು ಮತ್ತು ಔಷಧಿ ವಿತರಣೆ, ಆಸ್ಪತ್ರೆಯ ಸಹಭಾಗಿತ್ವದಲ್ಲಿ ಆರೋಗ್ಯ ಕಾರ್ಡು ವಿತರಣೆ ಮೊದಲಾದ ಅರ್ಥಪೂರ್ಣ ಕಾರ್ಯಕ್ರಮಗಳ ಮೂಲಕ ಟಿಆರ್‌ಎಫ್ ಆರೋಗ್ಯ ಸೇವೆಯನ್ನು ಒದಗಿಸುತ್ತಿದೆ. ಹೀಗೆ ಟಿಆರ್‌ಎಫ್ ಆರೋಗ್ಯವಂತ ಸಮಾಜದ ನಿರ್ಮಾಣದತ್ತ ತನ್ನ ಗುರಿಯನ್ನು ನೆಟ್ಟಿದೆ.

  • ಸರ್ವಧರ್ಮೀಯ ಸಾಧಕರಿಗೆ ಸನ್ಮಾನದ ಗರಿ

ಟ್ಯಾಲೆಂಟಿನ ಮೂಲ ಉದ್ದೇಶವೇ ಪ್ರತಿಭೆಗಳನ್ನು ಸೃಷ್ಟಿಸುವುದು ಹಾಗೂ ಅರಳಿಸುವುದು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರು, ಪ್ರತಿಭಾವಂತರು, ರ್ಯಾಂಕ್ ವಿಜೇತರು, ಕ್ರೀಡಾ ಸಾಧಕರು ಮೊದಲಾದವರ ಸಾಧನೆ ಮತ್ತು ಪ್ರತಿಭೆಯನ್ನು ಗುರುತಿಸುವ ಪರಂಪರೆ ಟ್ಯಾಲೆಂಟ್ ಆರಂಭದಿಂದಲೂ ಹೊಂದಿದೆ. ನಮ್ಮ ಮನೆಗೆ ಹಾಲು ಹಾಕುವವ, ಪೇಪರ್ ಹಾಕುವವ, ಪೌರ ಕಾರ್ಮಿಕ, ಪ್ರಾಮಾಣಿಕ ಚಾಲಕ, ಕೃಷಿಕನಿಂದ ಹಿಡಿದು ವಿಜ್ಞಾನಿ, ರಾಜಕಾರಣಿ, ತಂತ್ರಜ್ಞಾನಿ, ಕ್ರೀಡಾಪಟು, ಸಾಹಿತಿ, ಚಿಂತಕ, ಸಮಾಜಸೇವಕ, ಮದ್ರಸ ವಿದ್ಯಾರ್ಥಿಗಳು ಹೀಗೆ ಸಾವಿರಾರು ಸರ್ವಧರ್ಮೀಯ ಸಾಧಕರನ್ನು ಸನ್ಮಾನಿಸಿದ ಕೀರ್ತಿ ಟ್ಯಾಲೆಂಟ್‌ಗೆ ಸಲ್ಲುತ್ತದೆ. ಟ್ಯಾಲೆಂಟ್ ಮೀಲಾದ್ ಅವಾರ್ಡ್, ಟ್ಯಾಲೆಂಟ್ ಸ್ಪೋರ್ಟ್ಸ್ ಅವಾರ್ಡ್, ಟ್ಯಾಲೆಂಟ್ ಸೋಷಿಯಲ್ ವರ್ಕರ್ ಅವಾರ್ಡ್, ಟ್ಯಾಲೆಂಟ್ ಅಕಾಡೆಮಿಕ್ ಎಕ್ಸಲೆನ್ಸ್ ಅವಾರ್ಡ್, ಟ್ಯಾಲೆಂಟ್ ಮದ್ರಸ ಎಕ್ಸಲೆನ್ಸ್ ಅವಾರ್ಡ್, ಟ್ಯಾಲೆಂಟ್ ಆರ್ಟಿಸ್ಟ್ ಅವಾರ್ಡ್ ಹೀಗೆ ಪ್ರಶಸ್ತಿಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಹೀಗೆ ಟಿಆರ್‌ಎಫ್ ಪ್ರತಿಭೆ ಮತ್ತು ಸಾಧನೆಯನ್ನು ಅಭಿನಂದಿಸುವ ಮೂಲಕ ಹೃದಯಶ್ರೀಮಂತಿಕೆಯನ್ನು ಮೆರೆಯುತ್ತಿದೆ.

  • ಧಾರ್ಮಿಕ ಶಿಕ್ಷಣಕ್ಕೆ ಉತ್ತೇಜನ

ಲೌಕಿಕ ಶಿಕ್ಷಣಕ್ಕೆ ಉತ್ತೇಜನ ನೀಡಿದಂತೆ ಟಿಆರ್‌ಎಫ್ ಧಾರ್ಮಿಕ ಶಿಕ್ಷಣಕ್ಕೂ ಪ್ರಾಮುಖ್ಯತೆಯನ್ನು ನೀಡುತ್ತಿದೆ. ಮದ್ರಸ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸುವ ಸಲುವಾಗಿ ಪ್ರತೀ ವರ್ಷ ಮೂವತ್ತು ವಿದ್ಯಾರ್ಥಿಗಳಿಗೆ ಟ್ಯಾಲೆಂಟ್ ಮದ್ರಸ ಎಕ್ಸಲೆನ್ಸ್ ಅವಾರ್ಡ್ ಎಂಬ ಪ್ರಶಸ್ತಿಯನ್ನು ಕಳೆದ ನಾಲ್ಕು ವರ್ಷಗಳಿಂದ ನೀಡಿ ಪ್ರೋತ್ಸಾಹಿಸುತ್ತಿದೆ. ಒಂದೇ ಮಸೀದಿಯಲ್ಲಿ ನಿರಂತರ 15 ವರ್ಷಕ್ಕಿಂತ ಮೇಲ್ಪಟ್ಟು ಸೇವೆ ಸಲ್ಲಿಸಿದ ಮೌಲವಿಗಳನ್ನು ಸನ್ಮಾನಿಸಲಾಗಿದೆ. ಅದೇ ರೀತಿ ಮೌಲವಿಗಳಿಗೆ ಸಾಚಾರ್ ವರದಿಯ ಬಗ್ಗೆ ಪ್ರಬಂಧ ರಚನೆ, ಕನ್ನಡ ಭಾಷೆಯಲ್ಲಿ ಭಾಷಣ ಹೀಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ಅವರ ಪ್ರತಿಭೆಯ ಅನಾವರಣಕ್ಕೆ ವೇದಿಕೆ ಕಲ್ಪಿಸಲಾಗುತ್ತಿದೆ. ಅಲ್ಲದೆ ಮೊಬೈಲ್ ಟೆಕ್ನಿಶಿಯನ್, ಕಂಪ್ಯೂಟರ್ ಮೊದಲಾದ ವೃತ್ತಿಪರ ತರಬೇತಿಗಳನ್ನು ಮೌಲವಿಗಳಿಗೆ ಆಯೋಜಿಸಲಾಗುತ್ತಿದೆ. ಜಿಲ್ಲೆಯ ಎಲ್ಲಾ ಜಮಾಅತ್‌ಗಳಲ್ಲಿ ಉಚಿತವಾಗಿ ಗೋರಿ (ಖಬರ್) ತೋಡುವ ಹಾಗೂ ಮಯ್ಯತ್ (ಮೃತದೇಹ) ಸ್ನಾನ ಮಾಡಿಸುವ ಸ್ವಯಂಸೇವಕರನ್ನು ಟ್ಯಾಲೆಂಟ್ ಅಭಿನಂದಿಸಿದೆ. ಮದ್ರಸ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕಾಗಿ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಾಗಾರಗಳನ್ನು ನಡೆಸಲಾಗುತ್ತಿದೆ. ಮದ್ರಸದಲ್ಲಿ ಸ್ವಚ್ಚತಾ ಕಾರ್ಯಕ್ರಮ, ವನಮಹೋತ್ಸವ ಮೊದಲಾದ ಕಾರ್ಯಕ್ರಮಗಳಿಗೆ ಸೂಕ್ತ ಸಹಕಾರವನ್ನು ನೀಡಲಾಗುತ್ತಿದೆ. ಹೀಗೆ ಟ್ಯಾಲೆಂಟ್ ಇಹಪರವಿಜಯಕ್ಕಾಗಿ ಶ್ರಮಿಸುತ್ತಿದೆ.

  • ಪ್ರಾಯ ಮೂವತ್ತು ದಾಟಿದ ಹೆಣ್ಮಕ್ಕಳ ಮದುವೆ ಯೋಜನೆ

ನಮ್ಮ ಅಂದಾಜು ಸಮೀಕ್ಷೆಯ ಪ್ರಕಾರ ಸಾಧಾರಣ ಮದುವೆ ಪ್ರಾಯ ಮೀರಿದ ಸಾವಿರಾರು ಯುವತಿಯರು ಮದುವೆಯಾಗದೇ ಮನೆಯಲ್ಲಿ ಉಳಿದಿದ್ದಾರೆ. ಅದೆಷ್ಟೋ ವರ್ಷಗಳಿಂದ ವರನಿಗಾಗಿ ಕಾದು ಕಾದು ಮದುವೆಯನ್ನೇ ಮರೆತುಬಿಟ್ಟಿದ್ದಾರೆ. ಅಂತಹ ಯುವತಿಯರಿಗೆ ಹೊಸಬಾಳು ಸಿಗುವಂತಾಗಲು ಕೇವಲ ಪ್ರಾಯ ಮೂವತ್ತು ದಾಟಿದ ಹೆಣ್ಮಕ್ಕಳ ಮದುವೆ ಯೋಜನೆಯನ್ನು ಕೈಗೆತ್ತಿಕೊಂಡೆವು. ಅಲ್ಲಾಹನ ಅಪಾರವಾದ ಅನುಗ್ರಹದಿಂದ ಮತ್ತು ದಾನಿಗಳ ಸೂಕ್ತ ನೆರವಿನಿಂದ ಒಟ್ಟು 138 ಮದುವೆಗಳಿಗೆ ಆರ್ಥಿಕವಾಗಿ ಸಹಕರಿಸಲು ಸಾಧ್ಯವಾಯಿತು. ಮಾನಸಿಕವಾಗಿ ಬಹಳಷ್ಟು ನೊಂದಿರುವ ಆ ಕುಟುಂಬಗಳಿಗೆ ಧೈರ್ಯ ತುಂಬುವ ಕೆಲಸ ಟಿಆರ್‌ಎಫ್ ಮಾಡುತ್ತಿದೆ. ನಿಮ್ಮೊಂದಿಗೆ ನಾವಿದ್ದೇವೆ ಎಂಬ ನಮ್ಮ ಭರವಸೆಯ ಮಾತು ಅವರನ್ನು ಮದುವೆಯ ಸಿದ್ಧತೆಗೆ ಪ್ರೇರೇಪಿಸುತ್ತಿದೆ. ನಮ್ಮ ಮಹಿಳೆಯರೇ ಸರ್ವೇ ನಡೆಸಿ ಯಾವುದೇ ಪ್ರಚಾರವಿಲ್ಲದೆ ಸಹಕರಿಸುತ್ತಾ ಬಂದಿರುವ ಈ ಯೋಜನೆಯ ಫಲಾನುಭವಿಗಳ ಮುಖದಲ್ಲಿ ಅರಳಿದ ಸಂತೋಷವನ್ನು ಕಂಡಾಗ ನಮ್ಮಲ್ಲಿ ಸಾರ್ಥಕತೆಯ ಭಾವ ಮೂಡುತ್ತದೆ. ಹೀಗೆ ಬದುಕಿನಲ್ಲಿ ಹತಾಶೆ, ಖಿನ್ನತೆ, ನೋವುಗಳನ್ನು ಉಂಡ ಜೀವಗಳ ಸಂತೈಸುವಿಕೆಯಲ್ಲಿ ಟ್ಯಾಲೆಂಟ್ ಸಂತೃಪ್ತಿಯನ್ನು ಕಾಣುತ್ತಿದೆ.

  • ಮಹಿಳಾ ಸಬಲೀಕರಣದತ್ತ

ಹೆಣ್ಣು ಸಮಾಜದ ಕಣ್ಣು. ಸಶಕ್ತ ಮಹಿಳೆ ಸಮಾಜದ ಆಸ್ತಿ. ಈ ದಿಸೆಯಲ್ಲಿ ಚಿಂತಿಸಿದ ಟಿಆರ್‌ಎಫ್ ಮುಖ್ಯವಾಗಿ ಗ್ರಾಮಾಂತರ ಪ್ರದೇಶದ ಮಹಿಳೆಯರ ಸಬಲೀಕರಣಕ್ಕಾಗಿ ಹಲವು ಯೋಜನೆಗಳನ್ನು ಹಾಕಿಕೊಂಡು ಮುನ್ನಡೆಯುತ್ತಿದೆ. ಜಿಲ್ಲೆಯ ವಿವಿಧೆಡೆ ಉಚಿತ ಟೈಲರಿಂಗ್ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿ ಯುವತಿಯರಿಗೆ ತರಬೇತಿ ನೀಡುವಲ್ಲಿ ಟ್ಯಾಲೆಂಟ್ ಯಶಸ್ವಿಯಾಗಿದೆ. ಫಿನಾಯಿಲ್, ಹಪ್ಪಳ, ಸಂಡಿಗೆ, ಬೇಕರಿ ತಿನಿಸುಗಳು, ಉಪ್ಪಿನಕಾಯಿ ತಯಾರಿ ಮೊದಲಾದ ಸ್ವ ಉದ್ಯೋಗಗಳ ಬಗ್ಗೆ ತರಬೇತಿಗಳನ್ನು ಆಗಾಗ ಆಯೋಜಿಸಲಾಗುತ್ತಿದೆ. ಮಹಿಳೆಯರಿಗೆ ಕಂಪ್ಯೂಟರ್, ಸ್ಪೋಕನ್ ಇಂಗ್ಲೀಷ್, ಕುರ್‌ಆನ್, ತಜ್‌ವೀದ್, ಮೆಹಂದಿ ಇತ್ಯಾದಿ ತರಬೇತಿಗಳನ್ನು ಮಹಿಳೆಯರಿಂದಲೇ ನಡೆಸುವ ಮೂಲಕ ಅವರಲ್ಲಿ ಆತ್ಮಸ್ಥೆರ್ಯವನ್ನು ತುಂಬಲಾಗುತ್ತಿದೆ. ವಿಧವೆಯರ ಸ್ನೇಹ ಸಮ್ಮಿಲನ ನಡೆಸಿ ಸಾಧಕರನ್ನು ಸನ್ಮಾನಿಸಲಾಗುತ್ತಿದೆ. ಸಮಸ್ಯಾತ್ಮಕ ಮಹಿಳೆಯರಿಗೆ ಸೂಕ್ತ ಕೌನ್ಸೆಲಿಂಗ್ ವ್ಯವಸ್ಥೆಯನ್ನು ಟ್ಯಾಲೆಂಟ್‌ನಲ್ಲಿ ಮಾಡಲಾಗಿದೆ. ವಿದ್ಯಾರ್ಥಿನಿಯರು ಮತ್ತು ಮಹಿಳೆಯರ ಸ್ನೇಹಸಮ್ಮಿಲನ ನಡೆಸಿ ಸಾಚಾರ್ ವರದಿಯನ್ನು ಮಂಡಿಸಿ ಸಮುದಾಯದ ವಾಸ್ತವಿಕತೆಯನ್ನು ತೋರಿಸಲಾಗುತ್ತಿದೆ. ವ್ಯಕ್ತಿತ್ವ ವಿಕಸನ ತರಬೇತಿಗಳನ್ನು ನಡೆಸಿ ಸಾಧನೆಗೆ ಪ್ರೇರೇಪಿಸಲಾಗುತ್ತಿದೆ. ಮನೆಮನೆಗಳಿಗೆ ಭೇಟಿ ನೀಡಿ ಮಹಿಳೆಯರಲ್ಲಿ ಅರಿವನ್ನು ಮೂಡಿಸಲಾಗುತ್ತಿದೆ. ಮಯ್ಯತ್ (ಮೃತದೇಹ) ಸ್ನಾನ ಮಾಡಿಸುವ ಮಹಿಳೆಯರಿಗೆ ಅಭಿನಂದಿಸುವ ಮೂಲಕ ಅವರ ಸೇವೆಯನ್ನು ಪುರಸ್ಕರಿಸುತ್ತಿದೆ. ಮಹಿಳಾ ಸಬಲೀಕರಣಕ್ಕಾಗಿ ನಮ್ಮ ಮಹಿಳಾ ಕಾರ್ಯಕರ್ತರು ಶ್ಲಾಘನೀಯ ಸೇವೆಯನ್ನು ಸಲ್ಲಿಸುತ್ತಿದ್ದು, ಅವರೊಂದಿಗೆ ನಮ್ಮ ಮಹಿಳಾ ಅಂಗಸಂಸ್ಥೆಗಳಾದ ಆಸರೆ ವಿಮೆನ್ಸ್ ಫೌಂಡೇಶನ್ ಮತ್ತು ಟ್ಯಾಲೆಂಟ್ ಗ್ರಾಜ್ಯುವೇಟ್ಸ್ ಎಸೋಸಿಯೇಷನ್ ಕೈಜೋಡಿಸುತ್ತಿವೆ.

  • ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆ

ಭಾರತೀಯ ಸಂವಿಧಾನದ ಜಾತ್ಯಾತೀತ ಸಿದ್ಧಾಂತದ ಮೇಲೆ ಬಲವಾಗಿ ನಂಬಿಕೆಯಿಟ್ಟಿರುವ ಸಂಸ್ಥೆ ಟಿಆರ್‌ಎಫ್. ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಯನ್ನು ಉಳಿಸುವಲ್ಲಿ ಟ್ಯಾಲೆಂಟ್ ಸದಾ ಬದ್ಧವಾಗಿದೆ. ಅವನ್ನು ಬೆಳೆಸುವ ಸಲುವಾಗಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವುದರೊಂದಿಗೆ ಶಾಂತಿ ಸೌಹಾರ್ದತೆಯ ಸಂದೇಶವನ್ನು ಪಸರಿಸಲಾಗುತ್ತಿದೆ. ಸರಕಾರಿ ಕಾರ್ಯಕ್ರಮಗಳನ್ನು ಸಂಘಟಿಸುವಲ್ಲಿ ಸಹಕರಿಸುತ್ತಾ ಬಂದಿರುವ ಟಿಆರ್‌ಎಫ್ ಸರ್ವಧರ್ಮೀಯ ಗಣ್ಯರನ್ನು ಆಹ್ವಾನಿಸಿ ಸಾಮರಸ್ಯದ ಸೇತುವೆಯನ್ನು ಕಟ್ಟುತ್ತಿದೆ.ಟ್ಯಾಲೆಂಟ್‌ನ ಈ ನಡೆ ಸರ್ವರ ಪ್ರಶಂಸೆಗೆ ಪಾತ್ರವಾಗಿದೆ ಎನ್ನಲು ಸಂತಸವಾಗುತ್ತಿದೆ. ಹೀಗೆ ಬಲಿಷ್ಠ ಭಾರತದ ನಿರ್ಮಾಣಕ್ಕಾಗಿ ಕೈಜೋಡಿಸಲು ಟ್ಯಾಲೆಂಟ್ ಸದಾ ಸಿದ್ದವಾಗಿದೆ.

  • ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳು

ಮಾಹಿತಿ ಎಂಬ ಅಸ್ತ್ರವನ್ನು ಎಲ್ಲೆಡೆ ಹಂಚಿ ಸಮಾಜದಲ್ಲಿ ಅರಿವನ್ನು ಮೂಡಿಸುವ ಮಹತ್ತರ ಕೆಲಸವನ್ನು ಟ್ಯಾಲೆಂಟ್ ಮಾಡುತ್ತಲೇ ಬಂದಿದೆ. ಸಾಮಾಜಿಕ ಜಾಗೃತಿಯನ್ನು ಮೂಡಿಸುವಂತಹ ಅನೇಕ ಅಭಿಯಾನಗಳನ್ನು ನಿರಂತರವಾಗಿ ನಡೆಸುತ್ತಿದೆ. ಡ್ರಗ್ಸ್, ಕುಡಿತದ ವಿರುದ್ಧ ಜನಜಾಗೃತಿ ಮೂಡಿಸಲಾಗುತ್ತಿದೆ. ಜಿಲ್ಲೆಯಾದ್ಯಂತ ನಡೆದ ರಸ್ತೆ ಸುರಕ್ಷತಾ ಮಾಸಾಚರಣೆ, ಸ್ವಚ್ಚತಾ ಮಾಸಾಚರಣೆ, ವರದಕ್ಷಿಣೆ ವಿರೋಧಿ ಆಂದೋಲನ ಹೀಗೆ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಜನಸಾಮಾನ್ಯರಲ್ಲಿ ಅರಿವನ್ನು ಮೂಡಿಸಲಾಗುತ್ತಿದೆ.ಸಾಚಾರ್ ವರದಿಯನ್ನು ಮಂಡಿಸಿ ಮುಸ್ಲಿಮರ ವಾಸ್ತವ ಸ್ಥಿತಿಗತಿಯನ್ನು ತಿಳಿಸಲಾಗುತ್ತಿದೆ. ಈ ದಿಸೆಯಲ್ಲಿ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಹಾಗೂ ಮೌಲವಿಗಳಿಗೆ ಅನೇಕ ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ.

  • ಸಣ್ಣ ವ್ಯಾಪಾರಿಗಳಿಗೆ ಪ್ರೋತ್ಸಾಹ

ಉಣ್ಣಲು ಇದ್ದವನಿಗೆ ಉಣಿಸುವುದಕ್ಕಿಂತ ಉಣ್ಣಲು ಇಲ್ಲದವನಿಗೆ ಉಣ್ಣುವ ದಾರಿ ಕಲ್ಲಿಸುವುದು ಶ್ರೇಷ್ಠ.

ಸಂಕಷ್ಠದಲ್ಲಿರುವ ಫುಟ್‌ಪಾತ್ ವ್ಯಾಪಾರಿಗಳು ಮತ್ತು ಸಣ್ಣ ವ್ಯಾಪಾರದಲ್ಲಿ ಆಸಕ್ತಿಯುಳ್ಳವರಿಗೆ ತಳ್ಳುವ ಗಾಡಿಗಳನ್ನು ವಿತರಿಸುವ ಮೂಲಕ ವ್ಯಾಪಾರಕ್ಕೆ ಪ್ರೋತ್ಸಾಹಿಸಲಾಗುತ್ತಿದೆ. ಅಲ್ಲದೆ ತಲೆಹೊರೆಯಲ್ಲಿ ಮೀನು ಮಾರಾಟ ಮಾಡುವ ಮೀನು ವ್ಯಾಪಾರಿಗಳಿಗೆ ಉಚಿತವಾಗಿ ಸೈಕಲನ್ನು ವಿತರಿಸಿ ಅವರ ವ್ಯಾಪಾರಾಭಿವೃದ್ಧಿಗೆ ಸಹಕರಿಸಲಾಗಿದೆ. ಈ ಯೋಜನೆಯ ಫಲಾನುಭವಿಗಳು ತಮ್ಮ ದೈನಂದಿನ ಆದಾಯದಲ್ಲಿ ಏರಿಕೆಯನ್ನು ಕಂಡುಕೊಂಡಿದ್ದಾರೆ ಎನ್ನುವುದು ಅತ್ಯಂತ ಸಂತೋಷದ ಸಂಗತಿ. ಹೀಗೆ ಕೆಳಸ್ತರದ ಜನರ ಶ್ರೇಯಸ್ಸನ್ನು ಟ್ಯಾಲೆಂಟ್ ಸದಾ ಬಯಸುತ್ತಿದೆ.

  • ಸಾಕಾಣಿಕೆಗಾಗಿ ಆಡಿನ ಮರಿಗಳ ವಿತರಣೆ

ಆಡು ಸಾಕಾಣಿಕೆ ಅತ್ಯಂತ ಅನುಗ್ರಹವುಳ್ಳ ಒಂದು ಉದ್ಯೋಗವಾಗಿದೆ. ಲೋಕ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) ಸಹಿತ ಅನೇಕ ಪ್ರವಾದಿವರ್ಯರು ಆಡು ಮೇಯಿಸಿರುತ್ತಾರೆ. ನಮ್ಮ ಗ್ರಾಮಾಂತರ ಪ್ರದೇಶದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಹೆಣ್ಣಾಡಿನ ಮರಿಯೊಂದನ್ನು ಸಾಕಾಣಿಕೆಗಾಗಿ ಉಚಿತವಾಗಿ ನೀಡುವ ಈ ಯೋಜನೆ ಫಲಪ್ರದವಾದ ಫಲಿತಾಂಶವನ್ನು ನೀಡಿದೆ. ಸದರಿ ಆಡಿನ ಮರಿ ಬೆಳೆದ ನಂತರ ಹಾಕಿದ ಮರಿಗಳ ಪೈಕಿ ಒಂದು ಹೆಣ್ಣಾಡನ್ನು ಆ ಕುಟುಂಬದಿಂದ ಪಡೆದು ಇನ್ನೊಂದು ಕುಟುಂಬಕ್ಕೆ ವರ್ಗಾಯಿಸಲಾಗುತ್ತದೆ. ಒಂದು ನೆಟ್‌ವರ್ಕ್ ರೀತಿಯಲ್ಲಿ ಈ ಯೋಜನೆ ಮುಂದುವರೆಯುತ್ತಿದ್ದು, ಬಹಳಷ್ಟು ಕುಟುಂಬಗಳು ಇಂದು ಸಾಕಷ್ಟು ಸಂಪಾದನೆ ಮಾಡುತ್ತಿವೆ.

  • ಧಾರ್ಮಿಕ ಕೇಂದ್ರಗಳ ಭೂದಾಖಲೆಗಳನ್ನು ಕ್ರಮಬದ್ಧಗೊಳಿಸುವುದು

ಜಿಲ್ಲೆಯ ಹಲವು ಮುಸ್ಲಿಂ ಧಾರ್ಮಿಕ ಕೇಂದ್ರಗಳ (ಮಸೀದಿ, ಮದ್ರಸ, ದರ್ಗಾ, ಖಬರ್‌ಸ್ತಾನ) ಭೂದಾಖಲೆಗಳು ಕ್ರಮಬದ್ಧವಾಗಿಲ್ಲ. ಈ ದಿಸೆಯಲ್ಲಿ ಚಿಂತಿಸಿದ ಟಿಆರ್‌ಎಫ್ ದ.ಕ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಜೊತೆಸೇರಿ ಭೂದಾಖಲೆಗಳನ್ನು ಕ್ರಮಬದ್ಧಗೊಳಿಸುವ ಬಗ್ಗೆ ಹಾಗೂ ವಕ್ಫ್ ಸಹಿತ ಎಲ್ಲಾ ಇಲಾಖೆಗಳಿಂದ ಮುಸ್ಲಿಂ ಧಾರ್ಮಿಕ ಕೇಂದ್ರಗಳಿಗೆ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡುವ ಕಾರ್ಯಾಗಾರಗಳನ್ನು ತಾಲೂಕುವಾರು ನಡೆಸಿತು. ಕಾರ್ಯಾಗಾರದಲ್ಲಿ ಜಿಲ್ಲೆಯ ಎಲ್ಲಾ ಮಸೀದಿಗಳ ಆಡಳಿತ ಮಂಡಳಿತ ಪದಾಧಿಕಾರಿಗಳು ಭಾಗವಹಿಸಿದ್ದರು. ಇದೇ ಉದ್ದೇಶಕ್ಕಾಗಿ ಟಿಆರ್‌ಎಫ್ ನೇಮಿಸಿರುವ ಅನುಭವಿ ಸ್ವಯಂಸೇವಕರೊಬ್ಬರು ಭೂದಾಖಲೆಗಳನ್ನು ಸರಿಪಡಿಸುವಲ್ಲಿ ಮಸೀದಿಯವರೊಂದಿಗೆ ಸಹಕರಿಸುತ್ತಿದ್ದಾರೆ. ಧಾರ್ಮಿಕ ಸೊತ್ತುಗಳು ಮತ್ತು ವಕ್ಫ್ ಆಸ್ತಿಗಳ ರಕ್ಷಣೆನಮ್ಮೆಲ್ಲರ ಹೊಣೆ ಎಂಬ ಪ್ರಜ್ಞೆಯನ್ನು ಟ್ಯಾಲೆಂಟ್ ಪಸರಿಸುತ್ತಿದೆ.

  • ಪ್ರತಿನಿಧಿಗಳ ಭೇಟಿ

ಟಿಆರ್‌ಎಫ್ ಇಂದು ಜನಮನ್ನಣೆಯನ್ನು ಗಳಿಸಿದೆ. ಟ್ಯಾಲೆಂಟ್ ಮೇಲೆ ಜನರಿಗೆ ಅದೇನೋ ವಿಶ್ವಾಸ ಮೂಡಿದೆ. ದೇಶ ವಿದೇಶಗಳ ಪ್ರತಿನಿಧಿಗಳು ಟ್ಯಾಲೆಂಟ್‌ಗೆ ಭೇಟಿ ನೀಡುತ್ತಲಿದ್ದಾರೆ. ಟ್ಯಾಲೆಂಟ್ ಕಾರ್ಯಚಟುವಟಿಕೆಗಳ ಬಗ್ಗೆ ಅಧ್ಯಯನ ನಡೆಸಲು ಬರುತ್ತಿದ್ದಾರೆ. ಅನೇಕ ಕಾಲೇಜುಗಳು ತಮ್ಮ ವಿದ್ಯಾರ್ಥಿಗಳನ್ನು ಪ್ರಾಜೆಕ್ಟ್/ಕ್ಷೇತ್ರ ಕಾರ್ಯಕ್ಕಾಗಿ ಟ್ಯಾಲೆಂಟ್‌ಗೆ ನಿಯೋಜಿಸುತ್ತಿವೆ. ಪಿಎಚ್‌ಡಿ ವಿಷಯಕ್ಕೆ ಸಂಬಂಧಿಸಿ ಟ್ಯಾಲೆಂಟ್‌ನ ಅನುಭವವನ್ನು ಪಡೆಯಲಾಗುತ್ತಿದೆ. ಕರ್ನಾಟಕ ಸರಕಾರದ ಅಲ್ಪಸಂಖ್ಯಾತರ ಇಲಾಖೆಯೊಂದಿಗೆ ಟಿಆರ್‌ಎಫ್ ಸಹಭಾಗಿತ್ವವನ್ನು ಹೊಂದಿ ಕೆಲವೊಂದು ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಬೇರೆ ಬೇರೆ ಜಿಲ್ಲೆಯ ಸಂಘಸಂಸ್ಥೆಗಳು ಟ್ಯಾಲೆಂಟ್‌ಗೆ ಬಂದು ಸಮಾಜಸೇವೆಯ ಬಗ್ಗೆ ಕಲಿಯುತ್ತಿವೆೆ. ನಮ್ಮಲ್ಲಿಗೆ ಬಂದು ಪ್ರೇರಣೆ ಪಡೆದ ಶಿರಸಿ ತಾಲೂಕ ಮೈನಾರಿಟಿ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಇವರು ಶಿರಸಿಯಲ್ಲಿ ಹಾಗೂ ಕೂರ್ಗ್ ಎಜುಕೇಶನ್ & ಗೈಡೆನ್ಸ್ ಫೋರಂ (ಸಿಇಜಿಸಿ) ಇವರು ಕೊಡಗು ಜಿಲೆಯಾದ್ಯಂತ ನಡೆಸುತ್ತಿರುವ ಸೇವಾ ಕಾರ್ಯಗಳು ನಿಜಕ್ಕೂ ಅಚ್ಚರಿ ಮೂಡಿಸುವಂತಿದೆ. ಟ್ಯಾಲೆಂಟ್ ಯಾವತ್ತೂ ತನ್ನ ಟ್ಯಾಲೆಂಟನ್ನು ಬಚ್ಚಿಟ್ಟುಕೊಂಡಿಲ್ಲ. ಅದನ್ನು ಹಂಚಿಕೊಳ್ಳಲು ಸದಾ ತುದಿಗಾಲಲ್ಲಿ ನಿಂತಿದೆ.

  • ಪುಸ್ತಕಗಳ ಪ್ರಕಾಶನ ಮತ್ತು ಸಾಕ್ಷ್ಯಚಿತ್ರಗಳ ನಿರ್ಮಾಣ

ಪುಸ್ತಕಗಳ ಪ್ರಕಾಶನ ಕ್ಷೇತ್ರದಲ್ಲೂ ಟ್ಯಾಲೆಂಟ್ ಕೈಯಾಡಿಸಿದೆ. ಸರಕಾರಿ ಸವಲತ್ತುಗಳ ಬಗ್ಗೆ ಮಾಹಿತಿ ಇರುವ, ಮರಳಿ ಬಾ ಶಾಲೆಯ ಬಗ್ಗೆ ಮಾರ್ಗದರ್ಶನಗೈಯುವ, ನೂರೊಂದು ಸೇವೆಗಳನ್ನು ಪರಿಚಯಿಸುವ ಪುಸ್ತಕಗಳನ್ನು ಟ್ಯಾಲೆಂಟ್ ಪ್ರಕಾಶಿಸಿದೆ. ರಿಯಲ್ ಹೀರೋ ಹರೇಕಳ ಹಾಜಬ್ಬರ ಪುಸ್ತಕವನ್ನು ಕನ್ನಡ ಮತ್ತು ಇಂಗ್ಲೀಷ್‌ನಲ್ಲಿ ಪ್ರಕಾಶಿಸಿ ಅವರನ್ನು ಜಗತ್ತಿಗೆ ಪರಿಚಯಿಸುವಲ್ಲಿ ಟ್ಯಾಲೆಂಟ್ ಮುಂದೆ ಬಂದಿದೆ. ಶೈಕ್ಷಣಿಕ ಜಾಗೃತಿಯನ್ನು ಮೂಡಿಸುವ ಚಿಗುರುಎಂಬ ಸಾಕ್ಷ್ಯಚಿತ್ರವನ್ನು(documentary) ನಿರ್ಮಿಸಿ ಉಚಿತವಾಗಿ

ಪುಸ್ತಕಗಳು

ಸಂಗಾತಿ

ಚಿಲುಮೆ

ಸಾಚಾರ್ ವರದಿಯ ಪ್ರಮುಖ ಅಂಶಗಳು

ಸ್ವರ್ಗದ ಹಾದಿಯಲಿ

ಮರಳಿ ಬಾ ಶಾಲೆಗೆ ಯೋಜನಾ ಮಾರ್ಗದರ್ಶಿ

ದಾರಿದೀಪ

ದಿಕ್ಸೂಚಿ

Pathfinder

ಸೃಷ್ಟಿಗಳೊಂದಿಗೆ ಮಾನವನ ಬಾಧ್ಯತೆಗಳು

ಹರೇಕಳ ಹಾಜಬ್ಬ

ನೂರೊಂದು ಸೇವೆ

ಸವಿನೆನಪು

MATHS MADE EASY

HAREKALA HAJABBA- A SOCIAL WORKER OF RARE GENRE

101 WAYS TO SERVE HUMANITY

ಸಾಕ್ಷ್ಯಚಿತ್ರ (documentary)

ಚಿಗುರು

  • ಸಂಸ್ಥೆಯ ಮುನ್ನಡೆಯಲ್ಲಿ ಸಾಥ್ ನೀಡಿದವರು

ಟಿಆರ್‌ಎಫ್ ನ ಬೆಳವಣಿಗೆಯಲ್ಲಿ ಹಲವರ ಪ್ರಮುಖ ಪಾತ್ರವಿದೆ. ಸರ್ವಶಕ್ತನ ಅನುಗ್ರಹ, ಫಲಾನುಭವಿಗಳ ದುಅ ಮತ್ತು ಹಿತೈಷಿಗಳ ಹಾರೈಕೆ ಟ್ಯಾಲೆಂಟ್‌ನ ಯಶಸ್ವಿಗೆ ಮೂಲ ಕಾರಣ.ಸ್ಥಾಪಕಾಧ್ಯಕ್ಷರಾದ ಅಬ್ದುಲ್ ರವೂಫ್ ಪುತ್ತಿಗೆ ಮತ್ತು ನಿರ್ದೇಶಕರಾದ ಅಶ್ರಫ್ ಜಿ ಬಾವಾ ರವರ ಸೇವೆ ಅನುಪಮವಾದುದು. ಸದಾ ಸಮಾಜಸೇವೆಗೆ ತುಡಿಯುವ, ಮಿಡಿಯುವ ಹೃದಯ ಅವರದು. ಸಂಸ್ಥೆಯ ಎಲ್ಲಾ ಚಟುವಟಿಕೆಗಳು ಅವರ ನೇತೃತ್ವ ಮತ್ತು ಮೇಲುಸ್ತುವಾರಿಯಲ್ಲಿ ನಡೆಯುತ್ತಿವೆ. ತಮ್ಮ ಬಿಡುವಿಲ್ಲದ ಕೆಲಸ ಕಾರ್ಯಗಳ ನಡುವೆಯೂ ಸಮಾಜದ ಕಟ್ಟಕಡೆಯ ವ್ಯಕ್ತಿಯ ಒಳಿತಿನ ಬಗ್ಗೆ ಚಿಂತಿಸುವ ಹೃದಯವೈಶಾಲ್ಯತೆ ಅವರಿಗಿದೆ. ಸೇವೆಗೆ ಸದಾ ಸಿದ್ಧರಾಗಿರುವ ಸಾಮಾಜಿಕ ಬದ್ಧತೆಯುಳ್ಳ ಯುವಕರ ತಂಡ ನಿರಂತರವಾಗಿ ಟ್ಯಾಲೆಂಟ್‌ಗಾಗಿ ದುಡಿಯುತ್ತಿದೆ. ಹಿರಿಯ ಮತ್ತು ಅನುಭವಿ ಸಲಹೆಗಾರರ ಸಮಯೋಚಿತ ಸಲಹೆ ಮತ್ತು ಮಾರ್ಗದರ್ಶನ ಟ್ಯಾಲೆಂಟ್‌ಗೆ ಪ್ರೇರಕ ಶಕ್ತಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಬಹುಮಾನ್ಯ ಅಲ್‌ಹಾಜ್ ತ್ವಾಖಾ ಅಹಮದ್ ಮುಸ್ಲಿಯಾರ್ ಮತ್ತು ಉಡುಪಿ ಜಿಲ್ಲಾ ಖಾಝಿ ಬಹುಮಾನ್ಯ ಅಲ್‌ಹಾಜ್ ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ರವರು ನಮಗೆ ನೀಡಿದ ಸ್ಪಂದನ ಮತ್ತು ಟ್ಯಾಲೆಂಟ್‌ನ ಕಾರ್ಯವೈಖರಿಯ ಬಗ್ಗೆ ಅವರಿಗಿರುವ ಅಭಿಮಾನಕ್ಕೆ ನಾವು ಆಭಾರಿಗಳಾಗಿದ್ದೇವೆ. ಪ್ರತಿಯೊಂದು ಜಮಾಅತ್‌ಗೆ ಭೇಟಿ ಕೊಟ್ಟಾಗ ನಮ್ಮನ್ನು ಪ್ರೀತಿಯಿಂದ ಬರಮಾಡಿಕೊಂಡು ನಮ್ಮ ಕಾರ್ಯಕ್ರಮಗಳನ್ನು ನಡೆಸಲು ಅನುವು ಮಾಡಿಕೊಟ್ಟ ಜಮಾಅತ್ ಖತೀಬರು, ಆಡಳಿತ ಸಮಿತಿ, ಜಮಾಅತರು ಮತ್ತು ಸಂಘಸಂಸ್ಥೆಗಳಿಗೆ ಮನದಾಳದ ಕೃತಜ್ಞತೆಗಳು. ನಮ್ಮೆಲ್ಲಾ ಚಟುವಟಿಕೆಗಳನ್ನು ಹತ್ತಿರದಿಂದ ಕಂಡು ಆರ್ಥಿಕವಾಗಿ ಸಹಕರಿಸಿದ ಕೊಡುಗೈ ದಾನಿಗಳ ಕೊಡುಗೆಯನ್ನು ಟ್ಯಾಲೆಂಟ್ ಸದಾ ಸ್ಮರಿಸುತ್ತಿದೆ. ಉತ್ತಮ ಕಾರ್ಯಕ್ರಮಗಳನ್ನು ಪ್ರಶಂಸಿಸಿ, ಲೋಪಗಳನ್ನು ತಿಳಿಸಿಕೊಟ್ಟ ಟ್ಯಾಲೆಂಟ್‌ನ ಹಿತೈಷಿಗಳಿಗೆ ಹಾಗೂ ಸಹಕರಿಸಿದ ಎಲ್ಲಾ ಇಲಾಖಾಧಿಕಾರಿಗಳಿಗೆ ಮನದಾಳದ ಅಭಿನಂದನೆಗಳು. ಟಿಆರ್‌ಎಫ್ ನ್ನು ಹೊರಜಗತ್ತಿಗೆ ಪರಿಚಯಿಸಿದ ಎಲ್ಲಾ ಮಾಧ್ಯಮ ಮಿತ್ರರಿಗೆ, ಉತ್ತಮ ಬಾಂಧವ್ಯವನ್ನು ಹಂಚಿಕೊಂಡ ಜಿಲ್ಲೆಯ ಎಲ್ಲಾ ಪ್ರಮುಖ ಸಂಘಸಂಸ್ಥೆಗಳಿಗೆ ಹಾಗೂ ಸಂಸ್ಥೆಯ ಏಳಿಗೆಯಲ್ಲಿ ಕೈಜೋಡಿಸಿದ ಸರ್ವರಿಗೂ ಕೃತಜ್ಞತೆಗಳು. ನಮಗೆ ಸದಾ ಸ್ಫೂರ್ತಿಯ ಚಿಲುಮೆಯಂತಿದ್ದ ನಮ್ಮ ಸಹೋದರ ಸಯ್ಯದ್ ಹಸನ್ ಕೊಪ್ಪ ಇಂದು ನಮ್ಮೊಂದಿಗೆ ಇಲ್ಲ. ವರದಕ್ಷಿಣೆ ವಿರೋಧಿ ಆಂದೋಲನದ ಮುಂಚೂಣಿ ನಾಯಕ ಹಾಗೂ ಸದ್ದಿಲ್ಲದೆ ಜನಸೇವೆ ಮಾಡುತ್ತಿದ್ದ ಹೃದಯವಂತ ಅವರು. ಅಲ್ಲಾಹನು ಅವರಿಗೆ ಮಗ್ಫಿರತ್ ಮತ್ತು ಮರ್ಹಮತ್ ನೀಡಲಿ (ಆಮೀನ್) ಎಂಬ ಪ್ರಾರ್ಥನೆ ನಮ್ಮದು.

  • ಅಂಗಸಂಸ್ಥೆಗಳು

ಸಮಾಜದ ವಿವಿಧ ಸ್ತರಗಳಲ್ಲಿ ದುಡಿಯುವ ಜನರ ಸ್ನೇಹಸಮ್ಮಿಲನವನ್ನು ಟ್ಯಾಲೆಂಟ್ ಆಗಾಗ ನಡೆಸುತ್ತಿದೆ. ವೈದ್ಯರು, ವಕೀಲರು, ಶಿಕ್ಷಕರು, ನಿವೃತ್ತ ನೌಕರರು, ರಿಕ್ಷಾ ಚಾಲಕರು, ವೃತ್ತಿಪರ ವಿದ್ಯಾರ್ಥಿಗಳು, ಸಮಾಜಸೇವಕರು, ಜನಪ್ರತಿನಿಧಿಗಳು, ಮಹಿಳೆಯರು, ಯುವಕರು ಮೊದಲಾದವರನ್ನು ಒಂದೆಡೆ ಸೇರಿಸಿ ಅವರದೇ ಸಂಘಟನೆಯೊದನ್ನು ರೂಪಿಸುವತ್ತ ಗಮನಹರಿಸಿದೆ. ಇದರ ಫಲಶ್ರುತಿಯಾಗಿ ಕೆಲವೊಂದು ಸಂಘಟನೆಗಳು ಹುಟ್ಟಿಕೊಂಡು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿವೆ. ಮಹಿಳಾ ಸಂಘಟನೆಯಾದ ಆಸರೆ ವಿಮೆನ್ಸ್ ಫೌಂಡೇಶನ್ (ರಿ) ಟಿಆರ್‌ಎಫ್‌ನ ಅಂಗಸಂಸ್ಥೆಯಾಗಿದೆ. ಸಮನ್ವಯ ಮುಸ್ಲಿಂ ಶಿಕ್ಷಕರ ಸಂಘ, ನಿವೃತ್ತ ಮುಸ್ಲಿಂ ಉದ್ಯೋಗಸ್ಥರ ಒಕ್ಕೂಟ (ರಿ), ಸ್ಮಾರ್ಟ್ ರೈಡರ್ಸ್‌ ಅಸೋಸಿಯೇಷನ್, ಟ್ಯಾಲೆಂಟ್ ಗ್ರಾಜ್ಯುವೇಟ್ಸ್ ಎಸೋಸಿಯೇಷನ್ ಮೊದಲಾದ ಸಂಘಟನೆಗಳ ಉಗಮಕ್ಕೆ ಟ್ಯಾಲೆಂಟ್ ಅಡಿಪಾಯವನ್ನು ಹಾಕಿಕೊಟ್ಟಿದೆ. ಹೀಗೆ ಟ್ಯಾಲೆಂಟ್ ಮಾನವ ಸಂಪನ್ಮೂಲಗಳ ಅಭಿವೃದ್ಧಿಯತ್ತ ತನ್ನ ಕಾರ್ಯಯೋಜನೆಗಳನ್ನು ವಿಸ್ತರಿಸುತ್ತಿದೆ.

  • ಮುಂದಿನ ಯೋಜನೆ-ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ

ಸಮುದಾಯದ ಮುಂದಿರುವ ಸವಾಲುಗಳು ಬೆಟ್ದದಷ್ಟು. ಟಿಆರ್‌ಎಫ್ ಮಾಡಿದ್ದು ಸ್ವಲ್ಪ. ಮಾಡಬೇಕಾದದ್ದು ಬಹಳಷ್ಟು. ನಮ್ಮ ಜಿಲ್ಲೆಯ ಬಹಳಷ್ಟು ವಿದ್ಯಾರ್ಥಿಗಳಿಗೆ ಮೆಡಿಕಲ್, ಇಂಜಿನಿಯರಿಂಗ್ ಓದುವ ಬಗ್ಗೆ ಒಲವು. ಇನ್ನು ಕೆಲವರಿಗೆ ಗಲ್ಫ್ ಉದ್ಯೋಗದ ಕನಸು ಮಾತ್ರ. ನಮ್ಮ ಸೇವೆ ನಮ್ಮ ನಾಡಿಗೆ ಬಹಳ ಮುಖ್ಯ. ನಾವು ದೇಶದ ಆಡಳಿತ ಯಂತ್ರದ ಭಾಗವಾಗಬೇಕು. ಎಲ್ಲಾ ಇಲಾಖೆಯ ವಿವಿಧ ಹುದ್ದೆಗಳನ್ನು ಅಲಂಕರಿಸಬೇಕು. ಈ ದಿಸೆಯಲ್ಲಿ ವಿದ್ಯಾರ್ಥಿಗಳಲ್ಲಿ ಮತ್ತು ಅವರ ಹೆತ್ತರವಲ್ಲಿ ಕನಸನ್ನು ಹುಟ್ಟಿಸುವ ಕೆಲಸ ಟಿಆರ್‌ಎಫ್ ಮಾಡುತ್ತಿದೆ. ಅಗತ್ಯ ಗ್ರಂಥಾಲಯ ಈಗಾಗಲೇ ತೆರೆದಿದ್ದೇವೆ. ಆದರೆ ಸರಿಯಾದ ತರಬೇತಿಯ ವ್ಯವಸ್ಥೆ ಇಲ್ಲ. ಇದನ್ನು ಮನಗಂಡ ಟಿಆರ್‌ಎಫ್ ಒಂದು ಸುಸಜ್ಜಿತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ 

ವನ್ನು ತೆರೆಯಲು ಯೋಜಿಸಿರುತ್ತೇವೆ. (ಇನ್ಶಾ ಅಲ್ಲಾಹ್). ಪೊಲೀಸ್ ಕಾನ್‌ಸ್ಟೇಬಲ್‌ನಿಂದ ಹಿಡಿದು ಐಪಿಎಸ್ ಅಧಿಕಾರಿವರೆಗೆ, ಗುಮಾಸ್ತನಿಂದ ಹಿಡಿದು ಐಎಎಸ್ ಅಧಿಕಾರಿ ವರೆಗಿನ ಎಲ್ಲಾ ಸರಕಾರಿ ನೌಕರಿಗಳ ಬಗ್ಗೆ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ವೃತ್ತಿಪರವಾದ ತರಬೇತಿಯನ್ನು ನೀಡುವ ಯೋಜನೆ ಇದಾಗಿದೆ. ತಮ್ಮೆಲ್ಲರ ಸಹಕಾರ ಮತ್ತು ಮಾರ್ಗದರ್ಶನವನ್ನು ಈ ನಿಟ್ಟಿಯಲ್ಲಿ ಕೋರುತ್ತಿದ್ದೇವೆ. ಟ್ಯಾಲೆಂಟ್‌ಗೆ ಶ್ರೇಯಸ್ಸನ್ನು ಬಯಸುವ ಹೃದಯ, ಸಹಾಯ ನೀಡುವ ಕೈಗಳು ಮತ್ತು ಪ್ರಾರ್ಥಿಸುವ ತುಟಿಗಳು ನಿಮ್ಮದಾಗಲಿ ಎಂಬ ಆಶಯ ನಮ್ಮದು.

ಕಳೆದ ಹತ್ತುಗಳಲ್ಲಿ ಟಿಆರ್‌ಎಫ್ ಮಾಡಿದ್ದೇನು?

ಇಲ್ಲಿದೆ ಅದರ ಪಕ್ಷಿನೋಟ

ಮರಳಿ ಬಾ ಶಾಲೆಗೆ ಆಂದೋಲನ

ಒಟ್ಟು ಕೇಂದ್ರಗಳು-131

ಒಟ್ಟು ವಿದ್ಯಾರ್ಥಿಗಳು: 2046

ಯುವಕರಿಗೆ ಉಚಿತ ಸ್ವ ಉದ್ಯೋಗ ತರಬೇತಿ

ಒಟ್ಟು ಬ್ಯಾಚ್-23

ತರಬೇತಿ ಪಡೆದ ಯುವಕರ ಸಂಖ್ಯೆ: 893

ವಿದ್ಯಾರ್ಥಿವೇತನದ ಉಚಿತ ಸೇವೆ

ಈವರೆಗೆ ಮಂಜೂರಾಗಿರುವ ವಿದ್ಯಾರ್ಥಿವೇತನದ ಮೊತ್ತ ಅಂದಾಜು 15 ಕೋಟಿ

ಫಲಾನುಭವಿ ವಿದ್ಯಾರ್ಥಿಗಳ ಸಂಖ್ಯೆ: 42330

ಪ್ರಾಯ ಮೂವತ್ತು ದಾಟಿದ ಹೆಣ್ಮಕ್ಕಳ ಮದುವೆ ಯೋಜನೆ

ನೀಡಿದ ಒಟ್ಟು ಸಹಾಯಧನ-52 ಲಕ್ಷ

ಒಟ್ಟು ಫಲಾನುಭವಿಗಳು-138

ಬರೆಯುವ ಪುಸ್ತಕಗಳ ವಿತರಣೆ

ಪುಸ್ತಕಗಳ ಮೌಲ್ಯ 40.50 ಲಕ್ಷ

ಪುಸ್ತಕ ಪಡೆದ ವಿದ್ಯಾರ್ಥಿಗಳ ಸಂಖ್ಯೆ-16300

ನಿರ್ವಸಿತರಿಗೆ ವಸತಿ ಯೋಜನೆ

ಮಾಡಿದ ಒಟ್ಟು ಖರ್ಚು-36.67 ಲಕ್ಷ

ನಿರ್ಮಿಸಿದ ಹೊಸ ಮನೆ-12 ರಿಪೇರಿ-16

ಕತ್ತಲಲ್ಲಿದ್ದ ಮನೆಗಳಿಗೆ ವಿದ್ಯುದ್ದೀಕರಣ

ಒಟ್ಟು ಖರ್ಚು-7.72 ಲಕ್ಷ

ವಿದ್ಯುತ್ ಸಂಪರ್ಕ ಒದಗಿಸಿದ ಮನೆಗಳ ಸಂಖ್ಯೆ-49

ಅಸಹಾಯಕ ಕುಟುಂಬಗಳಿಗೆ ಆರ್ಥಿಕ ನೆರವು

ನೀಡಿದ ಸಹಾಯ ಧನ-5.64 ಲಕ್ಷ

ಫಲಾನುಭವಿಗಳು-128

ಸಾಧಕರಿಗೆ ಸನ್ಮಾನ ಮತ್ತು ಅಭಿನಂದನೆ

ಒಟ್ಟು ಪ್ರಶಸ್ತಿಗಳ ಸಂಖ್ಯೆ-8

ಪುರಸ್ಕೃತರ ಸಂಖ್ಯೆ-1653

ವಿಕಲಚೇತನರಿಗೆ ನೆರವು

ನೀಡಿದ ಸಹಾಯಧನ-5.64 ಲಕ್ಷ

ನೆರವು ಪಡೆದ ವಿಕಲಚೇತನರ ಸಂಖ್ಯೆ-128

ಐಎಎಸ್/ಕೆಎಎಸ್ ಪರೀಕ್ಷಾ ಪೂರ್ವ ಉಚಿತ ತರಬೇತಿ

ಉಚಿತ ತರಬೇತಿಗೆ ಅರ್ಹತೆ ಪಡೆದವರು-16

ಪರೀಕ್ಷೆಗೆ ಹಾಜರಾದವರು-180

ವಿಕಲಚೇತನರಿಗೆ ಗೂಡಂಗಡಿ ಮತ್ತು ಅಂಗಡಿ ಸಾಮಾನು ವಿತರಣೆ

ಒಟ್ಟು ಮೌಲ್ಯ-2.80 ಲಕ್ಷ

ಒಟ್ಟು ಫಲಾನುಭವಿಗಳು-19

ತಲೆಹೊರೆಯಲ್ಲಿ ಮೀನು ವ್ಯಾಪಾರಿಗಳಿಗೆ ಸೈಕಲ್ ವಿತರಣೆ

ವಿತರಿಸಿದ ಸೈಕಲ್‌ಗಳ ಸಂಖ್ಯೆ-22

ಖರ್ಚಾದ ಮೊತ್ತ-0.80 ಲಕ್ಷ

ಸಣ್ಣ ವ್ಯಾಪಾರಿಗಳಿಗೆ ತಳ್ಳುವ ಗಾಡಿ ವಿತರಣೆ

ಒಟ್ಟು ಫಲಾನುಭವಿಗಳು-27

ಖರ್ಚಾದ ಮೊತ್ತ-5.94 ಲಕ್ಷ

ಸಾಕಾಣಿಕೆಗಾಗಿ ಆಡಿನ ಮರಿ ವಿತರಣೆ

ವಿತರಿಸಿದ ಆಡಿನ ಮರಿಗಳ ಸಂಖ್ಯೆ-24

ಮಾಡಿದ ಖರ್ಚು-0.84 ಲಕ್ಷ

ರಕ್ತದಾನ ಶಿಬಿರ

ಶಿಬಿರಗಳ ಸಂಖ್ಯೆ-5

ಸಂಗ್ರಹಿಸಿದ ಯುನಿಟ್‌ಗಳು-237

ಮಹಿಳೆಯರಿಗೆ ಟೈಲರಿಂಗ್ ತರಬೇತಿ

ಒಟ್ಟು ಬ್ಯಾಚ್‌ಗಳ ಸಂಖ್ಯೆ-16

ತರಬೇತಿ ಪಡೆದ ಮಹಿಳೆಯರ ಸಂಖ್ಯೆ-428

ವೃತ್ತಿ ಮಾರ್ಗದರ್ಶನ (ಕರಿಯರ್ ಗೈಡೆನ್ಸ್)

ನಡೆಸಿದ ಒಟ್ಟು ತರಗತಿಗಳ ಸಂಖ್ಯೆ-180 ಅಂದಾಜು

ಫಲಾನುಭವಿಗಳ ಸಂಖ್ಯೆ-6000 (ಅಂದಾಜು)

ಈದ್ ಕಿಟ್ ವಿತರಣೆ

ಒಟ್ಟು ಖರ್ಚು-6.50 ಲಕ್ಷ

ಒಟ್ಟು ಕುಟುಂಬಗಳ ಸಂಖ್ಯೆ-1300

ರಾಜ್ಯದಾದ್ಯಂತ ಜಾಗೃತಿ ಕಾರ್ಯಕ್ರಮಗಳು

ತಗಲಿದ ಒಟ್ಟು ಖರ್ಚು-21.50 ಲಕ್ಷ

ಒಟ್ಟು ಫಲಾನುಭವಿಗಳು-ಅಪರಿಮಿತ

ವಾಹನಾ ಚಾಲನಾ ತರಬೇತಿ

ಒಟ್ಟು ಖರ್ಚು-6.75 ಲಕ್ಷ

ಚಾಲನಾ ತರಬೇತಿ ಪಡೆದವರು-225

ಐಎಎಸ್/ಕೆಎಎಸ್ ಲೈಬ್ರರಿ

ತಗಲಿದ ಒಟ್ಟು ಖರ್ಚು-9.25 ಲಕ್ಷ

ಸದಸ್ಯರ ಸಂಖ್ಯೆ-256

ಪುಸ್ತಕ ಪ್ರಕಾಶನ ಮತ್ತು ಸಾಕ್ಷ್ಯಚಿತ್ರ ನಿರ್ಮಾಣ

ಒಟ್ಟು ಖರ್ಚು-10.70 ಲಕ್ಷ

ಪ್ರಕಾಶಿಸಿದ ಪುಸ್ತಕಗಳ ಸಂಖ್ಯೆ-15

ಸಾಕ್ಷ್ಯಚಿತ್ರ ನಿರ್ಮಾಣ-1

ದಶಮಾನೋತ್ಸವದ ಪ್ರಯುಕ್ತ ಜನವರಿ 15, 16, 17 ರಂದು ಮಂಗಳೂರಿನ ಪುರಭವನದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)