varthabharthiಕಮೆಂಟರಿ

ಕ್ರಿಕೆಟರ್ ಚಾಪಲ್ ಸೋದರರ ಪರಿಸರ ಕಾಳಜಿ

ವಾರ್ತಾ ಭಾರತಿ : 1 Apr, 2017

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್ ಆಟಗಾರರಿಬ್ಬರು ಭಾರತದ ವಿರುದ್ಧ ಒಂದು ಪರಿಸರ ಕಾಳಜಿಯ ಜಗಳವಾಡಲು ಅಖಾಡಕ್ಕಿಳಿದಿದ್ದಾರೆ. ಅವರು ಗ್ರೇಗ್ ಚಾಪಲ್ ಹಾಗೂ ಇಯಾನ್ ಚಾಪಲ್ ಸೋದರರು.

ಇವರು ಈಗ ದನಿ ಎತ್ತಿರುವುದು ಭಾರತ ಮೂಲದ ಅದಾನಿ ಗ್ರೂಪ್‌ನ ಉದ್ದೇಶಿತ ಕಲ್ಲಿದ್ದಲು ಗಣಿಗಾರಿಕೆ ಯೋಜನೆ ಬಗ್ಗೆ.

ಟೀಂ ಇಂಡಿಯಾ ಬಾರ್ಡರ್-ಗವಾಸ್ಕರ್ ಕ್ರಿಕೆಟ್ ಸರಣಿಯಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿ ಸರಣಿ ಗೆದ್ದುಕೊಂಡಿದೆ. ಕ್ರಿಕೆಟ್ ಪ್ರೇಮಿಗಳೆಲ್ಲಾ ನಮ್ಮ ತಂಡದ ಈ ಗೆಲುವನ್ನು ಸಂಭ್ರಮಿಸುತ್ತಿರುವಾಗಲೇ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್ ಆಟಗಾರರಿಬ್ಬರು ಭಾರತದ ವಿರುದ್ಧ ಒಂದು ಪರಿಸರ ಕಾಳಜಿಯ ಜಗಳವಾಡಲು ಅಖಾಡಕ್ಕಿಳಿದಿದ್ದಾರೆ. ಅವರು ಗ್ರೇಗ್ ಚಾಪಲ್ ಹಾಗೂ ಇಯಾನ್ ಚಾಪಲ್ ಸೋದರರು.

ಇವರು ಈಗ ದನಿ ಎತ್ತಿರುವುದು ಭಾರತ ಮೂಲದ ಅದಾನಿ ಗ್ರೂಪ್‌ನ ಉದ್ದೇಶಿತ ಕಲ್ಲಿದ್ದಲು ಗಣಿಗಾರಿಕೆ ಯೋಜನೆ ಬಗ್ಗೆ.

ವಿಶ್ವ ಪಾರಂಪರಿಕ ತಾಣಗಳಲ್ಲಿ ಒಂದಾಗಿರುವ, ಅತೀ ಸೂಕ್ಷ್ಮ ಜೈವಿಕವಲಯ ಎಂದು ಜೀವ ವಿಜ್ಞಾನಿಗಳಿಂದ ಗುರ್ತಿಸಲ್ಪಟ್ಟಿರುವ ‘ಗ್ರೇಟ್ ಬ್ಯಾರಿಯರ್ ರೀಫ್’ ಈಗ ಆಪತ್ತಿಗೆ ಸಿಲುಕಿದೆ.

ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಆಪ್ತಮಿತ್ರನೆಂದು ಹೆಸರಾಗಿರುವ ಗುಜರಾತಿನ ಉದ್ಯಮಿ ಗೌತಮ್ ಅದಾನಿ ಈ ಗ್ರೇಟ್ ಬ್ಯಾರಿಯರ್ ರೀಫ್ ಇರುವ ಸ್ಥಳದಲ್ಲೇ ಬೃಹತ್ ಕಲ್ಲಿದ್ದಲು ಗಣಿಗಾರಿಕೆ ನಡೆಸಲು ಆಸ್ಟ್ರೇಲಿಯಾ ಸರಕಾರದಿಂದ ಈಗ ಅನುಮತಿ ಪಡೆದಿದ್ದಾರೆ. ಅಂದಾಜು ಒಂದು ಲಕ್ಷ ಕೋಟಿ ರೂಪಾಯಿಗಳ ಬಂಡವಾಳದ ಈ ಯೋಜನೆಗೆ ಈಗ ಜಗತ್ತಿನಾದ್ಯಂತ ಪರಿಸರವಾದಿಗಳಿಂದ ವಿರೋಧ ವ್ಯಕ್ತವಾಗುತ್ತಿದೆ. ಆಸ್ಟ್ರೇಲಿಯಾದ ಪರಿಸರವಾದಿ ಗುಂಪುಗಳು, ಜೀವ ವಿಜ್ಞಾನಿಗಳು, ಬುದ್ಧ್ದಿಜೀವಿಗಳು, ಮೂಲನಿವಾಸಿಗಳೆಲ್ಲಾ ಅದಾನಿ ಕಂಪೆನಿಯ ವಿರುದ್ಧ ಸಮರ ಘೋಷಿಸಿದ್ದಾರೆ.

ಭಾರತದ ಕ್ರಿಕೆಟ್ ಪ್ರೇಮಿಗಳಿಗೆಲ್ಲಾ ಚಿರಪರಿಚಿತ ಹೆಸರಾಗಿರುವ ಗ್ರೇಗ್ ಚಾಪಲ್ ಹಾಗೂ ಇಯಾನ್ ಚಾಪಲ್ ಸೋದರರೂ ಸಹ ಈ ಹೋರಾಟದಲ್ಲಿ ಭಾಗಿಯಾಗುತ್ತಿದ್ದಾರೆ.

ಇದು ಕ್ರೀಡಾ ಜಗತ್ತಿನಲ್ಲೂ ದೊಡ್ಡ ಸುದ್ದಿಯಾಗುತ್ತಿದೆ.

ನಮ್ಮಲ್ಲಿನ ಕ್ರಿಕೆಟ್ ಆಟಗಾರರು ಕ್ರಿಕೆಟ್ ಬಿಟ್ಟು ಬೇರೆ ವಿಚಾರಗಳತ್ತ ಆಸಕ್ತಿ ಹೊಂದಿರುವುದು ಕಡಿಮೆ, ಸಚಿನ್ ತೆಂಡೂಲ್ಕರ್ ಒಮ್ಮೆ ಹುಲಿ ಬಗ್ಗೆ ಹಾಗೂ ಇರ್ಫಾನ್ ಪಠಾಣ್ ಕರಡಿಗಳ ಸಂರಕ್ಷಣೆ ಬಗ್ಗೆ ಆಗೀಗ ಮಾತನಾಡಿ ಸಣ್ಣಪುಟ್ಟ ಚಟುವಟಿಕೆ ನಡೆಸಿರುವುದು ಬಿಟ್ಟರೆ ಉಳಿದವರ ವ್ಯಕ್ತಿತ್ವದಲ್ಲಿ ಆಸಕ್ತಿ ಹುಟ್ಟಿಸುವ ಅಂಶಗಳಿಲ್ಲ. ಕನ್ನಡಿಗ ಅನಿಲ್ ಕುಂಬ್ಳೆ ಕೆಲ ವರ್ಷ ಕರ್ನಾಟಕ ಸರಕಾರದ ವೈಲ್ಡ್ ಲೈಫ್ ಬೋರ್ಡ್‌ನ ಚೇರ್‌ಮೆನ್ ಆಗಿದ್ದರಾದರೂ ಗಮನಾರ್ಹ ಕೊಡುಗೆ ಏನು ನೀಡಲಿಲ್ಲ. ಆದರೆ ಉಳಿದ ಕ್ರಿಕೆಟಿಗರು ಅಮೆರಿಕನ್ ಕೋಲಾ ಕುಡಿಯುತ್ತಾ, ಜಪಾನಿ ಮೋಟಾರ್ ಬೈಕ್, ವಿಸಾ ಕಾರ್ಡ್ ಮಾಸ್ಟರ್ ಕಾರ್ಡ್ ಖರೀದಿಸಿ ಎಂದು ಜಾಹೀರಾತು ನೀಡಿ ಈ ವಿದೇಶಿ ಕಂಪೆನಿಗಳಿಂದ ಹಣ ಪಡೆದು ನಂತರ ‘‘ನಾನು ಭಾರತಕ್ಕಾಗಿ ಕ್ರಿಕೆಟ್ ಆಡುತ್ತೇನೆ’’ ಎಂದು ಫೋೀಸು ನೀಡಿ ಮನೆಗೆ ಹೊರಟುಬಿಡುತ್ತಾರೆ.

ಸಾಮಾಜಿಕ ವಿಚಾರಗಳು ಎಂದೂ ಇವರ ಆದ್ಯತೆಯ ವಿಚಾರಗಳಾಗುವುದಿಲ್ಲ. ಆದರೆ ಆಸ್ಟ್ರೇಲಿಯಾದ ಚಾಪಲ್ ಸೋದರರೀಗ ಗ್ರೇಟ್ ಬ್ಯಾರಿಯರ್ ರೀಫ್ ಉಳಿಸಿ ಆಂದೋಲನದ ಭಾಗವಾಗಿ ಎಲ್ಲಾ ಕಡೆ ಸುತ್ತುತ್ತಿದ್ದಾರೆ.

ಈ ಗ್ರೇಟ್ ಬ್ಯಾರಿಯರ್ ರೀಫ್ ಎಂಬುದು ಒಂದು ಹವಳಗಳ ತಾಣ, ಹಲವು ಲಕ್ಷ ವರ್ಷಗಳ ಜೈವಿಕ ಕ್ರಿಯೆಯ ಮೂಲಕ ರಚನೆಯಾಗಿರುವ ಈ ಹವಳ ತಾಣಗಳೇ ಒಂಬೈನೂರು ದ್ವೀಪಗಳಾಗಿ ವಿಕಾಸ ಹೊಂದಿವೆ. ಎರಡು ಸಾವಿರದ ಮುನ್ನೂರು ಕಿಲೋಮೀಟರ್ ಕರಾವಳಿಯುದ್ದಕ್ಕೂ ಸುಮಾರು ಮೂರುವರೆ ಲಕ್ಷ ಚದರ ಕಿಲೋಮೀಟರ್‌ನಷ್ಟು ವಿಸ್ತಾರವಾಗಿ ಈ ಹವಳ ತಾಣ ಹಬ್ಬಿಕೊಂಡಿದೆ. ಒಂದೂವರೆ ಸಾವಿರ ಮೀನಿನ ಪ್ರಭೇದ, ಮುವತ್ತು ವಿವಿಧ ತಿಮಿಂಗಿಲ ಹಾಗೂ ಡಾಲ್ಫಿನ್‌ಗಳು ನೂರಾ ಮೂವತ್ತಮೂರು ಬಗೆಯ ಶಾರ್ಕ್‌ಮೀನುಗಳು ಹಾಗೂ ರೇಸ್ ಎಂದು ಕರೆಯಲಾಗುವ ಜಲಜೀವಿಗಳ ಆಶ್ರಯ ತಾಣ ಇದು. ಇದಲ್ಲದೆ ಯಕ್ಕಾ ಸ್ಕಿಂಕ್ ಹಾಗೂ ಆಲಂಕಾರಿಕ ಹಾವು ಮೀನುಗಳ ನೆಲೆಯು ಇಲ್ಲೇ ಇದೆ. ಇಲ್ಲಿನ ನೀರಿನಾಳದಲ್ಲಿ ಬೆಳೆಯುವ ಸಮುದ್ರ ಹುಲ್ಲು ಕಡಲಾಮೆ ಮತ್ತು ಡಾಲ್ಫಿನ್‌ಗಳಿಗೆ ನಿತ್ಯದ ಆಹಾರವಾಗಿದೆ.

ಹೀಗೆ ನಿಸರ್ಗದ ಅತ್ಯದ್ಭುತಗಳಲ್ಲಿ ಒಂದು ಎನಿಸಿಕೊಂಡಿರುವ ಗ್ರೇಟ್ ಬ್ಯಾರಿಯರ್ ರೀಫ್‌ನ ಇನ್ನೊಂದು ಹೆಗ್ಗಳಿಕೆ ಏನೆಂದರೆ ಆಕಾಶದ ಅತೀ ಎತ್ತರದಿಂದಲೂ ಗೋಚರಿಸುವ ಭೂಮಿಯ ಕೆಲವೇ ಕೆಲವು ನಿಸರ್ಗ ನಿರ್ಮಿತ ಕೌತುಕಗಳಲ್ಲಿ ಈ ಹವಳ ತಾಣವೂ ಒಂದು.

ಇತ್ತೀಚೆಗೆ ಭೂಮಿಯ ತಾಪಮಾನ ಹೆಚ್ಚುತ್ತಾ ಹೋಗಿ, ಹವಾಮಾನ ವೈಪರೀತ್ಯದಿಂದಾಗಿ ಈ ಹವಳಗಳು ಭಾರೀ ಪ್ರಮಾಣದಲ್ಲಿ ಬಣ್ಣ ಕಳೆದುಕೊಂಡು ಪೇಲವವಾಗುತ್ತಿವೆ. ಈ ಪ್ರಕ್ರಿಯೆಯನ್ನು ‘ಬ್ಲೀಚಿಂಗ್’ ಎನ್ನುತ್ತಾರೆ. ಈ ಕೋರಲ್ ಟಿಶ್ಯೂಗಳಲ್ಲಿ ಇರುವ ಸೂಕ್ಷ್ಮ ಪಾಚಿ ಸಸ್ಯವೇ ಕೋರಲ್‌ಗಳಿಗೆ ಆಹಾರ ಮತ್ತು ಬಣ್ಣ ಒದಗಿಸುವ ಕೆಲಸ ಮಾಡುತ್ತದೆ. ಆದರೆ ಹವಾಮಾನ ವೈಪರೀತ್ಯದಿಂದಾಗಿ ಮಾಲಿನ್ಯ ಹೆಚ್ಚಾದಾಗ ಪಾಚಿ ಸೂಕ್ಷ್ಮಜೀವಿಗಳೆಲ್ಲಾ ತಮಗೆ ಆಶ್ರಯ ಕಲ್ಪಿಸಿರುವ ಕೋರಲ್‌ಗಳನ್ನು ಬಿಟ್ಟು ಹೋಗುತ್ತವೆ. ಅದರಿಂದಾಗಿ ಕೋರಲ್‌ಗಳಿಗೆ ಆಹಾರ ಸಿಗದಂತಾಗಿ ಅವು ಬಣ್ಣ ಕಳೆದುಕೊಂಡು ಬಿಳಿಚಿಕೊಳ್ಳುತ್ತವೆ. ಅದನ್ನು ಕೋರಲ್‌ಗಳ ಸಾವು ಎನ್ನಲಾಗುತ್ತದೆ.

ಆದರೆ ಗೌತಮ್ ಅದಾನಿಗೆ ಇದ್ಯಾವುದೂ ಮಹತ್ವದ ವಿಚಾರ ಅನಿಸುತ್ತಿಲ್ಲ. ಈ ಪ್ರದೇಶದಲ್ಲಿರುವ ಮಿಲಿಯಾಂತರ ಟನ್ ಕಲ್ಲಿದ್ದಲನ್ನು ಬಗೆದು ತೆಗೆದು ಮುನ್ನೂರು ಕಿ.ಮೀ. ರೈಲು ಮಾರ್ಗ ನಿರ್ಮಿಸಿ ಬಂದರಿಗೆ, ಅಲ್ಲಿಂದ ಅದಿರನ್ನು ಭಾರತಕ್ಕೆ ಸಾಗಿಸಿ ಉಷ್ಣವಿದ್ಯುತ್ ಸ್ಥಾವರಕ್ಕೆ ರವಾನಿಸಿ, ಅಲ್ಲಿ ವಿದ್ಯುತ್ ಉತ್ಪಾದಿಸಿ ಭಾರತದಲ್ಲಿರುವ ಕೈಗಾರಿಕೆಗಳಿಗೆ ಮಾರಿ ಲಾಭ ಸಂಪಾದಿಸಿ... ಇತ್ಯಾದಿ ಇತ್ಯಾದಿ ಯೋಚನೆಗಳಿವೆ. ಕನಿಷ್ಟ ಪಕ್ಷ ಅರವತ್ತು ವರ್ಷಕಾಲ ಇಲ್ಲಿಂದ ಅದಿರು ತೆಗೆಯುವಷ್ಟು ಸಂಗ್ರಹವಿದೆ ಎನ್ನಲಾಗಿದೆ. ಈ ಗಣಿ ಯೋಜನೆ ಪರಿಸರ ರಕ್ಷಣೆಯ ಕಾರಣಕ್ಕೆ ವಿವಾದಕ್ಕೆ ಸಿಲುಕಿದಾಗ ಭಾರತದ ಪ್ರಧಾನಿ ಮೋದಿಯು ಮಧ್ಯಪ್ರವೇಶಿಸಿ ಆಸ್ಟ್ರೇಲಿಯಾ ರಾಜಕಾರಣಿಗಳ ಮನ ಒಲಿಸಿ ಯೋಜನೆಗೆ ಸಮ್ಮತಿ ಕೊಡಿಸಲು ನೆರವಾಗಿದ್ದಾರೆ.

ಆಸ್ಟ್ರೇಲಿಯಾದ ತಿಳಿವಳಿಕೆ ಇರುವ ಜನ ಅದಾನಿಯ ಗಣಿ ಯೋಜನೆ ವಿರುದ್ಧ ಆಂದೋಲನ ಪ್ರಾರಂಭಿಸಿದ್ದಾರೆ. ಕ್ರಿಕೆಟ್ ಆಟಗಾರರಾಗಿದ್ದ ಚಾಪಲ್ ಸೋದರರು ತಾವು ಆಡುತ್ತಿದ್ದಷ್ಟು ಕಾಲ ರಂಜನೆ, ಜಗಳ ವಿವಾದಗಳ ನಡುವೆ ಸಾಗಿ ಹೋಗಿದ್ದರು. 1981 ರಲ್ಲಿ ನ್ಯೂಝಿಲೆಂಡ್ ವಿರುದ್ಧದ ಮ್ಯಾಚ್ ಒಂದರಲ್ಲಿ ಕ್ಯಾಪ್ಟನ್ ಆಗಿದ್ದ ಗ್ರೇಗ್ ಚಾಪೆಲ್ ಅಂಡರ್ ಆರ್ಮ್ ಬೌಲಿಂಗ್ ಮಾಡಿಸಿ ಮ್ಯಾಚ್ ಗೆದ್ದಿದ್ದರು. ಅದು ಕ್ರೀಡಾ ಸ್ಫೂರ್ತಿ ಅಲ್ಲ ಎಂದು ಆಗ ಟೀಕೆಗೆ ಒಳಗಾಗಿತ್ತು.

ಆದರೆ ಇವತ್ತು ಅದೇ ಚಾಪಲ್ ಸೋದರರು ಜಗತ್ತಿನ ಅತೀ ಮಹೋನ್ನತ ನಿಸರ್ಗ ನಿರ್ಮಿತ ಹವಳ ದ್ವೀಪಗಳನ್ನು ರಕ್ಷಿಸಲು ಭಾರತೀಯ ನಿಸರ್ಗ ಭಯೋತ್ಪಾದಕ ಅದಾನಿ ಕಂಪೆನಿ ವಿರುದ್ಧ ಹೋರಾಟಕ್ಕೆ ದನಿಗೂಡಿಸಿದ್ದಾರೆ.

 ನಮ್ಮ ದೇಶದಲ್ಲೂ ವಿಪತ್ಕಾರಿ ಪರಿಸರ ನಾಶದ ಅನೇಕ ಯೋಜನೆಗಳು ಜಾರಿಯಾಗುತ್ತಲೇ ಇವೆ. ಚಾಪೆಲ್ ಸೋದರರ ಕಾಳಜಿ ನಾವೆಲ್ಲಾ ಮೆಚ್ಚಬೇಕಾದ ವಿಚಾರ.

 ಇದೇ ಗೌತಮ್ ಅದಾನಿ ಅಹಮದಾಬಾದ್‌ಗೆ ಕ್ರಿಕೆಟ್ ಐಪಿಎಲ್ ಟೀಂ ಒಂದನ್ನು ಖರೀದಿಸುವ ಸುದ್ದಿ ಇದ್ದಾಗ ನಮ್ಮ ಹೆಸರಾಂತ ಕ್ರಿಕೆಟ್ ಆಟಗಾರರೆಲ್ಲಾ ಅದಾನಿಯ ಕರೆಗಾಗಿ ಕಾಯುತ್ತಿದ್ದರು ಅನಿಸುತ್ತದೆ. ಈಗ ಅನೇಕರ ಗಮನ ಆಸ್ಟ್ರೇಲಿಯಾದತ್ತ ಇದೆ. ಕ್ರಿಕೆಟರ್‌ಗಳಾದ ಚಾಪೆಲ್ ಸೋದರರೂ ಭಾಗಿಯಾಗಿರುವ ಈ ಯುದ್ಧದಲ್ಲಿ ಗೆಲ್ಲುವುದು ಯಾರು?

‘Coral or Coal?’ ಯಾವುದೆಂದು ಕಾದು ನೋಡೋಣ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)