varthabharthi

ಪ್ರಚಲಿತ

ದ್ರಾವಿಡ ಚಳವಳಿಯ ದುರಂತ ಕತೆ

ವಾರ್ತಾ ಭಾರತಿ : 12 Dec, 2016

ಒಂದು ಕಾಲದಲ್ಲಿ ಮೂಢನಂಬಿಕೆ, ಕಂದಾಚಾರಗಳ ವಿರುದ್ಧ ವೈಚಾರಿಕ ಆಂದೋಲನವಾಗಿ ಆರಂಭಗೊಂಡ ತಮಿಳುನಾಡಿನ ದ್ರಾವಿಡ ಚಳವಳಿ ಈಗ ಅದು ತಲುಪಿದ ಸ್ಥಿತಿಯನ್ನು ಕಂಡರೆ, ಅದರ ವಿರೋಧಿಗಳು ಕನಿಕರ ಪಡುವಂತಾಗುತ್ತದೆ. ಕಳೆದ ಶತಮಾನದ 40ರ ದಶಕದಲ್ಲಿ ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಅವರು ಹುಟ್ಟು ಹಾಕಿದ ದ್ರಾವಿಡ ಕಳಗಂ ಆರಂಭದಲ್ಲಿ ಪುರೋಹಿತಶಾಹಿಯ ವಿರುದ್ಧ ಸಾಮಾಜಿಕ ಆಂದೋಲನವಾಗಿ ಹೊರಹೊಮ್ಮಿತು. ಮುಂದೆ ಪೆರಿಯಾರ್ ಶಿಷ್ಯರಲ್ಲೇ ಭಿನ್ನಾಭಿಪ್ರಾಯ ಉಂಟಾಗಿ ದ್ರಾವಿಡ ಮುನೇತ್ರ ಕಳಗಂ (ಡಿಎಂಕೆ), ನಂತರ ಅಣ್ಣಾ ದ್ರಾವಿಡ ಮುನೇತ್ರ ಕಳಗಂ (ಎಡಿಎಂಕೆ) ಎಂಬ ಎರಡು ಪ್ರಮುಖ ರಾಜಕೀಯ ಪಕ್ಷಗಳು ರೂಪುಗೊಂಡವು. ಈಗಂತೂ ದ್ರಾವಿಡ ಹೆಸರು ಇಟ್ಟುಕೊಂಡು ಸಣ್ಣಪುಟ್ಟ ಪಕ್ಷಗಳು ಅಲ್ಲಿ ಹುಟ್ಟಿಕೊಂಡಿವೆ.

ತಾತ್ವಿಕ ಕಾರಣಕ್ಕಾಗಿ ಪೆರಿಯಾರ್ ಜೊತೆಗೆ ಭಿನ್ನಾಬಿಪ್ರಾಯ ತಾಳಿದ ಅವರ ಶಿಷ್ಯ ಅಣ್ಣಾ ದೊರೈ ಡಿಎಂಕೆ ಎಂಬ ಹೊಸ ಪಕ್ಷ ಹುಟ್ಟುಹಾಕಿದರು. ಈ ಡಿಎಂಕೆ ಈಗ ಕರುಣಾನಿಧಿ ಕುಟುಂಬದ ಸ್ವತ್ತಾಗಿದೆ. ಅಣ್ಣಾ ಸಾವಿನ ನಂತರ ಕರುಣಾನಿಧಿ ಜೊತೆ ಭಿನ್ನಾಭಿಪ್ರಾಯ ತಾಳಿ, ಚಿತ್ರನಟ ಎಂ.ಜಿ.ರಾಮಚಂದ್ರನ್ ಕಟ್ಟಿದ ಅಣ್ಣಾ ಡಿಎಂಕೆ ಜಯಲಲಿತಾ ಅವರ ಖಾಸಗಿ ಆಸ್ತಿಯಾಗಿ ಆಕೆಯ ಸಾವಿನ ನಂತರ ಆಪ್ತ ಗೆಳತಿ ಶಶಿಕಲಾ ಅನಧಿಕೃತ ವಾರಸುದಾರರಾಗಿ ಹೊರಹೊಮ್ಮಿದ್ದಾರೆ. ಬ್ರಿಟಿಷ್ ಸಾಮ್ರಾಜ್ಯಶಾಹಿ ಕಾಲದಲ್ಲಿ ತಮಿಳುನಾಡಿನಲ್ಲಿ ವಿಜೃಂಭಿಸುತ್ತಿದ್ದ ಬ್ರಾಹ್ಮಣ ಪುರೋಹಿತಶಾಹಿ ವಿರುದ್ಧ ಬಂಡೆದ್ದ ಪೆರಿಯಾರ್ ಸೋವಿಯತ್ ಸಮಾಜವಾದಿ ಕ್ರಾಂತಿಯಿಂದ ಪ್ರಭಾವಿತರಾಗಿದ್ದರು. ಆದರೆ ಭಾರತದಲ್ಲಿ ಬ್ರಾಹ್ಮಣ್ಯವನ್ನು ಸದೆ ಬಡಿಯದೇ, ಕಂದಾಚಾರ ತೊಲಗಿಸದೇ ಸಮಾನತೆ ಸಮಾಜ ಕಟ್ಟುವುದು ಸಾಧ್ಯವಿಲ್ಲ ಎಂದು ನಂಬಿದ್ದರು.

ಜಾತಿ ಪದ್ಧತಿ ನಾಶವಾದಾಗ ಮಾತ್ರ ವರ್ಗರಹಿತ ಸಮಾಜ ಇಲ್ಲಿ ಸ್ಥಾಪನೆಯಾಗುವುದೆಂದು ಪ್ರತಿಪಾದಿಸುತ್ತಿದ್ದರು. ಅದರೊಂದಿಗೆ ದ್ರಾವಿಡ ಪ್ರಜ್ಞೆಯನ್ನು ಜಾಗೃತಗೊಳಿಸಿ ಉತ್ತರ ಭಾರತದ ಹಿಂದಿ ಸಾಮ್ರಾಜ್ಯಶಾಹಿಯ ವಿರುದ್ಧ ಅವರು ಸಮರ ಸಾರಿದ್ದರು. ಕಳೆದ ಶತಮಾನದ 50ರ ದಶಕದಲ್ಲಿ ಪೆರಿಯಾರ್ ಆರಂಭಿಸಿದ ಸ್ವಾಭಿಮಾನಿ ಚಳವಳಿ ಬ್ರಾಹ್ಮಣೇತರ ಶೂದ್ರ ಸಮುದಾಯದಲ್ಲಿ ಹೋರಾಟದ ಛಲವನ್ನು ಮೂಡಿಸಿತು. ಕರ್ನಾಟಕದ ಚಿತ್ರದುರ್ಗ ಮೂಲದ ಪೆರಿಯಾರ್ ರಾಮಸ್ವಾಮಿ ನಾಯ್ಕರ್ ತಮಿಳುನಾಡಿನ ದಮನಿತ ಸಮುದಾಯದ ಪಾಲಿಗೆ ಆರಾಧ್ಯದೈವರಾದರು. ಎರಡು ಶತಮಾನಗಳ ಹಿಂದೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಿಂದ ತಮಿಳುನಾಡಿನ ಸೇಲಂ ಬಳಿಯ ಈರೋಡ್‌ಗೆ ವಲಸೆ ಹೋಗಿದ್ದ ಕನ್ನಡ ಕುಟುಂಬದಲ್ಲಿ ಜನಿಸಿದ ರಾಮಸ್ವಾಮಿ ನಾಯ್ಕರ್ ಪುರೋಹಿತಶಾಹಿ ವಿರುದ್ಧ ನಾನಾ ಸ್ವರೂಪದ ಚಳವಳಿಗಳನ್ನು ಹಮ್ಮಿಕೊಂಡಿದ್ದರು. 60ರ ದಶಕದಲ್ಲಿ ದೇವತೆಯ ಮೂರ್ತಿಗಳಿಗೆ ಚಪ್ಪಲಿಯಿಂದ ಹೊಡೆಯುವ ಚಳವಳಿ, ಬ್ರಾಹ್ಮಣರ ಜನಿವಾರ ಚಳವಳಿ, ಹಿಂದಿ ವಿರೋಧಿ ಚಳವಳಿ ಹೀಗೆ ನಾನಾ ರೀತಿಯ ಆಂದೋಲನಗಳನ್ನು ಹಮ್ಮಿಕೊಂಡಿದ್ದ ಪೆರಿಯಾರ್ ಅವರನ್ನು ಡಾ. ಅಂಬೇಡ್ಕರ್ ಅವರು ಕೂಡ ಬಂದು ಭೇಟಿಯಾಗಿ ಹೋಗಿದ್ದರು.

 ಪೆರಿಯಾರ್ ಆರಂಭಿಸಿದ ಚಳವಳಿ ತಮಿಳುನಾಡಿನ ಜನಜೀವನದ ಮೇಲೆ ಅಚ್ಚಳಿಯದ ಪ್ರಭಾವ ಮೂಡಿಸಿತು. ಅಣ್ಣಾದೊರೈ ಮಾತ್ರವಲ್ಲದೇ ತಮಿಳು ಚಿತ್ರಗಳಿಗೆ ಚಿತ್ರಕಥೆ ಬರೆಯುತ್ತಿದ್ದ ಕರುಣಾನಿಧಿ ಆ ಕಾಲದಲ್ಲಿ ತಮಿಳು ಸಿನೆಮಾಗಳ ಹೀರೋ ಆಗಿದ್ದ ಎಂ.ಜಿ.ರಾಮಚಂದ್ರನ್ ಪೆರಿಯಾರ್ ವಿಚಾರಕ್ಕೆ ಮಾರು ಹೋಗಿ ಚಳವಳಿಗೆ ಧುಮಿಕ್ಕಿದರು. ಪೆರಿಯಾರ್ ಜೊತೆಗೆ ಕಮ್ಯುನಿಸ್ಟ್ ವಿಚಾರಗಳಿಂದಲೂ ಪ್ರಭಾವಿತರಾಗಿದ್ದ ಕರುಣಾನಿಧಿ ಅವರು ಸೋವಿಯತ್ ಕಮ್ಯುನಿಸ್ಟ್ ನಾಯಕ ಸ್ಟಾಲಿನ್ ಅವರ ಹೆಸರನ್ನು ತಮ್ಮ ಮಗನಿಗೆ ಇಟ್ಟರು. ಯಾವುದೇ ಕಾರಣಕ್ಕಾಗಿ ಪೆರಿಯಾರ್ ಅವರೊಂದಿಗೆ ಭಿನ್ನಾಭಿಪ್ರಾಯ ತಾಳಿ ರಾಜಕೀಯ ಪಕ್ಷವನ್ನೇ ಕಟ್ಟಿದ ಅಣ್ಣಾದೊರೈ 60ರ ದಶಕದಲ್ಲಿ ಲೋಕಸಭೆಗೂ ಚುನಾಯಿತರಾದರು. ನಂತರ ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಸಾಧಿಸಿ, ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಆಗೆಲ್ಲ, ಕರುಣಾನಿಧಿ, ಎಂಜಿಆರ್, ನಡುನಚೆರಿಯನ್ ಮುಂತಾದವರು ಅಣ್ಣಾ ದೊರೈ ಭಕ್ತರಾಗಿದ್ದರು. ಆದರೆ 70ರ ದಶಕದಲ್ಲಿ ಅಣ್ಣಾದೊರೈ ಸಾವಿನ ನಂತರ ನಾಯಕತ್ವಕ್ಕಾಗಿ ಭಿನ್ನಾಭಿಪ್ರಾಯ ಉಂಟಾಗಿ ಕರುಣಾನಿಧಿ ಜೊತೆ ಜಗಳ ಮಾಡಿಕೊಂಡ ಎಂಜಿಆರ್ ಅವರು ಪಕ್ಷದಿಂದ ಹೊರಬಂದು ತಮ್ಮದೇ ಅಣ್ಣಾಡಿಎಂಕೆ ಕಟ್ಟಿಕೊಂಡರು. ಈ ಒಡಕಿಗೆ ಯಾವುದೇ ಸೈದ್ಧಾಂತಿಕ ಕಾರಣ ಇರಲಿಲ್ಲ. ಯಾವುದೇ ಸಿದ್ಧಾಂತದ ಗೋಜಿಗೆ ಹೋಗದೇ ತಮ್ಮ ಸಿನೆಮಾ ಗ್ಲಾಮರ್‌ನಿಂದ ಹೊಸ ಪಕ್ಷ ಕಟ್ಟಿದ ಎಂಜಿಆರ್ ಮುಂದೆ ರಾಜ್ಯದ ಮುಖ್ಯಮಂತ್ರಿಯಾದರು. ಆಗ ತಮ್ಮ ಚಿತ್ರಗಳಲ್ಲಿ ನಾಯಕಿಯಾಗಿದ್ದ ಜಯಲಲಿತಾ ಅವರನ್ನು ಪಕ್ಷದ ಪ್ರಚಾರ ಕಾರ್ಯದರ್ಶಿಯಾಗಿ ನೇಮಿಸಿಕೊಂಡರು.

ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಕಟ್ಟಿದ ಮೂಲ ದ್ರಾವಿಡ ಕಳಗಂ ಇಂದಿಗೂ ಉಳಿದುಕೊಂಡಿದೆ. ಅವರ ಶಿಷ್ಯ ವೀರಮಣಿ ಅದನ್ನು ಮುನ್ನಡೆಸುತ್ತಿದ್ದಾರೆ. ಆದರೆ ಅವರು ಚುನಾವಣಾ ರಾಜಕಾರಣಕ್ಕೆ ಹೋಗಿಲ್ಲ. ಚುನಾವಣೆ ರಾಜಕಾರಣಕ್ಕೆ ಹೋದ ಡಿಎಂಕೆ ಮತ್ತು ಅಣ್ಣಾ ಡಿಎಂಕೆ ಪಕ್ಷಗಳು ಪೆರಿಯಾರ್ ಸಿದ್ಧಾಂತ ಕೈಬಿಟ್ಟು ಅವರ ಫೋಟೋಗಳನ್ನು ಮಾತ್ರ ಇಟ್ಟುಕೊಂಡಿವೆ. ವೈಚಾರಿಕವಾಗಿ ಕರುಣಾನಿಧಿ ಇಂದಿಗೂ ಕೂಡ ಕಂದಾಚಾರದ ವಿರೋಧಿಯಾಗಿದ್ದರೂ ಅವರ ಮಕ್ಕಳು ಅವರ ರಾಜಕೀಯ ಅಧಿಕಾರದ ಉತ್ತರಾಧಿಕಾರಿಗಳಾಗಿ ಮಾತ್ರ ಉಳಿದಿದ್ದಾರೆ. ರಾಜಕೀಯ ಅಧಿಕಾರಕ್ಕಾಗಿ ಕರುಣಾನಿಧಿಯವರ ಮೂವರ ಮಡದಿಯರ ಮಕ್ಕಳಲ್ಲಿ ಒಳಜಗಳ ನಡೆಯುತ್ತಲೇ ಇದೆ. ಸದ್ಯಕ್ಕೆ ಸ್ಟಾಲಿನ್ ಪ್ರಾಬಲ್ಯ ಸಾಧಿಸಿದ್ದಾರೆ. ಸ್ಟಾಲಿನ್ ತಮ್ಮ ರಾಜಕೀಯದ ಉತ್ತರಾಧಿಕಾರಿಯೆಂದು ಕರುಣಾನಿಧಿ ಘೋಷಿಸಿದ ಬಳಿಕ ಉಳಿದ ಮಕ್ಕಳಲ್ಲಿ ಅಸಮಾಧಾನ ಉಂಟಾಗಿದೆ. ಕರುಣಾನಿಧಿಯವರು ತಮ್ಮ ಏಕೈಕ ಪುತ್ರಿ ಕನಿಮೋಳಿ ಅವರನ್ನು ರಾಜ್ಯಸಭೆೆಗೆ ಕಳುಹಿಸಿ, ಒಂದಿಷ್ಟು ಸಮಾಧಾನಗೊಳಿಸಿದ್ದಾರೆ.

ಡಿಎಂಕೆ ಈ ರೀತಿ ಒಂದು ಕುಟುಂಬದ ಸ್ವತ್ತಾಗಿದ್ದರೆ, ಅಣ್ಣಾ ಡಿಎಂಕೆ ಎಂಜಿಆರ್ ಅವರ ಹೀರೋಯಿನ್ ಆಗಿದ್ದ ಜಯಲಲಿತಾ ಅವರ ಖಾಸಗಿ ಸ್ವತ್ತಾಗಿ ಈಗ ಅದರ ಉತ್ತರಾಧಿಕಾರತ್ವ ಅವರ ಗೆಳತಿ ಶಶಿಕಲಾ ಅವರ ಪಾಲಿಗೆ ಹೋಗಿದೆ. ಕರುಣಾನಿಧಿಗೂ ಮತ್ತು ಜಯಲಲಿತಾಗೂ ವ್ಯತ್ಯಾಸವೆಂದರೆ, ಜಯಲಲಿತಾ ಅವರು ಸಮಾಜದಲ್ಲಿ ಮೂಲಭೂತ ಬದಲಾವಣೆ, ಚಿಂತನೆ ಹೊಂದಿರದಿದ್ದರೂ ಬಡವರಿಗೆ ಐದು ರೂಪಾಯಿ ಊಟ, ಬಡವರ ಮದುವೆಗೆ ಸಹಾಯ ಇಂತಹ ಕಾರ್ಯಕ್ರಮಗಳ ಮೂಲಕ ಜನಪ್ರಿಯತೆ ಗಳಿಸಿದರು. ಇದಷ್ಟೇ ಅಲ್ಲ, ಜಯಲಲಿತಾ ಅವರ 113 ಕೋಟಿ ರೂಪಾಯಿ ಆಸ್ತಿಗೆ ತಮ್ಮ ಸಂಬಂಧಿಕರ ಪರವಾಗಿ ವಿಲ್ ಬರೆದಿಲ್ಲ. ಬದುಕಿದಾಗಲೂ ತಮ್ಮ ಸಂಬಂಧಿಕರನ್ನು ಅವರು ಹತ್ತಿರ ಬಿಟ್ಟುಕೊಂಡಿರಲಿಲ್ಲ. ತಮಗೆ ಸಂಬಂಧವೇ ಇಲ್ಲದ ಶಶಿಕಲಾ ಅವರನ್ನು ತುಂಬಾ ನಂಬಿಕೊಂಡಿದ್ದ ಅವರು ತಮಿಳು ಜನರ ಸಹಾನುಭೂತಿ ಗಳಿಸುವಲ್ಲಿ ಯಶಸ್ವಿಯಾದರು. ಅವರ ಅಂತ್ಯಕ್ರಿಯೆಯು ದ್ರಾವಿಡ ಸಂಸ್ಕೃತಿಯಂತೆ ನಡೆಯಿತು.

ತಮಿಳುನಾಡಿನ ಎರಡು ಪ್ರಮುಖ ದ್ರಾವಿಡ ಪಕ್ಷಗಳು ತೀವ್ರವಾದ ನಾಯಕತ್ವ ಬಿಕ್ಕಟ್ಟು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಪೆರಿಯಾರ್ ಸಿದ್ಧಾಂತಕ್ಕೆ ವಿರೋಧವಾದ ಬಿಜೆಪಿ ರಾಜ್ಯದಲ್ಲಿ ನೆಲೆಯೂರಲು ಹೊಂಚು ಹಾಕುತ್ತಿದೆ. ಜಯಲಲಿತಾ ಅವರು ಕೊನೆಯುಸಿರೆಳೆದ ಸಂದರ್ದಲ್ಲಿ ಚೆನ್ನೈಗೆ ಬಂದ ವೆಂಕಯ್ಯನಾಯ್ಡು ಅಣ್ಣಾಡಿಎಂಕೆ ಪಕ್ಷ ತಾತ್ವಿಕವಾಗಿ ಬಿಜೆಪಿಗೆ ಸಮೀಪವಿದೆ ಎಂದು ಸುಳ್ಳು ಹೇಳಿದರು. ಇಷ್ಟು ದಿನ ತಮಿಳು ಪಕ್ಷಗಳ ಕೋಟೆಯಾಗಿದ್ದ ಈ ನಾಡನ್ನು ಕಬಳಿಸಲು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕೂಡ ತಂತ್ರ ರೂಪಿಸಿದ್ದಾರೆ. ತಮಿಳುನಾಡಿನ ಪರಿಸ್ಥಿತಿ ಹಿಂದೆ ಇದ್ದಾನಂತೆ ಈಗಿಲ್ಲ. ಕಳೆದ ಶತಮಾನದ 90ರ ದಶಕದಲ್ಲಿ ಇಡೀ ದೇಶದಲ್ಲಿ ಬಿರುಗಾಳಿಯಂತೆ ಅಪ್ಪಳಿಸಿದ ಹಿಂದೂ ಕೋಮುವಾದಿ ರಾಜಕಾರಣ ತಮಿಳುನಾಡನ್ನು ಪ್ರವೇಶಿಸಿದೆ. ದ್ರಾವಿಡ ಚಳವಳಿ ಪರಿಣಾಮವಾಗಿ ಉಳಿದ ರಾಜ್ಯಗಳಂತೆ ಇಲ್ಲಿ ರಾಜಕೀಯ ಅಧಿಕಾರ ಹಿಡಿಯಲು ಸಾಧ್ಯವಾಗಿಲ್ಲವಾದರೂ ಮತಾಂತರ ಮುಂತಾದ ಪ್ರಶ್ನೆಗಳನ್ನು ಕೆದಕಿ ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳಲು ಯಶಸ್ವಿಯಾಗಿದೆ. ಅಂತೆಯೇ ಪೆರುಮಾಳ ಮುರುಗನ್ ಅವರಂತಹ ಪ್ರಗತಿಪರ ವಿಚಾರವಾದಿ ಸಾಹಿತಿ ಈ ಸಂಘಟನೆಗಳಿಗೆ ಹೆದರಿ, ತಮ್ಮ ಕಾದಂಬರಿಯನ್ನು ಹಿಂಪಡೆಯುವಂತಹ ಸ್ಥಿತಿ ನಿರ್ಮಾಣವಾಗಿತ್ತು.

ತಮಿಳುನಾಡಿನಲ್ಲಿ ಒಂದು ಕಾಲದಲ್ಲಿ ಪ್ರಬಲವಾಗಿದ್ದ ಎಡಪಕ್ಷಗಳು ಚುನಾವಣಾ ರಾಜಕಾರಣದಲ್ಲಿ ಒಮ್ಮೆ ಡಿಎಂಕೆ, ಇನ್ನೊಮ್ಮೆ ಅಣ್ಣಾಡಿಎಂಕೆ ಜೊತೆ ಸೇರಿಕೊಂಡು ತಮ್ಮ ಸ್ವಂತದ ನೆಲೆಯನ್ನೇ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಡಪಕ್ಷಗಳು ನಟ ವಿಜಯಕಾಂತ್ ಮತ್ತು ವೈಕೋ ಜೊತೆ ಸೇರಿ, ಚುನಾವಣೆಗೆ ಸ್ಪರ್ಧಿಸಿ ಒಂದೂ ಸ್ಥಾನವೂ ಗೆಲ್ಲದೇ ಪರಾಭವಗೊಂಡರು.

ತಮಿಳುನಾಡಿನ ಇಂತಹ ಸನ್ನಿವೇಶದಲ್ಲಿ ಜಯಲಲಿತಾ ಕಣ್ಮರೆಯಾಗಿದ್ದಾರೆ. 95ರ ಕರುಣಾನಿಧಿ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ. ಒಂದು ಕಾಲದಲ್ಲಿ ಕಂದಾಚಾರದ ವಿರುದ್ಧ ಪೆರಿಯಾರ್ ಚಳವಳಿಯ ಪ್ರಭಾವ ಈಗ ಕಡಿಮೆಯಾಗಿದೆ. ಇರುವ ಗುಡಿಗುಡಾರಗಳ ಹೊಸ ಮಂದಿರಗಳು ರಾಜ್ಯದಲ್ಲಿ ತಲೆಯೆತ್ತಿ ಪುರೋಹಿತಶಾಹಿಯ ಜಾಲ ವಿಸ್ತರಿಸತೊಡಗಿದೆ. ರಾಜ್ಯ ರಾಜಕಾರಣದಲ್ಲಿ ದ್ರಾವಿಡ ಪ್ರಜ್ಞೆ ನಶಿಸುತ್ತಿದೆ. ಹಿಂದೆ ಪೆರಿಯಾರ್ ವಿರೋಧಿಸಿದ ಶಕ್ತಿಗಳೇ ಈಗ ದ್ರಾವಿಡ ಪಕ್ಷಗಳಲ್ಲಿ ಪ್ರಾಬಲ್ಯ ಸಂಪಾದಿಸಿವೆ.

ಯಾವುದೇ ಒಂದು ವೈಚಾರಿಕ ಚಳವಳಿ ಚಲನಶೀಲತೆ ಕಳೆದುಕೊಂಡರೆ, ಅಧಿಕಾರ ರಾಜಕಾರಣದ ಕೆಸರಲ್ಲಿ ಮುಳುಗಿದರೆ, ಸೈದ್ಧಾಂತಿಕ ವಿಸ್ಮತಿಗೆ ಒಳಗಾದರೆ ಎಂತಹ ದುರಂತ ಸಂಭವಿಸುತ್ತದೆ ಎಂಬುದಕ್ಕೆ ತಮಿಳುನಾಡಿನ ದ್ರಾವಿಡ ಚಳವಳಿ ನಮ್ಮ ಕಣ್ಣ ಮುಂದಿನ ಉದಾಹರಣೆಯಾಗಿದೆ. ಚೆನ್ನೈನಲ್ಲಿರುವ ಪೆರಿಯಾರ್ ಪ್ರತಿಮೆಗೆ ನಿತ್ಯವೂ ಜನರು ಬಂದು ಗೌರವಿಸುತ್ತಾರೆ. ಅದೇ ಗೌರವ ಅಣ್ಣಾದೊರೈ, ಎಂಜಿಆರ್ ಪ್ರತಿಮೆಗೂ ಸಲ್ಲುತ್ತದೆ. ಆ ಸಾಲಿನಲ್ಲಿ ಜಯಲಲಿತಾ ಅವರೂ ಸೇರಿ ಹೋಗಿದ್ದಾರೆ. ಜನಮನ ಬೆಳಗಬೇಕಾದ ವಿಚಾರಗಳು ಪ್ರತಿಮೆಯ ರೂಪವನ್ನು ತಾಳಿವೆ. ಇದು ಸಮಾಜ ಬದಲಾವಣೆಗೆ ಹೋರಾಡುವ ಎಚ್ಚರಿಕೆಯ ಗಂಟೆಯಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)