varthabharthi

ಬುಡಬುಡಿಕೆ

ಪ್ರೆಸ್‌ಮೀಟ್ ಮಾಡುವುದಕ್ಕೆ ಸಾಲ ಕೊಡ್ತೀರಾ?

ವಾರ್ತಾ ಭಾರತಿ : 25 Sep, 2016

ಮಂಗಳೂರಿನ ಕಾಂಗ್ರೆಸ್ ಕಚೇರಿಯೊಳಗೆ ಬಾಗಿಲು ಹಾಕಿ ಸಭೆ ಮಾಡಲಾಗುತ್ತಿತ್ತು. ಅಷ್ಟರಲ್ಲಿ ಯಾರೋ ಬಾಗಿಲು ತಟ್ಟಿದ ಸದ್ದು. ಜಿಲ್ಲಾಧ್ಯಕ್ಷರು ಮೆಲ್ಲನೆ ಬಾಗಿಲ ಬಳಿ ಹೋಗಿ ‘‘ಯಾರು?’’ ಎಂದರು.
‘‘ನಾನು ಪೂಜಾರಿ?’’
‘‘ಯಾವ ದೇವಸ್ಥಾನದ ಪೂಜಾರಿ?’’ ಜಿಲ್ಲಾಧ್ಯಕ್ಷರು ಕೇಳಿದರು.
‘‘ದೇವಸ್ಥಾನದ ಪೂಜಾರಿ ನಿಮಗೆ ಯಾಕೆ? ಕಾಂಗ್ರೆಸ್‌ಗೆ ಪಿಂಡ ಬಿಡಲಿಕೆ ಉಂಟಾ...? ನಾನು ಇಂದಿರಾಗಾಂಧಿಯ ಕಾಲದ ಮಾಜಿ ಸಚಿವ, ಸಾಲ ಮೇಳದ ಸರದಾರ ಪೂಜಾರಿ...’’
‘‘ಅಂಥವರು ಯಾರು ನಮಗೆ ನೆನಪಿಲ್ಲ...ನಿಮಗೆ ಏನು ಬೇಕು?’’
‘‘ನನಗೆ ಪ್ರೆಸ್ ಮೀಟ್ ಮಾಡ್ಲಿಕೆ ಉಂಟು...ಕಾಂಗ್ರೆಸ್ ಕಚೇರಿಯ ಹಾಲ್ ಬೇಕು...’’ ಹೊರಗಿನಿಂದ ಮನವಿ.
‘‘ಹಾಗೆಲ್ಲ ಸಿಕ್ಕಿದವರಿಗೆ ಎಲ್ಲ ಕೊಡ್ಲಿಕ್ಕೆ ಆಗುವುದಿಲ್ಲ...ಪ್ರೆಸ್ ಮಾಡುವುದು ಎಂತಕ್ಕೆ? ನೀವು ಎಮ್ಮೆಲ್ಲೆ ಕೂಡ ಅಲ್ಲ...ಗ್ರಾಮಪಂಚಾಯತ್ ಮೆಂಬರ್ ಕೂಡ ಅಲ್ಲ. ಹೀಗಿರುವಾಗ ಪ್ರೆಸ್ ಮೀಟ್ ಮಾಡುವ ಉದ್ದೇಶ ಏನು?’’
‘‘ಮೊದಲು ಬಾಗಿಲು ತೆಗಿ. ಹೇಳ್ತೇನೆ...’’ ಪೂಜಾರಿ ಜೋರಲ್ಲಿ ಹೇಳಿದರು.
‘‘ಇಲ್ಲ...ಪ್ರೆಸ್‌ಮೀಟ್‌ನ ವಿಷಯ ಏನು ಅಂತ ಹೇಳಬೇಕು...’’
‘‘ಕಾಂಗ್ರೆಸ್‌ಗೆ ಸ್ವಲ್ಪ ಬೈಯ್ಲಿಕೆ ಉಂಟು...’’ ಪೂಜಾರಿ ಹೇಳಿದರು.
‘‘ಕಾಂಗ್ರೆಸ್‌ಗೆ ಬೈಯ್ಲಿಕೆ ಇದ್ದರೆ ಬಿಜೆಪಿಯ ಕಚೇರಿಗೆ ಹೋಗಿ ಜಾಗ ಕೇಳಿ. ನಾವು ಕೊಡ್ಲಿಕ್ಕೆ ಆಗುವುದಿಲ್ಲ...’’
‘‘ಈಗೀಗ ಕಾಂಗ್ರೆಸ್‌ಗೆ ಬೈದರೆ ಮಾತ್ರ ಪತ್ರಕರ್ತರು ಹಾಕುವುದು. ಇಲ್ಲದಿದ್ದರೆ ಎಂತದೂ ಪ್ರಿಂಟ್ ಮಾಡುವುದಿಲ್ಲ...ಈಗ ನೀವು ಬಾಗಿಲು ತೆಗಿಯುತ್ತೀರ ಇಲ್ಲವಾ?’’
‘‘ತೆಗೀಲಿಕ್ಕೆ ಆಗುವುದಿಲ್ಲ...’’
ಸ್ವಲ್ಪ ಹೊತ್ತು ಬಾಗಿಲು ತಟ್ಟಿದವರು, ಸಾಕಾಗಿ ಅಲ್ಲಿಂದ ನೇರವಾಗಿ ಪತ್ರಕರ್ತರ ಸಂಘಕ್ಕೆ ಹೋದರು.
‘‘ನಾನು ಪೂಜಾರಿ...ಗೊತ್ತಾಯಿತಲ್ಲ...’’
ಪ್ರೆಸ್‌ಕ್ಲಬ್‌ನ ಹುಡುಗ ಭಯ ಭಕ್ತಿಯಿಂದ ಎದ್ದು ನಿಂತು ‘‘ಯಾವ ದೇವಸ್ಥಾನದ್ದು ಸಾರ್?’’
‘‘ನಾನು ಸಾಲಮೇಳದ ಪೂಜಾರಿ. ಜನಾರ್ದನ ಪೂಜಾರಿ. ನನಗೆ ಪ್ರೆಸ್‌ಮಾಡ್ಲಿಕ್ಕೆ ಉಂಟು...’’
‘‘ಅದಕ್ಕೆ ದುಡ್ಡು ಕಟ್ಟಬೇಕು...ಸಾರ್..’’ ಹುಡುಗ ಹೇಳಿದ.
‘‘ಎಂತಕ್ಕೆ ದುಡ್ಡು. ಹಿಂದೆ ನಾನು ಸಾಲಮೇಳ ಮಾಡಿ ಅದೆಷ್ಟು ದುಡ್ಡು ಹಂಚಿದ್ದೇನೆ ಗೊತ್ತುಂಟಾ..ದುಡ್ಡು ಬೇಕಂತೆ ದುಡ್ಡು... ಎಷ್ಟಾಗುತ್ತದೆ...’’
ಹುಡುಗ ಹೇಳಿದ.
‘‘ಕಂತಿನಲ್ಲಿ ಕೊಟ್ಟರೆ ಆಗುವುದಿಲ್ಲವಾ?’’ ಪೂಜಾರಿ ಮೆಲ್ಲ ದನಿಯಲ್ಲಿ ಕೇಳಿದರು.
‘‘ಇಲ್ಲ ಸಾರ್ ಒಟ್ಟಿಗೆ ಕೊಡಬೇಕು...’’
‘‘ಚೆಕ್ ಕೊಟ್ಟರೆ ಆಗುವುದಿಲ್ಲವಾ?’’
‘‘ಇಲ್ಲ ಸಾರ್...ಚೆಕ್ ಬೌನ್ಸ್ ಆದರೆ ಏನು ಮಾಡುವುದು. ನಿಮಗೀಗ ಎಡ್ರೆಸ್ಸೆ ಇಲ್ಲ...ಕಾಂಗ್ರೆಸ್ ಕಚೇರಿಗೆ ಹೋದರೆ ಯಾರು ಪೂಜಾರಿ ಅಂತ ಕೇಳ್ತಾರೆ?’’
‘‘ಪಡ್ಚ...ನೋಡಿ...ನೂರಾರು ವಿವಾದಗಳು ಉಂಟು. ನನಗೆ ಕಾಂಗ್ರೆಸ್‌ಗೆ ಬೈಯ್ಲಿಕೆ ಉಂಟು...ಜಗಲಿಯಲ್ಲಾದರೂ ಸಾಕು...ಸ್ವಲ್ಪ ಜಾಗ ಕೊಡಬಹುದಾ?’’
‘‘ಆಗುವುದಿಲ್ಲ ಸಾರ್...’’
ಜನಾರ್ದನ ಪೂಜಾರಿ ನೇರವಾಗಿ ಹತ್ತಿರದ ಬ್ಯಾಂಕಿಗೆ ಹೋದರು. ಅಲ್ಲಿ ಮೆನೇಜರ್ ನೋಡಿಯೂ ನೋಡದಂತೆ ಅದೇನೋ ಬರೆಯುತ್ತಿದ್ದರು
‘‘ನೋಡಿ...ನಾನು ಪೂಜಾರಿ...ಸಾಲ ಮೇಳದ ಪೂಜಾರಿ...’’
ಬ್ಯಾಂಕ್ ಮೆನೇಜರ್ ಬೆಚ್ಚಿ ಬಿದ್ದು ಎದ್ದು ನಿಂತ ‘‘ಸಾರ್...ಈಗ ಸಾಲಮೇಳದ ಕಾಲ ಅಲ್ಲ ಸಾರ್. ಈಗ ಜನಧನ್ ಯೋಜನೆಯ ಕಾಲ....’’
‘‘ಅಲ್ಲ ನನಗೆ ಅರ್ಜಂಟ್ ಸ್ವಲ್ಪ ಸಾಲ ಕೊಡಬಹುದಾ?’’
‘‘ಯಾವುದಕ್ಕೆ ಸಾರ್?’’
‘‘ಅದೇ ಪ್ರತಿ ದಿನ ಎರಡು ಸಾರಿ ಪ್ರೆಸ್‌ಮೀಟ್ ಕರೀಲಿಕ್ಕೆ ಉಂಟು...ಚಾ, ಉಪ್ಪಿಟ್ಟು, ಹಾಲ್ ಬಾಡಿಗೆ ಅಂತ ದುಡ್ಡಾಗುತ್ತದೆ. ಲೋನ್ ತೆಗೆದು ಪ್ರೆಸ್‌ಮೀಟ್ ಮಾಡುವುದು ಎಂದು ಯೋಚಿಸಿದ್ದೇನೆ....’’
‘‘ಸಾರ್, ಅದನ್ನು ಕಟ್ಟುವುದು ಹೇಗೆ?’’ ಬ್ಯಾಂಕ್ ಮೆನೇಜರ್ ಆತಂಕದಿಂದ ಕೇಳಿದ.
‘‘ಹೆ...ನೀವೆಂತ ತಿಳಿದಿದ್ದೀರಿ. ಈ ಪೂಜಾರಿ ಮೊದಲಿನ ಪೂಜಾರಿ ಅಲ್ಲ. ಮುಂದಿನ ಸರತಿ ಎಂಪಿ ಓಟಿಗೆ ನಿಂತು ಗೆದ್ದರೆ, ಎಂಪಿ ಫಂಡಿನಿಂದ ನಿಮ್ಮ ಸಾಲ ತೀರಿಸುತ್ತೇನೆ...ದೇಶಕ್ಕೇ ಸಾಲ ಕೊಟ್ಟ ಪೂಜಾರಿಗೆ, ಪ್ರೆಸ್ ಮೀಟ್ ಮಾಡಲು ಸಾಲ ಕೊಟ್ಟ ಖ್ಯಾತಿ ನಿಮ್ಮ ಬ್ಯಾಂಕಿನದ್ದಾಗುತ್ತದೆ...’’
‘‘ಅಲ್ಲ ಸಾರ್...ಹೀಗೆ ಕಾಂಗ್ರೆಸ್‌ಗೆ ಬೈಯ್ಕೆಂಡು ತಿರುಗಾಡಿದರೆ ನಿಮಗೆ ಕಾಂಗ್ರೆಸ್‌ನಿಂದ ಟಿಕೆಟ್ ಸಿಗುತ್ತದಾ ಸಾರ್? ಟಿಕೆಟ್ ಸಿಗದೇ ಗೆಲ್ಲುವುದು ಹೇಗೆ ಸಾರ್?’’ ಬ್ಯಾಂಕ್ ಮೆನೇಜರ್ ಕೇಳಿದ.
‘‘ಕಾಂಗ್ರೆಸ್‌ನಿಂದ ನಿಂತು ನಿಂತು ನನಗೆ ಕಾಲು ನೋವು ಶುರು ಆಗಿದೆ ಕಣ್ರೀ...ನಾನು ಹೀಗೆ ಕಾಂಗ್ರೆಸ್‌ಗೆ ಬೈಯ್ತೆ ತಿರುಗಾಡಿದರೆ ಕಲ್ಲಡ್ಕ ಭಟ್ಟರ ಕೃಪೆ ನನ್ನ ಮೇಲೆ ಬೀಳುವ ಎಲ್ಲ ಚಾನ್ಸ್ ಇದೆ. ಮುಂದಿನ ಚುನಾವಣೆಯಲ್ಲಿ ನನ್ನ ಹೈಕಮಾಂಡ್ ಅವರೇ ಗೊತ್ತುಂಟಾ?’’ ಪೂಜಾರಿ ಮೆಲ್ಲಗೆ ಮೆನೇಜರ್ ಕಿವಿಯಲ್ಲಿ ಪಿಸುಗುಟ್ಟಿದರು.
‘‘ಅಂದರೆ ಮುಂದಿನ ಎಂಪಿಗೆ ಬಿಜೆಪಿಯಿಂದ ಓಟಿಗೆ ನಿಲ್ಲುತ್ತೀರಾ?’’ ಮೆನೇಜರ್ ಬೆಚ್ಚಿ ಕೇಳಿದರು.
‘‘ಹೌದು. ಅದಕ್ಕೆಂದೇ ನಾನು ಖಾಕಿ ಪ್ಯಾಂಟ್ ಒಂದು ಹೊಲಿಸುವುದಕ್ಕೆ ಕೊಟ್ಟಿದ್ದೇನೆ....ಈ ಬಿಳಿ ಪ್ಯಾಂಟ್ ಹಾಕಿ ಹಾಕಿ ಸಾಕಾಯಿತು ನನಗೆ....ಕಳೆದ ಇಪ್ಪತ್ತೈದು ವರ್ಷದಿಂದ ಈ ಪ್ಯಾಂಟ್, ಅಂಗಿಯನ್ನು ಒಗೆಯದೇ ಹಾಕಿದ್ದೇನೆ. ಆದರೆ ಕಾಂಗ್ರೆಸ್ ನನಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನವನ್ನೂ ಕೊಡಲಿಲ್ಲ ಗೊತ್ತುಂಟಾ...?’’ ಪೂಜಾರಿ ದುಃಖ ತೋಡಿಕೊಂಡರು.
‘‘ಆದೇನೇ ಇದ್ದರೂ ನಿಮಗೆ ಲೋನ್ ಕೊಡಲಿಕ್ಕೆ ಆಗುವುದಿಲ್ಲ. ಕಾನೂನು ಪ್ರಕಾರ ಹಳೆ ಲೋನ್ ಬಾಕಿ ಇದ್ದವರಿಗೆ ಹೊಸ ಲೋನ್ ಕೊಡ್ಲಿಕ್ಕೆ ಆಗುವುದಿಲ್ಲ...’’ ಬ್ಯಾಂಕ್ ಮೆನೇಜರ್ ಖಡಕ್ಕಾಗಿ ಹೇಳಿದರು.
‘‘ಅದೆಂತದ್ರೀ ಹಳೇ ಲೋನು...? ಒಂದು ಪೈಸೆ ಯಾರಿಂದಲೂ ಸಾಲ ತೆಗೆದುಕೊಂಡವನಲ್ಲ ಈ ಪೂಜಾರಿ ಗೊತ್ತುಂಟಲ್ಲ...’’
‘‘ಅದೇ ಸಾರ್ ಇಂದಿರಾಗಾಂಧಿಯ ಕಾಲದಲ್ಲಿ ಸಾಲಮೇಳ ಮಾಡಿದ್ರಲ್ಲಾ?’’ ಮೆನೇಜರ್ ಹೇಳಿದರು.
‘‘ಹೌದು’’
‘‘ಆ ಸಾಲ ಮೇಳದಲ್ಲಿ ನಮ್ಮ ಬ್ಯಾಂಕ್‌ನಿಂದ ನೂರಾರು ಕೋಟಿ ರೂಪಾಯಿಗಳನ್ನು ನಾವು ನಿಮ್ಮ ಧೈರ್ಯದಿಂದ ಎಮ್ಮೆ, ದನ ಸಾಕುವುದಕ್ಕೆ ಸಾಲ ಕೊಟ್ಟಿದ್ದೇವೆ. ಅವರ್ಯಾರೂ ತಿರುಗಿ ಆ ಸಾಲ ವಾಪಸ್ ಮಾಡಿಲ್ಲ. ಬಡ್ಡಿ, ಚಕ್ರಬಡ್ಡಿ ಹಾಕಿ ಬರೆದಿಟ್ಟಿದ್ದೇವೆ. ಅದನ್ನು ನೀವು ಕಟ್ಟಿದರೆ ನಿಮಗೆ ಹೊಸ ಲೋನ್ ಕೊಡಬಹುದು’’
ಪೂಜಾರಿ ಬೆವರಿ, ಒಮ್ಮೆಲೆ ಎದ್ದು ನಿಂತರು ‘‘ಎಂತ ನೀವು ಹೇಳುವುದು? ಅದನ್ನು ನನ್ನತ್ರ ಯಾಕೆ ಕೇಳುವುದು...? ಬಜರಂಗದಳದವರು ಇದ್ದಾರಲ್ಲ...ಅವರಲ್ಲೇ ಕೇಳಿ...ಅಂದು ನನ್ನ ಯೋಜನೆಯಿಂದ ಸಾಲಪಡೆದು ಸಾಕಿದ ದನಗಳ ಹೆಸರಿನಲ್ಲಿ ದುಡ್ಡು ಬಾಚುತ್ತಿರುವುದು ಅವರೇ ಅಲ್ಲವಾ? ಒಟ್ಟಿನಲ್ಲಿ ಗೋವುಗಳನ್ನು ಸಾಕಲು ಸಾಲ ಕೊಟ್ಟದ್ದು ನಾನು. ಅದನ್ನು ಕಸಾಯಿ ಮಾಡಿ ತಿನ್ನುವುದಕ್ಕೆ ಗೋರಕ್ಷಕರು....’’ ಎಂದವರೇ ಅಲ್ಲಿಂದ ನೇರವಾಗಿ ಉರುಳು ಸೇವೆ ಮಾಡುವುದಕ್ಕೆ ಕುದ್ರೋಳಿ ದೇವಸ್ಥಾನದ ಕಡೆಗೆ ಓಡಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)