varthabharthi

ಬುಡಬುಡಿಕೆ

ಪುಷ್ಪಕವಿಮಾನ ಏರಿದ ಮೋದಿ!

ವಾರ್ತಾ ಭಾರತಿ : 13 May, 2017
ಚೇಳಯ್ಯ

ಶ್ರೀಲಂಕಾದಲ್ಲಿ ನಿಂತು ಪ್ರಧಾನಿ ನರೇಂದ್ರ ಮೋದಿ ಯವರು ‘ಕೊಲಂಬೊದಿಂದ ವಾರಣಾಸಿಯ ನಡುವೆ ನೇರ ವಿಮಾನ ಸಂಪರ್ಕ’ ಘೋಷಣೆ ಮಾಡಿದ್ದೇತಡ ಭಕ್ತರು ರೋಮಾಂಚನಗೊಂಡರು. ಈ ಹಿಂದೆ ರಾಮಾ ಯಣದಲ್ಲಿ ಲಂಕೆಯಿಂದ ‘ಪುಷ್ಪಕ ವಿಮಾನ’ದಲ್ಲಿ ಕುಳಿತು ಭಾರತಕ್ಕೆ ಮರಳಿದ ರಾಮಾಯಣದ ಸ್ಮರಣಾರ್ಥ ಈ ವಿಮಾನ ಯಾನವನ್ನು ಘೋಷಣೆ ಮಾಡಲಾಗಿದೆ ಎಂದು ಅವರು ಸಂಭ್ರಮಿಸತೊಡಗಿದರು. ಲಂಕೆಯಲ್ಲಿ ಕುಳಿತು ನರೇಂದ್ರ ಮೋದಿಯವರು ಭಾರತದ ಕೀರ್ತಿ ಪತಾಕೆಯನ್ನು ಹೇಗೆ ಹಾರಿಸಿದರು ಎನ್ನುವುದನ್ನು ವಿವಿಧ ಪತ್ರಿಕೆಗಳು ವರದಿ ಮಾಡಿರುವುದನ್ನು ಪತ್ರಕರ್ತ ಎಂಜಲು ಕಾಸಿ ಓದಿ, ಇಲ್ಲಿ ಮರು ವರದಿ ಮಾಡಿದ್ದಾನೆ.

***

ಪುರಾತನ ಪುಷ್ಪಕವಿಮಾನಕ್ಕೆ ಮತ್ತೆ ಚಾಲನೆ

ಶ್ರೀಲಂಕಾದಲ್ಲಿ ಮೋದಿ ಘೋಷಣೆ

ಕೊಲಂಬೋ, ಮೇ 13: ರಾಮಾಯಣದಲ್ಲಿ ರಾಮ ಮತ್ತು ಸೀತೆ ಅಯೋಧ್ಯೆಗೆ ತೆರಳಿದ ಪುಷ್ಪಕ ವಿಮಾನವನ್ನು ಮತ್ತೆ ದುರಸ್ತಿಗೊಳಿಸಿ ವಾರಣಾಸಿ-ಶ್ರೀಲಂಕಾ ನಡುವೆ ಹಾರಿಸಲಾಗುವುದು ಎಂದು ಮೋದಿ ಘೋಷಿಸಿದ್ದಾರೆ.

ಶ್ರೀಲಂಕಾಕ್ಕೆ ಭೇಟಿ ನೀಡಿದ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗಾಗಿ ಈ ಪುಷ್ಪಕ ವಿಮಾನವನ್ನು ಶ್ರೀಲಂಕಾ ಅಧ್ಯಕ್ಷರು ಉಡುಗೊರೆಯಾಗಿ ನೀಡಿದ್ದರು. ಈ ವಿಮಾನವನ್ನು ನಾನು ಉಭಯದೇಶಗಳ ನಡುವೆ ಸಂಪರ್ಕ ಬೆಸೆಯಲು ಬಳಸುವುದಾಗಿ ಮೋದಿಯವರು ಘೋಷಿಸಿದಾಗ, ಎಲ್ಲರೂ 25 ಬಾರಿ ಎದ್ದು ನಿಂತು ತೊಂಬತ್ತು ಬಾರಿ ಚಪ್ಪಾಳೆ ತಟ್ಟಿದರು.

ಒಂದಾನೊಂದು ಕಾಲದಲ್ಲಿ ಭಾರತವೆಂಬ ದೇಶದಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಜನ್ಮತಾಳುತ್ತಾರೆ ಎಂದು ನಾಸ್ಟ್ರಾಡಾಮಸ್ ತಮ್ಮ ಭವಿಷ್ಯ ಪುಸ್ತಕದಲ್ಲಿ ಬರೆದಿರುವುದರಿಂದ, ಶ್ರೀಲಂಕಾದ ವಿವಿಧ ಅಧ್ಯಕ್ಷರು ಮೋದಿಯವರಿಗೆ ಶ್ರೀಲಂಕಾಕ್ಕೆ ಆಗಮಿಸಿದಾಗ ಉಡುಗೊರೆ ನೀಡಲೆಂದೇ ಈ ಪುಷ್ಪಕ ವಿಮಾನವನ್ನು ಜತನದಿಂದ ಕಾಪಾಡಿಕೊಂಡು ಬಂದಿದ್ದರು. ಎಂಟು ಇಂಜಿನುಗಳ ಈ ವಿಮಾನದಲ್ಲಿ ಕೆಲವು ಇಂಜಿನುಗಳು ಕೆಟ್ಟು ಹೋಗಿವೆಯಾದರೂ, ಅದನ್ನು ಶೀಘ್ರದಲ್ಲೇ ದುರಸ್ತಿ ಮಾಡಿ ಭಾರತದ ಕಡೆಗೆ ಹಾರಿಸಿ ಬಿಡಲಾಗುವುದು ಎಂದು ಶ್ರೀಲಂಕಾದ ಅಧ್ಯಕ್ಷರು ಘೋಷಿಸಿದ್ದಾರೆ. ಇದೇ ಸಂದರ್ಭದಲ್ಲಿ ಭಾರತದ ಪ್ರಾಚೀನ ವಿಜ್ಞಾನಿಗಳು ಅಂದರೆ, ವಾಸ್ತುಶಾಸ್ತ್ರಜ್ಞ ಪರಿಣತ ವಿಜ್ಞಾನಿಗಳು ಪುಷ್ಪಕ ವಿಮಾನ ಮತ್ತೆ ಹಾರುವುದನ್ನು, ಸನಾತನ ಭಾರತದ ಪುನರುತ್ಥಾನ ಎಂದು ಬಣ್ಣಿಸಿದ್ದಾರೆ. ಪ್ರಾಚೀನ ಕಾಲದಲ್ಲಿ ಭಾರತದ ಆಧುನಿಕ ವಿಜ್ಞಾನ ಉಚ್ಛ್ರಾ ಯ ಸ್ಥಿತಿಯಲ್ಲಿತ್ತು ಎನ್ನುವುದಕ್ಕೆ ಈ ವಿಮಾನವೇ ಸಾಕ್ಷಿ ಎಂದು ಬಾಬಾ ರಾಮ್ ಹೇಳಿದ್ದಾರೆ. ಇಸ್ರೋದ ವಿವಿಧ ವಿಜ್ಞಾನಿಗಳು ಇದಕ್ಕೆ ದನಿಗೂಡಿಸಿದ್ದಾರೆ. ವಿಮಾನದಲ್ಲಿ ಒಟ್ಟು ಆರು ಸೀಟುಗಳಿವೆ. ವಿಮಾನವನ್ನು ಈ ಹಿಂದೆ ಮಂತ್ರಗಳಿಂದ ಹಾರಿಸಲಾಗುತ್ತಿತ್ತಾದರೂ, ಆ ಮಂತ್ರಗಳು ಈಗ ಲಭ್ಯವಿಲ್ಲ. ಆದುದರಿಂದ ಪತಂಜಲಿ ತೈಲ ಸಂಸ್ಕರಣಾ ಘಟಕವು ಗೋಮೂತ್ರವನ್ನು ಸಂಸ್ಕರಿಸಿ, ಈ ಪುಷ್ಪಕ ವಿಮಾನಕ್ಕೆ ತೈಲವನ್ನು ಒದಗಿಸಿಕೊಡಲಿದೆ ಎಂದು ಅನಧಿಕೃತ ಮೂಲಗಳು ತಿಳಿಸಿವೆ. ಶ್ರೀಲಂಕಾದ ಅಧ್ಯಕ್ಷರು ಮಾತನಾಡಿ, ಪುಷ್ಪಕ ವಿಮಾನವು ಪರಂಪರಾಗತವಾಗಿ ನಮ್ಮ ಕೈಗೆ ಬಂದಿದ್ದರೂ, ಅದನ್ನು ಭಾರತಕ್ಕೆ ಮರಳಿಸುವುದಕ್ಕೆ ಯೋಗ್ಯ ನಾಯಕರನ್ನು ನಾವು ಕಾಯುತ್ತಿದ್ದೆವು. ಇದೀಗ ಕನಸು ಈಡೇರಿದೆ. ಹಾಗೆಯೇ ಸೀತಾಪಹರಣದ ಸಂದರ್ಭದಲ್ಲಿ ಕೆಲವು ಆಭರಣಗಳು ಶ್ರೀಲಂಕಾದ ಕಾಡುಗಳಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಅವುಗಳ ಹುಡುಕಾಟ ತೀವ್ರವಾಗಿ ನಡೆಯುತ್ತಿದೆ. ಅವುಗಳೇನಾದರೂ ಸಿಕ್ಕಿದರೆ ಅದನ್ನು ತಕ್ಷಣ ಭಾರತಕ್ಕೆ ಒಪ್ಪಿಸುವುದಾಗಿಯೂ ಅವರು ಹೇಳಿದರು.

ರಾಮಸೇತುವೆಗೆ ಪುನರುಜ್ಜೀವ:

ಇದೇ ಸಂದರ್ಭದಲ್ಲಿ ರಾಮಾಯಣ ಕಾಲದಲ್ಲಿ ಲಂಕೆಗೆ ನಿರ್ಮಿಸಿದ ಸೇತುವೆಯನ್ನು ಪುನರುಜ್ಜೀವಗೊಳಿಸುವ ಭರವಸೆಯನ್ನೂ ನರೇಂದ್ರ ಮೋದಿಯವರು ನೀಡಿದ್ದಾರೆ. ಸೇತುವೆಯ ಅವಶೇಷಗಳು ಈಗಲೂ ಉಳಿದಿರುವುದರಿಂದ ಅದರ ಮೇಲೆಯೇ ಹೊಸ ಸೇತುವೆಯನ್ನು ನಿರ್ಮಿಸಲಾಗುತ್ತದೆ. ಇದಾದ ಬಳಿಕ ಶ್ರೀಲಂಕಾಕ್ಕೆ ಭಾರತೀಯರು ಈ ಸೇತುವೆ ಮೂಲಕ ನಡೆದುಕೊಂಡೇ ಹೋಗಬಹುದು ಎಂದು ನರೇಂದ್ರ ಮೋದಿಯವರು ಘೋಷಿಸಿದಾಗ ಶ್ರೀಲಂಕಾದ ಪ್ರಜೆಗಳು ಹತ್ತು ಬಾರಿ ಎದ್ದು ನಿಂತು, 90 ಬಾರಿ ಚಪ್ಪಾಳೆ ತಟ್ಟಿದರು ಎಂದು ಮಾಧ್ಯಮಗಳು ವರದಿ ಮಾಡಿವೆ. ಸೇತುವೆಯ ಇಂಜಿನಿಯರಿಂಗ್ ನಕ್ಷೆಯೊಂದು ಇದೀಗ ದೊರಕಿದ್ದು, ಅದು ರಾಮಾಯಣದ ಕಾಲದ್ದೇ ಆಗಿರಬೇಕು ಎಂದು ಪುರಾತತ್ವ ಶಾಸ್ತ್ರಜ್ಞರು ಹೇಳಿದ್ದಾರೆ. ಆದುದರಿಂದ ಹನುಮಂತ ಅತ್ಯುತ್ತಮ ಇಂಜಿನಿಯರ್ ಕೂಡ ಆಗಿದ್ದ. ಇಂತಹದೊಂದು ಸೇತುವೆಯನ್ನು ನಿರ್ಮಿಸಲು ಅವರಿಗೆ ಆ ಕಾರಣದಿಂದಲೇ ಸಾಧ್ಯವಾಯಿತು ಎಂದೂ ಮಾಧ್ಯಮಗಳಲ್ಲಿ ಪ್ರಕಟವಾಗಿದೆ.ಭಾರತದಲ್ಲಿ ಶಂಕರಾಚಾರ್ಯರು ಬೌದ್ಧರನ್ನು ಓಡಿಸಿದಾಗ ಬೌದ್ಧರು ಈ ಸೇತುವೆಯ ಮೂಲಕವೇ ಶ್ರೀಲಂಕಾವನ್ನು ತಲುಪಿರುವ ಸಾಧ್ಯತೆಗಳಿವೆ. ಹಾಗೆಯೇ ಎಲ್‌ಟಿಟಿಇ ಉಗ್ರರೂ ಈ ಸೇತುವೆಗಳನ್ನು ಸಂಪರ್ಕ ಸಾಧನವಾಗಿ ಬಳಸಿರುವ ಸಾಧ್ಯತೆಗಳನ್ನೂ ಅಲ್ಲಗಳೆಯಲಾಗುವುದಿಲ್ಲ ಎಂದು ಪತ್ರಿಕೆಗಳಲ್ಲಿ ವರದಿಯಾಗಿವೆ. ತಮಿಳುನಾಡಿನ ಮೀನುಗಾರರ ಮೇಲೆ ಶ್ರೀಲಂಕಾ ಸೇನೆ ನಡೆಸುತ್ತಿರುವ ದಾಳಿಯ ಕುರಿತಂತೆ ಪ್ರಧಾನಿ ಮೋದಿಯವರು ವೌನವನ್ನು ತಳೆದರು. ಪತ್ರಕರ್ತರು ಈ ಬಗ್ಗೆ ಪ್ರಸ್ತಾಪಿಸಿದಾಗ, ‘ಪ್ರಧಾನಿಯವರು ಈ ದಿನ ವೌನವ್ರತವನ್ನು ತಾಳಿದ್ದಾರೆ.

ಅವರು ಅಶೋಕವನದಲ್ಲಿ ಕುಳಿತು ರಾಮಜಪ ಮಾಡುತ್ತಿದ್ದಾರೆ’ ಎಂದು ವಕ್ತಾರರು ಸ್ಪಷ್ಟೀಕರಣ ನೀಡಿದ್ದಾರೆ. ಸೇನೆಯು ದಾಳಿ ಮಾಡಿರುವುದು ಮೀನುಗಾರರ ಮೇಲೆ ಅಲ್ಲ, ಅವರು ಮೀನುಗಾರರ ವೇಷದಲ್ಲಿರುವ ಎಲ್‌ಟಿಟಿಇ ಉಗ್ರರಾಗಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಶ್ರೀಲಂಕಾದ ಅಧ್ಯಕ್ಷರು ಹೇಳಿದರು. ಅಶೋಕವನ ದಿಂದ ಶೋಕತಪ್ತರಾಗಿ ಹೊರಬಂದ ನರೇಂದ್ರ ಮೋದಿಯವರು ಮೀನುಗಾರರ ಹತ್ಯೆಯ ಬಗ್ಗೆ ಪ್ರತಿಕ್ರಿಯಿಸಿ ‘‘ಮೀನುಗಾರರ ಹತ್ಯೆಯನ್ನು ಶ್ರೀಲಂಕಾದ ಮೇಲೆ ಹೊರಿಸಿದರೆ ಅದರಿಂದ ಉಭಯ ದೇಶಗಳ ನಡುವಿನ ಸಂಬಂಧಕ್ಕೆ ಧಕ್ಕೆಯಾಗುತ್ತದೆ. ಆದುದರಿಂದ ಮೀನುಗಾರರ ಮೇಲಿನ ಹತ್ಯೆ ಯ ಹೊಣೆಯನ್ನು ಪಾಕಿಸ್ತಾನ ಹೊತ್ತುಕೊಳ್ಳಬೇಕು’’ ಎಂದು ಒತ್ತಾಯಿಸಿದರು.

ಮೀನುಗಾರರ ಮೇಲೆ ಪದೇ ಪದೇ ನಡೆಯುವ ದಾಳಿಯ ಹಿಂದೆ ಪಾಕಿಸ್ತಾನದ ಉಗ್ರರ ಸಂಚಿದೆ. ಇದನ್ನು ಶ್ರೀಲಂಕಾ ಮತ್ತು ಭಾರತ ಜೊತೆಗೂಡಿ ಎದುರಿಸಲಿದೆ ಎಂದು ಹೇಳಿದರು. ಶ್ರೀಲಂಕಾದಲ್ಲಿ ತಮಿಳರ ಮಾರಣ ಹೋಮ ನಡೆದಿರುವುದರ ಸಾಕ್ಷಗಳು ಸಿಕ್ಕಿರುವುದರ ಬಗ್ಗೆ ಬಳಿಕ ಮಾತನಾಡಿದ ನರೇಂದ್ರ ಮೋದಿಯವರು ‘‘ಅದು ತಮಿಳರ ಅವಶೇಷಗಳಲ್ಲ. ರಾಮಾಯಣ ಕಾಲದ ಯುದ್ಧದ ಅವಶೇಷಗಳಾಗಿವೆ. ಆದುದರಿಂದ ಅನಗತ್ಯವಿವಾದ ಮಾಡುವುದು ಬೇಡ’’ ಎಂದು ಶಾಂತಿಮಂತ್ರವನ್ನು ಜಪಿಸಿದರು. ಇದೇ ಸಂದರ್ಭದಲ್ಲಿ ಶ್ರೀಲಂಕಾದ ಕೆಲವು ಪ್ರಗತಿಪರರು, ರಾಮಾಯಣ ಕಾಲದಲ್ಲಿ ರಾಮ-ಲಕ್ಷ್ಮಣಲಂಕೆಯ ಶೂರ್ಪನಖಿಯ ಮೂಗು ಕತ್ತರಿಸಿದ್ದಕ್ಕೆ ಮತ್ತು ರಾವಣನನ್ನು ಕೊಂದು ಹಾಕಿದ್ದಕ್ಕೆ ನರೇಂದ್ರ ಮೋದಿಯವರು ಕ್ಷಮೆ ಯಾಚನೆ ಮಾಡಬೇಕು ಎಂದು ಒತ್ತಾಯಿಸಿದರು. ‘‘ರಾಮಸೇತುವೆಯು ಪರಕೀಯ ಆಕ್ರಮಣದ ಸಂಕೇತವಾಗಿದೆ. ಅದು ಶ್ರೀಲಂಕಕ್ಕೆ ಕಳಂಕವಾಗಿದೆ. ಆದುದರಿಂದ ಯಾವ ಕಾರಣಕ್ಕೂ ಆ ಸೇತುವೆಯ ಪುನರುಜ್ಜೀವನ ಮಾಡಬಾರದು. ಹಾಗೆಯೇ ಪುಷ್ಪಕ ವಿಮಾನ ಶ್ರೀಲಂಕಾದ ಸೊತ್ತಾಗಿದೆ. ಅದನ್ನು ಭಾರತಕ್ಕೆ ಮರಳಿಸಬಾರದು’ ಎಂದು ಅಲ್ಲಿನ ಪ್ರಗತಿಪರರು ತಮ್ಮ ತಮ್ಮ ಪ್ರಶಸ್ತಿಗಳನ್ನು ಅಧ್ಯಕ್ಷರಿಗೆ ಮರಳಿಸಿದರು. ಇದೇ ಸಂದರ್ಭದಲ್ಲಿ ಶ್ರೀಲಂಕಾದ ಬೌದ್ಧರ ಪ್ರಗತಿಪರ ಸಂಘಟನೆಯೊಂದು, ಬೌದ್ಧರ ಮಾರಣಹೋಮ ಮಾಡಿ ಅವರನ್ನು ಭಾರತದಿಂದ ಓಡಿಸಿದ ಶಂಕರಾಚಾರ್ಯರು ಕ್ಷಮೆಯಾಚನೆ ಮಾಡಬೇಕು ಎಂದು ಶ್ರೀಲಂಕಾದ ಪುರಭವನದ ಮುಂದೆ ಪ್ರತಿಭಟನೆ ನಡೆಸತೊಡಗಿದರು.

ಪರಿಸ್ಥಿತಿ ಕಾವೇರುವುದನ್ನು ಅರಿತದ್ದೇ, ನರೇಂದ್ರಮೋದಿಯವರು ಪುಷ್ಪಕ ವಿಮಾನವನ್ನು ಏರಿ ಕುಳಿತರು. ಅಮಿತ್ ಶಾ ಅವರು ಹನುಮಂತ ನಂತೆ ಆ ವಿಮಾನವನ್ನು ಹೊತ್ತು ಹಾರಿ, ಮೋದಿಯವರನ್ನು ವಾರಣಾಸಿಗೆ ತಲುಪಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)