varthabharthi

ಅನುಗಾಲ

ಗಾಂಧಿಯ ‘ಅನಾಸಕ್ತಿ ಯೋಗ’

ವಾರ್ತಾ ಭಾರತಿ : 23 Feb, 2017
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಗಾಂಧಿ ತನ್ನ ಕೃತಿಗಿಟ್ಟ ಶೀರ್ಷಿಕೆಯನ್ನು ತೀರಾ ಸರಳವಾಗಿ ಮತ್ತು ಚುಟುಕಾಗಿ ‘‘ನಿಷಿದ್ಧವಾದುದು ಫಲಾಸಕ್ತಿ, ವಿಹಿತವಾದುದು ಅನಾಸಕ್ತಿ’’ ಎಂದು ಹೇಳಿದ್ದಾರೆ. ಇಷ್ಟು ಹೇಳಿ ಗಾಂಧಿಗೆ ಗೀತೆ ‘ಬುದ್ಧಿಗಮ್ಯವಲ್ಲ, ಹೃದಯಗಮ್ಯ’ ಎಂದು ಅನ್ನಿಸಿರುವುದು ಅವರ ವೈಚಾರಿಕತೆಗೆ ಸಾಕ್ಷಿ. ಅವರು ಮಿತಿಯನ್ನು ಗುರುತಿಸಿದರೂ ಮಿತಿಯನ್ನು ಹಾಕಿಕೊಟ್ಟವರಲ್ಲ. ಅವರ ಎಲ್ಲ ವಿಚಾರಗಳೂ ಬಂಧನದಂತೆ ಅನ್ನಿಸುವುದು ಇದೇ ಕಾರಣಕ್ಕೆ.


ಮಹಾಭಾರತದಲ್ಲಿ ಎರಡು ಭಾಗಗಳು ಪ್ರತ್ಯೇಕ ಅಸ್ತಿತ್ವವನ್ನು ಪಡಕೊಳ್ಳುವಲ್ಲಿ ಯಶಸ್ವಿಯಾಗಿವೆ: 1. ಭಗವದ್ಗೀತೆ. 2. ವಿಷ್ಣು ಸಹಸ್ರನಾಮ. ಎರಡೂ ಕಾವ್ಯದ ಭಾಗಗಳೇ. ಆದರೆ ಅವನ್ನು ಅಧ್ಯಯನಕ್ಕಿಂತ ಹೆಚ್ಚು ಪಾರಾಯಣಕ್ಕೆ ಬಳಸಲಾಗಿದೆ ಮತ್ತು ಆ ಮೂಲಕ ಪುಣ್ಯ ಸಂಚಯವಾಗುವುದೆಂದು ಬಿಂಬಿಸಲಾಗಿದೆ. ಯಕ್ಷಪ್ರಶ್ನೆ, ವಿದುರನೀತಿ, ನಹುಷನ ಪ್ರಸಂಗ ಹೀಗೆ ಪ್ರತ್ಯೇಕ ಅಸ್ತಿತ್ವದ ಪ್ರಸಂಗಗಳಿದ್ದರೂ ಇವು ಮಾತ್ರ ಯಾಕೆ ಪೂಜನೀಯವಾದುವೆಂದು ಗೊತ್ತಿಲ್ಲ. ಮಹಾಭಾರತವನ್ನು ಅನೇಕ ಮನೆಗಳಲ್ಲಿ ಪುಣ್ಯಪೀಠದಲ್ಲಿಟ್ಟು ಅರ್ಚಿಸಿ ಪೂಜಿಸುತ್ತಾರೆ. ವಿಷ್ಣು ಸಹಸ್ರನಾಮ ಮತ್ತು ಗೀತೆ ಇವಿಲ್ಲದ ಹಿಂದೂ ಮನೆಗಳು ವಿರಳ. ಲೌಕಿಕ-ಪಾರಲೌಕಿಕ ಎಂಬ ಎರಡು ಹಂತ/ಭಾವಗಳಲ್ಲಿ ಗೀತೆಯನ್ನು ದರ್ಶಿಸಲಾಗಿದೆ. ಗೀತೆಯ ಅರ್ಥ ವಿವರಣೆ, ಪ್ರತಿ-ಪದಾರ್ಥ ಹೆಚ್ಚುಕಡಿಮೆ ಎಲ್ಲಾ ಅನುವಾದ/ಭಾಷ್ಯಗಳಲ್ಲಿ ಒಂದೇ ರೀತಿ ಇದೆ. ಆದರ ಸಾರವನ್ನು ಒಬ್ಬೊಬ್ಬರೂ ಒಂದೊಂದು ರೀತಿಯಲ್ಲಿ ಹೇಳಿದ್ದಾರೆ. ಬಹುಪಾಲು ವ್ಯಾಖ್ಯಾನಗಳು ವಿದ್ವಜ್ಜನರು ತಮ್ಮಂಥವರಿಗಾಗಿಯೇ ರಚಿಸಿದವುಗಳು. ಅವುಗಳನ್ನು ಹಿಡಿಯಹೊರಟರೆ ನೆರಳಿನಂತೆ ಅವು ದೂರ ಸರಿಯುತ್ತವೆ. ಬದಲಾಗಿ ಸರಳ ಅನುವಾದಗಳನ್ನು ಹಿಂಬಾಲಿಸಿದರೆ ಅವು ಒಂದಿಷ್ಟೂ ಕ್ಲಿಷ್ಟವಾಗದೆ ಜೀರ್ಣವಾಗಬಹುದು. ಮಹಾತ್ಮ ಗಾಂಧಿ ರಚಿತ ‘ಅನಾಸಕ್ತಿ ಯೋಗ’ ಪಾಮರರಿಗೂ ಅರ್ಥವಾಗುವಂತಿದೆ. ಗುಜರಾತಿ ಭಾಷೆಯಲ್ಲಿದ್ದ ಇದನ್ನು ಸಿದ್ದವನಹಳ್ಳಿ ಕೃಷ್ಣ ಶರ್ಮ ಹಾಗೂ ಅ. ರಾಮಮೂರ್ತಿ ಕನ್ನಡಿಸಿದ್ದಾರೆ.

ಗಾಂಧಿ ಕಂಡ ಗೀತೆ ‘ಅನಾಸಕ್ತಿ ಯೋಗ’. ‘ನಿರಾಸಕ್ತಿ’ ಎಂಬ ಪದವನ್ನು ಜೊತೆಗಿಟ್ಟರೆ ಈ ಪದ ಸುಲಭವಾಗಿ ಅರ್ಥವಾಗುತ್ತದೆ. ಯೋಗಿಗೆ ಜಾತಿ-ಮತ-ಧರ್ಮದ ಹಂಗಿಲ್ಲ. ಆತ ಎಲ್ಲವನ್ನೂ ಮೀರಿದವನು. ಅವನಿಗೆ ಲೌಕಿಕದ ಹಂಗಿಲ್ಲ. ನಾಸ್ತಿಕನಾಗಿದ್ದರೂ ಚಾರ್ವಾಕನಾಗಿದ್ದರೂ ಅವನ ಬದುಕು ಕರ್ಮವನ್ನನುಸರಿಸಿರುತ್ತದೆ. ಅಂಥವನು ಯಾವುದನ್ನೂ ಬರಹೇಳದೆ ಬಂದದ್ದನ್ನು ಯಥಾವತ್ತಾಗಿ ಸ್ವೀಕರಿಸುವನು. ಆದ್ದರಿಂದ ಫಲಾಪೇಕ್ಷೆಯಿಲ್ಲದೆ ಕರ್ಮ ಮಾಡುವುದೇ ಅನಾಸಕ್ತಿ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಎಲ್ಲರೂ ಅಧಿಕಾರಕ್ಕಾಗಿ ದಿಲ್ಲಿಯಲ್ಲಿದ್ದಾಗ ಗಾಂಧಿ ನೌಕಾಲಿಯಲ್ಲಿ ಜನಸೇವೆ ಮಾಡುತ್ತಿದ್ದರು. ಇದು ಅನಾಸಕ್ತಿ.

ಗಾಂಧಿಯ ಜೀವನ ದೃಷ್ಟಿ ಈ ಕೃತಿಗೆ ಅವರೇ ಬರೆದ ಮುನ್ನುಡಿ ಮತ್ತು ಕೃತಿ ಪ್ರವೇಶದ ಹೊಸ್ತಿಲಾಗಿ ಅವರು ನೀಡಿದ ಪ್ರಸ್ತಾವನೆಯಲ್ಲಿ ಸ್ಪಷ್ಟವಾಗುತ್ತದೆ. ಗಾಂಧಿ ಗೀತೆಯ ಬಗ್ಗೆ ಮೂರು ಹಂತಗಳನ್ನಿಟ್ಟುಕೊಂಡಿದ್ದರು: ಓದು, ವಿಚಾರ ಮಾಡು ಮತ್ತು ಅನುಸರಿಸಲು ಯತ್ನಿಸು. ಈ ಹಂತಗಳನ್ನು ದಾಟಬೇಕಾದರೆ ಅವರು ನಲ್ವತ್ತು ವರುಷಕ್ಕೂ ಮಿಕ್ಕಿ ಬದುಕು ಸವೆಸಿದ್ದರು. ಗೀತೆಯನ್ನು ಅರ್ಥ ಮಾಡಿಕೊಂಡದ್ದನ್ನು ಜನತೆಯ ಮುಂದೆ ಇಡಬೇಕೆಂಬ ಕೆಲವು ಮಿತ್ರರ ಬಲವಂತಕ್ಕೆ ಅವರು ಗೀತಾನುವಾದವನ್ನು ಬರೆಯಲಾರಂಭಿಸಿದರು.

ಗಾಂಧಿಯ ಮುನ್ನುಡಿ ಮತ್ತು ಪ್ರಸ್ತಾವನೆಗಳಲ್ಲಿ ಸಂಸ್ಕೃತಾಭ್ಯಾಸವಿಲ್ಲದ ಅವರ ಕೊರಗು, ಅಳಲು ಮತ್ತು ಅಳುಕಿದೆ. ಇದು ಒಂದಕ್ಕಿಂತ ಹೆಚ್ಚು ಸಂದರ್ಭಗಳಲ್ಲಿ ವ್ಯಕ್ತವಾಗಿದೆ. ಈ ಮನಸ್ಥಿತಿ ಅರ್ಜುನನ ದ್ವಂದ್ವವೂ ಹೌದು. ಗಾಂಧಿ ‘‘ಪಂಡಿತರ ದೃಷ್ಟಿಯಿಂದ ನೋಡಿದರೆ ನನ್ನಲ್ಲಿ ಯೋಗ್ಯತೆ ಯೇನೂ ಇಲ್ಲ: ಆದರೆ ಆಚರಣೆಯ ದೃಷ್ಟಿಯಿಂದ ನಾನು ಗೀತೆಯನ್ನು ಚೆನ್ನಾಗಿ ಬಲ್ಲೆ.’’ ಎಂದು ಬರೆಯುತ್ತಾರೆ. ‘‘ಮುಂದೆ ಸನ್ 1888-89ರಲ್ಲಿ ಎಡ್ವಿನ್ ಆರ್ನಾಲ್ಡರ ಇಂಗ್ಲಿಷ್ ಪದ್ಯಾನುವಾದದ ಮೂಲಕ ನನಗೆ ಮೊಟ್ಟ ಮೊದಲು ಗೀತೆಯ ಪರಿಚಯವಾಯಿತು. ಅದನ್ನು ಓದಿದ ಮೇಲೆ ಗೀತೆಯ ಗುಜರಾತಿ ಭಾಷಾಂತರವನ್ನು ಓದುವ ಇಚ್ಛೆ ಬಲವಾಯಿತು. ಕೈಗೆ ಸಿಕ್ಕ ಅನುವಾದಗಳನ್ನೆಲ್ಲ ಓದಿದೆ. ಆದರೆ ಇಷ್ಟು ಮಾತ್ರಕ್ಕೆ ಜನತೆಯ ಎದುರು ನನ್ನ ಅನುವಾದ ಹಿಡಿದು ನಿಲ್ಲಲು ನನಗೆ ಸ್ವಲ್ಪವೂ ಅಧಿಕಾರವಿಲ್ಲ- ಅಷ್ಟೇ ಅಲ್ಲ, ನನ್ನ ಸಂಸ್ಕೃತ ಜ್ಞಾನವೂ ಅಲ್ಪ. ಗುಜರಾತಿ ಸಾಹಿತ್ಯದ ಜ್ಞಾನವೂ ಇಲ್ಲ. ಹಾಗಾದರೆ ಗೀತೆಯನ್ನು ಅನುವಾದಿಸುವ ಧಾರ್ಷ್ಟ್ಯವನ್ನು ನಾನೇಕೆ ಮಾಡಿದೆ?’’ ಹಾಗೂ ‘‘ಈ ಅನುವಾದದಲ್ಲಿ ನನ್ನ ಸಂಗಾತಿಗಳು ಸಹಾಯ ಮಾಡಿದ್ದಾರೆ. ಏಕೆಂದರೆ ನನ್ನ ಸಂಸ್ಕೃತ ಜ್ಞಾನ ಅಲ್ಪ, ಶಬ್ದಾರ್ಥಗಳ ವಿಚಾರದಲ್ಲಿ ನನಗೆ ಸಂಪೂರ್ಣ ವಿಶ್ವಾಸವಿರಲಿಲ್ಲ; ಈ ದೃಷ್ಟಿಯಿಂದ ಈ ಅನುವಾದವನ್ನು ವಿನೋಬಾ, ಕಾಕಾ ಕಾಲೇಲಕರ, ಮಹಾದೇವ ದೇಸಾಯಿ, ಕಿಶೋರಲಾಲ ಮಶರೂವಾಲ ಇವರು ನೋಡಿದ್ದಾರೆ.’’ ಎನ್ನುತ್ತಾರೆ.

ಗಾಂಧಿಗೆ ಗೀತೆ ಐತಿಹಾಸಿಕ ಗ್ರಂಥವಲ್ಲ. (ಈ ದೇಶದ ಎಲ್ಲ ಪುರಾಣ ವನ್ನೂ ಇತಿಹಾಸಕ್ಕೆ ಥಳಕು ಹಾಕುವವರು ಗಾಂಧಿಯ ಒಳನೋಟಗಳನ್ನು ಗಮನಿಸಬೇಕು!) ಅವರಿಗೆ ಮಹಾಭಾರತ ಒಂದು ರೂಪಕ. ಅದಕ್ಕಾಗಿಯೇ ಯುದ್ಧರಂಗದಲ್ಲಿ ಗೀತೋಪದೇಶವನ್ನು ಸೃಷ್ಟಿಸಲಾಗಿದೆ. ಕೌರವ-ಪಾಂಡವರು ಮನುಷ್ಯನ ಹೃದಯದಲ್ಲಿ ನಿರಂತರವಾಗಿ ನಡೆಯುವ ಒಳಿತು-ಕೆಡುಕುಗಳ ಸಂಕೇತಗಳು. ಮನಸ್ಸಿನ ತಾಕಲಾಟವೇ ಇಲ್ಲಿ ಯುದ್ಧದ ರೂಪವನ್ನು ತಾಳಿದೆ. ಅವರು ‘ಹೃದಯಗತ ಯುದ್ಧವನ್ನು ಮನೋರಂಜಕವಾಗಿ ಮಾಡಲು ಬಂದಿದೆ ಮಾನವ ಯೋಧರ ಕಲ್ಪನೆ ಎನಿಸಿತು.’ ‘ಪಾತ್ರಗಳ ಮಾನುಷ-ಅಮಾನುಷ ಉತ್ಪತ್ತಿಯ ವರ್ಣನೆ ಮಾಡಿ’ ವ್ಯಾಸರು ‘ರಾಜಪ್ರಜೆಗಳ ಇತಿಹಾಸವನ್ನು ನಿರ್ಮೂಲಗೊಳಿಸಿದ್ದಾರೆ’ ಮತ್ತು ‘ಧರ್ಮದ ದರ್ಶನ ಮಾಡಿಸಲೆಂದು ಮಹಾಭಾರತದಲ್ಲಿ ಆ ಪಾತ್ರಗಳನ್ನು ಉಪಯೋಗಿಸಿದ್ದಾರೆ.’ ಎನ್ನುತ್ತಾರೆ.

ಗಾಂಧಿ ಹಿಂಸಾ ವಿರೋಧಿ. ಈ ಪ್ರಜ್ಞೆ ಗೀತೆಯ ಅರ್ಥವಿವರಣೆಯಲ್ಲೂ ಅವರನ್ನು ಕಾಡಿದೆ. ಅದಕ್ಕೇ ಅವರು ‘‘ಮಹಾಭಾರತ ಕರ್ತೃ ಭೌತಿಕ ಯುದ್ಧ ಆವಶ್ಯಕವೆಂದಲ್ಲ, ಅದು ನಿರರ್ಥಕವೆಂದೇ ಸಿದ್ಧಪಡಿಸಿದ್ದಾನೆ. ಗೆದ್ದವನನ್ನು ಅಳಿಸಿದ್ದಾನೆ, ಪಶ್ಚಾತ್ತಾಪ ಪಡಿಸಿದ್ದಾನೆ; ಅವನಿಗೆ ದುಃಖವಲ್ಲದೆ ಮತ್ತೇನೂ ದೊರೆಯದಂತೆ ಮಾಡಿದ್ದಾನೆ’’ ಎನ್ನುತ್ತಾರೆ. ಮಹಾಭಾರತದ ಕೊನೆಯಲ್ಲಿ ಈ ಅಂಶ ಸ್ಪಷ್ಟವಾಗುತ್ತದೆ. ಗಾಂಧಿಯ ದೃಷ್ಟಿಯಲ್ಲಿ ಗೀತೆಯ ಉದ್ದೇಶವು ಅರ್ಜುನನ್ನು ಯುದ್ಧಕ್ಕೆ ಸಿದ್ಧಗೊಳಿಸುವುದೇ ಆಗಿದ್ದರೆ ಅಂತಹ ಪ್ರೇರಣೆ, 2ನೆ ಅಧ್ಯಾಯದಲ್ಲೇ ಇರಬೇಕಾಗಿತ್ತು. ಹದಿನೆಂಟು ಅಧ್ಯಾಯಗಳು ಇರಬೇಕಾಗಿರಲಿಲ್ಲ. ಅದಕ್ಕೇ ಅವರು ಗೀತೆಯ ಎರಡನೆಯ ಅಧ್ಯಾಯ ಭೌತಿಕ ಯುದ್ಧದ ವ್ಯವಹಾರವನ್ನು ತಿಳಿಸುವುದಕ್ಕೆ ಬದಲು ಸ್ಥಿತಪ್ರಜ್ಞನ ಲಕ್ಷಣಗಳನ್ನು ಬೋಧಿಸುತ್ತದೆ ಮತ್ತು ಸ್ಥಿತಪ್ರಜ್ಞನ ಲಕ್ಷಣಗಳಿಂದಲೇ ಅವನಿಗೂ ಐಹಿಕ ಯುದ್ಧಕ್ಕೂ ಯಾವ ಸಂಬಂಧವೂ ಇರಲಾರದೆಂಬುದು ಕಂಡುಬರುತ್ತದೆ ಎಂದು ಗಮನಿಸುತ್ತಾರೆ. ಅಲ್ಲದೆ ಸಾಮಾನ್ಯ ಕೌಟುಂಬಿಕ ಕಲಹಗಳ ಔಚಿತ್ಯ ಅನೌಚಿತ್ಯಗಳ ನಿರ್ಣಯ ಮಾಡಲು ಗೀತೆಯಂಥ ಗ್ರಂಥನಿರ್ಮಾಣ ಅಸಂಭವ ಎಂದು ಖಚಿತವಾಗಿ ಹೇಳುತ್ತಾರೆ. ಗಾಂಧಿ ತನ್ನ ಹೋರಾಟದಲ್ಲಿ ಹಿಂಸೆಯನ್ನು ಒಪ್ಪಿಕೊಳ್ಳದಿದ್ದುದುಈ ಆಧ್ಯಾತ್ಮಿಕ ಪ್ರೇರಣೆಯಿಂದಲೇ.

ಗಾಂಧಿ ತನ್ನ ಕಾಲಕ್ಕಿಂತ ಮುಂದಿದ್ದರು. ಗಾಂಧಿ ‘‘ಗೀತೆಯ ಕೃಷ್ಣ ಮೂರ್ತಿಮಂತ, ಶುದ್ಧ, ಸಂಪೂರ್ಣಜ್ಞಾನ, ಆದರೆ ಕಾಲ್ಪನಿಕ. ಎಂದರೆ ಕೃಷ್ಣ ಎಂಬ ಅವತಾರ ಪುರುಷ ಇರಲಿಲ್ಲ ಎಂದಲ್ಲ. ಸಂಪೂರ್ಣ ಕೃಷ್ಣ ಮಾತ್ರ ಕಾಲ್ಪನಿಕ. ಸಂಪೂರ್ಣಾವತಾರದ ಆರೋಪಣೆ ಆ ಮೇಲಿನದು’’ ಎನ್ನುತ್ತಾರೆ. ಅವರ ದೃಷ್ಟಿಯಲ್ಲಿ ‘‘ಯಾರು ತನ್ನ ಕಾಲದಲ್ಲಿ ಇತರರಿಗಿಂತ ಶ್ರೇಷ್ಠ ಧಾರ್ಮಿಕನೋ ಅವನನ್ನು ಮುಂದಿನ ಪೀಳಿಗೆ ಅವತಾರ ಪುರುಷನೆಂದು ಪೂಜಿಸುತ್ತದೆ.’’ ‘‘ಆದಮ್ ದೇವರಲ್ಲ. ಆದರೆ ದೇವರ ಮಹಿಮೆಯಿಂದ ಅವನು ಪ್ರತ್ಯೇಕವಲ್ಲ.’’ ಸಾಹಿತಿಯಲ್ಲದ ಗಾಂಧಿ ಗೀತೆಯನ್ನು ಸಾಹಿತ್ಯಕವಾಗಿ ಗ್ರಹಿಸುವ ಕ್ರಮವನ್ನು ಗಮನಿಸಿದರೆ ಅಚ್ಚರಿಯಾಗುತ್ತದೆ. ‘‘ಈಶ್ವರ ರೂಪ ಹೊಂದದೆ ಮನುಷ್ಯನ ಮನಸ್ಸಿಗೆ ಹಿತವಿಲ್ಲ, ಶಾಂತಿಯೂ ಇಲ್ಲ. ಈಶ್ವರ ರೂಪ ಹೊಂದುವ ಪ್ರಯತ್ನವೇ ನಿಜವಾದ ಏಕಮಾತ್ರ ಪುರುಷಾರ್ಥ’’ ಎಂಬ ಅವರ ಮಾತುಗಳು ಅನೇಕ ದಶಕಗಳ ನಂತರ ಅಡಿಗರಲ್ಲಿ ‘‘ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು ಪುರುಷೋತ್ತಮನ ಆ ಅಂಥ ರೂಪರೇಖೆ?’’ ಎಂದು ಕಾವ್ಯವಾಗಿದೆ. ‘‘ಈ ಆತ್ಮದರ್ಶನವೇ ಎಲ್ಲ ಧರ್ಮ ಗ್ರಂಥಗಳ ವಸ್ತು. ಗೀತೆಯಲ್ಲಿಯೂ ಅಷ್ಟೇ. ಆದರೆ ಗೀತೆಯ ಕರ್ತ ಈ ವಿಷಯದ ಪ್ರತಿಪಾದನೆಗಾಗಿ ಗೀತೆಯನ್ನು ರಚಿಸಲಿಲ್ಲ. ಆತ್ಮಾರ್ಥಿಗೆ ಆತ್ಮದರ್ಶನಕ್ಕೆ ಒಂದು ಅದ್ವಿತೀಯ ಉಪಾಯವನ್ನು ತೋರುವುದೇ ಗೀತೆಯ ಆಶಯ’’ ಎಂದು ಗಾಂಧಿ ಆಳವಾಗಿ ಚಿಂತಿಸಿದ್ದಾರೆ.

ಗಾಂಧಿಗೆ ‘‘ಗೀತೆಯಲ್ಲಿ ಹೇಳಿರುವ ಮೋಕ್ಷದ ಅರ್ಥ ಪರಮ ಶಾಂತಿ.’’ ಅವರು ಉದಾಹರಿಸುವಂತೆ ‘‘ಲೌಕಿಕ ದೃಷ್ಟಿಯಿಂದ ಶುಷ್ಕ ಪಂಡಿತನೂ ಜ್ಞಾನಿಯೆನಿಸಿಕೊಳ್ಳುತ್ತಾನೆ.’’ ಗಾಂಧಿ ವಕೀಲ ವೃತ್ತಿಯಲ್ಲಿ ಸತ್ಯಕ್ಕೆ, ಸತ್ಯದ ಪ್ರಯೋಗಕ್ಕೆ ಅಪಚಾರವಾಗುತ್ತದೆಂದು ಭಾವಿಸಿದ ಕ್ಷಣದಲ್ಲೇ ಅವರು ಗೀತೆಯ ಪರಮೋಚ್ಚ ಅರ್ಥವನ್ನು ಅರಿತರು. ಅವರ ದೃಷ್ಟಿಯಲ್ಲಿ ‘‘ಗೀತಾಕಾರ ಅನಾಸಕ್ತಿಯ-ಕರ್ಮಫಲ ತ್ಯಾಗದ ಸಿದ್ಧಾಂತವನ್ನು ರೂಪುಗೊಳಿಸಿ ಅದನ್ನು ಅತ್ಯಾಕರ್ಷಕ ಭಾಷೆಯಲ್ಲಿ ಜಗತ್ತಿನೆದುರಿಗೆ ಇಟ್ಟಿದ್ದಾನೆ.’’ ‘‘ಸಾಮಾನ್ಯವಾಗಿ ಜನರಿಗೆ ಧರ್ಮ-ಅರ್ಥಗಳು ಪರಸ್ಪರ ವಿರುದ್ಧ ವಸ್ತುಗಳು. ವ್ಯಾಪಾರಾದಿ ಲೌಕಿಕ ವ್ಯವಹಾರದಲ್ಲಿ ಧರ್ಮವನ್ನು ಕಾಪಾಡಿಕೊಳ್ಳಲಾಗುವುದಿಲ್ಲ. ಅಲ್ಲಿ ಧರ್ಮಕ್ಕೆ ಸ್ಥಾನವೇ ಇಲ್ಲ; ಧರ್ಮ ಕೇವಲ ಮೋಕ್ಷಕ್ಕಾಗಿ; ಧರ್ಮದ ಸ್ಥಾನದಲ್ಲಿ ಧರ್ಮ, ಅರ್ಥದ ಸ್ಥಾನದಲ್ಲಿ ಅರ್ಥ ಶೋಭಿಸುತ್ತದೆ ಎಂಬ ಭಾವನೆ. ಗೀತಾಕಾರ ಈ ಭ್ರಮೆಯನ್ನು ನಿವಾರಿಸಿದ್ದಾನೆಂದು ನನ್ನ ಅಭಿಪ್ರಾಯ’’ ಮತ್ತು ‘‘ಮೋಕ್ಷಕ್ಕೂ ವ್ಯವಹಾರಕ್ಕೂ ಯಾವ ಭೇದವನ್ನೂ ಆತ ತೊರಿಸಿಲ್ಲ. ಅದಕ್ಕೆ ಬದಲು ಧರ್ಮವನ್ನೇ ವ್ಯವಹಾರದಲ್ಲಿ ಸೇರಿಸಿದ್ದಾನೆ. ವ್ಯವಹಾರದಲ್ಲಿ ಉಪಯೋಗಕ್ಕೆ ಬಾರದ ಧರ್ಮ ಧರ್ಮವೇ ಅಲ್ಲ ಎಂದು ಗೀತೆಯ ಅಭಿಪ್ರಾಯ; ಹೀಗೆ ನಾನು ತಿಳಿದಿದ್ದೇನೆ’’ ಎನ್ನುತ್ತಾರೆ.

ಅಹಿಂಸೆಗೂ ಗೀತಾಕಾಲಕ್ಕೂ ಗಾಂಧಿ ಸಮೀಕರಣ ಹಾಕಿ ‘‘ಗೀತಾಯುಗದಲ್ಲಿ ಅಹಿಂಸಾ ಧರ್ಮ ಮಾನ್ಯವಾಗಿದ್ದರೂ, ಭೌತಿಕ ಯುದ್ಧ ಸರ್ವ ಸಾಮಾನ್ಯವಾಗಿತ್ತು. ಗೀತಾಕಾರ ಇಂತಹ ಯುದ್ಧದ ಉದಾಹರಣೆಯನ್ನು ಕೊಡಲು ಸಂಕೋಚಪಡಲಿಲ್ಲ, ಪಡುವ ಸಂಭವವೂ ಇರಲಿಲ್ಲ.’’ ಎಂದು ಅಭಿಪ್ರಾಯಪಡುತ್ತಾರೆ. (ಗೀತಾ ಯುಗಕ್ಕೆ ಮುಂಚೆ ಪ್ರಾಯಶಃ ಯಜ್ಞದಲ್ಲಿ ಪಶುಹಿಂಸೆ ಇದ್ದಿರಬಹುದು ಎಂಬುದನ್ನು ಅವರು ಸೂಚಿಸುತ್ತಾರೆ.)

ಗಾಂಧಿಯವರ ಪಾಲಿಗೆ ಗೀತೆ ಒಂದು ಮಹಾ ಧರ್ಮಕಾವ್ಯ. ಅದರೊಳಗೆ ಎಷ್ಟು ಆಳವಾಗಿ ಪ್ರವೇಶಿಸುತ್ತೀರೋ ಅಷ್ಟೇ ನವೀನ, ಸುಂದರ ಅರ್ಥ ನಿಮಗೆ ದೊರೆಯುತ್ತದೆ. ಗೀತೆ ಸರ್ವಸಾಧಾರಣ ವಸ್ತು. ಆದ್ದರಿಂದ ಅದರಲ್ಲಿ ಒಂದೇ ಮಾತನ್ನು ಹಲವು ರೂಪದಲ್ಲಿ ವರ್ಣಿಸಲಾಗಿದೆ. ಆ ಕಾರಣದಿಂದ ಗೀತೆಯಲ್ಲಿ ಬಳಸಿದ ಶಬ್ದಗಳ ಅರ್ಥ ಕಾಲಕಾಲಕ್ಕೆ ವ್ಯತ್ಯಾಸ ಹೊಂದುತ್ತದೆಯಾದರೂ ಮೂಲ ಮಂತ್ರ ಎಂದಿಗೂ ಮಾರ್ಪಾಟಾಗಲಾರದು. ಯಾವ ರೀತಿಯಲ್ಲಿ ಈ ಮಂತ್ರ ಸಿದ್ಧಿಸುತ್ತದೋ ಆ ರೀತಿಯಲ್ಲಿ ಅರ್ಥಮಾಡಿಕೊಳ್ಳಬಹುದು. ಗಾಂಧಿ ತನ್ನ ಕೃತಿಗಿಟ್ಟ ಶೀರ್ಷಿಕೆಯನ್ನು ತೀರಾ ಸರಳವಾಗಿ ಮತ್ತು ಚುಟುಕಾಗಿ ‘‘ನಿಷಿದ್ಧವಾದುದು ಫಲಾಸಕ್ತಿ, ವಿಹಿತವಾದುದು ಅನಾಸಕ್ತಿ’’ ಎಂದು ಹೇಳಿದ್ದಾರೆ. ಇಷ್ಟು ಹೇಳಿ ಗಾಂಧಿಗೆ ಗೀತೆ ‘ಬುದ್ಧಿಗಮ್ಯವಲ್ಲ, ಹೃದಯಗಮ್ಯ’ ಎಂದು ಅನ್ನಿಸಿರುವುದು ಅವರ ವೈಚಾರಿಕತೆಗೆ ಸಾಕ್ಷಿ. ಅವರು ಮಿತಿಯನ್ನು ಗುರುತಿಸಿದರೂ ಮಿತಿಯನ್ನು ಹಾಕಿಕೊಟ್ಟವರಲ್ಲ. ಅವರ ಎಲ್ಲ ವಿಚಾರಗಳೂ ಬಂಧನದಂತೆ ಅನ್ನಿಸುವುದು ಇದೇ ಕಾರಣಕ್ಕೆ.

ಗೀತೆಯ ಪ್ರತೀ ಶ್ಲೋಕಕ್ಕೆ ಗಾಂಧಿ ನೀಡಿದ ಅರ್ಥ ಮತ್ತು ಟಿಪ್ಪಣಿ ತೀರಾ ಸರಳವಾಗಿದೆ. ಯೋಗೇಶ್ವರ ಕೃಷ್ಣ ಎಂದರೆ ಅನುಭವಸಿದ್ಧ ಶುದ್ಧ ಜ್ಞಾನ; ಧನುರ್ಧಾರಿ ಅರ್ಜುನ ಎಂದರೆ ತದನುಸಾರವಾದ ಕ್ರಿಯೆ-ಇವೆರಡರ ಸಂಗಮವಾದಲ್ಲಿ ಸಂಜಯ ಹೇಳಿದುದಲ್ಲದೆ ಮತ್ತಾವ ಪರಿಣಾಮವಾದೀತು? ಎಂದು ಅವರು ನೀಡಿದ ಟಿಪ್ಪಣಿಯು ಅವರ ಯೋಚನಾ ಲಹರಿಗೆ ಕನ್ನಡಿಯಂತಿದೆ. ಅವರ ಪಾಲಿಗೆ ಗೆಲುವು, ವೈಭವಗಳು ಅವಿಚಲ ನೀತಿ. ಗಾಂಧಿ ಇದನ್ನೇ ನುಡಿದರು; ದುಡಿದರು; ಈ ಹಾದಿಯಲ್ಲೇ ನಡೆದರು; ಇದಕ್ಕಾಗಿಯೇ ಮಡಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)