varthabharthi

ಬುಡಬುಡಿಕೆ

ಬದುಕುವ ಕಲೆಯೋ-ಬದುಕಿನ ಕೊಲೆಯೋ...

ವಾರ್ತಾ ಭಾರತಿ : 12 Mar, 2016

‘ಬದುಕುವ ಕಲೆ-ಆರ್ಟ್ ಆಫ್ ಲಿವಿಂಗ್’ನ ಶ್ರೀ ಶ್ರೀ ಸ್ವಾಮೀಜಿಗಳು, ಬೃಹತ್ ಸಮಾವೇಶದಲ್ಲಿ ಸೈನಿಕರು ಸ್ವಯಂಸೇವೆ ಮಾಡುತ್ತಿರುವುದನ್ನು ನೋಡಿ, ಇಡೀ ಭಾರತವೇ ಸ್ವಾಮೀಜಿಯ ಆಶ್ರಮದೊಳಗಿದೆಯೋ ಎಂದೆನ್ನಿಸಿ ಪತ್ರಕರ್ತ ಎಂಜಲು ಕಾಸಿ ರೋಮಾಂಚನ ಗೊಂಡು ಅತ್ತಕಡೆಗೆ ಧಾವಿಸಿದ.

 ಸ್ವಾಮೀಜಿಗಳು ಅದ್ಯಾವುದೋ ಕರಣ್ ಜೋಹರ್ ಸಿನೆಮಾದ ಹಾಡಿಗೆ ಹೆಜ್ಜೆ ಹಾಕುತ್ತಾ, ಅಧ್ಯಾತ್ಮದ ತುತ್ತ ತುದಿಯಲ್ಲಿದ್ದರು.
‘‘ಸ್ವಾಮೀಜಿ, ನಾನು ಪತ್ರಕರ್ತ ಎಂಜಲು ಕಾಸಿ’’ ಎನ್ನುತ್ತಾ ಸ್ವಾಮೀಜಿಯ ಪಾದಾರವಿಂದಕ್ಕೆ ಎಂಜಲು ಕಾಸಿ ಬಾಗಿದ. ಸ್ವಾಮೀಜಿ ಬಳುಕುತ್ತಾ ಎಂಜಲು ಕಾಸಿಯೆಡೆಗೆ ಗುಲಾಬಿ ಹೂವೊಂದನ್ನು ಎಸೆದು ಕಣ್ಣು ಹೊಡೆದರು.
‘‘ಸ್ವಾಮೀಜಿ ನೀವು ಬದುಕುವ ಕಲೆಯನ್ನು ಹೇಳಿಕೊಡಲು ಹೊರಟರೆ, ಇಲ್ಲಿ ಪರಿಸರದ ಕೊಲೆಯಾಗುತ್ತದೆಯಲ್ಲ....’’ ಕಾಸಿ ಇಂಟರ್ಯೂ ಶುರು ಮಾಡಿದ.
‘‘ಅರೆ! ನೀವು ಊಟ ಮಾಡಿದ್ರ...ಪತ್ರಕರ್ತರಿಗೆ ಬೇರೆಯೇ ವ್ಯವಸ್ಥೆ ಮಾಡಿದ್ದೇವೆ...’’
‘‘ಹೌದು ಸ್ವಾಮೀಜಿ...ಅಲ್ಲೇ ಊಟ ಮಾಡಿ ಬಂದೆ...’’
‘‘ಪತ್ರಕರ್ತರಿಗೆ ವಿಶೇಷ ಉಡುಗೊರೆ ಇತ್ತು. ತಗೊಂಡ್ರಾ...’’
‘‘ತಗೊಂಡೆ ಸ್ವಾಮೀಜಿ...’’ ಕಾಸಿ ಹಲ್ಲು ಕಿರಿಯುತ್ತಾ ಹೇಳಿದ.
‘‘ಹೂಂ...ಈಗ ಪ್ರಶ್ನೆ ಕೇಳಿ...’’
ಕಾಸಿ ತಡವರಿಸಿದ ‘‘ಸ್ವಾಮೀಜಿ, ನಿಮಗೆ ಬದುಕುವುದಕ್ಕೆ ಗೊತ್ತಿಲ್ಲ. ಇನ್ನು ಉಳಿದವರಿಗೆ ಬದುಕುವ ಕಲೆಯನ್ನು ಹೇಗೆ ಹೇಳಿಕೊಡುತ್ತೀರಿ ಎಂದು ಜನರು ಪ್ರಶ್ನಿಸುತ್ತಿದ್ದಾರೆ...’’
ಸ್ವಾಮಿ ಹಸನ್ಮುಖಿಯಾದರು ‘‘ನನಗೆ ಬದುಕು ಕಲೆ ಚೆನ್ನಾಗಿ ಗೊತ್ತು. ಆದುದರಿಂದ, ಇಷ್ಟೆಲ್ಲ ಮಾಡಿದರೂ ಜೈಲಿಗೆ ಹೋಗದೆ ಆರಾಮವಾಗಿ ಬದುಕುತ್ತಿದ್ದೇನೆ. ಇಂದು ನನ್ನ ಆಶ್ರಮದಲ್ಲಿ ಅದೆಷ್ಟೋ ಜನರು ಬದುಕುವ ಕಲೆಯನ್ನು ಕಲಿತುಕೊಂಡಿದ್ದಾರೆ...ಈ ದೇಶದಲ್ಲಿರುವ ಭ್ರಷ್ಟ ರಾಜಕಾರಣಿಗಳು ಇಂದು ಆರಾಮವಾಗಿ ಬದುಕುತ್ತಿದ್ದರೆ, ಅದಕ್ಕೆ ನಾನು ಕಲಿಸಿದ ಬದುಕಿನ ಕಲೆಯೇ ಕಾರಣ...’’
‘‘ನಿಮ್ಮ ಆಶ್ರಮದಲ್ಲಿ ಯಾವ ಯಾವ ಕಲೆಯನ್ನು ಕಲಿಸುತ್ತೀರಿ ಸ್ವಾಮೀಜಿ...’’ ಕಾಸಿ ಕುತೂಹಲದಿಂದ ಕೇಳಿದ.

‘‘ನೋಡಿ...ಇಷ್ಟೆಲ್ಲ ಪರಿಸರ ನಾಶವಾಯಿತು ಎಂದು ಪತ್ರಕರ್ತರು ಬೊಬ್ಬಿಟ್ಟರು. ರೈತರು ಬೀದಿಗಿಳಿದರು. ಆದರೂ ನಾನು ನಗುತ್ತಾ ಆರಾಮವಾಗಿಲ್ಲವೆ....ಇದುವೇ ಬದುಕಿನ ಕಲೆ....ಆ ಕಲೆ ಗೊತ್ತಿದ್ದರೆ ಎಷ್ಟು ಕೊಲೆ ಮಾಡಿದರೂ ಸಾರ್ವಜನಿಕವಾಗಿ ಆರಾಮವಾಗಿ ಬದುಕಬಹುದು...’’ ‘‘ಸ್ವಾಮೀಜಿ ವಿಜಯ ಮಲ್ಯ ಅವರು ತಮ್ಮ ಆಶ್ರಮದಲ್ಲಿ ಬದುಕುವ ಕಲೆಯ ಬಗ್ಗೆ ಏನಾದರೂ ತರಬೇತಿ ಪಡೆದಿದ್ದರೆ?’’
ಶ್ರೀಶ್ರೀಗಳು ಮುಗುಳ್ನಕ್ಕರು ‘‘ಚೆನ್ನಾಗಿ ಊಹಿಸಿದಿರಿ. ಅವರು ಬ್ಯಾಂಕುಗಳಿಂದ ಸಾಲ ತೆಗೆದುಕೊಳ್ಳುವ ಮೊದಲು ಒಂದು ವಾರ ಈ ಆಶ್ರಮದಲ್ಲಿ ತರಬೇತಿ ಪಡೆದಿದ್ದರು. ಸಾಲ ಪಡೆದ ಬಳಿಕ ಒಂದು ತಿಂಗಳು ಬದುಕುವ ಕಲೆಯ ಕುರಿತಂತೆ ತರಬೇತಿ. ಈಗ ನೋಡಿ...ಅದೆಲ್ಲೋ ಲಂಡನ್‌ನಲ್ಲಿ ಆರಾಮವಾಗಿ ಬದುಕುತ್ತಿದ್ದಾರೆ. ಎಲ್ಲವೂ ಆರ್ಟ್ ಆಫ್ ಲಿವಿಂಗ್‌ನ ಪ್ರಭಾವ’’
ಕಾಸಿಗೆ ನಿಜಕ್ಕೂ ಖುಷಿಯಾಯಿತು. ‘‘ಸ್ವಾಮೀಜಿ...ನಮಗೂ ಸ್ವಲ್ಪ ಬದುಕುವ ಕಲೆಯನ್ನು ಕಲಿಸಿ ಕೊಡಿ. ನಾನೂ ಕೆಲವು ಬ್ಯಾಂಕುಗಳಿಂದ ಸಾಲ ತೆಗೆದುಕೊಳ್ಳಬೇಕಾಗಿದೆ...’’
ಸ್ವಾಮೀಜಿ ಕಾಸಿಯ ಮುಗ್ಧತೆಗೆ ನಕ್ಕರು ‘‘ಹಣವಿದ್ದವರಿಗೆ ಮಾತ್ರ ನಾನು ಬದುಕುವ ಕಲೆ ಕಲಿಸಿಕೊಡುತ್ತೇನೆ. ಬಡವರಿಗೆ ಬದುಕುವ ಕಲೆಯನ್ನು ಹೇಳಿಕೊಟ್ಟರೆ ನಾನು ಬದುಕುವುದು ಹೇಗೆ?’’

‘‘ಹಣವಿದ್ದವರಿಗೆ ಬದುಕುವ ಕಲೆಯನ್ನು ಹೇಳಿಕೊಡುವ ಅಗತ್ಯವಿದೆಯೇ ಸ್ವಾಮೀಜಿ?’’ ಶ್ರೀ ಕೃಷ್ಣ ಪರಮಾತ್ಮನಲ್ಲಿ ಅರ್ಜುನ ಕೇಳಿದಂತೆ ಕಾಸಿ ಪ್ರಶ್ನಿಸಿದ. ‘‘ನೋಡಿ...ಹಣವಿದ್ದವರಿಗೆ ಮಾತ್ರ ತಾನೆ ಬ್ಯಾಂಕುಗಳು ಸಾಲ ಕೊಡುವುದು. ಆದುದರಿಂದ ಮೊದಲು ಸಾಲ ಪಡೆಯುವುದಕ್ಕೋಸ್ಕರ ನೀವು ಹಣ ಮಾಡಬೇಕು...ಹಣ ಮಾಡಿ ಸಾಲ ಪಡೆಯಬೇಕು...ಸಾಲ ಪಡೆದು ನಮ್ಮ ಆಶ್ರಮದಲ್ಲಿ ತರಬೇತಿ ಪಡೆದು ಕೊಂಡು, ಕಾನೂನಿನ ಕೈಯಿಂದ ತಪ್ಪಿಸಿ ವಿದೇಶಗಳಲ್ಲಿ ಆರಾಮವಾಗಿ ಬದುಕಬೇಕು...’’

ಕಾಸಿಗೆ ಒಂದೂ ಅರ್ಥವಾಗಲಿಲ್ಲ. ಯಾವುದೋ ಗಹನವಾದ ಅಧ್ಯಾತ್ಮ ವಿಷಯವನ್ನು ಶ್ರೀಗಳು ಹೇಳುತ್ತಾರೆ ಎನ್ನುವುದಷ್ಟೇ ಕಾಸಿಗೆ ಗೊತ್ತಾಯಿತು. ‘‘ಗುರುಗಳೇ ಅಷ್ಟೆಲ್ಲ ಭೂಹಗರಣ ಮಾಡಿದರೂ ನೀವು ಕಾನೂನಿನ ಕೈಯಿಂದ ತಪ್ಪಿಸಿಕೊಂಡಿದ್ದೀರಲ್ಲ ಹೇಗೆ ಸಾಧ್ಯ?’’
‘‘ಆರ್ಟ್ ಆಫ್ ಲಿವಿಂಗ್‌ನಲ್ಲಿ ಅದೆಲ್ಲವೂ ಸಾಧ್ಯ....’’ ಎನ್ನುತ್ತಾ ಶ್ರೀಗಳು ಕಣ್ಣು ಮುಚ್ಚಿ ಒಯ್ಯಿರದಲ್ಲಿ ಮೂರು ಬಾರಿ ಸೊಂಟ ತಿರುಗಿಸಿದರು.
ಕಾಸಿಗೆ ರೋಮಾಂಚನವಾಯಿತು.
‘‘ಗುರುಗಳೇ ನಿಮ್ಮ ಕೆಲಸಕ್ಕೆ ಸೇನೆಯನ್ನು ಬಳಸಿದ್ದು ತಪ್ಪಲ್ಲವೇ?’’ ಕಾಸಿ ಇನ್ನೊಂದು ಪ್ರಶ್ನೆಯನ್ನು ಒಗೆದ.
‘‘ಸರಕಾರದ ಕೆಲಸ ದೇವರ ಕೆಲಸ. ನಾನು ದೇವರಿಗೆ ಹತ್ತಿರವಿರುವವನು. ಆದುದರಿಂದ ನನ್ನ ಕೆಲಸವೆಂದರೆ ಸರಕಾರದ ಕೆಲಸ. ಸರಕಾರದ ಕೆಲಸವೆಂದರೆ ದೇಶದ ಕೆಲಸ...’’ ಎನ್ನುತ್ತಾ ಗುರುಗಳು ನಕ್ಕರು.
‘‘ಗುರುಗಳೇ ನಿಮ್ಮ ಸಮಾವೇಶದಲ್ಲಿ ಮೃತರ ಹೆಸರೂ ಆಹ್ವಾನ ಪತ್ರಿಕೆಯಲ್ಲಿದೆಯಲ್ಲ....’’ ಕಾಸಿ ಗೊಂದಲದಿಂದ ಕೇಳಿದ.
‘‘ಮೃತರ ದೇಹ ನಶಿಸಿರಬಹುದು. ಅವರ ಆತ್ಮಕ್ಕೆ ನಾನು ಆಹ್ವಾನ ನೀಡಿದ್ದೇನೆ. ಅವರ ಆತ್ಮ ವೇದಿಕೆಯಲ್ಲಿ ಉಪಸ್ಥಿತರುತ್ತದೆ. ಅವರ ಜೊತೆಗೆ ನಾನು ಸಂವಾದ ಮಾಡಲಿದ್ದೇನೆ...’’
‘‘ಗುರುಗಳೇ....ಕೋರ್ಟ್ ನಿಮಗೆ ದಂಡವಿಧಿಸಿದೆಯಲ್ಲ...ಅದನ್ನು ಕಟ್ಟುತ್ತೀರಾ...?’’
ರವಿಶಂಕರ್ ಮುಗುಳನಗೆ ನಕ್ಕರು. ಕಾಸಿಗೆ ಆ ಮುಗುಳ್ನಗೆಯಲ್ಲೇ ಜ್ಞಾನೋದಯವಾಯಿತು.
-ಚೇಳಯ್ಯ

chelayya@gmail.com

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)