ಕರಾವಳಿ

'ಮದಿಪು' ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಗರಿ

ವಾರ್ತಾ ಭಾರತಿ : 7 Apr, 2017

ಮಂಗಳೂರು, ಎ.7: ಆಸ್ಥಾ ಪ್ರೊಡಕ್ಷನ್‌ನಡಿ ನಿರ್ಮಾಣವಾದ 'ಮದಿಪು' ನಂಬೊಲಿಗೆದ ಪುರುಸದ (ನಂಬಿಕೆಯ ಪ್ರಸಾದ) ಎಂಬ ತುಳು ಚಲನಚಿತ್ರಕ್ಕೆ 64ನೆ ರಾಷ್ಟ್ರೀಯ ಚಲನಚಿತ್ರ ವಿಭಾಗದ ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ತುಳು ಚಿತ್ರವೊಂದಕ್ಕೆ ಇದು ನಾಲ್ಕನೆಯ ರಾಷ್ಟ್ರೀಯ ಪ್ರಶಸ್ತಿಯ ಗೌರವವಾಗಿದೆ. ಈ ಮೊದಲು ಬಂಗಾರ್ ಪಟ್ಲೆರ್, ಕೋಟಿ ಚನ್ನಯ ಹಾಗೂ ಗಗ್ಗರ ತುಳು ಸಿನೆಮಾಗಳು ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿವೆ. ಸಂದೀಪ್ ಕುಮಾರ್ ನಂದಳಿಕೆ ನಿರ್ಮಾಣದ ಈ ಚಿತ್ರಕ್ಕೆ ಚೇತನ್ ಮುಂಡಾಡಿ ಚಿತ್ರಕಥೆಯ ಜತೆ ನಿರ್ದೇಶನ ನೀಡಿದ್ದಾರೆ.

ಕ್ರಿಯಾತ್ಮಕ ನಿರ್ದೇಶನದಲ್ಲಿ ಸುಧೀರ್ ಶಾನ್‌ಬೋಗ್, ಸಹ ನಿರ್ದೇಶನ ಶರತ್ ಕುಮಾರ್ ಮತ್ತು ವಿಶಾಲ್ ಕುಮಾರ್ ಸಹಕರಿಸಿದ್ದಾರೆ. ಸಂಗೀತ ಮನೋಹರ್ ವಿಠ್ಠಲ್ ನೀಡಿದ್ದು, ಸಂಕಲನವನ್ನು ಶ್ರೀಕಾಂತ್, ಛಾಯಾಗ್ರಹಣ ಗಣೇಶ್ ಹೆಗಡೆ, ಸಂಭಾಷಣೆ ಜೋಗಿ, ತುಳು ಸಂಭಾಷಣೆ ಚಂದ್ರನಾಥ್ ಬಜಗೋಳಿ ನಡೆಸಿದ್ದರು.

ಎಂ.ಕೆ.ಮಠ, ಸರ್ದಾರ್ ಸತ್ಯ, ಸೀತಾಕೋಟೆ, ಸುಜಾತ ಶೆಟ್ಟಿ, ಚೇತನ್ ರೈ ಮಾಣಿ, ಜೆ.ಬಂಗೇರ, ನಾಗರಾಜ್ ರಾವ್, ದಯಾನಂದ್ ಕತ್ತಲ್‌ಸರ್, ರಮೇಶ್ ರೈ ಕುಕ್ಕುವಳ್ಳಿ, ಯುವರಾಜ್ ಕಿಣಿ, ಡಾ. ಜೀವನ್‌ಧರ್ ಬಲ್ಲಾಳ್, ಸುಜಾತ ಕೋಟ್ಯಾನ್ ಚಿತ್ರದಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸಿದ್ದಾರೆ.
 ಚಿತ್ರದಲ್ಲಿ ತುಳು ಸಂಸ್ಕೃತಿಯ ಶ್ರೀಮಂತಿಕೆಯ ಜತೆ 'ಭೂತಾರಾಧನೆ' ಕುರಿತಂತೆ ಬೆಳಕು ಚೆಲ್ಲಲಾಗಿದೆ.

ಕಲೆಯೇ ಒಂದು ಧರ್ಮವಾದರೂ, ಧರ್ಮದ ಮೂಲಕ ಕಲೆ ಎಂಬ ವಿಶಿಷ್ಟ ಗ್ರಹಿಕೆಯ ಮಂದಿಯ ನಡುವೆ ನಡೆಯುವ ಮನೋಜ್ಞ ಚಿತ್ರ ಕಥೆ ಈ ಚಿತ್ರದ ವಿಶೇಷತೆ. ಭೂತಕೋಲ ಕಟ್ಟುವ ಜನಾಂಗಕ್ಕೆ ಸೇರಿದ ವ್ಯಕ್ತಿಯೊಬ್ಬನ ತಳಮಳವನ್ನು ಮದಿಪು ರೂಪದಲ್ಲಿ ಪ್ರೇಕ್ಷಕರ ಮುಂದಿಡಲಾಗಿತ್ತು. ಮಾತ್ರವಲ್ಲದೆ ತುಳುನಾಡಿನಲ್ಲಿ ತುಳುನಾಡಿನ ದೈವಾರಾಧಕರ ನೋವು ಮತ್ತು ಸಾಮಾಜಿಕ ಅಸ್ಥಿರತೆ, ಹಿಂದೂ- ಮುಸಲ್ಮಾನರ ನಡುವಿನ ಭಾವೈಕ್ಯ ತಾಯಿ ಮತ್ತು ತಾಯಿತನದ ತುಡಿತವನ್ನು ಚಿತ್ರದಲ್ಲಿ ಬಿಂಬಿಸಲಾಗಿದ್ದು, ತುಳುವಿನ 78ನೆ ಸಿನೆಮಾವಾಗಿ ಮಾರ್ಚ್‌ನಲ್ಲಿ ದ.ಕ. ಜಿಲ್ಲಾದ್ಯಂತ ತೆರೆಕಂಡಿತ್ತು. ಎಪ್ರಿಲ್ ಕೊನೆಯಲ್ಲಿ ಈ ಚಿತ್ರ ದುಬೈ, ಮಸ್ಕತ್, ಬೆಂಗಳೂರು, ಮಂಗಳೂರುಗಳಲ್ಲಿ ಪ್ರದರ್ಶನಗೊಳ್ಳಲಿದೆ.

ತುಂಬಾ ಖುಶಿಯಾಗಿದೆ:

ನಾನು ಪ್ರಶಸ್ತಿಯ ನಿರೀಕ್ಷೆ ಇರಲಿಲ್ಲ. ಆದರೆ ಆಸೆ ಇತ್ತು. ಅದರಂತೆ ಈ ಪ್ರಶಸ್ತಿ ಲಭಿಸಿರುವುದರಿಂದ ನನಗೆ ಮಾತ್ರವಲ್ಲ 'ಮದಿಪು' ತಂಡಕ್ಕೆ ತುಂಬಾ ಖುಶಿಯಾಗಿದೆ. ಇದು ಹೊಸ ಚಿತ್ರ ನಿರ್ಮಾಣಕ್ಕೆ ಉತ್ಸಾಹ ತುಂಬಲಿದೆ ಎಂದು ಪ್ರಶಸ್ತಿ ಲಭಿಸಿದ ಕುಶಿಯನ್ನು ನಿರ್ದೇಶಕ ಚೇತನ್ ಮುಂಡಾಡಿ 'ವಾರ್ತಾಭಾರತಿ' ಯೊಂದಿಗೆ ಹಂಚಿಕೊಂಡರು.

 

Comments (Click here to Expand)