varthabharthi

ನೇಸರ ನೋಡು

ಕಲಿಕೆಮಟ್ಟ ಹೆಚ್ಚಿಸುವ ಕಸರತ್ತು

ವಾರ್ತಾ ಭಾರತಿ : 16 Apr, 2017
ಜಿ.ಎನ್.ರಂಗನಾಥ ರಾವ್

‘ಕೂಸು ಹುಟ್ಟುವ ಮೊದಲು ಕುಲಾವಿ ಹೊಲಿಸಿದರು’ ಎಂಬ ನಾಣ್ನುಡಿಯಂತೆ ಕೇಂದ್ರ ಮಾನವ ಸಂಪನ್ಮೂಲ ಶಾಖೆ, ನೀತಿ ಆಯೋಗದ ಸಲಹೆಯಂತೆ ಭಾರತದಲ್ಲಿನ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಲ್ಲಿನ ಕಲಿಕೆಯ ಗುಣಮಟ್ಟದ ಫಲಿತಾಂಶದ ಅಧ್ಯಯನ ಕಾರ್ಯವನ್ನು ಆಸ್ಟ್ರೇಲಿಯಾದ ಶೈಕ್ಷಣಿಕ ಸಂಶೋಧನಾ ಮಂಡಳಿಗೆ ವಹಿಸಲಿದೆಯಂತೆ. ಆಸ್ಟ್ರೇಲಿಯಾದ ಈ ಮಂಡಳಿಗೆ ಭಾರತದ ಶಾಲೆಗಳಲ್ಲಿನ ಕಲಿಕಾ ಮಟ್ಟದ ಫಲಿತಾಂಶದ ಮಾದರಿ ಸಮೀಕ್ಷೆ ನಡೆಸುವ ಕಾರ್ಯ ವಹಿಸಬೇಕೆಂಬ ನೀತಿ ಆಯೋಗದ ಸಲಹೆಯ ಮರ್ಮವೇನೋ ತಿಳಿಯದು. ಆದರೆ ಕಲಿಕೆಯ ಗುಣಮಟ್ಟದ ಫಲಿತಾಂಶ ಪಡೆಯಲು ಬೇಕಾದ ಸೌಲಭ್ಯಸೌಕರ್ಯಗಳ ಅಗತ್ಯವನ್ನು ಮನದಟ್ಟುಮಾಡಿಕೊಡಲು ಆಸ್ಟ್ರೇಲಿಯಾದ ತಜ್ಞರೇ ಬೇಕಾಗಿಲ್ಲ.


ಕಲಿಯುವುದಕ್ಕೆ ಕೊನೆಯೆಂಬುದಿಲ್ಲ. ಎಂದೇ ಶಿಕ್ಷಣವೆಂಬುದು ನಿರಂತರವಾಗಿ ನಡೆಯುವ ಪ್ರಕ್ರಿಯೆ. ಶಾಲಾಕಾಲೇಜು ಶಿಕ್ಷಣ ಕಲಿಯುವಿಕೆಯ ಒಂದು ಘಟ್ಟವಾದರೆ, ಮುಂದಿನ ಜೀವನ ಶಿಕ್ಷಣದಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಮಾನವರು ಜೀವನ ಪಾಠ ಕಲಿಯುತ್ತಲೇ ಇರುತ್ತಾರೆ. ಶಾಲಾಕಾಲೇಜು ಶಿಕ್ಷಣ ಅನಂತಾನಂತವಾದ ಜೀವನ ಶಿಕ್ಷಣಕ್ಕೆ ಬುನಾದಿಯಿದ್ದಂತೆ. ಈ ಬುನಾದಿ ಸರಿಯಿದ್ದರೆ ಜೀವನ ಶಿಕ್ಷಣದ ಸವಾಲುಗಳನ್ನು ಎದುರಿಸುವ ನೈತಿಕತೆ ಮತ್ತು ಸಾಮರ್ಥ್ಯಗಳು ತಾವಾಗಿ ಬೆಳೆಯುತ್ತವೆ. ಶಾಲಾ ಶಿಕ್ಷಣದ ಬುನಾದಿ ಸರಿಯಾಗಿದೆಯೇ ಎಂಬುದನ್ನು ತಿಳಿಯಲು ನಮ್ಮ ಶಿಕ್ಷಣ ವ್ಯವಸ್ಥೆ ರೂಪಿಸಿರುವ ಒಂದು ಮಾನದಂಡ ಪರೀಕ್ಷೆಗಳು. ವಿದ್ಯಾರ್ಥಿಗಳನ್ನು ಅಳೆಯುವ ಈ ಮಾನದಂಡ ಸರಿಯಿಲ್ಲ, ನಮ್ಮ ಪ್ರಾಥಮಿಕ ಶಿಕ್ಷಣದ ಗುಣಮಟ್ಟ ಸಾಲದು ಎನ್ನುವ ಮಾತು ಪದೇಪದೇ ಸಾರ್ವಜನಿಕ ವಲಯಗಳಲ್ಲಿ ಕೇಳಿಬರುತ್ತಲೇ ಇದೆ. ಒಂದನೆ ತರಗತಿಯಿಂದ ಎಂಟನೆ ತರಗತಿವರೆಗಿನ ವಿದ್ಯಾರ್ಥಿಗಳ ಕಲಿಯುವಿಕೆಯ ಮಟ್ಟ ಇಳಿಮುಖವಾಗುತ್ತಿದೆ ಎಂದು ಹಲವಾರು ಸಮಿತಿಗಳು ಹಿಂದೆಲ್ಲ ಸರಕಾರಕ್ಕೆ ವರದಿ ಸಲ್ಲಿಸಿರುವುದುಂಟು.

 ಕೇಂದ್ರ ಸರಕಾರ ಈ ವಿಷಯದಲ್ಲಿ ಈಗ ಕಾರ್ಯೋನ್ಮುಖವಾಗಿದ್ದು ವಿದ್ಯಾರ್ಥಿಗಳ ಕಲಿಕೆಯ ಮಟ್ಟ ಹೆಚ್ಚಿಸಲು ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಕೆಲವೊಂದು ಗುರಿಗಳನ್ನು ರೂಪಿಸಿದೆ. ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಪ್ರತಿಯೊಂದು ವಿಷಯದಲ್ಲೂ ಕನಿಷ್ಠಮಟ್ಟದ ಜ್ಞಾನವನ್ನಾದರೂ ಹೊಂದಿರಬೇಕು. ಶೈಕ್ಷಣಿಕ ವರ್ಷಾಂತ್ಯದ ವೇಳೆಗೆ ಪ್ರತೀ ವಿದ್ಯಾರ್ಥಿಯೂ ಪಠ್ಯಕ್ರಮದಲ್ಲಿನ ಪ್ರತೀ ವಿಷಯದಲ್ಲೂ ಕನಿಷ್ಠಮಟ್ಟದ ಜ್ಞಾನಾರ್ಜನೆ ಮಾಡುವಂತೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವುದು ಮೇಷ್ಟ್ರುಗಳ ಹೊಣೆ ಎನ್ನುತ್ತದೆ ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಸಚಿವ ಶಾಖೆ. ಇದನ್ನು ಕಾನೂನುಬದ್ಧಗೊಳಿಸಲು ಮಕ್ಕಳ ಶೈಕ್ಷಣಿಕ ಹಕ್ಕು ಮತ್ತು ಕಡ್ಡಾಯ ಶಿಕ್ಷಣ ನಿಯಮಾವಳಿಗೆ ಎರಡು ಹೊಸ ವಿಧಿಗಳನ್ನು ಸೇರಿಸುವ ಮೂಲಕ ತಿದ್ದುಪಡಿ ಮಾಡಲಾಗಿದೆ.

 ಪರಿಷ್ಕೃತ ನಿಯಮಾವಳಿ ಪ್ರಕಾರ ರಾಜ್ಯ ಸರಕಾರಗಳು 2017-18ನೆ ಶೈಕ್ಷಣಿಕ ವರ್ಷದಿಂದ ಪ್ರತಿಯೊಂದು ತರಗತಿಗೂ ವಿಷಯಾನುಸಾರವಾಗಿ ಕನಿಷ್ಠಮಟ್ಟದ ಕಲಿಕಾ ಜ್ಞಾನದ ಫಲಿತಾಂಶಾವನ್ನು ಗೊತ್ತ್ತುಪಡಿಸಬೇಕಾಗಿದೆ. ಜೊತೆಗೆ ಪರೀಕ್ಷೆ ಮತ್ತು ವಿದ್ಯಾರ್ಥಿಗಳ ಮೌಲ್ಯಮಾಪನಕ್ಕೆ ಸಂಬಂಧಿಸಿದ ಮಾರ್ಗದರ್ಶಿ ಸೂತ್ರಗಳನ್ನೂ ಪರಿಷ್ಕರಿಸಬೇಕಾಗಿದೆ. ಶಿಕ್ಷಣ ಹಕ್ಕು ಕಾಯ್ದೆಗೆ ಮಾಡಿರುವ ತಿದ್ದುಪಡಿಗಳನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಕರು ತರಗತಿಗಳನ್ನು ನಡೆಸುವಂತೆ ಹಾಗೂ ವಿದ್ಯಾರ್ಥಿಗಳ ಮೌಲ್ಯಮಾಪನ ಮಾಡುವಂತೆ ಕೇಂದ್ರ ಮಾನವ ಸಂಪನ್ಮೂಲ ಸಚಿವ ಶಾಖೆ ರಾಜ್ಯ ಸರಕಾರಗಳಿಗೆ ಆದೇಶಿಸಿದೆ. ಪ್ರಾಥಮಿಕ ಶಿಕ್ಷಣದಲ್ಲಿ ಇದೊಂದು ಗಮನಾರ್ಹ ಹೆಜ್ಜೆಯೇ ಸರಿ. ಪ್ರಾಥಮಿಕ ತರಗತಿಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳ ಕಲಿಕೆಯನ್ನು ನಿಕಟವಾಗಿ ಗಮನಿಸಬೇಕಾದ ಹಾಗೂ ವೈಯಕ್ತಿಕ ಮುತುವರ್ಜಿಯಿಂದ ಸೂಕ್ತ ಮಾರ್ಗದರ್ಶನ ನೀಡಬೇಕಾದ ಅಗತ್ಯವನ್ನು ಯಾರೂ ಅಲ್ಲಗಳೆಯಲಾರರು. ಆದರೆ ಮುಖ್ಯವಾಗಿ ಇಂಥದೊಂದು ಕ್ರಮ ಶಿಕ್ಷಕರ ತರಬೇತಿಯಿಂದಲೇ ಶುರುವಾಗಬೇಕಾಗುತ್ತದೆ.

ಏಕೆಂದರೆ ಎಷ್ಟೂ ಸಂದರ್ಭಗಳಲ್ಲಿ ಮಕ್ಕಳಿಗೆ ಯಾವರೀತಿಯ ಕಲಿಕೆ ಅಗತ್ಯ ಎಂಬುದರ ಅರಿವು ಶಿಕ್ಷಕರಿಗಿರುವುದಿಲ್ಲ. ಪಠ್ಯಪುಸ್ತಕಗಳೇ ಅವರ ಸಕಲ ಬೋಧನಾ ಮತ್ತು ಪರೀಕ್ಷಾ ಸಾಮಗ್ರಿ. ಇಲ್ಲಿಯವರೆಗೆ ನಡೆದುಬಂದಿರುವ ಕ್ರಮವೆಂದರೆ ಪಠ್ಯಕ್ರಮ ಮತ್ತು ಅದರಲ್ಲಿನ ಪ್ರಶ್ನೆಗಳೇ ವಿದ್ಯಾರ್ಥಿಗಳ ಮೌಲ್ಯಮಾಪನಕ್ಕೆ ಮಾನದಂಡವಾಗಿರುವುದು. ವಿದ್ಯಾರ್ಥಿಗಳ ಸಮಗ್ರ ಮೌಲ್ಯಮಾಪನಕ್ಕೆ ಸ್ಪಷ್ಟವಾದ ಮಾನದಂಡಗಳಿಲ್ಲದಿರುವುದರಿಂದ ಶಿಕ್ಷಕರು ಪಠ್ಯಕ್ರಮ ಮತ್ತು ಅದರಲ್ಲಿನ ಪ್ರಶ್ನೋತ್ತರಗಳ ಆಧಾರದ ಮೇಲೆಯೇ ವಿದ್ಯಾರ್ಥಿಗಳ ಕಲಿ ಮತ್ತು ಜ್ಞಾನಾರ್ಜನೆ ಸಾಮರ್ಥ್ಯದ ಮೌಲ್ಯಮಾಪನ ಮಾಡುತ್ತಿದ್ದಾರೆ. ಪ್ರತೀ ವಿಷಯದಲ್ಲೂ ವಿದ್ಯಾರ್ಥಿಗಳ ಕಲಿಕಾಸಾಮರ್ಥ್ಯ ಮಟ್ಟವನ್ನು ಗುರುತಿಸಬೇಕೆನ್ನುವ ಹೊಸ ನಿಯಮಾವಳಿಯ ಪ್ರಕಾರ ಶಿಕ್ಷಕರು ಸಾಂದರ್ಭಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಕಲಿಸುವ ಕ್ರಮವನ್ನು ರೂಪಿಸಿಕೊಳ್ಳಬಹುದಾಗಿದೆ. ಹಾಗೆಯೇ ಸಮಾಜದ ಎಲ್ಲ ವರ್ಗ, ಸಮುದಾಯಗಳ ವಿದ್ಯಾರ್ಥಿಗಳಿರುವ ತರಗತಿಗಳಲ್ಲಿ ವಿದ್ಯಾರ್ಥಿಗಳ ಅಗತ್ಯಾನುಸಾರವಾಗಿ ವಿವಿಧ ಬಗೆಯ ಕಲಿಕೆಯ ಅವಕಾಶಗಳನ್ನು ಕಲ್ಪಿಸಬಹುದಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳ ಪ್ರಗತಿಯನ್ನು ಹಾಗೂ ಕಲಿಕೆಯಲ್ಲಿನ ಅವರ ಅಂತರವನ್ನು, ಕೊರತೆಗಳನ್ನು ಗುರುತಿಸುವುದು ಸಾಧ್ಯವಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆಯಲ್ಲಿ ವಿಷಯಾನುಸಾರ ಕನಿಷ್ಠ ಕಲಿಕೆಯ ಫಲಿತಾಂಶವನ್ನು ಅಡಕಗೊಳಿಸುವುದರಿಂದ ಪ್ರಾಥಮಿಕ ಶಿಕ್ಷಣದ ಗುಣಮಟ್ಟ ಸುಧಾರಿಸುವುದು ಹಾಗೂ ಶಿಕ್ಷಣ ವ್ಯವಸ್ಥೆಯನ್ನು ಇದಕ್ಕೆ ಉತ್ತರದಾಯಿಯಾಗಿಸುವುದು ಮಾನವ ಸಂಪನ್ಮೂಲ ಸಚಿವ ಶಾಖೆಯ ಆಶಯ. ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಕುರಿತ ರಾಷ್ಟ್ರೀಯ ಮಂಡಳಿ ಗೊತ್ತುಪಡಿಸಿರುವ ವಿಷಯಾನುಸಾರ ಕನಿಷ್ಠ ಕಲಿಕಾ ಮಟ್ಟದ ಫಲಿತಾಂಶದ ರೂಪುರೇಖೆಗಳನ್ನು ಕೇಂದ್ರ ಮಾಧ್ಯಮಿಕ ಶಿಕ್ಷಣಾ ಮಂಡಲಿ (ಸಿಬಿಎಸ್‌ಇ)ಒಪ್ಪಿಕೊಂಡಿದ್ದು ತನ್ನ ಆಡಳಿತ ವ್ಯಾಪ್ತಿಯೊಳಗಣ ಸುಮಾರು ಹದಿನೆಂಟು ಸಾವಿರ ಶಾಲೆಗಳಲ್ಲಿ ವಿಷಯಾನುಸಾರವಾದ ಕನಿಷ್ಠಕಲಿಕಾ ಮಾದರಿಯ ವ್ಯಾಸಂಗಕ್ರಮವನ್ನು ಅನುಷ್ಠಾನಕ್ಕೆ ತರಲಿದೆ. ಇಲ್ಲಿಯವರೆಗೆ ಇವೆಲ್ಲ ಸರಿಯಾದ ಆಲೋಚನೆಯೇ ಇರಬೇಕು ಎನ್ನಿಸುತ್ತದೆ. ಆದರೆ ಅನುಷ್ಠಾನದ ಹಂತಕ್ಕೆ ಬಂದಾಗ ಅದರ ಕಾರ್ಯಸಾಧ್ಯತೆ ಕುರಿತು ಅನುಮಾನಗಳು ಹುಟ್ಟುತ್ತವೆ. ಏಕೆಂದರೆ ಬಹುತೇಕ ಶಾಲೆಗಳು ರಾಜ್ಯ ಸರಕಾರಗಳ ವ್ಯಾಪ್ತಿಯಲ್ಲಿದ್ದು ಕನಿಷ್ಠ ಕಲಿಕಾಮಟ್ಟವನ್ನು ಅಳತೆಗೋಲಾಗುಳ್ಳ ಹೊಸ ಕಲಿಕಾ ಕ್ರಮದ ಅನುಷ್ಠಾನದ ಸಮಸ್ಯೆ ಅಲ್ಲಿಂದಲೇ ಶುರುವಾಗುತ್ತದೆ.

ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಪದ್ಧತಿಯಲ್ಲಿ ಮುಖ್ಯವಾಗಿ ಕಾಣುವ ಸಮಸ್ಯೆ ಎಂದರೆ ಶಿಕ್ಷಕರದು. ಒಂದು ಅಂದಾಜಿನ ಪ್ರಕಾರ ಸುಮಾರು ಒಂಬತ್ತು ಲಕ್ಷ ಶಿಕ್ಷಕರ ಹುದ್ದೆಗಳು ಭರ್ತಿಯಾಗದೆ ಖಾಲಿಬಿದ್ದಿವೆ. ಹದಿನೇಳಕ್ಕೂ ಹೆಚ್ಚು ರಾಜ್ಯಗಳ ಶಾಲೆಗಳಲ್ಲಿ ತರಬೇತಿ ಪಡೆಯದ ಶಿಕ್ಷಕರು ಬೋಧಿಸುತ್ತಿದ್ದಾರೆ. ಕೆಲವು ರಾಜ್ಯಗಳಲ್ಲಂತೂ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಲ್ಲಿ ತರಬೇತಿ ಪಡೆದ ಶಿಕ್ಷಕರಿಗಿಂತ ತರಬೇತಿ ಪಡೆಯದ ಶಿಕ್ಷಕರ ಸಂಖ್ಯೆಯೇ ಹೆಚ್ಚಾಗಿದೆ. ಇಂಥ ಪರಿಸ್ಥಿತಿಯಲ್ಲಿ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ ನಿಗದಿಪಡಿಸಿರುವ ಕಲಿಕಾ ಮಟ್ಟದ ಫಲಿತಾಂಶ ಸಾಧಿಸುವುದು ಸಾಧ್ಯವಾದೀತೆ ಎನ್ನುವ ಸಂಶಯ ಮೂಡದೇ ಇರದು. ಏಕೆಂದರೆ ಇದನ್ನು ಸಾಧಿಸಲು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವೆ ಹೆಚ್ಚಿನ ಅನುಸಂಧಾನ ಅಗತ್ಯವಾಗುತ್ತದೆ. ಮಂಡಳಿ ಸೂಚಿಸಿರುವಂತೆ ಬೋಧನಾ ಕ್ರಮ ವಿದ್ಯಾರ್ಥಿ ಕೇಂದ್ರಿತವಾಗಿರಬೇಕು. ಶಿಕ್ಷಕರು ವಿದಾರ್ಥಿಗಳ ಕಲಿಕೆಯ ಮಟ್ಟ ಗುರುತಿಸಿ ಸುಧಾರಣೆಯುಂಟುಮಾಡಲು ಪ್ರತಿಯೊಬ್ಬ ವಿದ್ಯಾರ್ಥಿಯ ಶಿಕ್ಷಣದಲ್ಲೂ ವೈಯಕ್ತಿಕ ಮುತುವರ್ಜಿ ವಹಿಸಬೇಕಾಗುತ್ತದೆ.

ಉಪಾಧ್ಯಾಯರು ಪ್ರತಿಯೊಬ್ಬ ವಿದ್ಯಾರ್ಥಿಯ ಕಲಿಕೆ ಬಗ್ಗೆ ವೈಯಕ್ತಿಕ ನಿಗಾವಹಿಸಬೇಕೆಂಬುದೇನೋ ಸ್ವಾಗತಾರ್ಹವಾದುದೇ. ಇದರಿಂದಾಗಿ ವಿದ್ಯಾರ್ಥಿಗಳ ಆಸಕ್ತಿ, ಅಭಿರುಚಿ ತಿಳಿದು ಅದರನ್ವಯ ಬೋಧನೆಯಲ್ಲಿ, ಪೂರಕಪಠ್ಯಗಳ ಆಯ್ಕೆಯಲ್ಲಿ ಸಹಾಯವಾಗುತ್ತದೆ. ಉದ್ಯೋಗ-ಉನ್ನತ ವ್ಯಾಸಂಗಗಳಿಗೆ ಸಂಬಂಧಿಸಿದಂತೆ ಭವಿಷ್ಯದ ಬಗ್ಗೆಯೂ ಮಾರ್ಗದರ್ಶನ ಮಾಡಲೂ ಅನುಕೂಲವಾಗುತ್ತದೆ. ಒಟ್ಟಾರೆಯಾಗಿ ವಿದ್ಯಾರ್ಥಿಗಳ ಕಲಿಕೆ ಮಟ್ಟ ಸುಧಾರಣೆಯಲ್ಲಿ ಉತ್ತಮ ಫಲಿತಾಂಶವೂ ಸಾಧ್ಯ. ಆದರೆ ನಮ್ಮಲ್ಲಿರುವ ತರಬೇತಿ ಪಡೆದ ಶಿಕ್ಷಕರ ಕೊರತೆ ಪರಿಸ್ಥಿತಿಯನ್ನು ಗಮನಿಸಿದಾಗ ಇದು ಕಾರ್ಯಸಾಧ್ಯವೇ ಎಂಬ ಸಂದೇಹ ಉಂಟಾಗುತ್ತದೆ.

ಬೋಧನೆಯ ಹಂತದಲ್ಲಿ ಶಿಕ್ಷಕರು ಪ್ರತಿಯೊಬ್ಬ ವಿದಾರ್ಥಿಗೂ ವೈಯಕ್ತಿಕ ನಿಗಾ ಕೊಡಬೇಕು ಎನ್ನುವುದಾದರೆ ಶಿಕ್ಷಕರು ಪರಿಣಿತರಷ್ಟೇ ಆಗಿದ್ದರೆ ಸಾಲದು. ಅವರು ಕಲಿಕೆಯಲ್ಲಿ ಹಿಂದೆಬಿದ್ದರುವ ವಿದ್ಯಾರ್ಥಿಗಳ ಬಗ್ಗೆ ಸೂಕ್ಷ್ಮ ಸಂವೇದನಾಶೀಲರಾಗಿರಬೇಕಾಗುತ್ತದೆ. ಕಲಿಕೆಯಲ್ಲಿ ಹಿಂದುಳಿದ ವಿದಾರ್ಥಿಗಳನ್ನು ಇತರ ವಿದ್ಯಾರ್ಥಿಗಳಿಗೆ ಸರಿಗಟ್ಟುವಂತೆ ತರಬೇತುಗೊಳಿಸಲು, ವಿದ್ಯಾರ್ಥಿಗಳ ಮನಸ್ಸನ್ನು ಆಕರ್ಷಿಸುವಂಥ ನವನವೀನ ಕಲ್ಪನೆಗಳು, ಸಂಯಮ ಮತ್ತು ತರಬೇತಿ ಇವೆಲ್ಲವನ್ನೂ ಹೊಂದಿರುವ ಶಿಕ್ಷಕರೇ ಬೇಕಾಗುತ್ತದೆ. ತರಬೇತಿ ಇಲ್ಲದ ಶಿಕ್ಷಕರಿಗೆ ತರಬೇತಿಯ ಸೌಲಭ್ಯ ಒದಗಿಸುವುದರಲ್ಲೇ ಉದಾಸೀನ ಮನೋಭಾವ ಹೊಂದಿರುವ ರಾಜ್ಯ ಸರಕಾರಗಳು, ತರಗತಿಗಳಲ್ಲಿ ನವನವೀನ ಕಲ್ಪನೆಗಳಿಗೆ ಎಡೆಮಾಡಿಕೊಡುವಂಥ ಸೃಜನಶೀಲ ಪರಿಸರವನ್ನು ಸೃಷ್ಟಿಸುವುದರಲ್ಲಿ ಎಷ್ಟರಮಟ್ಟಿನ ಆಸಕ್ತಿ/ಕಾಳಜಿ ತೋರಬಹುದು?

ನಮ್ಮ ಶಿಕ್ಷಣದ ಗುಣಮಟ್ಟ ಉತ್ತಮಗೊಳ್ಳಬೇಕು, ನಮ್ಮ ವಿದ್ಯಾರ್ಥಿಗಳು ಜ್ಞಾನಾರ್ಜನೆಯಲ್ಲಿ ಹಿಂದೆಬೀಳಬಾರದು ಎಂಬುದರಲ್ಲಿ ಎರಡು ಅಭಿಪ್ರಾಯವಿರಲಾರದು. ಈ ನಿಟ್ಟನಲ್ಲಿ ಕೇಂದ್ರ ಮಾನವ ಸಂಪನ್ಮೂಲ ಸಚಿವ ಶಾಖೆಯ ಪ್ರಯತ್ನಗಳು ಸ್ತುತ್ಯಾರ್ಹವಾದವು. ದೇಶದಲ್ಲಿನ 200 ದಶಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಏನನ್ನು ಕಲಿಯುತ್ತಿದ್ದಾರೆ, ಅವರ ಕಲಿಕೆಯ ಮಟ್ಟ ಹೇಗಿದೆ? ಇದರ ಫಲಿತಾಂಶ ಎಷ್ಟರಮಟ್ಟಿಗೆ ಆಶಾದಾಯಕವಾಗಿದೆ? ಇದನ್ನೆಲ್ಲ ತಿಳಿಯಲು, ಹೊಸ ಎಲ್ಲೆ-ಮಿತಿಗಳ ಮಾನದಂಡದಲ್ಲಿ ಅಳೆದು ನೋಡಿ ಕಲಿಕೆಯ ಮಟ್ಟದ ಫಲಿತವನ್ನು ಗೊತ್ತುಪಡಿಸಬೇಕೆಂಬ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ ಕಾರ್ಯೋತ್ಸಾಹವೂ ಮೆಚ್ಚುವಂಥಾದ್ದೆ. ಆದರೆ ನೆಲದ ಮೇಲಣ ವಾಸ್ತವಿಕತೆಗಳು ಇಂಥ ಆಶಯಗಳ ಪ್ರಯೋಗಕ್ಕೆ ಅನುಕೂಲಕರವಾಗಿದೆಯೇ? ಈ ಪ್ರಶ್ನೆಗೆ ‘ಇಲ್ಲ’ಎನ್ನುವುದೇ ಕಟು ವಾಸ್ತವದ ಉತ್ತರವಾದೀತು.

ನಮ್ಮ ದೇಶದಲ್ಲಿನ ಶಿಕ್ಷಣದ ಗುಣಮಟ್ಟ, ವಿಶೇಷವಾಗಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣದ ಗುಣಮಟ್ಟದಲ್ಲಿ ಸುಧಾರಣೆಯಾಗಬೇಕು ಎಂಬುದರಲ್ಲಿ ಯಾರ/ಯಾವ ತಕರಾರೂ ಇರಲಾರದು. ಮಕ್ಕಳ ಮುಕ್ತ ಶಿಕ್ಷಣದ ಹಕ್ಕು ಹಾಗೂ ಕಡ್ಡಾಯ ಶಿಕ್ಷಣದ ಹಕ್ಕು ಶಾಸನ ಸೂಕ್ತರೀತಿಯಲ್ಲಿ ಅನುಷ್ಠಾನಕ್ಕೆ ಬರಬೇಕಾಗಿದೆ. ಇದನ್ನು ಜಾರಿಗೆ ತರಲು ಅಗತ್ಯವಾದ ಸೂಕ್ತ ಪರಿಸರವನ್ನೂ ನಮ್ಮ ಸರಕಾರ ರೂಪಿಸಬೇಕಾಗಿದೆ. ಸೂಕ್ತ ಪರಿಸರ ಎಂದರೆ, ಮುಖ್ಯವಾಗಿ ಸುಸಜ್ಜಿತ ಶಾಲಾ ಕಟ್ಟಡ, ತರಗತಿಯ ಕೊಠಡಿಗಳು, ಶೌಚಾಲಯಗಳು, ಸಸ್ಯಶ್ಯಾಮಲೆಯನ್ನೊಳಗೊಂಡ ಆವರಣ, ಆಟದ ಬಯಲು ಮತ್ತು ಇನ್ನೂ ಮುಖ್ಯವಾಗಿ ಮಕ್ಕಳ ಮನಸ್ಸನ್ನು ಅರಿತು ಬೋಧಿಸಲು ತರಬೇತಿ ಪಡೆದ ಸಮರ್ಥ ಶಿಕ್ಷಕರು-ಇವಿಷ್ಟೂ ಪ್ರಾಥಮಿಕ/ಮಾಧ್ಯಮಿಕ ಶಿಕ್ಷಣದ ಕನಿಷ್ಠ ಅಗತ್ಯಗಳು. ಈ ಕನಿಷ್ಠ ಅಗತ್ಯಗಳು ನಮ್ಮ ದೇಶದ ಗ್ರಾಮೀಣ ಪ್ರದೇಶದ ಎಷ್ಟು ಶಾಲೆಗಳಲ್ಲಿವೆೆ? ಗ್ರಾಮೀಣ ಪ್ರದೇಶಗಳಲ್ಲಿನ ಶಾಲೆಗಳಲ್ಲಿ ತರಬೇತಿ ಪಡೆದ ಶಿಕ್ಷಕರ ನೇಮಕವಾಗಬೇಕು, ಈ ಶಿಕ್ಷಕರ ಬೋಧನಾಕ್ರಮ ಮತ್ತು ರೀತಿ ಸಮರ್ಪಕವಾಗಿದೆಯೇ ಎಂದು ಅಳೆದುನೋಡುವ ತಜ್ಞ್ಞರಿರಬೇಕು.

ಶಿಕ್ಷಕರ ಕೆಲಸ ಮತ್ತು ವರ್ಗಾವಣೆಗಳಲ್ಲಿ ಸ್ಥಳೀಯ ರಾಜಕಾರಣ, ಜಾತಿ ರಾಜಕಾರಣ ಪ್ರವೇಶಿಸಬಾರದು. ಇದೆಲ್ಲ ಪ್ರಥಮ ಆದ್ಯತೆಯ ಮೇಲೆ ಆಗಬೇಕಾದ ಕೆಲಸ. ಇದೆಲ್ಲವನ್ನೂ ಪೂರೈಸಿದನಂತರ ಕಲಿಕೆಯ ಮಟ್ಟದ ನಿರೀಕ್ಷಿತ ಫಲಿತಾಂಶ ಬಂದಿದೆಯೇ ಎಂಬದನ್ನು ಪರೀಕ್ಷಿಸಿ ನೋಡುವ ವ್ಯವಸ್ಥೆಯಾಗಬೇಕು. ಆದರೆ ‘ಕೂಸು ಹುಟ್ಟುವ ಮೊದಲು ಕುಲಾವಿ ಹೊಲಿಸಿದರು’ ಎಂಬ ನಾಣ್ನುಡಿಯಂತೆ ಕೇಂದ್ರ ಮಾನವ ಸಂಪನ್ಮೂಲ ಶಾಖೆ, ನೀತಿ ಆಯೋಗದ ಸಲಹೆಯಂತೆ ಭಾರತದಲ್ಲಿನ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಲ್ಲಿನ ಕಲಿಕೆಯ ಗುಣಮಟ್ಟದ ಫಲಿತಾಂಶದ ಅಧ್ಯಯನ ಕಾರ್ಯವನ್ನು ಆಸ್ಟ್ರೇಲಿಯಾದ ಶೈಕ್ಷಣಿಕ ಸಂಶೋಧನಾ ಮಂಡಳಿಗೆ ವಹಿಸಲಿದೆಯಂತೆ. ಆಸ್ಟ್ರೇಲಿಯಾದ ಈ ಮಂಡಳಿಗೆ ಭಾರತದ ಶಾಲೆಗಳಲ್ಲಿನ ಕಲಿಕಾ ಮಟ್ಟದ ಫಲಿತಾಂಶದ ಮಾದರಿ ಸಮೀಕ್ಷೆ ನಡೆಸುವ ಕಾರ್ಯ ವಹಿಸಬೇಕೆಂಬ ನೀತಿ ಆಯೋಗದ ಸಲಹೆಯ ಮರ್ಮವೇನೋ ತಿಳಿಯದು. ಆದರೆ ಕಲಿಕೆಯ ಗುಣಮಟ್ಟದ ಫಲಿತಾಂಶ ಪಡೆಯಲು ಬೇಕಾದ ಸೌಲಭ್ಯಸೌಕರ್ಯಗಳ ಅಗತ್ಯವನ್ನು ಮನದಟ್ಟುಮಾಡಿಕೊಡಲು ಆಸ್ಟ್ರೇಲಿಯಾದ ತಜ್ಞರೇ ಬೇಕಾಗಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)