varthabharthi

ಅನುಗಾಲ

ಗಾಂಧಿಯಿಲ್ಲದಿರುವುದೇ ಒಳ್ಳೆಯದು!

ವಾರ್ತಾ ಭಾರತಿ : 19 Jan, 2017
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಜರ್ಮನಿಯು ಹಿಟ್ಲರನ ಆಳ್ವಿಕೆಯಲ್ಲಿದ್ದ ಕಾಲದ ಒಂದು ನಗೆಚಾಟಿಕೆ ಹೀಗಿತ್ತು: ಹಿಟ್ಲರನು ಇತರ ಎಲ್ಲಾ ಅಂಚೆಚೀಟಿಗಳನ್ನು ರದ್ದುಗೊಳಿಸಿ ತನ್ನ ಚಿತ್ರವಿರುವ ಅಂಚೆಚೀಟಿಗಳನ್ನಷ್ಟೇ ಚಾಲ್ತಿಗೆ ತಂದಿದ್ದ. ಆದರೆ ಅಂಚೆ ಇಲಾಖೆಯು ಯಾವ ಅಂಚೆ ಚೀಟಿಯೂ ಲಕೋಟೆಗೆ ಅಂಟಿಸದೇ ಇರುತ್ತಿತ್ತು ಎಂದು ದೂರು ನೀಡಿತು. ಕಾರಣವನ್ನು ಹುಡುಕಲಾಗಿ ಜನರು ಅಂಚೆ ಚೀಟಿಯ ಹಿಂಬದಿಗೆ ಉಗುಳಿ ಅಂಟಿಸುವ ಬದಲು ಎದುರುಬದಿಗೇ ಉಗುಳುತ್ತಿದ್ದರೆಂದು ಗೊತ್ತಾಯಿತು!
ಇದು ಯಥಾರ್ಥವೆಂಬ ನಂಬಿಕೆ ನನಗಿಲ್ಲ. ಆದರೆ ಒಳ್ಳೆಯ ರೂಪಕ.

 ನಾವಿಷ್ಟಪಡದ ಅಥವಾ ಜನಪ್ರಿಯವಾದರೂ ಮೌಲ್ಯರಹಿತ ರಾಜಕಾರಣಗಳು ಅಧಿಕಾರಕ್ಕೆ ಏರಿದಾಗ ಇಂತಹ ಅಸಂಬದ್ಧಗಳು ನಡೆಯುತ್ತಲೇ ಇರುತ್ತ್ತವೆ. ಇದು ಒಂದು ಜಾಗತಿಕ ಪ್ರಕ್ರಿಯೆ. ಕಿಮ್ ಜೋಂಗ್ ಉನ್‌ನ ಉತ್ತರ ಕೊರಿಯಾ ಇರಲಿ, ಬರಲಿರುವ ಟ್ರಂಪಿನ ಅಮೆರಿಕವೇ ಇರಲಿ, ಕೊನೆಗೆ ನಮ್ಮ ಭಾರತವೇ ಇರಲಿ (ಕೊನೆಗೆ ಏಕೆಂದರೆ ಇದು ನನ್ನ ದೇಶ ಎಂಬ ಅಭಿಮಾನ!) ವಿಕ್ಷಿಪ್ತತೆ ಅತಿಯಾದಾಗ ಮತ್ತು ಅದಕ್ಕೆ ಬಹುಮತದ ಬೆಂಬಲ ಸಿಕ್ಕಾಗ ಕಾಲವೇ ಸ್ತಬ್ದವಾದಂತಿರುತ್ತದೆ. ನೋಟು ಅಮಾನ್ಯೀಕರಣದ ಗೊಂದಲ ಇನ್ನೂ ಪರಿಹಾರವಾಗಿಲ್ಲ.

ಮಳೆನಿಂತರೂ ಮಳೆಯ ಹನಿ ಬಿಡದ ಕಾಲದಲ್ಲಿ ಇನ್ನೂ ಮಳೆನಿಂತಿಲ್ಲ; ಮಳೆಹನಿ ಬೀಳುವುದನ್ನು ತಡೆಯುವುದು ಹೇಗೆ? ದೇಶದ ಆರ್ಥಿಕ ಅಭಿವೃದ್ಧಿ ಮತ್ತು ಒಟ್ಟಾರೆ ವಿತ್ತೀಯ ಬೆಳವಣಿಗೆಯು ಸುಮಾರಾಗಿ ಸ್ಥಗಿತಗೊಂಡರೂ (ಐಎಂಎಫ್- ಅಂತಾರಾಷ್ಟ್ರೀಯ ವಿತ್ತ ಸಂಸ್ಥೆಯು ಭಾರತವು ಮೊದಲ ಬಾರಿಗೆ ತನ್ನ ಬೆಳವಣಿಗೆಯ ಹಿಮ್ಮುಖತೆಯನ್ನು ಕಾಣುತ್ತಿದೆ ಮತ್ತು ಇದಕ್ಕೆ ನೋಟುಗಳ ಅಮಾನ್ಯೀಕರಣವೇ ಕಾರಣ ಎಂದು ವರದಿ ಮಾಡಿದೆ. ದಿನ ಬೆಳಗಾಗಬೇಕಾದರೆ ದಿನಬಳಕೆಯ ವಸ್ತುಗಳ ಬೆಲೆ ಹೆಚ್ಚಾಗುತ್ತಿದ್ದರೂ, ಪೆಟ್ರೋಲ್-ಡೀಸಿಲ್-ಅಡುಗೆ ಅನಿಲಗಳ ಬೆಲೆ ಹೆಚ್ಚಿ ರುಪಾಯಿಯ ಬೆಲೆ ಇಳಿದರೂ ಭಾರತ ಭಾಗ್ಯವಿಧಾತರು ಮಾತ್ರ ಈಗ ಭಾರತವು ವಿಶ್ವಗುರುವೆಂಬ ಪದವಿಯನ್ನು ತಮಗೆ ತಾವೇ ಪ್ರದಾನಮಾಡಿಕೊಂಡು ಇಂತಹ ಎಲ್ಲ ಟೀಕೆಗಳಿಗೆ ಒಂದು ಪದದ ಉತ್ತರ ದೇಶದ್ರೋಹ-ವನ್ನು ಕರುಣಿಸಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಸ್ವಾಯತ್ತತೆಯನ್ನು ಮಾರಿಕೊಂಡಂತಿದೆ. ಅಲ್ಲಿನ ಕೆಳಹಂತದ ನೌಕರರು ಈ ಬಗ್ಗೆ ಪ್ರತಿಭಟನೆ ನಡೆಸಿದ್ದಾರೆ. ಅವರಿಗಿರುವ ಅಭಿಮಾನ ಗವರ್ನರ್ ಅವರಿಗೇ ಇಲ್ಲದಂತಿದೆ.

ಈಚೆಗೆ ದೇಶದ ಶ್ರಾವ್ಯ ಮತ್ತು ದೃಶ್ಯ ಪ್ರಸಾರ ನಿರ್ದೇಶನಾಲಯ (ಡಿಎವಿಪಿ)ದ ಹಾಗೂ ಖಾದಿ ಗ್ರಾಮೋದ್ಯೋಗ ಮಂಡಳಿಯ ಕ್ಯಾಲೆಂಡರು ಗಳಲ್ಲಿ ಮತ್ತು ಡೈರಿಗಳಲ್ಲಿ ಮಹಾತ್ಮನ ಬದಲು ಮೋದಿ ಚರಕದಿಂದ ನೂಲು ತೆಗೆಯುವ ಚಿತ್ರ ರಾರಾಜಿಸಿದೆಯೆಂಬ ವಿಚಾರ ಸುದ್ದಿಯಾಯಿತು. ಇದರ ವಿರುದ್ಧವಾಗಿ ಆಯಾಯ ಸಂಸ್ಥೆಗಳ ನೌಕರರೇ ಬಾಯಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಪ್ರತಿಭಟಿಸಿದರೆಂದೂ ವರದಿಯಾಗಿದೆ. ಇದೊಂದು ಮಹತ್ವದ ಬದಲಾವಣೆಯೇ ಅಲ್ಲವೆಂಬಂತೆ ಸರಕಾರದ ಪ್ರತಿನಿಧಿಗಳು, ವಕ್ತಾರರು, ಹಿರಿಯ ಅಧಿಕಾರಿಗಳು ಸಬೂಬು ಹೇಳಿದ್ದಾರೆ.

ಯಾವ ವರ್ಷ ಮಹಾತ್ಮನ ಚಿತ್ರವಿರಲಿಲ್ಲವೆಂಬುದನ್ನು ವಿವರಿಸಿ ಇದೆಲ್ಲ ಸಹಜ ಎಂದು ಸಮಜಾಯಿಷಿಕೆ ನೀಡಿದ್ದಾರೆ. ಇದಕ್ಕೆ ಬೆಂಬಲವಾಗಿ ಅನೇಕ ಸ್ವಘೋಷಿತ ದೇಶಭಕ್ತರು ಚರ್ಚೆಯ ದಿಕ್ಕು ತಪ್ಪಿಸಿ ತಮ್ಮ ಟೀಕೆಗೆ ರೆಡಿಮೇಡ್ ಗುರಿಯಾಗಿರುವ ಕಾಂಗ್ರೆಸ್ ನಾಯಕರು ಗಾಂಧಿಯ ಹೆಸರನ್ನು ಕುಲಗೆಡಿಸಲಿಲ್ಲವೇ ಎಂದು ಕೇಳುತ್ತಿದ್ದಾರೆ. ಗಾಂಧಿಯ ಚಿತ್ರ ಇರದಿದ್ದರೆ ಗಾಂಧಿಗೇನೂ ಹಾನಿಯಿಲ್ಲ. ಗಾಂಧಿ ಒಬ್ಬ ವ್ಯಕ್ತಿಯಾಗಿ ನಮ್ಮೆದುರಿಲ್ಲ ಎಂಬುದನ್ನು ಬಿಟ್ಟರೆ ಎಲ್ಲೆಡೆ ಬಹುತೇಕ ಗಾಳಿಯಂತೆ, ಅಥವಾ ಆಸ್ತಿಕತೆಯ ಸಂಕೇತವಾದ ದೇವರಂತೆ ಎಲ್ಲ ಕಡೆ ಇರುವ ಶಕ್ತಿ. ಮುಂದಿನ ತಲೆಮಾರು ಗಾಂಧಿಯೆಂಬ ಒಬ್ಬ ವ್ಯಕ್ತಿ ಈ ಭೂಗ್ರಹದ ಮೇಲಿದ್ದ ಎಂದು ನಂಬುವುದೇ ಕಷ್ಟ ಎಂಬಂತೆ ಬದುಕಿದ ಗಾಂಧಿ ಇಂತಹ ಸಣ್ಣಪುಟ್ಟ ಗೌರವಗಳನ್ನು ಎಂದೂ ಅಪೇಕ್ಷಿಸಲಿಲ್ಲ. ಹಾಗಿದ್ದಿದ್ದರೆ ಸ್ವಾತಂತ್ರ್ಯ ಸಿಕ್ಕಿದಾಗ ತಾನೇ ಪ್ರಧಾನಿಯಾಗುತ್ತಿದ್ದರೇನೋ? ನೈಜ ಅನಾಸಕ್ತಿಯ ಸ್ಥಿತಪ್ರಜ್ಞ ದುಡಿಮೆ ಗಾಂಧಿಯದ್ದು.

ಗಾಂಧಿ ಎಂತಹ ಪ್ರಭಾವವನ್ನು ಬೀರಿ ಹೋಗಿದ್ದಾರೆಂಬುದು ಈ ದೇಶದಲ್ಲಿ ಅವರನ್ನು ಆರಾಧಿಸುವವರಿಂದ ಮೊದಲ್ಗೊಂಡು ಟೀಕಿಸುವವರ ವರೆಗೂ ಗೊತ್ತಿದೆ. ರಾಜಕೀಯದ ಗಂಧಗಾಳಿ ಗೊತ್ತಿಲ್ಲದ ಪ್ರಜೆಗೂ ಗಾಂಧಿಯನ್ನು ಗೊತ್ತಿದೆ. ಇದರಿಂದಾಗಿ ಗಾಂಧಿಯನ್ನು ಭೌತಿಕವಾಗಿ ಮರೆಮಾಡಿದ, ವ್ಯಕ್ತ ಲೌಕಿಕದಿಂದ ಮರೆಮಾಡಲು ಪ್ರಯತ್ನಿಸುತ್ತಿರುವ ಮಂದಿಗೂ ಗಾಂಧಿಯನ್ನು ಜನಮಾನಸದಿಂದ ಮರೆಮಾಡುವುದು ಅಸಾಧ್ಯ ವೆಂದು ಗೊತ್ತಿದೆ. ಆದ್ದರಿಂದ ಪರ್ಯಾಯವಾಗಿ ಅವರ ಛದ್ಮವೇಷವನ್ನು ಹಾಕುವುದು ಅನಿವಾರ್ಯವಾಗಿದೆ.

ಪ್ರಧಾನಿಯಾಗಿ 02.10.2014ರಂದು ಅಮೆರಿಕದ ನ್ಯೂಯಾರ್ಕಿನ ಮ್ಯುಆಡಿಸನ್ ಸ್ಕ್ವೇರ್‌ನಲ್ಲಿ ಮಾಡಿದ ಭಾಷಣದಲ್ಲಿ ಮೋದಿ 2019ರಲ್ಲಿ ಗಾಂಧೀಜಿ ಅವರ 150ನೆ ಜಯಂತಿ ಆಚರಣೆಯನ್ನು ಭಾರತವನ್ನು ಕಸಮುಕ್ತಗೊಳಿಸುವುದರ ಮೂಲಕ ಆಚರಿಸೋಣ ಎಂದಿದ್ದರು. ಅಂದರೆ ಗಾಂಧಿ ಈ ದೇಶದ ಒಂದು ಸಂಕೇತ; ರೂಪಕ. ಗಾಂಧಿ ಕಸಮುಕ್ತಿಗೆ ಮಾತ್ರ ಆದರ್ಶವಲ್ಲ; ಪ್ರತಿಮೆಗಳ ಸ್ಥಾಪನೆಗೆ, ಪ್ರಶಸ್ತಿಗಳ ವಿತರಣೆಗೆ ಹೀಗೆ ವ್ಯಕ್ತಿನಿಷ್ಠ ಎಲ್ಲ ಕಾಯಕಗಳಿಗೆ ಅವರು ವಿರೋಧವಾಗಿದ್ದರು. ಆದರೆ ನಮ್ಮ ಜನನಾಯಕರು ಯಾರ್ಯಾರನ್ನು ಎಲ್ಲೆಲ್ಲಿ ಬೇಕೋ ಅಲ್ಲಿ ಉಪಯೋಗಿಸುತ್ತ ಉಳಿದೆಡೆ ತಿಪ್ಪೆಗೆಸೆಯುತ್ತ ಸಾಗಿದ್ದಾರೆ. ಹೀಗೆ ಹೇಳುತ್ತಲೇ ಮೋದಿ ಭಾರತವನ್ನು ಕಾಂಗ್ರೆಸ್ ಮುಕ್ತಗೊಳಿಸುವುದಕ್ಕೆ ಕರೆಕೊಟ್ಟಿದ್ದರು. ಆದರೆ ಅನಂತರದ ಘಟನೆಗಳನ್ನು ಗಮನಿಸಿದರೆ ಗಾಂಧಿಯನ್ನೂ ಒಂದು ಕಸವೆಂದು ಪರಿಗಣಿಸಲಾಗಿದೆಯೇನೋ ಎಂಬ ಸಂಶಯವುಂಟಾಗುತ್ತಿದೆ. ಭಾರತವನ್ನು ಗಾಂಧಿಮುಕ್ತ ಗೊಳಿಸುವುದು ಸಾಧುವೇ ಎಂಬ ಪ್ರಾಮಾಣಿಕ ಪ್ರಶ್ನೆಯನ್ನು ಹಾಕಿಕೊಳ್ಳುವುದರ ಬದಲಾಗಿ ಎಲ್ಲೆಲ್ಲ ಗಾಂಧಿಯ ಶಕ್ತಿಯಿದೆಯೋ ಅದನ್ನು ಒಂದೊಂದಾಗಿ ಚಿವುಟಿಹಾಕುವ ಪ್ರಯತ್ನ ಸಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಈಗಿರುವ ಗಾಂಧಿಗಳ ಪಾಡು ಬಿಡಿ, ನಿಜವಾದ ಗಾಂಧಿ ಶಿಷ್ಯ ನೆಹರೂವಿನ ವ್ಯಕ್ತಿತ್ವಕ್ಕೆ ಮಸಿ ಬಳಿಯುವ, ಕೆಸರೆರಚುವ ಪ್ರಯತ್ನ ಅತ್ಯಂತ ಯೋಜನಾಬದ್ಧವಾಗಿ ನಡೆದಿದೆ. ನೆಹರೂವಿನ ಆಡಳಿತದಲ್ಲಿ ಲೋಪದೋಷವಿರಲಿಲ್ಲವೆಂದಲ್ಲ.

ಆದರೆ ನೆಹರೂ ಭಾರತದ ಜಾತ್ಯಾತೀತ ಸಾಮಾಜಿಕ ಹೆಣಿಗೆಗೆ ಬಲವಾದ ಒತ್ತು ನೀಡಿದ್ದರು. ಅಲ್ಲದೆ ರಾಜಕೀಯದ ಗುಣಮಟ್ಟ ಕುಗ್ಗದಂತೆ ಅವಿರತ ಶ್ರಮ ಹಾಕಿದ್ದರು. ಅದಲ್ಲದಿದ್ದರೆ ಡಾ. ಅಂಬೇಡ್ಕರ್ ಸಂವಿಧಾನದ ಹೊಣೆ ಹೊತ್ತುಕೊಳ್ಳುವಂತೆ ಅಥವಾ ಕಾಂಗ್ರೆಸ್‌ನ ಸದಸ್ಯರಲ್ಲದ ಅಂಬೇಡ್ಕರ್ ಅವರು ಸಂಪುಟ ಸೇರುವಂತೆ ನೆಹರೂ ಸರಕಾರ ವಿನಂತಿಸುತ್ತಿರಲಿಲ್ಲ. ಅಲಿಪ್ತ ನೀತಿಯಂತಹ ಉದಾತ್ತ ಚರಿತ್ರೆಗೆ ಮೊದಲ ಹೆಜ್ಜೆ ಹಾಕಿದವರು ನೆಹರೂ ಎಂಬುದನ್ನೂ ಮರೆಯುವಂತಿಲ್ಲ. ಚೀನಾದೊಂದಿಗಿನ ಪಂಚಶೀಲ ವಿಫಲವಾದ್ದು ನೆಹರೂವಿನ ಒಂದು ಆಕಸ್ಮಿಕವೆಂದು ಬಗೆಯಬೇಕೇ ಹೊರತು ಅವರ ದೇಶಾಭಿಮಾನವನ್ನಾಗಲೀ ದೇಶಭಕ್ತಿಯನ್ನಾಗಲೀ ಸಂಶಯಪಡುವಂತಿಲ್ಲ. ಹೋಗಲಿ, ಅವರಷ್ಟು ಚೆನ್ನಾಗಿ ಭಾಷಣ ಮಾಡುವುದಾಗಲೀ ಬರೆಯುವುದಾಗಲೀ ಅಂದಿನ ಕೆಲವು ರಾಜಕಾರಣಿಗಳಿಗೆ ಸಾಧ್ಯವಿತ್ತಾದರೂ ಇಂದಿನ ಬಹುಪಾಲು ರಾಜಕಾರಣಿಗಳಿಗೆ ಸಾಧ್ಯವಿಲ್ಲ. ನೆಹರೂ ಯುಗದಲ್ಲಿ ಸಂಸತ್ತು ಹೊಣೆಯರಿತು ನಡೆಯುತ್ತಿತ್ತು. ಇಂದಿನಂತೆ ಕುಲಗೆಟ್ಟಿರಲಿಲ್ಲ. ಆದರೂ ನೆಹರೂವಿನ ವ್ಯಕ್ತಿತ್ವಕ್ಕೆ ಭಂಗತರುವಲ್ಲಿ ಇಂದಿನ ಭಾರತ ಸಾಕಷ್ಟು ಶ್ರಮ ಪಡುತ್ತಿದೆ. ಚಾಚಾ ನೆಹರೂ ಚಾ ನೆಹರೂ ಆಗುವತ್ತ ಈ ಹಾದಿ ಸಾಗಿದೆ. ನೆಹರೂವಿನ ವ್ಯಕ್ತಿತ್ವವನ್ನು ಅವರೋಹಿಸದಿದ್ದಲ್ಲಿ ಗಾಂಧಿಯನ್ನು ಇಳಿಸಲು ಸಾಧ್ಯವಿಲ್ಲ. ಇದಕ್ಕಾಗಿಯೇ ಇದ್ದಕ್ಕಿದ್ದಂತೆ ಸರದಾರ್ ಪಟೇಲರ ಕುರಿತು ಅಪಾರ ಪ್ರೀತಿ, ಅಭಿಮಾನ ಮೊಳಗತೊಡಗಿತು.

ಪಟೇಲರು ಅತ್ಯಂತ ಶಕ್ತ ರಾಜಕಾರಣಿ. ಗಾಂಧಿಯೊಂದಿಗೆ ಪಳಗಿದ ಮುತ್ಸದ್ದಿ. ನೆಹರೂಗಿಂತ ಸುಮಾರು ಹದಿನಾಲ್ಕು ವರ್ಷ ಹಿರಿಯರು. ಸ್ವಾತಂತ್ರ್ಯ ಸಿಕ್ಕಿದಾಗ ಅವರಿಗೆ 72 ವರ್ಷ. ಸಹಜವಾಗಿಯೇ ಅವರಿಗಿಂತ ಕಿರಿಯರೂ ಜನಪ್ರಿಯತೆಯ ದೃಷ್ಟಿಯಿಂದ ಅವರಿಗಿಂತ ಹಿರಿಯರೂ, ಮತ್ತು ಗಾಂಧಿಯ ಆಯ್ಕೆಯಾದ ನೆಹರೂ ಪ್ರಧಾನಿಯಾದರು. ಈ ಬಗ್ಗೆ ಅವರಿಗೆ ಯಾವ ಬೇಸರವೂ ಇರಲಿಲ್ಲ. (ಅಡ್ವಾಣಿಯವರು ಹಿರಿಯರಾದರೂ ಮೋದಿ ಪ್ರಧಾನಿಯಾಗಲಿಲ್ಲವೇ ಹಾಗಿರಬಹುದೇನೋ?) ಹಾಗೆ ನೋಡಿದರೆ ಪಟೇಲರಂತೆ ಅಂಬೇಡ್ಕರ್, ರಾಜಾಜಿ ಮುಂತಾದ ಇನ್ನೂ ಅನೇಕ ಮೇಧಾವಿಗಳಿದ್ದರು. ಆದರೆ ಇತ್ತೀಚೆಗಿನ ದಿನಗಳಲ್ಲಿ ಪಟೇಲರನ್ನು ಮುಂದೆ ನಿಲ್ಲಿಸುವ ಭರದಲ್ಲಿ ಇತಿಹಾಸವನ್ನು ವಿಚಿತ್ರವಾಗಿ ವರ್ಣಿಸಲಾಗುತ್ತಿದೆ. ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಈ ಉಕ್ಕಿನ ಮನುಷ್ಯನ ಉಕ್ಕಿನ ಪ್ರತಿಮೆಯನ್ನು ಸೃಷ್ಟಿಸಲಾಗುತ್ತಿದೆ. ಇದರಲ್ಲಿ ಪಟೇಲರ ಪಾಲೆಷ್ಟು, ಪ್ರಚಾರ-ಸ್ವಪ್ರತಿಷ್ಠೆಯ ಲಾಭದ ಪಾಲೆಷ್ಟು ಗೊತ್ತಿಲ್ಲ!

ಯಾವುದೇ ಅಕ್ಷರವನ್ನಾದರೂ ಒಮ್ಮೆಗೇ ಅಳಿಸಲಾಗುವುದಿಲ್ಲ. ಅದಕ್ಕೆ ಯಾವುದೋ ಒಂದು ಬಣ್ಣಬಳಿದು ಸಪಾಟಾಗಿ ಮಾಡಿ ಮತ್ತೆ ಹೊಸ ಚಿತ್ರವನ್ನು ಬಳಿಯಬೇಕಾಗುತ್ತದೆ. ಹೀಗೆಯೇ ಈಗ ಗಾಂಧಿಯ ಪ್ರತಿಮೆಯನ್ನು, ರೂಪಕವನ್ನು ಒಂದಲ್ಲ ಒಂದು ಬಗೆಯಿಂದ ಅಳಿಸುವ ಕೆಲಸ ನಡೆಯುತ್ತಿದೆ. ಈ ಬಗ್ಗೆ ಎಳೆಯರ ಮತ್ತು ಮುಗ್ಧರ ಮನಸ್ಸನ್ನು ವಿಕೃತಗೊಳಿಸುವುದು ಸುಲಭ ಮತ್ತು ಮುಖ್ಯ. ಮೆಕಾಲೆಯು ಭಾರತದ ಮನಸ್ಥಿತಿಯನ್ನು ಬದಲಾಯಿಸಲು ಶಿಕ್ಷಣದ ಮೊರೆಹೊಕ್ಕಂತೆ ನಮ್ಮ ಬಲಪಂಥೀಯ ರಾಜಕಾರಣವು ವಿವಿಧ ವೇಷಗಳ ಮೊರೆಹೊಕ್ಕಿದೆ. ಬಹುವಚನದ ಭಾರತವನ್ನು ಏಕವಚನೀಯಗೊಳಿಸುವುದು ಈ ಹಾದಿಯ ದೊಡ್ಡ ಹೆಜ್ಜೆ. ಇದಕ್ಕೆ ಸುಲಭವಾದ ನೆಪವೆಂದರೆ ಕಳೆದ ಹತ್ತು ವರ್ಷಗಳ ಕಾಂಗ್ರೆಸ್‌ನ ದುರಾಡಳಿತ. ಜನರು ಪರದೆಯಾಚೆಗೆ ನೋಡಬಾರದ ದೃಶ್ಯವೇ ಬೇರೆ.

ಅದು ಗಾಂಧಿ ಕಂಡ ಗ್ರಾಮ ರಾಜ್ಯ; ರಾಮರಾಜ್ಯ. ಅದನ್ನು ಕಾಂಗ್ರೆಸ್ ಎಂಬ ಪರದೆಯಿಂದ ಮುಚ್ಚಿದರೆ ಎಲ್ಲವೂ ಸುಲಲಿತ. ಗಾಂಧಿ ಚರಕಾದಿಂದ ನೂಲು ತೆಗೆದರೆ ಅದು ಸ್ವರಾಜ್ಯದ ಸಂಕೇತ. ಬ್ರಿಟಿಷರನ್ನು ಧಿಕ್ಕರಿಸುವ ಹಾದಿಯ ಒಂದು ಹೆಜ್ಜೆ. ಗಾಂಧಿ ಅರೆಬತ್ತಲೆಯಾದ ಬಟ್ಟೆ ತೊಟ್ಟು ಅತ್ಯಂತ ಸರಳ ಜೀವನ ನಡೆಸಿದವರು. ಆದರೆ ಇಂದಿನವರು ಘನ ಸೂಟು-ಬೂಟು ಧರಿಸಿ ವಿಶ್ವದೆಲ್ಲೆಡೆ ಆತ್ಮಪ್ರಶಂಸೆೆಯ ಪ್ರಚಾರ ನಡೆಸಿ ಆಡಂಬರದ ಠೀವಿಯ ಬದುಕನ್ನು ಸಾಗಿಸುವಾಗ ಅಲ್ಲಿ ಗಾಂಧಿ ಎಂಬ ಬೆಳೆ ಎಲ್ಲಿ ಬೆಳೆಯಬೇಕು? ಆದ್ದರಿಂದ ಯಾರಾದರೂ ಖಾದಿ ಧರಿಸಿದರೆ, ಚರಕಾದಿಂದ ನೂಲು ತೆಗೆಯುವ ನಟನೆಯನ್ನು ಮಾಡಿದರೆ, ಅದೊಂದು ಅಶ್ಲೀಲ ಘಟನೆಯಾದೀತೇ ವಿನಾ ಆ ವ್ಯಕ್ತಿ ಗಾಂಧಿ ಮಾರ್ಗದ ಸಮೀಪವೂ ಸುಳಿಯಲಾರ. ಬದಲಾಗಿ ನಾಟಕದಲ್ಲಿ ದೇವರ ಪಾತ್ರ ವಹಿಸಿದವನು ನೇಪಥ್ಯದಲ್ಲಿ ಬೀಡಿಹಚ್ಚಿಕೊಂಡು ಸಾರಾಯಿ ಕುಡಿದಷ್ಟೇ ಆದೀತು. ನಾವು ನೆನಪಿಡಬೇಕಾದ್ದು ಅಥವಾ ನಮಗೆ ಗೊತ್ತಿರಬೇಕಾದ್ದೆಂದರೆ- ಗಾಂಧಿಯಿಂದಾಗಿ ಖಾದಿಗೆ, ಚರಕಾಕ್ಕೆ ಬೆಲೆ ಬಂತೇ ವಿನಾ ಅವುಗಳಿಂದಾಗಿ ಗಾಂಧಿಗೆ ಬೆಲೆ ಬಂದದ್ದಲ್ಲ.

ಗಾಂಧಿ ಈಗಿಲ್ಲದಿದ್ದದ್ದು ಒಳ್ಳೆಯದಾಯಿತು. ಕನ್ನಡದ ಕವಿ ಸಂಧ್ಯಾದೇವಿಯವರ ಒಂದು ಕವನ ಹೀಗಿದೆ: ಕನ್ನಡಿ ಕಪಾಟಿನೊಳಗಿದ್ದ ಅಮೃತ ಶಿಲೆಯ
ಬುದ್ಧನ ಪ್ರತಿಮೆ.
ಅಷ್ಟು ದುಡ್ಡಿದ್ದಿದ್ದರೆ ನನ್ನ ಮನೆಯ
ಕಪಾಟಿನೊಳಗೆ ಬಂದಿರುತ್ತಿತ್ತು.
ನಾನಂದು ಬಡವಳಾದದ್ದು ಎಂಥ ದೊಡ್ಡ ಭಾಗ್ಯ!
ಅದು ನನ್ನೆದೆಯ ಕವಾಟದಲ್ಲಿ
ರಕ್ತ ಮಾಂಸದಿಂದ ಕೂಡಿದ
ಜೀವಂತ ಪ್ರತಿಮೆಯಾಗಿದೆ.
ಆದ್ದರಿಂದ ಕ್ಯಾಲೆಂಡರ್ ಮಾತ್ರವಲ್ಲ ಗಾಂಧಿಯನ್ನು ಎಲ್ಲೆಡೆಯಿಂದ ಮಾಯಗೊಳಿಸುವುದು ಒಳ್ಳೆಯದು. ಅಲ್ಲಿ ಮೋದಿಯವರ ಚಿತ್ರಗಳನ್ನೇ ಪ್ರದರ್ಶಿಸಬಹುದು. ಹೇಗೂ ಹಿಟ್ಲ್ಲರನ ಅಂಚೆಚೀಟಿಯ ಫಜೀತಿಯ ಉದಾಹರಣೆಯಿದೆಯಲ್ಲ!

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)