varthabharthi

ಪ್ರಚಲಿತ

ನಮ್ಮ ಮಗಳು ಜಗದ ಬೆಳಗು

ವಾರ್ತಾ ಭಾರತಿ : 6 Mar, 2017
ಸನತ್ ಕುಮಾರ್ ಬೆಳಗಲಿ

ದೇಶದೆಲ್ಲೆಡೆ ಮನುವಾದಿಗಳ ತಲೆ ತೆಗೆಯುವ ಅರಚುವಿಕೆ ಕಿವಿಗೆ ಅಪ್ಪಳಿಸುತ್ತಿರುವಾಗಲೇ ಮತ್ತೆ ಮಹಿಳಾ ದಿನ ಬಂದಿದೆ. ಮಹಿಳೆಯರ ಮೇಲಿನ ದೌರ್ಜನ್ಯವನ್ನು ವಿರೋಧಿಸುತ್ತ ಸಮಾನ ಹಕ್ಕಿಗಾಗಿ ಹೋರಾಟ ನಡೆಸುತ್ತ ಬಂದಿರುವ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಈ ಬಾರಿ ಮಾರ್ಚ್ 8ರಂದು ಕೊಪ್ಪಳದಲ್ಲಿ ಎರಡು ದಿನಗಳ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಒಕ್ಕೂಟದಲ್ಲಿ ಕರ್ನಾಟಕದ ಹಲವಾರು ಮಹಿಳಾ ಸಂಘಟನೆಗಳು ಸೇರಿವೆ. ಈ ಬಾರಿಯ ಮಹಿಳಾ ದಿನಾಚರಣೆಯ ಘೋಷ ವಾಕ್ಯ ನನಗೆ ತುಂಬಾ ಹಿಡಿಸಿತು. ನಮ್ಮ ಮಗಳು ಜಗದ ಬೆಳಕು.ನಮ್ಮ ದೇಹ ನಮ್ಮ ಹಕ್ಕು. ಇವೆರಡು ಘೋಷಣೆಗಳಲ್ಲಿರುವ ಶಕ್ತಿ ಅಂತಿಂಥದ್ದಲ್ಲ. ಇವುಗಳಲ್ಲಿ ಆವೇಶ, ಆಕ್ರೋಶವಿಲ್ಲ. ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಜೊತೆಗೆ ಹೊಸ ಸಮಾಜವನ್ನು ಕಟ್ಟುವ ಸಂದೇಶ ಈ ಘೋಷ ವಾಕ್ಯದಲ್ಲಿದೆ. ತಮ್ಮ ದೇಹದ ಮೇಲಿನ ಹಕ್ಕು ತಮ್ಮದು ಮಾತ್ರ ಎಂಬುದರಲ್ಲಿ ಅತಿಶಯೋಕ್ತಿ ಏನೂ ಇಲ್ಲ.

ತನ್ನ ತಂದೆಯನ್ನು ಯುದ್ಧ ಬಲಿ ತೆಗೆದುಕೊಂಡಿತೆಂದು ಕೇವಲ ಎರಡು ವರ್ಷದವಳಿದ್ದಾಗ, ಅಪ್ಪನನ್ನು ಕಳೆದುಕೊಂಡ ಯುವತಿಯೊಬ್ಬಳು ನೋವಿನಿಂದ ನುಡಿದರೆ ಆಕೆಗೆ ಅತ್ಯಾಚಾರದ ಬೆದರಿಕೆ ಹಾಕುವ, ಆಕೆಯನ್ನು ಪಾಕಿಸ್ತಾನ ಏಜೆಂಟ್ ಎಂದು ಕರೆಯುವ ಮಹಾನ್ ನೀಚರ ವಿಕೃತ ಅಟ್ಟಹಾಸದ ನಡುವೆ ಮಹಿಳಾ ದಿನ ಬಂದಿದೆ. ನಿರಂತರ ಹೋರಾಟದಿಂದ ಈವರೆಗೆ ತಾನು ಪಡೆದದ್ದನ್ನು ಅಪಹರಿಸಿ ಮೂಲೆಗುಂಪು ಮಾಡಲು ಮನುವಾದಿ ಶಕ್ತಿಗಳು ಹುನ್ನಾರ ನಡೆಸುತ್ತಿರುವ ಈ ದಿನಗಳಲ್ಲಿ ನಡೆದು ಬಂದ ದಾರಿಯ ಬಗ್ಗೆ ಮಹಿಳಾ ಸಂಘಟನೆಗಳು ಅವಲೋಕನ ಮಾಡಿಕೊಳ್ಳಬೇಕಿದೆ.

1908ರ ಮಾರ್ಚ್ 8ರಂದು ಅಮೆರಿಕದ ನ್ಯೂಯಾರ್ಕ್ ನಗರದ ಕಸೂತಿ ಕೆಲಸ ಮಾಡುವ ಮಹಿಳಾ ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಹೋರಾಟ ಆರಂಭಿಸಿದರು. ಅಲ್ಲಿಯವರೆಗೆ ಪುರುಷ ಪ್ರಧಾನ ವ್ಯವಸ್ಥೆಯ ಕ್ರೌರ್ಯದಲ್ಲಿ ನಲುಗಿ ಹೋಗಿದ್ದ ಮಹಿಳೆಯರು ಆ ವರ್ಷ ಬಂಡಾಯದ ಬಾವುಟ ಹಾರಿಸಿದರು. ಅಂತಲೇ 1911ರ ಮಾರ್ಚ್ 8ರಿಂದ ವಿಶ್ವ ಮಹಿಳಾ ದಿನ ಆಚರಿಸಲಾಗುತ್ತಿದೆ. ಅಂದರೆ ಈ ದಿನಾಚರಣೆ ಆರಂಭಗೊಂಡು ಶತಮಾನ ಗತಿಸಿದೆ. ಆದರೂ ಹೆಣ್ಣಿನ ಸಂಕಟದ ಬಿಕ್ಕಳಿಕೆ ನಿಲ್ಲಲೇ ಇಲ್ಲ. ರಶ್ಯದ ಸಮಾಜವಾದಿ ಕ್ರಾಂತಿ ಎಲ್ಲ ಅವಕಾಶ ವಂಚಿತ ಸಮುದಾಯಗಳಿಗೆ ಬೆಳಕಿನ ಬಾಗಿಲು ತೆರೆದಂತೆ ಮಹಿಳೆಗೂ ದ್ವಾರ ಮುಕ್ತಗೊಳಿಸಿತು. ರಶ್ಯದಲ್ಲಿ ಮಹಿಳೆ ಕೆಲಸ ಮಾಡದ ಕ್ಷೇತ್ರಗಳೇ ಇರಲಿಲ್ಲ. ಆದರೆ ಸಾಮ್ರಾಜ್ಯಶಾಹಿ ಹುನ್ನಾರಕ್ಕೆ ಆ ವ್ಯವಸ್ಥೆ ಬಲಿಯಾಯಿತು.

ಕಳೆದ 100 ವರ್ಷಗಳಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಮಹಿಳೆ ತನ್ನನ್ನು ಈಗ ಅಡುಗೆ ಮನೆಗೆ ಮಾತ್ರ ಸೀಮಿತಗೊಳಿಸಿಕೊಂಡಿಲ್ಲ. ಶಿಕ್ಷಕಿ, ವಿಜ್ಞಾನಿ, ವೈದ್ಯೆ, ಪ್ರಧಾನಿ, ದಾದಿ, ಗಗನಯಾತ್ರಿ, ವಾಹನ ಚಾಲಕಿ, ಜಿಲ್ಲಾಧಿಕಾರಿ, ಪೊಲೀಸ್ ಅಧಿಕಾರಿಯಾಗಿ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಮಿಂಚುತ್ತಿದ್ದಾಳೆ. ನಮ್ಮ ಕರ್ನಾಟಕದಲ್ಲೇ ಹಂಪಿ ಕನ್ನಡ ವಿಶ್ವವಿದ್ಯಾನಿಲಯಕ್ಕೆ ಮಲ್ಲಿಕಾ ಘಂಟಿಯವರು ಕುಲಪತಿಯಾಗಿ ಬಂದ ನಂತರ ಹೊಸ ಅಧ್ಯಾಯವನ್ನೇ ಆರಂಭಿಸಿದ್ದಾರೆ. ಲಿಂಗ ತಾರತಮ್ಯ ನಮ್ಮ ಸಮಾಜದಲ್ಲಿ ಎಷ್ಟು ಆಳವಾಗಿ ಬೇರು ಬಿಟ್ಟಿದೆಯೆಂದರೆ, ಹಂಪಿ ವಿಶ್ವವಿದ್ಯಾನಿಲಯದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯವೇ ಇರಲಿಲ್ಲ. ಮಲ್ಲಿಕಾ ಘಂಟಿಯವರು ಬಂದ ನಂತರ ಅದಕ್ಕೆ ಮೊದಲ ಆದ್ಯತೆ ನೀಡಿ ನಿರ್ಮಾಣ ಮಾಡಿದರು.

ಇಷ್ಟೆಲ್ಲ ಮುನ್ನಡೆಯಿದ್ದರೂ ಮಹಿಳೆ ಸಂಪೂರ್ಣ ಸ್ವತಂತ್ರಳು ಎಂದು ಹೇಳಲು ಸಾಧ್ಯವಿಲ್ಲ. ಅನೇಕ ಮನೆಗಳಲ್ಲಿ ಮನೆಗೆಲಸ ಮಾಡಿ ನೌಕರಿಯನ್ನು ಮಾಡುವ ಹೆಣ್ಣುಮಗಳು ತನ್ನ ಸಂಬಳದ ಹಣವನ್ನು ತಾನು ಬಳಸಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಅನೇಕ ಹೆಣ್ಣುಮಕ್ಕಳ ಎಟಿಎಂ ಕಾರ್ಡಿನ ಪಿನ್ ನಂಬರ್ ಕೂಡ ಅವರಿಗೆ ಗೊತ್ತಿರುವುದಿಲ್ಲ. ಆದರೂ ಕೂಡ ಇಡೀ ಕುಟುಂಬವನ್ನು ಪೊರೆಯುವ ತಾಯಿಯಾಗಿ ಆಕೆ ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುತ್ತಾಳೆ. ಆದರೆ ಇದೇ ಸಂಪೂರ್ಣ ಸತ್ಯವಲ್ಲ. ಇನ್ನೂ ಕೆಲ ಮನೆಗಳಲ್ಲಿ ಗಂಡಸರು ತಮ್ಮ ಸಂಬಳವನ್ನು ಹೆಂಡತಿ ಕೈಗೆ ಕೊಟ್ಟು ಹೊಣೆಯಿಂದ ನಿಧಾನವಾಗಿ ಜಾರಿಕೊಳ್ಳುತ್ತಾರೆ. ತನ್ನ ದುಡಿಮೆಯ ಸಂಬಳ ಮತ್ತು ಗಂಡ ತನ್ನ ಖರ್ಚಿಗೆ ಇಟ್ಟುಕೊಂಡು ಕೊಡುವ ಉಳಿದ ಸಂಬಳದಲ್ಲಿ ಸಂಸಾರವನ್ನು ನಿಭಾಯಿಸಿಕೊಂಡು ಹೋಗುವ ಸೋದರಿಯರು ಇದ್ದಾರೆ.

ಭಾರತದಲ್ಲಿ ಸ್ತ್ರೀ ಸಮಾನತೆಗಾಗಿ ಬುದ್ಧ್ದ, ಬಸವ, ಅಂಬೇಡ್ಕರ್, ಶಾಹು ಮಹಾರಾಜ ಹೀಗೆ ನೂರಾರು ಜನ ಶ್ರಮಿಸಿದರು. ನೂರು ವರ್ಷಗಳ ಹಿಂದೆ ಹೆಣ್ಣುಮಕ್ಕಳಿಗೆ ಅಕ್ಷರ ಕಲಿಸಲು ಹೋದ ಸಾವಿತ್ರಿಬಾಯಿ ಫುಲೆ ಮತ್ತು ಫಾತಿಮಾ ಶೇಖ್ ಅವರು ಪುಣೆಯ ಪುರೋಹಿತಶಾಹಿಗಳಿಂದ ಕಲ್ಲಿನೇಟು ತಿಂದರು. ಸತಿ ಸಹಗಮನ ಪದ್ಧತಿಯನ್ನು ವಿರೋಧಿಸಿದ ರಾಜಾ ರಾಮ ಮೋಹನ ರಾಯ್‌ಅವರ ಮೇಲೆಯೂ ಹಲ್ಲೆಗಳಾದವು. ಸ್ವಾತಂತ್ರ್ಯ ಬಂದ ಹೊಸತರಲ್ಲಿ ಸಂವಿಧಾನ ರಚನೆಯ ಹೊಣೆ ಹೊತ್ತ ಡಾ. ಅಂಬೇಡ್ಕರ್ ಪಿತ್ರಾರ್ಜಿತ ಆಸ್ತಿಯಲ್ಲಿ ಮಹಿಳೆಗೆ ಸಮಪಾಲು ನೀಡುವ ವಿಧೆೇಯಕ ಮಂಡಿಸಿದರು. ಆಗ ಹಿಂದೂ ಮಹಾಸಭೆ ಮತ್ತು ಸಂಘ ಪರಿವಾರದಿಂದ ತೀವ್ರ ವಿರೋಧ ಬಂತು. ಪ್ರಧಾನಿ ನೆಹರೂ ಅವರು ಅಂಬೇಡ್ಕರ್ ಅವರ ಪರವಾಗಿದ್ದರೂ ಹಿಂದೂ ಕೋಡ್ ಬಿಲ್‌ಗೆ ಸಂಸತ್ತಿನಲ್ಲಿ ಬೆಂಬಲ ಸಿಗಲಿಲ್ಲ. ಇದರಿಂದ ರೋಸಿ ಹೋದ ಅಂಬೇಡ್ಕರ್ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಮಹಿಳೆಗೆ ನ್ಯಾಯ ಕೊಡಿಸಲು ಮಂತ್ರಿಯ ಪದವಿಯನ್ನೇ ತೃಣ ಸಮಾನವಾಗಿ ಕಂಡ ಅಂಬೇಡ್ಕರ್ ಅವರನ್ನು ಮಹಿಳಾ ದಿನದಂದು ನೆನಪಿಸಿಕೊಳ್ಳಬೇಕಿದೆ.

ಈಗಂತೂ ಮಹಿಳೆ ಮಾತ್ರವಲ್ಲ ಎಲ್ಲ ವಂಚಿತ ಸಮುದಾಯಗಳು ತೀವ್ರ ಆತಂಕಕ್ಕೆ ಒಳಗಾಗಿವೆ. ಆಗ ಹಿಂದೂ ಕೋಡ್ ಬಿಲ್ ವಿರೋಧಿಸಿದ ಪ್ರತಿಗಾಮಿ ಶಕ್ತಿಗಳೇ ಈಗ ಹಿಂದುತ್ವದ ಹೆಸರಿನಲ್ಲಿ ಮತ್ತೆ ಹೂಂಕರಿಸುತ್ತಿವೆ. ಮಹಿಳೆಗೆ ಕೈಕಾಲು ಕಟ್ಟಿ ಮತ್ತೆ ಅಡುಗೆ ಮನೆ ದಬ್ಬುವ ಹುನ್ನಾರ ವ್ಯವಸ್ಥಿತವಾಗಿ ನಡೆದಿದೆ. ಮಹಿಳೆಯ ಶಿಕ್ಷಣ ನೀಡುವುದರಿಂದಲೇ ಭಾರತೀಯ ಕೌಟಂಬಿಕ ವ್ಯವಸ್ಥೆ ಹಾಳಾಗಿ ಹೋಗುತ್ತಿದೆಯೆಂದು ಆರೆಸ್ಸೆಸ್ ಸಂಚಾಲಕ ಮೋಹನ್ ಭಾಗವತ್ ಇತ್ತೀಚೆಗೆ ಹೇಳಿದ್ದರು. ಅವರ ಮಾತಿನಲ್ಲಿ ಹೊಸದೇನೂ ಇರಲಿಲ್ಲ. ಆರೆಸ್ಸೆಸ್ ಗುರು ಗೋಳ್ವಾಲ್ಕರ್ ಹೇಳಿದ ಮಾತನ್ನೇ ಅವರು ಪುನರುಚಿಸಿದರು. ಈಗ ಸಂಘ ಪರಿವಾರವನ್ನೇ ಗುರುವೆಂದು ನಂಬಿದವರು ಅಧಿಕಾರದಲ್ಲಿ ಇರುವುದರಿಂದ ಮಹಿಳಾ ಸಮುದಾಯಕ್ಕೆ ಹೊಸ ಸವಾಲುಗಳು ಎದುರಾಗಿವೆೆ. ಮೂರು ವರ್ಷಗಳ ಹಿಂದೆ ದಿಲ್ಲಿಯಲ್ಲಿ ನಿರ್ಭಯಾ ಅತ್ಯಾಚಾರ ಪ್ರಕರಣ ನಡೆದಾಗ, ಇದೇ ಮೋಹನ್ ಭಾಗವತ್ ಅವರು ಅದನ್ನು ಖಂಡಿಸದೇ ‘ಅತ್ಯಾಚಾರಗಳು ನಡೆಯುತ್ತಿರುವುದು ಇಂಡಿಯಾದಲ್ಲಿ. ಭಾರತದಲ್ಲಿ ಅಲ್ಲ ’ಎಂಬ ಕೊಳಕು ಮಾತುಗಳನ್ನಾಡಿದ್ದರು.

ಭಾಗವತ್ ದೃಷ್ಟಿಯಲ್ಲಿ ಇಂಡಿಯಾವೆಂದರೆ ನಗರಪ್ರದೇಶ. ಭಾರತವೆಂದರೆ ಗ್ರಾಮೀಣ ಪ್ರದೇಶ. ನಗರಪ್ರದೇಶದಲ್ಲಿ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದಾಗಿ ಮಹಿಳೆಯರು ಅಂದವಾದ ಬಟ್ಟೆ ತೊಡುವುದರಿಂದ ಅತ್ಯಾಚಾರಗಳು ಹೆಚ್ಚುತ್ತವೆ ಎಂದು ಅವರು ಹೇಳಿದರು. ಎಳೆ ಮಕ್ಕಳ ಮೇಲೆ ಅತ್ಯಾಚಾರ ಮಾಡಿ ಈಗ ಜೈಲಿನ ಕಂಬಿ ಎಣಿಸುತ್ತಿರುವ ಸ್ವಾಮಿಯೊಬ್ಬ ನಿರ್ಭಯಾ ಪ್ರಕರಣದಲ್ಲಿ ಆಕೆ ‘ಅಣ್ಣ ಬಿಟ್ಟುಬಿಡು ಎಂದು ಹೇಳಿದ್ದರೆ, ಅತ್ಯಾಚಾರ ನಡೆಯುತ್ತಿರಲಿಲ್ಲ’ ಎಂದು ಹೇಳಿದ್ದ. ಇದು ಒಬ್ಬಿಬ್ಬರ ಹೇಳಿಕೆಯಲ್ಲ. ಮಧ್ಯಪ್ರದೇಶದ ಬಿಜೆಪಿ ನಾಯಕ ಕೈಲಾಸ ವಿಜಯ ವರ್ಗಿಯಾ ಹೇಳಿಕೆಯೊಂದನ್ನು ನೀಡಿ, ಮಹಿಳೆ ಮೇಲೆ ನಡೆಯುವ ಅತ್ಯಾಚಾರಕ್ಕೆ ಆಕೆಯೇ ಕಾರಣ ಎಂದು ಹೇಳಿದ. ಭಾಗವತರ ಹೇಳಿದ ಗ್ರಾಮೀಣ ಭಾರತದಲ್ಲಿ ಮಹಿಳೆಯರು ಎಂತಹ ಯಾತನೆ ಅನುಭವಿಸುತ್ತಿದ್ದಾರೆ ಎಂಬುದಕ್ಕೆ ಪೊಲೀಸ್ ದಾಖಲೆಗಳಲ್ಲಿ ಉತ್ತರ ದೊರೆಯುತ್ತದೆ. ಮಹಾರಾಷ್ಟ್ರ ಖೈರ್ಲಾಂಜಿಯಲ್ಲಿ ಹಾಡಹಗಲೇ ದಲಿತ ತಾಯಿ, ಮಗಳನ್ನು ಬೀದಿಗೆ ಎಳೆದು ತಂದು ಅತ್ಯಾಚಾರ ಮಾಡಿ ಕೊಚ್ಚಿ ಕೊಚ್ಚಿ ಕೊಂದು ಹಾಕಿದರು. ಈ ತಾಯಿಯ ಪುತ್ರನನ್ನು ಬೆತ್ತಲೆ ಮಾಡಿ, ತಾಯಿ ಮತ್ತು ಸಹೋದರಿ ಮೇಲೆ ಅತ್ಯಾಚಾರ ಮಾಡುವಂತೆ ಬಲಾತ್ಕರಿಸಿ ಕೊಂದು ಹಾಕಿದರು. ಆಗ ಭಾಗವತಗ ನಾಗಪುರದಲ್ಲಿ ಪುರಾಣ ಹೇಳುತ್ತಿದ್ದರು. ಈ ಘಟನೆಗೆ ಕಾರಣರಾದವರೆಲ್ಲ ಸ್ಥಳೀಯ ಬಿಜೆಪಿ ನಾಯಕರು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಛತ್ತೀಸ್‌ಗಡದಲ್ಲಿ ಈಗಲೂ ಅಲ್ಲಿನ ಆದಿವಾಸಿ ಮಹಿಳೆಯರ ಮೇಲೆ ಪೊಲೀಸರು ನಿತ್ಯವೂ ಅತ್ಯಾಚಾರ ಮಾಡುತ್ತಾರೆ. ಮಾವೋವಾದಿಗಳ ದಮನಕ್ಕೆ ಹೊರಟ ಛತ್ತೀಸ್‌ಗಡದ ಬಿಜೆಪಿ ಸರಕಾರ ಈ ಅತ್ಯಾಚಾರವನ್ನು ಕಂಡು ಕಾಣದಂತೆ ಕುರುಡಾಗಿದೆ. ಸುಪ್ರೀಂ ಕೋರ್ಟ್ ಕೂಡ ಈ ಬಗ್ಗೆ ತರಾಟೆಗೆೆ ತೆಗೆದುಕೊಂಡಿದೆ. ದಲಿತ, ದುರ್ಬಲ ವರ್ಗದ ಮಹಿಳೆಯರ ಮೇಲೆ ಅತ್ಯಾಚಾರ ನಡೆಯುವುದು ಗ್ರಾಮೀಣ ಭಾರತದಲ್ಲಿ.

ಇಷ್ಟೆಲ್ಲ ಯಾತನೆ ಪಡುವ ಮಹಿಳೆಯನ್ನು ಇವರು ಅಷ್ಟಕ್ಕೆ ಸುಮ್ಮನೆ ಬಿಡುವುದಿಲ್ಲ. ಹಿಂದೂಗಳ ಸಂಖ್ಯೆ ಹೆಚ್ಚು ಮಾಡಲು ತಲಾ ಒಂದು ಡಝನ್ ಮಕ್ಕಳು ಹಡೆಯಬೇಕೆಂದು ವಿಶ್ವ ಹಿಂದೂ ಪರಿಷತ್ತು ನಾಯಕ ಪ್ರವೀಣ್ ತೊಗಾಡಿಯಾ, ಪ್ರಮೋದ್ ಮುತಾಲಿಕ್, ಸಾಕ್ಷಿ ಮಹಾರಾಜ ಅಂತಹವರು ಬಹಿರಂಗವಾಗಿ ಕರೆ ಕೊಡುತ್ತಿದಾರೆ. ಮಹಿಳೆಯನ್ನು ಮಕ್ಕಳು ಹಡೆಯುವ ಯಂತ್ರ ಎಂದು ತಿಳಿದುಕೊಂಡಿರುವ ಇವರು ಮನ ಬಂದಂತೆ ಮಾತನಾಡುತ್ತಿದ್ದಾರೆೆ. ಹಿಂದೂಗಳ ಸಂಖ್ಯೆ ಹೆಚ್ಚಿಸುವ ಆಸಕ್ತಿಯಿದ್ದರೆ, ಇವರೇ ಲಿಂಗ ಪರಿವರ್ತನೆ ಮಾಡಿಕೊಂಡು ಗರ್ಭ ಧರಿಸಿ ಡಝನ್ ಮಕ್ಕಳನ್ನು ಹಡೆಯಲಿ.

ಈ ಅವಿವೇಕಿಗಳ ಮಾತಿನಿಂದ ರೋಸಿ ಹೋಗಿರುವ ಮಹಿಳಾ ಸಂಘಟನೆಗಳು ‘ನಮ್ಮ ದೇಹ ನಮ್ಮ ಹಕ್ಕು’ ಎಂಬ ಘೋಷ ವಾಕ್ಯ ಮೊಳಗಿಸಿವೆ. ಗರ್ಭ ಧರಿಸುವಿಕೆ ಸೇರಿದಂತೆ ತಮ್ಮ ದೇಹಕ್ಕೆ ಸಂಬಂಧಿಸಿದ ಪ್ರತಿಯೊಂದು ವಿಷಯದ ಮೇಲೂ ತೀರ್ಮಾನ ಕೈಗೊಳ್ಳುವ ಹಕ್ಕು ನಮಗಿದೆ ನಿಮಗಲ್ಲ ಎಂಬ ಸಂದೇಶವನ್ನು ಈ ಘೋಷ ವಾಕ್ಯ ನೀಡುತ್ತದೆ. ಬರೀ ತನ್ನ ಹಕ್ಕಿನ ರಕ್ಷಣೆಗಾಗಿ ಮಾತ್ರವಲ್ಲ, ಇಡೀ ಮನುಕುಲದ ಮುನ್ನಡೆಯ ಹೊಣೆ ಹೊತ್ತ ಮಹಿಳೆ ಜಗತ್ತಿಗೆ ಬೆಳಕನ್ನು ನೀಡುವ ದಿಕ್ಕಿನತ್ತ ಸಾಗಿದ್ದಾಳೆ. ಅಂತಲೇ ಕೋಮುವಾದಿ ಶಕ್ತಿಗಳ ವಿರುದ್ಧ ನಡೆಯುತ್ತಿರುವ ಸಂಘರ್ಷದಲ್ಲಿ ಈಗ ಮಹಿಳೆಯರೇ ಮುಂಚೂಣಿಯಲ್ಲಿದ್ದಾರೆ. ಮಂಗಳೂರಿಗೆ ಪಿಣರಾಯಿ ವಿಜಯನ್ ಬಂದಾಗ ನಡೆದ ಮೆರವಣಿಗೆಯಲ್ಲಿ, ದಿಲ್ಲಿಯಲ್ಲಿ ಎಬಿವಿಪಿ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದರು.

ಕರ್ನಾಟಕದಲ್ಲಿ 70ರ ದಶಕದ ಆರಂಭದಲ್ಲಿ ಭಾರತೀಯ ಮಹಿಳೆಯರ ರಾಷ್ಟ್ರೀಯ ಒಕ್ಕೂಟ (ಎನ್‌ಎಫ್‌ಐಡಬ್ಲ್ಯೂ) ಬೆಂಗಳೂರಿನಲ್ಲಿ ಸಮಾವೇಶ ನಡೆಸಿ ಸಮಾನತೆಯ ಧ್ವನಿಯೆತ್ತಿತು. ನಂತರ ಬಂದ ಜನವಾದಿ ಸಂಘಟನೆ ಮತ್ತು ಮಹಿಳಾ ಜಾಗೃತಿಯು ಅರಿವಿನ ಬೆಳಕನ್ನು ಹೊತ್ತಿಸುವಲ್ಲಿ ಸಾಕಷ್ಟು ಪ್ರಮುಖ ಪಾತ್ರವಹಿಸಿದವು. ಈಗ ಇವೆಲ್ಲ ಸಂಘಟನೆಗಳು ಸೇರಿ ಮಹಿಳಾ ಚಳವಳಿಗೆ ಹೊಸ ದಿಕ್ಕು ತೋರಿಸಲು ಹೊರಟಿವೆ. ಇಷ್ಟು ದಿನ ನಡೆದು ಬಂದ ದಾರಿಗೆ ಭಿನ್ನವಾಗಿ ಹೊಸ ದಾರಿಯತ್ತ ನಡೆಯುವ ಚಿಂತನೆ ಕೈಗೊಂಡಿವೆ.

ಲೇಖಕಿ ಸಬಿತಾ ಬನ್ನಾಡಿಯವರು ಹೇಳಿದಂತೆ ಸ್ತ್ರೀವಾದ (ಫೆಮಿನಿಸಂ) ಈಗ ಹಲವು ಮನ್ವಂತರಗಳನ್ನು ದಾಟಿದೆ. ಲೋಕ ಕಟ್ಟುವ ತನ್ನ ನಿಜ ಗುರಿಯ ಹತ್ತಿರಕ್ಕೆ ಬರುತ್ತಿದೆ. ಗಂಡು, ಹೆಣ್ಣು ಇಬ್ಬರೂ ಮನೆಯನ್ನು, ಸಮುದಾಯವನ್ನು ಪೊರೆಯುವವರು ಆಗಬೇಕು. ಸೊಸೆಗೆ ತಾಯಿ ಸ್ಥಾನದಲ್ಲಿ ನಿಲ್ಲುವ ಮಾವ, ಮಾವನಿಗೆ ಮಗಳಂತೆ ಭದ್ರತೆ ನೀಡುವ ಸೊಸೆ. ಇಬ್ಬರೂ ಸೇರಿ ಪೊರೆಯುವ ಮಗ. ಮತ್ತೆ ಮೂವರು ಸೇರಿ ಬರಲಿರುವ ಮಗುವಿಗೆ ನೆಲ ಹದ ಮಾಡುವ ಹೊಣೆಗಾರಿಕೆಯನ್ನು ನಿಭಾಯಿಸುವ ಚಲನೆ. ಇದೊಂದು ಭವಿಷ್ಯದ, ಸಮಾಜದ ಕನಸು ಕೂಡ. ಈ ನಿಟ್ಟಿನಲ್ಲಿ ‘ನಮ್ಮ ಮಗಳು, ಜಗದ ಬೆಳಗು’ ಎಂಬ ಘೋಷ ವಾಕ್ಯದಡಿ ಕೊಪ್ಪಳದಲ್ಲಿ ನಡೆಯಲಿರುವ ಮಹಿಳಾ ದಿನಾಚರಣೆ ಮಹಿಳಾ ಸಮುದಾಯಕ್ಕೆ ಹೊಸ ದಿಕ್ಕನ್ನು, ಚಳವಳಿಗೆ ಹೊಸ ದಾರಿಯನ್ನು ತೋರಿಸುವ ನಿಟ್ಟಿನಲ್ಲಿ ಯಶಸ್ವಿಯಾಗುವುದರಲ್ಲಿ ಸಂದೇಹವಿಲ್ಲ. ಮಹಿಳೆಯನ್ನು ಹಡೆಯುವ ಯಂತ್ರವನ್ನಾಗಿ ಬರೀ ಅಡುಗೆ ಮಾಡುವ ಆಳನ್ನಾಗಿ ಮಾಡಿದ ಪಾಳೇಗಾರಿ ಸಮಾಜ ಹಾಗೂ ಮಹಿಳೆಯ ದೇಹವನ್ನು ಮಾರುಕಟ್ಟೆಯ ಸರಕನ್ನಾಗಿ ಮಾಡಿದ ಬಂಡವಾಳಶಾಹಿ ಸಮಾಜ ಇವೆರಡರ ಕಾವಲುಪಡೆಯಾದ ಮನುವಾದಿ, ಕೋಮುವಾದಿ ಶಕ್ತಿಗಳ ವಿರುದ್ಧ ಜಗತ್ತಿಗೆ ಬೆಳಕು ನೀಡಲು ಹೊರಟ ಮಹಿಳೆ ಈಗ ದನಿಯೆತ್ತಿದ್ದಾಳೆ. ಮಹಿಳೆ ಮತ್ತು ಪುರುಷ ಪರಸ್ಪರ ಶತ್ರುಗಳಲ್ಲ. ಇಬ್ಬರೂ ಜೊತೆಗೂಡಿಯೇ ತಮ್ಮ ಬದುಕನ್ನು, ಸಮಾಜವನ್ನು ಕಟ್ಟಬೇಕಿದೆ. ಸಮಾನತೆಗೆ ಅಡ್ಡಿಯಾದ ಶಕ್ತಿಯನ್ನು ಹಿಮ್ಮೆಟ್ಟಿಸಬೇಕಿದೆ.
 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)