varthabharthi

ನೇಸರ ನೋಡು

ಸೃಜನಶೀಲತೆಯ ಮೇಲೆ ಮತ್ತೊಂದು ಹಲ್ಲೆ

ವಾರ್ತಾ ಭಾರತಿ : 11 Feb, 2017
ಜಿ.ಎನ್.ರಂಗನಾಥ ರಾವ್

ಸಮಾಜದ ಆರೋಗ್ಯ, ಸಾಮರಸ್ಯಗಳಷ್ಟೇ ಕಲಾಭಿವ್ಯಕ್ತಿಯ ಸ್ವಾತಂತ್ರ್ಯವನ್ನು, ಕಥೆ-ಪಾತ್ರಗಳ ಚೌಕಟ್ಟಿನೊಳಗಣ ಸೂಕ್ಷ್ಮಸಂವೇದನೆಗಳನ್ನು ಅರಿತುಕೊಳ್ಳುವ, ಸತ್ಯವನ್ನು ತಿಳಿದುಕೊಳ್ಳುವ ಸಂಯಮವನ್ನು ಜನತೆ ತೋರಬೇಕಾದುದೂ ಅಪೇಕ್ಷಣೀಯ. ಇಂಥ ಯಾವ ಪ್ರಯತ್ನವನ್ನೂ ಮಾಡದೆ ಹೇಳಿಕೆ ಮಾತುಗಳನ್ನೋ ವರದಿಗಳನ್ನೋ ಕೇಳಿಕೊಂಡು ಹಿಂಸಾಚಾರಕ್ಕಿಳಿಯುವುದು ಅಥವಾ ಸೆನ್ಸಾರ್ ಮಂಡಳಿಯ ಕೆಲಸವನ್ನು, ಕಾಯ್ದೆಯನ್ನು ತಾನೇ ಕೈಗೆತ್ತಿಕೊಳ್ಳುವುದು ದುಡುಕಿನ ವರ್ತನೆಯಾಗುತ್ತದೆ.


ಬೆಂಗಳೂರಿನಲ್ಲಿ ಮೊನ್ನೆಯಷ್ಟೆ 9ನೆ ಅಂತಾರಾಷ್ಟ್ರೀಯ ಚಲಚ್ಚಿತ್ರೋತ್ಸವದ ಝಗಮಗಿಸುವ ಪರದೆ ಇಳಿದಿದೆ. ಚಿತ್ರ ರಸಿಕರು ಒಳ್ಳೆಯದು, ಸಾಧಾರಣವಾದದ್ದು ಇತ್ಯಾದಿ ಎಲ್ಲ ಬಗೆಯ ಚಿತ್ರಗಳನ್ನು ನೋಡಿದ್ದಾರೆ. ನಿರ್ದೇಶಕರು, ತಂತ್ರಜ್ಞರು ಚಿತ್ರಗಳ ಗುಣಮಟ್ಟ, ಪರ್ಯಾಯ ಸಿನೆಮಾ, ಮಾರುಕಟ್ಟೆಯ ಸ್ಥಿತಿಗತಿ ಕುರಿತು ವಿಚಾರವಿನಿಮಯ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಚಿತ್ರೋತ್ಸವದಲ್ಲಿ ಇಂಥ ಸಡಗರ-ಸಂಭ್ರಮಗಳು ಕಂಡುಬರುತ್ತಿದ್ದ ಸಮಯದಲ್ಲೇ, ಮಂಗಳವಾರ, ತೇದಿ ಫೆ.7ರಂದು ರಾಜ್ಯಸಭೆಯಲ್ಲಿ ಚಿತ್ರೋದ್ಯಮದ ಪರವಾಗಿ ಒಂಟಿದನಿಯೊಂದು ಪ್ರತಿಭಟಿಸುತಿತ್ತು. ಅದು ಸೃಜನಶೀಲತೆ ಮೇಲೆ ನಡೆದಿರುವ ಹಲ್ಲೆಯ ವಿರುದ್ಧ ಪ್ರತಿಭಟನೆಯಾಗಿತ್ತು. ಈ ಒಂಟಿ ದನಿ: ಸಮಾಜವಾದಿ ಪಕ್ಷದ ಸದಸ್ಯೆ, ತಾರೆ ಜಯಾ ಬಚ್ಚನ್ ಅವರದಾಗಿತ್ತು.

ಕಳೆದ ತಿಂಗಳ 27ರಂದು ಜಯಪುರದಲ್ಲಿ ಚಲನಚಿತ್ರ ನಿರ್ದೇಶಕ ಸಂಜಯ ಲೀಲಾ ಭನ್ಸಾಲಿಯವರ ಮೇಲೆ ನಡೆದ ಹಲ್ಲೆ ಮತ್ತು ಅವರ ‘ಪದ್ಮಾವತಿ’ ಚಿತ್ರದ ಸೆಟ್ ನಾಶಗೊಳಿಸಿದ ವಿಧ್ವಂಸಕ ಕೃತ್ಯವನ್ನು ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ ಜಯಾಬಚ್ಚನ್ ಅವರು, ‘‘ಇತ್ತೀಚಿನ ದಿನಗಳಲ್ಲಿ ಸೃಜನಶೀಲತೆ ಸಮಾಜಘಾತುಕ ಶಕ್ತಿಗಳ ಹಲ್ಲೆಗೆ ಗುರಿಯಾಗುತ್ತಿದೆ’’ ಎಂದು ಹೇಳಿದ್ದಾರೆ.ಶೂನ್ಯ ವೇಳೆಯಲ್ಲಿ ಭನ್ಸಾಲಿಯವರ ಮೇಲೆ ನಡೆದ ಹಲ್ಲೆಯನ್ನು ಪ್ರಸ್ತಾಪಿಸಿದ ಅವರು, ‘‘ದೇಶದಲ್ಲಿ ಅಸಹನೆ ಹೆಚ್ಚುತ್ತಿದೆ ಹಾಗೂ ಜನತೆಯ ಪ್ರತಿನಿಧಿಗಳು ತಾವೆಂದು ಭಾವಿಸಿಕೊಂಡಿರುವ ಕೆಲವರು, ಕೆಲವು ರಾಜಕೀಯ ಶಕ್ತಿಗಳ ಪ್ರೋತ್ಸಾಹದಿಂದ ಕಾಯ್ದೆ ಸುವ್ಯವಸ್ಥೆಯನ್ನು ತಮ್ಮ ಕೈಗೆತ್ತಿಕೊಂಡಿದ್ದಾರೆ’’ ಎಂಬ ಗಂಭೀರವಾದ ಆರೋಪಮಾಡಿದ್ದಾರೆ. ಇದಕ್ಕೆ ಸರಕಾರದ ಪ್ರತಿಕ್ರಿಯೆ ಏನೆಂಬುದು ವರದಿಯಾಗಿಲ್ಲವಾದರೂ ಜಯಾ ಬಚ್ಚನ್ ಅವರ ಆರೋಪದಲ್ಲಿ ಹುರಳಿಲ್ಲದೆ ಇಲ್ಲ.

ಸಂಜಯ್ ಲೀಲಾ ಭನ್ಸಾಲಿಯವರ ಮೇಲಿನ ಹಲ್ಲೆ ಎಷ್ಟು ಆತಂಕಕಾರಿಯಾದ್ದೋ ಅಷ್ಟೇ ಆತಂಕಕಾರಿಯಾದದ್ದು, ಧರ್ಮ-ಸಂಸ್ಕೃತಿಗಳ ರಕ್ಷಣೆಯ ಗುತ್ತಿಗೆ ಹಿಡಿದವರಂತೆ ಕೆಲವರು ಕಾನೂನನ್ನು ಕೈಗೆತ್ತಿಕೊಂಡು ಗೂಂಡಾಗಿರಿ ನಡೆಸುತ್ತಿರುವುದು ಹಾಗೂ ಕಾಯ್ದೆ ಸುವ್ಯವಸ್ಥೆ ಪಾಲಕರು ನೋಡಿಯೂ ನೋಡದಂತೆ ನಿಷ್ಕ್ರಿಯರಾಗಿರುವುದು. ಇದಕ್ಕೆ ನಿದರ್ಶನಗಳಿಗೇನೂ ಕೊರತೆಯಿಲ್ಲ. ಇದೇ 8ರಂದು ತುಮಕೂರಿನಲ್ಲಿ ಪ್ರದರ್ಶನಗೊಳ್ಳಬೇಕಾಗಿದ್ದ ರಾಜಪ್ಪ ದಳವಾಯಿಯವರ ‘ದಾರಾ ಶೀಕೋ’ ನಾಟಕದ ಪ್ರದರ್ಶನ ಸಂಘ ಪರಿವಾರದ ಬೆದರಿಕೆಯಿಂದಾಗಿ ನಿಂತುಹೋದದ್ದು ಇತ್ತೀಚಿನ ನಿದರ್ಶನ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೇ ಆಯ್ಕೆ ಮಾಡಿದ್ದ ಈ ನಾಟಕದ ಪ್ರದರ್ಶನವನ್ನು ಬೆದರಿಕೆಯ ಹಿನ್ನೆಲೆಯಲ್ಲಿ ನಿಲ್ಲಿಸಬೇಕಾಗಿ ಬಂದದ್ದು ನಾಟಕಕಾರ/ನಿರ್ದೇಶಕರ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಡೆದಿರುವ ಆಕ್ರಮಣವಲ್ಲದೆ ಬೇರೇನೂ ಅಲ್ಲ. ನಾಟಕ ನೋಡದೇ ಅದು ಪ್ರದರ್ಶನಕ್ಕೆ ಯೋಗ್ಯವಲ್ಲ ಎನ್ನುವ ನಿರ್ಧಾರಕ್ಕೆ ಹೇಗೆ ಬರಲಾಯಿತು? ಬೆದರಿಕೆಯೊಡ್ಡಿ ಪ್ರದರ್ಶನ ನಿಲ್ಲಿಸುವ ಅಧಿಕಾರವನ್ನು ಇವರಿಗೆ ಯಾರು ಕೊಟ್ಟರು? ಸೃಜನಶೀಲ ಕೃತಿಯೊಂದರ ಗುಣಾವಗುಣಗಳನ್ನು ವಿಮರ್ಶಿಸುವ ಯಾವ ಅರ್ಹತೆ ಇವರಿಗಿದೆ? ಇವರ ಮಾನದಂಡಗಳಾದರೂ ಏನು? ಇದು ಸೃಜನಶೀಲತೆಯ ಮೇಲಿನ ಸಾಂಸ್ಕೃತಿಕ ಗೂಂಡಾಗಿರಿಯಲ್ಲದೆ ಮತ್ತೇನೂ ಅಲ್ಲ. ಈ ಸನ್ನಿವೇಶದಲ್ಲಿ ನಾಟಕ ತಂಡದ ನೆರವಿಗೆ ಬರಬೇಕಾಗಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ತಂಡದ ಗೈರುಹಾಜರಿಗೆ ತಾವು ಜವಾಬ್ದಾರರಲ್ಲ ಎಂಬಂತೆ ನಡೆದುಕೊಂಡಿರುವುದು ಹೊಣೆಗೇಡಿತನದ ವರ್ತನೆಯಾಗಿದೆ. ಇತ್ತೀಚಿನ ಇನ್ನೊಂದು ಪ್ರಕರಣ ನೋಡೋಣ.

ರಜಪೂತ ಕರಣಿ ಸೇನಾ ಬ್ರಿಗೇಡ್ ಎಂಬ ಸಂಘಟನೆಯೊಂದು ಜ.27ರಂದು ಜಯಪುರದ ಜಯಗಢ ಕೋಟೆಯಲ್ಲಿ ‘ಪದ್ಮಾವತಿ’ ಚಿತ್ರದ ಚಿತ್ರೀಕರಣ ನಡೆಸಿದ್ದ ಹಿಂದಿ ಚಿತ್ರ ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ಅವರ ಮೇಲೆ ಹಲ್ಲೆ ನಡೆಸಿ, ಅವರನ್ನು ಹಿಗ್ಗಾಮುಗ್ಗ ಎಳೆದಾಡಿ ಮುಷ್ಟಿಪ್ರಹಾರ ನಡೆಸಿದೆ. ಚಿತ್ರೀಕರಣಕ್ಕಾಗಿ ಸಜ್ಜುಗೊಳಿಸಿದ್ದ ಸೆಟ್ಟನ್ನು ನಾಶಪಡಿಸಿದೆ. ಭಾರತೀಯ ಸಂಸ್ಕೃತಿ ಮತ್ತು ಇತಿಹಾಸದ ಸ್ವಯಂಘೋಷಿತ ರಕ್ಷಕರ ಈ ನಡೆ ತೀವ್ರ ಖಂಡನಾರ್ಹವಾದದ್ದು. 2014ರ ಮೇ ತಿಂಗಳಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿಯವರ ಸರಕಾರ ಅಧಿಕಾರಕ್ಕೆ ಬಂದ ನಂತರ ಹಿಂದುತ್ವ ಪಡೆಗಳು ಬಾಲಿವುಡ್ ಚಿತ್ರ ನಿರ್ಮಾಪಕರು, ನಟನಟಿಯರು-ನಿರ್ದೇಶಕರುಗಳ ಮೇಲೆ ಸರಣಿಯೋಪಾದಿ ಹಲ್ಲೆ ನಡೆಸಿರುವುದು ಕಳವಳಕಾರಿಯಾದ ಸಂಗತಿ.

‘ದೇವದಾಸ್’, ‘ಹಮ್ ದಿಲ್‌ದೆ ಚುಕೆ ಸನಾಮ್’ ಮೊದಲಾದ ಮನೋರಂಜಕ ಚಿತ್ರಗಳನ್ನು ಕೊಟ್ಟಿರುವ ಭನ್ಸಾಲಿಯವರ ಮೇಲೆ ನಡೆದಿರುವ ಈ ಹಲ್ಲೆಗೂ ಮೊದಲು, ಹಿಂದಿ ಚಿತ್ರೋದ್ಯಮದ ಕರಣ್ ಜೋಹರ್ ಮತ್ತು ಶಾರುಖ್ ಖಾನ್ ಅವರ ಮೇಲೆ, ಪಾಕಿಸ್ತಾನಿ ಕಲಾವಿದರಿಗೆ ಅವಕಾಶ ನೀಡಿದ್ದರು ಎನ್ನುವ ಏಕೈಕ ಕಾರಣದಿಂದಾಗಿ ನಡೆದ ಹಲ್ಲೆಗಳು ಇನ್ನೂ ಜನಮನದಲ್ಲಿ ಹಸಿರಾಗಿವೆ. ಮುಂದೆ ತಾವು ಪಾಕಿಸ್ತಾನಿ ಕಲಾವಿದರಿಗೆ ತಮ್ಮ ಚಿತ್ರಗಳಲ್ಲಿ ಅವಕಾಶ ನೀಡುವುದಿಲ್ಲವೆಂದು ಮುಚ್ಚಳಿಕೆ ಬರೆದುಕೊಟ್ಟು ನವನಿರ್ಮಾಣ ಸೇನೆಯ ನಾಯಕ ರಾಜ್ ಠಾಕ್ರೆಯವರ ಜೊತೆ ಕರಣ್ ಜೋಹರ್ ಒಪ್ಪಂದ ಮಾಡಿಕೊಳ್ಳಬೇಕಾಯಿತು. ಮಹಾರಾಷ್ಟ್ರ ಮುಖ್ಯ ಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಮಧ್ಯಸ್ತಿಕೆಯಿಂದಾಗಿ ಇಂಥ ಒಂದು ಒಪ್ಪಂದವಾಗಿ ಆ ಚಿತ್ರದ ಸಾರ್ವತ್ರಿಕ ಪ್ರದರ್ಶನ ಸಾಧ್ಯವಾಯಿತು. ಕರಣ್ ಜೋಹರ್ ಸಶಸ್ತ್ರ ಪಡೆಗಳ ಪುನರ್ವಸತಿ ನಿಧಿಗೆ ಐದು ಕೋಟಿ ರೂಪಾಯಿ ದೇಣಿಗೆ ನೀಡಬೇಕೆಂಬುದು ಒಪ್ಪಂದಕ್ಕೆ ಠಾಕ್ರೆಯವರ ಶರತ್ತಾಗಿತ್ತು. ಬೆದರಿಕೆ ಹಾಕಿ ಕೀಳುವ ಹಣ ತಮಗೆ ಬೇಡವೆಂದು ಸಶಸ್ತ್ರ ಪಡೆ ನಿರಾಕರಿಸಿದ್ದರ ಹಿಂದಿರುವ ನೈತಿಕತೆಯಿಂದಲೂ ಅಂಧಾಭಿಮಾನಿಗಳಿಗೆ ಬುದ್ಧಿಬಂದಂತಿಲ್ಲ. ಇನ್ನು ಶಾರುಖ್ ಖಾನ್ ಅವರೂ ರಾಜ್ ಠಾಕ್ರೆಯವರ ಕಚೇರಿಗೆ ತೆರಳಿ ತಮ್ಮ ಚಿತ್ರದ ಪ್ರಚಾರಕ್ಕಾಗಿ ಪಾಕಿಸ್ತಾನಿ ತಾರೆ ಮಹೀರಾ ಖಾನ್ ಅವರನ್ನು ಭಾರತಕ್ಕೆ ಕರೆತರುವುದಿಲ್ಲವೆಂದು ಭರವಸೆಯಿತ್ತ ನಂತರವೇ ಅವರ ‘ರಾಯೀ’ ಚಿತ್ರದ ಬಿಡುಗಡೆ ಸಾಧ್ಯವಾದದ್ದು. ಬೆದರಿಸುವ ಇಂಥ ಶಕ್ತಿಗಳ ಮುಂದೆ ಚಿತ್ರ ನಿರ್ಮಾಪಕ/ನಿರ್ದೇಶಕರು ಮಂಡಿಯೂರಬೇಕಾಗಿರಲಿಲ್ಲ. ಆದರೆ, ಪ್ರಜಾಸತ್ತೆಯಲ್ಲಿ ಚರ್ಚೆಸಂವಾದಗಳಿಗೆ ಅವಕಾಶವೇ ಇಲ್ಲದ ಇಂದಿನ ಪರಿಸ್ಥಿತಿಯಲ್ಲಿ ತೋಳ್ಬಲವೇ ವಿಜೃಂಭಿಸುತ್ತಿರುವಾಗ ಕೋಟಿಗಟ್ಟಳೆ ರೂ. ಬಂಡವಾಳ ಹೂಡಿದವರ ಅಸಹಾಯಕತೆ ಯಾರಿಗಾದರೂ ಅರ್ಥವಾಗುವಂಥಾದ್ದೇ. ಇಂಥ ಪರಿಸ್ಥಿತಿ ನಿರ್ಮಾಣವಾಗಿರುವುದು ಹಾಗೂ ಪ್ರಜಾಸತ್ತೆಯಲ್ಲಿ ಸಂವಿಧಾನದತ್ತವಾದ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಬಾಹುಬಲ ಪ್ರದರ್ಶಿಸುವ ಅಂಧಾಭಿಮಾನಿಗಳ ಹಂಗಿನಲ್ಲಿ ಸೆರೆಯಾಗಿರುವುದು ಶೋಚನೀಯ.

ರಜಪೂತ ರಾಣಿ ಪದ್ಮಿನಿ, ಶತ್ರುಗಳ ಕೈಸೆರೆಯಾಗುವ ಬದಲು ಅಗ್ನಿಗೆ ಸಮರ್ಪಿಸಿಕೊಳ್ಳುವುದೇ ಸೂಕ್ತವೆಂದು ನಿರ್ಧರಿಸಿ ರಜಪೂತ ಸಂಪ್ರದಾಯಾನುಸಾರವಾದ ಜೋಹರ್ ಪದ್ಧತಿಯಂತೆ ಹದಿನಾರು ಸಾವಿರ ಸಖಿಯರೊಡನೆ ಅಗ್ನಿಪ್ರವೇಶ ಮಾಡಿ ಪ್ರಾಣಾರ್ಪಣ ಮಾಡಿಕೊಂಡ ಮಹಾಸತಿ ಎಂದು ಇತಿಹಾಸ ಹೇಳುತ್ತದೆ. ಈ ಇತಿಹಾಸ ಕುರಿತು ಭನ್ಸಾಲಿಯವರು ಮತ್ತಷ್ಟು ಸಂಶೋಧನೆ ನಡೆಸಿ ಹೊಸ ಶೋಧಗಳನ್ನೇನಾದರೂ ಕಂಡುಕೊಂಡಿರಬಹುದೇ ಎಂಬುದು ಬೆಳಕಿಗೆ ಬಂದಿಲ್ಲ. ಭನ್ಸಾಲಿಯವರ ‘ಪದ್ಮಾವತಿ’ಯ ಚಿತ್ರಕಥೆ ಅಷ್ಟೇನೂ ಕರಾರುವಾಕ್ಕಾಗಿಲ್ಲ, ತನ್ನನು ಸೆರೆಹಿಡಿದ ಅಲ್ಲಾಉದ್ದಿನ್ ಖಿಲ್ಜಿಯ ಜೊತೆ ಪ್ರಣಯ ಕೇಳಿಯಲ್ಲಿ ತೊಡಗಿರುವಂತೆ ಕನಸಿನ ದೃಶ್ಯವೊಂದರಲ್ಲಿ ಪದ್ಮಿನಿಯನ್ನು ಬಿಂಬಿಸಲಾಗಿದೆ ಎಂಬುದು ವಿರೋಧಿಗಳ ಆರೋಪ. ಭನ್ಸಾಲಿಯವರು ಈ ಆರೋಪವನ್ನು ನಿರಾಕರಿಸಿಯೂ ಇಲ್ಲ ದೃಢಪಡಿಸಿಯೂ ಇಲ್ಲ. ಎಲ್ಲವೂ ಚೆನ್ನಾಗಿದೆ. ಸುಲ್ತಾನ ಮತ್ತು ರಜಪೂತ ರಾಣಿಯ ನಡುವಣ ಪ್ರಣಯ ದೃಶ್ಯ ಚಿತ್ರದಲ್ಲಿಲ್ಲ ಎಂದು ಹಲ್ಲೆಯ ನಂತರ ಹೇಳಿದ್ದಾರೆ. ಭನ್ಸಾಲಿಯವರು ಹಿಂದೆಯೂ ‘ಭಾಜಿರಾವ್ ಮಸ್ತಾನಿ’ ಮತ್ತು ‘ರಾಮಲೀಲ’ ಚಿತ್ರಗಳಲ್ಲೂ ವಿವಾದಗಳಲ್ಲಿ ಸಿಲುಕಿ ಕೊಂಡಿದ್ದರು. ಕಲೆ ಆಖೈರಾಗಿ ಸಮಾಜವನ್ನು ಆತ್ಮಾವಲೋಕನಕ್ಕೆ ಪ್ರೇರೇಪಿಸುವಂತಿರಬೇಕು, ಅವುಗಳಲ್ಲಿನ ಸಾಮಾಜಿಕ ವಿಮರ್ಶೆ ಸಮಾಜವನ್ನು ಸರಿಹಾದಿಗೆ ಹಚ್ಚುವ ರೀತಿಯಲ್ಲಿ ಹೊಸ ಅರಿವು ಮೂಡಿಸುವಂತಿರಬೇಕು ಎಂಬುದಕ್ಕೆ ಯಾರ ತಕರಾರೂ ಇರದು. ಆದರೆ ಸಮುದಾಯಗಳ ಭಾವನೆಗಳಿಗೆ ನೋವುಂಟುಮಾಡುವಂಥ, ಮುಜುಗರವುಂಟುಮಾಡುವಂಥ ಸೂಕ್ಷ್ಮಸಂಗತಿಗಳಲ್ಲಿ ಸಾಹಿತಿ-ಕಲಾವಿದರು, ಚಿತ್ರ ನಿರ್ಮಾಪಕ ನಿರ್ದೇಶಕರು ಹೆಚ್ಚು ಜಾಗರೂಕತೆಯಿಂದಿರಬೇಕಾದ್ದು ಅತ್ಯಗತ್ಯ. ಗಲ್ಲಾ ಪೆಟ್ಟಗೆ ಹಾಗೂ ರಸಿಕರ ಇಂದ್ರಿಯಸಂವೇದಿ ಆಸೆಗಳನ್ನು ತಣಿಸಬೇಕಾದ ಆಮಿಷಗಳು ಏನೇ ಇದ್ದರೂ ಅಂಥ ಪ್ರಲೋಭನೆಗಳಿಂದ ಮುಕ್ತರಾಗಬೇಕು. ಸಮಾಜದಲ್ಲಿನ ಆರೋಗ್ಯಪೂರ್ಣ ಸಾಮರಸ್ಯವನ್ನು ಕಾಪಾಡುವ ಹೊಣೆಗಾರಿಕೆಯನ್ನು ಅವರು ಮರೆಯುವಂತಿಲ್ಲ.

ಸತ್ಯವನ್ನು ಬಿಂಬಿಸುವ ಅನಿವಾರ್ಯತೆಯಲ್ಲೂ ಅದಕ್ಕೆ ಪೂರಕವಾದ ಸಂಶೋಧನೆಯ ಹೊಸಶೋಧಗಳ ಬೆಂಬಲ ಸಾಮಗ್ರಿ ಇರಬೇಕು. ಹಿತಾಸಕ್ತ ಗುಂಪುಗಳ ದೃಷ್ಟಿ ಕೋನದಂತೆಯೇ ಕಲೆ ಸಾಗಬೇಕು ಎನ್ನುವುದಾದರೆ ಸುಳ್ಳುಗಳ ಕಂತೆಯಷ್ಟೆ ಇತಿಹಾಸವಾಗುತ್ತದೆ ಎನ್ನುವ ವಾದವನ್ನು ತಳ್ಳಿಹಾಕುವಂತಿಲ್ಲ ಎಂಬುದು ನಿಜವಾದರೂ ಸತ್ಯವನ್ನು ಬಿಂಬಿಸುವ ರೀತಿಯಂತೂ ಮುಖ್ಯವಾಗುತ್ತದೆ. ಅಪ್ರಿಯವಾದ ಸತ್ಯವನ್ನು ಬಿಂಬಿಸಬೇಕಾದ ಅನಿವಾರ್ಯತೆಯಲ್ಲೂ ಮಾನವ ಮನಸ್ಸಿನ ಸೂಕ್ಷ್ಮತೆಗಳನ್ನು, ಭಾವನೆ, ಸಂವೇದನೆಗಳನ್ನು ಗಮನದಲ್ಲಿಟ್ಟುಕೊಂಡೇ ಅಭಿವ್ಯಕ್ತಿ ಮಾರ್ಗವನ್ನು ಕಂಡುಕೊಳ್ಳಬೇಕಾಗುತ್ತದೆ. ಸಮಾಜದ ಆರೋಗ್ಯ, ಸಾಮರಸ್ಯಗಳಷ್ಟೇ ಕಲಾಭಿವ್ಯಕ್ತಿಯ ಸ್ವಾತಂತ್ರ್ಯವನ್ನು, ಕಥೆ-ಪಾತ್ರಗಳ ಚೌಕಟ್ಟಿನೊಳಗಣ ಸೂಕ್ಷ್ಮಸಂವೇದನೆಗಳನ್ನು ಅರಿತುಕೊಳ್ಳುವ, ಸತ್ಯವನ್ನು ತಿಳಿದುಕೊಳ್ಳುವ ಸಂಯಮವನ್ನು ಜನತೆ ತೋರಬೇಕಾದುದೂ ಅಪೇಕ್ಷಣೀಯ. ಇಂಥ ಯಾವ ಪ್ರಯತ್ನವನ್ನೂ ಮಾಡದೆ ಹೇಳಿಕೆ ಮಾತುಗಳನ್ನೋ ವರದಿಗಳನ್ನೋ ಕೇಳಿಕೊಂಡು ಹಿಂಸಾಚಾರಕ್ಕಿಳಿಯುವುದು ಅಥವಾ ಸೆನ್ಸಾರ್ ಮಂಡಳಿಯ ಕೆಲಸವನ್ನು, ಕಾಯ್ದೆಯನ್ನು ತಾನೇ ಕೈಗೆತ್ತಕೊಳ್ಳುವುದು ದುಡುಕಿನ ವರ್ತನೆಯಾಗುತ್ತದೆ.

ಚಲನಚಿತ್ರೋತ್ಸವಗಳು ಕೇವಲ ದೇಶವಿದೇಶಗಳ ಚಿತ್ರಗಳ ಪ್ರದರ್ಶನಕ್ಕಷ್ಟೇ ಸೀಮಿತಗೊಳ್ಳದೆ ಅಭಿವ್ಯಕ್ತಿ ಸ್ವಾತಂತ್ರ್ಯ, ಪ್ರೇಕ್ಷಕರಲ್ಲಿ ಸದಭಿರುಚಿ, ರಸಾನುಭೂತಿ, ಮೌಲ್ಯ ಚಿಂತನೆ, ಇತ್ಯಾದಿ ಚಿತ್ರೋದ್ಯಮದ ನೀತಿಪರತೆ ಮತ್ತು ಹೊಣೆಗಾರಿಕೆಗಳ ಬಗ್ಗೆಯೂ ಚರ್ಚಿಸಲು ವೇದಿಕೆಯಾಗಬೇಕು. ಫೆ 9ರಂದು ಮುಕ್ತಾಯಗೊಂಡ ಬೆಂಗಳೂರಿನ ಅಂತರ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅಂಥ ಚರ್ಚೆಗಳೇನೂ ನಡೆದಂತೆ ವರದಿಯಾಗಿಲ್ಲ. ಸಂಜಯ ಲೀಲ ಭನ್ಸಾಲಿಯವರ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದಿ ಚಿತ್ರರಂಗ ತುಂಬ ಕಟುವಾಗಿಯೇ ಪ್ರತಿಕ್ರಿಯಿಸಿದೆ. ಮಾದರಿಗೆ ಒಂದು ಪ್ರತಿಕ್ರಿಯೆಯನ್ನು ಗಮನಿಸಬಹುದು. ಸಾಂಸ್ಕೃತಿಕ ಸ್ವಾತಂತ್ರ್ಯದ ಮೇಲಣ ದಾಳಿಗೆ ದೇಶದ ರಾಜಕೀಯ ಪರಿಸರ-ವಾತಾವರಣಗಳೇ ಕಾರಣ ಎನ್ನುವ ನಿರ್ದೇಶಕ ಹನ್ಸಲ್ ಮೆಹ್ತಾ ಅವರ ಪ್ರಕಾರ, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಹಲ್ಲೆಗೆ, ಸಂಸ್ಕೃತಿ ರಕ್ಷಣೆಯ ಸ್ವಯಂನೇಮಿತ ನಗಣ್ಯ ಸಂಘಟನೆಗಳಿಗೆ ನಮ್ಮದೇಶದಲ್ಲಿನ ರಾಜಕೀಯ ಪರಿಸರದ ಪ್ರೋತ್ಸಾಹ-ಬೆಂಬಲ ಸಿಗುತ್ತಿರುವುದೇ ಕಾರಣ. ಹನ್ಸಲ್ ಮೆಹ್ತಾರವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ‘‘ನನ್ನ ಸ್ವಾತಂತ್ರ್ಯವನ್ನು ನೀವು ಹತ್ತಿಕ್ಕುವುದಾದಲ್ಲಿ ನಾನು ನಿಮ್ಮ ಕಾನೂನುನಿಯಮಗಳನ್ನು ಉಲ್ಲಂಘಿಸುತ್ತೇನೆ. ಚಿತ್ರಮಂದಿರದಲ್ಲಿ ಪ್ರದರ್ಶನಕ್ಕೆ ಮುಂಚೆ ರಾಷ್ಟ್ರಗೀತೆ ಪ್ರಸಾರವಾಗುವಾಗ ಎದ್ದು ನಿಲ್ಲುವುದಿಲ್ಲ. ನಮ್ಮ ವಿರುದ್ಧದ ಎಲ್ಲ ಹಲ್ಲೆ ನಿಂದನೆಗಳಿಗೂ ವ್ಯವಸ್ಥೆಯ ಪ್ರೋತ್ಸಾಹ, ಉತ್ತೇಜನಗಳಿಂದ ಹೆಚ್ಚುತ್ತಿರುವ ಹಿಂಸಾಚಾರ ಮತ್ತು ದ್ವೇಷ-ರೋಷಗಳೇ ಸಾಕ್ಷಿ. ಸತ್ಯದ ಪರಿಕಲ್ಪನೆಯೇ ಮಾಯವಾಗಿ ಹೋಗುತ್ತಿದ್ದು ಸುಳ್ಳುಗಳೇ ಚರಿತ್ರೆಯ ಪುಟಗಳಲ್ಲಿ ವಿಜೃಂಭಿಸಲಿದೆ’’ ಎಂದು ಕಠಿಣ ಮಾತುಗಳಲ್ಲಿ ನಿರ್ದಾಕ್ಷಿಣ್ಯವಾಗಿ ಹೇಳಿದ್ದಾರೆ.

ಇದೊಂದು ಕೋಪ-ಹತಾಶೆ-ನೋವುಗಳ ಸಮ್ಮಿಶ್ರ ಪ್ರತಿಕ್ರಿಯೆಯಂತೆ ಕಾಣುತ್ತದೆ. ಧರ್ಮ, ಸಂಸ್ಕೃತಿ, ಪರಂಪರೆಗಳ ಸ್ಪಷ್ಟ ತಿಳುವಳಿಕೆಯಿಲ್ಲದ ನಗಣ್ಯ ಗುಂಪುಗಳು/ಸಂಘಟನೆಗಳ ದುಂಡಾವರ್ತಿಗೆ, ಅವು ಕಾರುವ ದ್ವೇಷರೋಷಗಳ ನಂಜಿನ ನುಡಿಗಳಿಗೆ, ಅವುಗಳ ಬೆನ್ನಿಗಿರುವ ರಾಜಕೀಯ ಕುಮ್ಮಕ್ಕೇ ಕಾರಣ ಎನ್ನುವುದರಲ್ಲಿ ಎರಡು ಮಾತಿರಲಾರದು. ಕಾಂಗ್ರೆಸ್, ಬಿಜೆಪಿಯಲ್ಲದೆ ಎಲ್ಲ ಪಕ್ಷಗಳೂ ರಾಜಕೀಯ ಉದ್ದೇಶಗಳಿಗಾಗಿ ಪುಂಡುಪಟಾಲಮ್ಮುಗಳನ್ನು ಪೋಷಿಸಿ ಬೆಳೆಸುತ್ತಿರುವುದು, ಅವುಗಳನ್ನು ಓಟಿನ ಬ್ಯಾಂಕುಗಳಾಗಿ ಪರಿವರ್ತಿಸಿಕೊಳ್ಳುತ್ತಿರುವುದು ಹಗಲ ಬೆಳಕಿನಷ್ಟೇ ಸ್ಪಷ್ಟ. ಇದನ್ನು ನಿಲ್ಲಿಸುವ ಕೆಲಸದಲ್ಲಿ ಪಕ್ಷಭೇದ ಮರೆತು ಎಲ್ಲರೂ ಒಂದಾಗ ಬೇಕು. ಇಲ್ಲವಾದಲ್ಲಿ ಈಗಾಗಲೇ ಜಾತಿಕೋಮುಗಳ ಆಧಾರದ ಮೇಲೆ ಛಿದ್ರವಾಗಿರುವ ಸಮಾಜ ಕ್ಷೋಭೆಗೆ ಹದಗೊಂಡ ನೆಲವಾಗುವ ದಿನಗಳು ದೂರವಿರಲಾರವು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)