varthabharthi

ಅನುಗಾಲ

ಇದು ಕನ್ನಡ ಸಾಹಿತ್ಯದ ನಿಸ್ತೇಜ ಸ್ಥಿತಿಯೇ?

ವಾರ್ತಾ ಭಾರತಿ : 4 May, 2017
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಕಾಸರಗೋಡು ಭಾಗದ 22 ಲೇಖಕರ (ಕನ್ನಡವೇ ಇರಬೇಕು) ಸುಮಾರು 33 ಕೃತಿಗಳು ಬಿಡುಗಡೆಯಾದವು. ಒಂದು ಮಹತ್ತರವಾದ ಉದ್ದೇಶದಿಂದಲೇ ಇವು ಬೆಂಗಳೂರಿನಲ್ಲಿ ಬಿಡುಗಡೆಯಾಗಿರಬೇಕು ಎಂಬುದೇ ನನ್ನ ಕುತೂಹಲಕ್ಕೆ ಕಾರಣವಾಯಿತು. ಏಕೆಂದರೆ ಸಾಮಾನ್ಯವಾಗಿ ಕರಾವಳಿಯ ಕೃತಿಗಳು ಮಂಗಳೂರು, ಉಡುಪಿ, ಪುತ್ತೂರು, ಸುಳ್ಯ, ಕಾಸರಗೋಡು ಮುಂತಾದ ಕೇಂದ್ರಗಳಲ್ಲಿ ಬಿಡುಗಡೆಯಾಗುತ್ತವೆ. ಈ ಬಾರಿ ಮಾತ್ರ ಈ ಕೃತಿಗಳು ರಾಜ್ಯದ ಕೇಂದ್ರಸ್ಥಾನದಲ್ಲಿ ಯಾಕೆ ಬಿಡುಗಡೆಯಾದವು ಎಂದು ತಿಳಿಯಲು ಪ್ರಯತ್ನಿಸಿದೆ. ಅಧಿಕೃತ ಮಾಹಿತಿ ದೊರಕದಿದ್ದರೂ ಸಾಮಾನ್ಯ ನಂಬಿಕೆಯಂತೆ ಈ ಲೇಖಕರ ಬರಹಗಳಿಗೆ ಈ ಹಿಂದೆ ಯಥೋಚಿತ ಮನ್ನಣೆ ಸಿಗದಿದ್ದ ಕಾರಣ ಈ ಬಾರಿ ಬೆಂಗಳೂರಿನಲ್ಲಿ ಬಿಡುಗಡೆ ಮಾಡುವ ಮೂಲಕ ಕನ್ನಡ ಸಾಹಿತ್ಯದ ‘ರಾಷ್ಟ್ರಪತಿ ಭವನ’ದ ಗಮನ ಸೆಳೆಯುವ ಉದ್ದೇಶ ಇದರಲ್ಲಿತ್ತು ಎಂದು ತಿಳಿಯಿತು.

ಎಂದಿನಂತೆಯೆ ಪತ್ರಿಕೆಗಳ ಆವೃತ್ತಿಗಳ ಅವಾಂತರದಲ್ಲಿ ಈ ಬಿಡುಗಡೆಯ ಸುದ್ದಿ ಬೆಂಗಳೂರಿನಲ್ಲಿ ಮಾತ್ರ ಪ್ರಕಟವಾಗಿ ರಾಜ್ಯದ ಇತರೆಡೆ ಅಷ್ಟಾಗಿ ಸುದ್ದಿ ಮಾಡಲಿಲ್ಲ. ಬಿಡುಗಡೆಯ ಮಾಹಿತಿಯನ್ನು ಫೇಸ್‌ಬುಕ್, ವಾಟ್ಸ್‌ಆ್ಯಪ್ ಮುಂತಾದ ಅಂತರ್ಜಾಲ ಸುದ್ದಿ ಮೂಲಗಳಿಂದ ಸಂಗ್ರಹಿಸಬೇಕಾಯಿತು. ಹೇಗೂ ಇರಲಿ, ಬೆಂಗಳೂರಿನಲ್ಲಿ ಬಿಡುಗಡೆಯ ಸುಖ ಪಡೆದ ಕೃತಿಗಳೂ ಲೇಖಕರೂ ಸಂತೋಷ-ಸಮಾಧಾನಗಳಿಂದ ವಿಹರಿಸಿದರೆ ಅಷ್ಟೇ ಸಂತೋಷ ನಮಗೆ-ಓದುಗರಿಗೆ, ಕನ್ನಡದ, ಸಾಹಿತ್ಯದ ಹಿತಚಿಂತಕರಿಗೆ.

ನನಗೆ ಕನ್ನಡದಲ್ಲಿನ ಈ ಗಡಿನಾಡು, ಹೊರನಾಡು, ಒಳನಾಡು ಮುಂತಾದ ಭಿನ್ನತೆಗಳು ಕೃತಕವಾದವುಗಳು ಮತ್ತು ಸಾಹಿತ್ಯೇತರ ಜಗತ್ತಿನ ಸೃಷ್ಟಿಗಳು ಎಂದೇ ಅನ್ನಿಸುತ್ತದೆ. ಇವೆಲ್ಲ ಇದ್ದರೆ ಇವನ್ನು ಹೊರತುಪಡಿಸಿದ ಕನ್ನಡನಾಡು ಮತ್ತು ಅದರ ಕೇಂದ್ರ ಯಾವುದು ಎಂಬ ಪ್ರಶ್ನೆ ಹುಟ್ಟಿಕೊಳ್ಳು ತ್ತದೆ. ಯಾರೊಬ್ಬರೂ ತಾವಿರುವ ಜಾಗ, ಊರು, ಪ್ರದೇಶ ಮೂಲೆಯದ್ದು ಮತ್ತು ರಾಜಕೀಯ ಕೇಂದ್ರಗಳೇ ನಿಜವಾದ ಕೇಂದ್ರ ಎಂದು ಭಾವಿಸಿದರೆ ಹೀಗೆ ಬಿಡುಗಡೆಗೆ ಬೆಂಗಳೂರಿಗೆ- ಕಾಯಿಲೆ ತೀವ್ರವಾದಾಗ ನಿಮ್ಹಾನ್ಸ್ ಮುಂತಾದ ‘ಮೇಜರ್ ಆಸ್ಪತ್ರೆ’ಗಳಿಗೆ ಒಯ್ಯುವುದಿಲ್ಲವೇ- ಹಾಗೆ ಒಯ್ಯ ಬೇಕಾಗುತ್ತದೆ. ಕೇಂದ್ರವೆಂದರೆ ಸರಕಾರೀ ಸವಲತ್ತುಗಳಿರುವ ಜಾಗವಲ್ಲ.

ಬಹುರಾಷ್ಟ್ರೀಯ ಕಂಪೆನಿಗಳು ಬಂಡವಾಳ ಹೂಡಬೇಕಾದರೆ ವಿದ್ಯುತ್, ವಿಮಾನ, ಅಂತರ್ಜಾಲ, ಪಂಚತಾರಾ ಸಮೂಹ ಇವೆಲ್ಲ ಇರುವ ತಾವನ್ನೇ ಅರಸುತ್ತಾರೆ. ಏಕೆಂದರೆ ಅವರದ್ದು ಭೌತಿಕ, ವ್ಯಾವಹಾರಿಕ ಬದುಕು. ಸಾಹಿತ್ಯ, ಸಂಗೀತ ಮತ್ತಿತರ ಯಾವುದೇ ಕಲೆಯೂ ಹಾಗಲ್ಲ. ಕಲಾ ಕೇಂದ್ರಕ್ಕೆ ಈ ಅನಗತ್ಯಗಳ ಅಗತ್ಯಗಳಿಲ್ಲ. ಹಾಡುವುದಕ್ಕೆ ಯಾವೊಬ್ಬ ಗಾಯಕನೂ ಬೆಂಗಳೂರಿನ, ಹೋಗಲಿ, ಯಾವುದೇ ಮಹಾನಗರದ-ಪಟ್ಟಣದ ಜನನಿಬಿಡ ಬೀದಿಯನ್ನು ಆರಿಸಿಕೊಂಡ ಉದಾಹರಣೆಯಿಲ್ಲ. ಅಕ್ಷಾಂಶ-ರೇಖಾಂಶಗಳ ಹಂಗು ಸಂವೇದನೆಗಿಲ್ಲ. ಮನುಷ್ಯನ ಬದುಕಿನ ಬುದ್ಧಿ ಕೇಂದ್ರವಾದ ಮಿದುಳು ತಲೆಯೊಳಗಿದೆ; ಹೃದಯ ಸ್ವಲ್ಪಎಡಭಾಗದಲ್ಲಿದೆ. ಮನಸ್ಸಿಗೆ, ಭಾವಕ್ಕೆ ಯಾವುದು ಕೇಂದ್ರ?

ನಾವಿರುವ ಸ್ಥಳವೇ ಕನ್ನಡದ ಕೇಂದ್ರವಾಗುವ ಹಾಗೆ ಬರೆಯಬೇಕು ಇಲ್ಲವೆ ಬದುಕಬೇಕು. ಅದಿಲ್ಲದಿದ್ದರೆ ಬದುಕು-ಬರಹ ಎರಡೂ ಒಂದು ಪೋಸ್ಟರ್ ಗೀಳಿನಂತಿರುತ್ತದೆ. ಶಿವರಾಮ ಕಾರಂತರು ಪುತ್ತೂರು ನಂತರ ಕೋಟದಲ್ಲಿ ವಾಸವಾಗಿದ್ದಾಗ ಎಂದೂ ಬೆಂಗಳೂರಿನ ಕನಸನ್ನು ಕಂಡಿರಲಿಕ್ಕಿಲ್ಲ. ಮೈಸೂರಿನಲ್ಲಿದ್ದ ಕುವೆಂಪು ತಾನು ಸ್ಥಳ ಬದಲಾಯಿಸಿದರೆ ಮಾತ್ರ ಕೀರ್ತಿ ಎಂದುಕೊಂಡಿರಲಿಕ್ಕಿಲ್ಲ. ಬೇಂದ್ರೆ ಸಾಧನಕೇರಿಯ ಹೊರತು ಬರೆಯಲಿಕ್ಕೆ, ಜಗಳಾಡಲಿಕ್ಕೆ ಇನ್ನಷ್ಟು ಪ್ರಶಸ್ತ ದೊಡ್ಡ ಜಾಗವನ್ನು ಬಯಸಿರಲಿಕ್ಕಿಲ್ಲ. ಇವರೆಲ್ಲರೂ ತಾವಿದ್ದಲ್ಲೇ ಕನ್ನಡಮ್ಮನನ್ನು ಆವಾಹಿಸಿಕೊಂಡರು; ಕನ್ನಡವನ್ನು ತಮ್ಮ, ತಮ್ಮ ಮಣ್ಣಿನ ಮೂಲಕ, ಪ್ರತಿಷ್ಠಾಪಿಸಿಕೊಂಡರು. ಆನಂತರದ ಉದಾಹರಣೆಯನ್ನು ಗಮನಿಸಿದರೂ ಕೆ.ವಿ. ಸುಬ್ಬಣ್ಣ ತಾವಿದ್ದ ಹೆಗ್ಗೋಡನ್ನೇ ಕನ್ನಡದ ಮಾತ್ರವಲ್ಲ, ರಂಗಭೂಮಿಯ ಸಾಂಸ್ಕೃತಿಕ ಭೂಪಟದಲ್ಲೇ ಒಂದು ಕೇಂದ್ರವನ್ನಾಗಿಸಿದರು.

ಇದು ಅವರವರ ತಾಕತ್ತು ಎಂದು ಹೇಳಿ ಜಾರಿಕೊಳ್ಳುವುದು ಸುಲಭ. ಆದರೆ ಹೀಗೆ ಶಿಖರವೇರಿದವರು ಇತರರಿಗೆ ಉದಾಹರಣೆಗಳಾಗದೇ ಹೋದರೆ ಅದು ಅವರ ದುರಂತವಲ್ಲ; ಸಮಾಜದ ದುರಂತ. ಒಟ್ಟಂದದಲ್ಲಿ ಕಲೆ ಮರುಳು ಮಾಡುವ ಸಾಧನವಲ್ಲವಾದ್ದರಿಂದ ಯಾವುದೇ ನೈಜಕಲೆ ಸಮಾಜವನ್ನು ಒಟ್ಟಾಗಿ ಪ್ರಭಾವಿಸುವುದಿಲ್ಲ. ಕುವೆಂಪು ಕುರಿತು ಅವರ ಮಗ ಪೂರ್ಣಚಂದ್ರ ತೇಜಸ್ವಿ ಬರೆದಂತೆ, ‘ ಅಂದರೆ ಸಮಾಜಕ್ಕೆ ಒಂದು ಗೊತ್ತಾದ ಸಂದರ್ಭದಲ್ಲಿ, ಕಾಲದಲ್ಲಿ, ಸಾಹಿತ್ಯ ಮುಂತಾದ ಕಲೆಗಳು ಬಳಕೆಗೆ ಬರುತ್ತವೆ. ಅವು ಸೀಮಿತ; ಎಂದೂ ಅಪರಿಮಿತವಲ್ಲ. ಇಪ್ಪತ್ತನೆಯ ಶತಮಾನದ ತನಕ ಕನ್ನಡ ಸಾಹಿತ್ಯ ಕಲ್ಪಿಸಿಕೊಳ್ಳಬಹುದಾದ ಎಲ್ಲ ಸಾಧ್ಯತೆಗಳ ಭಂಡಾರವನ್ನು ತೆರೆದು ಪರೀಕ್ಷಿಸಿತು. ಸಾಹಿತ್ಯದ ಅದೃಷ್ಟಕ್ಕೆ ತಾಂತ್ರಿಕತೆ, ವೈಜ್ಞಾನಿಕತೆ ಎಷ್ಟೇ ಬೆಳೆದರೂ ಭಾರತದಂತಹ ಗ್ರಾಮರಾಜ್ಯದ ದೇಶದಲ್ಲಿ ಅದು ಸಂವೇದನೆಯನ್ನು ಪ್ರಭಾವಿಸುವಷ್ಟು ಬೆಳೆಯಲಿಲ್ಲ; ದೈನಂದಿನ ಬದುಕನ್ನು ಕಿವಿಯ ವರೆಗೆ ಅಂದರೆ ಕೇಳುವ ಮೂಲಕ ಹಿಗ್ಗಿಸುವಷ್ಟು ನಿಕಟವಾಯಿತೇ ಹೊರತು ಕಣ್ಣನ್ನು ಮುಚ್ಚುವಷ್ಟಲ್ಲ.

ಆದರೆ ಇಪ್ಪತ್ತನೆಯ ಶತಮಾನದ ಅಂತ್ಯಕ್ಕೆ ಅದು ದೃಶ್ಯ ಮಾಧ್ಯಮದ ಮೂಲಕ ಟಿವಿ, ಮೊಬೈಲ್ ಮುಂತಾದ ಸಾಧನಗಳನ್ನು ಬದುಕಿಗೆ ನೀಡಿದ್ದರ ಪರಿಣಾಮವಾಗಿ ಓದುವ, ಕೇಳುವ ಸಾಧ್ಯತೆಗಳ ಹಾದಿಯನ್ನು ಬದಲಾಯಿಸಿತು ಮತ್ತು ಕೆಲವೊಮ್ಮೆ ಪಲ್ಲಟಗೊಳಿಸಿತು. ಕ್ಯಾಲ್ಕುಲೇಟರ್ ಬಂದ ಮೇಲೆ 2+2 ಕೂಡಿಸುವುದಕ್ಕೂ ಅದನ್ನೇ ಅವಲಂಬಿಸುವ ತಲೆಮಾರೊಂದು ಸೃಷ್ಟಿಯಾಗಿದೆಯೆನ್ನುವುದನ್ನು ಮರೆಯಲಾಗದು. ನಾವೆಷ್ಟೇ ಆತ್ಮಸಮರ್ಥನೆ ಮಾಡಿಕೊಂಡರೂ ಓದುವ ಹವ್ಯಾಸ ಕಡಿಮೆಯಾಗಿದೆ. ಸಾಹಿತ್ಯದಂತಹ ಸಂವೇದನಾಶೀಲ ಮಾಧ್ಯಮಗಳನ್ನು ವೈಚಾರಿಕತೆಯ ನೆಪದ ಸಾಮಾಜಿಕ ಆಗುಹೋಗುಗಳು ಆಕ್ರಮಿಸಿವೆ. ಪರಿಣಾಮವಾಗಿ ಸಾಹಿತ್ಯವನ್ನು ಓದುವವರ ಸಂಖ್ಯೆ ಕಡಿಮೆಯಾಗಿದೆ.

ಅಲ್ಲದೆ ಬರಹಗಾರರ ಸಂಖ್ಯೆ ಮಿತಿಮೀರಿದೆ. ಸೈದ್ಧಾಂತಿಕ, ತಾತ್ವಿಕ, ಇಲ್ಲವೆ ಗುಣಮಟ್ಟದ ಕಾರಣಕ್ಕೆ ಬರೆಯುವ ಮತ್ತು ಬರೆಯದಿರುವ ಹಾಗೂ ಬರಹವನ್ನು ತಿರಸ್ಕರಿಸುವ ಕಾಲವೊಂದಿತ್ತು. ಆದರೆ ಇಂದು ಕೆಲವು ಪತ್ರಿಕೆಗಳಾದರೂ ಯಾವುದೇ ತತ್ವ, ಸಿದ್ಧಾಂತ ಇಲ್ಲವೆ ವೈಚಾರಿಕ ನಿಲುವುಗಳ ಅಡಿಪಾಯವಿಲ್ಲದೆ ಎಲ್ಲರನ್ನೂ ರಂಜಿಸುವ ಮಟ್ಟಕ್ಕಿಳಿದು ತಮ್ಮ ಅಸ್ತಿತ್ವಕ್ಕಾಗಿ ಹೆಣಗಾಡುತ್ತಿರುವ ಸಂರ್ಭದಲ್ಲಿ ಯಾರು ಏನು ಬೇಕಾದರೂ ಬರೆಯುವ ಸಾಧ್ಯತೆಗಳು ಹೆಚ್ಚಾಗಿವೆ. ಇಂತಹ ಸಂದರ್ಭಗಳಲ್ಲಿ ಒಳ್ಳೆಯದು ಯಾವುದು, ಕೆಟ್ಟದ್ದು ಯಾವುದು ಎಂದು ಹೇಳುವ ಮಂದಿ ಕಡಿಮೆಯಾಗಿದ್ದಾರೆ.

ಯಾರೂ ನಿಷ್ಠುರ ಸತ್ಯವನ್ನು ಹೇಳದೆ ಋಷಿಮುನಿಗಳಂತೆ ‘‘ಸತ್ಯಂ ಬ್ರೂಯಾತ್, ಪ್ರಿಯಂ ಬ್ರೂಯಾತ್‌ ನ ಬ್ರೂಯಾತ್ ಸತ್ಯಮಪ್ರಿಯಂ’’ ಸೂಕ್ತಿಯ ಉತ್ತರಾರ್ಧವನ್ನಷ್ಟೇ ಅಶ್ವಮೇಧದ ಕುದುರೆಯ ಹಣೆಗೆ ಕಟ್ಟಿ ವಿಜಯಯಾತ್ರೆ ಕೈಗೊಳ್ಳುತ್ತಿದ್ದಾರೆ. ಇದರಿಂದಾಗಿ ಬರಹಗಾರರಿಗೆ ತಮ್ಮ ಬರಹವನ್ನೂ ಓದದಿದ್ದರೂ ಸರಿಯೆ ಹೊಗಳಿದರೆ ಸಾಕು ಎಂಬ ಸಹಜ ಮೋಹ ಆವರಿಸುತ್ತದೆ. ಎಲ್ಲ ಕೃತಿ ವಿಮರ್ಶೆಗಳೂ ‘‘ಇದೊಂದು ಓದಬಹುದಾದ ಕೃತಿ’’ ಅಥವಾ ‘‘ಲೇಖಕರಿಗೆ ಒಳ್ಳೆಯ ಭವಿಷ್ಯವಿದೆ’’ ಎಂಬಂತಹ ಅಡ್ಡ ಗೋಡೆಯ ಮೇಲೆ ದೀಪವಿಡುತ್ತವೆ.

ಕನ್ನಡ ಭಾಷೆಯೊಳಗೆ ಹತ್ತಾರು ವೈವಿಧ್ಯಗಳಿವೆಯಲ್ಲ! ಅವು ಪ್ರಾದೇಶಿಕವಾಗಿರಬಹುದು, ಉಪಭಾಷೆಗಳಂತಿರುವ ಪುಟ್ಟ ಭಿನ್ನತೆಯ ಆದರೆ ಒಂದು ಸಂಸ್ಕೃತಿಯ ಪ್ರತೀಕವಿರಬಹುದು, ಅಥವಾ ಕನ್ನಡದೊಳಗೇ ಇದ್ದು ಮನೆಯೊಳಗೆ ಮಾತನಾಡುವ ಆದರೆ ವ್ಯಾವಹಾರಿಕವಾಗಿ ಕನ್ನಡದ ಅಡಿಯಾಳಾಗಿರುವ ಊಳಿಗಮಾನ್ಯ ಭಾಷೆಯಿರಬಹುದು. ಅಂತಹವರಿಗೆ ಕನ್ನಡವು ಒಂದು ಫ್ಯೂಡಲ್ ಅಥವಾ ಕೊಲೊನಿಯಲ್ ಭಾಷೆಯಂತೆ ಕಂಡರೆ ವಿಚಿತ್ರವಲ್ಲ. ಈ ರೀತಿಯ ಆಸೆ-ಆಕಾಂಕ್ಷೆಗಳನ್ನು ಕೆರಳಿಸುವಂತೆ ರಾಜಕಾರಣಿಗಳು ಒಂದೊಂದು-ಕೆಲವೇ ಸಾವಿರ ಜನರು ಮಾತನಾಡಿದರೂ ಸರಿಯೆ ಅವರಿಗೊಂದು ಅಕಾಡಮಿ ಎಂಬಂತೆ ಸಾರ್ವಜನಿಕ ಬೊಕ್ಕಸಕ್ಕೆ ಕೈಯಿಕ್ಕಿದಾಗ ನಮ್ಮ ಯಾವ ಸಂವೇದನಶೀಲ ಬರಹಗಾರರಾಗಲೀ ವಿದ್ವಾಂಸರಾಗಲೀ ಕನ್ನಡದ ಕಾವಲುಪಡೆಯಾಗಲೀ ಕಟ್ಟಾಳುಗಳಾಗಲೀ ವಿರೋಧಿಸಲಿಲ್ಲ.

ಬದಲಾಗಿ ಹೊಸ ರೀತಿಯಲ್ಲಿ ‘‘ಕನ್ನಡ ಮತ್ತು (ಸಂಬಂಧಿತ) ... ಭಾಷೆ ತಮ್ಮ ಎರಡು ಕಣ್ಣುಗಳು’’ ಎಂದು ಹೊಸ ಪರಿಭಾಷೆಯನ್ನಾಡಿದರು. ಇಲ್ಲಿಯ ತನಕ ಕನ್ನಡವೆಂಬ ಒಂದೇ ಕಣ್ಣಿನಲ್ಲಿ ಲೋಕ ನೋಡುತ್ತಿದ್ದೀರೇನು ಎಂದು ಯಾರೂ ಪ್ರಶ್ನಿಸಲಿಲ್ಲ. ಕಣ್ಣೆರಡಿದ್ದರೂ ಮೂಗೊಂದೇ. ಕನ್ನಡವೇ ತನ್ನ ಮೂಗು ಎಂದು ಹೇಳಿದವರಿಲ್ಲ. ಇಷ್ಟರ ಮಟ್ಟಿಗೆ ದ್ವೈತ ಸಂಕಲ್ಪವು ಸಾಹಿತ್ಯಕ್ಕೆ, ಭಾಷೆಗೆ, ಸಂವೇದನೆಗೂ ಸಮ-ವೇದನೆಗೂ ನೆರವಾಯಿತು.

ಓದುವವರನ್ನು ತಲುಪುವುದು ಮೊದಲಿನಷ್ಟು ಸುಲಭವಲ್ಲ. ಎಲ್ಲರೂ ತಿಳಿದವರೇ. ಹಳಿಯುವ ಮೊದಲು ತನ್ನನ್ನೂ ತಾನು ಹಳಿಯುವ ಆ ವ್ಯಕ್ತಿಯನ್ನೂ ಹೋಲಿಸಿಕೊಳ್ಳುವ ಒಂದು ಅಲಿಖಿತ ಶಿಷ್ಟಾಚಾರವಿತ್ತು. ಅದೀಗ ಮರೆಯಾಗಿದೆ. ವ್ಯಕ್ತಿ ಸ್ವಾತಂತ್ರ್ಯ ಹಿಂದಿನಂತಿಲ್ಲ. ಮಾಸ್ತಿಯವರು ಇಂದು ಗಾಂಧಿಬಝಾರಿನಲ್ಲಿ ನಡೆದಾಡುವುದು ಸುಲಭವಾಗಿರುತ್ತಿರಲಿಲ್ಲ. ಕಾರಂತರು ಬಂದರೆಂದು ಜಾಗಮಾಡಿ ಕೊಡುವ ಮಂದಿ ಇಂದು ಅಪರೂಪವೇ ಅಗಿರುತ್ತಿದ್ದರು. ಕಾರ್ನಾಡರಿಗೇನು ಗೊತ್ತಿದೆ ಎಂದು ಹೇಳುವವನಿಗೂ ನಮ್ಮ ಮಾಧ್ಯಮಗಳಲ್ಲಿ ಮತ್ತು ವೇದಿಕೆಯಲ್ಲಿ ಜಾಗವಿದೆ. ಬರಹದ ಮೌಲ್ಯವಿಕಲ್ಪದ ಸಾಧ್ಯತೆಯ ಕುರಿತು ವಿಚಾರಿಸುವ ಪ್ರಶ್ನೆ ಬಿಡಿ, ಯಾರೂ ಯೋಚಿಸುವುದೂ ಇಲ್ಲ. ವಿಜಯನಗರದ ಕಾಲದಲ್ಲಿ ಮುತ್ತುರತ್ನಗಳನ್ನು ಬೀದಿಬದಿಯಲ್ಲಿ ರಾಶಿಹಾಕಿ ಮಾರುತ್ತಿದ್ದರಂತೆ- ಹಾಗೆ ಇಂದು ಸ್ತುತಿಗಳನ್ನು ವಿಮರ್ಶೆಯ, ಮುನ್ನುಡಿಯ ಹೆಸರಿನಲ್ಲಿ ಕಲೆಹಾಕಿ ಕಲಾವಿದರಾಗುತ್ತಿದ್ದೇವೆ. ಎಲ್ಲ ಪ್ರತಿಮೆಗಳನ್ನು ಒಡೆಯುವಷ್ಟು ಸಾಹಿತ್ಯ-ಸ್ವೇಚ್ಛಾಚಾರಕ್ಕೆ ನಾವೇ ಕಾರಣರಾಗಿದ್ದೇವೆ. ಫಲಿತಾಂಶ: ಸೊನ್ನೆ ಯಾವುದು, ನೂರು ಯಾವುದು ಅರಿಯದಾಗಿದ್ದೇವೆ.

ಎಲ್ಲಿ ಮೌಲ್ಯವನ್ನು ಸ್ವಾರ್ಥಕ್ಕಾಗಿ, ತಕ್ಷಣದ ಸುಖಕ್ಕಾಗಿ, ಪರಸ್ಪರ (ಸ್ವ)ಹಿತಕ್ಕಾಗಿ, ಬಲಿಕೊಡುತ್ತೇವೋ ಆಗ ಪರಿಣಾಮಕ್ಕೂ ನಾವೇ ಹೊಣೆಯಾಗುತ್ತೇವೆ. ಪ್ರಾಯಃ ಇಂದು ಒಳ್ಳೆಯ ಕೃತಿಗಳು ಮತ್ತು (ಅವಕ್ಕೆ) ಒಳ್ಳೆಯ ಸತ್ಯನಿಷ್ಠ ಪ್ರತಿಕ್ರಿಯೆಗಳು ಬಾರದಿರುವುದಕ್ಕೆ ತಥಾಕಥಿತ ವಿದ್ವಜ್ಜನರ ಗುಂಪುಗುಳಿತನ ಮತ್ತು ಆಷಾಢಭೂತಿತನಕ್ಕಿಂತ ಹೆಚ್ಚಿನ ಕಾರಣವಿರಲಿಕ್ಕಿಲ್ಲ. ತೇಜಸ್ವಿಯವರನ್ನು ಮತ್ತೆ ನೆನಪುಮಾಡಿಕೊಳ್ಳುವುದಾದರೆ ಈ ಜನ ವಿದ್ವತ್ ಗೋಷ್ಠಿಗಳಲ್ಲಿ, ವಿಮರ್ಶೆಯಲ್ಲಿ, ಚರ್ಚೆ ಸಮಾವೇಶಗಳಲ್ಲಿ ಅತಿ ನಾಜೂಕಿನ ವಾತಾವರಣ ಒಂದನ್ನು ಸೃಷ್ಟಿ ಮಾಡಿ ಕೇವಲ ಆತ್ಮಗೋಚರ ಮಾತ್ರವಾದ ಪಾರಿಭಾಷಿಕ ಪದಸಮುಚ್ಚಯಗಳನ್ನು ಸೃಷ್ಟಿಸಿ, ನೇರವಾದ ಸರಳವಾದ ಅನ್ಯ ಕ್ಷೇತ್ರದ ವ್ಯಕ್ತಿಗಳು ಸಾಹಿತ್ಯ ಕ್ಷೇತ್ರದ ಹತ್ತಿರ ಸುಳಿಯದೆ ಸಂಕೋಚದಿಂದ ಓಡಿಬಿಡುವಂತೆ ಅತಿ ಸಂಸ್ಕೃತಿಯ ಮೆಣಸಿನ ಹೊಗೆ ಹಾಕಿದ್ದಾರೆ.

ಸಂಪೂರ್ಣ ನಿಸ್ತೇಜ ಸ್ಥಿತಿಯತ್ತ ಕನ್ನಡ ಸಾಹಿತ್ಯ ಹೊರಳುವ ಮುನ್ನ ಅದರ ‘ಬೆಡ್ ಸೋರ್’ಗಳನ್ನು ಶಮನಗೊಳಿಸಬೇಕಾದ ಅಗತ್ಯವಿದೆ. ಮೊನ್ನೆ ಪ್ರಕಟವಾದ 33 ಕೃತಿಗಳ ಒಟ್ಟಾರೆ ಮಾರಾಟವಾದ ಒಟ್ಟು ಪ್ರತಿಗಳ ಸಂಖ್ಯೆ 33ನ್ನು ಮೀರಿಲ್ಲವೆಂದು ಸ್ನೇಹಿತರೊಬ್ಬರು ಕೊಟ್ಟ ಮಾಹಿತಿ ಸಾಹಿತ್ಯದ ಗತಿ ಮತ್ತು ದುರ್ಗತಿಗೆ ಹಿಡಿದ ವೀಕ್ಷಕ ವಿವರಣೆಯಂತಿದೆ. ಧರಣಿ ಕೂರುವುದಾದರೂ ದಿಲ್ಲಿಯಲ್ಲಿ ಕೂರಬೇಕು. ಅದು ರಾಷ್ಟ್ರೀಯ ಸುದ್ದಿಯಾಗುತ್ತದೆ. ಆದರೆ ಮನೆಯಲ್ಲಿ ಕಳೆದುಕೊಂಡ ಸೂಜಿಯನ್ನು ಬೆಳಕಿದೆಯೆಂದು ಬೀದಿಯಲ್ಲಿ ಹುಡುಕಿದರೆ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)