varthabharthi

ದಿಲ್ಲಿ ದರ್ಬಾರ್

ನೆಲಕಚ್ಚಿದ ಕೇಜ್ರಿಗಿರಿ

ವಾರ್ತಾ ಭಾರತಿ : 30 Apr, 2017

ತಾನು ಮಾಧ್ಯಮಸ್ನೇಹಿ, ಏನು ಬೇಕಾದರೂ ಆಗ್ರಹಿಸಿ ಅದನ್ನು ಪಡೆಯಲು ಶಕ್ತ ಎಂಬ ಭಾವನೆಯಲ್ಲಿದ್ದ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಎಂಸಿಡಿ ಚುನಾವಣೆಗೆ ಮುನ್ನ ಒಂದಷ್ಟು ಸುಳಿವು ಕೂಡಾ ಸಿಕ್ಕಿರಲಿಲ್ಲ. ಟಿವಿ ಸುದ್ದಿವಾಹಿನಿಗಳು ಸಂದರ್ಶನ ಮಾಡುವಾಗಲೇ, ಇದು ಪ್ರೈಂಟೈಮ್‌ನಲ್ಲೇ ಪ್ರಸಾರವಾಗಬೇಕು ಎಂದು ಕೇಜ್ರಿ ಷರತ್ತು ವಿಧಿಸುತ್ತಿದ್ದರು. ಇಷ್ಟು ಮಾತ್ರವಲ್ಲದೇ ದಿನಕ್ಕೆ ನಾಲ್ಕು ಬಾರಿ ಅದನ್ನು ಪ್ರಸಾರ ಮಾಡಬೇಕು ಎಂಬ ಬೇಡಿಕೆ ಇಡುತ್ತಿದ್ದರು. ಇದನ್ನು ಅರಗಿಸಿಕೊಳ್ಳಲು ಸಾಧ್ಯವಾಗದ ಕೆಲ ವಾಹಿನಿಗಳು ಸಹಜವಾಗಿಯೇ ಇಂಥ ಬೇಡಿಕೆಗೆ ಒಲ್ಲೆ ಎಂದವು. ಅಹಮಿಕೆಯಿಂದ ಅಂಥ ಚಾನೆಲ್‌ಗಳಿಗೆ ಸಂದರ್ಶನ ನೀಡಲು ದಿಲ್ಲಿ ಸಿಎಂ ನಿರಾಕರಿಸಿದ್ದರು. ಕೇಜ್ರಿ ಸೊಕ್ಕಿಗೆ ಜಗ್ಗದ ವಾಹಿನಿಗಳು ಸಂದರ್ಶನವಿಲ್ಲದೆ ವಾಪಸಾದವು. ಎಂಸಿಡಿ ಫಲಿತಾಂಶ ಹೊರಬಂದು ಆಪ್ ನೆಲಕಚ್ಚಿದ ಬಳಿಕ, ಇಂಥ ಚಾನೆಲ್‌ಗಳು ಕೇಜ್ರಿಯವರ ಕ್ರೇಝಿ ಬೇಡಿಕೆಗೆ ಒಪ್ಪದ ಕಾರಣಕ್ಕೆ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿವೆ.

ಕಮಲ್‌ನಾಥ್, ಕಮಲದ ಜೊತೆಗೆ?

ಕಾಂಗ್ರೆಸ್ ಮುಳುಗುತ್ತಿರುವ ಹಡಗು ಎಂಬ ಭಾವನೆ ದಟ್ಟವಾಗುತ್ತಿದೆ. ಇದರಿಂದ ಪಕ್ಷದ ನಂಬಿಗಸ್ಥ ಮುಖಂಡರೊಬ್ಬರು ಹಡಗಿನಿಂದ ಹಾರುವ ಯೋಚನೆ ಮಾಡುತ್ತಿದ್ದಾರೆ. ಚಿದ್ವಾರದಿಂದ ಒಂಬತ್ತು ಬಾರಿ ಲೋಕಸಭೆಗೆ ಆಯ್ಕೆಯಾಗಿರುವ ಕಮಲ್‌ನಾಥ್, ತಾವು ಬಿಜೆಪಿ ಸೇರುವ ಬಗ್ಗೆ ಕೇಳಿಬರುತ್ತಿರುವ ವದಂತಿಗಳ ಬಗ್ಗೆ ಖುಷಿಯಾಗಿದ್ದಾರೆ. ನಾಥ್ ಈಗ ಕೇಂದ್ರಬಿಂದು ಎನಿಸಿದ್ದಾರೆ. ಇವೆಲ್ಲ ಹನುಮಾನ್ ದಯೆ ಎನ್ನುವುದು ಅವರ ನಿಕಟವರ್ತಿಗಳ ವಿಶ್ಲೇಷಣೆ. ತಮ್ಮ ಕ್ಷೇತ್ರದ ಬುಡಕಟ್ಟು ಮುಖಂಡರ ಸಮ್ಮುಖದಲ್ಲಿ ಕಮಲ್‌ನಾಥ್ ಇತ್ತೀಚೆಗೆ ಬೃಹತ್ ಹನುಮಾನ್ ವಿಗ್ರಹ ಪ್ರತಿಷ್ಠಾಪಿಸಿದರು. ಪ್ರಬಲ ಸಮುದಾಯದ ಮನಸ್ಸು ಗೆಲ್ಲುವ ನಿಟ್ಟಿನಲ್ಲಿ ಬಿಜೆಪಿ ಮುಖಂಡರೂ ಅಲ್ಲಿಗೆ ಆಗಮಿಸಿದ್ದರು. ಡೂನ್ ಸ್ಕೂಲ್ ಮತ್ತು ಕೋಲ್ಕತಾದ ಸಂತ ಕ್ಸೇವಿಯರ್ ಕಾಲೇಜಿನ ಹಳೆವಿದ್ಯಾರ್ಥಿಯಾದ ನಾಥ್, ಹನುಮಾನ್ ಭಕ್ತನಾಗಿ ಮೂರ್ತಿ ಮುಂದೆ ಶಿರಬಾಗಿ ನಮಿಸುತ್ತಿರುವ ದೃಶ್ಯವನ್ನು ಹಲವು ಸ್ಥಳೀಯ ಸುದ್ದಿವಾಹಿನಿಗಳು ಬಿತ್ತರಿಸಿದವು. ಸಹಜವಾಗಿಯೇ ‘10, ಜನಪಥ್’ಗೆ ನಿಕಟವಾಗಿರುವ ವ್ಯಕ್ತಿಯೊಬ್ಬರು ಬಿಜೆಪಿ ಸೇರಲು ವೇದಿಕೆ ಸಜ್ಜಾಗುತ್ತಿದೆ ಎಂಬ ಪುಕಾರು ಹುಟ್ಟಿಕೊಂಡಿತು. ಬೆಂಕಿಗೆ ತುಪ್ಪಸುರಿದಂತೆ, ಕಮಲ್‌ನಾಥ್ ಕೂಡಾ ಕಾಂಗ್ರೆಸ್ ಯುವರಾಜ ರಾಹುಲ್‌ಗಾಂಧಿ ಪಕ್ಷವನ್ನು ಮುನ್ನಡೆಸುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಆದರೆ ಪಕ್ಷದೊಳಗಿನ ಇತರ ಕೆಲ ಮುಖಂಡರು ಇದಕ್ಕೆ ಭಿನ್ನ ವ್ಯಾಖ್ಯಾನ ನೀಡುತ್ತಿದ್ದಾರೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ಹುದ್ದೆಯನ್ನು ಗಿಟ್ಟಿಸಿಕೊಳ್ಳಲು ಕಮಲ್ ನಡೆಸುತ್ತಿರುವ ಕಸರತ್ತು ಇದು ಎಂಬ ವಿಶ್ಲೇಷಣೆ ಈ ವರ್ಗದ್ದು. ಪ್ರಸ್ತುತ ಈ ಹುದ್ದೆಯಲ್ಲಿರುವ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸಾರಥ್ಯ ವಹಿಸಲು ಉತ್ಸುಕ ಎಂಬ ಸುಳಿವು ನೀಡಿದ್ದಾರೆ. ಆದರೆ ಕಮಲ್ ಸುದ್ದಿಯಲ್ಲಿರುವುದಂತೂ ನಿಜ.

ಕಿರಣ್ ಬೇಡಿ ದಿಲ್ಲಿ ಮೋಡಿ

ದಿಲ್ಲಿಯನ್ನು ಆಳುವ ಕನಸು ನುಚ್ಚುನೂರಾದ ಬಳಿಕ ಕಿರಣ್ ಬೇಡಿ ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಆಗಿ ಅಧಿಕಾರ ವಹಿಸಿಕೊಂಡರು. ಇಷ್ಟಾಗಿಯೂ ರಾಷ್ಟ್ರ ರಾಜಧಾನಿಯ ರಾಜಕೀಯ ಮಾತ್ರ ಅವರ ಚಿತ್ತದಲ್ಲಿ ಸುಳಿಯುತ್ತಲೇ ಇದೆ. ಇತ್ತೀಚೆಗೆ ನಡೆದ ದಿಲ್ಲಿ ಮಹಾನಗರ ಪಾಲಿಕೆ ಚುನಾವಣಾ ಪ್ರಚಾರದ ವೇಳೆ, ಬೇಡಿ ಸಾಮಾಜಿಕ ಜಾಲತಾಣದ ಮೂಲಕ, ಎಂಸಿಡಿಯನ್ನು ಹೇಗೆ ನಿರ್ವಹಿಸಬೇಕು, ಭ್ರಷ್ಟಾಚಾರವನ್ನು ಹೇಗೆ ನಿರ್ಮೂಲನ ಮಾಡಬೇಕು ಎಂಬ ಪುಕ್ಕಟೆ ಸಲಹೆಯನ್ನು ನೀಡಿದ್ದರು. ದಿಲ್ಲಿ ಬಗ್ಗೆ ಬೇಡಿ ಗಮನ ಹರಿಸಿರುವುದು ಇದೇ ಮೊದಲಲ್ಲ. ಪುದುಚೇರಿಯಲ್ಲಿ ಹಿರಿಯ ಸರಕಾರಿ ಅಧಿಕಾರಿಗಳು ತಮ್ಮ ಕೆಲಸದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆಪಾದಿಸಿ ಬೇಡಿ, ರಾಜಧಾನಿಯ ಪತ್ರಕರ್ತ ಮಿತ್ರರಿಗೆ ವಾಟ್ಸ್ ಆ್ಯಪ್ ಸಂದೇಶ ರವಾನಿಸುತ್ತಲೇ ಇದ್ದಾರೆ ಎಂಬ ಗುಸು ಗುಸು ಕೇಳಿಬರುತ್ತಿದೆ. ಲೆಫ್ಟಿನೆಂಟ್ ಗವರ್ನರ್ ಆಗಿದ್ದುಕೊಂಡು ರಾಜಕೀಯ ಮಾಡುವ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದೂ ಹೇಳಲಾಗುತ್ತಿದೆ. ಆದರೆ ಬೇಡಿ ಸಹಜವಾಗಿಯೇ ಇದೆಲ್ಲವನ್ನೂ ಅಲ್ಲಗಳೆಯುತ್ತಲೇ ಸದಾ ಸುದ್ದಿಯಲ್ಲಿರುತ್ತಾರೆ.

ರಮಣ್ ನೆತ್ತಿ ಮೇಲೆ ತೂಗುಗತ್ತಿ

ಛತ್ತೀಸ್‌ಗಡ ಸಿಎಂ ರಮಣ್‌ಸಿಂಗ್ ಇತ್ತೀಚಿನ ದಿನಗಳಲ್ಲಿ ಹೆಚ್ಚು ಚಿಂತಾಕ್ರಾಂತರಾಗಿದ್ದಾರೆ. ಅದರಲ್ಲೂ ಮುಖ್ಯವಾಗಿ ಸುಕ್ಮಾ ನಕ್ಸಲ್ ಅಟ್ಟಹಾಸದಲ್ಲಿ 25 ಮಂದಿ ಸಿಆರ್‌ಪಿಎಫ್ ಸಿಬ್ಬಂದಿ ಬಲಿಯಾದ ಘಟನೆ ಮುಖ್ಯಮಂತ್ರಿಯ ನಿದ್ದೆಗೆಡಿಸಿದೆ. ಶೀಘ್ರವೇ ಸಿಂಗ್‌ಗೆ ರಾಜ್ಯಪಾಲ ಪದವಿ ಕರುಣಿಸಲಾಗುತ್ತಿದೆ ಮತ್ತು ದುರ್ಗ್‌ನ ಮಾಜಿ ಮೇಯರ್ ಸರೋಜ್ ಪಾಂಡೆ ಸಿಎಂ ಗಾದಿ ಏರುತ್ತಾರೆ ಎಂಬ ವದಂತಿ ಕೇಳಿಬರುತ್ತಿದೆ. ರಮಣ್ ಸಿಎಂ ಹುದ್ದೆಯಲ್ಲಿ ಮುಂದುವರಿದರೆ ಮುಂದಿನ ವರ್ಷ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭವಿಷ್ಯ ಉಜ್ವಲವಾಗದು ಎಂಬ ಆಂತರಿಕ ಸಮೀಕ್ಷೆಯ ವರದಿ ಇದಕ್ಕೆ ಕಾರಣ ಎಂದು ಬೆಂಬಲಿಗರು ವಿಶ್ಲೇಷಿಸುತ್ತಿದ್ದಾರೆ. ಆದರೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರ ಶ್ರೀರಕ್ಷೆ ಸಿಂಗ್ ಅವರಿಗಿದೆ. ರಾಜನಾಥ್ ಅವರು ತಮ್ಮದೇ ಠಾಕೂರ್ ವಂಶದ ನಿಕಟವರ್ತಿಯನ್ನು ಉಳಿಸಲು ಕಂಕಣಬದ್ಧರಾಗಿದ್ದಾರೆ ಎನ್ನಲಾಗಿದೆ. ಆದರೆ ದಿಲ್ಲಿಯಲ್ಲಿ ರಾಜನಾಥ್ ಸಿಂಗ್ ಮಾತನ್ನು ಯಾರು ಕೇಳುತ್ತಾರೆ ಎನ್ನುವುದು ಇನ್ನೊಂದು ಪ್ರಶ್ನೆ.

ಪವಾರ್‌ಗೆ ರಾಹುಲ್ ಅಲರ್ಜಿ

ಎಲ್ಲ ಪಕ್ಷಗಳ ಜತೆಗೂ ನಿಕಟ ನಂಟು ಹೊಂದಿರುವ ಪವಾರ್ ಸಹಜವಾಗಿಯೇ ಭ್ರಮನಿರಸನಗೊಂಡಿದ್ದಾರೆ. ನ್ಯೂಸ್‌ಪೋರ್ಟೆಲ್ ಒಂದಕ್ಕೆ ಸುದೀರ್ಘ ಸಂದರ್ಶನ ನೀಡಿದ ಪವಾರ್, ದೇಶದಲ್ಲಿ ಬಿಜೆಪಿಗೆ ಪರ್ಯಾಯ ಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ವಿರೋಧಿ ಒಕ್ಕೂಟ ರಚನೆಗೆ ತಾನು ಮುಂದಾಗುವುದಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ. ಬಹುಶಃ ಇದಕ್ಕೆ ಮುಖ್ಯ ಕಾರಣವೆಂದರೆ, ಅಂಥ ಮೈತ್ರಿಕೂಟದ ನೇತೃತ್ವವನ್ನು ರಾಹುಲ್‌ಗಾಂಧಿ ವಹಿಸಬೇಕು ಎಂದು ಆಗ್ರಹ ಮಂಡಿಸುವ ಕಾಂಗ್ರೆಸ್ ಚಾಳಿ. ನಾಯಕತ್ವದ ಆಯ್ಕೆ ಮೋದಿ ಹಾಗೂ ರಾಹುಲ್ ನಡುವೆ ಎಂಬ ಸ್ಥಿತಿ ನಿರ್ಮಾಣವಾದಾಗ ಸಹಜವಾಗಿಯೇ ಜನರ ಸಾರ್ವತ್ರಿಕ ಅಭಿಪ್ರಾಯ ಮೋದಿ ಪರ ಇರುತ್ತದೆ ಎನ್ನುವುದು ಅವರ ನಿಲುವು. ಆದರೆ ಸೋನಿಯಾಗಾಂಧಿ ಹಾಗೂ ರಾಹುಲ್ ಸ್ವತಃ ಪವಾರ್ ಅವರನ್ನು ಭೇಟಿ ಮಾಡಿ, 2019ರ ಚುನಾವಣೆಯಲ್ಲಿ ಮೋದಿಗೆ ಸೆಡ್ಡುಹೊಡೆಯುವ ಸಲುವಾಗಿ ಮೈತ್ರಿಕೂಟ ರಚನೆಗೆ ಮುಂದಾಗುವಂತೆ ಕೋರಿದ್ದಾರೆ ಎಂಬ ಗಾಳಿಮಾತು ಕೇಳಿಬರುತ್ತಿದೆ. ಆದರೆ ಕನಿಷ್ಠ ಮಹಾರಾಷ್ಟ್ರದಲ್ಲಿ ಕೂಡಾ ಇದು ಹೇಳಿದಷ್ಟು ಸುಲಭವಲ್ಲ. ಏಕೆಂದರೆ ಪವಾರ್ ಅವರಿಗೆ ಅವರದ್ದೇ ಆದ ಯೋಚನೆ ಹಾಗೂ ಹಿತಾಸಕ್ತಿ ಇದೆ. ಆದ್ದರಿಂದ ಯಾವುದೇ ದಾರಿ ಹಿಡಿಯುವ ಮೊದಲು ಅವರು ಯೋಚಿಸುತ್ತಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)