varthabharthi

ನಿಮ್ಮ ಅಂಕಣ

ದೊಂಬರಾಟ-ಇರಿಯುವ ವ್ಯಂಗ್ಯ

ವಾರ್ತಾ ಭಾರತಿ : 20 Mar, 2017
ಪ್ರೊ. ತುಮಕೂರು ಚಂದ್ರಕಾಂತ, ಬೆಂಗಳೂರು

ಮಾನ್ಯರೆ,

ನಾನೊಬ್ಬ ಭೌತಶಾಸ್ತ್ರದ ನಿವೃತ್ತ ಪ್ರೊಫೆಸರ್ ಮತ್ತು ದೊಂಬರ ಸಮಾಜಕ್ಕೆ ಸೇರಿದವ. ಇತ್ತೀಚಿನ ದಿನಗಳಲ್ಲಿ ವಿಶೇಷವಾಗಿ ರಾಜಕೀಯದ ಟೀಕೆ ಟಿಪ್ಪಣಿ ಮತ್ತು ಕೆಸೆರೆರೆಚಾಟದಲ್ಲಿ ಹಾಗೂ ಟಿವಿ ಮಾಧ್ಯಮಗಳ ರೋಚಕ ಶೀರ್ಷಿಕೆಗಳಲ್ಲಿ ದೊಂಬರಾಟ ಎನ್ನುವ ಪದ ಎಗ್ಗಿಲ್ಲದೆ ಅತ್ಯಂತ ಕೀಳು ಅಭಿರುಚಿಯ ವ್ಯಂಗ್ಯದಲ್ಲಿ ಬಳಸುತ್ತಿದ್ದು ನನ್ನ ಜನಾಂಗದ ಬಂಧುಗಳಿಗೆ ತೀವ್ರ ನೋವನ್ನು ಉಂಟುಮಾಡುತ್ತಿದೆ. ಪತ್ರಿಕೆಗಳನ್ನು ಓದುವಾಗ ಮತ್ತು ವಿಶೇಷವಾಗಿ ಟಿವಿಯನ್ನು ನೋಡುತ್ತಿರುವಾಗ ಈ ಪದ ಪ್ರಯೋಗವನ್ನು ಗಮನಿಸಿ ನನ್ನ ಮಕ್ಕಳು ಒಂದು ರೀತಿಯ ಅವಮಾನ ಮತ್ತು ಅಸಹಾಯಕತೆಯಿಂದ ನನ್ನ ಕಡೆ ನೋಡುತ್ತವೆ. ಆಗ ನನಗಾಗುವ ಯಾತನೆಯನ್ನು ಹೇಗೆ ವ್ಯಕ್ತಪಡಿಸಲಿ. ದೊಂಬರು ಎನ್ನುವ ಒಂದು ಜನಾಂಗ ತನ್ನ ಸ್ವಾಭಿಮಾನದ ಬದುಕಿಗಾಗಿ ಬಹಳಷ್ಟು ಕಷ್ಟಕರವೂ ಅಪಾಯಕಾರಿಯೂ ಆದ ಕಲೆಯನ್ನು ಕಠಿಣ ಪರಿಶ್ರಮದಿಂದ ಸಾಧಿಸಿ, ಅದರ ಮುಖಾಂತರ ಮನರಂಜನೆಯನ್ನು ನೀಡಿ ನಾಲ್ಕು ಪುಡಿಗಾಸನ್ನು ಸಂಪಾದಿಸಿ ಕಡು ಕಷ್ಟದ ಜೀವನ ನಡೆಸುವುದು ನಾಗರಿಕ ಸಮಾಜಕ್ಕೆ ತಮಾಷೆಯ, ವ್ಯಂಗ್ಯದ ವಿಚಾರವೇ? ಎಳೆ ಮಕ್ಕಳಿಗೆ ಕುಡಿಸಲು ಹಾಲನ್ನು ಕೊಳ್ಳಲಾಗದೆ ಅನ್ನದ ಗಂಜಿಯನ್ನು ಕುಡಿಸಿ ಸಾಕಿದ ದೊಂಬರ ತಾಯಂದಿರನ್ನು ಕಂಡಿದ್ದೀರಾ? ಇಂತಹ ನಿಸ್ಪೃಹ ಜನಾಂಗದ ಮುಗ್ಧ ವ್ಯಕ್ತಿಯ ಎದೆಗೆ ತತ್ತರಿಸುವ ನೋವು ಕೊಡುವ ಈ ಪದವನ್ನು ಲೀಲಾಜಾಲವಾಗಿ ಉಪಯೋಗಿಸುವ ಬೇಜವಾಬ್ದಾರಿಯ ಅನಾಗರಿಕ ಮಂದಿಗೆ ಧಿಕ್ಕಾರವಿರಲಿ.

ಈಗ ಈ ಜನಾಂಗ ಎಚ್ಚೆತ್ತುಕೊಂಡು ಒಂದು ಪ್ರಭಲ ಸಂಘಟನೆಯನ್ನು ಕಟ್ಟಿಕೊಂಡಿದೆ. ಈ ರೀತಿಯ ಅವಹೇಳನಕಾರಿ ಪದಪ್ರಯೋಗ ಜಾತಿ ನಿಂದನೆಯ ಪ್ರಕರಣದ ಆಗುವುದು ಮತ್ತು ದೊಂಬರ ಜಾತಿ ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಯಾಗಿರುವುದರಿಂದ ಅಂತಹ ಪ್ರಕರಣದಲ್ಲಿ ಭಾಗಿಯಾಗಿರುವವರ ಮೇಲೆ ಕಠಿಣವಾದ ಕಾನೂನಿನ ಕ್ರಮವನ್ನು ಜರುಗಿಸಲು ಅವಕಾಶವಿದೆ. ನಮಗೆ ಯಾರಿಗೂ ಶಿಕ್ಷೆ ಕೊಡಿಸುವ ಹಿಂಸಾನಂದದ ಮನಸ್ಸಿಲ್ಲ. ಆದರೆ ನಿರಂತರ ಹಿಂಸೆಯನ್ನು ಮೂಕವಾಗಿ ಅನುಭವಿಸುವ ಹೇಡಿಗಳೂ ನಾವಲ್ಲ. ನಮ್ಮ ನಿವೇದನೆ ಇಷ್ಟೇ. ಕತ್ತೆ ಎಂದು ಬೈದರೆ ಒಂದು ಅಮಾಯಕ ಪ್ರಾಣಿಗೆ ಮಾಡುವ ಅವಮಾನ ಎಂದು ಪ್ರಾಣಿ ಸ್ವಾಭಿಮಾನವನ್ನು ರಕ್ಷಿಸಲು ಹೋರಾಡುವ ಈ ನಾಗರಿಕ ಸಮಾಜದಲ್ಲಿ ಒಂದು ಜನಾಂಗದ ಹೊಟ್ಟೆಪಾಡಿನ ಬದುಕನ್ನು ಅವಮಾನಿಸುವ ಭಾಷೆಯನ್ನು ಬಳಸುವುದು ಬೇಡ. ತಮ್ಮ ವ್ಯಂಗ್ಯಕ್ಕೆ ಬೇಕಾದ ಪದಪುಂಜಗಳು ಕನ್ನಡದ ನಿಘಂಟಿನಲ್ಲಿ ಸಾಕಷ್ಟಿವೆ. ಅವನ್ನು ಹುಡುಕಿ ತೆಗೆದು ಉಪಯೋಗಿಸಿ. ಜಾತಿ ದೂಷಕ ವ್ಯಂಗ್ಯವನ್ನು ಬಿಟ್ಟು ಬಿಡಿ. ಹಾಗಿಲ್ಲವಾದರೆ ಕಾನೂನು ಕ್ರಮ ಮತ್ತು ಸಂಘಟಿತ ಪ್ರತಿಭಟನೆ ಅನಿವಾರ್ಯ.
 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)