varthabharthi

ಪ್ರಚಲಿತ

ದೇವರಾಜ ಅರಸು ದಾರಿಯಲ್ಲಿ ಸಿದ್ದರಾಮಯ್ಯ

ವಾರ್ತಾ ಭಾರತಿ : 15 May, 2017
ಸನತ್ ಕುಮಾರ್ ಬೆಳಗಲಿ

ದೇವರಾಜ ಅರಸು ನಂತರ ಕರ್ನಾಟಕ ಕಂಡ ಅತ್ಯುತ್ತಮ ಮುಖ್ಯಮಂತ್ರಿ ಯಾರು? ಈ ಪ್ರಶ್ನೆಗೆ ಹಲವು ಉತ್ತರಗಳು ಬರುತ್ತವೆ. ಆದರೆ ಇಂದಿನ ಸಂದರ್ಭದಲ್ಲಿ ಸಿದ್ದರಾಮಯ್ಯ ಅತ್ಯುತ್ತಮ ಮುಖ್ಯಮಂತ್ರಿಯೆಂದು ಅನೇಕರು ಒಪ್ಪಿಕೊಳ್ಳುತ್ತಾರೆ. ಒಪ್ಪಿಕೊಳ್ಳಲು ಇಚ್ಛಿಸದವರು ಅರಸು ಅವರನ್ನು ಸಿದ್ದರಾಮಯ್ಯ ಜೊತೆ ಏಕೆ ಹೋಲಿಸುತ್ತೀರಿಯೆಂದು ಕೋಪದಿಂದ ಕೇಳುತ್ತಾರೆ. ಇನ್ನೂ ಕೆಲವರು ಹೆಗಡೆ, ವೀರೇಂದ್ರ ಪಾಟೀಲ್, ದೇವೇಗೌಡ, ಜೆ.ಎಚ್.ಪಟೇಲ್ ಮುಂತಾದವರ ಹೆಸರು ಹೇಳುತ್ತಾರೆ. ನಾನು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಅರಸು ನಂತರ ಸಿದ್ದರಾಮಯ್ಯ ಅತ್ಯುತ್ತಮ ಮುಖ್ಯಮಂತ್ರಿ ಎಂಬ ಸ್ಟೇಟಸ್ ಹಾಕಿದಾಗ, ಅನೇಕರು ಸ್ವಾಗತಿಸಿದರು. ಇನ್ನು ಕೆಲವರು ನಿಮ್ಮಿಂದ ಇದನ್ನು ನಿರೀಕ್ಷಿಸಿರಲಿಲ್ಲ ಎಂದು ಹೇಳಿದರು. ಮತ್ತೆ ಕೆಲವರು ಉತ್ತಮ ಎಂದರೆ ಸಾಕಿತ್ತು, ಅತ್ಯುತ್ತಮ ಏಕೆ ಎಂದು ಪ್ರಶ್ನಿಸಿದರು. ಒಂದಿಬ್ಬರು, ‘‘ಪ್ರಗತಿಪರರಿಗೆ ಏನಾಗಿದೆ? ನೀವೇಕೆ ಅವರನ್ನು ಬೆಂಬಲಿಸುತ್ತೀರಿ’’ ಎಂದು ಕೇಳಿದರು. ಮುಂಬೈಯ ಪ್ರಗತಿಪರ ಚಿಂತಕಿ ನಿರಂಜನಿ ಶೆಟ್ಟಿಯವರು ಸಿದ್ದರಾಮಯ್ಯ ಅತ್ಯುತ್ತಮ ಎಂಬುದು ನಿಜವೇ ಎಂದು ಪ್ರಶ್ನಿಸಿದರು. ಇದಕ್ಕೆ ನಾನು ಉತ್ತರ ಕೊಡುವ ಮುನ್ನವೇ ಗೌರಿ ಲಂಕೇಶ್ ಅವರು ಹಿಂದಿನ ಮುಖ್ಯಮಂತ್ರಿಗಳ ಪಟ್ಟಿ ಹಾಕಿ, ನೀವೇ ತೀರ್ಮಾನಿಸಿ ಎಂದರು. ಆದರೆ ಬಹುತೇಕ ಜನರ ಅಭಿಪ್ರಾಯ ಸಿದ್ದರಾಮಯ್ಯ ಅವರ ಪರವಾಗಿದೆ.

ನಾಡಿನ ಹೆಸರಾಂತ ಚಿಂತಕರಲ್ಲಿ ಪ್ರಮುಖರಾದ ಪುರುಷೋತ್ತಮ ಬಿಳಿಮಲೆ, ಬಿ.ಸುರೇಶ್, ಮುಹಮ್ಮದ್ ಬಡ್ಡೂರ್, ಎಂ.ಕೆ.ಜೀರ್ಮುಖಿ, ಶಂಕರ ಹಲಗತ್ತಿ, ಜಗದೀಶ ಪಾಟೀಲ್, ರಾಯಚೂರಿನ ಕಮ್ಯುನಿಸ್ಟ್ ನಾಯಕ ಮಾನಸಯ್ಯ, ಮಂಡ್ಯದ ಸಿಪಿಎಂ ನಾಯಕ ಕೃಷ್ಣೇಗೌಡ, ಶ್ರೀನಿವಾಸ ಕಾರ್ಕಳ ಹೀಗೆ ನೂರಾರು ಜನ, ‘‘ಅರಸು ನಂತರ ಕರ್ನಾಟಕ ಕಂಡ ಅತ್ಯುತ್ತಮ ಮುಖ್ಯಮಂತ್ರಿ ಸಿದ್ದರಾಮಯ್ಯ’’ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ನಮ್ಮ ಅಭಿಪ್ರಾಯವನ್ನು ಎಲ್ಲರೂ ಒಪ್ಪಬೇಕೆಂದೇನಿಲ್ಲ. ಪ್ರತಿಯೊಬ್ಬರಿಗೂ ಅವರದ್ದೇ ಆದ ಅಭಿಪ್ರಾಯಗಳು ಇರುತ್ತವೆ. ಸಿದ್ದರಾಮಯ್ಯ ಅವರನ್ನು ಇಷ್ಟಪಡುವವರು ಇರುವಂತೆಯೇ ಇಷ್ಟಪಡದವರು ಇರುತ್ತಾರೆ. ಆದರೆ ಇಷ್ಟಪಡುವ ನಮ್ಮಂತಹವರು ಅಭಿಪ್ರಾಯ ವ್ಯಕ್ತಪಡಿಸಿದರೆ ನಮ್ಮನ್ನು ಕಾಂಗ್ರೆಸ್ ಚೇಲಾಗಳು, ಹೊಣೆಗೇಡಿಗಳೆಂದು ಟೀಕಿಸುವ ‘‘ಪವಿತ್ರಾತ್ಮ’’ರು ಈ ನಾಡಿನಲ್ಲಿ ಇದ್ದಾರೆ. ಕಂಡಕಂಡವರಿಗೆಲ್ಲ ಸರ್ಟಿಫಿಕೇಟ್ ಕೊಡುವುದೇ ಇವರ ಕೆಲಸ.

ನಾಲ್ಕು ದಶಕಗಳ ಹಿಂದೆ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಅವರನ್ನು ಕಣ್ಣಾರೆ ಕಂಡವನು ನಾನು. ಬರೀ ದೂರ ನಿಂತು ನೋಡಿಲ್ಲ. ಅವರ ಪರಿಚಯ ಕೂಡ ನನಗಿತ್ತು. ಅರಸು ಮುಖ್ಯಮಂತ್ರಿಯಾಗುವ ಮುನ್ನ 1971ರಲ್ಲಿ ಮೊದಲ ಬಾರಿಗೆ ಪಕ್ಷದ ಸಂಘಟನೆಗಾಗಿ ನಮ್ಮ ಬಿಜಾಪುರ ಜಿಲ್ಲೆಗೆ ಭೇಟಿ ನೀಡಿದ್ದರು. ಆಗ ಬಸವನಬಾಗೇವಾಡಿಯಲ್ಲಿ ಕುರ್ಚಿ, ಟೇಬಲ್ ಹಾಕಿ ಅವರ ಸಭೆಯನ್ನು ಏರ್ಪಡಿಸಿದವರಲ್ಲಿ ನಾನೂ ಒಬ್ಬ. ಇದು ಆಗ ಯುವ ಕಾಂಗ್ರೆಸ್‌ನಲ್ಲಿದ್ದ ರಮೇಶ್ ಕುಮಾರ್ ಮತ್ತು ವೀರಣ್ಣ ಮತ್ತಿಕಟ್ಟಿಯವರಿಗೆ ಗೊತ್ತಿದೆ. ಅರಸರ ಅಂದಿನ ಸಭೆಯಲ್ಲಿ ಗಲಾಟೆಯಾದಾಗ, ಸುತ್ತಲೂ ಕುರ್ಚಿ ಹಿಡಿದು ರಕ್ಷಣೆ ನೀಡಿದ ಯುವಕರ ಗುಂಪಿನಲ್ಲೂ ನಾನಿದ್ದೆ. ಈ ಗಲಾಟೆಗೆ ಹೆದರದೇ ಭಾಷಣ ಮಾಡಿದ ಅರಸು, ‘‘ಬಸವಣ್ಣನವರಿಗೂ ನೀವು ಹೀಗೇ ಹಿಂಸೆ ನೀಡಿದ್ದೀರಿ. ಇದಕ್ಕೆಲ್ಲ ನಾನು ಹೆದರುವುದಿಲ್ಲ’’ ಎಂದು ಹೇಳಿದರು. 70ರ ದಶಕದಲ್ಲಿ ರಾಜಕೀಯ ಪ್ರವೇಶದ ಅವಕಾಶವಿದ್ದರೂ ಅಧಿಕಾರ ರಾಜಕಾರಣದಿಂದ ದೂರವಿರಲು ನಾನು ಎಡಪಂಥೀಯ ಸಿದ್ಧಾಂತ ಮತ್ತು ಚಳವಳಿಯೊಂದಿಗೆ ಗುರುತಿಸಿಕೊಂಡೆ. ನನ್ನ ಪತ್ರಿಕಾರಂಗದ ಪ್ರವೇಶವೂ ಕೂಡ ಆಕಸ್ಮಿಕ. ಅವಿಭಜಿತ ಬಿಜಾಪುರ ಜಿಲ್ಲೆಯ ನಮ್ಮೂರು ಸಾವಳಗಿಯಲ್ಲಿ ಓಕುಳಿ ಎಂಬ ಹಬ್ಬದಲ್ಲಿ ದಲಿತ ಮಹಿಳೆಯರ ಮೇಲೆ ನೀರು ಉಗ್ಗಿ, ಅವರನ್ನು ಅರೆಬೆತ್ತಲೆಯಾಗಿ ಊರು ತುಂಬಾ ಓಡಾಡಿಸುವ ದೃಶ್ಯ ಕಂಡು ನಾನು ಪತ್ರಿಕೆಗೆ ಬರೆದ ಓದುಗರ ಓಲೆ ಸಂಯುಕ್ತ ಕರ್ನಾಟಕದಲ್ಲಿ ಮುಖಪುಟದಲ್ಲಿ ಪ್ರಕಟವಾಯಿತು. ಆಗ ಸಂಯುಕ್ತ ಕರ್ನಾಟಕದ ಸಂಪಾದಕರಾಗಿದ್ದ ಖಾದ್ರಿ ಶಾಮಣ್ಣ ಅವರು ‘‘ಷಂಡರ ಸಮಾಜದಲ್ಲಿ ದುಶ್ಯಾಸನರ ಕೇಕೆ’’ ಎಂಬ ತಲೆಬರಹ ನೀಡಿ ಪತ್ರಿಕೆಯ ಮುಖಪುಟದಲ್ಲಿ ಪ್ರಕಟಿಸಿದ್ದರು. ಆಗಿನ ರಾಜಕಾರಣಿಗಳು ಎಷ್ಟು ಸೂಕ್ಷ್ಮವಾಗಿದ್ದರೆಂದರೆ, ಮುಖ್ಯಮಂತ್ರಿ ದೇವರಾಜ ಅರಸು ಅವರು ಈ ಪತ್ರವನ್ನು ಓದಿ, ತಕ್ಷಣ ಓಕುಳಿ ನಿಷೇಧಕ್ಕೆ ಆದೇಶಿಸಿದರು. ಜಮಖಂಡಿ ಯಲ್ಲಿ ಅವರ ಆಪ್ತರಾಗಿದ್ದ ಭೀಮಣ್ಣ ಕಿತ್ತೂರು ಅವರ ಮೂಲಕ ನನ್ನನ್ನು ಪತ್ತೆ ಮಾಡಿ, ಭೇಟಿಯಾಗಲು ಬೆಂಗಳೂರಿಗೆ ಕರೆಸಿದರು. ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನಿಸಿದರು. ಆದರೂ ಮಾರ್ಕ್ಸ್‌ವಾದದತ್ತ ಒಲವು ಹೊಂದಿದ್ದ ನಾನು ಖಾದ್ರಿಯವರ ಆಹ್ವಾನದ ಮೇರೆಗೆ ಸಂಯುಕ್ತ ಕರ್ನಾಟಕ ಸೇರಿದೆ.

ಇದೆಲ್ಲ ಏಕೆ ಬರೆಯಬೇಕಾಯಿತೆಂದರೆ, ದೇವರಾಜ ಅರಸು ಅವರನ್ನು ಮತ್ತು ಅವರ ಆಡಳಿತ ಶೈಲಿಯನ್ನು ತುಂಬಾ ಹತ್ತಿರದಿಂದ ನೋಡಿದ ನಾನು ಕಣ್ಣಾರೆ ಕಂಡಿದ್ದನ್ನು ಹೇಳಲೇಬೇಕಾಗಿದೆ. ಕರ್ನಾಟಕದ ಅವಕಾಶ ವಂಚಿತ ಸಮುದಾಯಗಳಿಗೆ ಅರಸು ಭಾಗ್ಯದ ಬಾಗಿಲನ್ನೇ ತೆರೆದರು. ಆವರೆಗೆ ಬಲಿಷ್ಠ ಜಾತಿಗಳ ಸ್ವತ್ತಾಗಿದ್ದ ರಾಜಕಾರಣದಲ್ಲಿ ಖರ್ಗೆ, ಧರಂಸಿಂಗ್, ಬಸವಲಿಂಗಪ್ಪ, ರಂಗನಾಥ ಅವರಂತಹ ದಮನಿತ ಸಮುದಾಯದ ಹೊಸ ನಾಯಕತ್ವ ತಂದರು. ಶಾಂತವೇರಿ ಗೋಪಾಲಗೌಡರ ಗರಡಿಯಲ್ಲಿ ಪಳಗಿದ ಎಸ್.ಬಂಗಾರಪ್ಪ, ಕಾಗೋಡು ತಿಮ್ಮಪ್ಪ ಅವರೂ ಸಹ ಅರಸು ಪಾಳಯಕ್ಕೆ ಸೇರಿದರು. ಸೈದ್ಧಾಂತಿಕವಾಗಿ ಮಾರ್ಕ್ಸ್‌ವಾದಕ್ಕೆ ಹತ್ತಿರವಾಗಿದ್ದ ಅರಸು ಭೂಸುಧಾರಣಾ ಕಾನೂನು ಜಾರಿಗೆ ತಂದರು. ಉಳುವವನಿಗೆ ಭೂಮಿಯ ಹಕ್ಕನ್ನು ನೀಡಿದರು. ಇದಕ್ಕಾಗಿ ರಚಿಸಲಾದ ವಿಧಾನಮಂಡಲದ ಉಭಯ ಸದನಗಳ ಜಂಟಿ ಸಮಿತಿಗೆ ಕಮ್ಯುನಿಸ್ಟ್ ನಾಯಕ ಬಿ.ವಿ.ಕಕ್ಕಿಲಾಯ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದರು. ಭೂ ಸುಧಾರಣೆ ನಂತರ ಸಾಮಾಜಿಕ ನ್ಯಾಯದ ಕಾರ್ಯಸೂಚಿಯನ್ನು ಕೈಗೆತ್ತಿಕೊಂಡ ಅರಸು ರಾಣೆಬೆನ್ನೂರಿನ ಹಿರಿಯ ವಕೀಲ ಲಕ್ಷ್ಮಣ ಹಾವನೂರ ಅವರ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಆಯೋಗ ರಚಿಸಿದರು. ಆಗ ಕರ್ನಾಟಕದ ಅವಕಾಶ ವಂಚಿತ ಸಮುದಾಯಗಳನ್ನು ಗುರುತಿಸಿ, ಮೀಸಲಾತಿ ಸೌಕರ್ಯ ನೀಡಿದರು. ಇದೆಲ್ಲ ಸುಮ್ಮನೆ ಆಗಲಿಲ್ಲ. ಇದಕ್ಕಾಗಿ ಮೇಲ್ವರ್ಗಗಳನ್ನು, ಮೇಲ್ಜಾತಿಗಳ ಸಿರಿವಂತರನ್ನು ಅರಸು ಎದುರು ಹಾಕಿಕೊಂಡರು. ಹಾವನೂರ ಆಯೋಗದ ವರದಿ ವಿರುದ್ಧ ರಾಜ್ಯದಲ್ಲಿ ದೊಡ್ಡ ಚಳವಳಿಯೇ ನಡೆಯಿತು. ಈಗ ಅರಸು ಅವರನ್ನು ಹೊಗಳುತ್ತಿರುವ ಅನೇಕರು ಆಗ ಅವರ ವಿರುದ್ಧ ಕೆಂಡ ಕಾರುತ್ತಿದ್ದರು. ದೇವೇಗೌಡ, ಬೊಮ್ಮಾಯಿ, ವೀರೇಂದ್ರ ಪಾಟೀಲ, ರಾಮಕೃಷ್ಣ ಹೆಗಡೆ, ಕಾಂಗ್ರೆಸ್ ಪಕ್ಷದವರಾದ ಕೆ.ಎಚ್.ಪಾಟೀಲ ಇವರೆಲ್ಲ ಅರಸು ಅವರ ಕಾಲೆಳೆಯಲು ಯತ್ನಿಸಿದರು. ಅರಸು ಅವರ ಕಾಲದಿಂದಲೇ ಭ್ರಷ್ಟಾಚಾರ ಆರಂಭವಾಯಿತೆಂದು ಕತೆ ಕಟ್ಟಿದರು.ಆದರೆ ಅರಸು ಕಾಲಕ್ಕಿಂತ ಮುಂಚೆಯೇ ನಿಜಲಿಂಗಪ್ಪ ಮುಖ್ಯಮಂತ್ರಿಯಾಗಿದ್ದಾಗಲೇ ಶರಾವತಿ ಕರ್ಮಕಾಂಡ ರಾಜ್ಯದಲ್ಲಿ ಕೋಲಾಹಲ ಎಬ್ಬಿಸಿತ್ತು. ರಾಮಕೃಷ್ಣ ಹೆಗಡೆಯವರ ಮೇಲೆಯೂ ಅನೇಕ ಆರೋಪಗಳಿದ್ದವು. ಆದರೂ ಅರಸರನ್ನು ಮಾತ್ರ ಭ್ರಷ್ಟಾಚಾರಿಯೆಂದು ಬಿಂಬಿಸಿ, ಗ್ರೋವರ್ ಆಯೋಗ ರಚನೆಯಾಗುವಂತೆ ಮಾಡಿದರು. ಆದರೆ ವೈಯಕ್ತಿಕವಾಗಿ ಅರಸು ಭ್ರಷ್ಟರಾಗಿರಲಿಲ್ಲ. ಪಕ್ಷದ ಖರ್ಚುವೆಚ್ಚಗಳಿಗಾಗಿ ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಅವರ ಹೆಸರಿನಲ್ಲಿ ಯಾರ್ಯಾರೋ ಭ್ರಷ್ಟಾಚಾರ ಮಾಡಿರಬಹುದು.

ದೇವರಾಜ ಅರಸು ನಿಧನರಾದಾಗ, ಅವರ ಅಂತ್ಯಕ್ರಿಯೆಗೆ ಅವರ ಮನೆಯವರ ಬಳಿ ಹಣವಿರಲಿಲ್ಲ. ಆಗಿನ ಮುಖ್ಯಮಂತ್ರಿ ಆರ್.ಗುಂಡೂರಾವ್ ಸರಕಾರಿ ವೆಚ್ಚದಲ್ಲಿ ಅಂತ್ಯಕ್ರಿಯೆ ನೆರವೇರಿಸಿದರು.

ಕರ್ನಾಟಕದಲ್ಲಿ ಪಟ್ಟಭದ್ರ ಹಿತಾಸಕ್ತಿಗಳಿಗೆ ಪರ್ಯಾಯವಾಗಿ ಜನಶಕ್ತಿಯ ರಾಜಕಾರಣ ಆರಂಭಿಸುವ ಸಂಕಲ್ಪ ತೊಟ್ಟಿದ್ದ ಅರಸು ಅವರು ಶಾಸನ ಸಭೆಯಲ್ಲಿ ಕಮ್ಯುನಿಸ್ಟರು ಇರಲೇಬೇಕೆಂದು ಚುನಾ ವಣೆಯಲ್ಲಿ 5 ರಿಂದ 6 ಕ್ಷೇತ್ರಗಳನ್ನು ಸಿಪಿಐಗೆ ಬಿಟ್ಟು ಕೊಡುತ್ತಿದ್ದರು. 1978ರಲ್ಲಿ ದಾವಣಗೆರೆ ಕ್ಷೇತ್ರವನ್ನು ಪಂಪಾಪತಿ ಅವರಿಗೆ ಬಿಟ್ಟು ಕೊಡುವಾಗ, ಕಾಂಗ್ರೆಸ್ ಪಕ್ಷದ ಘಟಾನುಘಟಿಗಳು ಮತ್ತು ಸ್ಥಳೀಯ ಉದ್ಯಮಿಗಳು ವಿರೋಧ ವ್ಯಕ್ತಪಡಿಸಿದರೂ ಅರಸು ಸೊಪ್ಪು ಹಾಕಲಿಲ್ಲ. ಹೀಗಾಗಿ ದಾವಣಗೆರೆಯ ಕಾಟನ್‌ಮಿಲ್‌ನಲ್ಲಿ ಸಾದಾ ಕಾರ್ಮಿಕರಾಗಿದ್ದ ಪಂಪಾಪತಿ ವಿಧಾನಸಭೆ ಪ್ರವೇಶಿಸುವಂತಾಯಿತು. ಇದು ದೇವರಾಜ ಅರಸು ನಡೆದ ಬಂದ ದಾರಿ. ಇದೇ ದಾರಿಯಲ್ಲಿ ಸಾಗಿದ ಬಂಗಾರಪ್ಪ, ವೀರಪ್ಪ ಮೊಯ್ಲಿ ಕೆಲ ಮಟ್ಟಿಗೆ ಸುಧಾರಣಾ ಕ್ರಮ ಕೈಗೊಂಡರೂ ಪೂರ್ಣಾವಧಿಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿ ಉಳಿಯುವ ಅವಕಾಶ ಅವರಿಗೆ ದೊರೆಯಲಿಲ್ಲ. ಅರಸು ನಂತರ ಸಿದ್ದರಾಮಯ್ಯನವರಿಗೆ ಅಂತಹ ಅವಕಾಶ ದೊರೆತಿದೆ. ಆದರೆ ಸಿದ್ದರಾಮಯ್ಯ ಮತ್ತು ಅರಸು ಅವರನ್ನು ಹೋಲಿಕೆ ಮಾಡಿದರೆ, ಅನೇಕರಿಗೆ ಕೋಪ ಬರುತ್ತದೆ. ನಿಜ, ಇವರಿಬ್ಬರೂ ಅಧಿಕಾರಕ್ಕೆ ಬಂದ ಸನ್ನಿವೇಶದಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ದೇವರಾಜ ಅರಸು ಮುಖ್ಯಮಂತ್ರಿಯಾದಾಗ, ಜಗತ್ತಿನಲ್ಲಿ ಸಮಾಜವಾದದ ಗಾಳಿ ಬೀಸುತಿತ್ತು. ಇಂದಿರಾ ಗಾಂಧಿಯವರು ಬ್ಯಾಂಕ್ ರಾಷ್ಟ್ರೀಕರಣ ಮತ್ತು ರಾಜಧನ ರದ್ದತಿ ಮಾಡಿ, ಪಟ್ಟಭದ್ರ ಹಿತಾಸಕ್ತಿಗಳ ಅಡಿಪಾಯಕ್ಕೆ ಕೊಡಲಿಯೇಟು ಹಾಕಿದ್ದರು. ಆಗ ಎಲ್ಲೆಡೆ ‘‘ಗರೀಬಿ ಹಟಾವೊ’’ ಎಂಬ ಘೋಷಣೆ ಕೇಳುತ್ತಿತ್ತು. ಆಗ ಸಂಘ ಪರಿವಾರದ ಹಾವಳಿ ಎಲ್ಲೂ ಇರಲಿಲ್ಲ. ಅಂತಹ ಸನ್ನಿವೇಶದಲ್ಲಿ ತಮ್ಮ ಕನಸಿನ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲು ಅರಸು ಅವರಿಗೆ ಅಷ್ಟು ತೊಂದರೆ ಆಗಿರಲಿಲ್ಲ.

ಆದರೆ ಸಮಾಜವಾದಿ ಹಿನ್ನೆಲೆಯ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಕಾಲಘಟ್ಟವೇ ಬೇರೆ. ಜಗತ್ತಿನಲ್ಲಿ ಸಮಾಜವಾದಿ ವ್ಯವಸ್ಥೆ ಕುಸಿದು ಬಿದ್ದಿದೆ. ಜಾಗತೀಕರಣದ ಶಕೆ ಆರಂಭಗೊಂಡ ನಂತರ ಎಲ್ಲೆಡೆ ಮಾರುಕಟ್ಟೆ ಆರ್ಥಿಕತೆಯ ಪ್ರಭಾವ ಹೆಚ್ಚಿದೆ. ಸಿದ್ದರಾಮಯ್ಯ ಅವರ ಕಾಂಗ್ರೆಸ್ ಪಕ್ಷವೇ ಖಾಸಗೀಕರಣ ಮತ್ತು ಉದಾರೀಕರಣ ನೀತಿಯನ್ನು ಈ ದೇಶದ ಮೇಲೆ ಹೇರಿತು. ಬಡವರ ಪರವಾಗಿ ಕೈಗೊಳ್ಳುವ ಯಾವ ಕಾರ್ಯಕ್ರಮವೂ ಸರಿಯಲ್ಲ ಎಂಬ ಟೀಕೆ ಈಗ ವ್ಯಾಪಕವಾಗಿದೆ. ಇಂತಹ ಸನ್ನಿವೇಶದಲ್ಲಿ ಅನ್ನಭಾಗ್ಯ, ಕ್ಷೀರಭಾಗ್ಯ, ವಿದ್ಯಾಸಿರಿಯಂತಹ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಪ್ರವಾಹದ ವಿರುದ್ಧ ಈಜುವ ಸಾಹಸವನ್ನು ಸಿದ್ದರಾಮಯ್ಯ ಮಾಡಿದ್ದಾರೆ. ಹಕ್ಕಿಪಿಕ್ಕಿ, ಶಿಳ್ಳೇಕ್ಯಾತ, ಬುಡಬುಡಿಕೆಯಂತಹ ಹೇಳಹೆಸರಿಲ್ಲದ ಅಲೆಮಾರಿ ಸಮುದಾಯಗಳನ್ನು ಗುರುತಿಸಿ, ಈ ಸರಕಾರ ಸೌಕರ್ಯ ನೀಡಿದೆ. ದೇವರಾಜ ಅರಸು ಅವರಿಗಿದ್ದ ಪೂರಕ ವಾತಾವರಣ ಈಗ ಸಿದ್ದರಾಮಯ್ಯ ಅವರಿಗೆ ಇಲ್ಲ. ಕಳೆದ ವರ್ಷ ಮಾಧ್ಯಮ ಅಕಾಡಮಿ ಮುಖ್ಯಮಂತ್ರಿಗಳ ಜೊತೆ, ಪತ್ರಕರ್ತರ ಜೊತೆ ಸಂವಾದ ಕಾರ್ಯಕ್ರಮ ಏರ್ಪಡಿಸಿತ್ತು. ಆಗ ಪ್ರಸ್ತಾವನೆಯ ಭಾಷಣ ಮಾಡಿದ್ದ ನಾನು ಮುಖ್ಯಮಂತ್ರಿಯವರನ್ನು ಉದ್ದೇಶಿಸಿ, ‘‘ನಿಮ್ಮ ಸಾಮಾಜಿಕ ಕಳಕಳಿ ಬಗ್ಗೆ ಗೌರವವಿದೆ. ಆದರೆ ನಿಮ್ಮ ಪಕ್ಷದ ನವ ಉದಾರೀಕರಣದ ನೀತಿಗಳು ನಿಮ್ಮ ಕಾರ್ಯಕ್ರಮಗಳಿಗೆ ಅಡ್ಡಿಯಾಗಿವೆ. ಅವುಗಳನ್ನು ಹೇಗೆ ನಿಭಾಯಿಸುವಿರಿ’’ ಎಂದು ಕೇಳಿದ್ದೆ. ನನ್ನ ಮಾತು ಮುಗಿದು ಅವರ ಪಕ್ಕದಲ್ಲಿ ಬಂದು ಕೂತಾಗ, ನಗುತ್ತಲೇ ಮಾತು ಆರಂಭಿಸಿದ ಸಿದ್ದರಾಮಯ್ಯನವರು, ‘‘ಈ ಎಲ್ಲಾ ಇತಿಮಿತಿಗಳ ನಡುವೆ ಜನಪರ ಕಾರ್ಯಕ್ರಮಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುತ್ತೇನೆ’’ ಎಂದು ಭರವಸೆ ನೀಡಿದ್ದರು. ನನಗೆ ಅನ್ನಿಸಿದಂತೆ ಆ ನಿಟ್ಟಿನಲ್ಲಿ ಅವರು ಹೆಜ್ಜೆಯಿರಿಸಿದ್ದಾರೆ.

ಸಿದ್ದರಾಮಯ್ಯನವರ ಸರಕಾರದಲ್ಲಿ ಲೋಪಗಳೇ ಇಲ್ಲವೆಂದಲ್ಲ. ಮೂಢನಂಬಿಕೆ ನಿಷೇಧದಂತಹ ಕಾನೂನು ಜಾರಿಗೊಳಿಸುವುದಾಗಿ ಹೇಳುತ್ತಲೇ ಬಂದರು. ಆದರೆ ಜಾರಿಗೆ ತರಲಿಲ್ಲ. ಇದು ಅವರ ತಪ್ಪಲ್ಲ. ಮುಖ್ಯಮಂತ್ರಿಗಳು ಸಚಿವ ಸಂಪುಟದ ಒಪ್ಪಿಗೆ ಪಡೆದು ಇಂತಹ ಶಾಸನ ಜಾರಿ ತರಬೇಕಾಗುತ್ತದೆ. ಆದರೆ ಸಂಪುಟದಲ್ಲಿ ಎಲ್ಲರೂ ಸಿದ್ದರಾಮಯ್ಯನವರಂತೆ ಇರುವುದಿಲ್ಲ. ಹೀಗಾಗಿ ಇದು ಜಾರಿಗೆ ಬರಲಿಲ್ಲ. ಇದರ ಜೊತೆಗೆ ಮಾಧ್ಯಮಗಳಲ್ಲಿನ ಮನುವಾದಿಗಳು ಈ ಕಾನೂನಿನ ವಿರುದ್ಧ ಬೊಬ್ಬೆ ಹಾಕಿದ್ದರಿಂದ ನಾನಾ ಅಡ್ಡಿಆತಂಕಗಳು ಎದುರಾದವು. ಇದನ್ನು ಬಿಟ್ಟರೆ, ಉಳಿದಂತೆ ಈ ಸರಕಾರ ನುಡಿದಂತೆ ನಡೆದುಕೊಂಡಿದೆ. ರೈತ ಕಾರ್ಮಿಕರ ಹೋರಾಟದ ಸಂದರ್ಭ ಗಳಲ್ಲಿ ಸಂಘಟನೆಗಳ ನಾಯಕರನ್ನು ಕರೆದು ಮಾತನಾಡಿ, ಸಮಸ್ಯೆಗೆ ಪರಿಹಾರವನ್ನು ರೂಪಿಸಿದ್ದಾರೆ. ಸಮಾಜದ ಮುಖ್ಯವಾಹಿನಿಗೆ ಬರಲು ಬಯಸಿದ ನೂರ್ ಶ್ರೀಧರ್ ಮತ್ತು ಸಿರಿಮನೆ ನಾಗರಾಜರಂತಹ ಮಾವೋವಾದಿ ನಾಯಕರನ್ನು ಕರೆದು ಮಾತನಾಡಿಸಿ, ಮುಖ್ಯವಾಹಿನಿಗೆ ಬಂದು ಚಟುವಟಿಕೆ ಕೈಗೊಳ್ಳಲು ಮುಖ್ಯಮಂತ್ರಿ ಯವರು ಅವಕಾಶ ನೀಡಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರ ಹೋರಾಟಕ್ಕೆ ಸಹಾನುಭೂತಿಯಿಂದ ಸ್ಪಂದಿಸಿದ್ದಾರೆ.

ದೇವರಾಜ ಅರಸು ಕಾಲದಲ್ಲಿ ಎಷ್ಟೇ ವಿಘ್ನಗಳಿದ್ದರೂ ಕೇಂದ್ರ ದಲ್ಲಿ ಕಾಂಗ್ರೆಸ್ ಸರಕಾರವಿತ್ತು. ಈಗ ಬಿಜೆಪಿಯ ಮೋದಿ ಸರಕಾರ ವಿದೆ. ನಮ್ಮ ಸಮಾಜ ಎಷ್ಟು ಜಾತಿಪೀಡಿತವಾಗಿದೆಯೆಂದರೆ, ಹಿಂದುಳಿದ ಸಮುದಾಯದ ಒಬ್ಬ ಮುಖ್ಯಮಂತ್ರಿಯನ್ನು ಸಹಿಸುವ ವಿಶಾಲ ಮನಸ್ಸು ಇವರಿಗಿಲ್ಲ. ಅಂತಲೇ ಸಿದ್ದರಾಮಯ್ಯ ಅಧಿಕಾರ ವಹಿಸಿಕೊಂಡಾಗಿನಿಂದ ಅವರಿಗೆ ಬಿಜೆಪಿ ನಾನಾ ಹಿಂಸೆ ನೀಡುತ್ತಲೇ ಬಂದಿದೆ. ಡಿ.ಕೆ.ರವಿ ಆತ್ಮಹತ್ಯೆ ಪ್ರಕರಣವನ್ನು ಕೊಲೆಯೆಂದು ಬಿಂಬಿಸಿ, ಸರಕಾರವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ನಡೆಯಿತು. ಬೆಳಗಾವಿ ವಿಧಾನಮಂಡಲ ಅಧಿವೇಶನದ ವೇಳೆ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡ ಪ್ರಕರಣವನ್ನು ಸಿದ್ದರಾಮಯ್ಯ ಅವರ ತಲೆಗೆ ಕಟ್ಟುವ ಪ್ರಯತ್ನ ನಡೆಯಿತು. ಮುಖ್ಯಮಂತ್ರಿ ಕಟ್ಟಿಕೊಂಡ ಕೈಗಡಿಯಾರ ಸುತ್ತಲೂ ವಿವಾದ ಹುಟ್ಟು ಹಾಕಲಾಯಿತು. ರಾಜ್ಯದೆಲ್ಲೆಡೆ ಕೋಮು ಗಲಭೆ ಉಂಟು ಮಾಡಿ, ಕಾನೂನು ಸುವ್ಯವಸ್ಥೆ ಹದಗೆಡುವಂತೆ ಹುನ್ನಾರ ನಡೆಸಲಾಯಿತು. ಕರ್ನಾಟಕವನ್ನು ಲೂಟಿ ಮಾಡಿ ಜೈಲಿಗೆ ಹೋಗಿ ಬಂದವರು ಸಿದ್ದರಾಮಯ್ಯ ವಿರುದ್ಧ ಆರೋಪಗಳ ಮಾಡಿ ಅಪಹಾಸ್ಯಕ್ಕೀಡಾದರು. ಆದರೂ ಕೂಡ ಪಕ್ಷದಲ್ಲೇ ಆಂತರಿಕವಾಗಿ ಸಹಕಾರ ಇಲ್ಲದಿದ್ದರೂ ಯಾವುದೇ ಆರೋಪಕ್ಕೂ ಕುಗ್ಗದೇ ಮತ್ತು ಜಗ್ಗದೇ ಏಕಾಂಗಿಯಾಗಿ ನಿಂತು ಎಲ್ಲ ಸವಾಲುಗಳನ್ನು ಎದುರಿಸಿ ಸಿದ್ದರಾಮಯ್ಯ ಮುನ್ನಡೆದಿದ್ದಾರೆ.

ದೇವರಾಜ ಅರಸು ನಂತರ ಅತ್ಯುತ್ತಮ ಮುಖ್ಯಮಂತ್ರಿ ಸಿದ್ದರಾಮಯ್ಯ ಏಕೆಂದರೆ, ವೈಯಕ್ತಿಕವಾಗಿ ಅವರ ಮೇಲೆ ಯಾವುದೇ ಭ್ರಷ್ಟಾಚಾರದ ಆರೋಪ ಇಲ್ಲ. ಸಂಪುಟದ ಸಚಿವರು ಜೈಲಿಗೆ ಹೋಗಿ ಬಂದಿಲ್ಲ. ಪ್ರತಿಪಕ್ಷಗಳು ಬರೀ ಆರೋಪ ಮಾಡಿದರೆ ಸಾಕು, ಕೆ.ಜೆ.ಜಾರ್ಜ್ ಮತ್ತು ಸಂತೋಷ್ ಲಾಡ್‌ರಂತಹ ಸಚಿವರು ರಾಜೀನಾಮೆ ನೀಡಿದರು. ಇಷ್ಟೆಲ್ಲ ಇದ್ದರೂ ಕೂಡ ಮುಖ್ಯಮಂತ್ರಿಗಳಿಗೆ ತಾವು ಅಂದು ಕೊಂಡಂತೆ ಬದಲಾವಣೆ ತರಲು ಸಾಧ್ಯವಾಗಿರಲಿಕ್ಕಿಲ್ಲ. ರಾಜ್ಯ ಸರಕಾರವನ್ನು ಉರುಳಿಸಲು ಕೇಂದ್ರದ ಮೋದಿ ಸರಕಾರ ನಿತ್ಯವೂ ಮಸಲತ್ತು ನಡೆಸುತ್ತಿರುವಾಗ, ಅದನ್ನೆಲ್ಲ ಎದುರಿಸಿ ಕರ್ನಾಟಕದಲ್ಲಿ ಕೋಮುವಾದಿ ಫ್ಯಾಶಿಸ್ಟ್ ಶಕ್ತಿಗಳು ತಲೆಯೆತ್ತದಂತೆ ಮಾಡಿರುವುದೇ ಈ ಸರಕಾರದ ದೊಡ್ಡ ಸಾಧನೆಯಾಗಿದೆ. ಸಿದ್ದರಾಮಯ್ಯನವರನ್ನು ವಿರೋಧಿಸುವ ಪ್ರಗತಿಪರರು ಒಂದು ವಿಷಯ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಸಿದ್ದರಾಮಯ್ಯ ಸೋತರೆ, ಅವರ ಬದಲಿಗೆ ಯಾವುದೇ ಪ್ರಗತಿಪರ ನಾಯಕ ಈ ರಾಜ್ಯದ ಮುಖ್ಯಮಂತ್ರಿಯಾಗುವುದಿಲ್ಲ. ಬದಲಾಗಿ ಸಂಘ ಪರಿವಾರ ಕರ್ನಾಟಕವನ್ನು ವಶಪಡಿಸಿಕೊಳ್ಳುತ್ತದೆ. ತನ್ನ ನರಹಂತಕ ಕಾರ್ಯಸೂಚಿ ಜಾರಿಗೆ ತರುತ್ತದೆ. ಈ ಎಚ್ಚರ ನಮಗೆಲ್ಲರಿಗೂ ಇರಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)