varthabharthi

ಪ್ರಚಲಿತ

ಯಾರ ಸೋಲು? ಯಾರ ಗೆಲುವು?

ವಾರ್ತಾ ಭಾರತಿ : 13 Mar, 2017
ಸನತ್ ಕುಮಾರ್ ಬೆಳಗಲಿ

ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಬಂದಿದೆ. ಉತ್ತರಪ್ರದೇಶ, ಉತ್ತರಾಖಂಡದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಹತ್ತು ವರ್ಷಗಳ ಬಳಿಕ ಪಂಜಾಬ್‌ನಲ್ಲಿ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬಂದಿದೆ. ಅತಂತ್ರ ವಿಧಾನಸಭೆ ಸೃಷ್ಟಿಯಾಗಿರುವ ಗೋವಾ ಮತ್ತು ಮಣಿಪುರಗಳಲ್ಲಿ ಕಾಂಗ್ರೆಸ್ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಉತ್ತರ ಪ್ರದೇಶದಲ್ಲಿ ಮುಲಾಯಂ ಪುತ್ರ ಅಖಿಲೇಶ್ ಯಾದವ್ ಅಧಿಕಾರ ಕಳೆದುಕೊಂಡಿದ್ದಾರೆ. ಪಂಜಾಬ್‌ನಲ್ಲಿ ಬಾದಲ್ ಕುಟುಂಬದ ಪಾಳೇಗಾರಿಕೆಯನ್ನು ಜನ ತಿರಸ್ಕರಿಸಿದ್ದಾರೆ.

ಕಾಂಗ್ರೆಸ್ ಮುಕ್ತ ಭಾರತದ ಮೋದಿ-ಅಮಿತ್‌ಶಾ ಕಾರ್ಯಾಚರಣೆ ಎರಡು ರಾಜ್ಯಗಳಿಗೆ ಮಾತ್ರ ಸೀಮಿತಗೊಂಡಿದೆ. ಮೇಲ್ನೋಟಕ್ಕೆ ಇದನ್ನು ಆಡಳಿತ ವಿರೋಧಿಯೆಂದು ವ್ಯಾಖ್ಯಾನಿಸಬಹುದು. ಮಾಧ್ಯಮಗಳ ವಿಶ್ಲೇಷಣೆ ಈ ಮಿತಿಯನ್ನು ದಾಟಿ ಮುಂದೆ ಹೋಗುವುದಿಲ್ಲ. ಆದರೆ, ಈ ಚುನಾವಣೆ ಫಲಿತಾಂಶವನ್ನು ಇನ್ನಷ್ಟು ಆಳಕ್ಕಿಳಿದು ವಿಶ್ಲೇಷಣೆ ಮಾಡಿದರೆ ರಾಜಕೀಯ ಪಕ್ಷಗಳ ಸೋಲು ಗೆಲುವಿನ ಆಚೆಯ ಅಂಶಗಳು ಗಮನಕ್ಕೆ ಬರುತ್ತವೆ. ಗುಜರಾತ್‌ನ್ನು ಹಿಂದುತ್ವದ ಪ್ರಯೋಗಶಾಲೆಯಾಗಿ ಮಾಡಿಕೊಂಡು ವಶಪಡಿಸಿಕೊಂಡ ಬಿಜೆಪಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ಮುಝಫ್ಫರ್ ನಗರ ಕೋಮು ಗಲಭೆ ಮೂಲಕ ಗುಜರಾತ್ ಮಾದರಿಯ ಇನ್ನೊಂದು ಪ್ರಯೋಗವನ್ನು ಉತ್ತರಪ್ರದೇಶದಲ್ಲಿ ಮಾಡಿದೆ. ಅದರ ಫಲವಾಗಿ ಲೋಕಸಭೆ ಚುನಾವಣೆಯಲ್ಲಿ ಅತ್ಯಂತ ಹೆಚ್ಚು ಸ್ಥಾನ ಗೆದ್ದಿದ್ದ ಪಕ್ಷ ಈಗ ವಿಧಾನಸಭೆಯನ್ನು ವಶಪಡಿಸಿಕೊಂಡಿದೆ.

ಇನ್ನು ಮುಂದೆ ಉತ್ತರ ಪ್ರದೇಶವೂ ಕೂಡ ಹಿಂದುತ್ವದ ಪ್ರಯೋಗಶಾಲೆಯಾಗುವುದೋ ಎಂಬುದನ್ನು ಕಾದು ನೋಡಬೇಕಿದೆ. ದೇಶದ ಅತ್ಯಂತ ದೊಡ್ಡ ರಾಜ್ಯವಾದ ಉತ್ತರ ಪ್ರದೇಶದಲ್ಲಿ ನಾಲ್ಕನೆ ಮೂರರಷ್ಟು ಸ್ಥಾನವನ್ನು ಗಳಿಸಿದ ಬಿಜೆಪಿಯ ಗೆಲುವನ್ನು ಬರೀ ಒಂದು ಪಕ್ಷದ ಗೆಲುವೆಂದು ವಿಶ್ಲೇಷಣೆ ಮಾಡಿದರೆ ಸಾಲದು. ಬಿಜೆಪಿ ಉಳಿದ ಪಕ್ಷಗಳಂತಲ್ಲ. ಅದು ಆರೆಸ್ಸೆಸ್‌ನ ರಾಜಕೀಯ ವೇದಿಕೆ. ಆರೆಸ್ಸೆಸ್‌ಗೆ ತನ್ನದೇ ಆದ ಒಂದು ಕಾರ್ಯಸೂಚಿ ಇದೆ. ಜಾತ್ಯತೀತ ಭಾರತವನ್ನು ಮನುವಾದಿ ಹಿಂದೂರಾಷ್ಟ್ರವನ್ನಾಗಿ ಮಾಡುವುದು ಅದರ ಕಾರ್ಯಸೂಚಿ. ಇದನ್ನು ಸಂಘದ ಮೊದಲ ಸರಸಂಘ ಚಾಲಕ ಗೋಳ್ವಾಲ್ಕರ್ ತಮ್ಮ ಪುಸ್ತಕದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.

ಗೋಳ್ವಾಲ್ಕರ್ ಕಲ್ಪನೆಯ ಹಿಂದೂರಾಷ್ಟ್ರದಲ್ಲಿ ಮುಸಲ್ಮಾನರು ಹಾಗೂ ಕ್ರೈಸ್ತರು ಎರಡನೆ ದರ್ಜೆ ನಾಗರಿಕರಾಗಿ ಬದುಕಬೇಕು. ತಮ್ಮದೆಲ್ಲವನ್ನೂ ಬಿಟ್ಟುಕೊಟ್ಟು ಹಿಂದುತ್ವಕ್ಕೆ ವಿಧೇಯರಾಗಿ ಇರಬೇಕೆಂದು ಅವರು ಹೇಳುತ್ತಾರೆ. ಅಲ್ಪಸಂಖ್ಯಾತರು ಮಾತ್ರ ಸಂಘ ಪರಿವಾರದ ಗುರಿಯಲ್ಲ. ದಲಿತರು ಮತ್ತು ಹಿಂದುಳಿದವರು ಕೂಡ ಹೇಗಿರಬೇಕು ಎಂಬುದನ್ನು ನೇರವಾಗಿ ಹೇಳಿರದಿದ್ದರೂ ಶ್ರೇಣೀಕೃತ ಜಾತಿ ಪದ್ಧತಿಯನ್ನು ಗೋಳ್ವಾಲ್ಕರ್ ಸಮರ್ಥಿಸಿಕೊಂಡಿದ್ದಾರೆ.

ಮೊಗಲರು ಮತ್ತು ಬ್ರಿಟಿಷರು ಈ ದೇಶಕ್ಕೆ ಬರುವ ಮುನ್ನ ಅಸ್ತಿತ್ವದಲ್ಲಿದ್ದ ಜಾತಿ ಪ್ರಧಾನವಾದ ಹಿಂದೂ ಸಮಾಜವನ್ನು ನಿರ್ಮಿಸಬೇಕು. ಹಿಂದೂರಾಷ್ಟ್ರ ಸ್ಥಾಪನೆಯಾಗಬೇಕು ಎಂಬುದು ಅವರ ಗುರಿಯಾಗಿತ್ತು. ಅಂತಲೇ ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಸಂಘ ಪರಿವಾರ ಪಾಲ್ಗೊಳ್ಳಲಿಲ್ಲ. ಬ್ರಿಟಿಷರು ಹೋದ ನಂತರ ಹಿಂದೂರಾಷ್ಟ್ರ ಸ್ಥಾಪನೆ ಅವರ ಗುರಿಯಾಗಿತ್ತು. ಆದರೆ ಸ್ವಾತಂತ್ರ್ಯ ಚಳವಳಿಯ ನೇತೃತ್ವ ವಹಿಸಿದ್ದ ಗಾಂಧಿ, ನೆಹರೂ, ಸುಭಾಷ್, ಭಗತ್ ಸಿಂಗ್ ಮುಂತಾದವರು ಹಿಂದೂರಾಷ್ಟ್ರ ನಿರ್ಮಾಣಕ್ಕೆ ವಿರೋಧವಾಗಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಡಾ. ಬಾಬಾ ಸಾಹೇಬ ಅಂಬೇಡ್ಕರ್, ಭಾರತ ಹಿಂದೂರಾಷ್ಟ್ರವಾದರೆ ನಾಶವಾಗಿ ಹೋಗುತ್ತದೆ ಎಂದು ಹೇಳಿದರು. ಆ ನಂತರ, ಅಂಬೇಡ್ಕರ್ ಅಧ್ಯಕ್ಷತೆಯಲ್ಲಿ ರಚನೆಗೊಂಡ ಸಂವಿಧಾನ ರಚನಾ ಸಮಿತಿ ರೂಪಿಸಿದ ಸಂವಿಧಾನ ಭಾರತವನ್ನು ಜಾತ್ಯತೀತ ಜನತಂತ್ರವೆಂದು ಘೋಷಿಸಿತು.

ಭಾರತ ಸಮಾಜವಾದಿ ಪ್ರಜಾಪ್ರಭುತ್ವ ರಾಷ್ಟ್ರವಾಗುವುದು ಸಂಘ ಪರಿವಾರಕ್ಕೆ ಬೇಕಿರಲಿಲ್ಲ. ಸಮಾಜವಾದ ಮತ್ತು ಪ್ರಜಾಪ್ರಭುತ್ವ ಭಾರತಕ್ಕೆ ಹೊರಗಿನ ಶಬ್ದಗಳು ಎಂದು ಗೋಳ್ವಾಲ್ಕರ್ ಹೇಳಿದ್ದಾರೆ. ಆದರೂ ಬಿಜೆಪಿ ಕಾಟಾಚಾರಕ್ಕೆ ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡು ಆ ಮೂಲಕ ಅಧಿಕಾರ ವಶಪಡಿಸಿಕೊಂಡಿದೆ. ಪ್ರಜಾಪ್ರಭುತ್ವದ ಮೂಲಕ ವಶಪಡಿಸಿಕೊಂಡ ಅಧಿಕಾರವನ್ನು ಸಂವಿಧಾನದ ಬದಲಾವಣೆಗೆ ಬಳಸಿಕೊಳ್ಳುವುದು ಸಂಘ ಪರಿವಾರದ ಮುಂದಿನ ಗುರಿಯಾಗಿದೆ. ಆ ಮೂಲಕ ಹಿಂದೂ ರಾಷ್ಟ್ರದ ಕನಸನ್ನು ನನಸಾಗಿಸಿಕೊಳ್ಳಲು ಅದು ಷಡ್ಯಂತ್ರ ರೂಪಿಸಿದೆ. 90ರ ದಶಕದ ನಂತರ ದೇಶಕ್ಕೆ ಕಾಲಿಟ್ಟ ಜಾಗತೀಕರಣ, ಉದಾರೀಕರಣ ಈಗ ನವ ಉದಾರೀಕರಣದ ಹಂತವನ್ನು ಪ್ರವೇಶಿಸಿದೆ.

ದೇಶದ 125 ಕೋಟಿ ಜನರಿಗೆ ಸೇರಿದ ಸಕಲ ಸಂಪತ್ತನ್ನು ವಶಪಡಿಸಿಕೊಳ್ಳಲು ಹೊರಟಿರುವ ಕಾರ್ಪೊರೇಟ್ ಬಂಡವಾಳಶಾಹಿಗಳಿಗೆ ತಮ್ಮ ಗುರಿ ಸಾಧನೆಗಾಗಿ ಆರೆಸ್ಸೆಸ್‌ನಂತಹ ಕೋಮುವಾದಿ ಸಂಘಟನೆಯ ಅಗತ್ಯವಿದೆ. ತನ್ನ ಮನುವಾದಿ ಹಿಂದೂರಾಷ್ಟ್ರದ ಗುರಿ ಸಾಧನೆಗಾಗಿ ಕಾರ್ಪೊರೇಟ್ ಬಂಡವಾಳಶಾಹಿಯ ನೆರವು ಸಂಘ ಪರಿವಾರಕ್ಕೆ ಅಗತ್ಯವಿದೆ. ಇವೆರಡರ ಅನೈತಿಕ ಮೈತ್ರಿಯ ಪರಿಣಾಮವಾಗಿ ಬಿಜೆಪಿ ಎಲ್ಲೆಡೆ ಗೆಲುವು ಸಾಧಿಸಿದೆ. ನರೇಂದ್ರ ಮೋದಿಯವರಂತಹ ವ್ಯಕ್ತಿಯನ್ನು ಮುಂದಿಟ್ಟುಕೊಂಡು ಸುಳ್ಳು ಇಮೇಜ್ ಸೃಷ್ಟಿಸಿ ಈ ಅನೈತಿಕ ಮೈತ್ರಿಕೂಟ ಗೆಲುವು ಸಾಧಿಸಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಮೋದಿಯವರು ಅಧಿಕಾರಕ್ಕೆ ಬಂದ ನಂತರ ನಡೆದ ದಾದ್ರಿ ಘಟನೆ, ಮರು ಮತಾಂತರದ ಹೆಸರಿನಲ್ಲಿ ನಡೆದ ಹಿಂಸಾಚಾರ, ಉನಾ ಮತ್ತು ಹರ್ಯಾಣದಲ್ಲಿ ನಡೆದ ದಲಿತರ ಮೇಲಿನ ಹಲ್ಲೆ, ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ನಡೆದ ರೋಹಿತ್ ವೇಮುಲ ಆತ್ಮಹತ್ಯೆ, ದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯವನ್ನು ಸ್ವಾಧೀನಪಡಿಸಿಕೊಳ್ಳಲು ಎಬಿವಿಪಿ ಮೂಲಕ ಸಂಘ ಪರಿವಾರ ನಡೆಸಿದ ಯತ್ನ, ಪುಣೆಯ ಚಲನಚಿತ್ರ ತರಬೇತಿ ಸಂಸ್ಥೆಯ ನಿರ್ದೇಶಕ ಸ್ಥಾನಕ್ಕೆ ಸಂಘ ಪರಿವಾರದ ಗಜೇಂದ್ರ ಚೌಹಾಣ್ ನೇಮಕ, ಅದನ್ನು ವಿರೋಧಿಸಿ ಅಲ್ಲಿನ ವಿದ್ಯಾರ್ಥಿಗಳು ನಡೆಸಿದ ಸುದೀರ್ಘ ಹೋರಾಟ. ವಿಚಾರವಾದಿಗಳಾದ ದಾಭೋಲ್ಕರ್, ಪನ್ಸಾರೆ ಮತ್ತು ಕಲಬುರ್ಗಿ ಹತ್ಯೆ, ಚೆನ್ನೈ ವಿಶ್ವವಿದ್ಯಾನಿಲಯದಲ್ಲಿ ಅಂಬೇಡ್ಕರ್-ಪೆರಿಯಾರ್ ವಿಚಾರ ವೇದಿಕೆ ಮೇಲೆ ಹಾಕಿದ ನಿರ್ಬಂಧ, ಸಂಜೋತಾ ಎಕ್ಸ್‌ಪ್ರೆಸ್ ರೈಲು ಸ್ಫೋಟಕ್ಕೆ ಸಂಬಂಧಿಸಿದಂತೆ ತಪ್ಪೊಪ್ಪಿಕೊಂಡಿದ್ದ ಆರೆಸ್ಸೆಸ್ ಪ್ರಚಾರಕ ಅಸೀಮಾನಂದರನ್ನು ದೋಷ ಮುಕ್ತಿಗೊಳಿಸಿದ ರಾಷ್ಟ್ರೀಯ ತನಿಖಾ ಸಂಸ್ಥೆ. ಇವೆಲ್ಲ ಅಂಶಗಳನ್ನು ಗಮನಿಸಿದರೆ, ಉತ್ತರಪ್ರದೇಶದ ಗೆಲುವಿನ ನಂತರ ಹಿಂದೂರಾಷ್ಟ್ರ ನಿರ್ಮಾಣದ ಗುರಿಗಾಗಿ ಆರೆಸ್ಸೆಸ್ ಇನ್ನಷ್ಟು ತೀವ್ರ ಕಾರ್ಯಾಚರಣೆಗೆ ಇಳಿಯಲಿದೆ. ನರೇಂದ್ರ ಮೋದಿ ಮತ್ತು ಅಮಿತ್‌ಶಾ ಇವರಿಬ್ಬರ ಏಕಚಕ್ರಾಧಿಪತ್ಯ ಬಗ್ಗೆ ಸಂಘ ಪರಿವಾರದ ಕೆಲವರಲ್ಲಿ ಅಸಮಾಧಾನ ಇದ್ದರೂ ಕೂಡ ಹಿಂದೂ ರಾಷ್ಟ್ರ ಗುರಿ ಸ್ಥಾಪನೆಗೆ ಮೋದಿ ಅಡ್ಡಿಯಾಗುವುದಿಲ್ಲ ಎಂದು ಈ ಅಸಮಾಧಾನವನ್ನು ಸದ್ಯಕ್ಕೆ ಸಹಿಸಿಕೊಂಡಿದೆ.

ಸಂಘ ಪರಿವಾರದ ಈ ಎಲ್ಲಾ ಅತಿರೇಕಗಳ ವಿರುದ್ಧ ಪ್ರಗತಿಪರ ಶಕ್ತಿಗಳು ಪ್ರತಿರೋಧ ಉಂಟು ಮಾಡಿಲ್ಲವೆಂದಲ್ಲ. ಸರಕಾರದ ಜನವಿರೋಧಿ ಆರ್ಥಿಕ ನೀತಿ ವಿರುದ್ಧ ಎಡಪಂಥೀಯ ಕಾರ್ಮಿಕ ಸಂಘಟನೆಗಳು ಅನೇಕ ಬಾರಿ ಹೋರಾಟ ನಡೆಸಿದೆ. ಅಂತಹ ಹೋರಾಟಗಳಲ್ಲಿ ದೇಶವ್ಯಾಪಿ ಲಕ್ಷಾಂತರ ಕಾರ್ಮಿಕರು ಪಾಲ್ಗೊಂಡಿದ್ದಾರೆ. ಆದರೆ ಆರ್ಥಿಕ ಹೋರಾಟಕ್ಕೆ ಕೆಂಬಾವುಟ ಹಿಡಿದು ಬರುವ ಈ ಕಾರ್ಮಿಕರು ಚುನಾವಣೆ ಬಂದಾಗ ಬಿಜೆಪಿ ಪರವಾಗಿ ಮತ ಚಲಾಯಿಸುತ್ತಾರೆ. ಇನ್ನು ಕಾಂಗ್ರೆಸ್ ಪ್ರತಿರೋಧ ಸಂಸತ್ತಿಗೆ ಮಾತ್ರ ಸೀಮಿತಗೊಂಡಿದೆ.

ಪಿ.ವಿ.ನರಸಿಂಹರಾವ್ ಕಾಲದಲ್ಲೇ ಕಾಂಗ್ರೆಸ್‌ನ ತಳಹಂತದ ಸಂಘಟನಾ ಜಾಲ ವಿನಾಶದ ದಾರಿ ಹಿಡಿಯಿತು. ಹೀಗಾಗಿ ಬಿಜೆಪಿಗೆ ಈಗ ಎದುರಾಳಿಯೇ ಇಲ್ಲದಂತಾಗಿದೆ. ದಕ್ಷಿಣ ಭಾರತದಲ್ಲಿ ಪ್ರಾದೇಶಿಕ ಪಕ್ಷಗಳು ಬಿಜೆಪಿಗೆ ಅಡ್ಡಿಯಾಗಿರುವುದೇನೋ ನಿಜ. ಆದರೆ ಉತ್ತರ ಪ್ರದೇಶ ಚುನಾವಣೆ ಗೆಲುವಿನ ನಂತರ ಈ ಪಕ್ಷಗಳನ್ನು ಮುಗಿಸಲು ಅಮಿತ್ ಶಾ-ನರೇಂದ್ರ ಮೋದಿ ಜೋಡಿ ಕಾರ್ಯತಂತ್ರ ರೂಪಿಸಿದೆ. ಈ ಕಾರ್ಯತಂತ್ರದ ಭಾಗವಾಗಿ ತಮಿಳುನಾಡಿನಲ್ಲಿ ದ್ರಾವಿಡ ಪಕ್ಷಗಳು ಒಡೆದು ಹೋಳುಹೋಳಾಗಿವೆ. ಕೇರಳದಲ್ಲಿ ಅಧಿಕಾರದಲ್ಲಿ ಇರುವ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷವನ್ನು ಟಾರ್ಗೆಟ್ ಮಾಡಿಕೊಂಡಿರುವ ಸಂಘ ಪರಿವಾರ ಅಲ್ಲಿ ಹಿಂದುಗಳ ಹತ್ಯೆ ನಡೆದಿದೆಯೆಂದು ಹುಯಿಲೆಬ್ಬಿಸಿ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ತರುವ ಕನಸು ಕಾಣುತ್ತಿದೆ.

ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಚುನಾವಣೆಯನ್ನು ವಿಶ್ಲೇಷಿಸಬೇಕಿದೆ. ದೇಶದ ಬಹುತೇಕ ಕಡೆ 30ರೊಳಗಿನ ಯುವಕರನ್ನು ಆಕರ್ಷಿಸುವಲ್ಲಿ ಬಿಜೆಪಿ ಕೊಂಚ ಮಟ್ಟಿಗೆ ಯಶಸ್ವಿಯಾಗಿದೆ. ದೇಶದ ಒಟ್ಟು ಮತದಾರರ ಸಂಖ್ಯೆಯಲ್ಲಿ ಯುವಕರೇ ಅರ್ಧಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಬಿಜೆಪಿ ಗೆಲುವಿನತ್ತ ದಾಪುಗಾಲು ಇಡುತ್ತಿದೆ. ಈ ಯುವಕರಿಗೆ ಈ ದೇಶದ ಸ್ವಾತಂತ್ರ್ಯ ಹೋರಾಟ, ಸಮಾನತೆ ಮತ್ತು ಪ್ರಜಾಪ್ರಭುತ್ವದ ಕಲ್ಪನೆಯಿಲ್ಲ. ಉದಾರವಾದಿ ಆರ್ಥಿಕ ನೀತಿಯ ಪರಿಣಾಮವಾಗಿ ದೇಶದಲ್ಲಿ ಅಸ್ತಿತ್ವಕ್ಕೆ ಬಂದ ನವಮಧ್ಯಮ ವರ್ಗವೇ ಬಿಜೆಪಿಯ ಪ್ರಮುಖ ಬೆಂಬಲಿಗ ಶಕ್ತಿಯಾಗಿದೆ. ಈ ನವ ಮಧ್ಯಮ ವರ್ಗದಲ್ಲಿಯೇ ಎಡಪಂಥೀಯ ಕಾರ್ಮಿಕ ಸಂಘಟನೆಗಳಲ್ಲಿರುವ ನೌಕರರು ಇದ್ದಾರೆ. ಇನ್ನೊಂದೆಡೆ ಅಧ್ಯಾತ್ಮವನ್ನೇ ದಂಧೆಯನ್ನಾಗಿ ಮಾಡಿಕೊಂಡ ಮಠಾಧೀಶರು, ನಕಲಿ ದೇವಮಾನವರು ಸಂಘ ಪರಿವಾರದ ಜೊತೆಗಿದ್ದಾರೆ. ದಲಿತ, ಹಿಂದುಳಿದವರಲ್ಲಿ ಒಡಕನ್ನು ಉಂಟು ಮಾಡಿ ಅವರ ನಡುವೆಯೂ ತನ್ನ ಓಟ್ ಬ್ಯಾಂಕ್ ಮಾಡಿಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ವಿರೋಧಿಗಳನ್ನೆಲ್ಲ ದೇಶದ್ರೋಹಿಯೆಂದು ಬಿಂಬಿಸುತ್ತ ಸಂಘ ಪರಿವಾರದ ಫ್ಯಾಶಿಸಂ ಇಡೀ ದೇಶವನ್ನು ಆವರಿಸುತ್ತಿದೆ.

ಇದಿಷ್ಟೇ ಅಲ್ಲ, ಬುದ್ಧ, ಬಸವಣ್ಣ, ಜ್ಯೋತಿಬಾ ಫುಲೆ, ಅಂಬೇಡ್ಕರ್ ಅವರಿಂದ ಹಿಡಿದು ಈ ದೇಶದಲ್ಲಿ ಆರಂಭಗೊಂಡ ಜಾತಿ ವಿರೋಧಿ ಹೋರಾಟಕ್ಕೆ ಬಿಜೆಪಿ ಗೆಲುವಿನಿಂದ ಮತ್ತೆ ಹಿನ್ನಡೆಯಾಗಿದೆ. ಮನುಷ್ಯ ಸಮಾನತೆಯ ಕನಸನ್ನು ಕಂಡು ನನಸಾಗಿಸಲು ಹೊರಟ ಬುದ್ಧನನ್ನು ಈ ಕರಾಳಶಕ್ತಿಗಳು ಬಿಡಲಿಲ್ಲ. ಕೊನೆಗೆ ಬೌದ್ಧ ಧರ್ಮ ದೇಶಾಂತರ ಹೋಗಿ ಚೀನಾ, ಜಪಾನ್ ಮುಂತಾದ ಕಡೆ ಬೆಳೆಯಿತು. ಆ ನಂತರ 12ನೆ ಶತಮಾನದಲ್ಲಿ ಬಂದ ಬಸವಣ್ಣ ಜಾತಿ ವ್ಯವಸ್ಥೆ ವಿರುದ್ಧ ದನಿಯೆತ್ತಿದಾಗ, ಅವರನ್ನೂ ಹತ್ತಿಕ್ಕಲಾಯಿತು.

ಕೊನೆಗೆ ಬಸವಣ್ಣ ಬಲಿದಾನ ಮಾಡಬೇಕಾಯಿತು. ಆ ನಂತರ ಬಂದ ಮಹಾರಾಷ್ಟ್ರ ಸಂತ ತುಕಾರಾಂ, ಜ್ಞಾನೇಶ್ವರ, ಚೋಕಾಮೇಳ ಅವರನ್ನು ಕೂಡ ಈ ವ್ಯವಸ್ಥೆ ಬಲಿತೆಗೆದುಕೊಂಡಿತು. 18ನೆ ಶತಮಾನದಲ್ಲಿ ಬಂದ ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ ಅಸ್ಪಶ್ಯರಿಗೆ ಮತ್ತು ಮಹಿಳೆಯರಿಗೆ ಅಕ್ಷರ ಕಲಿಸಲು ಹೋಗಿ ನಾನಾ ಸಂಕಷ್ಟ ಅನುಭವಿಸಿದರು. ದೇಶಕ್ಕೆ ಸ್ವಾತಂತ್ರ್ಯ ಬಂದಾಗ, ಡಾ. ಅಂಬೇಡ್ಕರ್ ಸಂವಿಧಾನ ರಚನೆಯ ನೇತೃತ್ವ ವಹಿಸಿದ್ದರಿಂದ ಮತ್ತು ಅವರಿಗೆ ಗಾಂಧಿ, ನೆಹರೂ ಒತ್ತಾಸೆಯಾಗಿ ನಿಂತಿದ್ದರಿಂದ ಈ ದೇಶದ ಅವಕಾಶ ವಂಚಿತ ವರ್ಗದವರಿಗೆ ಮತ್ತು ಮಹಿಳೆಯರಿಗೆ ಮೀಸಲಾತಿ ಎಂಬ ಸೌಕರ್ಯ ಬಂತು. ದೇಶದ ಕೋಟ್ಯಂತರ ಜನರಿಗೆ ಮುಕ್ತವಾಗಿ ಉಸಿರಾಡಲು ಪ್ರಜಾಪ್ರಭುತ್ವ ವ್ಯವಸ್ಥೆಯಾಯಿತು.

ಸ್ವಾತಂತ್ರ್ಯದ ಏಳು ದಶಕಗಳ ನಂತರ ಪ್ರಜಾಪ್ರಭುತ್ವ ವ್ಯವಸ್ಥೆ ಈಗ ಮನುವಾದಿ ಶಕ್ತಿಗಳಿಂದ ತೀವ್ರ ಸವಾಲು ಎದುರಿಸುತ್ತಿದೆ. ಕಳೆದ ಲೋಕಸಭಾ ಚುನಾವಣೆ ನಂತರ ದಲಿತರು, ಹಿಂದುಳಿದವರು ಮತ್ತು ಮಹಿಳೆಯರಿಗೆ ಇರುವ ಮೀಸಲು ವ್ಯವಸ್ಥೆ ರದ್ದುಗೊಳಿಸಬೇಕೆಂದು ಆರೆಸ್ಸೆಸ್ ಸರಸಂಘ ಚಾಲಕ ಮೋಹನ್ ಭಾಗವತ್ ಒತ್ತಾಯಿಸಿದರು. ಈಗ ಉತ್ತರ ಪ್ರದೇಶ ಚುನಾವಣೆ ಫಲಿತಾಂಶದ ನಂತರ ಅವರ ಧ್ವನಿಗೆ ಇನ್ನಷ್ಟು ಬಲ ಬಂದಂತಾಗಿದೆ. ಬರಲಿರುವ ದಿನಗಳಲ್ಲಿ ಈ ಮೀಸಲಾತಿಗೆ ಗಂಡಾಂತರ ಬರಲಿದೆ.

ಮನುವಾದಿ ಬಂಡವಾಳಶಾಹಿ ಪ್ರಜಾಪ್ರಭುತ್ವದಲ್ಲಿ ಜನರನ್ನು ಮತ ಹಾಕುವ ಯಂತ್ರವನ್ನಾಗಿ ಮಾಡುವ ವ್ಯವಸ್ಥೆ ಅವರಿಂದ ಪಡೆಯುವ ಮತಗಳನ್ನೇ ಅವರ ವಿರುದ್ಧ ಅಸ್ತ್ರವನ್ನಾಗಿ ಬಳಸುತ್ತದೆ. ಹೀಗೆ ಮತದಾನದ ಮೂಲಕ ಜನ ತಾವೇ ಸೋತು ಸುಣ್ಣವಾಗಿ ನಿಲ್ಲುತ್ತಾರೆ. ದೇಶದ ಮುಂದೆ ಈಗ ಫ್ಯಾಶಿಸ್ಟ್ ಅಪಾಯವಿದೆ. ಇದನ್ನು ಎದುರಿಸಲು ಎಲ್ಲಾ ಫ್ಯಾಶಿಸ್ಟ್ ವಿರೋಧಿ ಶಕ್ತಿಗಳು ಒಂದಾಗಿ ನಿಲ್ಲಬೇಕು ಎಂಬುದೇ ಸದ್ಯದ ಸವಾಲು ವಾಸ್ತವ ಪರಿಹಾರ ಅಂದುಕೊಳ್ಳಬಹುದು.

ಈ ದೇಶ ಮುಂದೆ ಯಾವ ದಿಕ್ಕಿನೆಡೆ ಹೋಗಬೇಕು ಎಂಬುದನ್ನು ಜನರೇ ತೀರ್ಮಾನಿಸಬೇಕಿದೆ. ನಮ್ಮ ಮುಂದೆ ಎರಡು ದಾರಿಗಳಿವೆ. ಒಂದು, ಬುದ್ಧ, ಬಸವ, ಅಂಬೇಡ್ಕರ್ ತೋರಿಸಿದ ದಾರಿ. ಇನ್ನೊಂದು, ಮನು, ಸಾವರ್ಕರ್, ಗೋಳ್ವಾಲ್ಕರ್ ಮತ್ತು ಗೋಡ್ಸೆ ದಾರಿ. ಬರಲಿರುವ ದಿನಗಳಲ್ಲಿ ಇವೆರಡರ ನಡುವೆ ಸಂಘರ್ಷ ಇನ್ನಷ್ಟು ತೀವ್ರವಾಗಲಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)