varthabharthi

ದಿಲ್ಲಿ ದರ್ಬಾರ್

ಪಾಸ್ವಾನ್ ಕೋಪ

ವಾರ್ತಾ ಭಾರತಿ : 26 Feb, 2017

ಗ್ರಾಹಕ ವ್ಯವಹಾರಗಳ ಖಾತೆ ಸಚಿವ ರಾಮ್ ವಿಲಾಸ್ ಪಾಸ್ವಾನ್ ಜನಸಾಮಾನ್ಯರಿಗೆ ಸುಲಭವಾಗಿ ಲಭ್ಯವಾಗುವ ಸಚಿವರಲ್ಲೊಬ್ಬರು. ಪ್ರತೀ ದಿನ ತಮ್ಮ ಕಚೇರಿಯಲ್ಲಿ ಲಭ್ಯ ಇರುವ ಅವರು, ತಮ್ಮನ್ನು ಭೇಟಿ ಮಾಡಿದ ಜನಸಾಮಾನ್ಯರ ಅಹವಾಲು ಆಲಿಸುತ್ತಾರೆ. ಇತ್ತೀಚೆಗೆ ಇವರಿಗೆ ವಿಚಿತ್ರ ಸಮಸ್ಯೆ ಎದುರಾಯಿತು. ಬೇರೆ ಕಚೇರಿಯಿಂದ ಎರವಲು ಪಡೆದಿದ್ದ ತಮ್ಮ ಸಿಬ್ಬಂದಿಯೊಬ್ಬರು ಹಿಂದಿನ ಕಚೇರಿ ಹಾಗೂ ಹಾಲಿ ಕಚೇರಿ ಎರಡೂ ಕಡೆಯಿಂದ ವೇತನ ಪಡೆಯುತ್ತಿರುವುದು ತಿಳಿದುಬಂತು. ಇದು ತಿಳಿದದ್ದೇ ತಡ; ಕೆಂಡಾಮಂಡಲವಾದ ಪಾಸ್ವಾನ್, ಆ ವ್ಯಕ್ತಿಗೆ ಹೀನಾಮಾನವಾಗಿ ಬಯ್ದರು. ತಕ್ಷಣ ಒಂದು ಕಡೆ ರಾಜೀನಾಮೆ ನೀಡುವಂತೆ ಸೂಚಿಸಿದ್ದಲ್ಲದೆ, ಇದುವರೆಗೆ ಇನ್ನೊಂದು ಕಚೇರಿಯಿಂದ ಪಡೆದ ಹಣವನ್ನು ಮರುಪಾವತಿ ಮಾಡುವಂತೆಯೂ ಸೂಚಿಸಿದ್ದಾರೆ. ಜತೆಗೆ ವಿಶ್ವಾಸದ್ರೋಹ ಎಸಗಿದ್ದಾಗಿ ಆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಇದೀಗ ಒಂದು ವರ್ಷಕ್ಕೂ ಅಧಿಕ ಕಾಲದಿಂದ ಎರಡೂ ಕಡೆ ವೇತನ ಪಡೆದು ಮಜಾ ಉಡಾಯಿಸುತ್ತಿದ್ದ ಆತ ಅಷ್ಟನ್ನೂ ಮರುಪಾವತಿಸಬೇಕಾಗಿದೆ. ಸಚಿವರು ಕನಿಷ್ಠ ತನ್ನ ಉದ್ಯೋಗವನ್ನಾದರೂ ಉಳಿಸಿದ್ದಾರಲ್ಲ ಎಂದು ಆತ ಖುಷಿಪಡಬೇಕು.

ಬಹು-ಬೇಟಿ ರಾಜಕೀಯ
ನೇತಾಜಿ (ಮುಲಾಯಂ ಸಿಂಗ್ ಯಾದವ್) ಸೊಸೆಯಂದಿರು ಕ್ಷಿಪ್ರವಾಗಿ ರಾಜಕೀಯ ಕಲಿಯುತ್ತಿದ್ದಾರೆ. ಅಖಿಲೇಶ್ ಯಾದವ್ ಅವರ ಪತ್ನಿ ಡಿಂಪಲ್ ಯಾದವ್, ಅಪರ್ಣಾ ಪರ ಪ್ರಚಾರಕ್ಕೆ ವೇದಿಕೆ ಏರಿದ್ದರು. ಅಖಿಲೇಶ್ ಹಾಗೂ ತಂದೆಯ ನಡುವಿನ ರಾಜಕೀಯ ತುಮುಲಕ್ಕೆ ಅಪರ್ಣಾ ಸ್ಪರ್ಧೆ ಕಾರಣವಾಗಿತ್ತು ಎನ್ನುವುದು ಗಮನಾರ್ಹ. ಆದಾಗ್ಯೂ ಉತ್ತರ ಪ್ರದೇಶದ ಜನತೆ ಬಹು- ಬೇಟಿ ಜತೆಯಾಗಿ ವೇದಿಕೆಯಲ್ಲಿ ಕಾಣಿಸಿಕೊಳ್ಳುವುದನ್ನು ಎದುರು ನೋಡುತ್ತಿದ್ದಾರೆ. ಮೂರನೆ ಸುತ್ತಿನ ಚುನಾವಣೆ ನಡೆದರೂ, ಈ ದೃಶ್ಯ ರಾಜ್ಯದಲ್ಲೆಲ್ಲೂ ಕಾಣಿಸಿಕೊಂಡಿಲ್ಲ. ಇದಕ್ಕೆ ಹಲವು ವಿಶ್ಲೇಷಣೆಗಳು ಕೇಳಿ ಬರುತ್ತಿವೆ. ಜಯಾ ಬಚ್ಚನ್ ಅವರ ಅಸ್ತಿತ್ವ ಇದಕ್ಕೆ ಕಾರಣ ಎನ್ನುವುದು ಅಂಥ ವಾದಗಳಲ್ಲೊಂದು. ಚಿತ್ರರಂಗದಿಂದ ಬಂದು ರಾಜಕೀಯದಲ್ಲಿ ಮಿಂಚುತ್ತಿರುವ ಸಮಾಜವಾದಿ ಪಕ್ಷದ ಈ ಸಂಸದೆ ಡಿಂಪಲ್ ಯಾದವ್ ಅವರಿಗೆ ಜತೆಯಾಗಿದ್ದಾರೆ. ಇದು 10 ಜನಪಥ್ ಮುಖಂಡರ ಕಣ್ಣು ಕೆಂಪಾಗಿಸಿದೆ. ಜಯಾ ಬಚ್ಚನ್ ಅವರನ್ನು ಸದಾ ಪ್ರಚಾರದಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಮೂಲಕ ಡಿಂಪಲ್- ಪ್ರಿಯಾಂಕಾ ಜಂಟಿ ಪ್ರಚಾರ ಕೈಗೊಳ್ಳದಂತೆ ತಂತ್ರ ರೂಪಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಜಡೆ ರಾಜಕೀಯದ ಫಲಿತಾಂಶ ಏನು ಎಂದು ತಿಳಿಯಲು ಮಾರ್ಚ್ 11ರ ವರೆಗೂ ಕಾಯಬೇಕು.

ಅಮಿತ್ ಶಾ ಆ್ಯಂಡ್ ಗ್ಯಾಂಗ್
ಉತ್ತರ ಪ್ರದೇಶದ ಸಂಸದರಿಗೆ ಹೊಸ ಸಂಕಟ ಎದುರಾಗಿದೆ. ಪಕ್ಷದ ನಾಯಕತ್ವ ರಾಜ್ಯದ ಎಲ್ಲ 71 ಬಿಜೆಪಿ ಸಂಸದರು ಕ್ಷೇತ್ರದ ಉದ್ದಗಲಕ್ಕೂ ಅಡ್ಡಾಡಬೇಕು ಎಂದು ಕಟ್ಟಪ್ಪಣೆ ಮಾಡಿದೆ. ಆದರೆ ಬಿಜೆಪಿ ವಿಧಾನಸಭಾ ಅಭ್ಯರ್ಥಿಗಳ ಕೈಗೆ ಇವರು ಯಾರೂ ಸಿಕ್ಕಿಲ್ಲ. ಸಮಸ್ಯೆ ಎಂದರೆ ಬಹುತೇಕ ಸಂಸದರು ಚುನಾಯಿತರಾದ ಬಳಿಕ ಕ್ಷೇತ್ರಕ್ಕೆ ಕೆಲಸ ಮಾಡಿದ್ದೇ ಕಡಿಮೆ. ಇದು ಸ್ಥಳೀಯ ಮತದಾರರ ಹಾಗೂ ಸ್ಥಳೀಯ ಮುಖಂಡರ ಅಸಮಾಧಾನಕ್ಕೂ ಕಾರಣವಾಗಿದೆ. ಕನಿಷ್ಠ ಪ್ರತಿಯೊಬ್ಬ ಸಂಸದರು ತಮ್ಮ ಕ್ಷೇತ್ರದ ಮೂರು ಕ್ಷೇತ್ರಗಳ ಉಸ್ತುವಾರಿಯಾದರೂ ವಹಿಸಬೇಕು ಎಂದು ಅಮಿತ್ ಶಾ ಹೇಳಿದ್ದರೂ, ಜನಾಭಿಪ್ರಾಯದ ಜಾಡು ಹಿಡಿದ ಕೆಲ ಸಂಸದರು ಜಾಣ್ಮೆಯಿಂದ ಪಕ್ಷದ ಲಕ್ನೋ ನಿಯಂತ್ರಣ ಕಚೇರಿಯಲ್ಲೇ ಕುಳಿತು ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಇದರಿಂದಾಗಿ ಶಾ ಕೂಡಾ ಕೈಚೆಲ್ಲಿ, ಪ್ರಧಾನಿ ಮೋದಿಯವರೇ ದುಪ್ಪಟ್ಟು ಪ್ರಯತ್ನ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಧ್ರುವೀಕರಣ ತಂತ್ರವೂ ಸೇರಿದಂತೆ ಹಲವು ತಂತ್ರಗಳನ್ನು ಹೆಣೆಯಲಾಗಿದೆ. ಎಂಪಿಗಳು ಕೈಕೊಟ್ಟರೂ, ಉತ್ತರ ಪ್ರದೇಶದಲ್ಲಿ ಜಯಮಾಲೆ ಧರಿಸುವ ಹುಮ್ಮಸ್ಸಿನಲ್ಲಿ ಅಮಿತ್ ಶಾ ಇದ್ದಾರೆ.

ಸಿಬಲ್ ಹೊಸ ಆಟ
ಸುಪ್ರೀಂಕೋರ್ಟ್ ವಕೀಲ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್, ತಮಿಳುನಾಡು ರಾಜಕೀಯ ಸಂಘರ್ಷದಲ್ಲಿ ತಮ್ಮ ಪಾತ್ರ ಇಲ್ಲ ಎನ್ನುವುದನ್ನು ಸಾರಿ ಹೇಳುತ್ತಿದ್ದಾರೆ. ಶಶಿಕಲಾ ಅವರ ಪತಿ ಎಂ. ನಟರಾಜನ್ ಅವರು, ಅಕ್ರಮ ಸಂಪತ್ತು ಪ್ರಕರಣದಲ್ಲಿ ಸಿಬಲ್ ಅವರ ಸಲಹೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಕಳೆದ ಎರಡು ತಿಂಗಳಿಂದ ನಟರಾಜನ್ ಹಲವು ಬಾರಿ ರಾಜಧಾನಿಗೆ ಪ್ರವಾಸ ಕೈಗೊಂಡಿದ್ದಾರೆ. ಆದರೆ ಶಕ್ತಿಕೇಂದ್ರದಲ್ಲಿ ಹರಡಿರುವ ವದಂತಿಯೆಂದರೆ, ಭವಿಷ್ಯದಲ್ಲಿ ಎಐಎಡಿಎಂಕೆ ಹಾಗೂ ಕಾಂಗ್ರೆಸ್ ನಡುವಿನ ಮೈತ್ರಿಯನ್ನು ದೃಷ್ಟಿಯಲ್ಲಿಟ್ಟುಕೊಂಡು, ಸಿಬಲ್ ನಟರಾಜನ್ ಅವರಿಗೆ ಕಾನೂನು ಸಲಹೆ ನೀಡುತ್ತಿದ್ದಾರೆ ಎನ್ನುವುದು. ಜತೆಗೆ ದಕ್ಷಿಣ ಭಾರತದ ಈ ಪ್ರಬಲ ಪಕ್ಷ ಸಂಸತ್ತಿನಲ್ಲಿ ಭವಿಷ್ಯದ ಎಲ್ಲ ಪ್ರಮುಖ ವಿಷಯಗಳಲ್ಲಿ ತಟಸ್ಥವಾಗಿರುತ್ತದೆ ಎಂಬ ಆಶ್ವಾಸನೆಯನ್ನೂ ಪಡೆದುಕೊಂಡಿದೆ ಎಂದು ಹೇಳಲಾಗುತ್ತಿದೆ. ಈ ಬಗೆಯ ಯಾವ ಒಳಒಪ್ಪಂದವೂ ಆಗಿಲ್ಲ ಎಂದು ಸಿಬಲ್ ಹೇಳುತ್ತಿದ್ದರೂ, ಅದನ್ನು ಯಾರೂ ನಂಬುತ್ತಿಲ್ಲ. ತಮಿಳುನಾಡಿನ ರಾಜಕೀಯದಲ್ಲಿ ಕಾಂಗ್ರೆಸ್ ಯಾವ ಹಸ್ತಕೇಪವನ್ನೂ ಮಾಡುತ್ತಿಲ್ಲ ಎಂದು ಸೋನಿಯಾಗಾಂಧಿಯವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಹೇಳಿದರೂ ನಂಬುವ ಸ್ಥಿತಿ ಇಲ್ಲ. ಅವರು ಹೇಳುವಂತೆ ಕಾಂಗ್ರೆಸ್ ಪಕ್ಷ ದುರ್ಬಲವಾಗಿದೆ ಎಂಬ ವದಂತಿಗಳೂ ಹರಿದಾಡುತ್ತಿವೆ.

ಜೈಲುಜೀವನ ಸುಖವಾಗಿರಲಿ!
ಹರ್ಯಾಣದ ಮಾಜಿ ಮುಖ್ಯಮಂತ್ರಿ ಓಂಪ್ರಕಾಶ್ ಚೌಟಾಲಾ ತಮ್ಮ ಮೊಮ್ಮಗನ ವಿವಾಹ ಸಮಾರಂಭಕ್ಕೆ ಹಾಜರಾಗಲು ಕೆಲ ವಾರದ ಹಿಂದೆ ಪೆರೋಲ್ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದರು. ಆದರೆ ಜೈಲಿನಲ್ಲಿ ಅವರು ಟಿವಿ ನೋಡುತ್ತಾರೆ; ಪತ್ರಿಕೆ ಓದುತ್ತಾರೆ; ಒಳ್ಳೆಯ ಊಟ ಸಿಗುತ್ತದೆ; ಜತೆಗೆ ಸೊಂಪಾಗಿ ನಿದ್ದೆಯೂ ಬರುತ್ತಿದೆ ಎಂದು ತಮ್ಮ ಬೆಂಬಲಿಗರ ಬಳಿ ಹೇಳಿಕೊಳ್ಳುತ್ತಿದ್ದಾರೆ ಎಂಬ ಬಗೆಗಿನ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅವರಿಗೆ ವಾಯುವಿಹಾರಕ್ಕೂ ಜಾಗ ಇದೆಯಂತೆ. ಅವರು ಜೈಲಿನಲ್ಲಿದ್ದರೂ, ಆರೋಗ್ಯಕರ ಜೀವನ ಸಾಗಿಸುತ್ತಿರುವ ಬಗ್ಗೆ ಹೆಮ್ಮೆಯಿಂದ ಇರುವಂತಿದೆ. ಆದರೆ ಅವರು ಜೈಲುಪಾಲಾಗಿದ್ದು ಏಕೆ ಎನ್ನುವುದು ಬಹಳಷ್ಟು ಮಂದಿಗೆ ಮರೆತೇ ಹೋಗಿದೆ. ಶಿಕ್ಷಕರ ಹಗರಣದಲ್ಲಿ ತಪ್ಪಿತಸ್ಥರಾಗಿ ಅವರು ಜೈಲು ಸೇರಿದ್ದಾರೆ. ಕೆಲ ಮಂದಿಗೆ ನಾಚಿಕೆಯೇ ಇಲ್ಲ ಎನಿಸುತ್ತದೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)