varthabharthi

ಪ್ರಚಲಿತ

ಕಗ್ಗತ್ತಲಲ್ಲಿ ಕಂಡ ಬೆಳಕು

ವಾರ್ತಾ ಭಾರತಿ : 22 May, 2017
ಸನತ್ ಕುಮಾರ್ ಬೆಳಗಲಿ

ಭಾರತದಲ್ಲಿ ಫ್ಯಾಶಿಸಂ ಬಹಳ ಭಿನ್ನವಾಗಿ ಮತ್ತು ಭಯಾನಕವಾಗಿ ಬರಲಿದೆ. ಅದು ಇಟಲಿಯ ಮುಸಲೋನಿ ಫ್ಯಾಶಿಸಂನಂತೆ ಇಲ್ಲವೇ ಜರ್ಮನಿಯ ಹಿಟ್ಲರ್ ಫ್ಯಾಶಿಸಂನಂತೆ ಇರುವುದಿಲ್ಲವೆಂದು ಈ ದೇಶದ ಖ್ಯಾತ ಚಿಂತಕ ಆನಂದ ತೇಲ್ತುಂಬ್ಡೆ ಹೇಳಿದರು. ಇತ್ತೀಚೆಗೆ ಧಾರವಾಡದಲ್ಲಿ ನಡೆದ ಮೇ ಸಾಹಿತ್ಯ ಸಮ್ಮೇಳನದಲ್ಲಿ ಫ್ಯಾಶಿಸಂ ಕುರಿತು ಮಾತನಾಡಲು ಬಂದಿದ್ದ ತೇಲ್ತುಂಬ್ಡೆ ಬದಲಾದ ಸನ್ನಿವೇಶದಲ್ಲಿ ಕೋಮುವಾದ ತಾಳುತ್ತಿರುವ ಭೀಕರ ಅವತಾರವನ್ನು ಅತ್ಯಂತ ಆತಂಕದಿಂದ ವಿವರಿಸಿದರು.


ಕಳೆದ ಮೂರು ವರ್ಷಗಳು ಮತ್ತು ಇನ್ನೂ ಕಳೆಯಬೇಕಾದ ಎರಡು ವರ್ಷಗಳ ಬಗ್ಗೆ ನೆನಪು ಮಾಡಿಕೊಂಡರೆ ಎದೆ ನಡುಗುತ್ತದೆ. ಗಾಂಧಿ, ನೆಹರೂ, ಅಂಬೇಡ್ಕರ್, ಸುಭಾಶ್ ಕಟ್ಟಿದ ಭಾರತ ಎಂಥವರ ಕೈಗೆ ಹೋಯಿತಲ್ಲ ಎಂದು ಆತಂಕ ಉಂಟಾಗುತ್ತದೆ. ಹಿಂದಿನ 70 ವರ್ಷಗಳಿಂದ ಕಾಪಾಡಿಕೊಂಡು ಬಂದ ದೇಶದ ಬಹುಸಂಸ್ಕೃತಿ ಈಗ ವಿನಾಶದ ಅಂಚಿಗೆ ಬಂದು ನಿಂತಿದೆ. ಒಂದು ಕಡೆ ಕಾರ್ಪೊರೇಟ್ ಬಂಡವಾಳಶಾಹಿ ಲಂಗುಲಗಾಮಿಲ್ಲದೆ ಲೂಟಿಗೆ ನಿಂತಿದೆ. ಇನ್ನೊಂದೆಡೆ ಸಾಮಾಜಿಕ ಜೀವನದಲ್ಲಿ ಜನಾಂಗ ದ್ವೇಷದ ಲಾವಾರಸ ಕುದಿಯುತ್ತಿದೆ.

2002ರಲ್ಲಿ ಗುಜರಾತ್ ಹತ್ಯಾಕಾಂಡ ನಡೆದಾಗ, ಅಲ್ಲಿನ ಬಡಪಾಯಿ ದರ್ಜಿ ಖುತುಬುದ್ದೀನ್ ಅನ್ಸಾರಿ ಪ್ರಾಣಭಿಕ್ಷೆಗಾಗಿ ಉದ್ರಿಕ್ತ ಜನಜಂಗುಳಿ ಎದುರು ಕೈ ಮುಗಿದುಕೊಂಡು ನಿಂತ ದೃಶ್ಯ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಆ ನರಮೇಧದ ಘಟನೆಗಳು ಮತ್ತೆ ಮರಳಿ ಕಳುಸುತ್ತಿವೆ. ಉತ್ತರಾಖಂಡದ ಜಮಶೆಡ್‌ಪುರ ಬಳಿ ಪ್ರಾಣಭಿಕ್ಷೆಗಾಗಿ ಉದ್ರಿಕ್ತ ಜನಜಂಗುಳಿ ಎದುರು ಮುಹಮ್ಮದ್ ನಯೀಮ್ ಎಂಬ ಬಡಪಾಯಿ ಕೈ ಮುಗಿದು ನಿಂತಿದ್ದ. ಗುಜರಾತ್‌ನಲ್ಲಿ ಅನ್ಸಾರಿ ಜೀವ ಉಳಿಸಿಕೊಂಡಂತೆ, ಈ ನಯೀಮ್ ಜೀವ ಉಳಿಸಿಕೊಳ್ಳಲು ಆಗಲಿಲ್ಲ. ಉದ್ರಿಕ್ತ ಜನಜಂಗುಳಿ ಆತನನ್ನು ಕೊಚ್ಚಿ ಕತ್ತರಿಸಿ ಹಾಕಿತು. ಇದು ಭಾರತೀಯ ಸಮಾಜದಲ್ಲಿ ಕೋಮುವಾದ ಫ್ಯಾಶಿಸ್ಟ್ ರೂಪ ತಾಳಿದ್ದಕ್ಕೆ ಒಂದು ಉದಾಹರಣೆ.

ಭಾರತದಲ್ಲಿ ಫ್ಯಾಶಿಸಂ ಬಹಳ ಭಿನ್ನವಾಗಿ ಮತ್ತು ಭಯಾನಕವಾಗಿ ಬರಲಿದೆ. ಅದು ಇಟಲಿಯ ಮುಸಲೋನಿ ಫ್ಯಾಶಿಸಂನಂತೆ ಇಲ್ಲವೇ ಜರ್ಮನಿಯ ಹಿಟ್ಲರ್ ಫ್ಯಾಶಿಸಂನಂತೆ ಇರುವುದಿಲ್ಲವೆಂದು ಈ ದೇಶದ ಖ್ಯಾತ ಚಿಂತಕ ಆನಂದ ತೇಲ್‌ತುಂಬ್ಡೆ ಹೇಳಿದರು. ಇತ್ತೀಚೆಗೆ ಧಾರವಾಡದಲ್ಲಿ ನಡೆದ ಮೇ ಸಾಹಿತ್ಯ ಸಮ್ಮೇಳನದಲ್ಲಿ ಫ್ಯಾಶಿಸಂ ಕುರಿತು ಮಾತನಾಡಲು ಬಂದಿದ್ದ ತೇಲ್‌ತುಂಬ್ಡೆ ಬದಲಾದ ಸನ್ನಿವೇಶದಲ್ಲಿ ಕೋಮುವಾದ ತಾಳುತ್ತಿರುವ ಭೀಕರ ಅವತಾರವನ್ನು ಅತ್ಯಂತ ಆತಂಕದಿಂದ ವಿವರಿಸಿದರು. ಅದೇ ಗೋಷ್ಠಿಯಲ್ಲಿ ಮಾತನಾಡಿದ ನಾಡಿನ ಇನ್ನೊಬ್ಬ ಚಿಂತಕ ಶಿವಸುಂದರ್, ಇನ್ನು 10 ವರ್ಷಗಳಲ್ಲಿ ಭಾರತದಲ್ಲಿ ಫ್ಯಾಶಿಸಂನ ಕರಾಳ ದಿನಗಳು ಜನತಂತ್ರ ನಾಶ ಮಾಡಲಿವೆ ಎಂದು ಕಳವಳ ವ್ಯಕ್ತಪಡಿಸಿದರು. ಮೇ ಸಾಹಿತ್ಯ ಸಮ್ಮೇಳನ ಈ ಬಾರಿ ಫ್ಯಾಶಿಸಂನ ಸಮಕಾಲೀನ ಚಹರೆಗಳ ಬಗ್ಗೆ ಎರಡು ದಿನಗಳ ಕಾಲ ಗಂಭೀರವಾಗಿ ಚರ್ಚಿಸಿತು.

ನರೇಂದ್ರ ಮೋದಿ ಸರಕಾರದ ಬಗ್ಗೆ ಹೇಳಲು ಬೇಕಾದಷ್ಟು ಇದೆ. ದಿನ ಬೆಳಗೆದ್ದರೆ ಕೆಟ್ಟ ಸುದ್ದಿಗಳನ್ನೇ ಕೇಳುತ್ತಿದ್ದೇವೆ. ಪ್ರತಿರೋಧದ ಧ್ವನಿಗಳು ಕ್ಷೀಣಿಸುತ್ತಿವೆ. ಅನಾಗರಿಕತೆಗೆ ಪ್ರತಿರೋಧ ಒಡ್ಡಬೇಕಾದ ಯುವಕರೇ ಕೊಲೆಗಡುಕ ಪರಿವಾರದ ಕಾಲಾಳುಗಳಾಗಿದ್ದಾರೆ. ದುಡಿಯುವ ಜನರ ಏಕತೆಯನ್ನು ಮುರಿಯುವ ಈ ಕೋಮುವಾದವನ್ನು ವಿರೋಧಿಸಬೇಕಾದ ಕಾರ್ಮಿಕ ವರ್ಗ ತನ್ನದೇ ಲೋಕದಲ್ಲಿದೆ. ತಮ್ಮ ಆರ್ಥಿಕ ಬೇಡಿಕೆಗಳಾಚೆ ಮಹತ್ತರ ಹೋರಾಟ ಮುನ್ನಡೆಸುವಲ್ಲಿ ಕಾರ್ಮಿಕ ವರ್ಗದ ನಾಯಕರು ವಿಫಲಗೊಂಡಿದ್ದಾರೆ.

ಗೋ ರಕ್ಷಕರು ಎಂಬ ಬೀದಿ ಗೂಂಡಾಗಳ ಪುಂಡಾಟಿಕೆ ಮಿತಿ ಮೀರಿದೆ. ಕಾಶ್ಮೀರದ ಗಾಯ ಉಲ್ಬಣಗೊಂಡಿದೆ. ಮಹಿಳೆಯರ ಆಕ್ರಂದನ ಅರಣ್ಯರೋದನ ಆಗುತ್ತಿದೆ. ಛತ್ತೀಸ್‌ಗಡದ ಆದಿವಾಸಿಗಳ ಮೇಲೆ ನಿತ್ಯವೂ ಅತ್ಯಾಚಾರ ನಡೆಯುತ್ತಿದೆ. ಎರಡು ಲಕ್ಷ ಉದ್ಯೋಗ ಸೃಷ್ಟಿಸುವುದಾಗಿ ಹೇಳಿ ಅಧಿಕಾರಕ್ಕೆ ಬಂದ ‘ಪ್ರಧಾನ ಸೇವಕ’ ಅಂಬಾನಿ, ಅದಾನಿಯವರ ಸೇವೆಯಲ್ಲಿ ನಿರತರಾಗಿದ್ದಾರೆ. ಬಹಿರಂಗವಾಗಿ ಪಾಕಿಸ್ತಾನದ ವಿರುದ್ಧ ಮಾತನಾಡುತ್ತ ಗುಟ್ಟಾಗಿ ಅದಾನಿಯನ್ನು ಕರಾಚಿಗೆ ಕರೆದುಕೊಂಡು ಹೋಗಿ ನವಾಝ್ ಷರೀಫ್ ಕಂಪೆನಿಯ ಜೊತೆಗೆ ಒಪ್ಪಂದ ಮಾಡಿಕೊಳ್ಳಲು ದಲ್ಲಾಳಿತನ ವಹಿಸುವುದನ್ನು ನೋಡುತ್ತಿದ್ದೇವೆ. ಇಂತಹ ನಡೆಯಬಾರದಂತಹ ಘಟನೆಗಳು ನಡೆಯುತ್ತಿದ್ದರೂ ಪ್ರತಿರೋಧ ಕಂಡು ಬರದಂತಹ ಇಂದಿನ ಸನ್ನಿವೇಶದಲ್ಲಿ ಬಸವರಾಜ ಸೂಳಿಬಾವಿ ಮತ್ತು ಡಾ. ಎಚ್.ಎಸ್.ಅನುಪಮಾ ಅವರು ಧಾರವಾಡದಲ್ಲಿ ನಡೆಸಿದ ಮೇ ಸಾಹಿತ್ಯ ಸಮ್ಮೇಳನ ಹೊಸ ಭರವಸೆ ಮೂಡಿಸಿತು.

ಪ್ರಭುತ್ವಕ್ಕೆ ಪ್ರತಿರೋಧ ಒಡ್ಡಬೇಕಿದ್ದ ಎಡಪಂಥೀಯರು, ಪ್ರಗತಿಪರರು, ಸಮಾನ ಮನಸ್ಕರು ಪ್ರತ್ಯೇಕವಾಗಿ ನಿಂತಿರುವಾಗ, ಮೇ ಸಾಹಿತ್ಯ ಸಮ್ಮೇಳನ ಎಲ್ಲರನ್ನೂ ಒಂದೇ ವೇದಿಕೆಗೆ ತಂದಿತು. ನಾವೆಲ್ಲ ಒಂದೇ ವೇದಿಕೆಗೆ ಬರಬೇಕೆಂದು ಎಷ್ಟೇ ಪ್ರಯತ್ನಿಸಿದರೂ ಆಗುವುದಿಲ್ಲ. ಆದರೆ ಸೂಳಿಬಾವಿ ಅವರು ನಮ್ಮೆಲ್ಲರನ್ನೂ ಒಂದೇ ಕಡೆ ಸೇರಿಸಿದ್ದಾರೆ ಎಂದು ಸಿಪಿಐ ನಾಯಕ ಡಾ. ಸಿದ್ದನಗೌಡ ಪಾಟೀಲ ಹೇಳಿದರು. ಸಮ್ಮೇಳನಕ್ಕಾಗಿ ಯಾವುದೇ ಕಾರ್ಪೊರೇಟ್ ಕಂಪೆನಿಯಿಂದ ಹಣ ಪಡೆಯದೇ ಸಮಾನ ಮನಸ್ಕ ಸ್ನೇಹಿತರು ತಮ್ಮ ಆದಾಯದಲ್ಲೇ ಒಂದಿಷ್ಟು ಕೂಡಿಸಿ ನಡೆಸಿದ ಸಮ್ಮೇಳನವಿದು. ಈ ಅಂಶವನ್ನು ಸಮ್ಮೇಳನ ಉದ್ಘಾಟಿಸಿದ ಸಾಹಿತಿ ಅರವಿಂದ ಮಾಲಗತ್ತಿ ತುಂಬಾ ಶ್ಲಾಘಿಸಿದರು.

ಧಾರವಾಡದ ಆಲೂರು ವೆಂಕಟರಾವ್ ಭವನದಲ್ಲಿ ಮೇ 6 ಮತ್ತು 7ರಂದು ನಡೆದ ಮೇ ಸಾಹಿತ್ಯ ಸಮ್ಮೇಳನ ಉಳಿದ ಸಮ್ಮೇಳನದಂತಲ್ಲ. ಈ ಸಮ್ಮೇಳನದಲ್ಲಿ ಪಾಲ್ಗೊಂಡ ನನಗೆ ನಾಲ್ಕು ದಶಕಗಳ ಹಿಂದಿನ ಸ್ನೇಹಿತರು ಭೇಟಿಯಾದರು. 70ರ ದಶಕದಲ್ಲಿ ಜೊತೆಗೂಡಿ ಚಳವಳಿಗೆ ಧುಮುಕ್ಕಿದ್ದ ಕೆಲ ಗೆಳೆಯರು ಸಾಂಸಾರಿಕ ಜೀವನದಲ್ಲಿ ಎಲ್ಲೆಲ್ಲೋ ತಪ್ಪಿಸಿಕೊಂಡಿದ್ದರು. ನಾವೆಲ್ಲ ಪರಸ್ಪರ ಭೇಟಿಯಾಗುವ ವೇದಿಕೆಯೂ ಇರಲಿಲ್ಲ. ಹೀಗೆ ಮರೆತು ಹೋದವರೆಲ್ಲ ಕಣ್ಣೆದುರು ಬಂದು ನಿಂತಾಗ, ಸಹಜವಾಗಿ ಸಂತೋಷ ಉಕ್ಕೇರುತ್ತದೆ. 80ರ ದಶಕದಲ್ಲಿ ಒಟ್ಟಾಗಿ ಹೋರಾಟದಲ್ಲಿ ಪಾಲ್ಗೊಂಡಿದ್ದ ಅಶೋಕ ಶೆಟ್ಟರ್, ಯಡೂರು ಮಹಾಬಲ, ರಂಝಾನ್ ದರ್ಗಾ, ಕೊಪ್ಪಳದ ಅಲ್ಲಮಪ್ರಭು ಬೆಟದೂರ, ವಿಠ್ಠಪ್ಪ ಗೋರಂಟ್ಲಿ, ಗಂಗಾವತಿಯ ಭಾರದ್ವಾಜ್, ಕಲಬುರಗಿಯ ನೀಲಾ ಹೀಗೆ ಅನೇಕರು ಸಿಕ್ಕಿದರು.

ಇದೆಲ್ಲಕ್ಕಿಂತ ಹೆಚ್ಚಾಗಿ ನಾನು ಜನಿಸಿದ ಅವಿಭಜಿತ ಬಿಜಾಪುರ ಜಿಲ್ಲೆ ಬಿಟ್ಟರೆ ತುಂಬಾ ಇಷ್ಟಪಡುವ ಮಲೆನಾಡಿನ ಸೆರಗಿನಲ್ಲಿರುವ ಹುಬ್ಬಳ್ಳಿ-ಧಾರವಾಡಗಳಲ್ಲಿ ಈ ಸಮ್ಮೇಳನ ನಡೆದದ್ದು ಇನ್ನಷ್ಟು ಚೇತೋಹಾರಿಯಾಗಿತ್ತು. ಈ ಅವಳಿ ನಗರಕ್ಕೆ ಹೋಗುವ ಯಾವ ಅವಕಾಶವನ್ನು ನಾನು ಕಳೆದುಕೊಳ್ಳುವುದಿಲ್ಲ. 70ರ ದಶಕದಲ್ಲಿ ಸಂಯುಕ್ತ ಕರ್ನಾಟಕದಲ್ಲಿ ಸೇರಿ ಹುಬ್ಬಳ್ಳಿಗೆ ಬಂದಾಗ, ಧಾರವಾಡದಲ್ಲಿ ಬೇಂದ್ರೆ, ಶಂ.ಭಾ.ಜೋಶಿ, ಬಸವರಾಜ ಕಟ್ಟಿಮನಿ ಇದ್ದರು. ಆಗ ಚಂಪಾ ಅವರು ನಡೆಸುತ್ತಿದ್ದ ಚಳವಳಿಗಳಲ್ಲಿ ಪಾಲ್ಗೊಳ್ಳುತ್ತಿದ್ದೆ. ಇಂತಹ ಧಾರವಾಡದಲ್ಲಿ ಕೆಲ ತಿಂಗಳ ಹಿಂದೆ ಸಾಹಿತ್ಯ ಸಂಭ್ರಮ ಎಂಬ ಜಾತ್ರೆ ನಡೆದಿತ್ತು.

ಎಡವೂ ಬೇಡ, ಬಲವೂ ಬೇಡ ಎಂಬ ಮಧ್ಯಮ ಮಾರ್ಗದ ಸೋಗು ಹಾಕಿದವರು ಆರೆಸ್ಸೆಸ್ ಪ್ರಚಾರಕ ಮಂಜುನಾಥ್ ಅಜ್ಜಂಪುರ, ಜಿ.ಬಿ.ಹರೀಶ್ ಮುಂತಾದವರನ್ನು ವೇದಿಕೆ ಮೇಲೆ ಕೂರಿಸಿ ಕಲಬುರ್ಗಿ ಹತ್ಯೆಗೆ ಕೌಟಂಬಿಕ ಜಗಳ ಕಾರಣ ಎಂದು ಅವರ ಕಡೆಯಿಂದ ಹೇಳಿಸಿದ್ದರು. ಇಂತಹ ಧಾರವಾಡದಲ್ಲಿ ಬಸು ಅವರು ನಡೆಸಿದ ಮೇ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿದ ಖ್ಯಾತ ಲೇಖಕಿ ಗೀತಾ ಹರಿಹರನ್ ರಾಷ್ಟ್ರೀಯತೆ ವ್ಯಾಕರಣವನ್ನು ರಾಜಕಾರಣ ಬದಲಿಸಿದೆ ಎಂದು ಹೇಳಿದರು. ಈ ಹಿಂದೆ ಸ್ವಾತಂತ್ರ್ಯದ ಪ್ರತೀಕವಾಗಿದ್ದ ರಾಷ್ಟ್ರೀಯತೆ ಈಗ ಹಿಂದುತ್ವದ ಪ್ರತೀಕವಾಗಿದೆ ಎಂದು ಹೇಳಿದರು. ತಮಿಳು ಭಾಷೆಯ ಗೀತಾ ಹರಿಹರನ್ ಕನ್ನಡ ಮನೆತನದ ಸೊಸೆಯಾಗಿ ಅತ್ಯಂತ ಸ್ಪಷ್ಟವಾಗಿ ಕನ್ನಡದಲ್ಲಿ ಮಾತನಾಡಿದರು.

ಈ ಸಮ್ಮೇಳನದಲ್ಲಿ ಪಾಲ್ಗೊಳ್ಳಲೆಂದೇ ದಿಲ್ಲಿಯಿಂದ ಬಂದಿದ್ದ ಜೆಎನ್‌ಯು ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಎಸ್‌ಎಫ್‌ಐನ ಪಿ.ಪಿ.ಅಮಲ್ ಅವರು, ಉನ್ನತ ಶಿಕ್ಷಣವನ್ನು ಕೋಮುವಾದೀಕರಣಗೊಳಿಸಲು ಮೋದಿ ಸರಕಾರ ನಡೆಸಿರುವ ಹುನ್ನಾರವನ್ನು ವಿವರವಾಗಿ ವಿಶ್ಲೇಷಿಸಿದರು. ಉಳಿದಂತೆ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಎಸ್.ಆರ್.ಹಿರೇಮಠ, ದಿನೇಶ ಅಮೀನ್ ಮಟ್ಟು, ರಂಜಾನ್ ದರ್ಗಾ, ಡಾ. ಡಿ.ಡೊಮಿನಿಕ್, ರಾಜೇಂದ್ರ ಚೆನ್ನಿ, ಮುಝಫ್ಫರ್ ಅಸ್ಸಾದಿ, ಕೆ.ಪಿ.ಸುರೇಶ್, ಪ್ರೊ. ಕೇಶವ ಶರ್ಮಾ, ಡಾ. ಲಕ್ಷ್ಮಿನಾರಾಯಣ, ಡಾ. ಸುಶಿ ಕಾಡನಕುಪ್ಪೆ, ಜಿ.ಎನ್.ದೇವಿ, ವಿ.ಎಸ್.ಶ್ರೀಧರ್, ಕಿರಣ್ ಗಾಜನೂರು, ಹುಲಿಕುಂಟೆ ಮೂರ್ತಿ, ಬಿ.ಎಲ್.ರಾಜು, ಬಸವರಾಜ ಹುಗಾರ್, ಗಂಗಾಧರಮೂರ್ತಿ, ಎಸ್.ವೈ.ಗುರುಶಾಂತ,ಮಲ್ಲಿಕಾರ್ಜುನ ಮೇಟಿ, ಜ್ಯೋತಿ ಅನಂತ ಸುಬ್ಬರಾವ್, ಗೌರಿ, ಮುತ್ತುರಾಜ, ದೊಡ್ಡಿಪಾಳ್ಯ ನರಸಿಂಹಮೂರ್ತಿ, ಮಂಜುನಾಥ ಅದ್ದೆ, ಶೃಂಗೇಶ, ಮಲ್ಲಿಕಾರ್ಜುನ ಸಿದ್ದನವರ, ಸುಜ್ಞಾನ ಮೂರ್ತಿ ಮುಂತಾದವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ದೂರದ ದಿಲ್ಲಿಯಿಂದ ಬಂದಿದ್ದ ರೇಣುಕಾ ನಿಡಗುಂದಿಯವರು ಉತ್ತಮ ಪದ್ಯ ಓದಿದರು. ಅಷ್ಟೇ ಅಲ್ಲ, ತವರು ಮನೆಯ ನೆನಪಿನ ಬುತ್ತಿ ಕಟ್ಟಿಕೊಂಡು ಭಾರವಾದ ಮನಸ್ಸಿನೊಂದಿಗೆ ದಿಲ್ಲಿಗೆ ವಾಪಸಾದರು. ಹೀಗೆ ಕನ್ನಡದ ಸಾರಸ್ವತ ಲೋಕದ ಆತ್ಮೀಯರೊಂದಿಗೆ ಕಳೆದ ಎರಡು ದಿನಗಳು ಚೇತೋಹಾರಿಯಾಗಿದ್ದವು. ಸಮ್ಮೇಳನದಲ್ಲಿ ಬೇಕಾದಷ್ಟು ಜನರು ಮಾತನಾಡಿರಬಹುದು. ಆದರೆ ಪ್ರತಿನಿಧಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಂಡ ಕ್ರಾಂತಿ ಮೆಹಬೂಬ್, ಬಸವರಾಜ ಮ್ಯಾಗೇರಿ, ಹೇಮಂತ ರಾಮಡಗಿ, ಸದಾಶಿವ ಮರ್ಜಿ, ಸಿದ್ರಾಮ ಕಾರ್ಣಿಕ, ಮಹಾಲಿಂಗಪ್ಪ ಆಲ್ಬಾಳ, ನಾಗರಾಜ ಹರಪನಹಳ್ಳಿ ಹೀಗೆ ಅನೇಕ ಗೆಳೆಯರನ್ನು ಮರೆಯಲು ಸಾಧ್ಯವಿಲ್ಲ. ಮೇ ಸಾಹಿತ್ಯ ಸಮ್ಮೇಳನ ಈಗ ಬರೀ ಸಮ್ಮೇಳನವಾಗಿ ಉಳಿದಿಲ್ಲ.

ನವೋದಯ, ನವ್ಯ, ಪ್ರಗತಿಶೀಲ, ಬಂಡಾಯ ಮತ್ತು ದಲಿತ ಸಾಹಿತ್ಯ ಚಳವಳಿಗಳಂತೆ ಒಂದು ಸಾಂಸ್ಕೃತಿಕವಾಗಿ ಆಂದೋಲನವಾಗಿ ಹೊರಹೊಮ್ಮಿದೆ. ಈ ಆಂದೋಲನದಲ್ಲಿ ಪ್ರಗತಿಶೀಲ, ಬಂಡಾಯ, ದಲಿತ ಮತ್ತು ಎಡಪಂಥೀಯ ಸೆಲೆಗಳು ಒಂದುಗೂಡಿವೆ. ಸ್ಪಷ್ಟವಾದ ತಾತ್ವಿಕ ನಿಲುವನ್ನು ಹೊಂದಿರುವ ಮೇ ಸಾಹಿತ್ಯ ಚಳವಳಿ ಸಿದ್ಧಾಂತದ ಜೊತೆಗೆ ಸೃಷ್ಟಿಶೀಲತೆ ಬೆಳೆಸಿಕೊಳ್ಳಬೇಕಿದೆ.

ಮೇ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡಾಗ 70ರ ದಶಕದಲ್ಲಿ ದಾವಣಗೆರೆಯಲ್ಲಿ ನಾವೇ ನಡೆಸಿದ ಪ್ರಗತಿಪಂಥ ಸಾಹಿತ್ಯ ಸಮ್ಮೇಳನ ನೆನಪಾಯಿತು. ಆ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಅಂದಿನ ಸೋವಿಯತ್ ರಶ್ಯದ ಕನ್ನಡ ಬಲ್ಲ ಸಾಹಿತಿ ದೆಷ್ಕೊ ಬಂದಿದ್ದರು. ವಚನ ಸಾಹಿತ್ಯದ ಬಗ್ಗೆ ಅತ್ಯಂತ ಅದ್ಭುತವಾಗಿ ಮಾತನಾಡಿದರು. ಖ್ಯಾತ ಹಿಂದಿ ಸಾಹಿತಿ ಭೀಷ್ಮ ಸಹಾನಿ, ಬಸವರಾಜ ಕಟ್ಟಿಮನಿ, ನಿರಂಜನ ಇಂತಹ ಮಹಾನ್ ಚೇತನಗಳೊಂದಿಗೆ ಆಗ ಎರಡು ದಿನ ಕಳೆದಿದ್ದೆವು. ಆಗಲೂ ದೇಶದ ಪರಿಸ್ಥಿತಿ ಇದೇ ರೀತಿ ಇತ್ತು. ಇಂದಿರಾ ಗಾಂಧಿಯವರು ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದರು. ಆ ತುರ್ತು ಪರಿಸ್ಥಿತಿ ಕಾಲದಲ್ಲೂ ಪ್ರಗತಿಪಂಥ ಸಮ್ಮೇಳನದಲ್ಲಿ ಪ್ರಭುತ್ವವನ್ನು ಟೀಕಿಸಿ ಅನೇಕರು ಪದ್ಯ ಓದಿದರು.

ಈಗ ತುರ್ತು ಪರಿಸ್ಥಿತಿಗಿಂತ ಅತ್ಯಂತ ಕೆಟ್ಟ ಕಾಲ. ಭಾರತದ ಬಹುಸಂಸ್ಕೃತಿಯನ್ನು ನಾಶ ಮಾಡಲು ದಲಿತ, ದಮನಿತ, ಅಲ್ಪಸಂಖ್ಯಾತ ದನಿಗಳನ್ನು ಹತ್ತಿಕ್ಕಲು ಮನುವಾದಿ ಫ್ಯಾಶಿಸಂ ಭಯಾನಕ ರೂಪ ತಾಳಿ ನಿಂತಿದೆ. ತೇಲ್‌ತುಂಬ್ಡೆ ಹೇಳಿದಂತೆ ಇದು ಜರ್ಮನಿ ಮತ್ತು ಇಟಲಿಗಿಂತ ಭಿನ್ನವಾದ ಫ್ಯಾಶಿಸಂ. ಈ ಫ್ಯಾಶಿಸಂ ದಾಪುಗಾಲಿಡುತ್ತ ಬರುತ್ತಿದ್ದಂತೆ ದೇಶದ ತುಂಬೆಲ್ಲ ಕಗ್ಗತ್ತಲು ಆವರಿಸುತ್ತಿದೆ. ಈ ಕಗ್ಗತ್ತಲನ್ನು ಓಡಿಸಲು ಮೇ ಸಾಹಿತ್ಯ ಸಮ್ಮೇಳನಗಳಂತಹ ಸಮ್ಮೇಳನಗಳು ಎಲ್ಲೆಡೆ ನಡೆದು ಬೆಳಕನ್ನು ಚೆಲ್ಲಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)