varthabharthi

ಬುಡಬುಡಿಕೆ

ಮುಸ್ಲಿಮ್ ಎತ್ತುಗಳಿಗೆಲ್ಲ ‘ಮುಂಜಿ’ ಯೋಜನೆ!

ವಾರ್ತಾ ಭಾರತಿ : 6 May, 2017
ಚೇಳಯ್ಯ

ಯಾರೋ ‘ಗೋ ಗೋ ಗೋ’ ಎಂದಂತಾಗಿ ಪತ್ರಕರ್ತ ಎಂಜಲು ಕಾಸಿ ಬೆಚ್ಚಿಬಿದ್ದ. ನೋಡಿದರೆ ಯಾರೋ ಇಂಗ್ಲಿಷ್‌ನಲ್ಲಿ ‘ಗೋ’ ಎನ್ನುತ್ತಿದ್ದರು. ಸಮಾಧಾನವಾಯಿತು. ಎಲ್ಲಿ ತನ್ನ ಅಕ್ಕಪಕ್ಕದಲ್ಲಿ ಗೋವುಗಳಿವೆಯೋ ಎಂದು ಅವನು ಭಯಪೀಡಿತನಾಗಿದ್ದ. ಇತ್ತೀಚೆಗೆ ಗೋವುಗಳನ್ನೇನಾದರೂ ಕಂಡರೆ ಆತ ಹುಲಿ ನೋಡುವವನಂತೆ ಹೆದರುತ್ತಿದ್ದ. ಧರಣಿ ಮಂಡಲ ಮಧ್ಯದೊಳಗೆ ಪದ್ಯದಲ್ಲಿ ಅಂತಿಮವಾಗಿ ಪುಣ್ಯಕೋಟಿಯನ್ನು ತಿನ್ನಲು ಹೊರಟ ಖೂಳ ವ್ಯಾಘ್ರ ಬೆಟ್ಟದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದೋ ಅಥವಾ ಗೋರಕ್ಷಕರೇ ಅದನ್ನು ಥಳಿಸಿ ಕೊಂದಿರುವುದೋ ಎಂಬ ಅನುಮಾನ ಇತ್ತೀಚೆಗೆ ಶುರುವಾಗಿತ್ತು. ಈ ಬಗ್ಗೆ ಯಾವುದಾದರೂ ವಿಶ್ವವಿದ್ಯಾನಿಲಯದಿಂದ ಪಿಎಚ್‌ಡಿ ಸಂಶೋಧನೆ ಮಾಡಿದರೆ ಹೇಗೆ ಎಂದು ಯೋಚಿಸುತ್ತಿದ್ದ. ‘ಶಿಲಾಯುಗದಲ್ಲಿ ಗೋರಕ್ಷಕರು ಇದ್ದರೆ?’ ಎಂದು ತಲೆ ಬರಹಕೊಟ್ಟರೆ ಹೇಗೆ ಎಂದು ಲೆಕ್ಕ ಹಾಕುತ್ತಿದ್ದ. ಯಾವುದಕ್ಕೂ ಉತ್ತರ ಪ್ರದೇಶದ ಆದಿತ್ಯನಾಥ್ ಅವರನ್ನು ಒಮ್ಮೆ ಭೇಟಿಯಾಗಿ ಗೋವಿನ ರಕ್ಷಣೆಯ ಕುರಿತಂತೆ ಇನ್ನಷ್ಟು ಮಾಹಿತಿಯನ್ನು ಕಲೆ ಹಾಕಬೇಕು ಅನ್ನಿಸಿತು. ತಕ್ಷಣ ಉತ್ತರ ಪ್ರದೇಶದ ಕಡೆಗೆ ಸಾಗುವ ಲಾರಿಯೊಂದನ್ನು ಹತ್ತಿದ. ನಾಲ್ಕೆದು ದಿನಗಳ ಸುದೀರ್ಘ ಪ್ರಯಾಣದ ಬಳಿಕ ಲಕ್ನೋವನ್ನು ತಲುಪಿದ. ಮುಖ್ಯಮಂತ್ರಿಯನ್ನು ಭೇಟಿ ಮಾಡುವುದು ಹೇಗೆ? ಎಂದು ಅವನಿಗೆ ಅರ್ಥವಾಗಲಿಲ್ಲ. ಅಷ್ಟರಲ್ಲಿ ಯಾರೋ ಅವನಿಗೆ ಸಲಹೆ ನೀಡಿದರು ‘‘ನೋಡೀ...ಇಲ್ಲೇ ಒಬ್ಬ ದೊಡ್ಡ ಗೋರಕ್ಷಕರಿದ್ದಾರೆ...ಅವರನ್ನು ಭೇಟಿಯಾದರೆ ನಿಮಗೆ ಆದಿತ್ಯನಾಥ್ ಅವರ ಸಂದರ್ಶನಕ್ಕೆ ವ್ಯವಸ್ಥೆಯಾಗುತ್ತದೆ...’’ ದನಗಳು ಹಾಕಿದ ಸೆಗಣಿಯನ್ನು ಹಿಂಬಾಲಿಸುತ್ತಾ ಹೋದರೆ ಯಾವುದಾದರೂ ಗೋರಕ್ಷಕರ ಬಳಿ ಅದು ಕೊಂಡೊಯ್ಯಬಹುದು ಎಂದು ಯೋಚಿಸಿದರೆ. ರಸ್ತೆಯಲ್ಲಿ ಸೆಗಣಿ ಕಾಣಲಿಲ್ಲ. ಆದರೆ ಅಲ್ಲಲ್ಲಿ ರಕ್ತದ ಕಲೆಗಳು ಕಾಣಿಸುತ್ತಿತ್ತು. ಅದನ್ನೇ ಹಿಂಬಾಲಿಸುತ್ತಾ ಹೋದ. ಕೊನೆಗೂ ಒಂದು ನಿಗೂಢ ಅಡ್ಡೆಯಲ್ಲಿ ತನ್ನ ಪಟಾಲಂ ಜೊತೆಗೆ ಗೋರಕ್ಷಕ ನಿಂತಿದ್ದ. ಕೈಯಲ್ಲಿ ಕತ್ತಿ, ಕೊಡಲಿ, ದೊಣ್ಣೆ. ಅರೆ! ಇದು ಕಸಾಯಿಖಾನೆಯೇ? ಎಂದು ಅನುಮಾನ ಬಂತು. ‘‘ಸಾರ್...ಕೈಯಲ್ಲಿ ಕತ್ತಿ, ಕೊಡಲಿ ಯಾಕೆ ಸಾರ್?’’ ಕಾಸಿ ಕೇಳಿದ.

‘‘ಮತ್ತೇಕೆ? ಗೋರಕ್ಷಣೆಗೆ’’ ರಕ್ಷಕ ಗೊಗ್ಗರು ಸ್ವರದಲ್ಲಿ ಹೇಳಿದ.

‘‘ಗೋವುಗಳೆಲ್ಲಿವೆ ಸಾರ್?’’ ಕಾಸಿ ಅತ್ತಿತ್ತ ಕಣ್ಣೊರಳಿಸಿ ಕೇಳಿದ.

‘‘ಗೋರಕ್ಷಣೆಗೆ ಗೋವುಗಳು ಯಾಕೆ ಬೇಕು? ನಾವು ಗೋವುಗಳನ್ನು ರಕ್ಷಿಸಿ ಅವನ್ನು ಎಲ್ಲಿಗೆ ಸೇರಿಸಬೇಕೋ ಅಲ್ಲಿ ಸೇರಿಸುತ್ತೇವೆ...ಈ ಊರಿನ ಯಾವುದೇ ರೈತರು ಗೋವುಗಳನ್ನು ಸಾಕಬೇಕಾದರೆ ನಮ್ಮ ರಕ್ಷಣೆಯನ್ನು ಕಡ್ಡಾಯವಾಗಿ ಪಡೆಯಲೇಬೇಕು....’’

‘‘ಅಂದರೆ ನೀವು ಅವರಿಗೆ ಗೋವು ಸಾಕಲು ಸಹಾಯ ಮಾಡುತ್ತೀರಾ?’’ ಕಾಸಿ ಕೇಳಿದ.

‘‘ರಕ್ಷಣೆ ಅಂದರೆ ಹಾಗಲ್ಲ. ಅವರು ತಮ್ಮ ಹಟ್ಟಿಯಲ್ಲಿರುವ ದನಗಳನ್ನು ಹೊರಗೆ ಮಾರಾಟ ಮಾಡದಂತೆ ಕಾವಲು ಕಾಯುತ್ತೇವೆ. ದನಗಳ ಮೇಲೆ ಯಾವುದೇ ದೌರ್ಜನ್ಯ ಎಸಗದಂತೆ ರೈತರ ಮೇಲೆಯೂ ಒಂದು ಕಣ್ಣಿಟ್ಟಿರುತ್ತೇವೆ....’’ ಗೋರಕ್ಷಕ ಹೇಳಿದ. ‘‘ನಿಮ್ಮಿಂದ ದನಗಳಿಗೆ ಯಾವ ರೀತಿಯಲ್ಲಿ ಸಹಾಯವಾಗುತ್ತದೆ?’’ ಕಾಸಿ ಕೇಳಿದ.

‘‘ನೋಡ್ರೀ...ನಾವು ಎಲ್ಲ ದನಗಳಿಗೆ ಆಧಾರ್ ಕಾರ್ಡ್ ವ್ಯವಸ್ಥೆಯನ್ನು ಮಾಡಿದ್ದೇವೆ. ಹಾಗೆಯೇ ಎಲ್ಲ ದನಗಳ ಹೆಸರಲ್ಲಿ ‘ಜನದನ’ ಅಕೌಂಟ್ ತೆರೆದಿದ್ದೇವೆ...ಎಷ್ಟೆಷ್ಟು ದನಗಳಿವೆ ಯೋ ಅಷ್ಟಷ್ಟು ದನಗಳ ಹೆಸರಲ್ಲಿ ಜನಧನ್ ಅಕೌಂಟ್ ತೆರೆಯಲ್ಪಟ್ಟಿವೆ....’’ ರಕ್ಷಕ ಹೆಮ್ಮೆಯಿಂದ ಹೇಳಿದ.

‘‘ಅಂದರೆ ಅದರ ಹೆಸರಲ್ಲಿ ಸರಕಾರ ರೈತರ ಖಾತೆಗೆ ಹಣ ವನ್ನು ಹಾಕುತ್ತದೆಯೇ?’’ ಕಾಸಿ ಸಂಭ್ರಮದಿಂದ ಕೇಳಿದ.

‘‘ಇಲ್ಲ...ಆ ಖಾತೆಗೆ ಸ್ವತಃ ರೈತರು ತಿಂಗಳು ತಿಂಗಳು ಹಣವನ್ನು ಹಾಕಬೇಕು...’’ ಗೋರಕ್ಷಕ ಹೇಳಿದ.

‘‘ರೈತರೇ ಹಾಕಬೇಕೇ? ಅದನ್ನು ಯಾರು ಬಳಸುತ್ತಾರೆ?’’

ಗೋರಕ್ಷಕ ಕಿರುನಗೆ ನಕ್ಕು ಮೀಸೆಯನ್ನೊಮ್ಮೆ ತಿರುವಿ ಹೇಳಿದ ‘‘ಗೋರಕ್ಷಣೆಗಾಗಿ ನಾವು ಬಳಸುತ್ತೇವೆ...ಎಲ್ಲ ರೈತರು ಕಡ್ಡಾಯವಾಗಿ ಆ ‘ಜನದನ’ ಖಾತೆಗೆ ಪ್ರತಿತಿಂಗಳು ಹಣವನ್ನು ಹಾಕಲೇ ಬೇಕು. ಹಾಕದಿದ್ದರೆ ಅವರ ಹಟ್ಟಿಗೆ ನುಗ್ಗಿ ದನವನ್ನು ಎಳೆದುಕೊಂಡು ಗೋಶಾಲೆಗೆ ಸಾಗಿಸುತ್ತೇವೆ...ರಕ್ಷಣೆಗಾಗಿ ನಮಗೆ ನೀಡುವ ಹಣವನ್ನು ಕೊಟ್ಟ ಬಳಿಕ ಆ ದನವನ್ನು ತೆಗೆದುಕೊಂಡು ಹೋಗಬಹುದು’’

‘‘ನೀವು ಆ ಹಣವನ್ನು ಏನು ಮಾಡುತ್ತೀರಿ?’’ ಕಾಸಿ ಕೇಳಿದ.

‘‘ಗೋರಕ್ಷಣೆಗೆ ಬಳಸುತ್ತೇವೆ’’ ರಕ್ಷಕ ಹೇಳಿದ.

‘‘ಯಾವ ರೀತಿಯಲ್ಲಿ....ಗೋವುಗಳಿಗೆ ಹುಲ್ಲು, ಹಿಂಡಿಯನ್ನೆಲ್ಲ ನೀವೇ ಒದಗಿಸುತ್ತೀರಾ?’’

‘‘ಗೋವುಗಳಿಗಲ್ಲ. ಗೋವುಗಳಿಗೆ ಹಿಂಡಿ, ಹುಲ್ಲು ಕೊಡುವುದು ಗೋಮಾಲಕರ ಹೊಣೆಗಾರಿಕೆ. ನಾವು ನಮ್ಮ ಗೋರಕ್ಷಣಾ ಪಡೆಗಳ ಸದಸ್ಯರಿಗೆ ಹಿಂಡಿ ಹುಲ್ಲು ಕೊಡಲು ಅದನ್ನು ಬಳಸುತ್ತೇವೆ. ಸಂಜೆಯಾಗು ವಾಗ ಬೇಕಾಗುವ ತೀರ್ಥ, ಪ್ರಸಾದಗಳಿಗೆ ಹಣ ಬೇಡವೇ? ಹಾಗೆಯೇ ಪ್ರತಿ ಗೋರಕ್ಷಕರಿಗೂ ಗೋರಕ್ಷಣಾ ವೇತನ ಎನ್ನುವುದನ್ನು ನಿಗದಿ ಪಡಿಸಿದ್ದೇವೆ. ಗೋರಕ್ಷಣೆಯ ಸಂದರ್ಭದಲ್ಲಿ ದೋಚಿರುವುದನ್ನು ನಾವು ಸಮಾನವಾಗಿ ಹಂಚಿಕೊಳ್ಳುತ್ತೇವೆ. ಯಾಕೆಂದರೆ ಸಮಾನತೆ, ನ್ಯಾಯದಲ್ಲಿ ನಾವು ಸದಾ ಮುಂದು. ರಾಮರಾಜ್ಯದಲ್ಲಿ ಯಾರಿಗೂ ಅನ್ಯಾಯ ಆಗಬಾರದು ನೋಡಿ?’’

‘‘ಗೋರಕ್ಷಣೆಯ ಕುರಿತಂತೆ ನಿಮ್ಮಲ್ಲಿ ಇನ್ನೇನು ಯೋಜನೆಗಳಿವೆ?’’ ಕಾಸಿ ಕೇಳಿದ.

‘‘ಮುಖ್ಯವಾಗಿ ಗೋವುಗಳನ್ನು ಬೀದಿಗಳಲ್ಲಿ ಮೇಯಲು ಬಿಡಬಾರದು. ಈ ಬಗ್ಗೆ ಮುಖ್ಯಮಂತ್ರಿಯವರು ಕಾನೂನು ತರಲಿದ್ದಾರೆ’’ ಗೋರಕ್ಷಕ ಹೇಳಿದ.

‘‘ಯಾಕೆ ಸಾರ್? ದನಗಳ್ಳರ ಭೀತಿಯಿಂದಲೇ?’’ ಕಾಸಿ ಕೇಳಿದ.

‘‘ದನಗಳ್ಳರನ್ನು ನಾವು ನೋಡಿಕೊಳ್ಳುತ್ತೇವೆ. ಆದರೆ ಹಿಂದೂ ದನಗಳು ಮುಸ್ಲಿಮ್ ಎತ್ತುಗಳ ಜೊತೆಗೆ ಓಡಾಡುವುದು ನಮ್ಮ ಗಮನಕ್ಕೆ ಬಂದಿದೆ. ಇದೊಂದು ರೀತಿಯಲ್ಲಿ ಮುಸ್ಲಿಮರು ‘ಗೋವು ಜೆಹಾದ್’ ಮಾಡಿ, ಹಿಂದೂ ದನಗಳ ಜಾತಿ ಕೆಡಿಸುತ್ತಿದ್ದಾರೆ. ಹಿಂದೂ ದೇವತೆಗಳಿರುವ ದನಗಳನ್ನು ಮುಸ್ಲಿಮರ ಎತ್ತುಗಳು ಪ್ರೇಮಿಸುವುದು ಅಕ್ಷಮ್ಯ. ಆದುದರಿಂದ ಹಿಂದೂ ದನಗಳು ಹಿಂದೂ ಎತ್ತುಗಳನ್ನು ಮಾತ್ರ ಪ್ರೇಮಿಸಬೇಕು ಎಂದು ಎಲ್ಲ ರೈತರಿಗೂ ಆದೇಶ ನೀಡಿದ್ದೇವೆ...’’ ಗೋರಕ್ಷಕ ಆಕ್ರೋಶದಿಂದ ಹೇಳಿದ.

ಕಾಸಿ ಬೆಚ್ಚಿ ಬಿದ್ದ ‘‘ಸಾರ್...ಮುಸ್ಲಿಮ್ ಎತ್ತುಗಳನ್ನು ಗುರುತಿಸುವುದು ಹೇಗೆ?’’

‘‘ಅದಕ್ಕೂ ನಮ್ಮ ಮುಖ್ಯಮಂತ್ರಿಯವರಲ್ಲಿ ಮಾರ್ಗವಿದೆ. ಎಲ್ಲ ಮುಸ್ಲಿಮರು ತಾವು ಸಾಕುವ ಎತ್ತುಗಳಿಗೆ ಕಡ್ಡಾಯವಾಗಿ ಮುಂಜಿ ಮಾಡಿಸಬೇಕು ಎಂದು ಆದಿತ್ಯನಾಥ್ ಆದೇಶ ನೀಡಿದ್ದಾರೆ. ಮುಸ್ಲಿಮ್ ಎತ್ತುಗಳ ಮುಂಜಿ ಯೋಜನೆಗೆ ಈಗಾಗಲೇ ಅನುದಾನವನ್ನೂ ಬಿಡುಗಡೆ ಮಾಡಿದ್ದಾರೆ. ಆರೆಸ್ಸೆಸ್‌ನ ಅಲ್ಪಸಂಖ್ಯಾತ ವಿಭಾಗ ಎಲ್ಲ ದನಗಳಿಗೆ ಮುಂಜಿ ಮಾಡುವ ನೇತೃತ್ವವನ್ನು ವಹಿಸಲಿದೆ...ಈ ಮೂಲಕ ಹಿಂದೂ ಎತ್ತುಗಳು ಮತ್ತು ಮುಸ್ಲಿಮ್ ಎತ್ತುಗಳು ಯಾವುವು ಎನ್ನುವುದು ಗುರುತಿಸಲು ಸುಲಭವಾಗುತ್ತದೆ. ಹಾಗೆಯೇ ಹಿಂದೂ ದನಗಳ ಜೊತೆಗೆ ಮುಸ್ಲಿಮ್ ಎತ್ತುಗಳು ಏನಾದರೂ ಪ್ರೇಮ ಮಾಡಿದರೆ ಅಖ್ಲಾಕ್‌ಗೆ ಆದ ಗತಿ ಆ ದನದ ಮಾಲಕರಿಗೂ ಆಗುತ್ತದೆ....’’ ರಕ್ಷಕ ಹೇಳಿದ. ‘‘ಸಾರ್...ರೈತರು ಸಾಕಲಾರದೆ ನಿಮ್ಮ ಕೈಗೆ ಕೊಡುವ ದನವನ್ನು ನೀವೇನು ಮಾಡುತ್ತೀರಿ?’’ ಮುಖ್ಯಪ್ರಶ್ನೆಯನ್ನು ಕಾಸಿ ಕೇಳಿದ.

‘‘ವಿದೇಶಕ್ಕೆ ರ್ತು ಮಾಡಲು ಬೇಕಾದ ಗೋವುಗಳನ್ನು ನಾವೇ ದೊಡ್ಡ ದೊಡ್ಡ ಘಟಕಗಳಿಗೆ ಕೊಡುವುದು’’ ರಕ್ಷಕ ವಿವರಿಸಿದ.

‘‘ಆದರೆ...ಗೋ ಮಾತೆ ದೇವರಲ್ಲವಾ ಸಾರ್?’’ ಕಾಸಿ ಅರ್ಥವಾಗದೆ ಕೇಳಿದ.

‘‘ನೋಡ್ರೀ...ನಾವು ವಿಶೇಷ ಪೂಜೆ ನಡೆಸಿ ಗೋವುಗಳ ಒಳಗಿರುವ ದೇವರನ್ನೆಲ್ಲ ಹೊರಗೆ ಕರೆಸಿ ಬರೀ ಗೋವುಗಳನ್ನಷ್ಟೇ ಕಸಾಯಿಖಾನೆಗೆ ಕಳುಹಿಸುತ್ತೇವೆ. ಅದಕ್ಕಾಗಿ ವಿಶೇಷ ಬ್ರಾಹ್ಮಣರನ್ನೂ ಇಟ್ಟುಕೊಂಡಿದ್ದೇವೆ’’ ಎಂದವನೇ ಗೋರಕ್ಷಕ ‘‘ಬನ್ನಿ...ಆದಿತ್ಯನಾಥ್‌ರನ್ನು ಭೇಟಿ ಮಾಡಿಸುವೆ’’ ಎಂದು ಕರೆದ.

‘‘ಬೇಡ ಸಾರ್...ನಿಮ್ಮ ಮೂಲಕ ಸಾಕ್ಷಾತ್ ಆದಿತ್ಯನಾಥರೇ ದರ್ಶನ ಕೊಟ್ಟಂತಾಯಿತು...’’ ಎಂದವನೇ ಬದುಕಿದೆಯಾ ಬಡಜೀವ ಎಂದು ಅಲ್ಲಿಂದ ಬೆಂಗಳೂರು ಕಡೆಯ ಲಾರಿ ಹತ್ತಿದ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)