varthabharthi

ಪ್ರಚಲಿತ

ಇದು ಸಂಘರ್ಷದ ಅಂತ್ಯವಲ್ಲ, ಆರಂಭ

ವಾರ್ತಾ ಭಾರತಿ : 27 Feb, 2017
ಸನತ್ ಕುಮಾರ್ ಬೆಳಗಲಿ

ಕರ್ನಾಟಕದಲ್ಲಿ ಯಾವುದೇ ಪಕ್ಷದ ಸರಕಾರವಿದ್ದರೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಘ ಪರಿವಾರದ್ದೇ ಸರಕಾರ ಎಂಬ ಕಳಂಕವನ್ನು ಅಂಟಿಸಿಕೊಂಡಿದ್ದ ಕರಾವಳಿಯಲ್ಲಿ ಈಗ ಬದಲಾವಣೆಯ ಗಾಳಿ ಬೀಸುತ್ತಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಹಿಂದೂರಾಷ್ಟ್ರದ ಪ್ರಯೋಗಶಾಲೆ ಎಂಬ ಪ್ರತೀತಿ ಅಳಿಸಿ ಹೋಗುವ ಲಕ್ಷಣಗಳು ಗೋಚರಿಸುತ್ತಿವೆ. ಆದರೆ ಇದು ಅಂದುಕೊಂಡಷ್ಟು ಸುಲಭವಲ್ಲ. ದನ ಸಾಗಾಟದ ನೆಪದಲ್ಲಿ ನಡೆದ ಕಗ್ಗೊಲೆಗಳು, ಲವ್ ಜಿಹಾದ್ ಹೆಸರಲ್ಲಿ ನಡೆದ ಹಲ್ಲೆಗಳು, ಹೋಮ್ ಸ್ಟೇನಲ್ಲಿ ಹೆಣ್ಣುಮಕ್ಕಳ ಮೇಲೆ ನಡೆದ ಹಿಂಸಾಚಾರಗಳು ಹೀಗೆ ನಿರಂತರವಾಗಿ ಅನುಭವಿಸುತ್ತ ಬಂದ ಕಿರುಕುಳದಿಂದ ರೋಸಿ ಹೋಗಿರುವ ದಕ್ಷಿಣ ಕನ್ನಡದ ಪ್ರಜ್ಞಾವಂತ ಜನ ಇದರಿಂದ ಬಿಡುಗಡೆ ಬಯಸುತ್ತಿದ್ದಾರೆ ಎಂಬುದು ಸುಳ್ಳಲ್ಲ.

ಶನಿವಾರ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಇಷ್ಟು ನಿರಾತಂಕವಾಗಿ ಮಂಗಳೂರಿಗೆ ಬಂದು ಹೋಗುತ್ತಾರೆಂದು ಯಾರೂ ಅಂದುಕೊಂಡಿರಲಿಲ್ಲ. ಮಂಗಳೂರಿಗೆ ಕಾಲಿಡಲು ಪಿಣರಾಯಿಗೆ ಅವಕಾಶ ನೀಡುವುದಿಲ್ಲ. ಯಾವ ಬೆಲೆಯನ್ನಾದರೂ ತೆತ್ತು ತಡೆಯುತ್ತೇವೆ ಎಂದು ಸಂಘ ಪರಿವಾರದ ಉತ್ತರ ಕುಮಾರರು ಹಾಕಿದ್ದ ಬೆದರಿಕೆ ಹುಸಿಯಾಗಿದೆ. ಹೇಗಾದರೂ ಮಾಡಿ, ಅವರ ಭಾಷಣವನ್ನು ತಡೆಯಬೇಕು ಎಂಬ ಅವರ ಹುನ್ನಾರ ವಿಫಲಗೊಂಡಿದೆ. ಗೂಂಡಾಗಿರಿಗೆ ಹೆದರಿ, ವ್ಯಾಪಾರಸ್ಥರು ಅಂಗಡಿ ಬಂದ್ ಮಾಡಿದ್ದರು. ವಾಹನಗಳು ಸಂಚರಿಸಲಿಲ್ಲ. ಆದರೆ ತಮ್ಮ ಪ್ರೀತಿಯ ನಾಯಕನ ಭಾಷಣ ಕೇಳಲು ಜನಸಾಗರವೇ ನೆಹರೂ ಮೈದಾನದಲ್ಲಿ ಸೇರಿತ್ತು. ಅವರ ಭಾಷಣವನ್ನು ತಡೆಯಲು ಮಂಗಳೂರಿನ ಸಂಘನಿಕೇತನದಲ್ಲಿ ನಿತ್ಯವೂ ಸಭೆಗಳು ನಡೆದವು. ಹೇಗಾದರೂ ಮಾಡಿ ಪಿಣರಾಯಿ ಪ್ರವೇಶ ತಡೆಯಬೇಕು. ರೈಲು, ರಸ್ತೆ, ವಿಮಾನ ಯಾವುದೇ ಮಾರ್ಗದಿಂದ ಬಂದರೂ ಘೇರಾವ್ ಹಾಕಬೇಕು ಎಂಬ ಆರೆಸ್ಸೆಸ್ ಗುರುಗಳು ಮಾಡಿದ ಆದೇಶ ಜಾರಿಗೆ ಬರಲಿಲ್ಲ. ಈ ಎಲ್ಲ ಅಡ್ಡಿ ಆತಂಕಗಳ ನಡುವೆ ಪಿಣರಾಯಿ ಮಂಗಳೂರಿಗೆ ಬಂದರು. ವಾರ್ತಾಭಾರತಿಯ ನೂತನ ಕಚೇರಿ ಸಂಕೀರ್ಣ ‘ಮಾಧ್ಯಮ ಕೇಂದ್ರ’ ನಿರ್ಮಾಣಕ್ಕೆ ಚಾಲನೆ ನೀಡಿದರು. ಸಂಜೆ ನೆಹರೂ ಮೈದಾನದಲ್ಲಿ ಭಾಷಣ ಮಾಡಿ, ಆರೆಸ್ಸೆಸ್ ಹುನ್ನಾರಗಳನ್ನು ತರಾಟೆಗೆ ತೆಗೆದುಕೊಂಡರು. ಆಕಾಶದಿಂದ ಒಮ್ಮೆಲೇ ಮುಖ್ಯಮಂತ್ರಿ ಕುರ್ಚಿಯ ಮೇಲೆ ಬಂದು ಬಿದ್ದವನು ನಾನಲ್ಲ. ಸಂಘ ಪರಿವಾರದ ಕತ್ತಿ, ಚೂರಿಗಳ ನಡುವೆ ಬೆಳೆದು ಬಂದವನು ಎಂದು ಅವರು ಹೇಳಿದರು. ಅವರ ಸ್ವಾಗತಕ್ಕೆ ಕರ್ನಾಟಕದ ಮೂಲೆಮೂಲೆಯಿಂದ ಕಾರ್ಯಕರ್ತರು ಬಂದಿದ್ದರೂ ಅದರಲ್ಲಿ ಶೇ.85ರಷ್ಟು ದಕ್ಷಿಣ ಕನ್ನಡದವರೇ ಇದ್ದರು.

ಮಂಗಳೂರಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ಎಷ್ಟು ಹದಗೆಟ್ಟಿದೆಯೆಂದರೆ, ಈ ಜಿಲ್ಲೆಯ ಆಡಳಿತದ ಮೇಲೆ ರಾಜ್ಯ ಸರಕಾರದ ನಿಯಂತ್ರಣವೇ ಇಲ್ಲ ಎಂದು ಜನರು ಮಾತನಾಡಿಕೊಳ್ಳುತ್ತಿದ್ದರು. ಶೇ.60ರಷ್ಟು ಪೊಲೀಸ್ ಸಿಬ್ಬಂದಿ ನಮ್ಮ ಸ್ವಯಂ-ಸೇವಕರು ಎಂದು ಆರೆಸ್ಸೆಸ್ ನಾಯಕರು ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಭಾಗವಹಿಸಿದ ಸಭೆಗಳಲ್ಲೂ ಕೋಮುವಾದಿಗಳು ಗಲಾಟೆ ಮಾಡಿದ್ದಾರೆ. ಸಚಿವರು ಮಾತನಾಡದಂತಹ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ. ಇಲ್ಲಿಯ ಬಿಜೆಪಿ ನಾಯಕರಿಗೆ ಸೊಕ್ಕು ಯಾವ ರೀತಿ ನೆತ್ತಿಗೇರಿತ್ತು ಎಂದರೆ ಈ ಭಾಗದ ಲೋಕಸಭಾ ಸದಸ್ಯರೊಬ್ಬರು ಇಡೀ ಜಿಲ್ಲೆಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದರು. ಇಂತಹ ಊರಿಗೆ ಪಿಣರಾಯಿ ವಿಜಯನ್ ಬಂದು ಭಾಷಣ ಮಾಡುವುದು ಸುಲಭದ ಸಂಗತಿಯಾಗಿರಲಿಲ್ಲ. ಆದರೆ ಆರೆಸ್ಸೆಸ್ ಗುರು ಗೋಳ್ವಾಲ್ಕರ್‌ರ ಚಿಂತನೆಯ ಮೂಲವಾದ ಜರ್ಮನಿಯ ಅಡಾಲ್ಫ್ ಹಿಟ್ಲರ್‌ನನ್ನು ಸೋಲಿಸಿದ ಪರಂಪರೆಯನ್ನು ಹೊಂದಿರುವ ಕಮ್ಯುನಿಸ್ಟರು ಸಂಘ ಪರಿವಾರದ ಬೆದರಿಕೆಯನ್ನು ಒಂದು ಸವಾಲಾಗಿ ಸ್ವೀಕರಿಸಿದರು. ಕೊನೆಗೂ ಫ್ಯಾಶಿಸ್ಟರನ್ನು ಹಿಮ್ಮೆಟ್ಟಿಸಿ, ತಮ್ಮ ಗುರಿ ಸಾಧಿಸಿದರು. ದಕ್ಷಿಣ ಕನ್ನಡ ಜಿಲ್ಲೆ ಎಲ್ಲರೂ ಅಂದುಕೊಂಡಂತೆ ಬರೀ ಹಿಂದುತ್ವದ ಪ್ರಯೋಗ ಶಾಲೆಯಲ್ಲ ಎಂಬುದು ಸ್ಪಷ್ಟವಾಯಿತು.

ಗೋರಕ್ಷಣೆ, ಸಂಸ್ಕೃತಿ ರಕ್ಷಣೆ, ಸ್ತ್ರೀರಕ್ಷಣೆ, ಮಠರಕ್ಷಣೆ ಇತ್ಯಾದಿಗಳ ಗುತ್ತಿಗೆ ಹಿಡಿದವರು ಕಳೆದ ಒಂದೂವರೆ ದಶಕದಿಂದ ನಡೆಸುತ್ತ ಬಂದ ದಾಂಧಲೆ, ಗೂಂಡಾಗಿರಿಯಿಂದ ಇಡೀ ಕರಾವಳಿ ನಲುಗಿ ಹೋಗಿದೆ. ಇದೆಲ್ಲ ಒಮ್ಮೆಲೇ ಆಗಲಿಲ್ಲ. ದಶಕಗಳ ಕಾಲ ಆರೆಸ್ಸೆಸ್ ನಡೆಸಿದ ಕಾರ್ಯಾಚರಣೆಯ ಪರಿಣಾಮವಾಗಿ ಈ ಭಾಗದ ಸಾವಿರಾರು ಯುವಕರು ದಾರಿ ತಪ್ಪಿದ್ದಾರೆ. ಆರಂಭದಲ್ಲಿಯೇ ಇದಕ್ಕೆ ಪ್ರತಿರೋಧ ಒಡ್ಡಬೇಕಿತ್ತು. ಜಾತ್ಯತೀತ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಪಕ್ಷ ತನ್ನ ಹೊಣೆಗಾರಿಕೆಯನ್ನು ಸರಿಯಾಗಿ ನಿಭಾಯಿಸಲಿಲ್ಲ. ವೀರಪ್ಪ ಮೊಯ್ಲಿ, ಆಸ್ಕರ್ ಫರ್ನಾಂಡಿಸ್ ಅವರಂತಹ ನಾಯಕರು ಜಿಲ್ಲೆಯನ್ನು ಸಂಘ ಪರಿವಾರದ ಕೈಗೊಪ್ಪಿಸಿ ಬೇರೆ ಕ್ಷೇತ್ರಗಳಿಗೆ ಹೋಗಿ ರಾಜಕೀಯ ಮರುಜನ್ಮ ಪಡೆದರು. ಜನಾರ್ದನ ಪೂಜಾರಿಯವರು ಆಗಾಗ ಪತ್ರಿಕಾಗೋಷ್ಠಿ ಕರೆದು ಮಾತನಾಡಿದರೂ ಅವರು ಯಾವಾಗ ಯಾರನ್ನೂ ಟೀಕಿಸುತ್ತಾರೆ ಎಂಬುದು ಅರ್ಥವಾಗುತ್ತಿರಲಿಲ್ಲ.

ಈ ಜಿಲ್ಲೆ ಒಂದು ಕಾಲದಲ್ಲಿ ಕಮ್ಯುನಿಸ್ಟರ ಭದ್ರಕೋಟೆಯಾಗಿತ್ತು. ಎ.ಕೃಷ್ಣಶೆಟ್ಟಿ, ಬಿ.ವಿ.ಕಕ್ಕಿಲಾಯ, ಪಿ.ರಾಮಚಂದ್ರರಾವ್ ಅವರಂತಹ ಕಮ್ಯುನಿಸ್ಟ್ ನಾಯಕರು ವಿಧಾನಸಭೆಗೆ ಗೆದ್ದು ಬಂದಿದ್ದರು. ಆದರೆ 60ರ ದಶಕದ ನಂತರ ಕಾರ್ಮಿಕರ ಆರ್ಥಿಕ ಹೋರಾಟದಲ್ಲಿ ಮುಳುಗಿದ ಕಮ್ಯುನಿಸ್ಟ್ ಪಕ್ಷ ನಿಗೂಢವಾಗಿ ಬೆಳೆಯುತ್ತಿದ್ದ ಫ್ಯಾಶಿಸ್ಟ್ ಶಕ್ತಿಗಳ ವಿರುದ್ಧ ಪ್ರತಿರೋಧ ಒಡ್ಡುವ ಪಡೆಯನ್ನು ನಿರ್ಮಿಸಲಿಲ್ಲ. ಬೀಡಿ ಕಾರ್ಮಿಕರ ಸಂಘಟನೆಯಲ್ಲಿ ಕೆಂಬಾವುಟ ಹಿಡಿದುಕೊಂಡು ಓಡಾಡುತ್ತಿದ್ದ ಸಣ್ಣಪುಟ್ಟ ನಾಯಕರು ಚುನಾವಣೆ ಬಂದಾಗ, ಬಿಜೆಪಿ ಜೊತೆಗೆ ಇರುತ್ತಿದ್ದರು. ಅಂತಲೇ ಈಗಲೂ ಕೂಡ ಬೀಡಿ ಕಟ್ಟುವ ತಾಯಂದಿರು ಕೆಂಬಾವುಟದ ಜೊತೆಗಿದ್ದರೆ ಅವರ ಮಕ್ಕಳು ಪಿಣರಾಯಿ ಭಾಷಣ ತಡೆಯಲು ವಿಧ್ವಂಸಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಾರೆ. ಕಮ್ಯುನಿಸ್ಟರ ಹೋರಾಟ ಮತ್ತು ದೇವರಾಜ ಅರಸರಿಂದಾಗಿ ಭೂ ಸುಧಾರಣಾ ಕಾನೂನು ಜಾರಿಗೆ ಬಂತು. 70ರ ದಶಕದಲ್ಲಿ ಭೂಮಾಲಕರಾದ ಗೇಣಿದಾರರ ಮಕ್ಕಳು ಈಗ ಸಂಘ ಪರಿವಾರ ಸೇರಿ ಅನೈತಿಕ ಪೊಲೀಸ್‌ಗಿರಿಗೆ ಇಳಿದಿದ್ದಾರೆ. ಹೀಗಾಗಿ ಸುಮಾರು ಎರಡು ದಶಕ ಕಾಲ ಸಂಘ ಪರಿವಾರಕ್ಕೆ ಪ್ರತಿರೋಧವೇ ಇಲ್ಲದಂತಾಗಿತ್ತು. 90ರ ದಶಕದ ಕೊನೆಯಲ್ಲಿ ಡಿವೈಎಫ್‌ಐ ತಲೆಯೆತ್ತಿದ ನಂತರವೇ ಕೋಮುವಾದಿ ಶಕ್ತಿಗಳಿಗೆ ಪ್ರತಿರೋಧ ಎದುರಾಗತೊಡಗಿತು. ಆಗ ಆರಂಭವಾದ ಪ್ರತಿರೋಧದ ಸೆಲೆ ಈಗ ಮಹಾಸಾಗರವಾಗಿ ಪಿಣರಾಯಿ ಭಾಷಣಕ್ಕೆ ಬಂದಿದೆ.

ರಾಜ್ಯದಲ್ಲಿ ಹಿಂದೆ ಕಾಂಗ್ರೆಸ್ ಸರಕಾರವಿದ್ದಾಗ ಮನಸ್ಸು ಮಾಡಿದ್ದರೆ ಈ ಫ್ಯಾಶಿಸ್ಟ್ ಶಕ್ತಿಗಳನ್ನು ಹತ್ತಿಕ್ಕಬಹುದಿತ್ತು. ಆದರೆ ಹಣ ಮತ್ತು ಅಧಿಕಾರವನ್ನೇ ಪ್ರಧಾನವಾಗಿಟ್ಟುಕೊಂಡ ಆ ಪಕ್ಷದಲ್ಲಿ ಅಂತಹ ಬದ್ಧತೆಯ ನಾಯಕರು ಬರಲಿಲ್ಲ. ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಸಂಘ ಪರಿವಾರದ ಕೋಮುವಾದಿ ಶಕ್ತಿಗಳ ಬಗ್ಗೆ ಮೃದು ಧೋರಣೆ ತಾಳಿದ ಅವರು ಪರಿಸ್ಥಿತಿ ಹದಗೆಡಲು ಇನ್ನಷ್ಟು ಕಾರಣರಾದರು. ಬಾಬಾ ಬುಡಾನ್‌ಗಿರಿ ವಿವಾದ ಉಂಟಾದಾಗ, ಕೋಮು ಸೌಹಾರ್ದ ವೇದಿಕೆಯಿಂದ ಪ್ರತಿಭಟಿಸಲು ನಾವು ಚಿಕ್ಕಮಗಳೂರಿಗೆ ಹೋಗಿದ್ದೆವು. ಆಗ ಕೃಷ್ಣ ಸರಕಾರ ತಮ್ಮ ಪ್ರತಿಭಟನೆಗೆ ಅನುಮತಿ ನೀಡಲಿಲ್ಲ. ಗಿರೀಶ್ ಕಾರ್ನಾಡ್, ಜಿ.ಕೆ.ಗೋವಿಂದರಾವ್, ಜಿ.ರಾಮಕೃಷ್ಣ, ಅಗ್ನಿ ಶ್ರೀಧರ್, ಗೌರಿ ಲಂಕೇಶ್, ಎ.ಕೆ.ಸುಬ್ಬಯ್ಯ ಸೇರಿದಂತೆ ನೂರಾರು ಜನರನ್ನು ಬಂಧಿಸಿ ಚಿಕ್ಕಮಗಳೂರು ಕಾರಾಗೃಹಕ್ಕೆ ತಳ್ಳಿದರು. ಇನ್ನೊಂದೆಡೆ ಬಾಬಾ ಬುಡಾನ್‌ಗಿರಿ ಬೆಟ್ಟದ ಮೇಲೆ ದತ್ತ ಪೂಜೆ ನೆರವೇರಿಸಲು ಬಜರಂಗದಳದ ಕಾರ್ಯಕರ್ತರಿಗೆ ಅವಕಾಶ ನೀಡಿದರು. ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಡಿ.ಬಿ.ಚಂದ್ರೇಗೌಡರೇ ಅಂಗಿ ಬಿಚ್ಚಿ ಪೂಜೆಗೆ ಕೂತರು. ಮಾರನೆ ವರ್ಷ ಮತ್ತೆ ನಾವು ಕಾರ್ಯಕ್ರಮ ರೂಪಿಸಿದಾಗ, ಅನುಮತಿಯೇನೋ ಸಿಕ್ಕಿತು. ಆದರೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದ ನಿಡುಮಾಮಿಡಿ ಸ್ವಾಮಿಗಳಿಗೆ ಸರಕಾರಿ ಪ್ರವಾಸಿ ಮಂದಿರದಲ್ಲಿ ಕಾದಿರಿಸಲಾಗಿದ್ದ ಕೊಠಡಿಯನ್ನು ಆಗಿನ್ನೂ ಶಾಸಕರಾಗಿರದ ಸಿ.ಟಿ.ರವಿ ರದ್ದುಪಡಿಸಿದರು. ಹೀಗಾಗಿ ಸ್ವಾಮೀಜಿ ಹೊಟೇಲ್‌ನಲ್ಲಿ ಬಂದು ತಂಗಬೇಕಾಯಿತು.

ಸರಕಾರದ ಆಡಳಿತ ಯಂತ್ರ ಸ್ವಲ್ಪ ಬಿಗಿಯಾದರೆ, ಕೋಮುವಾದಿ ಶಕ್ತಿಗಳನ್ನು ನಿಯಂತ್ರಿಸಬಹುದು. ಕೃಷ್ಣ ಅವರ ನಂತರ ಧರಂಸಿಂಗ್ ಮುಖ್ಯಮಂತ್ರಿಯಾಗಿದ್ದಾಗ, ಮತ್ತೆ ದತ್ತ ಪೀಠ, ಬಾಬಾ ಬುಡಾನ್‌ಗಿರಿ ವಿವಾದ ಭುಗಿಲೆದ್ದಿತು. ಆಗ ಗೌರಿ ಲಂಕೇಶ್, ಕೆ.ಎಲ್.ಅಶೋಕ್ ಮತ್ತು ನಾನು ಸೇರಿದಂತೆ ಕೆಲ ಸ್ನೇಹಿತರು ಮುಖ್ಯಮಂತ್ರಿ ಬಳಿ ಹೋಗಿ ಮನವಿ ಮಾಡಿಕೊಂಡಾಗ ಅವರು ಸ್ಪಂದಿಸಿದರು. ಸಂಘ ಪರಿವಾರದ ನಾಯಕರು ಚಿಕ್ಕಮಗಳೂರು ಪ್ರವೇಶಿಸದಂತೆ ನಿರ್ಬಂಧ ಹೇರಿದರು. ಇದನ್ನು ಉಲ್ಲಂಘಿಸಿ ಶೋಭಾ ಯಾತ್ರೆ ಮಾಡುವ ಸಾಹಸಕ್ಕೆ ಸಂಘ ಪರಿವಾರ ಕೈ ಹಾಕಲಿಲ್ಲ. ಈಗ ಸಿದ್ದರಾಮಯ್ಯ ಅವರ ಸರಕಾರ ಬಿಗಿಯಾದ ಬಂದೋಬಸ್ತ್ ಮಾಡಿದ್ದರಿಂದ ಗಲಭೆಕೋರ ಶಕ್ತಿಗಳು ಬಾಲ ಮುದುರಿಕೊಂಡು ಕೂತವು.

ಮಂಗಳೂರಿನಲ್ಲಿ ನಡೆದ ಸೌಹಾರ್ದ ಸಮಾವೇಶ ಮತ್ತು ಪಿಣರಾಯಿ ವಿಜಯನ್ ಭಾಷಣದಿಂದ ಸಂಘ ಪರಿವಾರಕ್ಕೆ ತಕ್ಷಣ ಮುಖಭಂಗವಾಗಿದೆ. ಆದರೆ ಈ ಸಂಘರ್ಷ ಇಲ್ಲಿಗೆ ಮುಗಿಯುವುದಿಲ್ಲ. ಫ್ಯಾಶಿಸ್ಟ್ ಶಕ್ತಿಗಳು ಈ ಸೋಲು ಸಹಿಸಿ ಸುಮ್ಮನಿರುವುದಿಲ್ಲ. ಮತ್ತೆ ತಮ್ಮ ಕಾರ್ಯಾಚರಣೆ ಮುಂದುವರಿಸುತ್ತವೆ. ಇಂದಿಗೂ ಕರಾವಳಿ ಪ್ರದೇಶದ 30ರೊಳಗಿನ ಬಹುತೇಕ ಯುವಕರ ಮೆದುಳಲ್ಲಿ ಜನಾಂಗದ್ವೇಷದ ವಿಷವನ್ನು ತುಂಬಲಾಗಿದೆ. ಆ ವಿಷವನ್ನು ತೆಗೆದು ಅವರನ್ನು ಮನುಷ್ಯರನ್ನಾಗಿ ಮಾಡುವುದು ಸುಲಭದ ಕೆಲಸವಲ್ಲ. ಈಗ ನಾವು ಒಡ್ಡಿರುವ ಪ್ರತಿರೋಧದ ಜೊತೆಗೆ ಸೈದ್ಧಾಂತಿಕ ಸಂಘರ್ಷ ಮುಂದುವರಿಸಬೇಕು. ಹಿಟ್ಲರ್, ಮುಸ್ಲೋನಿಯಿಂದ ಸ್ಫೂರ್ತಿ ಪಡೆದ ಗೋಳ್ವಾಲ್ಕರ್‌ರ ಹಿಂದೂರಾಷ್ಟ್ರದಲ್ಲಿ ಮುಸಲ್ಮಾನರು, ಕ್ರೈಸ್ತರು ಮತ್ತು ದಲಿತರು ಮಾತ್ರವಲ್ಲ ಎಲ್ಲಾ ಹಿಂದುಳಿದ ವರ್ಗದವರು, ಮಹಿಳೆಯರು ಎರಡನೆ ದರ್ಜೆ ನಾಗರಿಕರಂತೆ ಬದುಕಬೇಕಾಗುತ್ತದೆ. ಮಹಿಳೆಯರು ವಿದ್ಯಾವಂತರಾಗಿರುವುದೇ ಇಂದಿನ ಕೌಟುಂಬಿಕ ಸಮಸ್ಯೆಗಳಿಗೆ ಕಾರಣವೆಂದು ಆರೆಸ್ಸೆಸ್ ಸರಸಂಘ ಚಾಲಕ ಮೋಹನ್ ಭಾಗವತ್ ಇತ್ತೀಚೆಗೆ ಹೇಳಿದ್ದಾರೆ. ಇವೆಲ್ಲ ವಿಷಯಗಳನ್ನು ಜನರಿಗೆ ತಿಳಿಸಿ ಹೇಳಬೇಕಾಗುತ್ತದೆ.

 ಇದು ಒಂದು ರ್ಯಾಲಿಗೆ ಮುಗಿಯುವ ಹೋರಾಟವಲ್ಲ. ಡಾ. ಅಂಬೇಡ್ಕರ್ ಅವರು ರೂಪಿಸಿದ ಸಂವಿಧಾನದಂತೆ ಈ ದೇಶ ನಡೆಯಬೇಕೇ ಇಲ್ಲ ಹೆಡಗೇವಾರ್. ಗೋಳ್ವಾಲ್ಕರ್‌ರ ಮನುವಾದದಂತೆ ನಡೆಯಬೇಕೇ ಎಂಬುದು ಇತ್ಯರ್ಥವಾಗಬೇಕಿದೆ. ಸಕಲರಿಗೂ ಸಮಾನ ಅವಕಾಶ ನೀಡಿದ ಸಂವಿಧಾನವನ್ನು ಬದಲಿಸಿ, ಹಿಂದುತ್ವದ ಹೆಸರಿನಲ್ಲಿ ಶ್ರೇಣೀಕೃತ ಜಾತಿ ಪದ್ಧತಿಯನ್ನು ದೇಶದ ಮೇಲೆ ಹೇರಲು ಸಂಘ ಪರಿವಾರ ಷಡ್ಯಂತ್ರ ರೂಪಿಸಿದೆ. ಇದನ್ನು ವಿರೋಧಿಸಿದರೆ ದೇಶದ್ರೋಹಿ ಎಂಬ ದೂಷಣೆಗೆ ಗುರಿಯಾಗಬೇಕಾಗುತ್ತದೆ. ಕನ್ಹಯ್ಯೋಕುಮಾರ್, ಶೆಹ್ಲಾ ರಷೀದ್, ಉಮರ್ ಖಾಲಿದ್ ಅಂತಹವರು ಮನುವಾದವನ್ನು ವಿರೋಧಿಸಿದ ತಪ್ಪಿಗಾಗಿ ನಾನಾ ಚಿತ್ರಹಿಂಸೆ ಅನುಭವಿಸುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಫ್ಯಾಶಿಸ್ಟ್ ಶಕ್ತಿಗಳಿಂದ ಇನ್ನಷ್ಟು ಆಕ್ರಮಣ ಎದುರಾಗಲಿದೆ. ಕೇರಳ ರಾಜ್ಯದ ಮುಖ್ಯಮಂತ್ರಿ ಯಾವುದೇ ರಾಜ್ಯವನ್ನು ಪ್ರವೇಶಿಸಲು ಬಿಡುವುದಿಲ್ಲ, ಸಿಪಿಎಂ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರನ್ನು ದಿಲ್ಲಿಯಿಂದ ಓಡಿಸುವುದಾಗಿ ಬೆದರಿಕೆ ಹಾಕುತ್ತಿರುವ ಈ ಕರಾಳ ಶಕ್ತಿಗಳು ಬರಲಿರುವ ದಿನಗಳಲ್ಲಿ ಇನ್ನಷ್ಟು ಆಕ್ರಮಣಶೀಲವಾಗಲಿವೆ. ಇದನ್ನು ಎದುರಿಸಲು ಬುದ್ಧ, ಬಸವ, ಅಂಬೇಡ್ಕರ್, ಶಿಶುನಾಳ ಷರೀಫ ಅವರ ಬೆಳಕಿನ ಪಂಜುಗಳನ್ನು ಹಿಡಿದು ಹೋರಾಟದ ರಣರಂಗಕ್ಕೆ ಧುಮುಕಬೇಕಿದೆ. ಇದು ಸಂಘರ್ಷದ ಅಂತ್ಯವಲ್ಲ, ಆರಂಭ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)