ಅವರೆ....ಪೋಷಕಾಂಶಗಳ ತವರು
ದಿನಕ್ಕೊಂದು ತರಕಾರಿ
ಅವರೆ ಬೀಜ ತನ್ನ ರುಚಿಗೆ ಹೆಸರಾಗಿದೆ, ಜೊತೆಗೆ ಅತ್ಯುತ್ತಮ ಪೋಷಕಾಂಶಗಳನ್ನು ಒಳಗೊಂಡಿದೆ. ಮಧ್ಯ ಅಮೆರಿಕ ಮೂಲದ ಈ ತರಕಾರಿ ಸಸ್ಯಶಾಸ್ತ್ರೀಯವಾಗಿ ಫೇಬಾಸೀ ಕುಟುಂಬಕ್ಕೆ ಸೇರಿದೆ. ಫೇಸಿಲಸ್ ಲುನಾಟಸ್ ಎಲ್ ಇದರ ವೈಜ್ಞಾನಿಕ ಹೆಸರು.
ವಿಶ್ವಾದ್ಯಂತ ಬೆಳೆಯುವ, ಲಿಮಾ ಬೀನ್ಸ್ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಈ ಅವರೆ ವಾರ್ಷಿಕ ಬೆಳೆಯಾಗಿದೆ. ಎರಡು ಜಾತಿಗಳು ಈ ಅವರೆಯಲ್ಲಿ ಲಭ್ಯವಿದ್ದು, ಕಿಡ್ನಿ ಆಕಾರದ ದೊಡ್ಡ ಮತ್ತು ಸಣ್ಣ ಬೀಜಗಳನ್ನು ಹೊಂದಿರುತ್ತವೆ.
ಅವರೆಯಲ್ಲಿರುವ ಪೋಷಕಾಂಶಗಳು
ಅವರೆ ಸಸ್ಯಜನ್ಯ ಪ್ರೋಟಿನ್ನ ಪ್ರಮುಖ ಮೂಲವಾಗಿದೆ. ಪ್ರತಿ 100 ಗ್ರಾಂ ಅವರೆ 338 ಕ್ಯಾಲೊರಿಗಳನ್ನು ಹೊಂದಿದ್ದು, ನಮ್ಮ ಶರೀರದ ದೈನಂದಿನ ಅಗತ್ಯದ ಶೇ.38ರಷ್ಟು ಪ್ರೋಟಿನ್ನ್ನು ಒದಗಿಸುತ್ತದೆ. ಜೊತೆಗೆ ಆ್ಯಂಟಿ ಆಕ್ಸಿಡಂಟ್ಗಳು, ವಿಟಾಮಿನ್ಗಳು, ಖನಿಜಗಳು ಮತ್ತು ಸಸ್ಯಜನ್ಯ ಸ್ಟೆರಾಲ್ಗಳ ಶ್ರೀಮಂತ ಮೂಲವಾಗಿದೆ.
ತಾಜಾ ಅಥವಾ ಒಣ ಬೀಜಗಳು ಸಾಕಷ್ಟು ನಾರಿನಂಶ ಹೊಂದಿವೆ. ಈ ನಾರಿನಂಶವು ಮಲಬದ್ಧತೆಯನ್ನು ತಗ್ಗಿಸುವ ಜೊತೆಗೆ ಗುದನಾಳದ ಕ್ಯಾನ್ಸರ್ನ ವಿರುದ್ಧ ರಕ್ಷಣೆಯನ್ನು ನೀಡುತ್ತದೆ.
ಲಿಮಾ ಅವರೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಐಸೊಫ್ಲಾವೋನ್ಗಳನ್ನು ಹೊಂದಿರುತ್ತದೆ. ಜಿನಿಸ್ಟಿಯನ್ ಮತ್ತು ಡೈಜೀನ್ನಂತಹ ಐಸೊಫ್ಲಾವೋನ್ಗಳು ಪ್ರಾಣಿಗಳಿಗೆ ಎದೆ ಕ್ಯಾನ್ಸರ್ನಿಂದ ರಕ್ಷಣೆ ನೀಡುತ್ತದೆ ಎನ್ನುವುದು ಪ್ರಯೋಗಗಳಿಂದ ಸಿದ್ಧವಾಗಿದೆ.
ಅವರೆಯಲ್ಲಿರುವ ಸಸ್ಯಜನ್ಯ ಸ್ಟೆರಾಲ್ಗಳು, ವಿಶೇಷವಾಗಿ ಬೀಟಾ ಸೈಟೊಸ್ಟೆರಾಲ್ ನಮ್ಮ ಶರೀರದಲ್ಲಿನ ಕೊಲೆಸ್ಟರಾಲ್ ಮಟ್ಟವನ್ನು ತಗ್ಗಿಸುವಲ್ಲಿ ನೆರವಾಗುತ್ತವೆ.
ತಾಜಾ ಅಥವಾ ಒಣ ಅವರೆ ಬೀಜ ಫೊಲೇಟ್ಗಳ ಅತ್ಯುತ್ತಮ ಮೂಲವಾಗಿದೆ. ಫೊಲೇಟ್ ಮತ್ತು ವಿಟಾಮಿನ್ ಬಿ-12 ಸೇರಿಕೊಂಡು ಡಿಎನ್ಎ ಸಂಶ್ಲೇಷಣೆ ಮತ್ತು ಜೀವಕೋಶ ವಿಭಜನೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತವೆ. ಮಹಿಳೆಯರು ಗರ್ಭಧಾರಣೆ ಸಮಯದಲ್ಲಿ ಮತ್ತು ನಂತರ ಸಾಕಷ್ಟು ಪ್ರಮಾಣದಲ್ಲಿ ಫೊಲೇಟ್ಗಳಿರುವ ಆಹಾರವನ್ನು ಸೇವಿಸಿದರೆ ನವಜಾತ ಶಿಶುವಿನಲ್ಲಿ ನ್ಯೂರಲ್ ಟ್ಯೂಬ್ನ ದೋಷಗಳನ್ನು ತಡೆಯಲು ನೆರವಾಗುತ್ತದೆ.
ಅವರೆ ಬಿ-ಕಾಂಪ್ಲೆಕ್ಸ್ ಗುಂಪಿನ ಹಲವಾರು ವಿಟಾಮಿನ್ಗಳ ಆಗರವಾಗಿದೆ. ಅದು ನಮ್ಮ ಶರೀರಕ್ಕೆ ಪೈರಿಡಾಕ್ಸಿನ್(ವಿಟಾಮಿನ್ ಬಿ6), ಥಿಯಾಮಿನ್(ವಿಟಾಮಿನ್ ಬಿ1), ರಿಬೊಫ್ಲಾವಿನ್, ಪ್ಯಾಂಟೊಥೆನಿಕ್ ಆ್ಯಸಿಡ್ ಮತ್ತು ನಿಯಾಸಿನ್ಗಳ ದೈನಂದಿನ ಅಗತ್ಯವನ್ನು ಒದಗಿಸುತ್ತದೆ. ಈ ವಿಟಾಮಿನ್ಗಳು ನಮ್ಮ ಶರೀರದೊಳಗೆ ಪಚನಕ್ರಿಯೆಯಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸುತ್ತವೆ.
ಮೊಲಿಬ್ಡಿನಂ,ಮ್ಯಾಗ್ನೇಶಿಯಂ,ತಾಮ್ರ,ಕ್ಯಾಲ್ಸಿಯಂ,ಪೊಟ್ಯಾಶಿಯಂ,ಕಬ್ಬಿಣ,ಮ್ಯಾಂಗನೀಸ್ ನಂತಹ ಖನಿಜಗಳು ಅವರೆಯಲ್ಲಿ ಹೇರಳವಾಗಿವೆ. ಪ್ರತಿ 100 ಗ್ರಾಂ ಅವರೆ 1724 ಮಿ.ಗ್ರಾಂ.ಪೊಟ್ಯಾಶಿಯಂ ಅನ್ನು ಒದಗಿಸುತ್ತದೆ.
ಪೊಟ್ಯಾಶಿಯಂ ಎದೆಬಡಿತ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುವ ಜೀವಕೋಶಗಳು ಮತ್ತು ಶರೀರ ದ್ರವಗಳ ಪ್ರಮುಖ ಘಟಕವಾಗಿದೆ. ಕೆಂಪು ರಕ್ತಕಣಗಳ ಉತ್ಪಾದನೆಗೆ ತಾಮ್ರ ಮತ್ತು ಕಬ್ಬಿಣ ಅಗತ್ಯವಾಗಿವೆ. ಮ್ಯಾಂಗನೀಸ್ ಅನ್ನು ನಮ್ಮ ಶರೀರವು ಆ್ಯಂಟಿ ಆಕ್ಸಿಡಂಟ್ ಎಂಝೈಮ್ ಆಗಿ ಬಳಸಿಕೊಳ್ಳುತ್ತದೆ.