varthabharthi

ಅನುಗಾಲ

ಪಂಚರಾಜ್ಯಗಳ ಚುನಾವಣೆ-ತತ್ವ ಮತ್ತು ಮಹತ್ವ

ವಾರ್ತಾ ಭಾರತಿ : 16 Mar, 2017
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಈಗ ದೇಶದಲ್ಲಿ ಭಯಾನಕ ಪರಿಸ್ಥಿತಿಯಿದೆಯೆಂದು ಒಂದು ವರ್ಗ ಹೇಳುತ್ತಲೇ ಬಂದಿದೆಯಾದರೂ ಈ ಪರಿಸ್ಥಿತಿಯನ್ನು ನಿಭಾಯಿಸುವ ಮಾರ್ಗಸೂಚಿ ದಕ್ಕಿಲ್ಲವೆನ್ನುವುದನ್ನಷ್ಟೇ ಈ ಐದು ರಾಜ್ಯಗಳ ಚುನಾವಣೆ ಸಾಬೀತು ಮಾಡಿದೆ.


ಈಚೆಗೆ ನಡೆದ ಐದು ರಾಜ್ಯಗಳ ಚುನಾವಣೆಯ ಹಿಂದೆ ಮುಂದೆ ನಡೆದ ಕೆಲವು ಸಂಗತಿಗಳು ಪ್ರಸ್ತುತಃಹೊಣೆಯರಿತ ಪತ್ರಕರ್ತರೊಬ್ಬರು ಈ ದೇಶದಲ್ಲಿ ಬದುಕಲು ಭಯವಾಗುತ್ತಿದೆಯೆಂದು ಹೇಳಿದರು. ಇನ್ನೊಬ್ಬ ಲೇಖಕರಿಗೆ ಮಸಿ ಬಳಿಯಲಾಯಿತು.

ಮೊದಲಿಗೆ ಈ ಐದು ರಾಜ್ಯಗಳ ಚುನಾವಣೆಯ ಕುರಿತು. ದೇಶದ ಪ್ರಧಾನಿಯೊಬ್ಬರು ರಾಜ್ಯಗಳ ಚುನಾವಣೆಯಲ್ಲಿ ಏಕಾಂಗಿಯಾಗಿ ಹೋರಾಡಿದ್ದು ಭಾರತದ ಇತಿಹಾಸದಲ್ಲೇ ಮೊದಲಿರಬಹುದು. ಪ್ರಧಾನಿ ತನ್ನ ಜನಪ್ರಿಯತೆಯನ್ನು ಈ ಚುನಾವಣೆಗಳಲ್ಲಿ ಪಣಕ್ಕಿಟ್ಟರು. ಇದೊಂದು ರೀತಿಯಲ್ಲಿ ಮಾಡು ಇಲ್ಲವೇ ಮಡಿ ಎಂಬ ಪರಿಸ್ಥಿತಿ. ಪ್ರಾಯಃ ಅವರ ಹೊರತಾಗಿ ಇನ್ಯಾವ ರಾಷ್ಟ್ರೀಯ ನಾಯಕರೂ ಈ ಚುನಾವಣೆಗಳನ್ನು ಇಷ್ಟೊಂದು ಗಂಭೀರವಾಗಿ ಸ್ವೀಕರಿಸಿರಲಿಲ್ಲ. ಅವರಿಗೆ ಸಾಥ್ ಕೊಟ್ಟವರು ಭಾಜಪದ ರಾಷ್ಟ್ರೀಯ ಅಧ್ಯಕ್ಷರು. ಅಮಿತ್ ಶಾ ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾಗಿದ್ದಾರಾದರೂ ಬಹಿರಂಗವಾಗಿ ರಾಷ್ಟ್ರೀಯ ನಾಯಕತ್ವದ ವ್ಯಕ್ತಿತ್ವವನ್ನು ಹೊಂದಿಲ್ಲವೆಂಬುದು ಭಾಜಪಕ್ಕೂ ಗೊತ್ತಿದೆ. ಎಲ್ಲಿ ಮೋದಿ ಇರುತ್ತಾರೋ ಅಲ್ಲಿ ಶಾ. (ಎಲ್ಲಿ ನಿನ್ನ ಭಕ್ತರೋ ಅಲ್ಲೇ ವೃಂದಾವನ!) ಇದೊಂದು ಅಂತರಂಗ-ಬಹಿರಂಗಗಳ ಜುಗಲ್ಬಂದಿ. ಇನ್ನುಳಿದ ಅರುಣ್ ಜೇಟ್ಲಿ, ಸುಶ್ಮಾ ಸ್ವರಾಜ್, ರಾಜನಾಥ್ ಸಿಂಗ್ ಮತ್ತು ಇತರ ಅಸಂಖ್ಯ ಭಾಜಪ ನಾಯಕರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಜೊತೆಯಲ್ಲಿ ಓಡಾಡಿದವರು, ಅಷ್ಟೆ.
 
ಇತರ ಪಕ್ಷಗಳಲ್ಲಿ ಪ್ರಧಾನಿಯ ವ್ಯಕ್ತಿತ್ವದೊಂದಿಗೆ ಹೋಲುವ, ಸ್ಪರ್ಧಿಸುವ ನಾಯಕರೇ ಇಲ್ಲವೆನ್ನುವಂತಿದೆ. ಈ ರೀತಿಯ ಪರಿಸ್ಥಿತಿ ಇದೇ ಮೊದಲ ಬಾರಿ ಸೃಷ್ಟಿಯಾಗುತ್ತಿದೆ. 1970ರ ದಶಕದಲ್ಲಿ ಇಂದಿರಾ ಗಾಂಧಿ ಇದೇ ಮಾದರಿಯ ಅಥವಾ ಇದನ್ನೂ ಮೀರಿಸಿದ ನಾಯಕತ್ವವನ್ನು ಹೊಂದಿದ್ದರು. ಅವರದೇ ಪಕ್ಷದಲ್ಲಿ ಅವರೊಂದಿಗೆ ಸ್ಪರ್ಧಿಸಬಲ್ಲ ನಾಯಕರಿರಲಿಲ್ಲ. ಉಳಿದವರೆಲ್ಲರೂ ಅವರ ಸೆರಗಿನಡಿ ದೇಶಚಿಂತನೆಯನ್ನು ಮಾಡುತ್ತಿದ್ದರು ಇಲ್ಲವೇ ಮಾಡಬೇಕಾಗಿತ್ತು. ಆದರೆ ಅವರನ್ನು ಪ್ರಶ್ನಿಸುವ ಇಲ್ಲವೆ ಪ್ರಶ್ನಿಸಬಲ್ಲ ವಾಜಪೇಯಿ, ಜಾರ್ಜ್ ಫೆರ್ನಾಂಡಿಸ್, ಮೊರಾರ್ಜಿ ದೇಸಾಯಿ, ಹೀಗೆ ಅನೇಕ ನಾಯಕರು ಪ್ರತಿಪಕ್ಷಗಳಲ್ಲಿ ಇದ್ದರು. ಅವರೆಲ್ಲರಿಗೆ ಸಾಕಷ್ಟು ಜನಬೆಂಬಲವಿತ್ತು. ಇವರಲ್ಲದೆ ಜಯಪ್ರಕಾಶ ನಾರಾಯಣರಂತಹ ಜನಪರ ನಾಯಕರು ಹೋರಾಟದ ಮುಂಚೂಣಿಯಲ್ಲಿದ್ದು ಪ್ರತಿಪಕ್ಷಗಳ ಹೋರಾಟಕ್ಕೆ ಉತ್ತಮ ನಾಯಕತ್ವವನ್ನು ನೀಡಿದ್ದರು. ಇದರಿಂದಾಗಿ ಇಂದಿರಾ ಗಾಂಧಿ ತನ್ನ ಪದವಿಯನ್ನು ಉಳಿಸಿಕೊಳ್ಳಬೇಕಾದರೆ ಇವರೆಲ್ಲರನ್ನು ಬಂಧಿಸಿ ತುರ್ತುಸ್ಥಿತಿ ಹೊರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ಪರಿಣಾಮ-ಫಲಿತಾಂಶ ಈಗ ಈ ದೇಶದ ರಾಜಕೀಯ ಇತಿಹಾಸ.

ಭಾರತದ ಶ್ರೇಷ್ಠತೆಯಿರುವುದೇ ಅದು ಎಂತಹ ಪರಿಸ್ಥಿತಿಯನ್ನೂ ನಿಭಾಯಿಸಿಕೊಂಡು ಬರುವ ಶಕ್ತಿಯನ್ನು ಹೊಂದಿದೆಯೆಂಬುದೇ ಆಗಿದೆಯೆಂದು ಪಾಶ್ಚಾತ್ಯ ಚಿಂತಕ ರಾಬರ್ಟ್ ಡಿ. ಕಿಂಗ್ ಹೇಳುತ್ತಾರೆ. ಸರ್ವಾಧಿಕಾರಕ್ಕೆ ಒಮ್ಮೆ ಒಳಗಾದ ದೇಶಗಳು ಮತ್ತೆ ಪ್ರಜಾತಂತ್ರಕ್ಕೆ ಮರಳಿದ ಉದಾಹರಣೆಗಳೇ ಇಲ್ಲ. ಮರಳಿದಂತೆ ಕಂಡಾಗಲೂ ಅದೊಂದು ಕಣ್ಣೊರೆಸುವ (ಪ್ರಜಾ) ತಂತ್ರವೆಂಬುದು ನಿಚ್ಚಳವಾಗುತ್ತದೆ. ಆಫ್ರಿಕಾದ ದೇಶಗಳು, ಮಧ್ಯಪೂರ್ವ ದೇಶಗಳು, ಇಲ್ಲವೇ ಇರಾನ್‌ನಿಂದ ಇಂಡೋನೇಶ್ಯಾದವರೆಗಿನ ಬಿದಿಗೆ ಚಂದ್ರಾಕೃತಿಯುದ್ದಕ್ಕೂ ಇರುವ ದೇಶಗಳಲ್ಲಿ ಪ್ರಜಾತಂತ್ರದ ಅಣಕವಿದೆಯೇ ಹೊರತು ನೈಜ ಜನಾಭಿವ್ಯಕ್ತಿಯ ಸಮಾಜವಿಲ್ಲ. ಈ ಪೈಕಿ ಭಾರತವೊಂದೇ ತನ್ನ ಸರ್ವಧರ್ಮಸಮಭಾವದ ಪ್ರಜಾತಂತ್ರಕ್ಕೆ ಮರಳಿದ್ದು. ಈಗ ದೇಶದಲ್ಲಿ ಭಯಾನಕ ಪರಿಸ್ಥಿತಿಯಿದೆಯೆಂದು ಒಂದು ವರ್ಗ ಹೇಳುತ್ತಲೇ ಬಂದಿದೆಯಾದರೂ ಈ ಪರಿಸ್ಥಿತಿಯನ್ನು ನಿಭಾಯಿಸುವ ಮಾರ್ಗಸೂಚಿ ದಕ್ಕಿಲ್ಲವೆನ್ನುವುದನ್ನಷ್ಟೇ ಈ ಐದು ರಾಜ್ಯಗಳ ಚುನಾವಣೆ ಸಾಬೀತು ಮಾಡಿದೆ.

ಉತ್ತರ ಪ್ರದೇಶದಲ್ಲಿ ಭಾಜಪ, ಕಾಂಗ್ರೆಸ್ ಎಂಬ ಎರಡು ರಾಷ್ಟ್ರೀಯ ಪಕ್ಷಗಳು ಎಸ್ಪಿ, ಬಿಎಸ್ಪಿ ಮುಂತಾದ ಪ್ರಾದೇಶಿಕ ಪಕ್ಷಗಳೊಂದಿಗೆ ಸ್ಪರ್ಧಿಸಬೇಕಾಗಿತ್ತು. ಆದರೆ ಕಾಂಗ್ರೆಸ್ ಸ್ವತಂತ್ರವಾಗಿ ಸ್ಪರ್ಧಿಸುವ ಸಾಹಸವನ್ನೇ ಮಾಡಲಿಲ್ಲ. ಬದಲಾಗಿ ಪ್ರಾದೇಶಿಕವಾದ ಸಮಾಜವಾದಿ ಪಕ್ಷದೊಂದಿಗೆ ಕಿರಿಯ ಪಾಲುದಾರನಾಗಿ ಸ್ಪರ್ಧಿಸಿ ತನ್ನ ಕೀಳರಿಮೆಯನ್ನು ಬಹಿರಂಗವಾಗಿ ಪ್ರದರ್ಶಿಸಿತು. ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಯಾವ ಪ್ರಾದೇಶಿಕ/ರಾಷ್ಟ್ರೀಯ ವಿಚಾರಗಳನ್ನೂ ಜನರ ಮುಂದಿಡಲು ಸಾಧ್ಯವಾಗದ ಇಬ್ಬಂದಿತನವನ್ನು ಬಿಂಬಿಸಿತು. ಅಲ್ಲದೆ ಅದರ ಅನೇಕ ಸಣ್ಣ-ದೊಡ್ಡ ನಾಯಕರು ಪಕ್ಷವನ್ನು ತೊರೆದದ್ದು ಮಾತ್ರವಲ್ಲ ಎದುರಾಳಿ ಭಾಜಪಕ್ಕೆ ಪಕ್ಷಾಂತರಿಸಿ ಸ್ಪರ್ಧಿಸಿ ಗೆದ್ದರು.

ಅಖಿಲೇಶರ ಸೈಕಲಿನ ಹಿಂಬದಿ ಸವಾರನಾಗಿದ್ದ ಕಾಂಗ್ರೆಸ್ ಸ್ಪರ್ಧಿಸುವ ಮೊದಲೇ ಸೋತು ಹೋಗಿತ್ತು. ಇದು ಇನ್ನೂ ಸ್ಪಷ್ಟವಾಗಬೇಕಾದರೆ ಪಂಜಾಬ್‌ನ ಚುನಾವಣೆಯನ್ನು ಗಮನಿಸಬೇಕು. ಅಲ್ಲಿ ಕಾಂಗ್ರೆಸ್ ಸ್ವತಂತ್ರವಾಗಿ ಸ್ಪರ್ಧಿಸಿತು. ಪ್ರಾದೇಶಿಕವಾದ ಒಂದು ಅಬಾಧಿತ ನಾಯಕತ್ವನ್ನೂ ಒಪ್ಪಿಕೊಂಡಿತು. ಇದರ ಪರಿಣಾಮವಾಗಿ ಬಹುಮತ ಪಡೆಯಿತು. ಪಂಜಾಬ್‌ನ ನಾಯಕ ಕ್ಯಾಪ್ಟನ್ ಅಮರೀಂದರ್ ಸಿಂಗ್ ನಿಜಕ್ಕೂ ಪ್ರಾದೇಶಿಕ ಕ್ಯಾಪ್ಟನ್ ಆದರು. ಅವರು ತಮ್ಮ ಪಕ್ಷದ ವಿಜಯವನ್ನು ರಾಹುಲ್ ಮತ್ತು ಸೋನಿಯಾಗೆ ಅರ್ಪಿಸಿದರೂ ಅದೊಂದು ಔಪಚಾರಿಕತೆಯೆಂದು ಸ್ಪಷ್ಟವಾಗಿದೆ. ಕಾಂಗ್ರೆಸ್‌ನ ಯಾವ ಗೆಲುವಿನಲ್ಲೂ ಈ ಇಬ್ಬರ ಪಾತ್ರವಿಲ್ಲ; ಆದರೆ ಸೋಲಿನಲ್ಲಿ ಮಹತ್ತರ ಪಾತ್ರವಿದೆ.

ಪಂಜಾಬ್‌ನ ಈ ಸ್ಥಿತಿ ನೆಹರೂ ಯುಗದ ಕಾಂಗ್ರೆಸ್‌ನಲ್ಲಿತ್ತು. ಆಗ ಪ್ರಧಾನಿಯಾಗಿದ್ದ ನೆಹರೂ ಅನಿವಾರ್ಯ ಸಂದರ್ಭಗಳನ್ನು ಹೊರತು ಪಡಿಸಿದರೆ ರಾಜ್ಯಗಳ ರಾಜಕೀಯದಲ್ಲಿ ತಲೆಹಾಕುತ್ತಿರಲಿಲ್ಲ. ಮಾತ್ರವಲ್ಲ ರಾಜ್ಯ ಚುನಾವಣೆಗಳಲ್ಲಿ ಒಂದೋ ಎರಡೋ ಮುಖ್ಯ ಕೇಂದ್ರಗಳ ಹೊರತಾಗಿ ಇನ್ನೆಲ್ಲೂ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುತ್ತಿರಲಿಲ್ಲ. ಇದೊಂದು ರೀತಿಯ ಗಾಂಭೀರ್ಯವನ್ನು ಮತ್ತು ಜನರ ಕಲ್ಪನೆಯ ನಿಗೂಢತೆಯನ್ನು ಪ್ರಧಾನಿ ಪಟ್ಟಕ್ಕೆ ಒದಗಿಸಿತ್ತು. ಮೊನ್ನೆ ಈ ದೇಶದ ಪ್ರಧಾನಿ ಚುನಾವಣಾ ಪ್ರಚಾರ ನಿಮಿತ್ತ ವಾರಣಾಸಿಯಲ್ಲಿ ಮತ್ತು ಗೆದ್ದ ನಂತರ ದಿಲ್ಲಿಯಲ್ಲಿ ರೋಡ್ ಶೋ ಮಾಡಿದಾಗ ಈ ಗತಕಾಲದ ಘನತೆ-ಗೌರವ ಬೇಡವೆಂದರೂ ನೆನಪಾಗುತ್ತಿದೆ. ತನ್ನ ಘನತೆಯು ಬೇರೆ; ದೇಶದ ಘನತೆಯು ಬೇರೆ ಎಂದು ಯೋಚಿಸಿದಾಗಷ್ಟೇ ಈ ರೋಡ್ ಶೋಗಳು ನಡೆಯಲು ಸಾಧ್ಯ!

ಉತ್ತರಾಖಂಡದಲ್ಲಿ ಕಾಂಗ್ರೆಸ್ ತನ್ನ ಸೋಲನ್ನು ತಾನೇ ಬರಮಾಡಿಕೊಂಡಿತು. ಪಕ್ಷದ ಒಳಹರಿವನ್ನು ಗಮನಿಸದೆ ರಾಜ್ಯದ ನಾಯಕತ್ವವನ್ನು ಹರೀಶ್ ರಾವತ್ ಅವರಿಗೆ ವಹಿಸಿದ್ದು ಮೊದಲ ತಪ್ಪಾದರೆ ಅಲ್ಲಿ ಮೋದಿಯ ನಾಯಕತ್ವವನ್ನು ಸವಾಲಾಗಿ ಸ್ವೀಕರಿಸಿ ಚುನಾವಣಾ ಪ್ರಚಾರ ಮಾಡಬಲ್ಲ ಯಾವೊಬ್ಬ ಪ್ರತಿ-ನಾಯಕನೂ ಇರಲಿಲ್ಲ.

ಗೋವಾದಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಿತು. ಇತರ ಎಲ್ಲಾ ಪಕ್ಷಗಳಿಗಿಂತ ಹೆಚ್ಚಿನ ಸ್ಥಾನ (17) ಪಡೆಯಿತು. ಪ್ರಾಯಃ ಇತರ ಕೆಲವು ಪ್ರಾದೇಶಿಕ ಪಕ್ಷಗಳೊಂದಿಗೆ ಸವಾರನ ರೀತಿಯಲ್ಲಿ ತೊಡಗಿಸಿಕೊಂಡಿದ್ದರೆ ಸ್ಪಷ್ಟ ಬಹುಮತ ಪಡೆಯುತ್ತಿತ್ತು. ಚುನಾವಣಾ ಪೂರ್ವದಲ್ಲಿ ಮತ್ತು ಚುನಾವಣೆಯಲ್ಲಿ ಆಡಳಿತ ವಿರೋಧಿಯಾಗಿದ್ದ ಬಣಗಳು ಚುನಾವಣೆಯ ಆನಂತರ ಕೇವಲ 13 ಸ್ಥಾನಗಳನ್ನು ಗಳಿಸಿದ ಭಾಜಪಕ್ಕೆ ಬೆಂಬಲ ಸೂಚಿಸಿವೆ. ದೇಶದ ರಕ್ಷಣೆಯ ಭಾರ ಹೊತ್ತ ಮಹಾನ್ ದೇಶಭಕ್ತ ರಾಜಕಾರಣಿಯೊಬ್ಬರು ಚುನಾವಣೆಯಾದ ತಕ್ಷಣ ತನ್ನ ದೇಶರಕ್ಷಣೆಯ ಹೊರೆಯನ್ನು ಕಳಚಿ ಮುಖ್ಯಮಂತ್ರಿಯಾಗಲು ಓಡೋಡಿ ಬಂದರು. ನಮ್ಮ ಸೇನೆಯಲ್ಲಿರುವವರೆಲ್ಲ ಹೀಗೆ ಮಾಡಿದರೆ ದೇಶದ ಗತಿಯೇನಾದೀತು?

ಮಣಿಪುರದಲ್ಲೂ ಇದೇ ಸ್ಥಿತಿ. 60 ಸ್ಥಾನಗಳಲ್ಲಿ ಕಾಂಗ್ರೆಸಿಗೆ 28 ಸ್ಥಾನ. ಈ ಪೈಕಿ ಒಬ್ಬರು ಈಗಾಗಲೇ ಪಕ್ಷ ಮತ್ತು ತನ್ನ ಸ್ಥಾನವನ್ನು ತೊರೆದು, 21 ಸ್ಥಾನದ ಭಾಜಪಕ್ಕೆ ಬೆಂಬಲ ಸಾರಿದ್ದಾರೆ. (ಹೀಗಾಗಿ ನಮ್ಮ ಪ್ರಜಾತಂತ್ರ ದಲ್ಲಿ ಅಲ್ಪಸಂಖ್ಯಾತರಿಗೆ ಸ್ಥಾನ-ಮಾನ ಕಡಿಮೆಯಾಗುತ್ತಿದ್ದರೂ ಅಲ್ಪಸಂಖ್ಯಾತ ಸದಸ್ಯರನ್ನು ಹೊಂದಿದ ರಾಜಕೀಯ ಪಕ್ಷಗಳಿಗೆ ಹೆಚ್ಚು ಅವಕಾಶವಿದೆಯೆನ್ನಬಹುದೇ?) ಪಕ್ಷಾಂತರ ಕಾಯ್ದೆ ತನ್ನ ಗೋರಿಯಲ್ಲೇ ನರಳುತ್ತಿದೆ. ಸ್ಪರ್ಧಿಸಿ ಗೆದ್ದ ಮರುದಿನವೇ ಒಬ್ಬ ಶಾಸಕ ತನ್ನ ಸ್ಥಾನವನ್ನು ತ್ಯಾಗ ಮಾಡುತ್ತಾನೆಂದರೆ ಆತ ಬಾಹುಬಲಿಗಿಂತಲೂ ದೊಡ್ಡವನೆನ್ನಬೇಕೇ? ಈ ಚುನಾವಣೆಯ ವೆಚ್ಚ ಯಾರ ತಲೆಗಿಡಬೇಕು? ಇದು ನಮ್ಮ ರೋಗಪೀಡಿತ ದುರ್ಭಾವನಾ ಚುನಾವಣಾ ಕಾಯ್ದೆ ಮತ್ತು ನೀತಿ ಸಂಹಿತೆಗೆ ಹಿಡಿದ ಕೈಗನ್ನಡಿ. ಇತರ ಪಕ್ಷಗಳ, ಸದಸ್ಯರ ಲಾಲಸೆಯನ್ನು ದುರುಪಯೋಗಪಡಿಸಿಕೊಂಡ ಭಾಜಪವು ಕಡಿಮೆ ಸ್ಥಾನ ಗಳಿಸಿದರೂ ಸರಕಾರ ರಚಿಸುತ್ತಿದೆ. ಸಿಗರೇಟು-ಬೀಡಿ ಹಿಡಿದುಕೊಂಡು ಬೆಂಕಿಪೊಟ್ಟಣ ಕೇಳುವವರಿದ್ದಾರೆ. ಆದರೆ ಈಗ ಹೊಸ ನೀತಿ: ಬೆಂಕಿಪೊಟ್ಟಣ ಹಿಡಿದುಕೊಂಡು ಉಚಿತ ಬೀಡಿ-ಸಿಗರೇಟಿಗೆ ಯಾಚನೆ!

ಇನ್ನಾದರೂ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಯು ಹುಚ್ಚು, ಸಾವು, ದಿವಾಳಿತನ ಮತ್ತು ಕ್ರಿಮಿನಲ್ ನ್ಯಾಯಾಲಯದ ಶಿಕ್ಷೆ ಇವನ್ನು ಹೊರತುಪಡಿಸಿ ಇನ್ಯಾವುದೇ ಕಾರಣಕ್ಕೆ ತನ್ನ ಸ್ಥಾನವನ್ನು ಬಿಡದಿರುವಂತೆ ಕಾನೂನು ಬರಬೇಕು. ಆದರೆ ನಮ್ಮ ದೇಶಭಕ್ತ ರಾಜಕೀಯದಲ್ಲಿ ಇವಕ್ಕೆಲ್ಲ ನೆಲೆಯಿಲ್ಲ. ಏಕೆಂದರೆ ಇವರೆಲ್ಲ ದೇಶಭಕ್ತರು. ಈ ದೇಶದಲ್ಲಿ ದೇಶದ್ರೋಹಿಯೂ ದೇಶಭಕ್ತನಾಗುವುದಕ್ಕೆ ಕಷ್ಟವಿಲ್ಲ. ಪಕ್ಷಾಂತರ ಮಾಡಿದರಾಯಿತು. ‘‘ಭಾರತ ಮಾತಾಕಿ ಜೈ’’ ಎಂದು ಘೋಷಣೆ ಹಾಕಿದ ರಾಯಿತು. ಕಿವಿ ಕೇಳದ ಅಥವಾ ಮಾತು ಬಾರದ ಕಾರಣಕ್ಕೆ ಘೋಷಣೆ ಹಾಕದವನ ಮೇಲೆ ಹಲ್ಲೆ ಮಾಡಿದರಾಯಿತು. ತಾಮ್ರಪತ್ರ ಖಂಡಿತ.

ಕಾಂಗ್ರೆಸ್ ಪಕ್ಷ ತನ್ನ ದಯನೀಯ ಸ್ಥಿತಿಗೆ ತಾನೇ ಕಾರಣ. ಅರ್ಹತೆಯು ಒಂದು ಶಾಪವೆಂದು ಕಾಣುವ ವಂಶ ಪಾರಂಪರ್ಯದಿಂದಲೇ ಅರ್ಹತೆ ಲಭಿಸುತ್ತದೆಂದು ತಿಳಿಯುವವರಡಿಯ ನರಳಾಟವೇ ಸ್ವರ್ಗವೆಂದು ತಿಳಿಯುವಲ್ಲಿ ಪಕ್ಷ ಜನಮನ್ನಣೆ ಗಳಿಸಲು ಹೇಗೆ ಸಾಧ್ಯ? ಸಾಕಷ್ಟು ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದರೆ ಅದೊಂದು ಅರ್ಹತೆಯೆಂಬುದು ಕಳೆದ ಒಂದೆರಡು ದಶಕಗಳ ಕಾಂಗ್ರೆಸ್ ಆಡಳಿತ ಮತ್ತು ಸಂಘಟನೆ ಸಾಬೀತು ಮಾಡಿದೆ. ಆದರೂ ಕಾಂಗ್ರೆಸ್‌ನ ಎಲ್ಲ ಹುಳುಕು, ಲೋಪ-ದೋಷಗಳ ನಡುವೆಯೂ ಅದನ್ನು ಭಾಜಪಕ್ಕೆ ಪರ್ಯಾಯವಾಗಿರುವ ಹಾಗೂ ಅನಿವಾರ್ಯವಾಗಿರುವ ಏಕೈಕ ರಾಷ್ಟ್ರೀಯ ಪಕ್ಷವೆಂದು ತಿಳಿಯುವ ಸಾಕಷ್ಟು ಮಂದಿ ಈ ದೇಶದಲ್ಲಿದ್ದಾರೆ. ಆದ್ದರಿಂದಲೇ ಅದರ ಎಲ್ಲ ಪ್ರಯತ್ನಗಳ ಹೊರತಾಗಿಯೂ ಅದು ಇನ್ನೂ ಅಲ್ಲಲ್ಲಿ ಗೆಲ್ಲುತ್ತಿದೆ ಮತ್ತು ಆತ್ಮಹತ್ಯೆಯ ಎಲ್ಲ ಪ್ರಯತ್ನಗಳೂ ವಿಫಲವಾಗುತ್ತಿವೆ.

ಕಾಂಗ್ರೆಸ್‌ನ ಎಲ್ಲ ಗುಣಗಳ ಏಕೈಕ ವಾರಸುದಾರನೆಂದರೆ ಭಾಜಪ. ಪಕ್ಷಾಂತರದಲ್ಲಿ ಮತ್ತು ಅಕ್ರಮಗಳಲ್ಲಿ ಭಾಜಪವು ಕಾಂಗ್ರೆಸ್‌ಗಿಂತಲೂ ಒಂದು ಹೆಜ್ಜೆ ಮುಂದಿದೆ. ಈ ಬಾರಿ ಎಷ್ಟು ಮಂದಿ ಪಕ್ಷಾಂತರಿಗಳು ಮತ್ತು ಎಷ್ಟು ಮಂದಿ ಕ್ರಿಮಿನಲ್‌ಗಳು ಭಾಜಪದಿಂದ ಸ್ಪರ್ಧಿಸಿದ್ದಾರೆಂಬ ಅಂಕಿ-ಸಂಖ್ಯೆ ಗಮನಿಸಿದರೆ ಈ ವಿಷಯ ಸ್ಪಷ್ಟವಾದೀತು.
ಇವೆಲ್ಲದರ ನಡುವೆ ಇರುವ ಒಂದೇ ಭರವಸೆಯೆಂದರೆ ಈ ದೇಶದ ಆತ್ಮಗತ ಶಕ್ತಿ. ಅದು ತನ್ನೆಲ್ಲ ಕೆಸರುಗಳನ್ನು ಕಳೆದುಕೊಂಡು ಮೇಲೆದ್ದು ಬರುವ ಶಕ್ತಿಯನ್ನು ಹೊಂದಿದೆ. ಮನುಷ್ಯರ ಆಯುಷ್ಯ ದಶಕಗಳಲ್ಲಿ ಹೆಚ್ಚೆಂದರೆ ಶತಕದ ಆಸುಪಾಸಿನಲ್ಲಿ ನಿಗದಿಯಾದರೆ ದೇಶದ ಆಯುಷ್ಯವು ಶತಶತಮಾನಗಳ ಕಾಲದಲ್ಲಿದೆ. ಆದ್ದರಿಂದ ಈ ದೇಶದಲ್ಲಿ ಬದುಕುವುದಕ್ಕೆ ಭಯಪಡುವ ಅಗತ್ಯವಿಲ್ಲ.

ಒಳ್ಳೆಯ ದಿನಗಳನ್ನೇ ನಂಬಿ ಬದುಕಿದವರಿಲ್ಲ. ಹಾಗೆಯೇ ಮಸಿಬಳಿದರೆ ಆತಂಕಿತರಾಗುವ ಅಗತ್ಯವೂ ಇಲ್ಲ. ದೇಶದ ಬಣ್ಣ ಯಾವುದೋ ಅದನ್ನೇ ಜನ ಇತರರಿಗೆ ಬಳಿಯುತ್ತಾರೆ. ಕಣ್ಣು ಕಾಣದವನಿಗೆ ಹೋಳಿಯೂ, ಕಾಮನಬಿಲ್ಲೂ, ಮಸಿಯೂ ಒಂದೇ. ಹಾಗೆಯೇ ಒಳಗಣ್ಣು ತೆರೆದವನಿಗೆ ಇವೆಲ್ಲ ಕಾಲನಿಷ್ಠ ಕೆಡುಕುಗಳು; ಇವೇ ಬದುಕಲ್ಲ. ಅಂತಹ ಭರವಸೆಯನ್ನು ಕಾಣುವವನಿಗೆ ಇವೆಲ್ಲ ಒಂದು ಪ್ರಹಸನಗಳೇ ಹೊರತು ಶಾಶ್ವತದ ಸುಖವಲ್ಲ. ಈ ದೇಶದ ರಾಜಕೀಯವನ್ನು ಹೀಗೆ ತಾತ್ವಿಕವಾಗಿ ನೋಡಿದರಷ್ಟೇ ಬುದ್ಧಿ ಸ್ಥಿಮಿತದಲ್ಲಿದ್ದೀತು. ದೇಶದ ಆರೋಗ್ಯಕ್ಕೆ ಪ್ರಜೆಗಳ ಆರೋಗ್ಯವೇ ಆಧಾರ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)