varthabharthi

ಪ್ರಚಲಿತ

ಇದು ಬರೀ ಎಡ-ಬಲದ ಸಂಘರ್ಷವಲ್ಲ

ವಾರ್ತಾ ಭಾರತಿ : 30 Jan, 2017
ಸನತ್ ಕುಮಾರ್ ಬೆಳಗಲಿ

ಎಡ-ಬಲದ ಹೆಸರಿನಲ್ಲಿ ಧಾರವಾಡದಲ್ಲಿ ನಡೆದ ಸಾಹಿತ್ಯ ಸಂಭ್ರಮದ ಧೂಳು ಅನೇಕರ ಕಣ್ಣಿನಲ್ಲಿ ಬಿದ್ದು ಇನ್ನೂ ಕಣ್ಣೊರೆಸಿಕೊಳ್ಳುತ್ತಲೇ ಇದ್ದಾರೆ. ವಾಸ್ತವವಾಗಿ ಎಡ-ಬಲ ಸಂಘರ್ಷದ ಕಾಲಘಟ್ಟ ದಾಟಿ, ಈ ದೇಶ ಬಹಳ ಮುಂದೆ ಹೋಗಿದೆ. 70ರ ದಶಕದಲ್ಲಿ ಇಂದಿರಾ ಗಾಂಧಿ ಅವರು ಬ್ಯಾಂಕ್ ರಾಷ್ಟ್ರೀಕರಣ, ರಾಜಧನ ರದ್ದು ಮಾಡಿದಾಗ ಈ ದೇಶದಲ್ಲಿ ಎಡ-ಬಲಗಳು ರಾಜಕೀಯವಾಗಿ ಮುಖಾಮುಖಿಯಾಗಿ ನಿಂತಿದ್ದವು. ಇಂದಿರಾ ಗಾಂಧಿಯವರ ಪ್ರಗತಿಪರ ಕಾರ್ಯಗಳಿಗೆ ಕಮ್ಯುನಿಸ್ಟರು ಆಗ ಬೆಂಬಲ ನೀಡಿದ್ದರು. ಈಗ ಅದೆಲ್ಲ ಹಳೆಯ ಕತೆ. 

ಸೋವಿಯತ್ ಸಮಾಜವಾದಿ ವ್ಯವಸ್ಥೆ ಕುಸಿದು ಬಿದ್ದ ನಂತರ ಜಾಗತಿಕವಾಗಿ ಎಲ್ಲೆಡೆ ಎಡಪಂಥೀಯರಿಗೆ ಹಿನ್ನಡೆಯಾಗಿದೆ. ಈಗ ಎಲ್ಲಾ ಕಡೆಗೂ ಬಲಪಂಥೀಯ ವಿಚಾರಧಾರೆ ವಿಜೃಂಭಣೆ ನಡೆದಿದೆ. ಬಲಪಂಥವೆಂದರೆ, ಜನಸಾಮಾನ್ಯರಿಗೆ ಸೇರಬೇಕಾದ ಸಂಪತ್ತು ಸೇರಿದಂತೆ ಎಲ್ಲದರ ಮೇಲೆ ಕೆಲವೇ ಬಂಡವಾಳಶಾಹಿ ಕುಟುಂಬಗಳು ಹಿಡಿತ ಸಾಧಿಸುವುದೆಂದು ಅರ್ಥ. ಈ ಅರ್ಥದಲ್ಲಿ ಜಗತ್ತಿನ ಮುಕ್ಕಾಲು ಭಾಗ ಸಂಪತ್ತಿನ ಒಡೆತನ ಈಗ ಕಾರ್ಪೊರೇಟ್ ಕಂಪೆನಿಗಳ ಕೈಯಲ್ಲಿದೆ. ಭಾರತದ ಸಂದರ್ಭದಲ್ಲಿ ಈ ಕಾರ್ಪೊರೇಟ್ ಬಂಡವಾಳಶಾಹಿ ತನ್ನ ಹಿಡಿತ ಉಳಿಸಿಕೊಳ್ಳಲು ಕೋಮುವಾದಿ ಶಕ್ತಿಗಳೊಂದಿಗೆ ಮೈತ್ರಿ ಮಾಡಿಕೊಂಡಿದೆ. ಈ ಎರಡೂ ಅನಿಷ್ಟ ಶಕ್ತಿಗಳ ಮೈತ್ರಿಯಿಂದ ನಮ್ಮ ದೇಶದಲ್ಲಿ ಜಾತ್ಯತೀತತೆ ಮತ್ತು ಪ್ರಜಾಪ್ರಭುತ್ವಕ್ಕೆ ಗಂಡಾಂತರ ಬಂದಿದೆ. ಈಗ ನಮ್ಮೆದುರು ಇರುವ ಪ್ರಜಾಪ್ರಭುತ್ವ ಉಳಿಯಬೇಕೋ ಅಥವಾ ಅಳಿಯಬೇಕೋ ಎಂಬುದಾಗಿದೆ.

ದೇಶದ ಬಹುಮುಖಿ ಸಮಾಜವನ್ನು ನಾಶ ಮಾಡಿ, ಸಂವಿಧಾನದ ಸ್ಥಾನದಲ್ಲಿ ಮನುವಾದವನ್ನು ಪ್ರತಿಷ್ಠಾಪಿಸಲು ಹೊರಟಿರುವ ಶಕ್ತಿಗಳು ಕಾರ್ಪೊರೇಟ್ ಬಂಡವಾಳಶಾಹಿ ನೆರವಿನಿಂದ ಕೇಂದ್ರದಲ್ಲಿ ಅಧಿಕಾರ ಸೂತ್ರ ಹಿಡಿದಿವೆ. ಈ ಅಪವಿತ್ರ ಮೈತ್ರಿಯಿಂದಾಗಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಗಂಡಾಂತರ ಎದುರಾಗಿದೆ. ದಾಭೋಳ್ಕರ್, ಪನ್ಸಾರೆ ಮತ್ತು ಕಲಬುರ್ಗಿ ಹತ್ಯೆಯ ನಂತರ ಈ ಅಪಾಯ ಎಲ್ಲರ ಮನೆಬಾಗಿಲಿಗೆ ಬಂದು ನಿಂತಿದೆ. ಈ ಹಿನ್ನೆಲೆಯಲ್ಲಿ ಧಾರವಾಡ ಸಂಭ್ರಮದಲ್ಲಿ ಆರೆಸ್ಸೆಸ್ ವಿಚಾರಧಾರೆಯ ಮಂಜುನಾಥ ಅಜ್ಜಂಪುರ ಹುತಾತ್ಮ ಕಲಬುರ್ಗಿಯವರ ಬಗ್ಗೆ ಆಡಬಾರದ ಮಾತುಗಳನ್ನು ಆಡಿದಾಗ ಸಭಿಕರ ಸಾಲಿನಲ್ಲಿದ್ದ ಪ್ರಮುಖ ಸಾಹಿತಿಗಳು ಸಿಡಿದೆದ್ದರು. ಈ ರೀತಿ ಸಿಡಿದೆದ್ದವರಲ್ಲ ಎಡಪಂಥೀಯರಲ್ಲ. ಕರ್ನಾಟಕ ಕಂಡ ಹೆಸರಾಂತ ಸಂಶೋಧಕನ ಹತ್ಯೆಯಿಂದ ರೊಚ್ಚಿಗೆದ್ದಿದ್ದ ಅವರ ಶಿಷ್ಯರು ಮತ್ತು ಸ್ನೇಹಿತರು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ನಡೆಸಿದ ಕುಂ.ವೀರಭದ್ರಪ್ಪ ಹೆಸರಾಂತ ಕಾದಂಬರಿಕಾರ, ಚಪ್ಪಲ್ ಹಿಡಿದು ನಿಂತಿದ್ದ ಎಚ್.ಚಂದ್ರಶೇಖರ್ ಒಬ್ಬ ಸಂಶೋಧಕ, ಬಸವಣ್ಣನವರ ಅನುಯಾಯಿ. ಉಳಿದಂತೆ ಪ್ರತಿಭಟಿಸಿದವರೆಲ್ಲ ಕಲಬುರ್ಗಿಯವರ ಆಪ್ತ ಸ್ನೇಹಿತರು ಮತ್ತು ಶಿಷ್ಯರು. ಕಲಬುರ್ಗಿಯವರ ಹತ್ಯೆಗೆ ಬೇರೆ ಬಣ್ಣ ಕೊಡುವ ಯತ್ನ ಬರೀ ಮಂಜುನಾಥ ಅಜ್ಜಂಪುರ ಅವರಿಂದ ಮಾತ್ರ ನಡೆದಿಲ್ಲ. ಕಲಬುರ್ಗಿಯವರ ಹತ್ಯೆ ನಡೆದ ದಿನ ಕೆಲ ಹಿತಾಸಕ್ತಿಗಳು ಈ ಹತ್ಯೆಗೆ ಆಸ್ತಿ ವಿವಾದ ಕಾರಣ ಎಂಬ ಕಟ್ಟುಕತೆ ಪ್ರಚಾರ ಮಾಡುತ್ತಲೇ ಇದ್ದರು.

ಆ ದುರಂತ ಘಟನೆ ನಡೆದದ್ದು ಬೆಳಗ್ಗೆ 8:40ಕ್ಕೆ. ಟಿವಿ ಮಾಧ್ಯಮಗಳಲ್ಲಿ ಬೆಳಕಿಗೆ ಬಂದದ್ದು 9 ಗಂಟೆ ನಂತರ. 9:40ಕ್ಕೆ ಹುಬ್ಬಳ್ಳಿಯ ಎಡಪಂಥೀಯ ಸ್ನೇಹಿತರಿಗೆ ನಾನು ಫೋನ್ ಮಾಡಿದಾಗ, ಅವರೂ ಸಹ ಆಸ್ತಿ ವಿಷಯವೇ ಕಾರಣವಾಗಿರಬಹುದು ಎಂದು ಹೇಳಿದರು. ಹತ್ಯೆ ನಡೆದ ಒಂದು ಗಂಟೆಯಲ್ಲಿ ಈ ಆಸ್ತಿ ವದಂತಿ ಹಬ್ಬಿಸಿದವರು ಯಾರು ಎಂಬುದರ ಬಗ್ಗೆ ತನಿಖೆ ನಡೆಯಬೇಕಿದೆ. ಸೊಲ್ಲಾಪುರದಲ್ಲಿ ಪನ್ಸಾರೆಯವರ ಹತ್ಯೆ ನಡೆದಾಗಲೂ ಇದೇ ರೀತಿಯ ವದಂತಿ ಹಬ್ಬಿಸಲಾಯಿತು. ಅವರ ಹತ್ಯೆಗೆ ಟೋಲ್ ಮಾಫಿಯಾವೇ ಕಾರಣವೆಂದು ಬಿಂಬಿಸಲಾಯಿತು. ಆದರೆ ತನಿಖಾ ಸಂಸ್ಥೆಗಳಿಂದ ತನಿಖೆ ನಡೆದಾಗ, ಸಂಘ ಪರಿವಾರದ ಕೈವಾಡವಿದೆ ಎಂಬುದು ಬೆಳಕಿಗೆ ಬಂತು.

ವಾಸ್ತವವಾಗಿ ಈಗಿರುವುದು ಪ್ರಜಾಪ್ರಭುತ್ವದ ಉಳಿವಿನ ಪರವಾಗಿರುವ ಮತ್ತು ಅದರ ನಾಶಕ್ಕೆ ಹೊರಟಿರುವ ಶಕ್ತಿಗಳ ನಡುವಿನ ಸಂಘರ್ಷ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಆಗಿರುವ ಗಂಡಾಂತರದ ಬಗ್ಗೆ ಸಂಭ್ರಮದಲ್ಲಿ ಚರ್ಚೆ ನಡೆಯಬೇಕಿತ್ತು. ಆದರೆ ಗಿರಡ್ಡಿಯವರ ತಲೆಯಲ್ಲಿ ಎಡ ಬಲದ ಹುಳವನ್ನು ಯಾರು ಬಿಟ್ಟರೋ ಗೊತ್ತಿಲ್ಲ. ಆದರೆ ಇತ್ತೀಚೆಗೆ ಅವರು ಅದನ್ನು ಬಲವಾಗಿ ಪ್ರತಿಪಾದಿಸುತ್ತ ಬಂದರು. ಎಡಪಂಥೀಯರು ಈಗ ದೇಶದ ಪ್ರಭಾವಿ ರಾಜಕೀಯ ಶಕ್ತಿಯಾಗಿ ಉಳಿದಿಲ್ಲ. ಸಂಸತ್ತಿನಲ್ಲೂ ಅವರ ಸಂಖ್ಯೆ ಕಡಿಮೆಯಾಗಿದೆ. ಹೀಗಿರುವಾಗ ಸಂಘ ಪರಿವಾರದ ವಿರೋಧಿಗಳನ್ನೆಲ್ಲ ಎಡಪಂಥೀಯರು, ನಕ್ಸಲೀಯರೆಂದು ಬಾಯಿ ಮುಚ್ಚಿಸುವ ಹುನ್ನಾರ ಈ ದೇಶದಲ್ಲಿ ನಡೆದಿದೆ. ಸಂಘ ಪರಿವಾರವನ್ನು ವಿರೋಧಿಸುವವರು ಬರೀ ಎಡಪಂಥೀಯರಲ್ಲ. ಭಾರತದ ಬಹುಮುಖಿ ಸಮಾಜದಲ್ಲಿ ನಂಬಿಕೆಯಿಟ್ಟಿರುವ ಗಾಂಧಿವಾದಿಗಳು, ಲೋಹಿಯಾವಾದಿಗಳು, ಅಂಬೇಡ್ಕರ್‌ವಾದಿಗಳು, ಬಸವಣ್ಣನವರ ಅನುಯಾಯಿಗಳು ಮತ್ತು ಶತಮಾನಗಳಿಂದ ತುಳಿತಕ್ಕೊಳಗಾದ ದಲಿತ ಸಮುದಾಯದವರು ದೇಶದ ಮೇಲೆ ಮನುವಾದ ಹೇರಲು ಹೊರಟಿರುವ ಸಂಘ ಪರಿವಾರವನ್ನು ವಿರೋಧಿಸುತ್ತಿದ್ದಾರೆ.

ಸಂಘ ಪರಿವಾರವನ್ನು ವಿರೋಧಿಸುವವರೆಲ್ಲ ಎಡಪಂಥೀಯರೆಂದು ಬಿಂಬಿಸುವ ಬಾಯ್ಮುಚ್ಚಿಸುವ ಕುತಂತ್ರ ಈ ದೇಶದಲ್ಲಿ ನಡೆದಿದೆ. ಸುಲಭವಾಗಿ ಬಾಯ್ಮುಚ್ಚಿಕೊಳ್ಳದಿದ್ದರೆ ನಕ್ಸಲೀಯರೆಂದು, ದೇಶದ್ರೋಹಿಗಳೆಂದು ಬ್ರ್ಯಾಂಡ್ ಮಾಡಲಾಗುತ್ತಿದೆ. ರೋಹಿತ್ ವೇಮುಲಾ ಇಂತಹ ಹುನ್ನಾರಕ್ಕೆ ಬಲಿಯಾದರು. ಪ್ರತಿಷ್ಠಿತ ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ನಾಯಕ ಕನ್ಹಯ್ಯಾಕುಮಾರ್ ದೇಶದ್ರೋಹದ ಆರೋಪದ ಮೇಲೆ ಜೈಲಿಗೆ ಹೋಗಿ ಬಂದರು. ಆದರೆ ಈ ಆರೋಪಗಳೆಲ್ಲ ಸುಳ್ಳೆಂದು ಕೇಂದ್ರ ಸರಕಾರದ ತನಿಖಾ ಸಂಸ್ಥೆಗಳೇ ಸ್ಪಷ್ಟಪಡಿಸಿವೆ.

ಈ ವಾಸ್ತವ ಸಂಗತಿಗಳನ್ನು ಮುಚ್ಚಿಹಾಕಲು ಸಂಘ ಪರಿವಾರದ ಕೆಲ ಶಕ್ತಿಗಳು ಗಿರಡ್ಡಿ ಗೋವಿಂದರಾಜ ಅವರನ್ನು ಬಳಸಿಕೊಂಡವು. ಗಿರೀಶ್ ಕಾರ್ನಾಡ್ ಅವರು ಸಲಹೆಗಾರರಾಗಿ ಮುನ್ನಡೆಸಿದ ಧಾರವಾಡದ ಮನೋಹರ ಗ್ರಂಥಮಾಲೆ ಕೆಲವರು ಮತ್ತು ಪೂರ್ವಾಶ್ರಮದಲ್ಲಿ ಆರೆಸ್ಸೆಸ್ ಕತೆಗಾರರಾಗಿದ್ದ ಒಬ್ಬರು ಗಿರಡ್ಡಿಯವರನ್ನು ಮುಂದೆ ಮಾಡಿ, ಈ ಅವಾಂತರಕ್ಕೆ ಕಾರಣರಾದರು. ಸಂಘ ಪರಿವಾರ ಕೇಂದ್ರ ಸರಕಾರದ ಮೇಲೆ ಹಿಡಿತ ಸಾಧಿಸಿದ ನಂತರ ಎಡಪಂಥೀಯರು ಮಾತ್ರವಲ್ಲ ಎಲ್ಲಾ ಉದಾರವಾದಿ ದನಿಗಳನ್ನು ಹತ್ತಿಕ್ಕಲಾಗುತ್ತಿದೆ. ಸಂವಿಧಾನದ ಚೌಕಟ್ಟು ಮೀರುವ ಯತ್ನ ಪದೇ ಪದೇ ನಡೆಯುತ್ತಿದೆ.

ಈ ಬಾರಿ ಗಣರಾಜ್ಯೋತ್ಸವ ಸಂದರ್ಭದಲ್ಲಿ ನೀಡಿದ ಪದ್ಮಭೂಷಣ, ಪದ್ಮಶ್ರೀ ಮುಂತಾದ ಪ್ರಶಸ್ತಿಗಳಿಗೆ ಆಯ್ಕೆಯಾದವರ ಜಾತಿ ಬಗ್ಗೆ ಮಾತನಾಡುವುದಿಲ್ಲ. ಆದರೆ ಪ್ರಶಸ್ತಿ ಪಡೆದವರಲ್ಲಿ ಕರ್ನಾಟಕ ಮೂಲದ ಸಂಸ್ಕಾರ ಭಾರತೀಯ ಸಿ.ಎಚ್.ಕೃಷ್ಣಶಾಸ್ತ್ರಿ ಕೂಡ ಒಬ್ಬರು. ಈ ಸಂಸ್ಕಾರ ಭಾರತಿ ಎಂಬುದು ಆರೆಸ್ಸೆಸ್‌ನ ಅಂಗ ಸಂಘಟನೆ. ಕೃಷ್ಣಶಾಸ್ತ್ರಿ ಅದರ ಪೂರ್ಣಾವಧಿ ಕಾರ್ಯಕರ್ತ. ಇವರ ಬಗ್ಗೆ ಇನ್ನಷ್ಟು ವಿವರ ಬೇಕೆಂದರೆ, ಇತ್ತೀಚೆಗೆ ಮಠಾಧೀಶರೊಬ್ಬರಿಂದ ಅತ್ಯಾಚಾರಕ್ಕೆ ಒಳಗಾದರೆನ್ನಲಾದ ಮಹಿಳೆಯ ಪತಿಯ ಸಹೋದರ. ಇವರಿಗೆ ಯಾವ ಮಾನದಂಡದ ಮೇಲೆ ಪ್ರಶಸ್ತಿ ನೀಡಲಾಯಿತೋ ಗೊತ್ತಿಲ್ಲ.

ಜನಾಂಗ ದ್ವೇಷವನ್ನು ಪ್ರತಿಪಾದಿಸುವ ಲೇಖಕರನ್ನು ಹೆಗಲ ಮೇಲೆ ಹೊತ್ತು ಕುಣಿಯುವ ಹೊಸ ಫ್ಯಾಶನ್ ಈಗ ಶುರುವಾಗಿದೆ. ಎಸ್.ಎಲ್.ಭೈರಪ್ಪನವರಿಗೆ ನೊಬೆಲ್ ಪ್ರಶಸ್ತಿ ಕೊಡಬೇಕೆಂದು ಕಸಾಪ ಅಧ್ಯಕ್ಷ ಮನು ಬಳಿಗಾರ್ ಹೇಳಿದ್ದಾರೆ. ಹೀಗೆ ಸಾರಸ್ವತ ಲೋಕದಲ್ಲಿ ಏನೇನೋ ನಡೆಯುತ್ತಿದೆ.

ಈಗ ನಮ್ಮ ಮುಂದಿರುವುದು ಎಡ-ಬಲಗಳ ಸಂಘರ್ಷವಲ್ಲ. ಡಾ. ಅಂಬೇಡ್ಕರ್ ರೂಪಿಸಿದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಸಿಕೊಳ್ಳುವುದು ನಮ್ಮ ಆದ್ಯತೆಯಾಗಬೇಕಿದೆ. ಯಾಕೆಂದರೆ, ಈಗ ಗಂಭೀರ ಸ್ವರೂಪದ ಸವಾಲು ಎದುರಾಗಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ. ಅಡಾಲ್ಫ್ ಹಿಟ್ಲರ್‌ನ ಆರಾಧಕರಾಗಿದ್ದ ಆರೆಸ್ಸೆಸ್‌ನ ಎರಡನೆ ಸರಸಂಘಚಾಲಕ ಗೋಳ್ವಾಲ್ಕರ್ ಅವರ ವಿಚಾರಗಳಿಂದ ಪ್ರಭಾವಿತರಾದ ನರೇಂದ್ರ ಮೋದಿ ಈಗ ದೇಶದ ಪ್ರಧಾನಿಯಾಗಿದ್ದಾರೆ. ಹಿಟ್ಲರ್ ಮಾದರಿ ವ್ಯಕ್ತಿತ್ವ ಹೊಂದಿದವರು ಭಿನ್ನಮತವನ್ನು ಸಹಿಸುವುದಿಲ್ಲ. ಗುಜರಾತ್‌ನಲ್ಲಿ ತಮ್ಮ ಪಕ್ಷದೊಳಗಿನ ಭಿನ್ನಮತ ಹತ್ತಿಕ್ಕಿ ಅವರು ಮುಖ್ಯಮಂತ್ರಿಯಾದರು. ಈ ಸರ್ವಾಧಿಕಾರಿ ವ್ಯಕ್ತಿತ್ವದ ಭಕ್ತರ ಪಡೆ ಅತ್ಯಂತ ಅಪಾಯಕಾರಿಯಾಗಿದೆ. ಎಡಪಂಥೀಯರನ್ನು ಮಾತ್ರವಲ್ಲ ತಮ್ಮ ನಾಯಕರನ್ನು ವಿರೋಧಿಸುವ ಎಲ್ಲರನ್ನೂ ಅವರು ದ್ವೇಷಿಸುತ್ತಾರೆ. ಅರವಿಂದ್ ಕೇಜ್ರಿವಾಲ್ ಎಡಪಂಥೀಯರಲ್ಲ. ಆದರೆ ಅವರು ಮೋದಿಯವರನ್ನು ವಿರೋಧಿಸುತ್ತಾರೆ ಎಂಬ ಕಾರಣಕ್ಕಾಗಿ ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ವಿವಿಧೆಡೆ ಹಲ್ಲೆಗಳು ನಡೆದವು. ಕೆಲ ಕಡೆ ಮುಖಕ್ಕೆ ಮಸಿ ಬಳಿದರೆ, ಇನ್ನೂ ಕೆಲ ಕಡೆ ಅವರ ಮೇಲೆ ಚಪ್ಪಲಿ ಎಸೆಯಲಾಯಿತು. ನ್ಯಾಯಾಲಯಕ್ಕೆ ವಿಚಾರಣೆಗೆ ಬಂದಿದ್ದ ಕನ್ಹಯ್ಯೆಕುಮಾರ್ ಮೇಲೆ ಇದೇ ರೀತಿ ಹಲ್ಲೆ ನಡೆಯಿತು. ಮಹಾರಾಷ್ಟ್ರದಲ್ಲಿ ಕಾಲೇಜುವೊಂದಕ್ಕೆ ಉಪನ್ಯಾಸ ನೀಡಲು ಬಂದಿದ್ದ ಖ್ಯಾತ ಸಿನೆಮಾ ನಿರ್ದೇಶಕ ಆನಂದ ಪಟವರ್ಧನ್ ಮತ್ತು ಕ್ರಾಂತಿಕಾರಿ ಗಾಯಕಿ ಶೀತಲ್ ಸಾಠೆ ಮಾತನಾಡದಂತೆ ತಡೆಯಲಾಯಿತು. ಇಂತಹ ನೂರಾರು ಉದಾಹರಣೆಗಳನ್ನು ಕೊಡಬಹುದು.

ಈ ಅಸಹನೆ ಎಂಬುದು ಸಂಘ ಪರಿವಾರದ ರಕ್ತಗುಣವಾಗಿದೆ. ಮೂರು ದಶಕಗಳ ಹಿಂದೆ 80ರ ದಶಕದಲ್ಲಿ ಸೀತಾಯನ ಪುಸ್ತಕ ಬರೆದ ಪೋಲಂಕಿ ರಾಮಮೂರ್ತಿಯವರ ಮೇಲೆ ಶಿವಮೊಗ್ಗದ ಕಾಲೇಜಿನಲ್ಲಿ ಇದೇ ರೀತಿ ಹಲ್ಲೆ ನಡೆದಿತ್ತು. ಅವರು ಭಾಷಣ ಮಾಡುತ್ತಿದ್ದಾಗ, ವೇದಿಕೆಗೆ ನುಗ್ಗಿದ ಎಬಿವಿಪಿ ಕಾರ್ಯಕರ್ತರು ನೆಲಕ್ಕೆ ಕೆಡವಿ ಬಡಿದಿದ್ದರು. ಆಗ ಎಬಿವಿಪಿ ನಾಯಕರಾಗಿದ್ದ ಆಯನೂರು ಮಂಜುನಾಥ್ ಈಗ ಬಿಜೆಪಿ ಸಂಸದರು. ಈ ಅಸಹನೆ ಈ ದೇಶದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರನ್ನು ಮತ್ತು ದಾಭೋಳ್ಕರ್, ಪನ್ಸಾರೆ ಮತ್ತು ಕಲಬುರ್ಗಿಯವರನ್ನು ಬಲಿ ತೆಗೆದುಕೊಂಡಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಕೇರಳದಲ್ಲಿ ನಿತ್ಯವೂ ನಡೆಯುತ್ತಿರುವ ಕಗ್ಗೊಲೆಗಳು ಅಲ್ಲಿ ಆತಂಕದ ವಾತಾವರಣವನ್ನೇ ಸೃಷ್ಟಿಸಿವೆ.

ಅಂತಲೇ ಈಗ ನಮ್ಮ ಮುಂದಿರುವುದು ಎಡ-ಬಲದ ಪ್ರಶ್ನೆಯಲ್ಲ. ನಮ್ಮ ಬದುಕು ಮತ್ತು ಮಾತನಾಡುವ ಸ್ವಾತಂತ್ರದ ಪ್ರಶ್ನೆ ನಮ್ಮೆದುರಿಗಿದೆ. ಈ ಸಂವಿಧಾನ ನಮಗೆ ಮಾತನಾಡುವ ಸ್ವಾತಂತ್ರ್ಯ ನೀಡಿದೆ. ಸಂವಿಧಾನದ ಅಡಿಪಾಯದ ಮೇಲೆ ಪ್ರಜಾಪ್ರಭುತ್ವ ಎದ್ದು ನಿಂತಿದೆ. ಆದರೆ ಈ ಭಾರತವನ್ನು ಮನುವಾದಿ ಹಿಂದೂ ರಾಷ್ಟ್ರ ಮಾಡಲು ಹೊರಟವರಿಗೆ ಈ ಸಂವಿಧಾನ ಪ್ರಮುಖ ಅಡ್ಡಿಯಾಗಿದೆ. ಅಂತಲೇ ಅದನ್ನು ನಾಶ ಮಾಡುವ ಮಸಲತ್ತು ನಡೆದಿದೆ. ಹಿಟ್ಲರ್ ಚುನಾವಣೆ ಮೂಲಕ ಅಧಿಕಾರಕ್ಕೆ ಬಂದು ಜನತಂತ್ರವನ್ನು ನಾಶಪಡಿಸಿದ. ಅದೇ ಹುನ್ನಾರ ಇಲ್ಲಿ ನಡೆಯುತ್ತಿದೆ. ಆದ್ದರಿಂದ ಪ್ರಜಾಪ್ರಭುತ್ವದ ರಕ್ಷಣೆ ನಮ್ಮ ಮೊದಲ ಆದ್ಯತೆ ಆಗಬೇಕಿದೆ.

ಬಾಬಾ ಸಾಹೇಬರು ನೀಡಿದ ಸಂವಿಧಾನ ಈ ದೇಶದ ದಲಿತರಿಗೆ, ಮಹಿಳೆಯರಿಗೆ, ಅಲ್ಪಸಂಖ್ಯಾತರಿಗೆ ಮತ್ತು ಎಲ್ಲಾ ಜಾತಿಯ ಬಡವರಿಗೆ ಧ್ವನಿ ನೀಡಿದೆ. ಇದನ್ನು ನಾಶ ಮಾಡಲು ಹೊರಟರೆ, ಈ ದೇಶದ ದುಡಿಯುವ ಜನ ಸುಮ್ಮನಿರುವುದಿಲ್ಲ ಎಂಬುದನ್ನು ಮನುವಾದಿಗಳು ತಿಳಿದುಕೊಳ್ಳಬೇಕಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)