varthabharthi

ಅನುಗಾಲ

ಕನ್ನಡ ಭಾಷಾ ಪ್ರಭೇದಗಳು

ವಾರ್ತಾ ಭಾರತಿ : 2 Feb, 2017
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಮಣ್ಣಿನ ಸುವಾಸನೆ, ಮಣ್ಣಿನ ದುರ್ವಾಸನೆ ಅಂತಾ ಪದವನ್ನು ಉಪಯೋಗಿಸುವುದಿಲ್ಲ. ಹೀಗೆ ವಾಸನೆ ಅನ್ನುವಂತಹ ಪದವನ್ನು ಉಪಯೋಗಿಸಿಕೊಂಡು ಅದನ್ನು ಹೇಗೆ ಬೇಕೋ ಹಾಗೆ ನಾವು ಬಳಸಿಕೊಳ್ಳೋಣ. ಗಂಧ ಕಳ್ಳ ಸಾಗಣೆಯಾಗುವ ಈ ಕಾಲದಲ್ಲಿ ಭಾಷೆಯಲ್ಲಾದರೂ ಗಂಧದ ನಾಡು ಸೃಷ್ಟಿಯಾಗಲಿ!

ಒಂದು ಭಾಷೆಗೆ ಪ್ರಭೇದ ಇರಲೇಬೇಕು. ಇಲ್ಲದಿದ್ದರೆ ಅದು ಭಾಷೆಯೆಂದು ಅನಿಸಿಕೊಳ್ಳಲು ಸಾಧ್ಯ ಇಲ್ಲ. ಶುದ್ಧ ಭಾಷೆ ಇತ್ತು ಅಂತಾ ಇದುವರೆಗೆ ನನಗೆ ಅನ್ನಿಸಿಲ್ಲ. ನನಗೆ ಶುದ್ಧ ಅನ್ನುವುದು ಇನ್ನೊಬ್ಬರಿಗೆ ಅಶುದ್ಧ. ಅವರಿಗೆ ಶುದ್ಧ ಅನ್ನತಕ್ಕದ್ದು ಮತ್ತೊಬ್ಬರಿಗೆ ಅಶುದ್ಧ. ಉತ್ತರ ಕರ್ನಾಟಕದವರಿಗೆ ದಕ್ಷಿಣ ಕನ್ನಡದ್ದು ಅಶುದ್ಧವಾದರೆ ದಕ್ಷಿಣದವರಿಗೆ ಉತ್ತರದ್ದು ಅಶುದ್ಧ. ಹೀಗಾಗಿ ಪರಸ್ಪರರ ಭಾಷಾ ವಿಶೇಷಗಳತ್ತ ಗಮನ ಹರಿಸಿ ನಾವು ನಗೆಪಾಟಲುಗಳನ್ನು ಮತ್ತಿತ್ಯಾದಿಗಳನ್ನು ಯೋಚನೆ ಮಾಡುತ್ತೇವೆಯೇ ವಿನಹ ಭಾಷೆಯ ಲಕ್ಷಣಗಳನ್ನು ಗಂಭೀರವಾಗಿ ಅಥವಾ ಸ್ವಲ್ಪ ವಿಶಾಲ ಭಾವದಿಂದ ಗಮನಿಸುವುದಿಲ್ಲ. ಹೀಗೆ ಗಮನಿಸುವವರೆಗೆ ಈ ಯಾವ ಪ್ರಭೇದಗಳೂ ಭಿನ್ನವಾಗಿ ಕಾಣುವುದಿಲ್ಲ. ಇನ್ನೂ ಮುಂದಕ್ಕೆ ಹೇಳುವುದಾದರೆ ಇಂಗ್ಲಿಷ್ ಲ್ಯಾಟಿನ್‌ನ ಪ್ರಭೇದ ಆಗಬೇಕಾಗಿತ್ತು. ಆದರೆ ಅದೂ ಭಾಷೆ ಆಗಿದೆಯಲ್ಲ! ನಾವು ಇವತ್ತು ತುಳು ಮತ್ತು ಕೊಡವ ಇವನ್ನು ಕನ್ನಡ ಭಾಷೆಯ ಪ್ರಭೇದಗಳು ಅಂತಾ ಕರೆಯುವುದಿಲ್ಲ. ಅಲ್ಲಿ ಅನೇಕ ಕನ್ನಡ ಪದಗಳಿವೆ. ಕೊಡಗು ಭಾಷೆಯ ಸುಮಾರು 60-70 ಶೇಕಡಾ ಪದಗಳು ಕನ್ನಡದ್ದೇ; ಅಥವಾ ಮಲೆಯಾಳ ಇಲ್ಲವೇ ತಮಿಳಿನದ್ದು. ಆದರೆ ಕೊಡಗು ಭಾಷೆಯನ್ನು ತಮಿಳಿನ ಪ್ರಭೇದವೆಂದು ಕರೆಯುವುದಿಲ್ಲ; ಮಲೆಯಾಳದ ಪ್ರಭೇದವೆಂದೂ ಕರೆಯುವುದಿಲ್ಲ. ಯಾವುದೇ ದ್ರಾವಿಡ ಭಾಷೆ ಒಂದು ಇನ್ನೊಂದರ ಪ್ರಭೇದವೆಂದು ಕರೆಯುವುದಿಲ್ಲ. ಉಪಭಾಷೆಯೆಂದೂ ಕರೆಯಲಾಗದು, ಕರೆಯಬಾರದು ಅಂತ ಸ್ಪಷ್ಟವಾಗಿ ಕೆಲವು ವರ್ಷಗಳ ಹಿಂದೆ ನಾನೇ ಒಂದು ಲೇಖನದಲ್ಲಿ ಬರೆದಿದ್ದೆ. ತುಳು ಸಾಹಿತ್ಯ ಚರಿತ್ರೆಯಲ್ಲಿಯೂ ಕೂಡ ನಾನು ತುಳು ಮತ್ತು ಕೊಡಗು ಭಾಷೆಗಳನ್ನು ಕನ್ನಡದ ಉಪಭಾಷೆಗಳೆನ್ನುವುದನ್ನು ವಿರೋಧಿಸಿ ಬರೆದಿದ್ದೆ. ಭಾಷೆ ಶುದ್ಧವಾಗಿ ಇರುವುದಿಲ್ಲವೆಂದು ಹೇಳಿದೆ.

ಆದರೆ ಇವತ್ತಿಗೂ ಏನಾಗಿದೆಯೆಂದರೆ ನಾವು ಪ್ರತಿಯೊಬ್ಬರೂ ಕೂಡ ‘ನಾವು ಶುದ್ಧ’ ಎಂಬ ಹಠದಿಂದ ಭಾಷೆಯನ್ನು ಬಳಸಿ ಒಂದು ಥರದಲ್ಲಿ ನಮಗೇ ನಾವು ಶುದ್ಧೀಕರಣ ಮಾಡಿಕೊಳ್ಳುತ್ತಾ ಇದ್ದೇವೆ. ಶುದ್ಧ ಸಸ್ಯಾಹಾರ ಅಂತ ಇದ್ದದ್ದಕ್ಕೆ ನಾನು ‘‘ಇದೇನಪ್ಪ?’’ ಎಂದು ಒಬ್ಬರಲ್ಲಿ ಕೇಳಿದೆ. ಈ ಶುದ್ಧ ಸಸ್ಯಾಹಾರ ಅಂದರೇನು, ಸಸ್ಯಾಹಾರ ಅಂದರೆ ಸಸ್ಯಾಹಾರ. ಪುನಃ ಶುದ್ಧ ಯಾಕೆ? ‘ಇಲ್ಲಿ ಪಾನ ನಿಷೇಧ ಕಡ್ಡಾಯವಾಗಿ ನಿಷೇಧಿಸಲಾಗಿದೆ’ ಎಂಬ ಫಲಕವನ್ನು ನೀವು ನೋಡಿರಬಹುದು. ನಿಷೇಧಿಸಲಾಗಿದೆ ಎಂದರೆ ಅದೇ ಅರ್ಥ; ಪುನಃ ಕಡ್ಡಾಯವಾಗಿ ನಿಷೇಧಿಸಲಾಗಿದೆ ಅಂದರೇನು? ನಮ್ಮ ಭ್ರಷ್ಟ ವ್ಯವಸ್ಥೆಯಲ್ಲಿ ಸ್ವಲ್ಪ ರಿಯಾಯತಿ ಕೊಟ್ಟು ನಿಷೇಧಿಸುವುದೂ ಇದೆ, ಹಾಗೆ ಸಸ್ಯಾಹಾರದಲ್ಲಿ ಸ್ವಲ್ಪ ರಿಯಾಯಿತಿ ಕೊಟ್ಟು ಸ್ವಲ್ಪಮಾಂಸಾಹಾರಕ್ಕೆ ಅವಕಾಶವಿದೆಯೇನೋ? ಉದಾಹರಣೆಗೆ ಮೀನಿಗೆ ಕೆಲವು ಢೋಂಗಿ ಸಸ್ಯಾಹಾರಿಗಳು ಸಮುದ್ರ-ಬಾಳೆಕಾಯಿ ಅಂತ ಹೆಸರಿಟ್ಟಂತೆ ಹೀಗೆ ಏನಾದರೂ ಇದೆಯೇನೋ ಮತ್ತು ಇದನ್ನು ಭಾಷೆಗೂ ಅನ್ವಯಿಸುತ್ತೇವೇನೋ ಎಂಬ ಆತಂಕ ನನಗಿದೆ. ಹಾಗಾಗಿ ಎಲ್ಲವನ್ನೂ ‘‘ಇದು ಶುದ್ಧ ಅಲ್ಲ, ಇದು ಅಶುದ್ಧ’’ ಎಂಬ ರೀತಿಯ ಕಲ್ಪನೆಗಳನ್ನು ಮಾಡುತ್ತೇವೆ.

ಅಂದರೆ ಭಾಷೆಯಲ್ಲಿ ಶುದ್ಧ ಅಶುದ್ಧ ಇರಲು ಸಾಧ್ಯವಿಲ್ಲ. ನಾವು ಕಲ್ಪನೆ ಮಾಡಿಕೊಂಡ ಹಾಗೆ ಅಮ್ಮ ಅಪ್ಪಎಂದು ಹೇಳಿದರೆ ಏಕ ವಚನ ಬಳಸಿದರೆ ಅದು ಊರುಗನ್ನಡ; ನನ್ನ ತಂದೆ ತಾಯಿಗಳೇ ಎಂದರೆ ಶುದ್ಧ ಕನ್ನಡ! ನನ್ನ ಸಂಬಂಧಿಕರೊಬ್ಬರು ‘‘ನಾಳೆ ನನ್ನ ತಂದೆಯವರ ತಿಥಿ’’ ಎಂದು ಹೇಳುತ್ತಾರೆ. ನಾನು ಅಪ್ಪನ ತಿಥಿ ಅಂತ ಹೇಳಲಿಕ್ಕೆ ಆಗ್ತಾಯಿರ್ಲಿಲ್ಲವಾ’’ ಎಂದು ಕೇಳಿದೆ. ಸುಲಭವಾಗಿ ಅಪ್ಪಎಂದು ಕರೀತಾರೆ, ಇನ್ನೊಬ್ಬರ ಹತ್ತಿರ ಹೇಳುವಾಗ ‘‘ನನ್ನ ತಂದೆಯವರ ತಿಥಿ’’ ಎಂದು ಹೇಳುತ್ತಾರೆ. ‘ನನ್ನ ತಂದೆಯವರಿಗೆ’ ತಿಥಿ ಮಾಡಿ-ಬಿಡಿ; ‘ಅಪ್ಪ’ನಿಗೆ ತಿಥಿ ಮಾಡಬೇಡಿ ಎಂದು ಹೇಳಿದೆ. ಹೀಗೆ ಭಾಷೆಯನ್ನು ನಾವು ಬೇರೆ ಬೇರೆ ರೀತಿಯಲ್ಲಿ ಪ್ರಯೋಗ ಮಾಡುವುದರಲ್ಲಿಯೇ ಅದರ ವೈಶಿಷ್ಠ ಇದೆ. ಕೊಡಗು, ದಕ್ಷಿಣ ಕನ್ನಡ-ಉಡುಪಿ, ಬಳ್ಳಾರಿ, ಬಿಜಾಪುರ ಅಥವಾ ಮೈಸೂರು ಈ ಪ್ರದೇಶಗಳ ಜನರು ಒಟ್ಟು ಸೇರಿದಾಗ ಆಯಾಯ ಭಾಷೆಯ ಆ ಗಂಧ- ಅದನ್ನ ಸುಗಂಧವೆಂದೂ ಹೇಳಲಾಗದು; ದುರ್ಗಂಧವೆಂದೂ ಹೇಳಲಾಗದು. ಏಕೆಂದರೆ ಅನೇಕ ಪದಗಳನ್ನು ಲೇವಡಿ-ತಮಾಷೆ ಮಾಡಿದಾಗ ದುರ್ಗಂಧವೆಂದು ಹೇಳುತ್ತೇವೆ. ಅದನ್ನ ಮೆಚ್ಚಿಕೊಂಡರೆ ಸುಗಂಧ ಆಗುತ್ತದೆ. ಹೀಗಾಗಿ ಸೊಗಡು ಅನ್ನುವುದಕ್ಕೆ ನಾನು ಸರಿಯಾದ ಪದವನ್ನು ಹೇಳುವುದು ನಮ್ಮಲ್ಲಿ ಅಡಗಿರುವ ಮಣ್ಣಿನ ವಾಸನೆಯದ್ದು. ಮಣ್ಣಿನ ಸುವಾಸನೆ, ಮಣ್ಣಿನ ದುರ್ವಾಸನೆ ಅಂತಾ ಪದವನ್ನು ಉಪಯೋಗಿಸುವುದಿಲ್ಲ. ಹೀಗೆ ವಾಸನೆ ಅನ್ನುವಂತಹ ಪದವನ್ನು ಉಪಯೋಗಿಸಿಕೊಂಡು ಅದನ್ನು ಹೇಗೆ ಬೇಕೋ ಹಾಗೆ ನಾವು ಬಳಸಿಕೊಳ್ಳೋಣ. ಗಂಧ ಕಳ್ಳ ಸಾಗಣೆಯಾಗುವ ಈ ಕಾಲದಲ್ಲಿ ಭಾಷೆಯಲ್ಲಾದರೂ ಗಂಧದ ನಾಡು ಸೃಷ್ಟಿಯಾಗಲಿ!

ಮೂಗು ಮುಚ್ಚಿಕೊಂಡು ಹೋಗುವ ರೀತಿಯಲ್ಲಿ ಕೂಡ ಭಾಷೆಯನ್ನು ಪ್ರಯೋಗ ಮಾಡಬಹುದು ಅಥವಾ ಮೂಗನ್ನು ಅರಳಿಸಿಕೊಂಡು ಕಣ್ಣನ್ನು, ಹೃದಯವನ್ನು, ಮನಸ್ಸನ್ನು ತೆರೆದಿಟ್ಟುಕೊಳ್ಳುವಂತಹ ರೀತಿಯಲ್ಲಿಯೂ ಕೂಡ ಭಾಷೆಯನ್ನು ಉಪಯೋಗಿಸಬಹುದು. ನಾವು ಹೇಗೆ ಉಪಯೋಗಿಸುತ್ತೇವೆ. ಅನ್ನುವುದು ಮುಖ್ಯ; ಮತ್ತು ಆ ಭಾಷೆಯು ಕೊನೆಗೂ ಇರುವುದು ಇನ್ನೊಬ್ಬರನ್ನು ತಲುಪುವುದಕ್ಕೆ ಮಾತ್ರ ಎಂದು ಗೊತ್ತಿರಬೇಕು. ಬಹುಶಃ ಇಡೀ ಕರ್ನಾಟಕದಾದ್ಯಂತ ಇವತ್ತು ನೀವು ಒಂದು ಸಾಮಾನ್ಯವಾದ ಕನ್ನಡ ಇದೇ ಎಂದು ಯಾವುದನ್ನು ಹೇಳುತ್ತೀರಿ? ರಾಜ್ ಕುಮಾರ್‌ರವರು ಕರ್ನಾಟಕಕ್ಕೆ ಒಂದೇ ರೀತಿಯ ಭಾವ ತಂದು ಕೊಡುವ ಒಂದು ಭಾಷೆಯನ್ನು ಉಪಯೋಗಿಸಿದರು ಎಂದು ಒಮ್ಮೆ ಯು.ಆರ್.ಅನಂತಮೂರ್ತಿಯವರು ಹೇಳಿದರು. ಎಲ್ಲಿ ಉಪಯೋಗಿಸಿದರು ಹೇಗೆ ಉಪಯೋಗಿಸಿದರು ಎಂಬ ಸಾಂದರ್ಭಿಕ ವಿವರಣೆ ನೀಡಲಿಲ್ಲ. ರಾಜ್‌ಕುಮಾರ್ ಅವರ ಸುಮಾರು 60-70ಕ್ಕೂ ಹೆಚ್ಚು ಸಿನೆಮಾ ನೋಡಿದರೂ ಕೂಡ ನನಗೆ ಈ ಒಂದೇ ಕನ್ನಡ ಭಾಷೆ ಯಾವುದು ಅಂತಾ ಗೊತ್ತಾಗಿಲ್ಲ. ಅಲ್ಲೆಲ್ಲ ಭಾಷೆ ಬೇರೆ ಬೇರೆ ಥರದಲ್ಲಿದೆ. ಹೆಚ್ಚಾಗಿ ಅವರು ಮೈಸೂರು ಸೀಮೆಯವರನ್ನು ಪ್ರೀತಿಸಿದರು ಅಂತ ನಾನು ನಂಬುತ್ತೇನೆ.

ಇಡೀ ಕರ್ನಾಟಕಕ್ಕೆ ಸಂಬಂಧಪಟ್ಟ ಹಾಗೆ ಏಕೈಕ ಕನ್ನಡ ಅಂತ ನನಗೆ ಅನ್ನಿಸಿದ್ದು ಇಂಗ್ಲಿಷ್ ಕನ್ನಡ, ಇನ್ನು ಯಾವುದು ಕೂಡಾ ಎಲ್ಲಾ ಕಡೆ ಇಲ್ಲ. ಮತ್ತು ಅತಿ ಹೆಚ್ಚು ಜನ ಇವತ್ತು ಮಾತನಾಡುತ್ತಿರುವುದು ಇಂಗ್ಲಿಷ್ ಕನ್ನಡ ಅಥವಾ ಕಂಗ್ಲಿಷ್. ‘‘ಯಾವಾಗ ಬಂದಿರಿ?’’ ಎಂದು ಕೇಳಿದರೆ ‘‘ನಿನ್ನೆ ಆಫ್ಟರ್‌ನೂನ್ ಫೈವ್ ಓ ಕ್ಲಾಕಿಗೆ ಬಂದೆ’’ ಅಂತ ಹೇಳುತ್ತಾರೆ. ಅದರಲ್ಲಿ ನಿನ್ನೆ ಮತ್ತು ಬಂದೆ ಎರಡು ಪದಗಳು ಮಾತ್ರ ಕನ್ನಡದ್ದು- ಉಳಿದದ್ದೆಲ್ಲ ಇಂಗ್ಲಿಷ್. ಈ ಸ್ಥಿತಿಯಲ್ಲಿ ನಾವು ಇದ್ದೇವೆ. ನಮ್ಮ ಊರಿನ ನಾನು ಚಿಕ್ಕಂದಿನಲ್ಲಿ ಮಾತನಾಡಿದ ಭಾಷೆಯನ್ನು ಮರೆಯಲು ಸಾಧ್ಯವಾಗುವುದಿಲ್ಲ. ಅದನ್ನು ಬಿಟ್ಟು ನಾನು ಮಾತನಾಡಲು ಸಾಧ್ಯವಿಲ್ಲ. ನನ್ನ ಅಮ್ಮ ಹೇಳಿಕೊಟ್ಟಂತಹ ಮಾತುಗಳು ಮತ್ತೆ ಮತ್ತೆ ನೆನಪಿಗೆ ಬರುತ್ತವೆ; ಅದೂ ದೇವರಿಗೆ ಅಡ್ಡ ಬೀಳುವಾಗ! ಅಡ್ಡ ಬೀಳುವುದು ಎಂಬ ಪದವನ್ನು ಹೇಳುತ್ತೇವೆ. ನಮಸ್ಕಾರ ಮಾಡುವುದು ಎಂಬ ಪದವನ್ನು ನಾವು ಕೆಲವು ಕಡೆ ಹೇಳುವುದಿಲ್ಲ. ಅಡ್ಡ ಅಂದರೆ ಹೇಗೆ ಅಡ್ಡ ಮಾಡುವುದು ಎಂದು ಯೋಚಿಸುತ್ತೀರಾ? ಆಮೇಲೆ ಇವತ್ತು ಇನ್ನೊಬ್ಬರಿಗೆ ಅಡ್ಡ ಹಾಕುತ್ತೇವೆ. ಹಾಗಾಗಿ ನಮ್ಮ ನಮ್ಮ ಭಾಷೆಗಳನ್ನು ನಾವು ಮನೆಯಲ್ಲಿ ಮಾತನಾಡಿದ್ದನ್ನು ಹೊರಗೂ ಉಪಯೋಗಿಸಲಿಕ್ಕೆ ಸಾಧ್ಯವಾದರೆ ಒಳ್ಳೆಯದು.

ನಮ್ಮ ಅನೇಕ ಕಡೆಗಳಲ್ಲಿ ಗೋಷ್ಠಿಗಳು ಸೇರಿದಾಗಲೆಲ್ಲಾ ನಮಗೆ ಗೊತ್ತಾಗುತ್ತದೆ: ವಿದ್ಯಾವಂತರೆಲ್ಲಾ ಬುದ್ಧಿವಂತರಲ್ಲ ಎಂಬ ಸತ್ಯವನ್ನು ಬುದ್ಧಿ ಎನ್ನುವುದು ಪ್ರತ್ಯೇಕವಾದುದು; ಮನುಷ್ಯನನ್ನು ತಲುಪಬೇಕಾದದ್ದು. ಮನುಷ್ಯನ ಒಳಿತನ್ನು ಬಯಸಬೇಕಾದದ್ದು. ಮನುಷ್ಯನ ಹಿತಕ್ಕಾಗಿ ನಾವು ಮಾಡಬೇಕಾದದ್ದು; ಅದು ಬುದ್ಧಿ. ಆದರೆ ಅದನ್ನು ಉಪಯೋಗಿಸುವುದೇ ಇಲ್ಲ. ಇದರಿಂದಾಗಿ ಎಲ್ಲವನ್ನು ಕೂಡ ನಾವು ಹತ್ತಾರು ಜನ ವಿಶ್ವ ಪಂಡಿತರು ಎಳೆದಾಡಿ-ಹಿಂಜಿ ಹಿಂಜಿ ಕೂದಲು ಸೀಳಿ ಬೇರೆ ಬೇರೆ ಕಡೆ ತೆಗೆದುಕೊಂಡು ಹೋಗಿ ಅದನ್ನು ಒಟ್ಟಾಗಿಸುವ ಪ್ರಯತ್ನಮಾಡುತ್ತೇವೆ; ಹೀಗೆ ಮಾಡುವಾಗ ಕೂಡ ಬೇರೆ ಬೇರೆ ಕಡೆ ಅದನ್ನು ಮಾನ ಸಹಿತ ಮಾರುತ್ತೇವೆ ಅನ್ನುವ ಆತಂಕ ಕೂಡ ನನಗೆ ಇದೆ. ನಾವು ಎಲ್ಲೇ ಹೋಗಲಿ ಇಂದು ಭಾಷೆಯ ಬಗ್ಗೆ ‘‘ಬಿ ಎ ರೋಮನ್ ವೈಲ್ ಇನ್ ರೋಮ್’’ ಅನ್ನುವ ಮಾತನ್ನು ಒಪ್ಪಬೇಕಾಗಿದೆ. ಒಂದು ಕಡೆ ಹೋದಾಗ ಅಲ್ಲಿಯ ಭಾಷೆಯನ್ನು ಕಲಿತುಕೊಂಡು ಅವರ ಜೊತೆಯಲ್ಲಿ ಇರಬೇಕು. ಅದಕ್ಕೆ ನಾವು ಡಿವಿಜಿಯವರನ್ನು ನೆನಪು ಮಾಡುತ್ತೇವೆ: ‘‘ಎಲ್ಲರೊಳಗೊಂದಾಗು ಮಂಕುತಿಮ್ಮ’’ ಎಂದು ಡಿ.ವಿ.ಜಿ. ಹೇಳಿದರು. ಅಂದರೆ ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗಿ ಬದುಕಿದಾಗ ನನ್ನ ಮೂಲದ ಭಾಷೆಯನ್ನು ಬಳಸಿದರೆ ನಾನು ಹೊಸ ಊರಿನಲ್ಲಿ, ಪರಿಸರದಲ್ಲಿ, ಪರಕೀಯನಾಗುತ್ತೇನೆ. ಅವರ ಭಾಷೆಯನ್ನು ಪ್ರಯೋಗ ಮಾಡಲು ಉದ್ಯುಕ್ತನಾದರೆ ಅಲ್ಲಿ ಸ್ವಕೀಯನಾಗುತ್ತೇನೆ. ನನ್ನದನ್ನು ಮರೆಯುತ್ತೇನೆ. ನನ್ನ ಸ್ವಂತಿಕೆ ಹೊರಟು ಹೋಗುತ್ತದೆ. ವೈಶಿಷ್ಟ್ಯವೇ ಇರುವುದಿಲ್ಲ. ಒಂದು ರೀತಿಯ ಕುಂಡದ ಗಿಡದ ಹಾಗೆ. ಸುಂದರವಾಗಿದೆ; ಆದರೆ ನೆಲದ ಹಂಗಿಲ್ಲ.

ಕವಿರಾಜಮಾರ್ಗದ ಕವಿಗೆ ಕಾವೇರಿಯಿಂದ ಗೋದಾವರಿಯವರೆಗೆ ಮಾತ್ರ ಕನ್ನಡದ ನಾಡು, ಅಲ್ಲೇ ಅವನ ಬದುಕು. ಪಂಪನಿಗೆ ಹುಟ್ಟು ಸಾವು ಮತ್ತೆ ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಹುಟ್ಟುವುದೂ ನಂದನದೊಳ್ ಬನವಾಸಿಯೊಳ್.

ಇಂದು ಬದುಕು ನಮ್ಮ ಊರಿನೊಳಗೆ ಇಲ್ಲ, ನಮ್ಮ ಗ್ರಾಮದೊಳಗೆ ಇಲ್ಲ. ನಮ್ಮ ರಾಜ್ಯ-ದೇಶದ ಮಿತಿಯಲ್ಲೂ ಇಲ್ಲ. ಅದು ವಿಶ್ವವ್ಯಾಪಿ. ಜಾಗತೀಕರಣ ಆರಂಭವಾಗುವ ಮೊದಲೇ ಭಾಷೆ ಜಾಗತೀಕರಣದ ಪ್ರಭಾವಕ್ಕೆ ತುತ್ತಾಗಿತ್ತು. ಇಂದು ನಾವು ವಿಶ್ವಾದ್ಯಂತ ಪ್ರವಾಸ ಮಾಡಬೇಕಾಗುತ್ತದೆ. ಇಡೀ ಚರಿತ್ರೆ ಅಲ್ಲೇ ಇದ್ದರೂ ಇವತ್ತು ಆ ಥರದ ಯೋಚನೆ ಮಾಡಲು ಸಾಧ್ಯವಿಲ್ಲ. ಯಾವುದೇ ಪ್ರದೇಶದ ಒಂದು ಘಾಟು ನಾವು ಕಲಿತುಕೊಳ್ಳಬೇಕಾದರೆ ಅಲ್ಲಿ ಹೋಗಿದ್ದಾಗ ಮಾತ್ರ. ಇಲ್ಲದಿದ್ದರೆ ಅದರ ಅಗತ್ಯ ಬೀಳುವುದಿಲ್ಲ.

ಭಾಷೆ ಎಷ್ಟೇ ಸುಂದರವಾಗಿರಲಿ-ಈ ಇಬ್ಬಂದಿತನದಲ್ಲಿಯೇ ನಾವು ಬದುಕು ಪೂರ್ತಿ ಬಳಲುತ್ತೇವೇನೋ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)