varthabharthi

ಅನುಗಾಲ

ಧರ್ಮವೆಂಬ ತಾತ್ಕಾಲಿಕ ಕ್ಷಮತೆ

ವಾರ್ತಾ ಭಾರತಿ : 18 May, 2017
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ವರ್ತಮಾನದ ಧರ್ಮ ಹೀಗೆಯೇ ಮುಂದುವರಿಯುತ್ತಿದೆ. ಹೀಗೆಯೇ ಮುಂದುವರಿಯಬೇಕು. ಈ ಬೆರಗಿನಲ್ಲೇ ಧರ್ಮದ ವ್ಯಾಖ್ಯಾನ, ಚರ್ಚೆ ನಡೆಯಬೇಕು. ಅದು ಪ್ರಕೃತಿ ಸಹಜ. ತಾತ್ಕಾಲಿಕವೆಂಬುದು ಶಾಶ್ವತವೆಂದು ಹೇಳಿದ್ದು ಇದೇ ಅರ್ಥದಲ್ಲಿರಬಹುದು. ಸ್ಥಾವರಕ್ಕಳಿವುಂಟು; ಧರ್ಮವೆಂಬ ಜಂಗಮಕ್ಕಳಿವಿಲ್ಲ!


ಪುರಾಣಗಳ ಒಂದು ನಂಬಿಕೆಯಂತೆ ಕಲಿಯುಗದಲ್ಲಿ ಧರ್ಮವು ಒಂದು ಕಾಲಿನಲ್ಲಿ ನಿಂತಿದೆಯಂತೆ. ಇರಬಹುದೆನಿಸುತ್ತದೆ: ಏಕೆಂದರೆ ಅದು ಯಾವಾಗ ಬೇಕಾದರೂ ಬೀಳುವಂತಿದೆ. ಆದರೆ ಧರ್ಮವು ಯಾವಾಗ ನಾಲ್ಕು, ಮೂರು, ಎರಡು ಕಾಲುಗಳಲ್ಲಿ ನಿಂತಿತ್ತೆಂದು ಸಾಬೀತು ಪಡಿಸುವ ಅಂಶಗಳು ನಮ್ಮ ಯಾವ ಧರ್ಮಗಳಲ್ಲೂ ಇಲ್ಲ. ಸಮುದ್ರ ಮಥನವೂ ಸೇರಿದಂತೆ ಕೃತಯುಗದ ಕಥೆಗಳಲ್ಲಿ, ತ್ರೇತಾಯುಗದ ರಾಮಾಯಣ, ದ್ವಾಪರದ ಮಹಾಭಾರತಗಳಲ್ಲಿ, ಧರ್ಮವು ಯಾವುದೆಂದು ಕೃತಿಮುಖೇನ ನಿರೂಪಿಸಿ ಜಯಿಸಿದ ಉದಾಹರಣೆಗಳಿಲ್ಲ; ಇದ್ದರೂ ಅಪರೂಪ ಮತ್ತು ಪ್ರಾಸಂಗಿಕ ಇಲ್ಲವೇ ಆಕಸ್ಮಿಕ.

ಬುದ್ಧ, ಮಹಾವೀರ, ಬಸವಣ್ಣ ಜನಿಸಿದ ಭಾರತ ಅಂತಲ್ಲ, ಜಗತ್ತಿನ ಎಲ್ಲೆಡೆ (ಅಂದರೆ ಯೇಸು ಇಲ್ಲವೇ ಪೈಗಂಬರ್ ಹುಟ್ಟಿದ ನಾಡುಗಳಲ್ಲೂ ರೋಮ್, ಗ್ರೀಸ್ ಮತ್ತು ಏಷ್ಯಾ ಭೂಖಂಡದ ಮತ್ತು ಸಂಸ್ಕೃತಿಯ ಮೂಲೆಮೂಲೆಗಳಲ್ಲೂ) ಅಧರ್ಮವು ಹಿಂಸಾತ್ಮಕವಾಗಿ ತಾಂಡವವಾಡಿದ ನಿದರ್ಶನಗಳೇ ಹೆಚ್ಚು. ಎಲ್ಲರೂ ಈಡಿಪಸ್‌ನ ಗೂಢ ಪಾಪಲೇಪಿತರೇ. ಸಿನೆಮಾದ ಹಾಗೆ ಒಳ್ಳೆಯ ಶಕ್ತಿಗಳು ಹದಿನೇಳು ರೀಲು ಹಿಂಸೆ, ಸಾವು-ನೋವು ಅನುಭವಿಸಿ ಕೊನೆಗೆ ಒಂದರೆಕ್ಷಣ ಸುಖ ಅನುಭವಿಸಿದಂತೆ ಫೋಸು ನೀಡಿ ಶುಭಂ ಎಂದು ಹೇಳಿ ಪರದೆಯೆಳೆಯುವಂತಿದೆ ನಮ್ಮ ಪುರಾಣೇತಿಹಾಸಗಳು. ಇದೊಂದು ಕೆಥಾರ್ಸಿಸ್.

ಸಾಮಾನ್ಯವಾಗಿ ರೂಢಿಯಲ್ಲಿರುವ ಧರ್ಮ ಎಂಬ ಪದವು ಮತವನ್ನು ನಿರೂಪಿಸುತ್ತದೆ: ಹಿಂದೂ ಧರ್ಮ, ಬೌದ್ಧ ಧರ್ಮ, ಜೈನ ಧರ್ಮ, ಇಸ್ಲಾಮ್ ಧರ್ಮ, ಕ್ರೈಸ್ತ ಧರ್ಮ ಇತ್ಯಾದಿ. ಹೀಗೆ ಗಡಿಯನ್ನೂ ಮಿತಿಯನ್ನೂ ಹಾಕಿಕೊಳ್ಳುವುದು ವೈಯಕ್ತಿಕವಾಗಿಯೂ ಸಮಾನಶೀಲರ ಸಾಮುದಾಯಿಕ ಹಿತಕ್ಕೂ ಒಗ್ಗಿಕೊಳ್ಳುತ್ತದೆ. ಇವೆಲ್ಲ ಮತಗಳು ಮತ್ತು ಇವನ್ನು ಮೀರಿ ಯಾವುದು ನಿಮ್ಮ ಬದುಕಿನ ಧರ್ಮ ಎಂದು ಕೇಳಿದರೆ ತನಗೆ ಅನುಕೂಲವಾದ ವ್ಯವಸ್ಥೆಯೇ ತನ್ನ ಧರ್ಮವೆಂಬಂತೆ ಸಾಮಾನ್ಯ ಮನುಷ್ಯ ಸಮರ್ಥಿಸುತ್ತಾನೆ. ಇದನ್ನೆಲ್ಲ ಮೊತ್ತದಲ್ಲಿ (ನಿ)ರೂಪಿಸಿದವರು ಯಾರು?

ರಾಜಾ ಕಾಲಸ್ಯ ಕಾರಣಂ ಎಂಬ ಮಾತಿದೆ. ಯಾವುದೇ ದೇಶ-ಕಾಲದಲ್ಲಿ ಆಳುವವನು ಆಯಾಯ ಸಂದರ್ಭದ ಗತಿಗೆ ಕಾರಣನಾಗುತ್ತಾನಂತೆ. ಇರಬಹುದು: ರಾಜಸತ್ತೆಯಾಗಲಿ ಪ್ರಜಾಸತ್ತೆಯಾಗಲಿ ಜನರ ದೌರ್ಬಲ್ಯಗಳ ಶಿಶು. ಬಹುತೇಕ ಜನರು ತಮ್ಮ ವೈಯಕ್ತಿಕ ಆಸೆ-ಲಾಲಸೆಗೆ ಯಾವುದು/ಯಾರು ಹಿತವಾಗುತ್ತದೋ/ತ್ತಾನೋ ಅದನ್ನೇ/ಅವನನ್ನೇ ಬೆಂಬಲಿಸುತ್ತಾರೆ. ಸಾಮೂಹಿಕ ಹಿತ, ಪರರ ಹಿತ ಇವೆಲ್ಲ ಸಾಂದರ್ಭಿಕ ಅನುಕೂಲಗಳು ಇಲ್ಲವೆ ಅಗತ್ಯಗಳು. ಎಲ್ಲರಿಗೂ ಹಿತವಾಗಲೆಂದು ಯಾರು ಏನನ್ನೂ ಯೋಚಿಸುವುದಿಲ್ಲ; ನಡೆಸುವುದೂ ಇಲ್ಲ. ಅಂತಹದ್ದೇನಾದರೂ ಇದ್ದರೆ ಅದು ಭ್ರಮೆ. ಉತ್ತಮ ಪ್ರಭುತ್ವ ಲೊಳಲೊಟ್ಟೆ ಎಂಬ ಉಕ್ತಿಗೆ ಪ್ರತಿಯಾಗಿ ಇಂದು ಉತ್ತಮ ಪ್ರಜಾಪ್ರಭುತ್ವ ಲೊಳಲೊಟ್ಟೆ ಎಂದು ಹೇಳಬಹುದು.

ನಮ್ಮೆಲ್ಲ ಧಾರ್ಮಿಕ ನಾಯಕರನ್ನು ಆದರ್ಶವೆಂಬಂತೆ ಪ್ರತಿಪಾದಿಸಲಾ ಗುತ್ತದೆ. ಹರಿಕಥೆ, ಕಾವ್ಯವಾಚನ, ವ್ಯಾಖ್ಯಾನ, ಯಕ್ಷಗಾನ, ನಾಟಕ, ಸಿನೆಮಾದಲ್ಲಿ ಇಂತಹ ಚಿತ್ರಣ ಕೇಳಲು, ನೋಡಲು ಹಿತವಾಗಿರುತ್ತದೆ. ರಾಮಾಯಣವನ್ನು ವಿಮರ್ಶಿಸುವವರು ಒಂದು ಪಕ್ಷದ ಪರವಾಗಿ ವಾದಿಸುವಂತಿರುತ್ತಾರೆಯೇ ವಿನಾ ವಸ್ತುನಿಷ್ಠರಂತಿರುವುದಿಲ್ಲ. ಇಕ್ಕಟ್ಟಿಗೆ ಸಿಲುಕುವ ಸಂದರ್ಭಗಳಲ್ಲಿ, ದಯಾಮಯನಾದ ದೇವರ ಲೀಲೆಯನ್ನು ಮಹಾನುಭಾವರ ನಡೆನುಡಿಗಳನ್ನು ವಿವರಿಸಲು ಅಥವಾ ವಿಮರ್ಶಿಸಲು ನಾವು ಯಾರು ಎಂದು ಕೈಚೆಲ್ಲಿ ಕೂರುವವರೇ ಹೆಚ್ಚು. ವಾಸ್ತವದ ತರ್ಕಕ್ಕೆ, ನಿಕಷಕ್ಕೆ ಕಥಾನಕಗಳನ್ನು ಒಡ್ಡುವವರು ಕಡಿಮೆ. ಅಂಥವರನ್ನು ಸಮಾಜದ ಶಕ್ತರು, ಪಟ್ಟಭದ್ರ ಹಿತಾಸಕ್ತರು ನಾಸ್ತಿಕರು ಅಥವಾ ಧರ್ಮದ್ರೋಹಿಗಳು ಎಂದು ಹಣೆಪಟ್ಟಿ ಕಟ್ಟಿ ಎಸೆಯುತ್ತಾರೆ.

ತಮ್ಮ ಕಾಲದಲ್ಲೇ ಅಂದರೆ ತಮ್ಮ ಜೀವಿತಾವಧಿಯಲ್ಲೇ ದೈವತ್ವಕ್ಕೆ ಏರಲು ಯತ್ನಿಸಿದವರು ಸಾಕಷ್ಟಿದ್ದಾರೆ. ಅತ್ಯಂತ ವೈಜ್ಞಾನಿಕ ಯುಗವೆಂದು ಕರೆಸಿಕೊಳ್ಳು ತ್ತಿರುವ ಈ ಕಾಲದಲ್ಲೂ ಧರ್ಮದ ಹೆಸರಿನಲ್ಲಿ, ಆಳುವವರೂ ಪ್ರಜೆಗಳೂ ಸ್ಪರ್ಧೆಗಿಳಿದವರಂತೆ ದೇವರು, ಪವಾಡ, ಜ್ಯೋತಿಷ್ಯ, ಮಂತ್ರ-ತಂತ್ರಗಳಿಗೆ ವಿಧೇಯರಾಗಿ ನಡೆದುಕೊಳ್ಳುವುದನ್ನು ನೋಡಿದರೆ ವಿಜ್ಞಾನವು ಇತಿಹಾಸದಂತೆ ಏನನ್ನೂ ಸಮಾಜದ ಬುದ್ಧಿಯೊಳಗಿಳಿಸಿಲ್ಲವೆಂದು ಮತ್ತು ವಿವೇಕವನ್ನು ನೀಡಿಲ್ಲವೆಂದು ತೋರುತ್ತದೆ. ಬಹುತೇಕ ಧಾರ್ಮಿಕ ನಾಯಕರು ಸಮೂಹದ ನಾಯಕರೂ ಆಗಿದ್ದರು. ದೇವರು ಸದಾ ಸೋಲುಗೆಲುವುಗಳಲ್ಲೇಕೆ ಇದ್ದರು ಮತ್ತು ಇರಬೇಕು ಎಂಬುದಕ್ಕೆ ತೃಪ್ತಿಕರವಾದ ಉತ್ತರವಿಲ್ಲ.

ಬದುಕಿನಲ್ಲಿ ಬಹಳಷ್ಟು ಸುಖವನ್ನುಂಡವರು ಖಳರಾಗಿ ಸಂದರು. ರಾವಣ, ಕೌರವರಿಂದ ಮೊದಲ್ಗೊಂಡು ಇತ್ತೀಚೆಗಿನ ಐತಿಹಾಸಿಕ ಪಾತ್ರಗಳಾದ ನೆಪೋಲಿಯನ್, ಹಿಟ್ಲರ್, ಮುಸ್ಸೊಲಿನಿ, ವರ್ತಮಾನದಲ್ಲಿ ನೆನಪಾಗಿ ಉಳಿವ ಸದ್ದಾಮ್ ಹುಸೈನ್, ಗದಾಫಿ ಇಂತಹ ಪಾತ್ರಗಳು, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಾಣ ತೆತ್ತ ನೂರಾರು ಮಂದಿ, ಹಾಗೆಯೇ ಚೆಗುವೆರ, ಕೆನ್ ಸಾರೋವಿವಾ ಇವರೆಲ್ಲ ತಮ್ಮ ದುರಂತ ಅಂತ್ಯದ ಹೊರತಾಗಿಯೂ ಆಕರ್ಷಕ ಜೀವಂತ ಪಾತ್ರಗಳೇ. ಹಾಗೆಯೇ ಹದಿನಾಲ್ಕು ವರ್ಷಗಳ ವನವಾಸ ಅನುಭವಿಸಿದ ಪುರಾಣದ ಶ್ರೀರಾಮ, ದಶಕಗಳ ಕಾಲ ಸೆರೆಯನ್ನು ಅನುಭವಿಸಿದ ಇತಿಹಾಸದ ನೆಲ್ಸನ್ ಮಂಡೇಲ ಇವರೆಲ್ಲ ಕೊನೆಗೆ ಒಂದಷ್ಟು ಕಾಲ ಆಳುವ ಅಧಿಕಾರವನ್ನು ಅನುಭವಿಸಿದರು.

ಕಷ್ಟ ಮೊದಲು ಬಂದರೆ ಒಳ್ಳೆಯದೇ ಕೊನೆಗೆ ಬಂದರೆ ಒಳ್ಳೆಯದೇ ಎಂಬುದನ್ನು ವಾದಿಸುವುದು ಕಷ್ಟ ಅಂದರೆ ಇಷ್ಟು ಸ್ಪಷ್ಟ: ಬದುಕೆಂದರೆ ಒಂದೇ ಮಟ್ಟದಲ್ಲಿ ಏರುತಗ್ಗುಗಳಿಲ್ಲದೆ ಸಾಗುವುದಲ್ಲ; ಸಾಗುವುದಿಲ್ಲ. ಅಲ್ಲಿ ಅಳು-ನಗು, ಸರಿ-ತಪ್ಪು, ಹಿಗ್ಗು-ನೋವು, ಸಂತಸ-ಸಂಕಟ ಇವೆಲ್ಲ ಸಾಗರದ ಅಲೆಗಳಂತೆ ಬಂದು ಹೋಗುತ್ತವೆ. ಯಾವುದು ಮೊದಲು, ಯಾವುದು ಆನಂತರ ಎಂಬ ಪರಿವೆ ಈ ಬಂದುಹೋಗುವ ಅಲೆಗಳಿಗಿಲ್ಲ. ಇವುಗಳಡಿಯಲ್ಲಿ ಬದುಕುವ ದೃಢನಿರ್ಧಾರ ಮಾಡಿದವರಿಗೆ ಇವು ವಿಸ್ತಾರ ಸಾಗರದ ಮುಖ ಅಷ್ಟೇ. ಇವನ್ನು ದಾಟಿ ಹೋಗಬಲ್ಲೆನೆನ್ನುವವರಿಗೆ ಇವು ಸವಾಲುಗಳು. ಅಳಿದವರೂ ಉಳಿದವರೂ ಕೃತಕೃತ್ಯರು. ಏಕೆಂದರೆ ವಿಶಾಲ ಬದುಕಿನಲ್ಲಿ ವಿಶೇಷ ಅನುಭವದ ಬೆಳಕನ್ನು ಕಾಣುವವರು ಇವರು.

ಮತವೆಂಬುದು ಮನೆಯೊಳಗಿರಬೇಕಾದ ವಸ್ತು. ಧರ್ಮವೆಂಬುದು ಮನೆಯೊಳಗಿರಬೇಕಾದ ವಸ್ತುವಲ್ಲ. ಅದು ಮನುಷ್ಯ ತನ್ನ ಸವಾಲುಗಳನ್ನು ಧಾರಣೆ ಮಾಡಿ ಸಮಾಜಕ್ಕೆ ದಾರಿ ಹೇಳುವ ಕ್ರಮ. ಹೀಗೆ ಬದುಕಲಿ; ಇದು ಒಳ್ಳೆಯದು. ಮನುಷ್ಯನಲ್ಲಿ ಎಷ್ಟು ಅಧಿಕಾರವಿದೆ, ಎಷ್ಟು ಸಂಪತ್ತಿದೆ, ಎಷ್ಟು ಆಯುಷ್ಯವಿದೆ ಎಂಬುದರಲ್ಲಿ ಅವನ ನಾಯಕತ್ವವು, ಧಾರ್ಮಿಕ ಶ್ರೇಷ್ಠತೆಯು ಪ್ರತಿಷ್ಠಾಪನೆಗೊಳ್ಳುವುದಿಲ್ಲ. ಬದಲಾಗಿ ಅವನು ತನ್ನ ಬದುಕಿನಿಂದ ಸಮಾಜಕ್ಕೆ ಎಷ್ಟು ಮಾರ್ಗದರ್ಶನ ಮಾಡಬಲ್ಲ, ಮತ್ತು ಅವನ ಮಾರ್ಗದರ್ಶನದಿಂದ ಸಮಾಜಕ್ಕೆ ಎಷ್ಟು ಒಳಿತಾಯಿತು ಎಂಬುದರಲ್ಲಿ ಅವನ ಮಾತ್ರವಲ್ಲ, ಅವನು ನಿರೂಪಿಸಿದ ಧರ್ಮದ ಮೇಲ್ಮೆಯು ನಿರೂಪಿತವಾಗುತ್ತದೆ.

ಯೇಸುವು ಶಿಲುಬೆೆಗೇರಿದನಾದರೂ ಅವನೇ ಭವಿಷ್ಯದ ಮಹಾನ್ ಚೇತನವಾದನೇ ಹೊರತು ಅವನನ್ನು ಶಿಲುಬೆೆಗೇರಿಸಿದವರಲ್ಲ. ಸಿದ್ಧಾರ್ಥನು ರಾಜಕುಮಾರನಾಗಿ ಮುಂದುವರಿದು ರಾಜನಾಗಿ ಬದುಕಿದ್ದರೂ ಪ್ರಾಯಃ ಅಶೋಕನಂತೆ ಒಬ್ಬ ಸಾಮ್ರಾಟನಾಗಿರುತ್ತಿದ್ದನೇ ಹೊರತು ಬುದ್ಧನಾಗುತ್ತಿರಲಿಲ್ಲ. ಅಶೋಕನನ್ನು ನಾವು ಕನಿಕರದಿಂದೆಂಬಂತೆ ಉಳಿಸಿಕೊಂಡಿದ್ದೇವೆಯೇ ಹೊರತು ಇತಿಹಾಸದಲ್ಲಿ ಅಂತಹ ನೂರಾರು ರಾಜರು ಬಂದು ಹೋಗಿದ್ದಾರೆ. ಸಾಲು ಮರಗಳನ್ನು ನೆಡಿಸುವುದು, ಸಾಮ್ರಾಜ್ಯಕ್ಕೆ ಸುಭಿಕ್ಷೆಯನ್ನು ತರುವುದು, ವೈರಿಗಳೆಂದು ಭಾವಿಸಿದವರನ್ನು ಬಗ್ಗು ಬಡಿಯುವುದು ಆ ಕಾಲದ ಎಲ್ಲ ಮತಗಳ ಎಲ್ಲ ರಾಜರು ಮಾಡಿದ್ದೇ. ಅಶೋಕನು ಕಳಿಂಗದ ಮೇಲೆ ದಂಡೆತ್ತಿ ಸುಮಾರು ಮೂರು ಲಕ್ಷಕ್ಕೂ ಮಿಕ್ಕಿ ಪ್ರಾಣಹಾನಿಗೆ ಕಾರಣನಾದನೆಂದು ಇತಿಹಾಸ ಹೇಳುತ್ತದೆ.

ಅವನನ್ನು ಕ್ಷಮಿಸಬೇಕು ಯಾಕೆ? ಅಥವಾ ಇಂದು ಶಶಿ ತರೂರ್‌ರಂಥವರು ಬ್ರಿಟನ್ ಭಾರತಕ್ಕೆ ಎಸಗಿದ ಅಪಮಾನಕ್ಕೆ ಕ್ಷಮೆಯಾಚಿಸಬೇಕು ಎನ್ನುವುದು, ಅಯೋಧ್ಯೆಯಲ್ಲಿ ಮಸೀದಿ ನಿರ್ಮಿಸಿದ್ದಕ್ಕಾಗಿ ಬಾಬರನ ಪರವಾಗಿ ಕ್ಷಮೆ ಕೇಳಬೇಕೆನ್ನುವುದು, ಇತಿಹಾಸವನ್ನು ತಿದ್ದಲು ಹೊರಟ ಧರ್ಮಗಳು. ಇವುಗಳ ಸಂಗತವನ್ನು ಎಲ್ಲ ನಾಯಕರು ಕೇಳಿಕೊಂಡು ಮುಂದೆ ತಮ್ಮ ಕುರಿತು ಯಾರು ಪ್ರಶ್ನೆ ಹಾಕಬೇಕೆಂಬ ಬಗ್ಗೆಯೂ ಪ್ರಶ್ನೆಯನ್ನು ಹಾಕಿಕೊಳ್ಳಬೇಕು. ಹೀಗಾಗಿ ಧರ್ಮವೆಂಬುದು ಒಂದು ಜೀವನದ ಫಲಶ್ರುತಿಯೇ ಹೊರತು ಆರೋಪಿತವಾದದ್ದಲ್ಲ. ಯಾವುದೇ ಕಾಲದಲ್ಲಿ ಆಳುವವನು(ರು) ಅಥವಾ ಕಾಲಗತಿಯನ್ನು ನಿಯಂತ್ರಿಸಬಲ್ಲ ಶಕ್ತಿಯನ್ನು ಹೊಂದಿದವನು(ರು) ತಾವು ಮಾಡುವ ಯಾವುದೇ ಕಾರ್ಯ ಶಾಶ್ವತವಾಗಿ ಸಮಾಜಕ್ಕೆ ಹಿತ ತರಬೇಕೆಂದು ಬಯಸಬೇಕು.

ವಿಶ್ವವಿಜೇತರೆನಿಸಿಕೊಂಡ ಚೆಂಗೀಸ್ ಖಾನ್ ಆಗಲಿ, ಅಲೆಗ್ಸಾಂಡರ್ ಆಗಲಿ ಆಳಿ ಅಳಿದ ಯಾವನೇ ಒಬ್ಬ ಊರ ಗೌಡನಿಂದ ಹಿಡಿದು ಪಾಳೆಯಗಾರ, ನವಾಬ, ಸಾಮ್ರಾಟನಾಗಲಿ ಅಥವಾ ಈ ವರೆಗಿನ ಯಾವುದೇ ವ್ಯಕ್ತಿ, ಮತ, ಪಂಗಡವಾದರೂ ಶಾಶ್ವತವಾದ ಶಾಂತಿ, ಸಮಾಧಾನ ಸುಖ, ಸಮೃದ್ಧಿಯನ್ನು ತಂದಿದೆಯೆಂಬುದಕ್ಕೆ ಪುರಾವೆಗಳಿಲ್ಲ. ಬದಲಾಗಿ ಇಂದಿಗೂ ನಮ್ಮ ಸಮಾಜವನ್ನಾವರಿಸಿದ ಗೊಂದಲಗಳು, ಕೇಡುಗಳು, ಕಾಮ-ಕ್ರೋಧ-ಲೋಭ-ಮೋಹ-ಮದ-ಮತ್ಸರಗಳು ಮನುಷ್ಯ ಸಹಜವಾಗಬಾರದಿದ್ದರೂ ಮನುಷ್ಯಸಹಜವೆಂಬ ಸ್ವಘೋಷಿತ ಅಭಿದಾನವನ್ನು ಪಡೆದಿವೆ. ಇದು ನಮಗೆ ನಾವೇ ಹೇಳಿಕೊಂಡ ಸುಳ್ಳು ಮತ್ತು ಸಮಾಧಾನ.

ಇನ್ನೊಂದು ವ್ಯಕ್ತಿಗೆ ಮತ್ತು ಇನ್ನಷ್ಟು ಪಾರಮಾರ್ಥಿಕವಾಗಿ ಯೋಚಿಸಿದರೆ ಇನ್ನೊಂದು ಜೀವಕ್ಕೆ ಹಿಂಸೆ ನೀಡುವುದು, ಯಾವುದೇ ರೀತಿಯಲ್ಲಿ ಅನ್ಯಾಯ ಮಾಡುವುದು, ಧರ್ಮವೆಂದು ಹೇಗೆ ಅನ್ನಿಸಿಕೊಳ್ಳುತ್ತದೆ? ಹಿಂಸೆಯನ್ನು ಪೂರ್ಣವಾಗಿ ಖಂಡಿಸಿದ ಧರ್ಮಗಳೇ ಇಲ್ಲ. ಅಹಿಂಸೆಗೆ ತೀರ ಹತ್ತಿರ ಬಂದವರೆಂದರೆ ಬುದ್ಧ, ಮಹಾವೀರ, ಬಸವಣ್ಣಾದಿ ಶರಣರು ಮತ್ತು ಗಾಂಧಿ. ಇವರಲ್ಲೂ ತಮ್ಮ ದೃಢತೆಯಿಂದ, ಹಠದಿಂದ, ಮನೋ ನಿಶ್ಚಲತೆಯಿಂದ ಇತರರಿಗೆ ಹಿಂಸೆ ನೀಡಿದವರಿದ್ದಾರೆ.

ಲೋಕಕಲ್ಯಾಣಕ್ಕಾಗಿ ಅಥವಾ ತನ್ನ ಧರ್ಮರಕ್ಷಣೆಗಾಗಿ ಸತಿಸುತರನ್ನು ತ್ಯಜಿಸುವುದು ಅಥವಾ ಅವರು ಮಾನಸಿಕವಾಗಿ, ದೈಹಿಕವಾಗಿ ನೊಂದುಕೊಳ್ಳುವಂತೆ ಮಾಡುವುದು ಧರ್ಮದ ಗುಹ್ಯಾತಿಗುಹ್ಯ ವ್ಯಾಖ್ಯಾನಕ್ಕೆ ಪಂಥಾಹ್ವಾನ ಹಾಕುವ ಸಮಸ್ಯೆಗಳು. ಮಹಾಭಾರತದ ಶ್ರೀಕೃಷ್ಣನು ಕುರುಕ್ಷೇತ್ರದ ರಣಾಂಗಣದಲ್ಲಿ ಗೀತೋಪದೇಶ ವನ್ನು ಮಾಡಿದನೆಂಬ ಪ್ರಕರಣ/ಪ್ರಹಸನವನ್ನು ಗಮನಿಸಿದರೂ ಅದನ್ನು ಕೇಳಿದ ಅನಂತರ ಯುದ್ಧ ನಿಲ್ಲಲಿಲ್ಲವೆಂಬುದು ಒಂದು ದುರಂತ. ಧರ್ಮ ಸಂಸ್ಥಾಪನೆಯೂ ಆಗಲಿಲ್ಲ; ಭಗವಂತನೆಂದು ಜನರು ನಂಬುವ ವ್ಯಕ್ತಿ ಪಾದರಕ್ಷೆ ಸವೆಸಿದ್ದೇ ಬಂತು.

ಧರ್ಮದ ಹೆಸರಿನಲ್ಲಿ ಅದರ ನೆರಳಾಗಿಯೋ ಅದರ ಸಾರಥಿಯಾಗಿಯೋ ಅದರ ಸಾಹೇಬನಾಗಿಯೊ ನಡೆದು ಬಂದವರು ಹೋದವರೆಲ್ಲ ಇತರರ, ಹೋಗಲಿ, ತಮ್ಮ ಸಂಕಟವನ್ನೂ ಕಳೆಯದಾದರು. ಶ್ರೀರಾಮ ಸರಯೂ ನದಿಯಲ್ಲಿ ಮುಳುಗಿ ಸಮಾಧಿ ಹೊಂದಿದ; ಶ್ರೀಕೃಷ್ಣ ಬೇಡನೊಬ್ಬನ ಬಾಣಕ್ಕೆ ತುತ್ತಾದ; ಯೇಸು ಶಿಲುಬೆಗೇರಿದ; ಬಸವಣ್ಣ ಕೂಡಲ ಸಂಗಮದಲ್ಲಿ ಮುಳುಗಿದ; ಗಾಂಧಿ ತನ್ನದೇ ಮತ(ಧರ್ಮ?)ದ ಹಂತಕನ ಗುಂಡಿಗೆ ಬಲಿಯಾದರು; ಒಟ್ಟಿನಲ್ಲಿ ಗತಿಶೀಲ ಸಮಾಜದ ಒಡಕನ್ನು ರಿಪೇರಿ ಮಾಡಲು, ಸೋರಿಹೋಗುತ್ತಿರುವ ಸಂಸ್ಕೃತಿಪತನವನ್ನು ಉದ್ಧರಿಸಲು ಯತ್ನಿಸಿ ಕೈಸೋತರು ಎಂದೇ ಹೇಳಬೇಕು. ವರ್ತಮಾನದ ಧರ್ಮ ಹೀಗೆಯೇ ಮುಂದುವರಿಯುತ್ತಿದೆ. ಹೀಗೆಯೇ ಮುಂದುವರಿಯಬೇಕು. ಈ ಬೆರಗಿನಲ್ಲೇ ಧರ್ಮದ ವ್ಯಾಖ್ಯಾನ, ಚರ್ಚೆ ನಡೆಯಬೇಕು. ಅದು ಪ್ರಕೃತಿ ಸಹಜ. ತಾತ್ಕಾಲಿಕವೆಂಬುದು ಶಾಶ್ವತವೆಂದು ಹೇಳಿದ್ದು ಇದೇ ಅರ್ಥದಲ್ಲಿರಬಹುದು. ಸ್ಥಾವರಕ್ಕಳಿವುಂಟು; ಧರ್ಮವೆಂಬ ಜಂಗಮಕ್ಕಳಿವಿಲ್ಲ!

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)