varthabharthi

ಅನುಗಾಲ

ಭ್ರಷ್ಟಾಚಾರದ ಕಣ್ಕಟ್ಟುಗಳು

ವಾರ್ತಾ ಭಾರತಿ : 11 May, 2017
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ದಿನನಿತ್ಯ ಮಾಡುವ ಪರಸ್ಪರ ಆಪಾದನೆಗಳು, ಆರೋಪಗಳು ನಿಜವಾಗಿದ್ದಲ್ಲಿ ಮತ್ತು ಅವುಗಳ ತನಿಖೆಗಳು ಪ್ರಾಮಾಣಿಕವಾಗಿದ್ದಲ್ಲಿ, ಹಾಗೂ ನಮ್ಮ ನ್ಯಾಯಪಾಲನೆಯ ಪದ್ಧತಿಯು ಕಾನೂನಿನ ತಾಂತ್ರಿಕಾಂಶಗಳನ್ನು ಬದಿಗೊತ್ತಿ ತ್ವರಿತ ನ್ಯಾಯದಾನಕ್ಕೆ ಹೆಚ್ಚು ಮುತುವರ್ಜಿ ವಹಿಸಿದ್ದಲ್ಲಿ ನಮ್ಮ ಬಹುತೇಕ ಅಧಿಕಾರಿಗಳು ಮತ್ತು ರಾಜಕಾರಣಿಗಳು ಸೆರೆವಾಸ ಅನುಭವಿಸಬೇಕಾಗಿತ್ತು.


ವರ್ತಮಾನ ಜಗತ್ತಿನಲ್ಲಿ ಯಾರು ಮತ್ತು ಯಾವುದು ಸರಿ-ತಪ್ಪುಗಳೆಂಬ ಬಗ್ಗೆ ತೀರ್ಮಾನ ಕೊಡಲು ಸಾಧ್ಯವಿಲ್ಲದ ಪರಿಸ್ಥಿತಿಯಿದೆ. ಪ್ರಜಾಪ್ರಭುತ್ವದಲ್ಲಿ ಬಹುಮತವು ಅಧಿಕಾರದ ಚುಕ್ಕಾಣಿಯನ್ನು ಹಿಡಿಯುತ್ತದಾದರೂ (ಈ ಬಹುಮತವು ನೈಜವಾಗಿ ಬಹುಮತವೇ ಅಲ್ಲ, ಚಲಾವಣೆಯಾದ -ಇದನ್ನು ಇಂಗ್ಲಿಷ್‌ನಲ್ಲಿ ಪೋಲಾದ ಮತಗಳು ಎಂದು ಅರ್ಥಪೂರ್ಣವಾಗಿ ಬಳಸುತ್ತಾರೆ- ಮತಗಳಲ್ಲಿ ಯಾರು ಹೆಚ್ಚು ಗಳಿಸುತ್ತಾರೋ ಅವರನ್ನು ಬಹುಮತವೆಂದು ಪರಿಗಣಿಸುತ್ತಾರೆ!) ಯಥಾರ್ಥವಾಗಿ ಅದು ಬಹುಮತವಾಗಿರಬೇಕಾಗಿಲ್ಲ, ಆಗಿರುವುದೂ ಇಲ್ಲ. ಆದ್ದರಿಂದ ಬಹುಮತವು ನಿರ್ಣಯಿಸುವುದು ಮತ್ತು ಅಧಿಕಾರಸ್ಥರು ಹೇಳುವುದು ಶತಾಂಶ ಜನಮತವೂ ಅಲ್ಲ, ಜನಪರವೂ ಅಲ್ಲವೆಂಬುದು ಎಲ್ಲರಿಗೂ ತಿಳಿಯದ ವಿಚಾರವೇನಲ್ಲ. ಆದರೆ ಸಮಾಜವು ನಡೆಯಬೇಕಾದರೆ ಏನಾದರೊಂದು ನಿಯಮಾಧಾರಿತ ಬಿಡುಗಡೆಯ ಹಾದಿ ಬೇಕಲ್ಲ, ಆದ್ದರಿಂದ ಕಡಿಮೆ ಹಾನಿಕರವೆಂದು ಪರಿಗಣಿಸಲಾದ ಹಾದಿಯನ್ನು ಅಂಗೀಕರಿಸಲಾಗಿದೆ.

ದೇಶದ ರಾಜಕಾರಣ ಮತ್ತು ಅಧಿಕಾರಶಾಹಿ ಇವು ಕಾನೂನನ್ನು ಯಾವ ರೀತಿ ಬೇಕಾದರೂ ತಿರುಚಬಲ್ಲವು ಎಂಬುದನ್ನು ಸ್ವತಂತ್ರ ಭಾರತ ಸಾಬೀತುಪಡಿಸಿದೆ. ಈಗಾಗಲೇ ಹಲವು ಬಾರಿ ಹಲವರು ಗುರುತಿಸಿದಂತೆ ನಮ್ಮ ರಕ್ಷಣಾ ಪಡೆಗಳು ನಮ್ಮ ದೇಶದ ಜನರನ್ನು ಕೊಂದಷ್ಟು ವೈರಿಪಡೆಗಳನ್ನು ಕೊಂದಿಲ್ಲ. ನಮ್ಮ ಪೊಲೀಸರು ಅಮಾಯಕರನ್ನು, ಪ್ರಾಮಾಣಿಕರನ್ನು ಹಿಂಸಿಸಿದಷ್ಟು ಕೇಡಿಗರನ್ನು ಹಿಂಸಿಸಿಲ್ಲ. ರಕ್ಷಣಾಪಡೆಯೂ ಸೇರಿದಂತೆ ದೇಶದ ಆಯಕಟ್ಟಿನ ಎಲ್ಲ ಇಲಾಖೆೆಗಳಲ್ಲೂ ಭ್ರಷ್ಟಾಚಾರ ಭಾರೀ ಸುದ್ದಿ ಮಾಡಿದೆ. ಇವುಗಳನ್ನು ವಿರೋಧಿಸುವ ಎಲ್ಲ ಜನಪರ ಚಳವಳಿಗಳನ್ನು ಹತ್ತಿಕ್ಕಲಾಗುತ್ತದೆ ಮತ್ತು ಪ್ರತಿಭಟಿಸಿದ ಇತರ ಮುಗ್ಧರು ಬಲಿಯಾಗುತ್ತಾರೆ. ಅದರ ಮೇಲೂ ಜನರು (ಮತ್ತು ರಾಜಕೀಯ ಕಾರಣಗಳಿಗಾಗಿ ವಿರೋಧಪಕ್ಷದ ರಾಜಕಾರಣಿಗಳು) ಸರಕಾರದ ಮತ್ತು ಸಂಬಂಧಿತ ಅಧಿಕಾರಿಗಳ ವಿರುದ್ಧ ಪ್ರತಿಭಟಿಸಿದರೆ ಆಗ ಸರಕಾರಗಳು ತಮ್ಮ ಕ್ರಮಗಳನ್ನು ಸಮರ್ಥಿಸಿಕೊಳ್ಳುತ್ತವೆ ಮತ್ತು ಕೈಸೋತಾಗ/ಸೋತರೆ ಸಂಬಂಧಿತ ಅಧಿಕಾರಿಗಳ ವರ್ಗಾವಣೆ ಮತ್ತು ಕಣ್ಣೊರೆಸಲು ಕೆಲವು ಕೆಳಹಂತದ ಅಧಿಕಾರಿಗಳ ನಾಲ್ಕು ದಿನಗಳ ಅಮಾನತು ಇಂತಹ ಪ್ರಹಸನಗಳು ನಡೆಯುತ್ತವೆ.

ಮಾಧ್ಯಮಗಳು ಆರಂಭಶೂರರಂತೆ ಮೊದಲು ದೊಡ್ಡದಾಗಿ ಕೂಗಿಕೊಂಡು ಅನಂತರ ಕೀರಲು ದನಿಯಲ್ಲಿ ಒಂದೊಂದು ಕಾಲಂ ಸುದ್ದಿಯಲ್ಲಿ ಹೊಟ್ಟೆತುಂಬಿಸಿಕೊಳ್ಳುತ್ತವೆ; ನಮ್ಮ ಜನರೂ ಕೆಲವು ದಿನ ಕೂಗಾಡಿ ಅನಂತರ ನಿದ್ರೆ ಹೋಗುತ್ತಾರೆ. ಸಾರ್ವಜನಿಕ ಸ್ಮತಿಯು ಯಾವಾಗಲೂ ಅಲ್ಪಾಯುಷಿ. ದಿನನಿತ್ಯ ಮಾಡುವ ಪರಸ್ಪರ ಆಪಾದನೆಗಳು, ಆರೋಪಗಳು ನಿಜವಾಗಿದ್ದಲ್ಲಿ ಮತ್ತು ಅವುಗಳ ತನಿಖೆಗಳು ಪ್ರಾಮಾಣಿಕವಾಗಿದ್ದಲ್ಲಿ, ಹಾಗೂ ನಮ್ಮ ನ್ಯಾಯಪಾಲನೆಯ ಪದ್ಧತಿಯು ಕಾನೂನಿನ ತಾಂತ್ರಿಕಾಂಶಗಳನ್ನು ಬದಿಗೊತ್ತಿ ತ್ವರಿತ ನ್ಯಾಯದಾನಕ್ಕೆ ಹೆಚ್ಚು ಮುತುವರ್ಜಿ ವಹಿಸಿದ್ದಲ್ಲಿ ನಮ್ಮ ಬಹುತೇಕ ಅಧಿಕಾರಿಗಳು ಮತ್ತು ರಾಜಕಾರಣಿಗಳು ಸೆರೆವಾಸ ಅನುಭವಿಸಬೇಕಾಗಿತ್ತು.

ಆದರೆ ಹೀಗಾಗುತ್ತಿಲ್ಲ. ಕಾನೂನು ರಚಿಸುವಾಗಲೇ ಸಾಕಷ್ಟು ದೋಷಗಳನ್ನು ಒಳಗೇ ತುಂಬಿಸಿಡಲಾಗುತ್ತದೆ. ಒಂದು ವೇಳೆ ರಚಿತವಾದ ಕಾನೂನು ದೋಷರಹಿತವಾಗಿದ್ದಲ್ಲಿ ಅದನ್ನು ಸಡಿಲಗೊಳಿಸುವುದು ಹೇಗೆಂದು ನಮ್ಮ ಶಾಸಕಾಂಗ ಮತ್ತು ಕಾರ್ಯಾಂಗಗಳು ಸದಾ ಚಿಂತಿಸುತ್ತವೆ. ಒಂದೆರಡು ಉದಾಹರಣೆಗಳನ್ನು ಗಮನಿಸುವುದಾದರೆ, ಭ್ರಷ್ಟಾಚಾರ ನಿರ್ಮೂಲನೆಯ ಹಾದಿಯಲ್ಲಿ ಮೈಲಿಗಲ್ಲೆಂದು ಕೇಂದ್ರ ಸರಕಾರವು ಬಹಳಷ್ಟು ಹೆಮ್ಮಯಿಂದ ಹೇಳುವ ಲೋಕಪಾಲ ಕಾಯ್ದೆಯನ್ವಯ ಲೋಕಪಾಲರ ನೇಮಕಾತಿ ಇನ್ನೂ ಆಗಿಲ್ಲ. ಇದಕ್ಕೆ ಸರಕಾರ ನೀಡುತ್ತಿರುವ ಸಬೂಬು ತಾಂತ್ರಿಕವಾದದ್ದಾದರೂ ತೀರ ಕ್ಷುಲ್ಲಕವಾದದ್ದು. ಲೋಕಪಾಲರ ನೇಮಕಾತಿಗೆ ಇರಬೇಕಾದ ಸಮಿತಿಯಲ್ಲಿ ಲೋಕಸಭೆಯ ಅಧಿಕೃತ ವಿರೋಧ ಪಕ್ಷದ ನಾಯಕರು ಒಬ್ಬ ಸದಸ್ಯರು. ಆದರೆ ವಿರೋಧ ಪಕ್ಷದ ನಾಯಕರಾಗಬೇಕಾದರೆ ಸಂಸತ್ತಿನ ಒಟ್ಟು ಸಂಖ್ಯೆಯ ಶೇಕಡಾ ಹತ್ತರಷ್ಟಾದರೂ ಸಂಖ್ಯಾಬಲ ಬೇಕು. ಪ್ರಕೃತ ಲೋಕಸಭೆಯಲ್ಲಿ ಅತ್ಯಂತ ದೊಡ್ಡ ಪ್ರತಿಪಕ್ಷವೆನಿಸಿದ ಕಾಂಗ್ರೆಸ್‌ಗೂ ಈ ಅರ್ಹತೆಯಿಲ್ಲವಾದ್ದರಿಂದ ಅಧಿಕೃತ ವಿರೋಧಪಕ್ಷದ ಸ್ಥಾನಮಾನ ಅದಕ್ಕೂ ಲಭಿಸಿಲ್ಲ. ಈ ಕಾರಣವನ್ನು ಮುಂದಿಟ್ಟುಕೊಂಡು ಸರಕಾರವು ಲೋಕಪಾಲರನ್ನು ನೇಮಿಸದೆ ದಿನ ತಳ್ಳುತ್ತಿದೆ.

ಸರ್ವೋಚ್ಚ ನ್ಯಾಯಾಲಯವು ಇದೊಂದು ದೋಷವಲ್ಲ, ನೇಮಿಸುವ ಮನಸ್ಸಿದ್ದರೆ ಮುಂದುವರಿಯಬಹುದೆಂದು ಹೇಳಿತಾದರೂ ಇದಕ್ಕಿಂತ ಹೆಚ್ಚು ತಾನೇನೂ ಮಾಡಲಾರೆನೆಂದು ಹೇಳಿ ನುಣುಚಿಕೊಂಡಿದೆ. ಈಗ ಸರಕಾರಕ್ಕೆ ಅಧಿಕಾರವಿದೆಯಾದರೂ ಸಂಕಲ್ಪಬಲದ ಮನಸ್ಸಿಲ್ಲವೆಂಬುದು ಸ್ಪಷ್ಟವಿದೆ. ಈಗಿನ ಪ್ರಧಾನಿಯವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗಿನಿಂದ ಅಲ್ಲೂ ಲೋಕಪಾಲ/ ಲೋಕಾಯುಕ್ತರನ್ನು ನೇಮಿಸಲು ವಿರೋಧ ವ್ಯಕ್ತ್ತಪಡಿಸಿದ್ದರೆಂಬುದನ್ನು ಮತ್ತು ಆ ಕಾರಣದಿಂದಲೇ ಅಲ್ಲಿ ಇಂದಿಗೂ ಲೋಕಪಾಲ/ಲೋಕಾಯುಕ್ತರ ನೇಮಕವಾಗಿಲ್ಲವೆಂಬುದನ್ನು ಇಲ್ಲಿ ನೆನೆೆಯಬಹುದು! ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಮತ್ತು ಇದಕ್ಕೆ ಕಾಂಗ್ರೆಸಿನ ಮತ್ತು ಅದರ ಮಿತ್ರಪಕ್ಷಗಳ ಸಹಕೂಟವಾದ ಯುಪಿಎಯ ದುರಾಡಳಿತ ಕಾರಣವೆಂದು ಈಗಿನ ಸರಕಾರ ಹೇಳುತ್ತ ಜನರ ಭಾವನೆಗಳನ್ನು ಕಾಂಗ್ರೆಸ್‌ನ ವಿರುದ್ಧ ಕೆರಳಿಸುವ ತಂತ್ರವನ್ನು ಯಶಸ್ವಿಯಾಗಿ ಮಾಡಿದೆಯಾದರೂ ಭ್ರಷ್ಟಾಚಾರವನ್ನು ದೂರೀಕರಿಸುವ ಮಾರ್ಗ ಅದಕ್ಕೂ ಬೇಡವೆಂಬುದು ಸ್ಪಷ್ಟ.

ಭ್ರಷ್ಟಾಚಾರವನ್ನು ದೂರಮಾಡುವ ಹೆಜ್ಜೆಯಲ್ಲಿ ಭಾರೀ ದೊಡ್ಡ ಸಾಧನೆಯೆಂದು ಬಿಂಬಿಸಲಾದ (ಮತ್ತು ಅದು ನಿಜ ಕೂಡಾ ಹೌದು!) ಹೆಚ್ಚು ಗೊಂದಲಗಳಿಲ್ಲದ, ಸರಳವಾದ ಮತ್ತು ಅತೀ ತಾಂತ್ರಿಕತೆಯಿಂದ ಬಳಲದ ಮಾಹಿತಿ ಹಕ್ಕಿನ ಕಾಯ್ದೆಯಡಿ ದೇಶದ ಅನೇಕ ಅಪರಾಧಗಳು, ಹಗರಣಗಳು ಬಯಲಾದವು. ಇದಕ್ಕಾಗಿ ಅನೇಕರು ದುಡಿದರು. ಅವರ ಪೈಕಿ ಕೆಲವರಾದರೂ ಭ್ರಷ್ಟರ ಕೈಯಲ್ಲಿ ಮಡಿದರು, ಇಲ್ಲವೇ ತೊಂದರೆಗೆ ಸಿಲುಕಿದರು. ಆದರೂ ಈ ಕಾಯ್ದೆಯು ಶ್ರೀಸಾಮಾನ್ಯನಿಗೆ ಒಂದು ರೀತಿಯ ಪರಿಹಾರಕ್ಕೆ ಹಾದಿಯಾಗಿತ್ತು. ಸ್ವಯಂಸೇವಾ ಸಂಸ್ಥೆಗಳ, ಸ್ವಯಂಸೇವಕರ ನೆರವಿನಿಂದ ಕೊನೇ ಪಕ್ಷ ಕೆಲವು ಕಡತಗಳಾದರೂ ಶೀಘ್ರ ವಿಲೆವಾರಿಯ ಭಾಗ್ಯವನ್ನು ಕಂಡವು. ಇದರಿಂದಾಗಿ ಅನೇಕ ರಾಜಕಾರಣಿಗಳು, ಅಧಿಕಾರಿಗಳು ಮಾಡಿದ ತಪ್ಪುಗಳು ಹೊರಬಂದವು.

ಆದರೆ ಈಗ ಸರಕಾರವು ಈ ಕಾಯ್ದೆಗೂ ಒಂದು ತಿದ್ದುಪಡಿ ತಂದು ಅಂತಹ ಮಾಹಿತಿ ಕೋರಿದವರು ಮರಣ ಹೊಂದಿದರೆ ಅದನ್ನು ಕೇಳುವ ಹಕ್ಕು ಅಲ್ಲಿಗೇ ಕೊನೆಗೊಳ್ಳುವ ಹಾಗೆ ನೋಡಿಕೊಂಡಿದೆ. ಪರಿಣಾಮವಾಗಿ ಮಾಹಿತಿ ಕೋರಿದವರ ಅಂತ್ಯವೇ ಮಾಹಿತಿಯ ಅಂತ್ಯವೂ ಆಗಿ ಅಲ್ಲೂ ಸುಪಾರಿ ಹಂತಕರ ಕೈಮೇಲಾಗುವ ಮತ್ತು ಸಾವಿನ ಭೀತಿಯಿಂದ ಮಾಹಿತಿ ಕೋರುವವರು ಹಿಂದೆ ಸರಿಯುವ ಸಾಧ್ಯತೆಗಳು ಹೆಚ್ಚಾಗಿ ಕಾಯ್ದೆಯು ಕ್ಷೀಣವಾಗಲಿದೆ. ನಮ್ಮ ಸರಕಾರಗಳು ಸದಾ ಭ್ರಷ್ಟಾಚಾರವನ್ನು ನಿರ್ಮೂಲ ಮಾಡುವ ಘೋಷಣೆಗಳನ್ನು ಹಾಕುತ್ತವೆ. ಆದರೆ ಅದಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಾಣಮಾಡುವ ಸಂದರ್ಭಗಳಲ್ಲಿ ಹಿಂಜರಿಯುತ್ತವೆ.

ಭ್ರಷ್ಟಾಚಾರವೆಂದರೆ ಲಂಚ ಪಾವತಿ ಮತ್ತು ಸ್ವೀಕೃತಿ ಮಾತ್ರವಲ್ಲ. ಎಲ್ಲ ರೀತಿಯ ಅಧಿಕಾರ ದುರುಪಯೋಗಗಳೂ ಭ್ರಷ್ಟಾಚಾರಗಳೇ. ನಮ್ಮ ಸಂವಿಧಾನದಲ್ಲಿ ಇಂತಹ ವಿಚಾರಗಳು ಸ್ಪಷ್ಟವಾಗಿ ನಿರೂಪಿತವಾಗಿಲ್ಲ. ಉದಾಹರಣೆಗೆ ರಾಷ್ಟ್ರಪತಿ, ಉಪರಾಷ್ಟ್ರಪತಿಗಳ ಆಯ್ಕೆಗೆ ಮಾನದಂಡಗಳನ್ನು ನಿರೂಪಿಸಿದ ಸಂವಿಧಾನವು ಒಕ್ಕೂಟ ವ್ಯವಸ್ಥೆಯಲ್ಲಿ ಅಷ್ಟೇ ಮಹತ್ವದ ರಾಜ್ಯಪಾಲರ ಹುದ್ದೆಯ ನೇಮಕಾತಿಗೆ ಅಂತಹ ಮಾರ್ಗಸೂಚಿಯನ್ನು ಹಾಕಿಲ್ಲ. ರಾಷ್ಟ್ರಪತಿಗಳು, ಉಪರಾಷ್ಟ್ರಪತಿಗಳು ಜನಪ್ರತಿನಿಧಿಗಳ ಮೂಲಕ ಆಯ್ಕೆಯಾಗುತ್ತಿರುವಾಗ ರಾಜ್ಯಪಾಲರಂತಹ ಅದೇ ಮಾದರಿಯ ಹುದ್ದೆಗಳು ನಾಮಕರಣಗೊಳ್ಳುತ್ತಿರುವುದು ಎಷ್ಟು ಸಮಂಜಸ ಮತ್ತು ಎಷ್ಟು ಪ್ರಜಾತಂತ್ರೀಯ? ಈ ದೋಷದಿಂದಾಗಿ ಪ್ರಜಾತಂತ್ರ ಮತ್ತು ಸಮಾಜದ ಆರೋಗ್ಯ ನರಳಿದರೂ ಅನೇಕರಿಗೆ ಅನುಕೂಲವಾಗಿದೆ.

ಆಳುವ ಪಕ್ಷದ ಕೆಲಸಕ್ಕೆ ಬಾರದ, ಇಲ್ಲವೇ ತೊಂದರೆ ನೀಡುವ, ವಯಸ್ಸಾದ, ನಿರಾಶ್ರಿತ ರಾಜಕಾರಣಿಗಳಿಗೆ, ಉದ್ಯೋಗದಲ್ಲಿರುವಾಗ ಆಳುವ ಪಕ್ಷಕ್ಕೆ ಅತೀವ ನಿಷ್ಠೆಯನ್ನು ತೋರಿದ ಮತ್ತು ಮುಂದೆಯೂ ನೆರವಾಗಬಲ್ಲ ನಿವೃತ್ತ ಅಧಿಕಾರಿಗಳಿಗೆ, ನ್ಯಾಯಾಧೀಶರಿಗೆ, ಸೇನಾ ನಾಯಕರಿಗೆ ರಾಜ್ಯಪಾಲ ಹುದ್ದೆಯನ್ನು ನೀಡುವುದು ಮತ್ತು ಅವರನ್ನು ತಮ್ಮ ಏಜೆಂಟುಗಳಂತೆ ಬಳಸುವುದು ಎಲ್ಲ ರಾಜಕೀಯ ಪಕ್ಷಗಳ ಅಲಿಖಿತ ಪ್ರಣಾಳಿಕೆಯಾಗಿದೆ. ಇದರ ಇನ್ನೂ ದೊಡ್ಡ ಅಪಾಯವೆಂದರೆ ಇಂತಹ ಆಯ್ಕೆ ನಡೆಯುವುದರಿಂದ ಎಲ್ಲ ಹಿರಿಯ-ಕಿರಿಯ ಅಧಿಕಾರಿಗಳು ಅಧಿಕಾರದಲ್ಲಿದ್ದಾಗಲೇ ನಿವೃತ್ತಿಯ ಅನಂತರ ದಕ್ಕಬಹುದಾದ ಇಂತಹ ಪಾರಮಾರ್ಥಿಕ ಹುದ್ದೆಗಳತ್ತ ಕಣ್ಣಿಟ್ಟೇ ತಮ್ಮ ಸೇವೆಯನ್ನು ನೀಡುತ್ತಾರೆ. ಇಂತಹ ರಾಜ್ಯಪಾಲರಿಂದ ಎಂತಹ ರಾಜ್ಯಪಾಲನೆಯನ್ನು ಅಪೇಕ್ಷಿಸಬಹುದು? ಇಂತಹ ಆಯ್ಕೆಗಳನ್ನೂ ಭ್ರಷ್ಟಾಚಾರದ ಚೌಕಟ್ಟಿಗೊಳಪಡಿಸಬೇಕಾಗಿದೆ.

ಎಲ್ಲ ಬಗೆಯ ದೇಶೀಯ ಅಪರಾಧಗಳನ್ನು ತನಿಖೆ ಮಾಡಲು ಸಾಮಾನ್ಯ ಮತ್ತು ಇತರ ವಿಶೇಷ ತನಿಖಾ ತಂಡಗಳಿವೆ. ಇವೆಲ್ಲ ಸರಕಾರಗಳ ನಿಯಂತ್ರಣಗಳಲ್ಲೇ ಕೆಲಸಮಾಡುತ್ತಿರುವುದರಿಂದ ಇವುಗಳಿಂದ ನಿಷ್ಪಕ್ಷಪಾತ ತನಿಖೆಗಳನ್ನು ನಿರೀಕ್ಷಿಸುವ ಸಾಹಸಕ್ಕೆ ಜನಸಾಮಾನ್ಯರು ಹೋಗುವುದಿಲ್ಲ. ಸಿಬಿಐಯಂತಹ ತನಿಖಾ ತಂಡಗಳೇ ಕೇಂದ್ರ ಸರಕಾರದ ಸೂಚನೆಯಂತೆ ಯಾರನ್ನು ರಕ್ಷಿಸಬೇಕು ಮತ್ತು ಯಾರನ್ನು ಶಿಕ್ಷಿಸಬೇಕು ಎಂಬ ಲೆಕ್ಕಾಚಾರ ಹಾಕಿಯೇ ಕೆಲಸಮಾಡುತ್ತವೆಂಬುದು ಒಂದು ಬಹಿರಂಗ ರಹಸ್ಯ. ಹಿಂದೆ ಕಾಂಗ್ರೆಸ್ ಆಡಳಿತವಿರುವಾಗ ಸಿಬಿಐ ಎಂದರೆ ‘ಕಾಂಗ್ರೆಸ್ ಬ್ಯೂರೊ ಆಫ್ ಇನ್‌ವೆಸ್ಟಿಗೇಷನ್’ ಎಂದು ಇಂದಿನ ಆಡಳಿತ ಪಕ್ಷ ಟೀಕಿಸಿತ್ತು. ಪರಿಸ್ಥಿತಿ ಏನೂ ಬದಲಾಗಿಲ್ಲವೆಂಬುದನ್ನು (ಕಾಂಗ್ರೆಸ್ ಇದ್ದಲ್ಲಿ ಭಾಜಪ ಬಂದಿದೆ ಅಷ್ಟೇ!) ಇತ್ತೀಚೆಗಿನ ಬೆಳವಣಿಗೆಗಳು ನಿರೂಪಿಸಿವೆ.

ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯಗಳು ಗಮನಿಸುವ (ಗೋಧ್ರಾ ನಂತರದ ಕೆಲವು) ಪ್ರಕರಣಗಳಲ್ಲಿ ಮಾತ್ರ ಅನಿವಾರ್ಯ ಪ್ರಾಮಾಣಿಕತೆ ಕಾಣಿಸುತ್ತಿದೆ. ಹೀಗೆಂದು ಎಲ್ಲ ಪ್ರಕರಣಗಳಲ್ಲಿ ನ್ಯಾಯಾಲಯಗಳು ಹಸ್ತಕ್ಷೇಪ ಮಾಡುವುದಿಲ್ಲ. ನ್ಯಾಯಾಲಯಗಳೂ ಅಷ್ಟೇ: ಕೆಲವು ಪ್ರಕರಣಗಳಲ್ಲಿ ಆರಂಭದ ಹಂತದಲ್ಲೇ ತಡೆಯಾಜ್ಞೆಯನ್ನು ನೀಡಿ ಅವುಗಳ ತೀವ್ರತೆಯನ್ನು, ಗಂಭೀರತೆಯನ್ನು ಜಾಳುಗೊಳಿಸಿ ಹಾಳುಗೆಡವುತ್ತವೆ. ಉನ್ನತ ಸ್ಥಾನಗಳಲ್ಲಿರುವ ರಾಜಕಾರಣಿಗಳು, ಅಧಿಕಾರಿಗಳು ಜಾಮೀನು ಸಿಕ್ಕಿದ ಪ್ರಕರಣಗಳಲ್ಲಿ ಜಾಮೀನಿನ ಎಲ್ಲ ಷರತ್ತುಗಳನ್ನು ಜಾಣತನದಿಂದ ಭೇದಿಸಿ ಮುಂದಿನ ತನಿಖೆಯ ದಿಕ್ಕು ತಪ್ಪಿಸಿದ ಪ್ರಸಂಗಗಳು ಬೇಕಾದಷ್ಟಿವೆ.

ಅನೇಕ ಬಾರಿ ರಾಜಕೀಯ ಅಧಿಕಾರ ಪಲ್ಲಟವಾಗಿ ಆರೋಪಿತರ ಪಕ್ಷ ಅಧಿಕಾರಕ್ಕೆ ಬಂದರೆ ಮುಗಿಯಿತು: ತನಿಖೆ ಅಂತ್ಯವಾದಂತೆಯೇ. ಗುಜರಾತ್, ಮಧ್ಯ ಪ್ರದೇಶ, ಕರ್ನಾಟಕ, ತಮಿಳುನಾಡು ಮುಂತಾದ ರಾಜ್ಯಗಳ ಜನಪ್ರಿಯ ಪ್ರಕರಣಗಳು ಇಂತಹ ಪ್ರಸಂಗಗಳಿಗೆ ಜ್ವಲಂತ ಮತ್ತು ಜೀವಂತ ಸಾಕ್ಷಿಗಳು. ಭವ್ಯ ಭಾರತವಾಗಬೇಕಾದದ್ದು ಭ್ರಷ್ಟ ಭಾರತವಾದದ್ದು ದುರಂತ. ಇಂದು ಏಷ್ಯಾ ಖಂಡದಲ್ಲೇ ಭಾರತವು ಅತೀ ಭ್ರಷ್ಟ ದೇಶವೆಂದು ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಸಂಸ್ಥೆಗಳು ವರದಿ ಮಾಡಿವೆ. ಇಂತಹ ಸನ್ನಿವೇಶದಲ್ಲಿ ಭ್ರಷ್ಟಾಚಾರದಂತಹ ಪಿಡುಗುಗಳು ತಲೆಯೆತ್ತದಂತೆ ಮಾಡಬೇಕಾದ ಹೊಣೆಯಿರುವ ಒಂದು ತಲೆಮಾರು ಅವುಗಳನ್ನು ಸಹಿಸಿಕೊಂಡು ಅಂಧರಂತಿರುವುದು ಮತ್ತು ಸಾಮಾಜಿಕ ತುರ್ತು ಅಗತ್ಯಗಳಲ್ಲದ ವಿಚಾರಗಳನ್ನು, ಭಾವನೆಗಳನ್ನು ಮಾತ್ರ ಕೆರಳಿಸಿಕೊಂಡು, ಕೆದಕಿಕೊಂಡು ಬದುಕುತ್ತಿರುವುದು ನಾಚಿಕೆಗೇಡಿನ ಸಂಗತಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)