varthabharthi

ಅನುಗಾಲ

ಕೃಷ್ಣ-ಕಥೆ

ವಾರ್ತಾ ಭಾರತಿ : 6 Apr, 2017
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಸುಮಾರು ಐದು ದಶಕಗಳ ಕಾಲ ಉಸಿರಾಡಿದ ಪಕ್ಷವೊಂದರ ಸರದಾರರಾಗಿ ಸಕಲ ಭೋಗಭಾಗ್ಯಗಳನ್ನು ಅನುಭವಿಸಿ ಕೊನೆಯ ಹೊತ್ತಿನಲ್ಲಿ ಕರಗಿದ ಕೊರಗಿದ ಹಣ್ಣಿನಂತೆ ಬೀಳುವ ಪಾಡನ್ನು ಗಮನಿಸಿದಾಗ ಅವರ ಬಗ್ಗೆ ಗೌರವವಿಟ್ಟವರು ನಿಜಕ್ಕೂ ಸಂಕಟಪಡಬೇಕೇ ಹೊರತು ಹೊಸಶಕೆಯ ಆರಂಭವನ್ನು ಗುರುತಿಸಲಾರರು.

ಊಸರವಳ್ಳಿಯೇ ನಮ್ಮ ರಾಷ್ಟ್ರಲಾಂಛನವಾಗುತ್ತದೇನೋ ಎಂಬಷ್ಟರ ಮಟ್ಟಿಗೆ ಕಳೆದ ಹಲವು ದಶಕಗಳಲ್ಲಿ ರಾಜಕೀಯ ಪಕ್ಷಾಂತರ ನಡೆಯುತ್ತಿದೆ. ಬದುಕಿಡೀ ಅನುಭವಿಸಿದ ಸಂಗಾತಿಯನ್ನು ಇಳಿವಯಸ್ಸಿನಲ್ಲಿ ಬಿಟ್ಟು ಹೊಸ ಸಂಗಾತಿಯನ್ನು ಆರಿಸಿಕೊಳ್ಳುವ ರೀತಿನೀತಿ ಗಳನ್ನು ಗಮನಿಸಿದರೆ ಒಂದು ಮಹಾನ್ ಉದ್ದೇಶಕ್ಕಾಗಿ, ಲೋಕಹಿತಕ್ಕಾಗಿ ಸತಿಸುತರನ್ನು ತೊರೆದು ಹೊರಟ ಬುದ್ಧ ದಿಗ್ಭ್ರಮೆಗೊಂಡರೆ ಅಚ್ಚರಿಯಿಲ್ಲ. ಇತ್ತೀಚೆಗೆ ಎಸ್. ಎಂ. ಕೃಷ್ಣ ತಮ್ಮ 85ನೆ ಇಳಿವಯಸ್ಸಿನಲ್ಲಿ ಕಾಂಗ್ರೆಸ್ ತೊರೆದು ಭಾಜಪದ ಜೊತೆ ಸೇರಿದಾಗ ಈ ದೇಶದ ಸಂಸ್ಕೃತಿ ಮತ್ತು ರಾಜಕೀಯ ಸಂಸ್ಕೃತಿ ಮತ್ತೂ ಒಂದು ಹೊಸ ಹಂತವನ್ನು ತಲುಪಿತು. ಸೋಮನಹಳ್ಳಿ ಮಲ್ಲಯ್ಯ ಕೃಷ್ಣ ಮೌಲ್ಯ ರಾಜಕಾರಣದ ಸಂಕೇತವೆಂದು ಬಹಳ ವರ್ಷಗಳಿಂದ ಬಿಂಬಿಸಿಕೊಂಡವರು. ಉನ್ನತ ಶಿಕ್ಷಣವನ್ನು ಅಮೆರಿಕದಲ್ಲಿ ಮಾಡುತ್ತಿರುವಾಗಲೇ ಜಾನ್ ಕೆನಡಿಯ ಪರವಾಗಿ ಅಮೆರಿಕದ ಅಧ್ಯಕ್ಷ ಚುನಾವಣೆಯಲ್ಲಿ ಸಕ್ರಿಯವಾಗಿ ಮತ್ತು ಬಿರುಸಿನಿಂದ ಪಾಲ್ಗೊಂಡಿದ್ದರು. ಆನಂತರ ಪ್ರಜಾ ಸೋಷಿಯಲಿಸ್ಟ್ ಪಕ್ಷದಲ್ಲಿ 1962ರಿಂದ 1971ರ ವರೆಗಿದ್ದು 1968ರಲ್ಲಿ ಕಾಂಗ್ರೆಸ್‌ನ ವಿರುದ್ಧವೇ ಜಯಿಸಿದ್ದರು. ಆನಂತರ ಕಾಂಗ್ರೆಸ್ ಸೇರಿ 4, 5, 7 ಮತ್ತು 8ನೆ ಲೋಕಸಭಾ ಸದಸ್ಯರಾದರು. ಇಂದಿರಾ ಗಾಂಧಿ ಸಂಪುಟದಲ್ಲಿ 1983-84ರಲ್ಲಿ ಮತ್ತು ಆಕೆಯ ಮರಣಾನಂತರ ರಾಜೀವ್ ಗಾಂಧಿ ಸಂಪುಟದಲ್ಲಿ 1984 ಮತ್ತು 1985ರಲ್ಲಿ ಕೈಗಾರಿಕೆ, ಹಣಕಾಸು ಮುಂತಾದ ಮಹತ್ವದ ಖಾತೆಗಳನ್ನು ಹೊಂದಿದ್ದರು. 1990ರ ದಶಕದ ವರೆಗೂ ‘ಎ’ ಗ್ರೇಡ್ ನಾಯಕರಾಗಿಯೂ ರಾಜ್ಯ-ಕೇಂದ್ರ ಹೀಗೆ ಹಂಚಿಹೋದ ಕೃಷ್ಣ 1990ರಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್‌ನ ಅಗ್ರಸ್ಥಾನದ ನಾಯಕರಲ್ಲೊಬ್ಬರಾದರು ಮತ್ತು ವೀರಪ್ಪಮೊಯ್ಲಿಯವರು ಮುಖ್ಯಮಂತ್ರಿಯಾಗಿದ್ದಾಗ ಕರ್ನಾಟಕದ ಉಪಮುಖ್ಯಮಂತ್ರಿಯಾಗಿ 2 ವರ್ಷ ದುಡಿದರು. ಮುಂದೆ 1999ರ ರಾಜ್ಯ ಚುನಾವಣೆ ಬಂದಾಗ ರಾಜ್ಯ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಚುನಾವಣೆಯ ಸಾರಥ್ಯವನ್ನು ವಹಿಸಿ ಚುನಾವಣೆಯಲ್ಲಿ ಕಾಂಗ್ರಸನ್ನು ಗೆಲ್ಲಿಸಿ ಆನಂತರ ಕರ್ನಾಟಕದ ಮುಖ್ಯಮಂತ್ರಿಯಾದರು. ಬೆಂಗಳೂರನ್ನು ಸಿಂಗಾಪುರ ಮಾಡುವ ಪಣತೊಟ್ಟು ಹಾಗಾಗದಿದ್ದರೂ ಹೈಟೆಕ್ ಸಿಟಿಯಾಗಿ ಪರಿವರ್ತಿಸಿದ್ದು ಮಾತ್ರ ಸತ್ಯ. 2004ರ ವರೆಗೂ ಮುಖ್ಯಮಂತ್ರಿಯಾಗಿ ಆನಂತರ ಕರ್ನಾಟಕದಲ್ಲಿ ಕಾಂಗ್ರೆಸ್ ಸೋತರೂ ಯುಪಿಎ ಸರಕಾರ ಕೇಂದ್ರದಲ್ಲಿ ಗೆದ್ದದ್ದರಿಂದ 2004ರಿಂದ 2008ರ ವರೆಗೆ ಮಹಾರಾಷ್ಟ್ರದ ರಾಜ್ಯಪಾಲರಾದರು. 2 ಬಾರಿ ರಾಜ್ಯಸಭಾ ಸದಸ್ಯರೂ ಆದರು. ಯುಪಿಎ ಸರಕಾರದ 2ನೆ ಅವಧಿಯಲ್ಲಿ ವಿದೇಶಾಂಗ ಸಚಿವರೂ ಆದರು.

ಕೃಷ್ಣ 2008ರಲ್ಲಿ ರಾಜ್ಯಪಾಲ ಹುದ್ದೆ ತ್ಯಜಿಸಿ ಕೇಂದ್ರ ಸರಕಾರದಲ್ಲಿ ಪಾಲುದಾರರಾದರು. 2012ರಲ್ಲಿ ಅವರ ಪ್ರಭೆ ಕುಂದಲಾರಂಭಿಸಿತು. ವಿದೇಶಾಂಗ ಸಚಿವರಾಗಿ ಅವರ ಕರ್ತವ್ಯ ದಕ್ಷತೆಯಲ್ಲಿ ಅಪಸ್ವರ ಕೇಳಲಾರಂಭಿಸಿತು. ಮರೆವು ಮತ್ತು ಗೊಂದಲ ಅವರನ್ನು ಕಾಡಲಾರಂಭಿಸಿತು. ಈ ಅವಧಿಯಲ್ಲಿ ಅವರು ಕರ್ನಾಟಕ ರಾಜ್ಯದ ರಾಜಕೀಯಕ್ಕೆ ಮರಳಲು ಮನಸ್ಸು ಮಾಡಿದ್ದರೆನ್ನಲಾಗಿದೆ. ಆದರೆ ಪ್ರಾಯಶ ರಾಜ್ಯ ರಾಜಕೀಯಕ್ಕೆ ನುಸುಳಲಾಗಲೀ ಇಳಿಯುವುದಕ್ಕಾಗಲೀ ಜಾಗವಿರದೆ ಒಂದು ರೀತಿಯ ನಿರ್ವಾತವನ್ನನುಭವಿಸಿದರು. ಭಾಜಪದ ಹಾಗೆ ಪುನರ್ವಸತಿಗೆ ಕಾಂಗ್ರೆಸ್‌ನಲ್ಲಿ ಮಾರ್ಗದರ್ಶಕ ಮಂಡಲಿಯೂ ಇಲ್ಲದ್ದರಿಂದ ಅವರಿಗೆ ಅಡ್ವಾಣಿ, ಮುರಳಿ ಮನೋಹರ ಜೋಶಿ ಇವರಂತೆ ಮಡಿಯುಟ್ಟು ಆಲಂಕಾರಿಕವಾಗಿ ಕೂರುವ ಅವಕಾಶವೂ ತಪ್ಪಿತು. ಮುಖ್ಯವಾಗಿ ಪಕ್ಷದಲ್ಲಿ ಹಿಡಿತ ತಪ್ಪಿತು. 2017ರ ಜನವರಿಯಲ್ಲಿ ಕಾಂಗ್ರೆಸ್‌ಗೆ ವಿದಾಯ ಹೇಳಿದರು. ಹೇಳಿದ್ದು ಮಾತ್ರವಲ್ಲ, ಭಾಜಪ ಸೇರಿದರು. **

ಇವಿಷ್ಟು ವಿವರಗಳೊಂದಿಗೆ ಕೃಷ್ಣರ ಜೀವನ ಯಾತ್ರೆಯನ್ನು ಗಮನಿಸಿದರೆ ಮುಳುಗುವ ಹಡಗಿನಿಂದ ಹಾರುವ ಹೆಗ್ಗಣಗಳ ನೆನಪಾಗದಿರದು. ಸುಮಾರು ಐದು ದಶಕಗಳ ಕಾಲ ಉಸಿರಾಡಿದ ಪಕ್ಷವೊಂದರ ಸರದಾರರಾಗಿ ಸಕಲ ಭೋಗಭಾಗ್ಯಗಳನ್ನು ಅನುಭವಿಸಿ ಕೊನೆಯ ಹೊತ್ತಿನಲ್ಲಿ ಕರಗಿದ ಕೊರಗಿದ ಹಣ್ಣಿನಂತೆ ಬೀಳುವ ಪಾಡನ್ನು ಗಮನಿಸಿದಾಗ ಅವರ ಬಗ್ಗೆ ಗೌರವವಿಟ್ಟವರು ನಿಜಕ್ಕೂ ಸಂಕಟಪಡಬೇಕೇ ಹೊರತು ಹೊಸಶಕೆಯ ಆರಂಭವನ್ನು ಗುರುತಿಸಲಾರರು. ಬದುಕಿನಲ್ಲಿ ಸದಾ ಯಯಾತಿತನವನ್ನು ಅನುಭವಿಸಲೋಸುಗ ಮಕ್ಕಳ ಯೌವನವನ್ನು ಪಡೆಯಲು ನಮ್ಮ ಅನೇಕ ಹಿರಿಯ ರಾಜಕಾರಣಿಗಳು ಪ್ರಯತ್ನಿಸುತ್ತಿದ್ದಾರೆ. ಹಸಿದಾಗ ಹಳಸಲು ಅನ್ನವೂ ಮೃಷ್ಟಾನ್ನವಾಗುತ್ತದೆ! ಇವರನ್ನು ಗಮನಿಸಿದಾಗ ಜಿಗುಪ್ಸೆ ಮಿಶ್ರಿತ ಅನುಕಂಪ ಮೂಡುತ್ತದೆ. ನಾಡು ಹೋಗು ಅನ್ನುವಾಗ, ಕಾಡು ಬಾ ಅನ್ನುವಾಗ ಪಕ್ವ ರಾಜಕಾರಣಿಯೊಬ್ಬನಿಗೆ ತನ್ನ ಕಾಲಡಿಯಲ್ಲಿ ಕಾಲ ಕಳೆದುಹೋಗುತ್ತಿದೆ ಅನ್ನಿಸಬೇಕು. ಬದುಕಿಗೆ ಮತ್ತು ತನ್ನನ್ನು ಮಾನಿಸಿದ ಎಲ್ಲ ಕ್ಷೇತ್ರಗಳಿಗೆ, ವ್ಯಕ್ತಿಗಳಿಗೆ, ತನ್ನ ಪಕ್ಷಕ್ಕೆ ಋಣಿಯಾಗಿರಬೇಕು. ಆಗ ಮಾತ್ರ ಲಜ್ಜಾಪೂರ್ಣ ರಾಜಕಾರಣಿ ಮುತ್ಸದ್ದಿಯಾಗಿ ಬೆಳಗಬಲ್ಲ. ಹೀಗೆ ಪಕ್ಷ ತೊರೆದು ಹೋದವರಲ್ಲಿ ಕೃಷ್ಣ ಮೊದಲಿಗರೂ ಅಲ್ಲ; ಕೊನೆಯವರಂತೂ ಅಲ್ಲವೇ ಅಲ್ಲ. ಆದರೆ ವಿಶಿಷ್ಟ ಕಾಲ-ಸಂದರ್ಭಗಳಲ್ಲಿ ಪಕ್ಷ ತೊರೆಯುವವರಿಗೂ ಹೀಗೆ ಪಕ್ಷತ್ಯಾಗ ಮಾಡುವವರಿಗೂ ವ್ಯತ್ಯಾಸವಿದೆ. ತುರ್ತುಸ್ಥಿತಿಯ ಕೊನೆಗೆ ಜಗಜೀವನ್ ರಾಮ್, ಹೇಮವತಿ ನಂದನ ಬಹುಗುಣ ಮುಂತಾದವರು ಇಂದಿರಾ ಗಾಂಧಿಯನ್ನು ತೊರೆದ ಸಂದರ್ಭಕ್ಕೂ ಕೃಷ್ಣ ಕಾಂಗ್ರೆಸ್ ತೊರೆದ ಸಂದರ್ಭಕ್ಕೂ ಮೌಲಿಕ ವ್ಯತ್ಯಾಸವಿದೆ. ಕೃಷ್ಣ ಅವರು ಪಕ್ಷ ತ್ಯಾಗದ ಆನಂತರ ತಮ್ಮ ಅತೃಪ್ತಿಯನ್ನು ಹೇಳುತ್ತ ತನ್ನ ಕ್ರಮವನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ರಾಹುಲ್ ಗಾಂಧಿಯ ಅಪಕ್ವ ಗ್ರಹಿಕೆ ಮತ್ತು ಅಸಮರ್ಥ ನಾಯಕತ್ವವನ್ನು ಟೀಕಿಸಿದ್ದಾರೆ. ಮೋದಿ-ಅಮಿತ್ ಶಾ ಜೋಡಿಗೆ ಶಹಬಾಸ್ ಗಿರಿ ಹೇಳಿದ್ದಾರೆ. ಆದರೆ ಮೇಲ್ನೋಟಕ್ಕೆ ಕಾಣುವ ಸತ್ಯವೆಂದರೆ ಅವರಿಗೆ ಕೇಂದ್ರ-ರಾಜ್ಯ ರಾಜಕಾರಣದಲ್ಲಿ ನಿರೀಕ್ಷಿತ ಸ್ಥಾನ-ಮಾನವನ್ನು ಪಕ್ಷವು ನೀಡದಿರುವುದು. ಅವರ ಈ ನಿರಾಸೆ ಸ್ವಲ್ಪಮಟ್ಟಿಗೆ ಸರಿಯೆನಿಸಿದರೂ ಕಾಲದ ನಿಯಮಕ್ಕೆ ಎಲ್ಲರೂ ಬದ್ಧರಾಗಬೇಕೆಂಬುದು ಅವರಿಗೆ ತಿಳಿಯದ ವಿಷಯವೇನಲ್ಲ. ಭಾಜಪದೊಳಗೆ ಭಾರತದ ಲೋಹಪುರುಷರೆಂದೂ ಭಾರತದ ಭಾವೀ ಪ್ರಧಾನಿಯೆಂದೂ ಗುರುತಿಸಿಕೊಂಡಿದ್ದ ಅಡ್ವಾಣಿ ಈಗ ವೃದ್ಧಾಶ್ರಮ ಸೇರಿ ವಾನಪ್ರಸ್ಥಕ್ಕೆ ಗುರಿಯಾದ ನೋವನ್ನು ನುಂಗಿಕೊಂಡು ಮೌನಕ್ಕೆ ಶರಣಾಗಲಿಲ್ಲವೇ-ಅದು ಪ್ರಬುದ್ಧತೆ. ಅನಿವಾರ್ಯಕ್ಕೆ ಶರಣು ಹೊಡೆಯುವುದು, ಅದರೊಂದಿಗೆ ರಾಜಿ ಮಾಡಿಕೊಳ್ಳುವುದು ಸಾಧುತನ. ಅದಲ್ಲದಿದ್ದರೆ ಅಡ್ವಾಣಿಯವರು ಘನತೆಯನ್ನೂ ಉಳಿಸಿಕೊಳ್ಳದೆ ಹೇಳಹೆಸರಿಲ್ಲದೆ ನೆನಪಿನಿಂದಲೇ ಅಳಿದು ಹೋಗುತ್ತಿದ್ದರು.

ಕೃಷ್ಣ ಈ ಅವಕಾಶವನ್ನು ಕಳೆದುಕೊಂಡರು. ಇಷ್ಟೊಂದು ದೀರ್ಘ ರಾಜಕೀಯ ಜೀವನದ ಕೊನೆಯ ಹೊತ್ತಿನಲ್ಲಿ ಅವರ ರಥದ ಗಾಲಿ ಹೀಗೆ ಕುಸಿಯಬಾರದಿತ್ತು ಅನ್ನಿಸುತ್ತದೆ. ಕೊನೇ ಪಕ್ಷ ಭಾಜಪಕ್ಕೆ ಸೇರುವಾಗಲಾದರೂ ಮೋದಿ ಇಲ್ಲವೇ ಶಾ ಅವರಿಂದ ಸ್ವಾಗತಗೊಳ್ಳುವ ಅದೃಷ್ಟವೂ ಇಲ್ಲದೆ ಬಂದ ಕೃಷ್ಣ ಅವರ ಮುಂದಿನ ದಿನಗಳು ಕುತೂಹಲಕಾರಿಯಾಗಿವೆ. ಯಡಿಯೂರಪ್ಪನವರೇ ಮೋದಿ ವಿಧಿಸಿದ ಅಧಿಕಾರ ವಯೋಮಿತಿಯ ಗಡಿಯಾದ 75ನ್ನು ಒಲ್ಲದ ಮನಸ್ಸಿನಿಂದ ದಾಟುತ್ತ ಇರುವಾಗ ಭಾಜಪದ ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಕೃಷ್ಣ ಅವರಿಗೆ ಜಾಗವಿರಲು ಸಾಧ್ಯವಿಲ್ಲ. ಮುಖ್ಯಮಂತ್ರಿ, ರಾಜ್ಯಪಾಲ, ವಿದೇಶಾಂಗ ಸಚಿವಾಲಯ ಇವನ್ನೆಲ್ಲ ಕಂಡವರಿಗೆ, ಒಬಾಮಾ ದಂಪತಿಯೊಂದಿಗೆ ಫೋಟೊ ತೆಗೆಸಿಕೊಂಡವರಿಗೆ, ಇನ್ನು ಕೆಳದರ್ಜೆಯ ಸ್ಥಾನಮಾನಗಳ ಗಂಜಿ ಊಟ ಸಾಧ್ಯವಿಲ್ಲ. ರಾಷ್ಟ್ರಪತಿಯೋ ಉಪರಾಷ್ಟ್ರಪತಿಯೋ ಆಗುವ ಅವಕಾಶವಿದ್ದರೆ ಮಾತ್ರ ಅವರ ನಡೆಯ ಲೆಕ್ಕಾಚಾರ ಯಶಸ್ವಿಯೆಂದು ತಿಳಿಯಬಹುದು. ಇಲ್ಲವಾದರೆ ಅವರೊಬ್ಬ ಕಿಂಗ್ ಲಿಯರ್ ಆಗಿ ಉಳಿಯಬಹುದು.

**

ಬದುಕು ಇರುವುದೇ ಮತ್ತೆ ಮತ್ತೆ ಹಳೆಯದನ್ನು ನೆನಪಿಸಿಕೊಂಡು ಸುಖಿಸುವುದರಲ್ಲಿ. ಇಂತಹ ಪಕ್ಷತ್ಯಾಗದ ಪ್ರಲೋಭನೆ ಹೊಸದಲ್ಲ. ನಮ್ಮ ಪುರಾಣೇತಿಹಾಸಗಳು ಇಂತಹ ಸಂದರ್ಭಗಳನ್ನು ಕಲಾತ್ಮಕವಾಗಿ ಉಣಬಡಿಸಿ ಅವುಗಳ ಮೌಲ್ಯವನ್ನು ಹೇಳಿವೆ. ಅವನ್ನು ಸ್ವೀಕರಿಸುವುದು, ತಿರಸ್ಕರಿಸುವುದು, ಮರೆಯುವುದು, ಅನರ್ಥಗೊಳಿಸುವುದು ನಮಗೆ ಬಿಟ್ಟದ್ದು.

ಮಹಾಭಾರತದ ಕರ್ಣನ ಜೀವನ ಇಂತಹ ಸಂದರ್ಭಗಳಲ್ಲಿ ಮೌಲ್ಯಗಳನ್ನುಳಿಸುವುದು ಹೇಗೆಂಬುದನ್ನು ಸಾರುತ್ತದೆ. ಕನ್ನಡದ ಪಂಪ, ಕುಮಾರವ್ಯಾಸ ಕರ್ಣನ ಜೀವನದ ಮಹತ್ತನ್ನು ಸಾರಿದ್ದಾರೆ. ಅವರನ್ನು ಮತ್ತು ಅವರ ಮೂಲಕ ಕರ್ಣನನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು:

ಕುರುಕ್ಷೇತ್ರ ಯುದ್ಧದ ಪೂರ್ವದಲ್ಲಿ ಕೃಷ್ಣ ಹಸ್ತಿನಾವತಿಗೆ ಬಂದು ಸಂಧಿಯ ಮಾತುಗಳನ್ನಾಡಿ ವಿಫಲನಾಗಿದ್ದಾನೆ. ಹೋಗುವಾಗ ಆತನನ್ನು ಸರ್ವರೂ ಬೀಳ್ಕೊಟ್ಟಿದ್ದಾರೆ-ಕೌರವನ ಹೊರತು. ಆ ಸಂದರ್ಭದಲ್ಲಿ ಕೃಷ್ಣ ಕರ್ಣನನ್ನು ಕರೆದು ಪ್ರತ್ಯೇಕವಾಗಿ ಮಾತನಾಡಿಸಿದ್ದಾನೆ. ಕರ್ಣ ಉಭಯ ತಂಡಗಳವರಿಗೂ ಹಿರಿಯ, ಕುಂತಿಪುತ್ರ ಎಂದೆಲ್ಲ ಆಮಿಷಗಳನ್ನು ಒಡ್ಡಿ ಆತನನ್ನು ತಮ್ಮ ಪಕ್ಷಕ್ಕೆ ಬರಮಾಡಿಕೊಳ್ಳಲಲ್ಲದಿದ್ದರೂ ಕನಿಷ್ಠ ಕೌರವನ ಬಲ ಕುಗ್ಗಿಸುವ ರಣತಂತ್ರ ಇದಾಗಿತ್ತು. ಈ ಹೊಲಬನ್ನು ಸೂಕ್ಷ್ಮಬುದ್ಧಿಯ ಕರ್ಣ ಅರಿತ. ನಯ-ವಿನಯಗಳಿಂದಲೇ ಕೃಷ್ಣನ ಪ್ರಲೋಭನೆಯನ್ನು ಮೀರಿದ. ಪಂಪನ ಕಾವ್ಯದಲ್ಲಿ ‘‘ಕೃಷ್ಣ ರಥಮನೇರಿ, ಕರ್ಣನ ಮನೆಯ ಮುಂದನೆ ಬಂದು, ಮೇಲೆ ಬಿಳ್ದು-ಎಮ್ಮಂ ಕಿರಿದಂತರಂ ಕಳಿಸಿ ಮಗುಳ್ವೆ ಬಾ ಪೋಪಮ್ ಎಂದು ತನ್ನೊಡನೆ ರಥವನೇರಿಸಿಕೊಂಡು ಪೋಗಿ’’ ಎಂದು ಸಾಗುವ ಭಾಗದಲ್ಲಿ ‘‘ಭೇದಿಸಲೆಂದೆ ದಲ್ ನುಡಿದರೆನ್ನದಿರ್’’ ಎಂದು ಮುಖವಾಡ ಹಾಕಿ ಕರ್ಣನ ಹುಟ್ಟನ್ನು ಅರುಹಿ ಕೌರವನು ಕರ್ಣನಲ್ಲಿಟ್ಟಿದ್ದ ನಂಬುಗೆಯನ್ನು ‘‘ಸಮಂತು ಪಾಟಿಸುವೆನೊಯ್ಯನೆ ಮುಳ್ಳೊಳೆ ಮುಳ್ಳನೆಂದು’’ ಎಂಬ ದುರುದ್ದೇಶವೆಂದು ಆರೋಪಿಸುತ್ತಾನೆ. ಆದರೆ ಕರ್ಣನು ಮಾತ್ರ ವಿಚಲಿತನಾಗದೆ ಕೌರವನ ವಿಶ್ವಾಸವನ್ನು ಹೊಗಳಿ ಆನಂತರ ‘‘ನಣ್ಪಿನ ನೆವದಿಂದೆ ಪಾಂಡವರನ್ ಒಳಪೊಕ್ಕೊಡೆ ನೀಮೆ ಪೇಸಿರೇ? ಮತ್ತು ಬೇಡನಲ್ಲೆನೇ?’’ ಎಂದು ಮರುಪ್ರಶ್ನೆಯನ್ನು ಹಾಕಿ ತನ್ನ ದೃಢತೆಯನ್ನು ಪ್ರದರ್ಶಿಸುತ್ತಾನೆ.

ಕುಮಾರವ್ಯಾಸ ಭಾರತದಲ್ಲೂ ಈ ಪ್ರಸಂಗವು ಹೃದ್ಯವಾಗಿದೆ: ‘‘ಇನತನೂಜನ ಕೂಡೆ ಮೈದುನತನದ ಸರಸವನೆಸಗಿ ರಥದೊಳು ದನುಜರಿಪು ಬರಸೆಳೆದು ಕುಳ್ಳಿರಿಸಿದನು ಪೀಠದಲಿ’’ ಕರ್ಣನು ‘‘ಎನಗೆ ನಿಮ್ಮಡಿಗಳಲಿ ಸಮಸೇವನೆಯೆ ದೇವ ಮುರಾರಿಯಂಜುವೆನೆನಲು’’ ಕೃಷ್ಣನು ‘‘ತೊಡೆಸೋಂಕಿನಲಿ ಸಾರಿ’’ ಭೇದನೀತಿಯನ್ನು ಹೂಡುತ್ತಾನೆ; ರವಿಸುತನ ಕಿವಿಯಲ್ಲಿ ‘‘ಬಿತ್ತಿದನು ಭಯವ’’. ವೀಳೆಯದ ಸಾಮಿಪ್ಯವನ್ನು, ‘‘ಸುಯೋಧನನಲಿ ವೃಥಾ ಸೇವಕತನದಲಿಹುದುಚಿತವಲ್ಲ’’ ಎಂಬಿತ್ಯಾದಿ ಪ್ರಲೋಭನೆಯನ್ನು ಒಡ್ಡಿದರೂ ಕರ್ಣನು ವಿಚಲಿತನಾಗುವುದಿಲ್ಲ. ಕುಮಾರವ್ಯಾಸ ಈ ಪ್ರಸಂಗವನ್ನು ಬಹಳ ಆಕರ್ಷಕವಾಗಿ ನಿರ್ವಹಿಸಿದ್ದಾನೆ. ಉಭಯತ್ರರಲ್ಲೂ ತಪ್ಪುಕಾಣದಂತೆ ವಿಸ್ತರಿಸಿದ್ದಾನೆ; ವಿವರಿಸಿದ್ದಾನೆ. ಕೊನೆಗೆ ಕರ್ಣನು ‘‘ಮರುಳು ಮಾಧವ ಮಹಿಯ ರಾಜ್ಯದ ಸಿರಿಗೆ ಸೋಲುವನಲ್ಲ’’ ‘‘ಹೊರೆದ ದಾತಾರಂಗೆ ಹಗೆವರ ಶಿರವನರಿದೊಪ್ಪಿಸುವೆನೆಂಬೀ ಭರದೊಳಿರ್ದೆನು’’, ‘‘ವೀರ ಕೌರವರಾಯನೇ ದಾತಾರನಾತನ ಹಗೆಯೆ ಹಗೆ’’, ‘‘ಕೌರವನ ರುಣ ಹಿಂಗೆ ರಣದಲಿ ಸುಭಟ ಕೋಟಿಯನು ತೀರಿಸಿಯೆ ಪತಿಯವಸರಕ್ಕೆ ಶರೀರವನು ನೂಕುವೆನು’’ ಎನ್ನುತ್ತಾನೆ. ನಿಷ್ಠೆಯ ಚರಮಸೀಮೆಯ ಈ ಚಿತ್ರಣವು ಭಾರತದ ಎಲ್ಲ ಓದುಗರನ್ನು, ಕೇಳುಗರನ್ನು ಒಂದು ಉದಾತ್ತ ಮೌಲ್ಯದತ್ತ ಒಯ್ಯುತ್ತದೆ. ನಾವು ಪುರಾಣದಿಂದ ಏನನ್ನು ಕಲಿಯುತ್ತೇವೆ? ಶಕುನಿತನವನ್ನು? ಕುತಂತ್ರವನ್ನು? ಹಿಂಸೆಯನ್ನು? ಜಾರತನವನ್ನು? ಏನನ್ನು ಮಾಡಬಾರ ದೆಂದು ಸಂಸ್ಕಾರ, ಸಂಸ್ಕೃತಿ ಹೇಳುತ್ತದೋ ಅದನ್ನು ಮಾಡುವುದನ್ನು? ದೇಶಭಕ್ತಿಯ ಹೆಸರಿನಲ್ಲಿ ದೇಶವನ್ನು ಭಕ್ಷಿಸುವುದನ್ನು? ಬದಲಾವಣೆಯೆಲ್ಲವೂ ಅಭಿವೃದ್ಧಿಯಲ್ಲ. ರಾಜಕೀಯದಲ್ಲಿ ಅದು ಅವಕಾಶವಾದವಾಗುವುದೇ ಹೆಚ್ಚು. ವೃದ್ಧಾಪ್ಯದಲ್ಲಿ ಪಾತಿವ್ರತ್ಯವನ್ನು ಪರೀಕ್ಷೆಗೆ ಒಡ್ಡಬಾರದು.

ಮಹಾಭಾರತ ಕೃಷ್ಣಕಥೆಯೆನ್ನುತ್ತಾನೆ ಕುಮಾರವ್ಯಾಸ. ಎಸ್.ಎಂ. ಕೃಷ್ಣರಂಥವರ ಒಂದೊಂದು ದುರಂತ ಕಥೆಯೂ ಮಹಾಭಾರತದ ಪೌರಾಣಿಕ ಸತ್ಯವನ್ನು ಜೀವಂತವಾಗಿರಿಸುತ್ತದೆ, ಅಷ್ಟೇ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)