varthabharthi

ಪ್ರಚಲಿತ

ಟಿಪ್ಪು ಚರಿತ್ರೆಯ ಸತ್ಯ ಸಂಗತಿಗಳು

ವಾರ್ತಾ ಭಾರತಿ : 30 Oct, 2016
ಸನತ್ ಕುಮಾರ್ ಬೆಳಗಲಿ

ನಾವೆಲ್ಲ ಚಿಕ್ಕವರಿದ್ದಾಗ, ಶಾಲಾ ಪಠ್ಯಪುಸ್ತಕಗಳಲ್ಲಿ ಈ ನಾಡಿನ ಮಹಾಪುರುಷರ ಸಾಲಿನಲ್ಲಿ ಟಿಪ್ಪು ಸುಲ್ತಾನ್ ಹೆಸರು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಈಗಲೂ ಇರಬಹುದು. ಚಿದಾನಂದಮೂರ್ತಿಗಳು ಸೇರಿದಂತೆ ಇಂದಿನ ತಲೆಮಾರಿನ ಎಲ್ಲರೂ ಇದನ್ನು ಓದಿಯೇ ಬೆಳೆದವರು. ಆಗ ಇದನ್ನು ವಿರೋಧಿಸದವರು ಈಗ ಟಿಪ್ಪುಆಚರಣೆ ವಿರೋಧಿಸುತ್ತಿದ್ದಾರೆ. ಇದರಲ್ಲಿ ಚರಿತ್ರೆಯ ಸತ್ಯಗಳ ಮೇಲೆ ಬೆಳಕು ಚೆಲ್ಲುವ ಪ್ರಾಮಾಣಿಕತೆಗಿಂತ ಚರಿತ್ರೆಯ ಗೋರಿಯನ್ನು ಅಗೆದು, ಪ್ರಸಕ್ತ ರಾಜಕಾರಣದಲ್ಲಿ ಲಾಭ ಮಾಡಿಕೊಳ್ಳುವ ಹುನ್ನಾರವಲ್ಲದೇ ಮತ್ತೇನೂ ಇಲ್ಲ. ಅಂತೆಯೇ ಅಯೋಧ್ಯೆಯ ಬಾಬರಿ ಮಸೀದಿ, ರಾಮ ಮಂದಿರದಂತೆ, ಬಾಬಾ ಬುಡಾನಗಿರಿಯಂತೆ ಟಿಪ್ಪುಕೂಡ ಈಗ ವಿವಾದದ ಕೇಂದ್ರಬಿಂದು ಆಗಿದ್ದಾನೆ. ಭೂತಕಾಲದ ಸಂಗತಿಗಳನ್ನು ಎತ್ತಿಕೊಂಡು ವರ್ತಮಾನ ಕಾಲದಲ್ಲಿ ವೋಟು ಬ್ಯಾಂಕ್ ನಿರ್ಮಿಸಿಕೊಂಡು ರಾಜಕೀಯ ಲಾಭ ಮಾಡಿಕೊಳ್ಳಲು ಸಂಘ ಪರಿವಾರ ಈ ಕಾರ್ಯತಂತ್ರ ರೂಪಿಸಿದೆ. 90ರ ದಶಕದವರೆಗೆ ಈ ಯಾವ ವಿವಾದಗಳು ಇರಲಿಲ್ಲ. ಆಗಿನ ಜನಸಂಘಕ್ಕೆ (ಈಗಿನ ಬಿಜೆಪಿ) ಕಾಂಗ್ರೆಸ್ ವಿರೋಧಿ ರಾಜಕಾರಣವೊಂದೇ ಕಾರ್ಯಕ್ರಮವಾಗಿತ್ತು. ಆದರೆ, ದೇಶದಲ್ಲಿ ಜಾಗತೀಕರಣದ ಶಕೆ ಆರಂಭ ಆಗುತ್ತಿದ್ದಂತೆಯೇ, ಜನರನ್ನು ವಿಭಜಿಸಲು ಇಂತಹ ಹುನ್ನಾರಗಳು ಆರಂಭವಾದವು. ಇದರಿಂದ ಬಿಜೆಪಿಗೆ ರಾಜಕೀಯ ಲಾಭವೂ ದೊರಕಿತು. ಅಧಿಕಾರಕ್ಕೆ ಬರುವಾಗ, ಇಂತಹ ವಿವಾದಗಳನ್ನು ಬಳಸಿಕೊಂಡು ಲಾಭ ಮಾಡಿಕೊಳ್ಳುವ ಈ ಪಕ್ಷ ಅಧಿಕಾರ ಉಳಿಸಿಕೊಳ್ಳಲು ಕೂಡ ಚರಿತ್ರೆಯ ಗೋರಿಗಳನ್ನು ಕೆದಕುತ್ತದೆ.
ಟಿಪ್ಪು ಸುಲ್ತಾನ್ ಬಗ್ಗೆ ಇತ್ತೀಚೆಗೆ ವಿವಾದ ಆರಂಭವಾಗುತ್ತಿದ್ದಂತೆ, ಮಾಹಿತಿ ಸಂಗ್ರಹಿಸಲು ಹಲವಾರು ಪುಸ್ತಕಗಳನ್ನು, ಪುಟಗಳನ್ನು ನಾನು ತಿರುವಿ ಹಾಕಿದೆ. ಪ್ರೊ. ಶೇಖ್ ಅಲಿ ಅವರು ಬರೆದ ಪುಸ್ತಕ, ಹಯವದನರಾಯರು ಬರೆದ ಪುಸ್ತಕ, ಮೇಕಿಂಗ್ ಹಿಸ್ಟರಿಯಲ್ಲಿ ಸಾಕೇತ್ ರಾಜನ್ ನೀಡಿರುವ ವಿವರಗಳು ಅಷ್ಟೇ ಅಲ್ಲ, ಈ ನಾಡಿನ ಹಿರಿಯ ಪತ್ರಕರ್ತ ಮತ್ತು ಸ್ವಾತಂತ್ರ್ಯ ಹೋರಾಟಗಾರ ತಿರುಮಲ ತಾತಾಚಾರ್ಯ ಅವರು ಬರೆದ ಪುಸ್ತಕವನ್ನು ತಿರುವಿ ಹಾಕಿದೆ. ಇವುಗಳನ್ನೆಲ್ಲ ಓದಿದಾಗ, ಟಿಪ್ಪು ಸುಲ್ತಾನ್ ಬಗ್ಗೆ ನನ್ನಲ್ಲಿ ಗೌರವ ಹೆಚ್ಚಾಯಿತು. ದೇಶದ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ ಟಿಪ್ಪು ಸುಲ್ತಾನ್ 40 ಸಾವಿರ ಚದರ ಮೈಲಿಯಿದ್ದ ಮೈಸೂರು ಸಾಮ್ರಾಜ್ಯವನ್ನು 80 ಸಾವಿರ ಚದರ ಮೈಲಿಗೆ ವಿಸ್ತರಿಸಿದ. ಈಗಿನ ಕನ್ನಂಬಾಡಿ ಆಣೆಕಟ್ಟಿನ ನೀಲನಕ್ಷೆಯನ್ನು ಸಿದ್ಧಪಡಿಸಿದ್ದು ಟಿಪ್ಪು ಸುಲ್ತಾನ್. ಈ ನಾಡಿಗೆ ರೇಷ್ಮೆಯನ್ನು ತಂದು ಲಕ್ಷಾಂತರ ರೈತರ ಬದುಕಿಗೆ ಬೆಳಕು ನೀಡಿದವನು ಟಿಪ್ಪು ಸುಲ್ತಾನ್. ಮಸೀದಿ ಮುಂದೆ ದೇವಸ್ಥಾನ ನಿರ್ಮಿಸಿ, ದೇವಸ್ಥಾನದ ಮುಂದೆ ಮಸೀದಿ ನಿರ್ಮಿಸಿ ಕೋಮು ಸೌಹಾರ್ದಕ್ಕೆ ಉತ್ತಮ ಉದಾಹರಣೆಯಾಗಿ ನಿಂತವನು ಟಿಪ್ಪು ಸುಲ್ತಾನ್. ಮರಾಠರು ಹಿಂದೂಗಳ ಪವಿತ್ರ ಸ್ಥಳವಾದ ಶೃಂಗೇರಿ ಶಾರದಾಪೀಠವನ್ನು ಧ್ವಂಸಗೊಳಿಸಿ, ಅದನ್ನು ಲೂಟಿ ಮಾಡಿಕೊಂಡು ಹೋದಾಗ, ಅದಕ್ಕಾಗಿ ಶೃಂಗೇರಿ ಸ್ವಾಮಿಗಳ ಕ್ಷಮೆ ಕೇಳಿ ಲೂಟಿ ಮಾಡಿಕೊಂಡ ಆಭರಣಗಳನ್ನು ಮತ್ತೆ ಮಾಡಿಸಿಕೊಟ್ಟು ಮಠವನ್ನು ಜೀರ್ಣೋದ್ಧಾರ ಮಾಡಿದ್ದು ಟಿಪ್ಪು ಸುಲ್ತಾನ್. ಈಗ ಟಿಪ್ಪು ಬಗ್ಗೆ ಟೀಕೆ ಮಾಡುವವರು ಶೃಂಗೇರಿ ಮೇಲೆ ಮರಾಠರು ನಡೆಸಿದ ದಾಳಿ ಬಗ್ಗೆ ಮಾತನಾಡುವುದಿಲ್ಲ.

ವಿಶ್ವದಲ್ಲಿ ಮೊಟ್ಟಮೊದಲ ಕ್ಷಿಪಣಿ ತಯಾರು ಮಾಡಿದ ಟಿಪ್ಪುಸುಲ್ತಾನ್ ಯುದ್ಧದಲ್ಲಿ ಶತ್ರುದೇಶಗಳ ಮಹಿಳೆಯರ ಮೇಲೆ ದೌರ್ಜನ್ಯ ಮಾಡಿದ ಕಾರಣಕ್ಕಾಗಿ ತನ್ನದೇ ತಂದೆಯ ಸೇನಾ ದಳದ ಮುಖ್ಯಸ್ಥ ಮಖ್ಬುಲ್ ಅಹ್ಮದ್‌ನನ್ನು ಶಿಕ್ಷೆಗೆ ಗುರಿಪಡಿಸಿದ. ಬ್ರಿಟಿಷರ ವಿರುದ್ಧ ನಡೆದ ಯುದ್ಧದಲ್ಲಿ ಪರಾಭವಗೊಂಡಾಗ, ತನ್ನ ಒಡಲ ಕುಡಿಗಳನ್ನೇ ಟಿಪ್ಪು ಬ್ರಿಟಿಷರಿಗೆ ಅಡವಿಟ್ಟ. ಬೆಂಗಳೂರಿನಲ್ಲಿ ಲಾಲ್‌ಬಾಗ್ ಸ್ಥಾಪಿಸಿದ ಟಿಪ್ಪು,ನಂಜನಗೂಡಿನಲ್ಲಿ ನಂಜುಂಡೇಶ್ವರ ದೇವಸ್ಥಾನದಲ್ಲಿ ಪಚ್ಚಲಿಂಗ ಸ್ಥಾಪನೆ ಮಾಡಿದ. ಹೀಗೆ ಹಿಂದೂ ದೇವಾಲಯಗಳಿಗೆ ನೆರವು ನೀಡಿದ ನೂರಾರು ಉದಾಹರಣೆಗಳನ್ನು ಕೊಡಬಹುದು. ಜಮೀನ್ದಾರಿ ಮತ್ತು ಜಹಗೀರದಾರಿ ಪದ್ಧತಿಗಳನ್ನು ನಾಶಪಡಿಸುವುದಕ್ಕೆ ಟಿಪ್ಪು ಸುಲ್ತಾನ್ ವಿಶೇಷ ಆದ್ಯತೆ ನೀಡಿದ. ಯಾರು ಭೂಮಿಯನ್ನು ಉಳುತ್ತಾರೋ, ಅವರು ಯಾವ ಜಾತಿಯವರು ಆಗಿದ್ದರೂ ಅವರಿಗೆ ಭೂಮಿಯ ಒಡೆತನ ನೀಡಬೇಕೆಂದು ಟಿಪ್ಪು ಘೋಷಣೆ ಮಾಡಿದ. ಚರಿತ್ರೆಯಲ್ಲಿ ಮೊಟ್ಟಮೊದಲ ಬಾರಿಗೆ ದಲಿತರು, ಭೂಮಿಯ ಒಡೆತನ ಪಡೆದಿದ್ದು ಟಿಪ್ಪುಸುಲ್ತಾನ್ ಕಾಲದಲ್ಲಿ. ದೇವಸ್ಥಾನ ಮತ್ತು ಮಠಗಳ ವಶದಲ್ಲಿದ್ದ ನೂರಾರು ಎಕರೆ ಭೂಮಿಯನ್ನು ಅಲ್ಲಿ ಉಳುಮೆ ಮಾಡುವ ಶೂದ್ರರಿಗೆ ಹಂಚಿದ್ದು ಟಿಪ್ಪು ಸುಲ್ತಾನ್.
ಕನ್ನಡ ಭಾಷಿಕ ಪ್ರದೇಶಗಳನ್ನು ಮೊದಲ ಬಾರಿಗೆ ಒಂದುಗೂಡಿಸಿದ ಶ್ರೇಯಸ್ಸು ಟಿಪ್ಪು ಸುಲ್ತಾನ್‌ಗೆ ಸಲ್ಲುತ್ತದೆ. ಆಗ ಕಲಬುರ್ಗಿ, ಬೀದರ್ ಸೇರಿದಂತೆ ಕೆಲ ಭಾಗಗಳು ಹೊರತುಪಡಿಸಿ ಇಡೀ ಕನ್ನಡ ಭಾಷಿಕ ಪ್ರದೇಶದಲ್ಲಿ ಒಂದೇ ರಾಜ್ಯದಲ್ಲಿ ವಿಲೀನಗೊಂಡಿದ್ದವು. ನಲವತ್ತು ವರ್ಷ ಮಾತ್ರ ಬಾಳಿ ಮರಣ ಹೊಂದಿದ ಟಿಪ್ಪು ನಂತರ ಮತ್ತೆ ಕರ್ನಾಟಕ ಒಡೆದು ಚೂರುಚೂರಾಯಿತು.
ಭೂಸುಧಾರಣೆ ಜೊತೆಗೆ ಉಳುವ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಟಿಪ್ಪು ಸಾಕಷ್ಟ್ಟು ಶ್ರಮಿಸಿದ. ಹಳೆಯ ಮೈಸೂರಿನ ಕೋಲಾರ-ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಹಾಸನ ಮುಂತಾದ ಕಡೆ ನಾವು ಕಾಣುವ ಕೆರೆಕಟ್ಟೆಗಳು ನಿರ್ಮಾಣಗೊಂಡಿದ್ದು ಟಿಪ್ಪು ಕಾಲದಲ್ಲಿ.


ಹೈದರ್ ಅಲಿ ಮತ್ತು ಟಿಪ್ಪು ಆಳಿದ್ದು 1761 ರಿಂದ 1799ರ ತನಕ. ಈ 38 ವರ್ಷಗಳಲ್ಲಿ ಅವರು ಯುದ್ಧ ಮಾಡದ ಒಂದೇ ಒಂದು ವರ್ಷವೂ ಇಲ್ಲ. ಅವರು ಸಿಂಹಾಸನದಲ್ಲಿ ಕುಳಿತು ಆಡಳಿತ ನಡೆಸಿದ್ದಕ್ಕಿಂತ ಹೆಚ್ಚಾಗಿ ಕುದುರೆ ಮೇಲೆ ಕೂತು ಯುದ್ಧ ಮಾಡಿದ್ದೇ ಹೆಚ್ಚು. ಹೀಗಾಗಿ ಟಿಪ್ಪು ಕೈಗೊಂಡ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಜಾರಿಗೆ ತರಲು ಸಾಧ್ಯವಾಗಲಿಲ್ಲ. ಟಿಪ್ಪು ಬಲವಂತದ ಮತಾಂತರ ಮಾಡುತ್ತಿದ್ದ ಎಂಬ ಆರೋಪವನ್ನು ಕೋಮುವಾದಿಗಳು ಮಾಡುತ್ತಾರೆ. ಇದು ನಿಜವೇ ಆಗಿದ್ದರೆ, ಶ್ರೀರಂಗಪಟ್ಟಣ ಸೇರಿದಂತೆ ಮೈಸೂರು ಪ್ರಾಂತ್ಯದಲ್ಲಿ ಈಗ ಹಿಂದೂಗಳಿಗಿಂತ ಮುಸಲ್ಮಾನರ ಸಂಖ್ಯೆಯೇ ಹೆಚ್ಚಾಗಿರುತ್ತಿತ್ತು. ಮತಾಂತರ ನಡೆದೇ ಇಲ್ಲವೆಂದಲ್ಲ. ಹಿಂದೂ ಧರ್ಮದಲ್ಲಿನ ಉಸಿರುಗಟ್ಟಿಸುವ ವಾತಾವರಣದಿಂದ ರೋಸಿ ಹೋದ ದಲಿತರು ಮತಾಂತರ ಗೊಂಡಿರಬಹುದು. ಈ ದೇಶದಲ್ಲಿ ಮತಾಂತರ ಬಲವಂತವಾಗಿ ನಡೆದಿಲ್ಲ. ಜಾತಿ ವ್ಯವಸ್ಥೆಯ ಕ್ರೌರ್ಯದಿಂದ ಪಾರಾಗಲು ಅಸ್ಪಶ್ಯರು ಮತಾಂತರ ಮಾಡಿದ್ದಾರೆಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಟಿಪ್ಪುತನ್ನ ರಾಜ್ಯದಲ್ಲಿ ಸಂಪೂರ್ಣ ಪಾನ ನಿಷೇಧವನ್ನು ಜಾರಿ ಮಾಡಿದ್ದ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಬರುವ ತೆರಿಗೆ ಪ್ರಮಾಣ ಕಡಿಮೆಯಾಗುತ್ತದೆಯೆಂದು ಟಿಪ್ಪುಆಸ್ಥಾನದ ಮಂತ್ರಿಗಳು ಹೇಳಿದಾಗ, ತೆರಿಗೆ ಸಂಗ್ರಹಣೆಗಿಂತ ರಾಜ್ಯದ ಪ್ರಜೆಗಳ ಆರೋಗ್ಯ ಮುಖ್ಯ ಎಂದು ಟಿಪ್ಪುಆ ಮಂತ್ರಿಗಳ ಬಾಯಿ ಮುಚ್ಚಿಸಿದ್ದ.
ಟಿಪ್ಪುಬಗ್ಗೆ ಸಂಶೋಧನೆ ಮಾಡಿ, ಪುಸ್ತಕ ಬರೆಯಲು ಹೊರಟ ಭಗವಾನ್ ಗಿಡ್ವಾಣಿ ಎಂಬ ಹಿಂದೂ ಮಹಾಸಭಾ ನಾಯಕ ಅದಕ್ಕಾಗಿ ಲಂಡನ್ನಿನ ಪ್ರಾಚ್ಯವಸ್ತು ಇಲಾಖೆಯ ಸಂಗ್ರಹಗಳನ್ನು ಮತ್ತು ದಾಖಲೆಗಳನ್ನು ಹುಡಕಿದ. ಎಲ್ಲ ತಡಕಾಡಿದ ನಂತರ ಖಳನಾಯಕನನ್ನ್ನಾಗಿ ಟಿಪ್ಪುನನ್ನು ಚಿತ್ರಿಸಲು ಹೋದ ಗಿಡ್ವಾಣಿ ನಂತರ ಟಿಪ್ಪು ಬಗ್ಗೆ ತುಂಬಾ ಗೌರವ ಭಾವನೆ ವ್ಯಕ್ತಪಡಿಸಿ, ಟಿಪ್ಪು ಖಡ್ಗ ಎಂಬ ಪುಸ್ತಕ ಬರೆದ. ಜಗತ್ತಿನಲ್ಲಿ ಶತ್ರುವಿನೊಂದಿಗೆ ರಾಜಿ ಮಾಡಿಕೊಳ್ಳದೇ ರಣರಂಗದಲ್ಲಿ ಶತ್ರುಸೈನಿಕರ ವಿರುದ್ಧ ಸೆಣೆಸುತ್ತಲೇ ವೀರಮರಣವನ್ನಪ್ಪಿದ ಟಿಪ್ಪುವಿನಂತಹ ರಾಜ ಇನ್ನೊಬ್ಬನಿಲ್ಲ ಎಂದು ಹೇಳಿದ್ದಾರೆ.
ಎಲ್ಲಕ್ಕಿಂತ ಮುಖ್ಯವಾಗಿ,ಟಿಪ್ಪುಸುಲ್ತಾನರ ಚರಿತ್ರೆಯನ್ನು ಸತ್ಯಕ್ಕೆ ಲೋಪವಾಗದಂತೆ ಕಟ್ಟಿಕೊಟ್ಟವರು ತಿತಾ ಶರ್ಮಾ. ಈ ನಾಡಿಗೆ ಟಿಪ್ಪು ಸುಲ್ತಾನ್ ನೀಡಿದ ಕೊಡುಗೆಯನ್ನು ಸಾಕ್ಷ್ಯಾಧಾರಗಳೊಂದಿಗೆ ಅವರು ದಾಖಲಿಸಿದ್ದಾರೆ. ಟಿಪ್ಪು ಅತ್ಯಂತ ಹೆಚ್ಚು ನಂಬಿದ್ದು ತನ್ನ ಆಸ್ಥಾನದಲ್ಲಿ ಮುಖ್ಯಮಂತ್ರಿಯಾಗಿದ್ದ ಪೂರ್ಣಯ್ಯನನ್ನು. ಇದೇ ಪೂರ್ಣಯ್ಯ ಮತ್ತು ಮೀರ್ ಸಾಧಿಕ ಸೇರಿ ಟಿಪ್ಪುವಿಗೆ ದ್ರೋಹ ಮಾಡಿ, ಬ್ರಿಟಿಷರೊಂದಿಗೆ ಶಾಮೀಲಾದರು.ಅದಕ್ಕಾಗಿ ಪಡೆದ ಕಾಣಿಕೆ ಮತ್ತು ಭಕ್ಷೀಸುಗಳಿಂದ ಈ ದ್ರೋಹಿಗಳ ಕುಟುಂಬಗಳು ಇಂದು ಸಾಕಷ್ಟು ಸಂಪತ್ತನ್ನು ಹೊಂದಿ ಸುಖವಾಗಿದ್ದರೆ, ಬ್ರಿಟಿಷರೊಂದಿಗೆ ರಾಜಿ ಮಾಡಿಕೊಳ್ಳದೇ ಎಲ್ಲವನ್ನೂ ಕಳೆದುಕೊಂಡ ಟಿಪ್ಪು ಸುಲ್ತಾನ್ ವಂಶಸ್ಥರು ಕೋಲ್ಕತ್ತದಲ್ಲಿ ಹಮಾಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ.
ಟಿಪ್ಪು ಚರಿತ್ರೆಯ ಈ ಸತ್ಯಗಳು ಅದನ್ನು ವಿರೋಧಿಸುವವರಿಗೂ ಗೊತ್ತಿದೆ. ಆದರೆ ಭಾರತವನ್ನು ಮನುವಾದಿ ಹಿಂದೂ ರಾಷ್ಟ್ರ ಮಾಡಲು ಹೊರಟವರಿಗೆ ಇಂತಹ ಚಾರಿತ್ರ್ಯವಧೆ ಅನಿವಾರ್ಯವಾಗಿದೆ. ಟಿಪ್ಪುಅಷ್ಟೇ ಅಲ್ಲ, ಸಾಮ್ರಾಟ್ ಅಶೋಕನ ಚಾರಿತ್ರ್ಯವಧೆಗೂ ಇವರು ಮುಂದಾಗಿದ್ದಾರೆ. ಸಾಮ್ರಾಟ್ ಅಶೋಕನ ಕಾಲದಲ್ಲಿ ಭಾರತ ಅವನತಿ ಹೊಂದಿತ್ತೆಂದು ಜಾಗೋ ಭಾರತ ನಾಯಕರು ಹೇಳುತ್ತಿದ್ದಾರೆ. ಟಿಪ್ಪು ಮಾತ್ರವಲ್ಲದೇ ಈಗಾಗಲೇ ಮಹಾತ್ಮಾ ಗಾಂಧಿ, ಜವಾಹರಲಾಲ್ ನೆಹರೂ ಅವರಂತಹವರ ತೇಜೋವಧೆಗೂ ಇವರು ಯತ್ನಿಸಿದ್ದಾರೆ. ಡಾ. ಅಂಬೇಡ್ಕರ್ ವಿರುದ್ಧ ಅರುಣ್ ಶೌರಿಯಿಂದ ಪುಸ್ತಕ ಬರೆಸಿ, ಮುಖಕ್ಕೆ ಇಕ್ಕಿಸಿಕೊಂಡಿದ್ದಾರೆ. ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಬಾಬಾ ಸಾಹೇಬರು ಬರೆದಿರುವ ಸಂವಿಧಾನ ಪ್ರಮುಖ ಅಡ್ಡಿಯಾಗಿದೆ. ಅದನ್ನು ನಾಶಪಡಿಸಲು ಈ ಶಕ್ತಿಗಳು ಸಂಚು ರೂಪಿಸಿವೆ.
 ಇದು ಇಲ್ಲಿಗೆ ಮುಗಿಯುವ ಸಂಘರ್ಷವಲ್ಲ. ಭಾರತದಲ್ಲಿ ಫ್ಯಾಶಿಸಂ ಪ್ರವೇಶವಾಗಿದೆ. ಪುಸ್ತಕ ಓದುವ ಆಸಕ್ತಿಯನ್ನೇ ಕಳೆದುಕೊಂಡ ನಮ್ಮ ಅನೇಕ ಯುವಕರು ಚರಿತ್ರೆಯ ಸತ್ಯವನ್ನು ತಿಳಿದುಕೊಳ್ಳದೇ ಹೆಂಡ ಕುಡಿದವರಂತೆ ಹಾರಾಡುತ್ತಿದ್ದಾರೆ. ಇಂದಲ್ಲ, ನಾಳೆ ಈ ದೇಶದ ಪ್ರಜಾಪ್ರಭುತ್ವಕ್ಕೆ ಹಿಂದೆಂದೂ ಕಂಡರಿಯದ ಗಂಡಾಂತರ ಬರಲಿದೆ. ಅಂತಲೇ ಫ್ಯಾಶಿಸ್ಟ್ ವಿರೋಧ ಶಕ್ತಿಗಳು ನಮ್ಮ ಆದ್ಯತೆ ಆಗಬೇಕಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)