varthabharthi

ಅನುಗಾಲ

ಪ್ರಜೆ, ಪ್ರಭುತ್ವ ಮತ್ತು ಸಹಿಷ್ಣುತೆ

ವಾರ್ತಾ ಭಾರತಿ : 27 Apr, 2017
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಭಾರತೀಯ ಸೇನೆಯನ್ನು ಕೊಂಡಾಡಬೇಕು, ಸರಿ ಎಲ್ಲಿಯವರೆಗೆ? ಅವರು ತಮ್ಮ ಕರ್ತವ್ಯವನ್ನು ಕಾನೂನು ರೀತ್ಯಾ ನಿರ್ವಹಿಸುವ ವರೆಗೆ. ಆದರೆ ಅವರೂ ಮನುಷ್ಯರೇ ಆಗಿರುವುದರಿಂದ ಕಾಮ -ಕ್ರೋಧ-ಲೋಭ-ಮೋಹ-ಮದ-ಮತ್ಸರಗಳನ್ನು ಮೀರದೆ ಜನ ಸಾಮಾನ್ಯರನ್ನು ಹಿಂಸಿಸತೊಡಗಿದಾಗ, ತಮ್ಮ ಅಧಿಕಾರ ಮತ್ತು ಶಸ್ತ್ರದ, ಅಸ್ತ್ರದ ಬಲದಿಂದ ನಡೆದುಕೊಂಡಾಗ, ಅದನ್ನ್ನು ವ್ಯವಸ್ಥೆಯು ವಿಚಾರಿಸಬೇಕಾಗುತ್ತದೆ.


ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳೇ ರಚಿಸಿದ ಸಾಮಾಜಿಕ, ರಾಜಕೀಯ ವ್ಯವಸ್ಥೆಯೇ ಪ್ರಜಾಪ್ರಭುತ್ವ. ಇಂತಹ ಪ್ರಜೆಗಳು ಆರಿಸುವ, ರಚಿಸುವ ಸರಕಾರ ಪ್ರಜಾಸರಕಾರ. ಅಲ್ಲಿಗೆ ಯಾವುದೇ ಪ್ರಜಾಪ್ರಭುತ್ವ ದೇಶದ ಒಳಿತು ಕೆಡುಕುಗಳು ಪ್ರಜೆಗಳದೇ ಸೃಷ್ಟಿ ಎಂದಾಯಿತು. ಹೀಗಾಗಿ ಪ್ರಜೆಗಳು ಸರಕಾರವನ್ನು ಬೈವಂತಿಲ್ಲ. ನಮ್ಮದೇ ಸರಕಾರ. ಅದರ ಹಿತ ನಮ್ಮ ಹಿತ.

ಪ್ರಜಾಪ್ರಭುತ್ವದ ತಳಹದಿಯಲ್ಲಿ ರಚಿಸಿದ, ಅಥವಾ ಆಯ್ಕೆಗೊಳ್ಳುವ ಸರಕಾರಗಳು ಎಲ್ಲ ಪ್ರಜೆಗಳ ಪ್ರತಿನಿಧಿಗಳಾಗುತ್ತವಾದ್ದರಿಂದ ಅವರ ವಿರುದ್ಧ ಪ್ರತಿಭಟಿಸುವುದೆಂದರೆ ಏನರ್ಥ? ನಮ್ಮ ವಿರುದ್ಧ ನಾವೇ ಪ್ರತಿಭಟಿಸುವುದು ಎಂದಾಗುತ್ತದಲ್ಲವೇ? ಪ್ರಜೆಗಳು ಸರಕಾರದ ಅಂಗವೇ ಅಥವಾ ಸರಕಾರವು ಪ್ರಜೆಗಳ ಅಂಗವೇ ಎಂಬ ಜಿಜ್ಞಾಸೆಯೂ ಹುಟ್ಟಿಕೊಳ್ಳುತ್ತದೆ. ಆದರೆ ನಾವು ನಮ್ಮನ್ನಾಳುವುದಕ್ಕೆಂದು ಆರಿಸಿ ಕಳುಹಿಸಿದ ಮಂದಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅಂದರೆ ತಮ್ಮ ಅಸ್ತಿತ್ವದ ಮೂಲವನ್ನು ಮತ್ತು ಅರ್ಥವನ್ನು ಮರೆತು ತಾವು ಬೇರೆ ಮತ್ತು ತಮ್ಮನ್ನು ಆರಿಸಿದ (ಮತ್ತು ಆರಿಸದ) ಪ್ರಜೆಗಳು ಬೇರೆ ಎಂಬ ದ್ವೈತವನ್ನು ವಾದಿಸಿದಾಗ ಮತ್ತು ಪ್ರದರ್ಶಿಸಿದಾಗ ಸಮಸ್ಯೆ ಹುಟ್ಟಿಕೊಳ್ಳುತ್ತದೆ.

ಇಲ್ಲಿಂದ ಉದ್ಭವಿಸುವ ಸಮಸ್ಯೆ ಒಂದು ಸರಕಾರದ ಬದಲಿಗೆ ಅನೇಕ ಸರಕಾರಗಳ ಉಗಮಕ್ಕೆ ಕಾರಣವಾಗುತ್ತದೆ. ಇವುಗಳಲ್ಲಿ ಯಾವುದು ಸಕ್ರಮ ಮತ್ತು ಯಾವುದು ಅಕ್ರಮ ಎಂಬುದು ಕೊನೆಗೆ ಪ್ರಜಾಪ್ರಭುತ್ವದ ಮೂಲ ಮೌಲ್ಯಗಳನ್ನು ಮೀರಿ ಶಕ್ತಿ-ಸಾಮರ್ಥ್ಯಗಳನ್ನು ಆಧರಿಸುತ್ತದೆ. ಭಾರತವು ಸ್ವಾತಂತ್ರ್ಯ ಪಡೆದ ಏಳು ದಶಕಗಳ ಆನಂತರವೂ ನಮ್ಮ ಪ್ರಜಾಪ್ರಭುತ್ವದ ಮೌಲ್ಯಗಳು ಯಾವುವು ಮತ್ತು ಅಂತಹ ಮೌಲ್ಯಗಳನ್ನು ನಾವು ಪ್ರತಿನಿಧಿಸುತ್ತೇವೆಯೇ ಎಂದು ಹುಡುಕಬೇಕಾಗಿದೆ. ರಾಜಕೀಯ ಪ್ರಾತಿನಿಧ್ಯ, ಅಥವಾ ಅಧಿಕಾರದ ಪ್ರಾತಿನಿಧ್ಯವೇ ಎಲ್ಲವೂ ಆದರೆ ಮನುಷ್ಯಜೀವನದ ಮೇಲ್ಮೆ ಈ ಪ್ರಾತಿನಿಧ್ಯದಲ್ಲೇ ಸೊರಗುತ್ತದಲ್ಲವೇ? ಇದರ ವಿರುದ್ಧದ ಅತೃಪ್ತಿಯು ಇತ್ಯಾತ್ಮಕವೂ ಆಗಬಹುದು; ನೇತ್ಯಾತ್ಮಕವೂ ಆಗಬಹುದು.
 
ಉದಾಹರಣೆಗೆ ಕಾಶ್ಮೀರ ಸಮಸ್ಯೆ: ಇದು ಯಾರ ಸೃಷ್ಟಿಯೂ ಅಲ್ಲ. ಪಾಕಿಸ್ತಾನದ ಸೃಷ್ಟಿಯಲ್ಲಿ ಗಾಂಧಿ, ಕಾಶ್ಮೀರದ ಸಮಸ್ಯೆಗೆ ನೆಹರೂ ಹೀಗೆ ಈಗ ಉತ್ತರಿಸಲಾಗದ ಎಲ್ಲರ ಮೇಲೂ ಆರೋಪ ಪಟ್ಟಿ ಸಲ್ಲಿಸಬಹುದು. ನಮ್ಮಲ್ಲಿ ಹಿಂದಿನವರ ಪೌರುಷಗಳನ್ನು ನೆನಪಿಸಿ ಹೆಮ್ಮೆ ಪಡುವುದರ ಜೊತೆಗೇ ಅವರ ಲೋಪದೋಷಗಳನ್ನು ಹುಡುಕಿ ಆರೋಪಿಸಿ, ಇಂದಿನ ಸ್ಥಿತಿಗೆ ಅವರನ್ನೇ ಹೊಣೆಯಾಗಿಸುವುದೂ ಇದೆ. ಇತಿಹಾಸದಲ್ಲಿ ತಪ್ಪೆಂಬುದಿಲ್ಲ. ಅದು ನಿರಂತರ ಚಲನೆಯ ಚಕ್ರ. ಆಮ್ಲಜನಕ ಬೇಕೆಂದರೆ ಅಂಗಾರಾಮ್ಲವನ್ನು ಹೊರಗೆಡಹಲೇ ಬೇಕು. ಮೂಲತಃ ಕಾಶ್ಮೀರವು ಅಧಿಕಾರ ಮತ್ತು ಸಾಮರ್ಥ್ಯದ ಮೇಲುಗೈಗಾಗಿ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಸ್ಪರ್ಧೆಯ ಸೃಷ್ಟಿ.

ಕಾಶ್ಮೀರ ಕಾಶ್ಮೀರವಾಗಿಯೇ ಉಳಿದಿರುತ್ತಿದ್ದರೆ ಅಥವಾ ಅಂತಹ ಅವಕಾಶವನ್ನು ಅದಕ್ಕೆ ಜಗತ್ತು ಉಳಿಸಿಕೊಟ್ಟಿದ್ದರೆ ಅದು ಈಗಲೂ ಭೂಮಿಯ ಮೇಲಣ ಸ್ವರ್ಗವೆಂಬಂತೆ ಇರುತ್ತಿತ್ತೋ ಏನೋ? ಖಾತ್ರಿ ಹೇಳಲಾರೆ: ಏಕೆಂದರೆ ಯಾವನಾದರೂ ಇದಿ ಅಮೀನ್ ಕಾಶ್ಮೀರದ ಆಡಳಿತವನ್ನು ಆಕ್ರಮಿಸಿದ್ದರೆ ಅದು ಭೂಮಿಯ ಮೇಲಣ ನರಕವಾಗುತ್ತಿತ್ತು. ಸದ್ಯಕ್ಕೆ ಅದು ಸ್ವರ್ಗವೂ ಆಗದೆ, ನರಕವೂ ಆಗದೆ ಮನುಷ್ಯ ಸಹಜ ಹಿಂಸೆ, ಲೋಭ ಮುಂತಾದವುಗಳ ಭೂಮಿಯಾಗಿದೆ. ಇಂದು ನಾವು ಜಮ್ಮು ಮತ್ತು ಕಾಶ್ಮೀರ ಎಂದು ಭೂಪಟದಲ್ಲಿ ತೋರಿಸುವ ಜಾಗವು ಪಾಕಿಸ್ತಾನ ಆಕ್ರಮಿತವೆಂದು ನಾವು ಕರೆಯುವ ಭೂಭಾಗದ ಜಾಗವನ್ನೂ ಸೇರಿಸಿದೆ. ಇದು ನಮ್ಮ ಹಕ್ಕಿನ ಪ್ರಶ್ನೆಯಾಗಿರುವುದರಿಂದ ಇದಕ್ಕೆ ಭಿನ್ನವಾದ ಯಾವುದೇ ಅಭಿವ್ಯಕ್ತಿಯೂ ದೇಶದ್ರೋಹವಾಗುತ್ತದೆ.

ಇಂದು ಕಾಶ್ಮೀರದಲ್ಲಿ ಹಿಂಸೆ ತಾಂಡವವಾಡುತ್ತಿದೆ. ಸರಕಾರಗಳು ತಮ್ಮ ಮತ್ತು ದೇಶರಕ್ಷಣೆಗೆಂದು ನೇಮಿಸಲಾದ ಸೇನೆಯ ಸಮರ್ಥನೆಯನ್ನು ಮಾಡುತ್ತಿವೆ. ಸೇನೆಯ ಯಾವುದೇ ಕ್ರಮವನ್ನು ವಿರೋಧಿಸಿದರೂ ಅದು ದೇಶದ್ರೋಹವೆಂಬ ಅಭಿದಾನಕ್ಕೆ ಒಳಪಡುವಂತೆ ದೇಶಭಕ್ತರ ದಂಡೇ ಬೀದಿಗಿಳಿಯುತ್ತದೆ. ಕಾಶ್ಮೀರದ ಆಡಳಿತದ ವೈಫಲ್ಯವನ್ನು ರಾಜಕಾರಣಿಗಳು ಹೋಗಲಿ, ಮಾಧ್ಯಮಗಳೂ ಉಸುರುವುದಿಲ್ಲ. ಅಲ್ಲಿನ ಜನರು ಮುಖ್ಯವಾಗಿ ಯುವಕರು ಏನನ್ನು ಬಯಸುತ್ತಾರೆ ಮತ್ತು ಸಂವಿಧಾನದಡಿ ಅದಕ್ಕಿರುವ ಹಾದಿಗಳೇನು ಎಂಬ ಬಗ್ಗೆ ಕುಳಿತು ಮಾತನಾಡುವ ತಾಳ್ಮೆಯಾಗಲೀ ವ್ಯವಧಾನವಾಗಲೀ ಕೇಂದ್ರ ಮತ್ತು ಅಲ್ಲಿನ ರಾಜ್ಯ ಸರಕಾರಗಳಿಗಿಲ್ಲ. ಇದಕ್ಕೆ ಕಾರಣವೂ ಇದೆ.

ಢೋಂಗಿ ದೇಶಭಕ್ತಿಯ ಪರಂಪರೆಯನ್ನು ತುಳಿದೇ ಅಧಿಕಾರಕ್ಕೆ ಬಂದರೆ ಅದನ್ನು ಸದಾ ಉರಿಯುವಂತೆ ಮಾಡದ ವಿನಹ ಅಧಿಕಾರ ಉಳಿಯಲಾರದು. ಇತ್ತೀಚೆಗೆ ಕಾಶ್ಮೀರದಲ್ಲಿ ಯುವಕನೊಬ್ಬನನ್ನು ಸೇನೆಯ ಜೀಪಿನೆದುರು ಕಟ್ಟಿ ಪ್ರತಿಭಟನಾಕಾರರೆಡೆಗೆ ಒಯ್ಯಲಾಯಿತು. ಇದೊಂದು ಅಮಾನವೀಯ ಕೆಲಸ. ಯಾವುದೇ ಸಾಂವಿಧಾನಿಕ ವ್ಯವಸ್ಥೆಯಡಿ ಇದನ್ನು ಸಮರ್ಥಿಸಲಾಗದು. ಸುಳ್ಳು ಎನಕೌಂಟರ್‌ಗಳಲ್ಲಿ ಅಮಾಯಕರನ್ನು ಮಾತ್ರವಲ್ಲ ಅಪರಾಧಿಗಳೆಂದೇ ತಿಳಿದ ಮನುಷ್ಯರನ್ನೂ ಕೊಲ್ಲಲಾಗದು; ಹಿಂಸಿಸಲಾಗದು.

ಇದರ ಹಿಂದಿರುವ ಮೌಲ್ಯಗಳು ಸ್ಪಷ್ಟ: ಜನರ ಪ್ರತಿನಿಧಿತ್ವವನ್ನು ಹೊಂದುವ ಆ ಮೂಲಕ ಅಧಿಕಾರವನ್ನು ಚಲಾಯಿಸುವ ಯಾವುದೇ ಸರಕಾರವು ಪ್ರಜೆಗಳಿಗೆ ತಾನು ನಿಯಮಬದ್ಧವಾಗಿಯೇ ಕಾರ್ಯನಿರ್ವಹಿ ಸುತ್ತೇನೆ ಮತ್ತು ನಿಯಮ ಬಾಹಿರವಾಗಿ ಯಾವುದೇ ಕ್ರಮವನ್ನು ಕೈಗೊಳ್ಳುವುದಿಲ್ಲವೆಂಬ ಭರವಸೆಯನ್ನು ನೀಡುತ್ತದೆ. ಸಾರ್ವಜನಿಕ ವ್ಯವಹಾರದಲ್ಲಿ ಕೆಲವು ನಿಯಮಗಳನ್ನು ರಚಿಸಲಾಗುತ್ತದೆ. ಅವೆಲ್ಲವೂ ಸರಿಯೆಂದಲ್ಲ; ಆದರೆ ಅವುಗಳ ಹೊರತಾಗಿ ಸಮಾಜವು ವ್ಯವಸ್ಥಿತವಾಗಿ ಸಾಗದು.

ಅರ್ಹತೆಯೇ ಸಾಮರ್ಥ್ಯದ ಮಾನದಂಡವಲ್ಲವಾದರೂ ಅದರ ಹೊರತಾಗಿ ಏನನ್ನು ಮತ್ತು ಹೇಗೆ ಕಟ್ಟಬಹುದು? ಆದ್ದರಿಂದಲೇ ಎಷ್ಟೇ ದಕ್ಷ ವ್ಯಕ್ತಿಗೂ ನಿಯಮಗಳನ್ನು ಪಾಲಿಸದೆ ಉದ್ಯೋಗಗಳನ್ನು, ಹುದ್ದೆಗಳನ್ನು ನೀಡಲಾಗುವುದಿಲ್ಲ. ಎಷ್ಟೋ ಯೋಗ್ಯರು ಉದ್ಯೋಗವನ್ನು ಪಡೆಯುವುದಿಲ್ಲ. ಮಾರ್ಕುಗಳ ಆಧಾರದಲ್ಲಿ ಉದ್ಯೋಗ ಪಡೆದ ಅನೇಕರು ಅದಕ್ಷತೆಯ ಪ್ರತೀಕಗಳಾಗಿ ಜೀವಿಸುತ್ತಾರೆ. ಪದ-, ಪದವಿ-, ನಿಮಿತ್ತ ಪಡೆಯಬಹುದಾದ ಎಲ್ಲ ಸಾರ್ವಜನಿಕ ಸವಲತ್ತು, ಗೌರವಗಳನ್ನು ಹೊಂದುತ್ತಾರೆ. ಆದ್ದರಿಂದ ಭಯೋತ್ಪಾದಕರನ್ನು ಹಿಮ್ಮೆಟ್ಟಿಸುವುದಕ್ಕಾಗಿ ಯಾವ ಘನತೆ-ಗೌರವಗಳ, ನಿಯಮಪಾಲಕವಾದ ಸರಕಾರವೂ ಭಯೋತ್ಪಾದನೆಗಿಳಿಯಬಾರದು. ಇದೇ ಕಾರಣಕ್ಕಾಗಿ ಕಸಬ್‌ನ ವಿರುದ್ಧವೂ ಶಿಕ್ಷೆಯ ಮುನ್ನ ದೀರ್ಘವಾದ ವಿಚಾರಣೆ ನಡೆಯಿತು. ಭಯೋತ್ಪಾದನೆ ಅಂತಲ್ಲ, ಯಾವ ಅಪರಾಧದ ವಿರುದ್ಧವೂ ಯಾವ ಸರಕಾರವೂ ಪ್ರತೀಕಾರದ ವಿಧಾನವನ್ನು ಅನುಸರಿಸುವಂತಿಲ್ಲ. ಮಾನವ ಹಕ್ಕೆಂದರೆ ಇದೇ. ನಾವು ಪ್ರಜೆಗಳು ಸಿನೆಮಾಗಳಲ್ಲಿ ನಾಯಕ ಪಾತ್ರಧಾರಿ ಕಾನೂನನ್ನು ಕೈಗೆತ್ತಿಕೊಳ್ಳುವುದನ್ನು ನೋಡಿ ಸಂಭ್ರಮಿಸುತ್ತೇವೆ.

ನಾವು ಮಾಡಲಾಗದ್ದನ್ನು ಆತ ಮಾಡುತ್ತಾನಲ್ಲಾ ಎಂದು ಸಂತೋಷ, ಸಮಾಧಾನಪಡುತ್ತೇವೆ. ಆದರೆ ಅರ್ಥಮಾಡಿಕೊಳ್ಳಬೇಕಾದ್ದೆಂದರೆ ಈ ‘ನಾವು ಮಾಡಲಾಗದ್ದನ್ನು’ ಎಂಬ ಅಸಹಾಯಕತೆಯನ್ನು. ಈ ಅಸಹಾಯಕತೆ ಉಗಮಿಸಿದ್ದು ದೌರ್ಬಲ್ಯದಿಂದಲೂ ಅಲ್ಲ; ಶಕ್ತಿಹೀನತೆಯಿಂದಲೂ ಅಲ್ಲ. ಬದಲಾಗಿ ಸಾಮಾಜಿಕವಾದ ನಿಯಮ, ಚೌಕಟ್ಟುಗಳು, ನಿರ್ಬಂಧಗಳಿಂದ. ಶ್ರೀಮಂತರನ್ನು ಕೊಳ್ಳೆಹೊಡೆದು ಬಡವರಿಗೆ ಆಹಾರ ಹಂಚುವುದು ಒಂದು ಆದರ್ಶವೆಂದು ಕಂಡು ಬಂದರೂ ಅದು ಕಾನೂನಿನಡಿ ಅಪರಾಧವಾಗುತ್ತದೆ. ಹಿಂಸೆಯ ವಿರುದ್ಧ ಹಿಂಸೆಯ ಪ್ರತೀಕಾರವನ್ನು ಕೈಗೊಳ್ಳುವುದೂ ಘೋರ ಅಪರಾಧವಾಗುತ್ತದೆ. ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕರು ಶಿಕ್ಷೆಗೆ ಗುರಿಯಾದದ್ದು ಅವರು ಸ್ವಾತಂತ್ರ್ಯ ಹೋರಾಟ ಮಾಡಿದ್ದರೆಂದಲ್ಲ; ಅವರು ಆಗ ಪ್ರಚಲಿತವಾಗಿದ್ದ ಕಾನೂನನ್ನು ಅತಿಕ್ರಮಿಸಿದರೆಂಬ ಕಾರಣಕ್ಕೆ. ಆದ್ದರಿಂದಲೇ ಎಲ್ಲ ಸ್ವಾತಂತ್ರ್ಯ ಹೋರಾಟಗಾರರು ನೇಣುಗಂಬವೇರಲಿಲ್ಲ. ವಿವಿಧ ಪ್ರಮಾಣದ ಶಿಕ್ಷೆಗೊಳಗಾದರು. ಅಂತಹ ಸಂದರ್ಭಗಳಲ್ಲಿ ಹೋರಾಟಗಾರರು ತಪ್ಪನ್ನು ಒಪ್ಪಿಕೊಳ್ಳಬೇಕಾದರೆ ಸಂಕಲ್ಪಬಲ ಬೇಕು. ಗಾಂಧಿಯಂತಹ ವ್ಯಕ್ತಿಗಷ್ಟೇ ಆ ಧೈರ್ಯವಿದ್ದೀತು. ಇದಕ್ಕಾಗಿ ಕಾನೂನೇ ಕೆಲವು ರಿಯಾಯಿತಿಗಳನ್ನು, ವಿನಾಯಿತಿಗಳನ್ನು ಪ್ರಜೆಗಳಿಗೆ ನೀಡಿದೆ. ಅಪರಾಧಿಯನ್ನು ದಸ್ತಗಿರಿ ಮಾಡುವುದು- ಆದರೆ ತಕ್ಷಣ ಆತನನ್ನು ಪೋಲೀಸರಿಗೋ ಕಾನೂನಿನಡಿ ಇತರ ಅಧಿಕಾರಿಗಳ ಸುಪರ್ದಿಗೋ ನೀಡುವುದು. ಆತ್ಮ ರಕ್ಷಣೆಗಾಗಿ ಇನ್ನೊಬ್ಬರ ಮೇಲೆ ಧಾಳಿ ಮಾಡುವುದು. ಆದರೆ ಇಂತಹ ರಿಯಾಯಿತಿ-ವಿನಾಯಿತಿಗಳೂ ವಿಚಾರಣೆಯ ನಂತರವೇ ದಕ್ಕುವುದೆಂಬುದನ್ನು ಮರೆಯಲಾಗದು.

ಆದರೆ ಸರಕಾರ ಕೂಡಾ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಮತ್ತು ಅಂತಹ ಕೃತ್ಯಗಳಿಗೆ ಬೆಂಬಲವನ್ನೂ ನೀಡಬಾರದು. ದುರದೃಷ್ಟವಶಾತ್ ನಮ್ಮ ಸರಕಾರಗಳು ಮತ್ತು ಅವರ ಪರವಾಗಿ ದುಡಿಯುವವರು ಈ ಪ್ರಾತಿನಿಧ್ಯವನ್ನು ತಮ್ಮ ಶಕ್ತಿಯೆಂದು ತಿಳಿದಿವೆ. ಈಚೆಗೆ ಸೇನಾ ನೌಕರನೊಬ್ಬನು ಸೇನೆಯಲ್ಲಿ ನಡೆಯುವ ಅಕ್ರಮಗಳನ್ನು ಪ್ರತಿಧ್ವನಿಸಿ ನಂತರದ ಬೆಳವಣಿಗೆಯಲ್ಲಿ ಕೆಲಸ ಕಳಕೊಂಡ. ಭಾರತೀಯ ಸೇನೆಯನ್ನು ಕೊಂಡಾಡಬೇಕು, ಸರಿ ಎಲ್ಲಿಯವರೆಗೆ? ಅವರು ತಮ್ಮ ಕರ್ತವ್ಯವನ್ನು ಕಾನೂನು ರೀತ್ಯಾ ನಿರ್ವಹಿಸುವ ವರೆಗೆ. ಆದರೆ ಅವರೂ ಮನುಷ್ಯರೇ ಆಗಿರುವುದರಿಂದ ಕಾಮ-ಕ್ರೋಧ-ಲೋಭ-ಮೋಹ- ಮದ-ಮತ್ಸರಗಳನ್ನು ಮೀರದೆ ಜನ ಸಾಮಾನ್ಯರನ್ನು ಹಿಂಸಿಸತೊಡಗಿದಾಗ, ತಮ್ಮ ಅಧಿಕಾರ ಮತ್ತು ಶಸ್ತ್ರದ, ಅಸ್ತ್ರದ ಬಲದಿಂದ ನಡೆದುಕೊಂಡಾಗ, ಅದನ್ನು ವ್ಯವಸ್ಥೆಯು ವಿಚಾರಿಸಬೇಕಾಗುತ್ತದೆ. ವ್ಯವಸ್ಥೆಯು ಈ ಜವಾಬ್ದಾರಿಯನ್ನು ನಿಭಾಯಿಸದಿದ್ದಾಗ ಇನ್ನಷ್ಟು ಹಿಂಸೆಯನ್ನು, ಹೋರಾಟವನ್ನು, ಪ್ರತಿರೋಧವನ್ನು ಎದುರಿಸಬೇಕಾಗುತ್ತದೆ. ಗಡಿಯೊಳಗೇ ರಣರಂಗ ಸೃಷ್ಟಿಯಾಗುತ್ತದೆ.

ಛತ್ತೀಸ್‌ಗಡದಲ್ಲಿ ನಕ್ಸಲ್ ಮಂದಿ ಭಾರೀ ಹಿಂಸೆಯನ್ನೇ ನಡೆಸಿದರು. 26 ಕೇಂದ್ರ ಮೀಸಲು ಪಡೆಯ ಸೈನಿಕರು ಮಡಿದರು. ಈಗ ಸರಕಾರ ಸೇಡಿನ ಕ್ರಮ ಕೈಗೊಳ್ಳಬಾರದು. ಉರಿಗೆ ಉರಿಯನ್ನು ತೋರಿಸುವುದಲ್ಲ. ಏಕೆಂದರೆ ಇಂತಹ ಹೋರಾಟ-ಪ್ರತಿಹೋರಾಟಗಳಲ್ಲಿ ಜನಸಾಮಾನ್ಯರು ಸಿಕ್ಕಿಬೀಳುತ್ತಾರೆ. ಅತ್ತ ನಕ್ಸಲರ ಭಯ, ಇತ್ತ ಪೊಲೀಸರ ಮತ್ತು ರಕ್ಷಣಾ ಪಡೆಗಳ ಭಯ ಇವುಗಳ ನಡುವೆ ನಿರ್ಭಯತೆಗೆ, ಅಭಯಕ್ಕೆ ಹಾದಿ ಯಾವುದು?

ಮಣಿಪುರದಲ್ಲಿ ಮಿಲಿಟರಿ ಮತ್ತು ಉಗ್ರಗಾಮಿಗಳ ನಡುವೆ ಬದುಕಬೇಕಾದ ತೊಳಲಾಟದ ‘ಅತ್ತ ದರಿ ಇತ್ತ ಪುಲಿ’ ಎಂಬ ಒಂದು ನಾಟಕವನ್ನು ನೀನಾಸಂ ಪ್ರದರ್ಶಿಸಿತು. ಇದು ಮಣಿಪುರಕ್ಕೂ ಸತ್ಯ; ಭಾರತದ ಯಾವುದೇ ಭಾಗಕ್ಕೂ ಸತ್ಯ.

ಜನರಾದರೋ ತಮಗಿಷ್ಟಬಂದಂತೆ ಪ್ರತಿಕ್ರಿಯಿಸಲಾರಂಭಿಸಿದ್ದಾರೆ. ಸಾಮಾಜಿಕ ಮತ್ತು ಸಮೂಹ ತಾಣಗಳು ಅತಿರೇಕಗಳ ಬಯಲಾಗಿವೆ. ನಿಮಗೆ ಗಾಂಧಿ ಬೇಕೇ ಗೋಡ್ಸೆ ಬೇಕೇ ಎಂಬ ಪ್ರಶ್ನೆಗಳನ್ನು ಹಾಕಿ ಗೋಡ್ಸೆ ಬೇಕು ಎಂದು ಬಹುಮತದಿಂದ ನಿರ್ಣಯಿಸುವ ಸಮಾಜದಲ್ಲಿ ತಾಳ್ಮೆ, ಸಹಿಷ್ಣುತೆ ಇವಕ್ಕೆ ಜಾಗವೆಲ್ಲಿ? ಈಚೆಗೆ ಅಮಿತ ಶಾ, ಸಾವರ್ಕರ್‌ರನ್ನು ಹೊಗಳುವ ಭರದಲ್ಲಿ ಸಾವರ್ಕರ್ ಆಧ್ಯಾತ್ಮಿಕ ಪರಂಪರೆಯ ಮೊದಲ ಸ್ವಾತಂತ್ರ್ಯ ಹೋರಾಟಗಾರನೆಂದು ಬಣ್ಣಿಸಿದರು. ಮಹರ್ಷಿ ಅರವಿಂದರಂತಹ ಸ್ವಾತಂತ್ರ್ಯ ಸೇನಾನಿಗಳನ್ನು ಮರೆತವರು ಮಾತ್ರ ಇಂತಹ ಬಣ್ಣನೆಯನ್ನು ಮಾಡಬಹುದು.

ಎಲ್ಲಿಯ ವರೆಗೆ ವ್ಯವಸ್ಥೆಯ ಪಾಲಕರು ತಮ್ಮ ಪ್ರಾತಿನಿಧ್ಯವನ್ನು ಮರೆಯದೆ ಅಧಿಕಾರವನ್ನು ಕರ್ತವ್ಯವೆಂಬಂತೆ ಪಾಲಿಸುತ್ತಾರೋ ಅಲ್ಲಿಯ ವರೆಗೆ ಪ್ರಜಾಪ್ರಭುತ್ವವು ಸಹಿಷ್ಣುತೆಯಿಂದ ಉಳಿಯಬಹುದು.
***

ವಿಳಾಸ:.ಪಿ. ಬಾಲಸುಬ್ರಹ್ಮಣ್ಯ, ವಕೀಲರು
ಸಿರಿ, ಬ್ರಾಹ್ಮಿನ್ ವ್ಯಾಲಿ, ಮಡಿಕೇರಿ, ಕೊಡಗು ಜಿಲ್ಲೆ 571201
(9845327949)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)