varthabharthi

ಅನುಗಾಲ

ಸಾಹಿತ್ಯೋತ್ಸವಗಳು

ವಾರ್ತಾ ಭಾರತಿ : 8 Feb, 2017
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಈ ಸಾಹಿತ್ಯೋತ್ಸವಗಳು ತಾತ್ವಿಕ ಇಲ್ಲವೇ ಸೈದ್ಧಾಂತಿಕ ನೆಲೆಗಳನ್ನು ಚರ್ಚಿಸುವ ಗೋಜಿಗೆ ಹೋಗಿರುವುದರಿಂದ ಅಲ್ಲೀಗ ರಾಜಕಾರಣಿಗಳು, ಸಿನಿಮಾ ತಾರೆಯರು, ಕ್ರೀಡಾಪಟುಗಳು, ಸಂಗೀತ ಕಲಾನಿಧಿಗಳು ಹೀಗೆ ಸಾಮಾಜಿಕ/ಸಾರ್ವಜನಿಕ ಚೌಕಟ್ಟಿನ ಸೀಳುನೋಟಗಳು ತುಂಬಿಕೊಂಡು ಸಾಹಿತ್ಯವೆಲ್ಲಿದೆಯೆಂದು ಇಂಚುಪಟ್ಟಿ ಮತ್ತು ಭೂತಕನ್ನಡಿ ಹಿಡಿದು ಹುಡುಕುವ ಅಗತ್ಯ ಬೀಳುತ್ತಿದೆ. 


ಈಚೀಚೆಗೆ ಹೆಚ್ಚು ಹೆಚ್ಚು ಸಾಹಿತ್ಯೋತ್ಸವಗಳು ನಡೆಯುತ್ತಿವೆ. ಅದರಲ್ಲೂ ಜೈಪುರ, ಬೆಂಗಳೂರು, ಹೈದರಾಬಾದ್, ದಿಲ್ಲಿಯಂತಹ ಮಹಾ ನಗರಗಳಲ್ಲೇ ಈ ಸಾಹಿತ್ಯೋತ್ಸವಗಳು ನಡೆಯುತ್ತಿವೆ ಮಾತ್ರವಲ್ಲ, ಪಂಚತಾರಾ ವೈಭವಗಳೊಂದಿಗೆ ಸಾಹಿತ್ಯದ ಅಣಕವೋ ಎಂಬಂತೆ ನಡೆಯುತ್ತಿವೆ. ಆದರೆ ಇವು ಸಾಹಿತ್ಯದ ಅಣಕವಿರಲಿಕ್ಕಿಲ್ಲವೆಂದು ಮೇಲ್ನೋಟಕ್ಕೆ ಕಾಣಿಸುತ್ತದೆ; ಏಕೆಂದರೆ ನಮ್ಮ ಮುಖ್ಯ ವಾಹಿನಿಯ ಜನಪ್ರಿಯ ಸಾಹಿತಿಗಳೆಲ್ಲ ಈ ಉತ್ಸವಗಳಿಗೆ ಆಹ್ವಾನಿತರಾಗಿರುತ್ತಾರೆ. ಇಷ್ಟೇ ಆಗಿದ್ದರೆ ಅವರ ಪಾಡಿಗೆ ಅವರು ಸಾಹಿತ್ಯದ ಸರಸ್ವತಿಯಲ್ಲದಿದ್ದರೂ ಲಕ್ಷ್ಮಿಯನ್ನಾದರೂ ಅನುಭವಿಸಿಕೊಂಡು ಹೋಗಲಿ ಎಂದು ಸುಮ್ಮನಿರಬಹುದಾಗಿತ್ತು. ಆದರೆ ಈ ಸಾಹಿತ್ಯೋತ್ಸವಗಳು ತಾತ್ವಿಕ ಇಲ್ಲವೇ ಸೈದ್ಧಾಂತಿಕ ನೆಲೆಗಳನ್ನು ಚರ್ಚಿಸುವ ಗೋಜಿಗೆ ಹೋಗಿರುವುದರಿಂದ ಅಲ್ಲೀಗ ರಾಜಕಾರಣಿಗಳು, ಸಿನೆಮಾ ತಾರೆಯರು, ಕ್ರೀಡಾಪಟುಗಳು, ಸಂಗೀತ ಕಲಾನಿಧಿಗಳು ಹೀಗೆ ಸಾಮಾಜಿಕ/ಸಾರ್ವಜನಿಕ ಚೌಕಟ್ಟಿನ ಸೀಳುನೋಟಗಳು ತುಂಬಿಕೊಂಡು ಸಾಹಿತ್ಯವೆಲ್ಲಿದೆಯೆಂದು ಇಂಚುಪಟ್ಟಿ ಮತ್ತು ಭೂತಕನ್ನಡಿ ಹಿಡಿದು ಹುಡುಕುವ ಅಗತ್ಯ ಬೀಳುತ್ತಿದೆ.

ರಾಜಮಹಾರಾಜರ ಕಾಲದಲ್ಲಿ ಸಾಹಿತ್ಯಸಭೆಗಳು ನಡೆಯುತ್ತಿದ್ದುವು. ಅಲ್ಲಿ ಕಲಾರಸಿಕರಾದ ದೊರೆಯನ್ನು ಮತ್ತು ಸಾಹಿತ್ಯಾಸಕ್ತರನ್ನು ಮೆಚ್ಚಿಸುವ ಮತ್ತು ರಂಜಿಸುವ ಸಾಹಿತಿಗಳು ನೆರೆಯುತ್ತಿದ್ದರು. ಅದಲ್ಲದಿದ್ದರೆ ನಮಗೆ ಕವಿರಾಜಮಾರ್ಗವು ಸಿಕ್ಕುತ್ತಿರಲಿಲ್ಲ; ಪಂಪ-ರನ್ನ-ಕುಮಾರವ್ಯಾಸರು ದಕ್ಕುತ್ತಿರಲಿಲ್ಲ. ಶರಣರ ಅನುಭವ ಮಂಟಪವೂ ಕಲ್ಯಾಣದಲ್ಲೇ ಇದ್ದದ್ದು. ವಿಜಯನಗರದ ಕಾಲದಲ್ಲಿ ಮಹಾಕವಿಗಳು ತಮ್ಮತಮ್ಮ ಊರುಗಳನ್ನು ಬಿಟ್ಟು ರಾಜಧಾನಿಗೆ ಬಂದರಷ್ಟೇ ಗುರುತಾಗುತ್ತಿದ್ದರು. ದಾಸರೂ ಹೀಗೇ ವಿಜಯನಗರದಲ್ಲೇ ವೈರಾಗ್ಯವನ್ನು ಕಂಡುಕೊಂಡ ನಿದರ್ಶನಗಳಿವೆ. ಕನ್ನಡದ ಅಂತಲ್ಲ, ಭಾರತೀಯ ಸಾಹಿತ್ಯ ಇತಿಹಾಸದ, ಅಷ್ಟು ಮಾತ್ರವಲ್ಲ, ಜಾಗತಿಕ ಸಾಹಿತ್ಯ ಪರಂಪರೆಯಲ್ಲೂ ಈ ಮಹಾನಗರಗಳು ಸಾಹಿತ್ಯವನ್ನು ಪೋಷಿಸಿದ ಉದಾಹರಣೆಗಳು ಬೇಕಷ್ಟಿವೆ. ಹರಪ್ಪ-ಮೊಹೆಂಜೋದಾರೋಗಳಂತೆ ಸಂಸ್ಕೃತಿಯನ್ನು ಪೋಷಿಸಿದ ಸಿದ್ಧ ಪರಿಕರಗಳು ಮತ್ತು ಅಂಶಗಳೇ ಸಾಹಿತ್ಯದ ನಲ್ಮೆಗೂ ಕಾರಣವಾಗಿದ್ದವು.

 ಆದರೆ ಈಗೀಗ ಅಂದರೆ ಆಧುನಿಕ ಸಾಹಿತ್ಯದ ಕಾಲ-ಕಾರಣದಲ್ಲಿ ನಡೆಯುವ ಸಾಹಿತ್ಯೋತ್ಸವಗಳು ಪರಂಪರೆಗಿಂತ ಭಿನ್ನವಾಗಿರುವಂತೆ ಗೋಚರಿಸುತ್ತಿದೆ. 20ನೆ ಶತಮಾನದಲ್ಲಿ ಸಾಮ್ರಾಜ್ಯಗಳಳಿದು ಪ್ರಜಾತಂತ್ರಗಳು ರೂಪುಗೊಂಡ ಬಗೆಯು ಅತ್ಯಂತ ಕುತೂಹಲಕಾರಿ. ಇದರೊಂದಿಗೇ ಸಾಹಿತ್ಯದ ರೀತಿ-ನೀತಿಗಳು ಬದಲಾದವು. ಕಾವ್ಯದಲ್ಲಿ ರಮ್ಯವಾದ ಪಾರಂಪರಿಕ ನಾಟಕ, ಮಹಾಕಾವ್ಯ, ವಚನಗಳು, ಕೀರ್ತನೆಗಳು ಕಥೆ-ಕಾದಂಬರಿಯಂತಹ ಹೊಸ ಮಾಧ್ಯಮಗಳಿಗೆ ದಾರಿ ಮಾಡಿಕೊಟ್ಟವು. ನಾಟಕ, ಕಾವ್ಯಗಳು ಮುಂದುವರಿದರೂ ಹೊಸರೂಪ ತಾಳಿದವು. ಸಾಹಿತ್ಯದ ಹೊರ ಮತ್ತು ಒಳರೂಪಗಳು ಬದಲಾದವು. ಅದೊಂದು ಅಂತರಂಗಿಕ ವ್ಯಾಯಾಮದಂತೆ ಗೋಚರಿಸಿದ್ದು ಸುಳ್ಳಲ್ಲ. ಜೊತೆಗೇ ಓದುಗರು ನಡೆಯಲು ಅನುಕೂಲವಾದ ಕಾಲುಹಾದಿಯನ್ನೇ ಕ್ರಮಿಸಿದರೂ ವಿದ್ವಾಂಸರು ವಿಮರ್ಶೆಯ ಮೂಲಕ ಸಾಹಿತ್ಯಕ್ಕೆ ಹೆಚ್ಚುಹೆಚ್ಚು ಪಂಡಿತಗಮ್ಯ ತಾರುದಾರಿಗಳನ್ನು ತೋರಿದರು. ಸಾಹಿತ್ಯಲೋಕದ ಮಾರ್ಗ ಮತ್ತು ದೇಸೀಯ ವ್ಯತ್ಯಾಸವು ಆಧುನಿಕ ಸಾಹಿತ್ಯದಲ್ಲಿ ಸ್ಪಷ್ಟವಾದಷ್ಟು ಹಿಂದೆಂದೂ ಆಗಿರದಂತೆ ಬೆಳೆಯಿತು.

ಭಾರತೀಯ ಸಾಹಿತ್ಯ ಪರಂಪರೆಯಲ್ಲಿ ಕಳೆದ ಕೆಲವು ದಶಕಗಳಿಂದ-ಹತ್ತಿರ ಹತ್ತಿರ ಒಂದು ಶತಮಾನದ ಕಾಲದಿಂದ ಸಾಹಿತ್ಯ ಸಮ್ಮೇಳನಗಳು ಜನಜಾತ್ರೆಯಾಗಿ ನಡೆಯುತ್ತಿವೆ. ಸಾಹಿತ್ಯ ಲೋಕದ ದಿಗ್ಗಜಗಳು ಮೊಗೆದಷ್ಟೂ ಮುಗಿಯದ ಪ್ರತಿಭೆ-ಪಾಂಡಿತ್ಯದ ಸವಿಯನ್ನು ಸಭಾಸದರಿಗೆ ಉಣಬಡಿಸುತ್ತಿದ್ದರು. ಅಲ್ಲಿ ಶ್ರೀಸಾಮಾನ್ಯನಿಗೂ ಅರ್ಥವಾಗಬಲ್ಲ ಆದರೆ ಹಿರಿದಾದ, ಉದಾತ್ತವಾದ ಮಾತುಗಳಿದ್ದವು. ಓದುಗನೇ ಸರ್ವಶ್ರೇಷ್ಠನೆಂದು ಲೇಖಕರೂ ಲೇಖಕರೇ ಸರ್ವಶ್ರೇಷ್ಠರೆಂದು ಓದುಗರೂ ಭಾವಿಸುತ್ತಿದ್ದರು. ಜನಪರತೆಯೊಂದಿಗೆ ಜನಪ್ರಿಯತೆಯೂ ಒಬ್ಬ ಲೇಖಕನ ಮಾನದಂಡವಾಗಿರುತ್ತಿತ್ತು. ನವೋದಯ, ಪ್ರಗತಿಶೀಲ ಮತ್ತು ಸುಮಾರಾಗಿ ನವ್ಯದ ಆರಂಭದ ಕಾಲದವರೆಗೂ ಈ ಸಮ್ಮೇಳನಗಳು ಸುಸಂಗತ ಸಮ್ಮಿಲನವಾಗಿರುತ್ತಿದ್ದವು. ಪಂಥಗಳು ಇವನ್ನು, ಇವರನ್ನು ಕಾಡಿದಂತಿರಲಿಲ್ಲ. ಮರಾಠಿ ಸಾಹಿತ್ಯ ಸಮ್ಮೇಳನಗಳಂತೂ ಸರಳವಾಗಿರುತ್ತಿದ್ದವು. ಮಾತ್ರವಲ್ಲ ಅಲ್ಲಿ ಸಾಹಿತ್ಯೇತರ ಪ್ರತಿಷ್ಠಿತರಿಗೆ ವೇದಿಕೆಯಲ್ಲಿ ಜಾಗವಿರಲಿಲ್ಲವೆಂದು ತಿಳಿದಿದ್ದೇನೆ.

ಆದರೆ ನವ್ಯವು ತನ್ನ ಆತ್ಮಕೇಂದ್ರಿತ/ಆತ್ಮರತಿಯ ಪಥದಿಂದಾಗಿ ಎಲ್ಲ ಹಿಂದಿನ ಹೆಜ್ಜೆಗಳಿಗೆ ಸೆಡ್ಡುಹೊಡೆಯುವಂತೆ ನಿರ್ಣಯಗಳನ್ನು ನೀಡತೊಡಗಿದಾಗ ನಿಜಕ್ಕೂ ಸಾಹಿತ್ಯ ಇಕ್ಕಟ್ಟಿಗೆ ಸಿಲುಕಿತು. ಸಾಮಾಜಿಕ ವಿಘಟನೆ ಸಾಹಿತ್ಯವನ್ನು ತಪ್ಪಾಗಿ ಆಕ್ರಮಿಸಿದ್ದು ಈ ಕಾಲದಲ್ಲಿ. ಪರಿಣಾಮವಾಗಿ ನವ್ಯವು ತನ್ನ ಯವ್ವನವನ್ನು ತಲುಪಿದಾಗ ಅಲ್ಲಿಯ ತನಕ ಊರ ಜಾತ್ರೆಯಾಗಿದ್ದ ಸಾಹಿತ್ಯವು ಬಂಡಾಯ, ದಲಿತ ಹೀಗೆ ಪಂಥಗಳನ್ನು, ಸಿದ್ಧಾಂತಗಳನ್ನು ಹೊಂದಿದ್ದು ಮಾತ್ರವಲ್ಲ (ಇವುಗಳ ಒಳಿತು ಕೆಡುಕುಗಳ ಚರ್ಚೆಗೆ ಇದು ವೇದಿಕೆಯಲ್ಲ) ಅವುಗಳನ್ನು ಸಂಘಟಿತ ಹೋರಾಟಕ್ಕೆ ಬಳಸಿಕೊಂಡಿತು. ಸಾಹಿತ್ಯ ಸಮ್ಮೇಳನಗಳು ಸಾಹಿತಿಗಳ ಸಮ್ಮೇಳನಗಳಾದವು. ಇವು ಸರಕಾರೀ ಸ್ವಾಮ್ಯದ ಸಾಹಿತ್ಯ ಪರಿಷತ್ತು ಎಂದಲ್ಲ, ಎಲ್ಲ ಖಾಸಗೀ ಮತ್ತು ಸಾರ್ವಜನಿಕ ಸಂಸ್ಥೆಗಳನ್ನೂ ಆವರಿಸಿದವು. ಪರಿಣಾಮವಾಗಿ ನವ್ಯ ಸಾಹಿತ್ಯವು ಇಂದಿನ ಸಾಫ್ಟ್ ವೇರ್ ಇಂಜಿನಿಯರುಗಳಂತೆ ಬಹಳ ಬೇಗ ಬಳಲಿತು. ಸಾಹಿತ್ಯದ ಕೆಂಪುರಕ್ತಕಣಗಳು ನಶಿಸುವ ಭಯ ಬಹಳಷ್ಟು ಮಂದಿಯನ್ನು ಕಾಡಿತು. ಹೀಗಾಗಿ ಪ್ರತಿಷ್ಠೆಯನ್ನು ಕಾಪಾಡುವುದಕ್ಕಾಗಿಯಾದರೂ ಸಾಹಿತಿಗಳು ಹಲವು ವಿಧದ ಕಸರತ್ತುಗಳನ್ನು ಮಾಡುವುದು ಅನಿವಾರ್ಯವಾಯಿತು. ಸಾಹಿತ್ಯವು ಸಮನ್ವಯಭಾವದಿಂದ ಎಲ್ಲವನ್ನೂ ನೀಡುವ ಹಂತದಿಂದ ಇದು ನಮ್ಮ ಬ್ರಾಂಡ್, ಉಳಿದೆಲ್ಲವುಗಳಿಂದ ಶ್ರೇಷ್ಠ ಎಂಬ ಮಾರುಕಟ್ಟೆಯ ಸ್ಫರ್ಧಾನಿಯಮಗಳನ್ನು ಅನುಸರಿಸುವುದಕ್ಕೆ ಆರಂಭಿಸಿತು. ದೂರದೂರುಗಳಲ್ಲಿ ಇದ್ದರೆ ಉಳಿವಿಲ್ಲ ಎಂದು ಅನೇಕರು ಕೇಂದ್ರವನ್ನು ತಲುಪಲು ಸದಾ ಹಣಿಯುವಂತಾಯಿತು. ಗುಣಮಟ್ಟಗಳು ಹಳ್ಳಿಯಲ್ಲೂ ನಗರಗಳಲ್ಲೂ ಒಂದೇ ಆಗಿದ್ದದ್ದು ಈಗ ನಗರ-ಮಹಾನಗರಗಳಲ್ಲಷ್ಟೇ ಸಾಹಿತ್ಯದ ಆಸ್ಪತ್ರೆಗಳು ಆರೈಕೆ ಮಾಡುವಂತಾಯಿತು. ಕೆಲವಾದರೂ ಪತ್ರಿಕೆಗಳು ಕಂಪೆನಿಯ ಬ್ರೋಚರ್‌ಗಳಂತೆ ಕೆಲವೇ ಸಾಹಿತಿಗಳ ಲಾಲನೆ-ಪಾಲನೆ-ಪೋಷಣೆಗಳ ಹೊಣೆ ಹೊತ್ತಂತಿವೆ. ಹೀಗೆ ಪ್ರಕಟವಾದ ಪತ್ರಿಕೆಗಳಲ್ಲೂ ಆಯ್ದ ಮತ್ತು ಒಂದು ಪಂಥ ಮತ್ತು ಸಿದ್ಧಾಂತ ಅನ್ನಿಸದೆ ಒಂದು ಗುಂಪಿನ ಎಂದು ಅನ್ನಿಸುವ ಲೇಖಕರೇ ಬೆಳಕುಕಾಣುವಂತಾಯಿತು. ಅಂತಿಮವಾಗಿ ಇವೆಲ್ಲ ಓದುವ ಮಂದಿಯನ್ನು ಕ್ಷೀಣಿಸಿ, ಸಾಹಿತ್ಯ ಸೊರಗಿ, ವೇದಿಕೆಯಲ್ಲಿ ರಾರಾಜಿಸುವುದೇ ಸಾಹಿತಿಯ ಆದ್ಯತೆಯಾಗಿ ಮಾಡಿತು. ಮಾಧ್ಯಮಗಳು ವೇದಿಕೆಯ ಫೋಟೋ ಮಾತ್ರ ತೆಗೆಯುವ ಚಾಣಾಕ್ಷತನವನ್ನು ಬೆಳೆಸಿಕೊಂಡಿರುವುದರಿಂದ ಭಾಗವಹಿಸುವವರು, ಓದುವವರು, ಕೇಳುವವರು ಎಷ್ಟೆಂಬುದು ಪ್ರಚಾರವಾಗುವುದೇ ಇಲ್ಲ!

ಸಾಹಿತ್ಯವು ದಿಗಂತವನ್ನು ಮುಟ್ಟಿದೆಯೇನೋ ಎಂಬಂತಿದೆ. ಸಾಧ್ಯತೆಗಳೆಲ್ಲವನ್ನೂ ಆಕ್ರಮಿಸಿಕೊಂಡ ಅಭಿವ್ಯಕ್ತಿ ಮಾಧ್ಯಮಗಳು ಮುಂದೇನು ಎಂಬಂತೆ ಅಸಹಾಯಕವಾಗಿ ಕುಕ್ಕರುಗಾಲಿನಲ್ಲಿ ಕೂತಿವೆ. ಸಾಹಿತ್ಯವು ತಾಂತ್ರಿಕ ಮತ್ತು ವೈಜ್ಞಾನಿಕ ಭೂಮಿಕೆಯ ಸಾಧನವಲ್ಲವಾದ್ದರಿಂದ ಮತ್ತು ಬುದ್ಧಿ-ಮನಸ್ಸುಗಳ ವಿಹ್ವಲತೆ, ವಿಕ್ಷಿಪ್ತತೆ ಮತ್ತು ಆಂತರಂಗಿಕ ಬಾಹುಳ್ಯಗಳ ಮಾಧ್ಯಮವಾಗಿರುವುದರಿಂದ ಅದು ಸಂಶೋಧನಾತ್ಮಕವಾಗಿ ಬೆಳೆಯಲಾರದು. ವಿಜ್ಞಾನ-ತಂತ್ರಜ್ಞಾನದ ನೆರವಿನಿಂದ ಎಲ್ಲವನ್ನೂ ಮಾಡಬಲ್ಲ ಸಾಮರ್ಥ್ಯವಿದೆಯೆಂದು ಭಾವಿಸಲಾದ ರೋಬೋ ಕಾವ್ಯ ಬರೆಯುತ್ತದೆಯೆಂದು ಭಾವಿಸಲಾಗದು. (ಜೈವಿಕವಾಗಿಯೂ ಅದು ಸೃಷ್ಟಿಕ್ರಿಯೆಯನ್ನು ಮಾಡದು ಎಂಬುದು ಸಾಂಕೇತಿಕ!)

ಇಂತಹ ಸಮಯ-ಸಂದರ್ಭದಲ್ಲಿ ಸಾಹಿತ್ಯೋತ್ಸವಗಳು ಅದ್ದೂರಿಯಿಂದ ನಡೆಯುತ್ತಿವೆ. ಅಲ್ಲಿ ಬಹಳಷ್ಟು ತಯಾರಿಗಳು ನಡೆಯುತ್ತವೆ. ಕೆಲವಕ್ಕೆ ಸರಕಾರದ ಕೃಪೆಯಿದ್ದರೆ ಇನ್ನುಳಿದವಕ್ಕೆ ವ್ಯಾಪಾರಸ್ಥರ, ಕೈಗಾರಿಕೋದ್ಯಮಿಗಳ, ರಾಜಕಾರಣಿಗಳ ನೆರವಿರುತ್ತದೆ. ಜೈಪುರ ಸಾಹಿತ್ಯೋತ್ಸವಕ್ಕೆ ಅನೇಕ ವರ್ಷಗಳಿಂದ ಝೀಟಿವಿಯ ಆಯೋಜನೆಯಿದೆ. ಇನ್ನುಳಿದವಕ್ಕೂ ಇಂತಹ ಬೆಂಬಲವಿದೆ. ಅಲ್ಲಿ ಯಾರು ಯಾರು ಬರುತ್ತಾರೆಂಬುದಕ್ಕೆ ಭಾರೀ ಪ್ರಚಾರ ಸಿಗುತ್ತದೆ. ಅಲ್ಲಿ ಸ್ಥಾನ ಗಿಟ್ಟುವುದೇ ಮಹಾನಗರದ ಶ್ರೀಮಂತ ಕ್ಲಬ್ಬಿನ ಸದಸ್ಯತ್ವ ಸಿಕ್ಕಿದಂತೆ ಎಂದು ಸಾಹಿತಿಗಳು ಭಾವಿಸಲಾರಂಭಿಸಿದ್ದಾರೆ. ಇದ್ದಕ್ಕಿದ್ದಂತೆ ಜನಪ್ರಿಯ ಸಿನೆಮಾ ತಾರೆಯೊಬ್ಬರು, ರಾಜಕಾರಣಿಯೊಬ್ಬರು ಅಲ್ಲಿನ ಗೋಷ್ಠಿಗಳಲ್ಲಿ, ಸಂವಾದಗಳಲ್ಲಿ ಸ್ಥಾನ ಪಡೆಯುತ್ತಾರೆ. ಕೇಳುವುದಕ್ಕಿಂತ, ಓದುವುದಕ್ಕಿಂತ ಈ ಮಂದಿಯನ್ನು ನೋಡಲು ಆಕರ್ಷಿತರಾದವರೇ ಹೆಚ್ಚು ಸಂಖ್ಯೆಯಲ್ಲಿರುತ್ತಾರೆ.

ಒಂದೊಮ್ಮೆ ಈ ಉತ್ಸವಗಳಲ್ಲಿ ಸಾಹಿತ್ಯಪಂಥಗಳ ಮುಖಾಮುಖಿಯಾದರೂ ಆಗುತ್ತಿತ್ತು. ಆದರೆ ಈ ಪರದೆ ಹರಿದು ಇಂದು ಯಾವುದೇ ಕ್ಷೇತ್ರದ ಜನಪ್ರಿಯ ವ್ಯಕ್ತಿಯೂ ಅಲ್ಲಿ ತನ್ನ ಕುರಿತಾಗಿ, ಅನ್ಯರ ಕುರಿತಾಗಿ ಮಾತನಾಡುವುದನ್ನು ಕಾಣುತ್ತೇವೆ. ಬೆಂಗಳೂರಿನಲ್ಲಿ ಒಂದು ಸಾಮೂಹಿಕ ಪುಸ್ತಕ ಬಿಡುಗಡೆಯ ಸಮಾರಂಭದಲ್ಲಿ ಭಾಗವಹಿಸಿದ್ದ ಸಿನೆಮಾ ತಾರೆಯೊಬ್ಬರು (ಅವರು ಬುದ್ಧಿವಂತರೇ ಇರಬಹುದು!) ಸಮಗ್ರ ಕನ್ನಡ ಸಾಹಿತ್ಯ ಗೊತ್ತಾಗಬೇಕಾದರೆ ಇನ್ನೇನೂ ಓದಬೇಕಾಗಿಲ್ಲ; ಆ ದಿನ ಬಿಡುಗಡೆಯಾದ ಅಷ್ಟೂ ಪುಸ್ತಕಗಳನ್ನು ಓದಿದರೆ ಸಾಕು ಎಂದು ಅತೀ ಉತ್ಸಾಹಿತರಾಗಿ ನುಡಿದರು; (ಪಂಪ-ರನ್ನ-ವಚನಕಾರರು ತಾವಿದ್ದಲ್ಲಿಯೇ ನರಳಿದರೂ) ವೇದಿಕೆಯಲ್ಲಿದ್ದ ಎಲ್ಲ ಲೇಖಕರ ಕೈಚಪ್ಪಾಳೆಗಿಟ್ಟಿಸಿಕೊಂಡರು. ಅವರ ತಪ್ಪಿಲ್ಲ; ಗಂಭೀರ ಪರಿಣಾಮವನ್ನು ನೀಡಬಲ್ಲ ಕಾರ್ಯಕ್ರಮವೊಂದಕ್ಕೆ ಅವರನ್ನು ಕರೆತಂದು ಪ್ರಚಾರ ಪಡೆಯುವ ಉದ್ದೇಶವಿದ್ದ ಪ್ರಕಾಶಕರು ತಪ್ಪುಮಾಡಿದರೇನೋ ಗೊತ್ತಿಲ್ಲ; ಆದರೆ ಅದನ್ನು ದಟ್ಟ ಹಾಸ್ಯಕ್ಕೆ ತಲುಪಿಸಿದ್ದು ಮಾತ್ರ ಸತ್ಯ.

ಜೈಪುರ ಸಾಹಿತ್ಯೋತ್ಸವದಂತಹ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾಗವಹಿಸುವುದಕ್ಕೆ ಸಾಹಿತಿಗಳು ಎಷ್ಟು ಮತ್ತು ಯಾವ ರೀತಿಯ ಪ್ರಯತ್ನಗಳನ್ನು ಮಾಡುತ್ತಾರೋ ಗೊತ್ತಿಲ್ಲ. ಆದರೆ ಆಯೋಜಕರು ಗುರುತಿಸುವ ರೀತಿ-ನೀತಿಗಳು ನಗೆಪಾಟಲಿಗೆ ಗುರಿಯಾಗುತ್ತಿವೆ. ರಾಜಕಾರಣಿಗಳು, ಉದ್ಯಮಿಗಳು ಸ್ವತಃ ಸಾಹಿತಿಗಳಾಗಿದ್ದರೆ ಮತ್ತು ಅವರನ್ನು ಕರೆಸಿದರೆ ಪತ್ರಿಕೆಗಳ ಹೆಡ್‌ಲೈನಿನಲ್ಲಿ ಅವರು ಕಾಣಿಸುವವರಾದರೆ ಅವರನ್ನು ಕರೆಸುವುದು ಸರಿಯಾದೀತು. ಹಾಗಲ್ಲದೆ ಅವರು ಬರಿಯ ಜನಪ್ರಿಯರಾಗಿದ್ದರೆ ಉತ್ಸವವಾದೀತೇ ಹೊರತು ಸಾಹಿತ್ಯೋತ್ಸವವಾಗದು. ಅನೇಕ ಎಡಪಂಥೀಯ ಜನಪ್ರಿಯ ನಾಯಕರು ಬರಹಗಾರರೂ ಹೌದು. ಬಲಪಂಥೀಯರಲ್ಲೂ ಎಸ್.ಎಲ್. ಭೈರಪ್ಪನವರಂತಹ ಜನಪ್ರಿಯ ಮತ್ತು ಸಾಕಷ್ಟು ಓದುಗರನ್ನು ಹೊಂದಿದ ಕೆಲವಾದರೂ ಸಾಹಿತಿಗಳಿದ್ದಾರೆ. ಅವರನ್ನು ಕರೆಸಿದರೆ ಅದರ ಔಚಿತ್ಯವನ್ನು ಪ್ರಶ್ನಿಸಲಾಗದು. ಯಾರೇ ಇರಲಿ, ಸಾಹಿತಿಗಳಾಗಿದ್ದರೆ ಸರಿ; ಹಾಗಿಲ್ಲದೆ ಅವರು ತಮ್ಮ ಸಿದ್ಧಾಂತಗಳನ್ನು ಪ್ರಚಾರಮಾಡುವವರಾದರೆ, ತಮ್ಮ ನಾಯಕರ ಚುನಾವಣಾ ಪ್ರಣಾಳಿಕೆಯನ್ನು ಪ್ರಚುರಪಡಿಸುವವರಾದರೆ ಸಾಹಿತ್ಯಕ್ಕೆ ಏನು ಲಾಭ? ಈ ಬಾರಿ ಆರೆಸ್ಸೆಸ್ಸಿನ ಇಬ್ಬರು ನೇತಾರರಿಗೆ ಕರೆ ಬಂದಿತು. ಈ ಬಗ್ಗೆ ಸಾಕಷ್ಟು ವಿವಾದವೂ ಎದ್ದಿತು. ಆದರೆ ಆಯೋಜಕರು ಈ ಬಗ್ಗೆ ಎಚ್ಚರವಾದಂತಿಲ್ಲ. ಇನ್ನೂ ಇಂತಹ ಪ್ರಕರಣಗಳು ನಡೆಯಬಹುದು. ಬೆಳಕು ನೀಡಬೇಕಾದ ಸಾಹಿತ್ಯವು ಮನರಂಜನೆಯ, ಫ್ಯಾಶನ್ನಿನ, ಪ್ರತಿಷ್ಠೆಯ, ಪ್ರಚಾರದ ಸರಕಾದರೆ ಮುಂದೇನು ಎಂಬ ಪ್ರಶ್ನೆಗೆ ಉತ್ತರ ಅದರಲ್ಲೇ ಇರುತ್ತದೆ.

ಈಚೆಗೆ ಧಾರವಾಡ ಸಾಹಿತ್ಯ ಸಂಭ್ರಮದಲ್ಲೂ ವಿವಾದವೆದ್ದಿತು. ಯಾರೋ ಕೈಗೆ ಚಪ್ಪಲಿ ತೊಟ್ಟರು. ಅಸಹನೆಯ ವಿರುದ್ಧ ದನಿಯೆತ್ತಿದವರೇ, ದನಿಯೆತ್ತಬೇಕಾದವರೇ ಅಸಹನೆಪಟ್ಟರು. ಉತ್ಸವಭಂಗವಾಯಿತು. ಗಿರಡ್ಡಿಯವರು ಕೊನೆಗೆ ವಾಲ್ಮೀಕಿಯಂತೆ ವಿಷಾದದ ನುಡಿಗಳನ್ನಾಡಿದರು. ಉತ್ಸವವು ಮುಗಿಯಿತು. ಮತ್ತೆ ಮುಂದಿನ ವರ್ಷ: ಹೊಸ ಪ್ರಶ್ನೆಗಳೊಂದಿಗೆ!

ಸಾಹಿತ್ಯೋತ್ಸವಗಳು ತಮ್ಮ ಉತ್ಸಾಹವನ್ನು ಸ್ವಲ್ಪಕಡಿಮೆ ಮಾಡಿಕೊಂಡರೆ ಅವರಿಗೆ ಕ್ಷೇಮವಾಗುತ್ತದೆಯೋ ಗೊತ್ತಿಲ್ಲ; ಸಾಹಿತ್ಯವಂತೂ ಹೊಸತನ್ನು ಗಳಿಸದಿದ್ದರೂ ಈಗಾಗಲೇ ಗಳಿಸಿದ್ದನ್ನು ಉಳಿಸಿಕೊಂಡೀತು. ಆ ದಿಕ್ಕಿನಲ್ಲಿ ನಡೆಯುವುದು ಸಾಧ್ಯವೇ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)