varthabharthi

ನನ್ನೂರು ನನ್ನ ಜನ

ಕತ್ತಲೆಯ ದಾರಿಯಲ್ಲಿ ಧೈರ್ಯವೇ ಬೆಳಕು

ವಾರ್ತಾ ಭಾರತಿ : 1 Feb, 2017
ಚಂದ್ರಕಲಾ ನಂದಾವರ

ಬಿಜೈಯಿಂದ ದೇರೆಬೈಲ್‌ಗೆ ನನ್ನ ಮನೆ ಬದಲಾದುದು ಹೇಳಿಕೊಂಡಿದ್ದೇನೆ. ಪಿ.ಯು.ಸಿ. ಅನುತ್ತೀರ್ಣಳಾಗಿದ್ದಾಗ ಮುಂದಿನ ಪರೀಕ್ಷೆಯ ತಯಾರಿಯೊಂದಿಗೆ ಟೈಲರಿಂಗ್ ಹಾಗೂ ಹಿಂದಿ ತರಗತಿಗೆ ಸೇರಿಕೊಂಡಿದ್ದೂ ಆಗಿದೆ. ಪಿ.ಯು.ಸಿ. ಉತ್ತೀರ್ಣಳಾದ ಸಂದರ್ಭದಲ್ಲೇ ಮಂಗಳೂರಿನ ಸ್ನಾತಕೋತ್ತರ ಕೇಂದ್ರದಲ್ಲಿ ಪ್ರಾರಂಭವಾದ ಒಂದು ವಿಶೇಷ ಕೋರ್ಸ್ ಕನ್ನಡ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್. ಇದು ಸಂಜೆಯ ತರಗತಿಗಳು. ಸಂತ ಅಲೋಶಿಯಸ್ ಕಾಲೇಜಿನಲ್ಲಿ ಈ ಎಲ್ಲಾ ವಿಷಯಗಳು ನನ್ನ ಬದುಕಿನಲ್ಲಿ ವೈಯಕ್ತಿಕವಾಗಿ ಬದಲಾವಣೆಗಳನ್ನು ತಂದವುಗಳು.

ಇದು ಸುಮಾರು ಎರಡು ಎರಡೂವರೆ ವರ್ಷಗಳ ನನ್ನ ದೇರೆಬೈಲ್‌ನ ವಾಸದ ಅವಧಿಯಲ್ಲಿ. ಈ ಸಂದರ್ಭಗಳನ್ನೆಲ್ಲಾ ನೆನಪಿಸಿಕೊಂಡಾಗ ಹಿಂದೆಯೇ ನನ್ನೊಳಗೆ ಇದ್ದ ಧೈರ್ಯ ಆತ್ಮ ವಿಶ್ವಾಸಗಳು ಮತ್ತೆ ಹೆಚ್ಚಾಯಿತು ಎನ್ನುವುದರೊಂದಿಗೆ ಅದಕ್ಕೆ ಕಾರಣಗಳು ಕೌಟುಂಬಿಕವಾದುದರ ಜತೆಗೆ ಸಾಮಾಜಿಕವಾದವುಗಳು ಕೂಡಾ ಇದೆ. ಸಮಾಜ ಎಂದ ಮೇಲೆ ಯಾವ ಕಾಲದಲ್ಲೇ ಆಗಲಿ ಧನಾತ್ಮಕವಾದ ಹಾಗೂ ಋಣಾತ್ಮಕವಾದ ಅಂಶಗಳು ಇದ್ದೇ ಇರುತ್ತದೆ. ಅವುಗಳನ್ನು ನಾವು ಹೇಗೆ ನಿಭಾಯಿಸುತ್ತೇವೆ ಎನ್ನುವುದಲ್ಲಿ ನಮ್ಮ ವ್ಯಕ್ತಿತ್ವ ಪ್ರಕಟವಾಗುತ್ತದೆ ಎನ್ನುವುದು ನನ್ನ ತಿಳುವಳಿಕೆ.

ಮಧ್ಯಾಹ್ನದ 2 ಗಂಟೆಯ ಟೈಲರಿಂಗ್ ತರಗತಿಗೆ ಹೋಗಲು ದೇರೆಬೈಲ್ ನಿಂದ ದಡ್ಡಲ್ ಕಾಡಿಗೆ ಇದ್ದ ಒಳ ರಸ್ತೆ ದೇರೆಬೈಲ್ ಚರ್ಚ್ ಪಕ್ಕದ ಓಣಿಯಿಂದ ಶುರುವಾಗಿ ಮತ್ತೆ ಈಗಿನ ಪ್ರಶಾಂತ ನಗರದಿಂದ ಹಾದು ನೆಕ್ಕಿಲಗುಡ್ಡೆ ಬುಡದಲ್ಲಿ ಮುಂದುವರಿದು ಹೈವೇ ದಾರಿ ಸೇರುತ್ತಿತ್ತು. ಅಂದಿನ ಪ್ರಶಾಂತನಗರ ಇಂದಿನಂತೆ ನಗರವಾಗಿರಲಿಲ್ಲ. ಶುರುಚಲು ಗಿಡ ಪೊದೆಗಳ ಜತೆಗೆ ಸಾಗುವಾನಿಮರಗಳು ಇನ್ನಿತರ ಮರಗಳು ಇದ್ದು ಕತ್ತಲೆಯ ದಾರಿ ಎಂದರೆ ತಪ್ಪಲ್ಲ. ಮುಂದಿನ ಹಾದಿಯೂ ಕೂಡಾ ಮಳೆಗಾಲದ ನೀರು ಹರಿಯುವ ಓಣಿ. ಅಕ್ಕ ಪಕ್ಕದಲ್ಲಿ ದೊಡ್ಡ ದೊಡ್ಡ ಹಿತ್ತಲುಗಳು. ಅವುಗಳ ನಡುವೆ ಮನೆಗಳು ಹಿತ್ತಲು ತುಂಬಾ ಮಾವಿನ, ಹಲಸಿನ ಮರಗಳು. ಮನೆಯೊಳಗಿನ ಮಂದಿ ಮಧ್ಯಾಹ್ನ ಉಂಡು ನಿದ್ದೆ ಮಾಡುವ ಸಮಯ. ದೊಡ್ಡ ದೊಡ್ಡ ನಾಯಿಗಳೂ ಇರುತ್ತಿತ್ತು. ಇಂತಹ ದಾರಿಯಲ್ಲಿ ನಡೆವಾಗ ಪ್ರಾಣಿಗಳ ಭಯವಿರಲಿಲ್ಲ. ಭಯವಿದ್ದುದು ಮನುಷ್ಯರ ಅದರಲ್ಲೂ ಪುರುಷರ ಅಂದರೆ ಗಂಡಸರ ಬಗೆಗಿನ ಭಯ. ಯಾಕೆಂದರೆ ಬಿಜೈಯಲ್ಲಿ ಶೇಂದಿ ಶರಾಬು ಅಂಗಡಿಗಳು ಇರಲಿಲ್ಲ ಎಂದಿದ್ದೆ. ಇದ್ದ ಶೇಂದಿ ತಯಾರಿಸುವ ಮನೆಯಲ್ಲೂ ಕುಡುಕರು ಬಂದು ಹೋಗುತ್ತಿದ್ದರೂ ಬೀದಿಯಲ್ಲಿ ತೂರಾಡುವವರನ್ನು, ಯಾರನ್ನೋ ಬೈಯುವವರನ್ನು, ಬೀದಿಯಲ್ಲಿ ಜಗಳ ಮಾಡುವವರನ್ನು ಕಂಡಿರಲಿಲ್ಲ. ಆದರೆ ಇಲ್ಲಿ ಅಂತಹ ಸಭ್ಯ ವಾತಾವರಣ ಇರಲಿಲ್ಲ. ಅಲ್ಲದೆ ಇಲ್ಲಿ ಕುಡುಕರ ಜತೆಗೆ ಕಾಮುಕರು ಸಾಕಷ್ಟು ಸಂಖ್ಯೆಯಲ್ಲಿ ಇದ್ದರು.

ದೇರೆಬೈಲ್ ಬಸ್ ನಿಲ್ದಾಣದ ಪಕ್ಕದಲ್ಲೇ ಶರಾಬು ಸೇಂದಿ ಅಂಗಡಿ ಇತ್ತು. ಆ ಕಡೆಗೆ ಕಣ್ಣು ಹಾಯಿಸಿ ನೋಡುವ ಧೈರ್ಯ ಇಲ್ಲದಿದ್ದರೂ ಅಲ್ಲಿರುವವರು ಯಾರು ಎಂದು ಜಾಣ್ಮೆಯಿಂದ ತಿಳಿದುಕೊಂಡಿದ್ದೆ. ಕುಡುಕರಲ್ಲಿ ಯುವಕರೂ, ಮುದುಕರೂ ಇದ್ದರು. ಎಲ್ಲಾ ಜಾತಿಗಳವರೂ ಇದ್ದರು. ಮುಖ್ಯವಾದ ಎರಡು ಧರ್ಮಗಳ ಜನರೂ ಇದ್ದರು. ಇಲ್ಲಿಯೂ ಮುಸ್ಲಿಂ ಜನವರ್ಗದವರು ಇರಲಿಲ್ಲ ಎನ್ನುವುದು ಕೂಡಾ ವಿಶೇಷವೇ. ಕುಡುಕರಿಂದ ಹೆಚ್ಚು ಹಾನಿ ಇರುತ್ತಿರಲಿಲ್ಲ. ಆದರೆ ನಾವು ಹೆಣ್ಣು ಮಕ್ಕಳು ಹೆದರಿಕೊಳ್ಳುತ್ತಿದ್ದೆವು. ಆದರೆ ಇವರಿಗಿಂತ ಅಪಾಯಕಾರಿ ಕಾಮುಕರು. ಕಾಮುಕರು ಯಾರೆಂದು ಕೇಳಿದರೆ ಆಶ್ಚರ್ಯ ಪಡುವಿರಿ. ಯಾರೂ ಯುವಕರಾಗಿರಲಿಲ್ಲ ಗ್ರಹಸ್ಥರು, ಹಿರಿಯರು ಅಂದರೆ ಮುದುಕರು. ಹೆಣ್ಣು ಮಕ್ಕಳಿರುವ ತಂದೆಯಂದಿರು, ಸೊಸೆಯರಿರುವ ಮಾವಂದಿರು. ಇಲ್ಲೂ ನಾನು ಹೇಳಲೇ ಬೇಕಾದ ಸತ್ಯ ಯಾರೂ ಕ್ರಿಶ್ಚಿಯನ್ ಮಂದಿ ಇರಲಿಲ್ಲ ಎನ್ನುವುದು.

ದಡ್ಡಲ್ ಕಾಡಿಗೆ ಕತ್ತಲ ಓಣಿಯಲ್ಲಿ ಹೋಗುವಾಗ ಧೈರ್ಯಕ್ಕೆ ದೇವರನ್ನು ನೆನಪಿಸಿಕೊಂಡೇ ಒಬ್ಬಳೇ ಹೋಗುತ್ತಿರುವಾಗ ಕಾಮುಕರು ಎಂದೇ ಊರಿಗೂ ತಿಳಿದಿದ್ದ ಹಿರಿಯರು ಸಿಕ್ಕು ವಿಶಿಷ್ಟವಾದ ನಗು ನಕ್ಕರೆ ಮೊದಲು ನಗುವ ಧೈರ್ಯ ವಿರುತ್ತಿರಲಿಲ್ಲ. ಮನೆಗೆ ಬಂದು ವಿಷಯ ತಿಳಿಸಿದಾಗ ಅಪ್ಪನಿಗೆ ಅವರು ಪರಿಚಿತರು ಮತ್ತು ಅವರ ಸ್ವಭಾವದ ಹಿನ್ನಲೆ ತಿಳಿದಾಗ ಒಂದಿಷ್ಟು ಧೈರ್ಯ ತುಂಬಿಕೊಂಡಿತು. ಅವರು ಜತೆಗೆ ನಡಿಗೆಗೆ ಸಿಕ್ಕರೆ ಏನಪ್ಪಾ ಮಾಡುವುದು? ಎಂಬುದಕ್ಕೆ ನಾನು ಕಂಡುಕೊಂಡ ದಾರಿ ಎಂದರೆ, ಅಪ್ಪನಿಗೆ ತಿಳಿದಿರುವವರೆಂದರೂ ನನಗೆ ಅವರು ಯಾರು ಅವರ ಹೆಸರೇನು ಎಂದು ತಿಳಿದಿಲ್ಲ ತಾನೇ? ಆದ್ದರಿಂದ ಅವರು ಸಿಕ್ಕಾಗ ನಾನೇ ನಮಸ್ತೆ ಎಂದು ಗೌರವ ತೋರಲು ಶುರುಮಾಡಿದೆ. ಅವರ ಹೆಸರು ಕೇಳಿ ತಿಳಿದುಕೊಂಡೆ. ಬಳಿಕ ‘‘ಬಹುಶ: ನಿಮಗೆ ನನ್ನ ತಂದೆಯವರು ಪರಿಚಿತರಿರ ಬೇಕಲ್ಲಾ’’ ಎಂಬ ಪೀಠಿಕೆಯೊಂದಿಗೆ ಅವರಲ್ಲಿ ಮಾತು ಶುರು ಮಾಡಿ ಬಿಟ್ಟೆ. ಪರಿಣಾಮ ಏನಾಯ್ತು ಎನ್ನುವುದರ ಬಗ್ಗೆ ಕುತೂಹಲವಿರಬೇಕು ನಿಮಗೆ. ನಾನು ನೀಡಿದ ಗೌರವ ಅವರು ಉಳಿಸಿಕೊಳ್ಳಲೇಬೇಕಲ್ಲವೇ? ಯಾಕೆಂದರೆ ಇವರಿಗೆ ನಾನು ನಮಸ್ಕರಿಸುತ್ತೇನೆ ಎಂಬ ನಿರೀಕ್ಷೆಯೂ ಇರುವುದಿಲ್ಲ. ಹಾಗೆ ಆಕಸ್ಮಿಕವಾದ ಸಂದರ್ಭದಲ್ಲಿ ಅವರಿಗೆ ಪೋಲಿ ಮಾತುಗಳನ್ನಾಡುವ ಧ್ಯೆರ್ಯಬರಲಾರದು ಎಂಬ ನನ್ನ ಭಾವನೆ ಸತ್ಯವಾಯಿತು. ಅವರ ಕುಟುಂಬ ಸಂಸಾರದ ವಿಚಾರ ಮಾತನಾಡುತ್ತಾ ನಾನು ದಾರಿ ಸವೆಸಿದರೆ ಅಂತಹ ದೂರ ಏನಲ್ಲ. ಅವರನ್ನು ಅವರ ಹೆಸರಿನೊಂದಿಗೆ ಗೌರವಿಸಿ ಮಾತನಾಡಿದೆ ಎಂದಾಗ ಉಳಿದ ಹೆಣ್ಣು ಮಕ್ಕಳೆಲ್ಲಾ ‘‘ಅಯ್ಯೋ ಮಾರಾಯ್ತಿ ನೀನ್ಯಾಕೆ ಮಾತನಾಡ ಹೊರಟೆ. ಅವರು ಹೀಗೆ, ಹಾಗೆ’’ ಎಂದವರಿಗೆ ‘‘ನಾನು ಯಾರೆಂದು ತಿಳಿದವರಿಗೆ ನನ್ನಲ್ಲಿ ಹಾಗೆ ವರ್ತಿಸಲು ಸಾಧ್ಯವಿಲ್ಲ’’ ಎಂದು ಸಮಜಾಯಿಷಿ ಕೊಟ್ಟೆ. ಅವರಿಗೆ ಗೌರವ ಕೊಡುವುದರ ಮೂಲಕ ನಾನು ಗೌರವದ ರಕ್ಷಣೆ ಪಡೆದುಕೊಂಡು ದಾರಿ ಸವೆಸಿದೆ. ಟೈಲರಿಂಗ್ ನನ್ನ ಆಸಕ್ತಿಯ ವಿಷಯವಲ್ಲ. ಬದುಕಿಗೆ ಆಧಾರ ಯಾವುದಾಗುತ್ತದೆಯೋ ಎಂಬ ಅರಿವಿಲ್ಲದ ಆ ದಿನಗಳಲ್ಲಿ ಟೈಲರಿಂಗ್ ಕಲಿಯಲು ಹೋದ ದಾರಿ ನನಗೆ ಒಳಗೊಳಗೆ ಧೈರ್ಯ ತುಂಬಿದ್ದಂತೂ ನಿಜ. ಹೊಸ್ತಿಲಿಂದ ಹೊರಗೆ ಕಾಲಿಡಬೇಕಾದ ಹೆಣ್ಣು ಮಕ್ಕಳು ತಮ್ಮ ರಕ್ಷಣೆಗೆ ತಮ್ಮದೇ ಆದ ತಂತ್ರಗಾರಿಕೆಯನ್ನು ಖಂಡಿತ ಕಲಿಯಬೇಕು ಎನ್ನುವುದು ನನ್ನ ಅಭಿಪ್ರಾಯ. ಈ ಧೈರ್ಯ ನನ್ನನ್ನು ರಾತ್ರಿ ಕಾಲೇಜಿಗೆ ಸೇರುವುದಕ್ಕೂ ಪ್ರೇರಣೆ ನೀಡಿತು. ಟೈಲರಿಂಗ್ ಕ್ಲಾಸ್ ಮುಗಿಸಿ, ಹಿಂದಿ ತರಗತಿಗಳು, ಅದನ್ನು ಮುಗಿಸಿ ಸಂತ ಅಲೋಶಿಯಸ್ ಕಾಲೇಜಿನ ಆರು ಗಂಟೆಯ ತರಗತಿಗೆ ಹೋಗುತ್ತಿದ್ದೆ. ರಾತ್ರಿ ಎಂಟು ಗಂಟೆಗೆ ತರಗತಿ ಮುಗಿಸಿ ಬಾವುಟ ಗುಡ್ಡೆಯ ರಸ್ತೆಯಿಂದಿಳಿದು ವಿಶ್ವಭವನದ ಬಸ್ ನಿಲ್ದಾಣಕ್ಕೆ ಬಂದರೆ ಕಾವೂರಿಗೆ ಹೋಗುವ ಕೊನೆಯ ಟ್ರಿಪ್‌ನ ಹದಿನೇಳು ನಂಬರ್ ಬಸ್ಸು ಒಮ್ಮಿಮ್ಮೆ ಕಾದಿರುತ್ತಿತ್ತು, ಆ ಬಸ್ಸ್ಸಿನಲ್ಲಿ ನನ್ನ ಗೆಳತಿ ವರದಾಳನ್ನು ಕರೆದೊಯ್ಯಲು ಬಾರುವ ಅವಳ ತಮ್ಮ ಬಸ್ಸು ಹತ್ತಿದರೆ, ಅವರಿಬ್ಬರೂ ಲಾಲ್‌ಬಾಗಲ್ಲಿ ಇಳಿಯುತಾರೆ. ಬಸ್ಸಲ್ಲಿ ಜನ ತುಂಬಿರುತ್ತಿದ್ದರು.

ಮಾರ್ಕೆಟ್ಟಿನಿಂದ ಹಿಂದಿರುಗುವ ಹೂವಿನ ಬಾಯಮ್ಮನವರು ಇಬ್ಬರು ಮೂವರು ಇರುತ್ತಿದ್ದರು. ಅವರು ಬಾಳೆ ಬೈಲಲ್ಲಿ ಇಳಿದರೆ ಮತ್ತೆರಡು ನಿಲ್ದಾಣಗಳವರೆಗೆ ನಾನೊಬ್ಬಳೇ. ನನಗೆ ಭಯ ಎನ್ನುವುದು ಅಳುಕಾಗಿತ್ತೇ ಹೊರತು ಅದನ್ನು ಮೀರಿರಲಿಲ್ಲ. ಜತೆಗೆ ಬಸ್ಸಿನಲ್ಲಿದ್ದವರಿಗೆಲ್ಲಾ ನಾನು ಯಾರೆಂಬುದು ಗೊತ್ತಿತ್ತು. ನನ್ನ ಅಪ್ಪ ಆ ಬಸ್ಸಿನಲ್ಲಿದ್ದ ಅನೇಕರಿಗೆ ಅಧ್ಯಾಪಕರಾಗಿದ್ದವರು. ಜತೆಗೆ ದಿನಾ ಬರುತ್ತಿದ್ದುದರಿಂದ ಒಂದು ರೀತಿಯ ರಕ್ಷಣಾ ಭಾವನೆ ನನ್ನಲ್ಲಿತ್ತು. ತಂದೆಯವರ ಗೌರವ ನನ್ನನ್ನು ರಕ್ಷಿಸುತ್ತಿತ್ತು. ಆ ಬಸ್ಸು ತಪ್ಪಿದರೆ ಕುಂಟಿಕಾನ್ ಜಂಕ್ಷನ್‌ನಲ್ಲಿ ಕೊನೆಯ ನಿಲ್ದಾಣ ಹೊಂದಿರುವ 28 ನಂಬ್ರ ಬಸ್ಸು ಇರುತ್ತಿತ್ತು. ಒಮ್ಮಿಮ್ಮೆ ಈ ಬಸ್ಸು ಕೂಡಾ ತಪ್ಪುತ್ತಿತ್ತು. ಆಗ ನಡೆದು ಕೊಂಡು ಬರುವಾಗ ದಾರಿಯಲ್ಲಿ ನಡೆದೇ ಹೋಗುವವರು ಯಾರಾದರೂ ಇರುತ್ತಿದ್ದರು. ಅವರನ್ನು ಮಾತನಾಡಿಸಿಕೊಂಡು ಹೋಗುವ ರೂಢಿ ಮಾಡಿಕೊಂಡಿದ್ದೆ. ಇಂತಹ ವೇಳೆಯಲ್ಲಿ ಒಮ್ಮೆಮ್ಮೆ ಹೂವಿನ ಬಾಯಮ್ಮನವರು ಜತೆಯಾಗುತ್ತಿದ್ದರು. ಅವರಲ್ಲಿ ಒಬ್ಬರು ಬಾಳೆಬೈಲಿನ ಅಗ್ಗಿ ಬಾಯಿ. ಇನ್ನಿಬ್ಬರು ದೇರೆಬೈಲಿನವರು. ಹೆಸರು ಮರೆತಿದ್ದೇನೆ. ಆದರೆ ಆ ದಿನಗಳನ್ನು ನೆನಪಿಸಿಕೊಂಡರೆ ಇಂದು ಆಶ್ಚರ್ಯವಾಗುತ್ತಿದೆ. ನನ್ನ ಬದುಕು ನಾನು ರೂಪಿಸಿಕೊಳ್ಳಲೇ ಬೇಕೆಂಬ ಹಟದಲ್ಲಿ ಈ ನಡಿಗೆ, ಈ ಧೈರ್ಯ ಸಾಧ್ಯವಾಯಿತು ಜತೆಗೆ ಇಂದಿನಂತೆ ವಾತಾವರಣ ಕೆಟ್ಟಿಲ್ಲ ಎನ್ನಬೇಕೇ ಎನ್ನುವ ಯೋಚನೆ ಬಂದಾಗ ಇಂದು ಕೂಡಾ ಧ್ಯೆರ್ಯದಿಂದ ಹಾದಿ ಸವೆಸುವವರಿಗೆ, ದಾರಿ ತಪ್ಪದೆ ಇರುವ ಎಚ್ಚರ ಇದ್ದವರಿಗೆ ಬಹುಶ: ಕಾಲ ಕೆಟ್ಟಿಲ್ಲ ಎಂದೇ ತಿಳಿಯುತ್ತೇನೆ. ಅಂದ ಹಾಗೆ ಆಗ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಸಂಜೆ ಪದವಿ ಕಾಲೇಜು ಪ್ರಾರಂಭವಾಗಿತ್ತು. ಅದರ ವಿದ್ಯಾರ್ಥಿಗಳೂ ಒಮ್ಮಾಮ್ಮೆ ನಡಿಗೆಗೆ ಜತೆಯಾಗುತ್ತಿದ್ದರು ಈ ರಾತ್ರಿ ಕಾಲೇಜಿನ ನಡಿಗೆ ನನ್ನ ಬದುಕಿಗೆ ಹೊಸ ತಿರುವು ನೀಡಿತು. ಜತೆಗೆ ನನ್ನೊಳಗೆ ಧೈರ್ಯ ತುಂಬಿತು. ನನ್ನ ಓಣಿಯಲ್ಲಿ ನಡೆದಾಗ ಕುಡುಕರು ತೂರಾಡುತ್ತಾ ಕಾಲೆಳೆಯುತ್ತಾ ತಮ್ಮ ಮನೊಳಗೆ ಹೋಗುತ್ತಿದ್ದರೆ ಅವರು ಯಾರು ಎಂದು ತಿಳಿದಿದ್ದರೆ ಅವರು ಹೆಸರು ಹಿಡಿದು

‘‘ಏನು.... ಅಣ್ಣಾ ಇನ್ನೂ ಮನೆಗೆ ಹೋಗಿಲ್ಲವಾ?’’ ಎಂಬ ಪ್ರಶ್ನೆಯೇ ನನಗೆ ದಾರಿ ಬಿಟ್ಟು ಬದಿಗೆ ಸರಿದು ನಿಲ್ಲುವಂತೆ ಮಾಡುತ್ತಿತ್ತು. ಅಂದರೆ ಆ ಊರಿನ ಕುಡುಕರಿಗೂ, ಕಾಮುಕರಿಗೂ ಕೂಡಾ ಒಂದು ನಿಯತ್ತು ಇತ್ತು. ಆ ದಿನಗಳಲ್ಲಿ ಇಂದು ಅಂತಹ ನಿಯತ್ತು ಕಾಣುವುದು ಅಸಾಧ್ಯ ಎನ್ನಲಾರೆ ನಾವು ಅವರನ್ನು ಅವರು ಕುಡಿಯದೆ ಇರುವ ವೇಳೆಯಲ್ಲಿ ಅವರ ಬಗ್ಗೆ ತೋರುವ ಆದರ, ಗೌರವ, ಪ್ರೀತಿ, ವಿಶ್ವಾಸಗಳು ಅವರು ಕುಡಿದಿದ್ದಾಗಲೂ ಅವರನ್ನು ನಿಯಂತ್ರಿಸುತ್ತವೆ ಎನ್ನುವುದು ನಾನು ಅರ್ಥ ಮಾಡಿಕೊಂಡ ವಿಷಯವೇ. ತೀರಾ ಕೆಳವರ್ಗದ, ಕಾರ್ಮಿಕ ವರ್ಗದ ಜನರಿದ್ದ ದೇರೆಬೈಲ್‌ನಲ್ಲಿ ಒಂದೆರಡು ಕ್ರಿಶ್ಚಿಯನ್ ಮನೆಗಳನ್ನು ಬಿಟ್ಟರೆ ಎಲ್ಲರೂ ಕಾರ್ಮಿಕರೇ. ಇನ್ನೂ ಕೆಲವರು ಕೆಳಮಧ್ಯಮ ವರ್ಗದವರು ಶಾಲೆ, ಸರಕಾರಿ ಕಚೇರಿಗಳಲ್ಲಿ ನೌಕರರು ಇದ್ದ ಊರು. ಬಡತನ, ಅನಕ್ಷರತೆ, ಅಜ್ಞಾನಗಳೇ ತುಂಬಿದ್ದ ಊರಲ್ಲಿ ವಿದ್ಯಾವಂತರು ಕೆಲವರು ಮಾತ್ರ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)