varthabharthi

ದಿಲ್ಲಿ ದರ್ಬಾರ್

ದಿಲ್ಲಿ ದರ್ಬಾರ್

ವಾರ್ತಾ ಭಾರತಿ : 16 Apr, 2017

ರಾಷ್ಟ್ರಪತಿ ಹುದ್ದೆಗೆ ಶರದ್ ಯಾದವ್?
ರಾಷ್ಟ್ರಪತಿ ಹುದ್ದೆಗೆ ಮತ್ತೆ ಹೊಸ ಹೆಸರು ಕೇಳಿ ಬರುತ್ತಿದೆ. ಇತ್ತೀಚಿನ ವದಂತಿಗಳ ಪ್ರಕಾರ, ಶರದ್ ಯಾದವ್ ಅವರು, ಸಂಘಟಿತ ವಿರೋಧ ಪಕ್ಷಗಳ ಅಭ್ಯರ್ಥಿಯಾಗಿ ಕಣಕ್ಕೆ ಧುಮುಕುತ್ತಾರೆ. ಬಿಜೆಪಿ, ಅದರಲ್ಲೂ ಮುಖ್ಯವಾಗಿ ನರೇಂದ್ರ ಮೋದಿ, ತಮ್ಮ ಇಷ್ಟಬಂದ ನಿರ್ದಿಷ್ಟ ವ್ಯಕ್ತಿಯನ್ನು ಆಯ್ಕೆ ಮಾಡುವುದನ್ನು ತಡೆಯುವುದು ಇದರ ಉದ್ದೇಶ ಎನ್ನಲಾಗಿದೆ. ಬಹುಶಃ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಅವರ ಹೆಸರನ್ನು ಮೋದಿ ಸೂಚಿಸುತ್ತಾರೆ ಎಂಬ ನಂಬಿಕೆ ವಿರೋಧ ಪಕ್ಷಗಳಲ್ಲಿದೆ. ಆಗ ಎಲ್ಲ ಪಕ್ಷಗಳಿಗೆ ‘ನೇತಾಜಿ’ ಅವರನ್ನು ಬೆಂಬಲಿಸದೇ ಅನ್ಯಮಾರ್ಗ ಉಳಿಯುವುದಿಲ್ಲ. ಆದರೆ ವಿರೋಧ ಪಕ್ಷಗಳ ಅಭಿಪ್ರಾಯದಂತೆ, ಶರದ್ ಯಾದವ್ ಅವರು, ಮುಲಾಯಂ ಅವರಿಗಿಂತ ಉತ್ತಮ ಅಭ್ಯರ್ಥಿ. ಮುಲಾಯಂ ಅವರ ಉಮೇದುವಾರಿಕೆಯನ್ನು ಹಿರಿಯ ಮುತ್ಸದ್ದಿಗಳಾದ ಎಲ್.ಕೆ. ಅಡ್ವಾಣಿ, ಯಶವಂತ ಸಿನ್ಹಾ ಹಾಗೂ ಶತ್ರುಘ್ನ ಸಿನ್ಹಾ ಕೂಡಾ ಮುಲಾಯಂ ಬದಲು ಶರದ್ ಯಾದವ್ ಅವರನ್ನೇ ಬೆಂಬಲಿಸುವ ಸಾಧ್ಯತೆ ಹೆಚ್ಚು ಎಂಬ ನಂಬಿಕೆ ಹಲವರಲ್ಲಿದೆ. ನಿತೀಶ್ ಕುಮಾರ್ ಅವರು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ ಎಂದು ಹೇಳಲಾಗಿದೆ. ಈ ತಂತ್ರಗಾರಿಕೆ ವಿಫಲವಾದಲ್ಲಿ ವಿರೋಧ ಪಕ್ಷಗಳು ಎರಡನೆ ಅವಧಿಗೆ ಪ್ರಣವ್ ಮುಖರ್ಜಿಯವರ ಹೆಸರನ್ನೇ ಪ್ರಸ್ತಾವಿಸುವ ಸಾಧ್ಯತೆ ಇದೆ. ಈ ಮಧ್ಯೆ ಶರದ್ ಯಾದವ್ ಮಾತ್ರ ಮಹಿಳಾ ಸಂಸದೆಯರಿಂದ ವಿರೋಧ ಎದುರಾಗುವ ಭೀತಿ ಎದುರಿಸುತ್ತಿದ್ದಾರೆ.

ಬಿಹಾರಿ ಭ್ರಾತೃತ್ವ
ಬಿಹಾದ ಮುಖ್ಯಮಂತ್ರಿ ನಿತೀಶ್ ಕುಮಾರ್, ರಾಷ್ಟ್ರೀಯ ಪ್ರಜಾಸತ್ತಾತ್ಮಕ ರಂಗ (ಎನ್‌ಡಿಎ) ಕಡೆ ವಾಲುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಮಹಾಘಟಬಂಧನ್‌ನ ಇನ್ನೊಂದು ಬಣದ ಮುಖಂಡ ಲಾಲೂ ಪ್ರಸಾದ್ ಯಾದವ್ ಇದನ್ನು ನಿರಾಕರಿಸುತ್ತಾರೆ. ಲಾಲೂ ಪ್ರಸಾದ್ ಯಾದವ್ ಅವರು ದಿಲ್ಲಿ ಮಹಾನಗರ ಪಾಲಿಕೆ ಚುನಾವಣೆ ಬಗ್ಗೆ ಚರ್ಚಿಸಲು ಇತ್ತೀಚೆಗೆ ನಿತೀಶ್ ಅವರನ್ನು ಭೇಟಿ ಮಾಡಿದ್ದರು ಎಂದು ತಿಳಿದುಬಂದಿದೆ, ಸಂಯುಕ್ತ ಜನತಾದಳದ 100ಕ್ಕೂ ಹೆಚ್ಚು ಮಂದಿ ಉಮೇದುವಾರರು ಈ ಚುನಾವಣೆಯಲ್ಲಿ ಕಣಕ್ಕೆ ಧುಮುಕಿದ್ದಾರೆ. ಈ ಹಿನ್ನೆಲೆಯಲ್ಲಿ ಲಾಲೂ ಕಣಕ್ಕೆ ಇಳಿಸಲು ಬಯಸಿದ್ದ ರಾಷ್ಟ್ರೀಯ ಜನತಾ ದಳದ 45 ಅಭ್ಯರ್ಥಿಗಳನ್ನು ಕಣದಿಂದ ಹಿಂದೆ ಸರಿಸಿದ್ದಾರೆ. ಈ ಕಾರಣದಿಂದ ಆರ್‌ಜೆಡಿಯ 15 ಮಂದಿ ಮಾತ್ರ ಕಣದಲ್ಲಿ ಉಳಿದಿದ್ದಾರೆ. ಅಂತೆಯೇ ಆರ್‌ಜೆಡಿ ಮುಖಂಡೆ ತೇಜಸ್ವಿನಿ ಯಾದವ್ ಅವರು ಜೆಡಿಯು ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲು ಕೂಡಾ ನಿರ್ಧರಿಸಿದ್ದಾರೆ. ದಿಲ್ಲಿಯಲ್ಲಿ ಸುಮಾರು 40 ಲಕ್ಷ ಪೂರ್ವಾಂಚಲ ಮೂಲದ ಮತದಾರರಿದ್ದಾರೆ. ಹಿಂದಿನ ಚುನಾವಣೆಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಇವರಿಗೆ ಗಾಳ ಹಾಕಿತ್ತು.

ಮೋದಿ ತೋರಿಸಿದ ಮಾರ್ಗ!
ಪ್ರಧಾನಿ ನರೇಂದ್ರ ಮೋದಿ ನಿಜವಾಗಿಯೂ ಸ್ವಚ್ಛಭಾರತದ ಪಥ ತುಳಿದಂತಿದೆ. ಕನಿಷ್ಠ ಪಕ್ಷ ಅವರು ಅವಕಾಶ ಸಿಕ್ಕಲ್ಲೆಲ್ಲ ಆ ಕಾಳಜಿ ವ್ಯಕ್ತಪಡಿಸುತ್ತಾರೆ. ಇತ್ತೀಚೆಗೆ ಇಂಥದ್ದೊಂದು ಕುತೂಹಲಕಾರಿ ಘಟನೆ ನಡೆಯಿತು. ಸಂಸತ್ ಭವನದಲ್ಲಿ ಇತ್ತೀಚೆಗೆ ನಡೆದ ಕೃತಿ ಬಿಡುಗಡೆ ಸಮಾರಂಭವೊಂದರಲ್ಲಿ ಕೃತಿ ಅನಾವರಣಗೊಳಿಸಿದ ಮೋದಿ, ಅದಕ್ಕೆ ಸುತ್ತಿದ್ದ ಬಣ್ಣದ ಕಾಗದವನ್ನು ಮಡಚಿ ತಮ್ಮ ಕುರ್ತಾ ಜೇಬಿಗೆ ಸೇರಿಸಿಕೊಂಡರು. ಈ ಅಂಶ ಲೋಕಸಭೆಯ ಸ್ಪೀಕರ್ ಹಾಗೂ ಕೃತಿಯ ಕರ್ತೃ ಸುಮಿತ್ರಾ ಮಹಾಜನ್ ಅವರ ಗಮನಕ್ಕೆ ಬಾರದಿರಲಿಲ್ಲ. ಸಂಸದೀಯ ವ್ಯವಹಾರಗಳ ಖಾತೆ ಸಚಿವ ಅನಂತ್ ಕುಮಾರ್ ಹಾಗೂ ಕೆಲ ಪ್ರೇಕ್ಷಕರ ಗಮನಕ್ಕೂ ಬಂತು. ಮಹಾಜನ್ ಹಾಗೂ ಅನಂತ್ ಕುಮಾರ್ ಜೋರಾಗಿ ನಕ್ಕರೆ, ಪ್ರೇಕ್ಷಕರು ಪ್ರಚಂಡ ಕರತಾಡನದ ಪ್ರತಿಕ್ರಿಯೆ ತೋರಿದರು. ಮೋದಿ ಎಲ್ಲರ ಗಮನ ಸೆಳೆದ ಖುಷಿಯಲ್ಲಿದ್ದರು.

ರಾಜ ಗರ್ವ
ರಾಜ ತಿರಸ್ಕಾರದಷ್ಟು ದೊಡ್ಡ ಕೋಪ ಮತ್ತೊಂದಿಲ್ಲ. ಯಶೋಧರ ರಾಜೇ ಸಿಂಧಿಯಾ ಬಹುಶಃ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ವೈಖರಿ ಬಗ್ಗೆ ಸಿಟ್ಟಾಗಿದ್ದಾರೆ. ಗ್ವಾಲಿಯರ್ ರಾಜಮನೆತನವಾದ ಸಿಂದಿಯಾ ಕುಟುಂಬದ ಬಗ್ಗೆ ಲಘುವಾಗಿ ಮಾತನಾಡಿದ್ದು ಇದಕ್ಕೆ ಕಾರಣ. ಬ್ರಿಟಿಷರ ಅನುಕೂಲಕ್ಕಾಗಿ ಸಿಂದಿಯಾ ಮನೆತನದವರು ಜನರನ್ನು ಹತ್ತಿಕ್ಕಿದ್ದರು ಎಂದು ಹೇಳುವ ಮೂಲಕ ಚೌಹಾಣ್ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಚೌಹಾಣ್ ವಾಸ್ತವವಾಗಿ ಗುರಿಮಾಡಿದ್ದು, ಗುಣಾ ಕ್ಷೇತ್ರದ ಕಾಂಗ್ರೆಸ್ ಸಂಸದ ಜ್ಯೋತಿರಾದಿತ್ಯ ಸಿಂದಿಯಾ ಅವರನ್ನು. ಅತೇರ್ ಮತ್ತು ಭಿಂದ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಸಿಂದಿಯಾ ಪ್ರಚಾರ ಕೈಗೊಂಡಿದ್ದ ವೇಳೆ ಚೌಹಾಣ್ ಈ ಹೇಳಿಕೆ ನೀಡಿದ್ದರು. ಆದರೆ ಯಶೋಧರಾ, ಈ ಅಭಿಪ್ರಾಯವನ್ನು ತೀರಾ ಗಂಭೀರವಾಗಿ ಪರಿಗಣಿಸಿದ್ದಾರೆ. ಇವರು ತಮ್ಮ ತಾಯಿ ಹಾಗೂ ಬಿಜೆಪಿ ಸಂಸ್ಥಾಪಕ ಸದಸ್ಯೆ ವಿಜಯರಾಜೇ ಸಿಂಧಿಯಾ, ಪಕ್ಷಕ್ಕೆ ನಿಧಿ ಹೊಂದಿಸುವ ಸಲುವಾಗಿ ತಮ್ಮ ಆಭರಣಗಳನ್ನು ಹೇಗೆ ಮಾರಾಟ ಮಾಡಿದ್ದರು ಎನ್ನುವುದನ್ನು ನೆನಪಿಸಿದ್ದಾರೆ. ದಿವಂಗತ ರಾಜಮಾತೆಯನ್ನು ನಾನು ಗೌರವಿಸುತ್ತೇನೆ; ಆಕೆ ಪಕ್ಷದ ಎಲ್ಲ ಕಾರ್ಯಕರ್ತರಿಗೆ ಹಾಗೂ ವೈಯಕ್ತಿಕವಾಗಿ ನನಗೆ ಮಾತೃಸ್ವರೂಪಿ ಎಂದು ಚೌಹಾಣ್ ಬಣ್ಣಿಸಿದ್ದಾರೆ. ಇಷ್ಟಾಗಿಯೂ ಯಶೋಧರಾ ಇದರಿಂದ ತೃಪ್ತರಾಗಿಲ್ಲ. ಈ ವಿಚಾರವನ್ನು ಅಮಿತ್ ಶಾ ಬಳಿಗೆ ಒಯ್ಯಲು ಅವರು ನಿರ್ಧರಿಸಿದ್ದಾರೆ.

ಇವಿಎಂ: ಸಿಬಲ್ ತಬ್ಬಿಬ್ಬು
ಇಲೆಕಾ್ಟ್ರನಿಕ್ ವೋಟಿಂಗ್ ಮಿಷನ್ ಸವಾಲು ಆಮ್ ಆದ್ಮಿ ಪಕ್ಷ, ಕಾಂಗ್ರೆಸ್ ಹಾಗೂ ಬಿಎಸ್ಪಿ ನಡುವೆ ಹೊಸ ಸಂಬಂಧ ಬೆಸೆದಿದೆ. ಸುಪ್ರೀಂಕೋರ್ಟ್ ಮುಂದೆ ಕೂಡಾ. ಕಾಗದ ದೃಢೀಕರಣ ಹೊರತಾದ ಇವಿಎಂ ಬಳಕೆ ವಿರುದ್ಧದ ಕಾನೂನು ಸಮರದಲ್ಲಿ, ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮುತ್ಸದ್ದಿ ವಕೀಲ ಕಪಿಲ್ ಸಿಬಲ್, ‘‘ಹಲವು ದೇಶಗಳು ಮತಪತ್ರ ಆಧರಿತ ಚುನಾವಣೆಗೇ ಮರಳಿವೆ’’ ಎಂದು ಸುಪ್ರೀಂಕೋರ್ಟ್ ನಲ್ಲಿ ಹೇಳಿದ್ದಾರೆ. ‘‘ಇದೀಗ ಜಗತ್ತಿನಲ್ಲಿ ಒಂದು ದೇಶ ಹೊರತುಪಡಿಸಿ, ಉಳಿದೆಲ್ಲವೂ ಈ ಬಗೆಯ ಇವಿಎಂ ಬಳಸುತ್ತಿವೆ’’ ಎಂದು ಸಿಬಲ್ ಹೇಳಿದ್ದಾರೆ. ನ್ಯಾಯಮೂರ್ತಿ ಜೆ.ಚೆಲಮೇಶ್ವರ ನೇತೃತ್ವದ ನ್ಯಾಯಪೀಠ, ‘‘ನಿಮ್ಮ ಸರಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಇವಿಎಂ ಆರಂಭಿಸಿದ್ದಲ್ಲವೇ?’’ ಎಂದು ಈ ಸಂದರ್ಭದಲ್ಲಿ ಕೆಣಕಿದರು. ಇದಕ್ಕೆ ಸಿಬಲ್ ಬಳಿ ಉತ್ತರ ಇರದೆ, ನುಣುಚಿಕೊಂಡರು. ಆದರೆ ಇವಿಎಂ ವಿರೋಧಿಸುವಾಗ ಹೀಗೆ ನುಣುಚಿಕೊಳ್ಳುವುದು ಈ ಪಕ್ಷಗಳಿಗೆ ಕಷ್ಟ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)