varthabharthi

ಅನುಗಾಲ

ಇವರನ್ನು ಕ್ಷಮಿಸು ದೇವರೇ!

ವಾರ್ತಾ ಭಾರತಿ : 24 May, 2017
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಸ್ವಘೋಷಿತ ದೇವಮಾನವರು, ಧಾರ್ಮಿಕ ಮುಖಂಡರು ಹೆಚ್ಚಾಗುತ್ತಿದ್ದಾರೆ ಮಾತ್ರವಲ್ಲ ಇನ್ನಷ್ಟು ಅಪಾಯಕಾರಿಯಾಗುತ್ತಿದ್ದಾರೆ. ತಾವು ಆಡುತ್ತಿರುವ ಮಾತುಗಳು, ಮಾಡುತ್ತಿರುವ ಕೃತ್ಯಗಳು ಸಮಾಜವನ್ನು ವಿನಾಶದ ಅಂಚಿಗೆ ತರುತ್ತಿದ್ದಾವೆಂಬ ಒಂದಿಷ್ಟೂ ಅರಿವಿಲ್ಲದ ಈ ಪಾಷಂಡಿ ಮನೋವೃತ್ತಿಗಳು ತಮ್ಮ ವಿದ್ಯೆ, ಬುದ್ಧಿ ಎಲ್ಲವನ್ನೂ ಈ ಒಡೆಯುವ ಆನಂದಕ್ಕಾಗಿ ಸವೆಸುತ್ತಿದ್ದಾರೆ.


ದೇವುಡು ನರಸಿಂಹ ಶಾಸ್ತ್ರಿಗಳು ಸರ್ವಜ್ಞನ ಪದಗಳ ಸಂಪಾದಕರಾದ ರೆವರೆಂಡ್ ಚನ್ನಪ್ಪ ಉತ್ತಂಗಿ ಅವರನ್ನು ಒಮ್ಮೆ ಭೇಟಿಯಾದ ಸಂದರ್ಭದಲ್ಲಿ ‘‘ತಾವು ನಾಳೆ ನಮ್ಮ ಮನೆಗೆ ಊಟಕ್ಕೆ ದಯಮಾಡಿಸಬೇಕು’’ ಎಂದು ಆಹ್ವಾನಿಸಿದರು; ಅವರು ‘‘ಆಗಬಹುದು’’ ಎಂದರು. ಬಳಿಕ ಅವರಿಗೆ ಹೊಳೆಯಿತು, ಉತ್ತಂಗಿಯವರು ಕ್ರೈಸ್ತಪಂಗಡದವರು ಎಂದು. ತಾವು ಸಂಪ್ರದಾಯಸ್ಥ ಬ್ರಾಹ್ಮಣರಾದುದರಿಂದ ಅವರನ್ನು ಸತ್ಕರಿಸುವ ವಿಷಯದಲ್ಲಿ ಮಡಿವಂತರಾದ ತಮ್ಮ ವರ್ತನೆ ಹೇಗಿರಬೇಕು ಎನ್ನುವ ಆಲೋಚನೆ ಅವರ ತಲೆಯನ್ನು ಹೊಕ್ಕಿತು. ತಮಗೆ ಮೀಮಾಂಸಶಾಸ್ತ್ರದ ಬೋಧಕರಾಗಿದ್ದ ಮಹಾಮಹೋಪಾಧ್ಯಾಯ ವೈದ್ಯನಾಥ ಶಾಸ್ತ್ರಿಗಳಲ್ಲಿ ವಿಚಾರ ಮಾಡಿದರು. ಶಾಸ್ತ್ರಿಗಳು, ‘‘ಅಯ್ಯ, ನಿನ್ನ ಮನೆಗೆ ಆ ಯೇಸು ದೇವನೇ ಬಂದರೆ ಹೇಗೋ ಹಾಗೆ ಇವರನ್ನೂ ತಿಳಿದು ಸತ್ಕರಿಸು’’ ಎಂದರು. ದೇವುಡು ಅವರಿಗೆ ಸಮಾಧಾನ, ಸಂತೋಷ ಎರಡೂ ಆದುವು.

ದೇವುಡು ಅವರ ಮನೆಗೆ ಉತ್ತಂಗಿ ಚನ್ನಪ್ಪನವರು ಮಾರನೆಯ ದಿನ ಊಟಕ್ಕೆ ಬಂದರು. ದೇವುಡು ಸಪತ್ನಿಕರಾಗಿ ಅವರ ಕಾಲು ತೊಳೆದು ಪಾದೋದಕವನ್ನು ತಮ್ಮ ತಲೆಯ ಮೇಲೆ ಪ್ರೋಕ್ಷಿಸಿಕೊಂಡರು. ಅವರನ್ನು ಪೂರ್ವಾಭಿಮುಖವಾಗಿ ಕುಳ್ಳಿರಿಸಿ (ದೇವತಾಸ್ಥಾನ) ತಾವು ಉತ್ತರಾಭಿಮುಖವಾಗಿ (ಪೂಜಿಸುವವನು ಕುಳಿತುಕೊಳ್ಳುವ ಸ್ಥಾನ) ಕುಳಿತು ಸಂತೋಷದಿಂದ ಸಂಭಾಷಿಸಿದರು; ಸಹಪಂಕ್ತಿ ಭೋಜನ ಮಾಡಿದರು.ಉತ್ತಂಗಿಯವರಿಗೆ ಆದ ಆಶ್ಚರ್ಯ ಅಷ್ಟಿಷ್ಟಲ್ಲ. (ಕೃಪೆ: ಹೊ.ರಾ.ಸತ್ಯನಾರಾಯಣ ರಾವ್, ಗಂಗಾಧರ ದೇವುಡು, ‘ದೇವುಡು ದರ್ಶನ’ ಬೆಂಗಳೂರು, 1997, ಪು.91-92. ಡಾ. ಒ.ವಿ.ವೆಂಕಟಾಚಲ ಶಾಸ್ತ್ರಿಯವರ ‘ಉದಾರ ಚರಿತರು ಉದಾತ್ತ ಪ್ರಸಂಗಗಳು’ ಕೃತಿಯಿಂದ ಉದ್ಧರಿತ)
***

ಮುಂದಿನ ಶನಿವಾರ ಅಂದರೆ ಮೇ 27, 2017ರಂದು ಮಂಗಳೂರಿನಲ್ಲಿ ಮಹಾ ಚೇತನ ಯೇಸುವಿನ ಕುರಿತ ಮುಳಿಯ ಕೇಶವಯ್ಯನವರ ಕೃತಿ ಪರಿಷ್ಕೃತಗೊಂಡು ಬಿಡುಗಡೆಯಾಗಲಿದೆ ಮತ್ತು ಯಕ್ಷಗಾನ ಪ್ರದರ್ಶನ ನಡೆಯಲಿದೆ. ಆದರೆ ಈ ಹೊತ್ತಿನಲ್ಲಿ ಭಾರೀಯಲ್ಲದಿದ್ದರೂ ಅಪಾಯಕಾರೀ ಅಪಸ್ವರ ಕೇಳಿದೆ. ಇದು ಸಾಮಾಜಿಕ ತಾಣಗಳಲ್ಲಿ ಮಾತ್ರ ಚರ್ಚೆಯಾಗುತ್ತಿದೆ ಮತ್ತು ಮಾಧ್ಯಮಗಳ ಮುಖ್ಯವಾಹಿನಿಗೆ ಬಂದಿಲ್ಲವೆಂದು ಆಲಕ್ಷಿಸುವಂತಿಲ್ಲ. ಇದು ಕೈಬಾಂಬು ತಯಾರಿಸಿ ಸ್ಫೋಟಿಸುವ ಪರಿಣಾಮಕಾರೀ ಸಂಚಿನ ನೇಪಥ್ಯ. ಹಿಂದೂ ಧರ್ಮದ ನೇರ ವಿವೇಕಾನಂದರಂತೆ ವರ್ತಿಸುವ ಸ್ವಘೋಷಿತ ಪುರೋಹಿತ ಚಕ್ರವರ್ತಿಗಳು ಈ ಕಾರ್ಯಕ್ರಮದ ವಿರುದ್ಧ ತಮ್ಮ ಗೆರಿಲ್ಲಾ ಪಡೆಗಳಿಗೆ ಕುಮ್ಮಕ್ಕು ಕೊಟ್ಟು ಬೆಂಕಿ ಹಚ್ಚಲು ಬೇಕಾದ ಕಡ್ಡಿ, ಸೀಮೆ ಎಣ್ಣೆ ಇತ್ಯಾದಿ ಸಾಹಿತ್ಯಗಳನ್ನು ಸಿದ್ಧಗೊಳಿಸಲು ಯತ್ನಿಸುತ್ತಿದ್ದಾರೆ. ಇದರ ವಿರುದ್ಧ ಅನೇಕ ಯಕ್ಷಗಾನ ಕಲಾವಿದರು ತಮ್ಮ ದುರ್ಬಲ ಸಜ್ಜನಿಕೆಯ ಕ್ಷೀಣ ಮತ್ತು ಅಸ್ಪಷ್ಟ ದನಿಯೆತ್ತಿದ್ದಾರೆ.

ಇನ್ನು ಕೆಲವರು ತಾವೇಕೆ ಈ ಹಗರಣದಲ್ಲಿ ಸಿಕ್ಕಿಹಾಕಿಕೊಳ್ಳಬೇಕು, ಇದೊಂದು ತಾತ್ಕಾಲಿಕ ವಿಷಯ, ಆದರೆ ಶಾಶ್ವತವಾದ ತಾವು ಇದಕ್ಕೆಲ್ಲ ಮನಸ್ಸು, ಕಿವಿ, ಕಣ್ಣು, ನಾಲಗೆ, ಮೈಗಳನ್ನೊಡ್ಡಿ ಏಕೆ ಅಸುಖಿಗಳಾಗಬೇಕು ಎಂಬಂತೆ ಜಾರಿಕೆಯ ಹಾರಿಕೆಯ ಮಾತುಗಳನ್ನಾಡಿದ್ದಾರೆ. ಇವನ್ನು ನೋಡಿದಾಗ ಈ ವ್ಯಕ್ತಿಗಳು ರಂಗದಲ್ಲೆಷ್ಟೇ ಧೀಮಂತರಂತೆ ಕಂಡರೂ ನಿಜ ಜೀವನದ ಚೌಕಿಯಲ್ಲಿ ಕುಬ್ಜರು ಎಂಬುದು ಅರ್ಥವಾಗುತ್ತದೆ. ಬುದ್ಧಿವಂತರ ಜಿಲ್ಲೆಯೆನಿಸಿಕೊಂಡ, ಇದೀಗ ಉಡುಪಿ-ಮಂಗಳೂರು ಎಂದು ದ್ವಿದಳವಾದ ದಕ್ಷಿಣ ಕನ್ನಡ (ಇದನ್ನು ಯಾರು ಯಾಕೆ ಯಾವಾಗ ಹೇಳಿದರೋ ಗೊತ್ತಿಲ್ಲ!) ಮತ್ತು ಉತ್ತರ ಕನ್ನಡ ಜಿಲ್ಲೆ ಒಟ್ಟಾಗಿ ಕರಾವಳಿ ಕರ್ನಾಟಕವೆನಿಸಿಕೊಂಡ ಮತ್ತು ಮಲೆನಾಡಿನೊಳಗಣ ಪ್ರಸಿದ್ಧ ಕಲೆಗಳಲ್ಲಿ ಯಕ್ಷಗಾನವು ಅಗ್ರಮಾನ್ಯವೆನಿಸಿದೆ. ಇಲ್ಲಿ ಕಲೆಗಾಗಿಯೇ ಬದುಕನ್ನು ಮುಡಿಪಾಗಿಟ್ಟು ಹಗಲೆಲ್ಲ ವಿಶ್ರಮಿಸಿ ಇರುಳೆಲ್ಲ ಕುಣಿದೇ ಕೊನೆಗೊಂದು ದಿನ ಬಡತನದಲ್ಲೇ ಕುಸಿಯುವ ಅನಕ್ಷರಸ್ಥ ಕಲಾವಿದರೂ ಇದ್ದಾರೆ. ವಿದ್ಯಾವಂತ, ಶ್ರೀಮಂತ ಕಲಾವಿದರೂ ಇದ್ದಾರೆ. ಇವರನ್ನೆಲ್ಲ ಬೆಸೆದ ಕೊಂಡಿ ಯಕ್ಷಗಾನ. ಇವರಿಗೆ ಒಂದೇ ಜಾತಿ, ಮತ, ವರ್ಗ, ಸಿದ್ಧಾಂತ- ಯಕ್ಷಗಾನ.

 ಕಾರ್ಯಕ್ರಮವು ನಡೆಯುತ್ತದೊ ಬಿಡುತ್ತದೋ ಗೊತ್ತಿಲ್ಲ. ಆದರೆ ಇದು ಕರಾವಳಿಯ ಕಲೆಗೊಂದು ಕಪ್ಪುಚುಕ್ಕೆ. ಕಲೆ ಎಂದೂ ದೇಶ, ಧರ್ಮ, ಮತ, ಜಾತಿ, ಭಾಷೆ, ವರ್ಗಗಳನ್ನು ಲೆಕ್ಕಿಸಿಲ್ಲ. ಅಲ್ಲಿ ಕ್ರಿಶ್ಚಿಯನ್ ಬಾಬು ಪ್ರಸಿದ್ಧ ವೇಷಧಾರಿಯಾಗಿದ್ದಾರೆ; ಜಬ್ಬಾರ್ ಸಮೋ ಶ್ರೇಷ್ಠ ಅರ್ಥಧಾರಿಯಾಗಿದ್ದಾರೆ. ಮಾರ್ಥಾ ಆಸ್ಟಿನ್ ಕೂಡಾ ಯಕ್ಷಗಾನ ಕಲಾವಿದೆಯಾಗಿದ್ದಾರೆ. ಕನ್ನಡ, ತುಳು, ಕೊಂಕಣಿ, ಈ ಎಲ್ಲ ಭಾರತೀಯ ಭಾಷೆಗಳಲ್ಲಿ ಮಾತ್ರವಲ್ಲ, ಆಂಗ್ಲ ಭಾಷೆಯಲ್ಲೂ ಯಕ್ಷಗಾನವು ಯಶಸ್ವಿಯಾಗಿ ಪ್ರದರ್ಶನಗೊಂಡಿದೆ. ಭಾಷೆಯ ಹಂಗಿಲ್ಲದ ಬ್ಯಾಲೆಯನ್ನೂ ಕಾರಂತರು ರಂಗಕ್ಕೆ ತಂದರು. ಯಕ್ಷಗಾನವು ಸಾಗರ ದಾಟಿ ವಿಶ್ವದೆಲ್ಲೆಡೆ ಪ್ರದರ್ಶನಗೊಳ್ಳುವ ಕಲೆಯಾಗಿ ತನ್ನ ಮಹಾಬಾಹುಗಳನ್ನು ಬೆಳೆಸಿತು. ಆದರೆ ಇತರರಿಗೆ ತೊಂದರೆಯಾಗುವ ಬಕಾಸುರನೂ ಆಗಲಿಲ್ಲ; ಕಬಂಧನೂ ಆಗಲಿಲ್ಲ.

ಇಷ್ಟೇ ಅಲ್ಲ; ಯಕ್ಷಗಾನವು ತಕ್ಕ ಮಟ್ಟಿಗೆ ಕಾಲಾಂತರದಲ್ಲಿ ಬದಲಾವಣೆ ಯನ್ನು ತಾಳಿತು. ಬಪ್ಪಬ್ಯಾರಿ-ಉಸ್ಮಾನ್ ಬ್ಯಾರಿ ಪಾತ್ರಗಳು ಯಕ್ಷಗಾನದಲ್ಲಿ ಧಾರ್ಮಿಕ-ಮತೀಯ ಸಾಮರಸ್ಯದ ಕ್ರಾಂತಿಯನ್ನೇ ಆಡಿದವು, ಮಾಡಿದವು. ಶೇಣಿ ಗೋಪಾಲಕೃಷ್ಣ ಭಟ್ಟರು ಬಪ್ಪಬ್ಯಾರಿಯಾಗಿ, ವಿಟ್ಲ ಗೋಪಾಲಕೃಷ್ಣ ಜೋಶಿಯವರು ಉಸ್ಮಾನ್ ಬ್ಯಾರಿಯಾಗಿ ಅಭಿನಯಿಸಿದಾಗ ಯಾವ ಇಸ್ಲಾಮ್ ಮತೀಯನೂ ಈ ಪಾತ್ರಗಳ, ಪ್ರಸಂಗಗಳ ವಿರುದ್ಧ ಪ್ರತಿಭಟನೆ ಮಾಡಲಿಲ್ಲ. ಕರಾವಳಿಯ ಸಮಾಜಕ್ಕೆ ಕಲೆಯ ಮೇಲಿದ್ದ ಏಕಾಗ್ರ ಆಸಕ್ತಿಯು ‘ಬಪ್ಪನಾಡು ಕ್ಷೇತ್ರ ಮಹಾತ್ಮೆ’ ಯಕ್ಷಗಾನ ಪ್ರಸಂಗದ ನೂರಾರು ಯಶಸ್ವೀ ಪ್ರದರ್ಶನಗಳನ್ನು ಕಾಣಲು ಕಾರಣವಾಯಿತು. ಭಕ್ತಿ-ಶ್ರದ್ಧೆಗಳ ಮೂಲಕ ಬಪ್ಪಬ್ಯಾರಿಗೂ ಯಕ್ಷಗಾನದ ಅಧಿದೇವತೆ ಒಲಿಯುತ್ತಾಳೆಂಬುದನ್ನು ಸಾರಿತು.

ಇಂತಹ ಅನೇಕ ಉದಾಹರಣೆಗಳನ್ನು ನೀಡಬಹುದು. ಯಕ್ಷಗಾನವು ಯಾವ ಧರ್ಮದ, ಜಾತಿಯ, ಮತದ ಸ್ವತ್ತೂ ಅಲ್ಲ. ಅದು ಹಿಂದೂ ಧರ್ಮದ ಪ್ರಚಾರಕ್ಕಾಗಿ ನೆಲೆಗೊಂಡ ಕಲೆಯೂ ಅಲ್ಲ. ನೇಪಥ್ಯದಲ್ಲಷ್ಟೇ ದೇವರ ಪೂಜೆ ನಡೆದು ರಂಗಕ್ಕೆ ಬಂದಾಗ ಎಲ್ಲ ಪಾತ್ರಗಳೂ ನಮ್ಮನ್ನು ಈ ಲೋಕದಿಂದ ಯಕ್ಷಲೋಕಕ್ಕೆ ಕರೆದೊಯ್ಯುವ ದೇವತೆಗಳು. ಪುತ್ತೂರಿನ ಸಂತ ಫಿಲೋಮಿನಾ ಪ್ರೌಢಶಾಲೆಯಲ್ಲಿ ಕನ್ನಡ ಅಧ್ಯಾಪಕರಾಗಿದ್ದ ದಿವಂಗತ ಮಣಿಲ ಶಿವಶಂಕರ ಶಾಸ್ತ್ರಿಗಳು 1960ರ ದಶಕದಲ್ಲಿ ‘ತಾಷ್ಕೆಂಟು ಸಂಧಾನ’ ಎಂಬ ಸಮಾಜೋ-ರಾಜಕೀಯವೆಂದು ಇಂದು ಕರೆಯಲ್ಪಡಬಹುದಾದ ಯಕ್ಷಗಾನ ಪ್ರಸಂಗವನ್ನು ರಚಿಸಿ ಪ್ರದರ್ಶಿಸಿದ್ದರು. ಸಾಬರ ಜೆಟ್ಟುಗಳಿಂದಾ ಅಯ್ಯೂಬನ ಪಡೆಗಳು ಬಂದಾ ಎಂಬ ಏರು ಪದಗಳನ್ನು ಹಾಡಿ ನಾವೆಲ್ಲ ಕುಣಿಯುತ್ತಿದ್ದೆವು.

ಸಾಬರ ಎಂಬುದನ್ನು (ಪಾಕಿಸ್ತಾನದ) ಮುಸ್ಲಿಮರು ಮತ್ತು ಅಯ್ಯೂಬ್‌ಖಾನ್ ಅಮೆರಿಕದಿಂದ ಪಡೆದ ಸಾಬರ್ ಜೆಟ್ ವಿಮಾನ ಎಂಬ ದ್ವಂದ್ವಾರ್ಥಗಳಲ್ಲಿ ಬಳಸಿದಾಗ ಹತ್ತೂರಿನ ಯಾವ ಮುಸ್ಲಿಮನೂ ಸಿಟ್ಟು ಮಾಡಿದ್ದು ನನಗೆ ಗೊತ್ತಿಲ್ಲ. ಎಲ್ಲರಿಗೂ ಅದೊಂದು ಯಕ್ಷಗಾನ; ಮತ್ತು ಯಕ್ಷಗಾನ ಮಾತ್ರ. ಮಂಜೇಶ್ವರ ಗೋವಿಂದ ಪೈಗಳ ಯೇಸುವಿನ ಕುರಿತ ‘ಗೊಲ್ಗೊಥಾ’ ಖಂಡ ಕಾವ್ಯ (ಇನ್ನೊಂದು ಬುದ್ಧನ ಕುರಿತ ‘ವೈಶಾಖಿ’) ಆಧುನಿಕ ಕನ್ನಡ ಕಾವ್ಯ ಪ್ರಪಂಚದ ಅಪೂರ್ವ ಮತ್ತು ಸಾಮಾಜಿಕವಾಗಿ ಬಹುಮುಖ್ಯ ಸೃಷ್ಟಿ. ಅವರನ್ನು ಅವರ ಜಾತಿಯವರಾಗಲೀ ಧರ್ಮೀಯರಾಗಲೀ ಬಹಿಷ್ಕರಿಸಲಿಲ್ಲ; ಗೌರವಿಸಿದರು. ಕೆ.ವಿ.ಅಯ್ಯರ್ ಅವರು ‘ರೂಪದರ್ಶಿ’ ಕಾದಂಬರಿ ಬರೆದಾಗ ಇದು ಕ್ರೈಸ್ತರ ಕುರಿತ ಕೃತಿಯೆಂದು ಯಾರೂ ಹಳಿಯಲಿಲ್ಲ.

ಹಾಗೆ ನೋಡಿದರೆ ಕೇಶಿರಾಜನ ‘ಶಬ್ದಮಣಿದರ್ಪಣ’, ನಾಗವರ್ಮನ ‘ಛಂದೋಂಬುಧಿ’ ಮುಂತಾದ ಆದಿಯ ಅನೇಕ ಹಳೆಗನ್ನಡ ಕೃತಿಗಳನ್ನು ಬೆಳಕಿಗೆ ತಂದವರೇ ಕ್ರೈಸ್ತರು. ವೇದಗಳನ್ನು, ಉಪನಿಷತ್ತುಗಳನ್ನು ವಿಶ್ವವ್ಯಾಪಿಗೊಳಿಸಿದ ಮಾಕ್ಸ್ ಮುಲ್ಲರ್ ಕ್ರೈಸ್ತ. ಕನ್ನಡದಲ್ಲಿ ಇಂದಿಗೂ ಮೊದಲ ಸ್ಥಾನದಲ್ಲಿರುವ ಅರ್ಥಕೋಶವನ್ನು ರಚಿಸಿದ ಫರ್ಡಿನಾಂಡ್ ಕಿಟ್ಟೆಲ್ ಒಬ್ಬ ಕ್ರೈಸ್ತ ಪಾದ್ರಿ. ‘ನಿತ್ಯೋತ್ಸವ’ ಕವಿತೆಯನ್ನು ಓದಿದಾಗ ನಿಸಾರ್ ಅಹಮದ್ ಅವರ ಜಾತಿ-ಮತ ನೆನಪಾಗುವುದಿಲ್ಲ. ಅವರೊಬ್ಬ ಕವಿ, ಅವರೊಬ್ಬ ಮನುಷ್ಯ ಎಂದಷ್ಟೇ ನೆನಪಾಗುತ್ತದೆ; ನೆನಪಾಗಬೇಕು. ಭೈರಪ್ಪನವರ ‘ತಬ್ಬಲಿಯು ನೀನಾದೆ ಮಗನೆ’ ಕಾದಂಬರಿ ಸಿನೆಮಾ ಆದಾಗ ಅದರಲ್ಲಿ ಕರ್ಮಠ ಬ್ರಾಹ್ಮಣನ ಪಾತ್ರವನ್ನು ಲೀಲಾಜಾಲವಾಗಿ ಅಭಿನಯಿಸಿದ್ದು ನಾಸಿರುದ್ದಿನ್ ಶಾ. ನಮ್ಮ ತತ್ವ ಪದಗಳ ಹರಿಕಾರ ಹಿರಿಕಾರ ಶಿಶುನಾಳ ಶರೀಫ, ಕಬೀರ ಇವರೆಲ್ಲ ಮುಸ್ಲಿಮರು. ಇವರನ್ನು ಬಿಟ್ಟು ಹಿಂದೂಧರ್ಮ ಯಾವುದು? ಎಲ್ಲಿದೆ?

 ಸ್ವಘೋಷಿತ ದೇವಮಾನವರು, ಧಾರ್ಮಿಕ ಮುಖಂಡರು ಹೆಚ್ಚಾಗುತ್ತಿ ದ್ದಾರೆ ಮಾತ್ರವಲ್ಲ ಇನ್ನಷ್ಟು ಅಪಾಯಕಾರಿಯಾಗುತ್ತಿದ್ದಾರೆ. ತಾವು ಆಡುತ್ತಿರುವ ಮಾತುಗಳು, ಮಾಡುತ್ತಿರುವ ಕೃತ್ಯಗಳು ಸಮಾಜವನ್ನು ವಿನಾಶದ ಅಂಚಿಗೆ ತರುತ್ತಿದ್ದಾವೆಂಬ ಒಂದಿಷ್ಟೂ ಅರಿವಿಲ್ಲದ ಈ ಪಾಷಂಡಿ ಮನೋವೃತ್ತಿಗಳು ತಮ್ಮ ವಿದ್ಯೆ, ಬುದ್ಧಿ ಎಲ್ಲವನ್ನೂ ಈ ಒಡೆಯುವ ಆನಂದ ಕ್ಕಾಗಿ ಸವೆಸುತ್ತಿದ್ದಾರೆ. ಇವರಲ್ಲಿ ವೈದ್ಯರಿದ್ದಾರೆ, ಇಂಜಿನಿಯರುಗಳಿದ್ದಾರೆ, ವಕೀಲರಿದ್ದಾರೆ, ಅಷ್ಟೇ ಅಲ್ಲ, ಮಕ್ಕಳನ್ನು ತಿದ್ದಬೇಕಾದ ಅಧ್ಯಾಪಕ/ ಪ್ರಾಧ್ಯಾಪಕರೂ ಇದ್ದಾರೆಂಬುದು ಅತ್ಯಂತ ಶೋಚನೀಯ ಸಂಗತಿ. ಇಂತಹ ಹಿಂಸಾತ್ಮಕ ಕುಮ್ಮಕ್ಕು, ಕೆರಳಿಸುವಿಕೆಯ ವಿರುದ್ಧ ಪ್ರಾಜ್ಞರಿದ್ದರೆ ತಲೆಯೆತ್ತಿ ನಿಲ್ಲಬೇಕು, ನಾಲಗೆಯ, ಲೇಖನಿಯ ಸದುಪಯೋಗಮಾಡಿ ಚಿಗುರಿನಲ್ಲೇ ಇಂತಹ ದುಷ್ಕೃತ್ಯಗಳನ್ನು ಸದೆಬಡಿಯಬೇಕು. ಇಂದು ಅವರಿಗಾಗಿದೆ, ನಾವು ಸುರಕ್ಷಿತ, ಎಂದುಕೊಳ್ಳುವವರು ಒಡೆದಾಳುವ ಎಲ್ಲ ಸೈತಾನಗಳನ್ನು ನೆನಪಿಸಿಕೊಳ್ಳಬೇಕು.

ಬಲ ಎಂದರೆ ಬಾಹುಬಲವಲ್ಲ; ಅದು ಸರಿಯಾದ್ದನ್ನು ತೋರಿಸಬೇಕು ಎಂದಷ್ಟೇ ಅರ್ಥ. ದೇಶದೆಲ್ಲೆಡೆ ಕ್ಷೋಭೆಯಿದೆ. ಚಿತೆಯೂ ಚಿಂತಿಸುವಷ್ಟು ಆತಂಕಗಳಿವೆ. ಇವುಗಳ ನಡುವೆ ಇವೆಲ್ಲವೂ ದೇಶೋಭಿವೃದ್ಧಿಯೆಂದು ಹೇಳುವ ಒಂದು ಗುಂಪು ಮಾರಕ ಪ್ರಬಲವಾಗುತ್ತಿದೆ. ಘಾತುಕ ಸಂಗತಿಯೆಂದರೆ ಈ ಜಾತೀಯತೆಯ, ಧರ್ಮಾಂಧತೆಯ ದುರ್ಲಾಭ ಪಡೆಯುವ ಅವಕಾಶವಾದಿಗಳು ಬೇಕಷ್ಟಿದ್ದಾರೆ. ಸತ್ಯ ಹೇಳುವವರನ್ನು ಲೇವಡಿಮಾಡುವ, ಬುದ್ಧಿಜೀವಿಗಳನ್ನು ಸುದ್ದಿಜೀವಿಗಳು, ಜಾತ್ಯತೀತರನ್ನು (ಆಂಗ್ಲ ಪದ ‘ಸೆಕ್ಯುಲರ್’ ಎಂಬುದನ್ನು ಬಳಸಿ) ‘ಸಿಕ್ಯುಲರ್’ ಎಂದು ಹಂಗಿಸುವ, ತಮ್ಮ ಅಜ್ಞಾನವನ್ನು, ಅಸಹಿಷ್ಣುತೆ ಯನ್ನು ಇನ್ನೊಬ್ಬರ ಮೇಲೆ ಪ್ರಯೋಗಿಸಿ ತಾವು ಸಹಿಷ್ಣುಗಳೆಂದು ಬಾಯಿಬಡಿದುಕೊಳ್ಳುವ ನಮ್ಮ ಸಮಾಜ ಹೇಗಿದೆಯೆಂದು ವಿವರಿಸಲು ಬೇಕಾದಷ್ಟು ಸಂಗತಿಗಳು ಸಿಗುತ್ತವೆ. ಕಾರ್ನಾಡರನ್ನು ಬೈಯ್ಯುವಾಗ ನಾಟಕ ಕಲೆಯನ್ನು, ಅನಂತಮೂತಿಯವರನ್ನು ಬೈಯ್ಯುವಾಗ ಸಾಹಿತ್ಯವನ್ನೂ ಚಿಂತನೆಯನ್ನೂ ಖಂಡಿಸುತ್ತೇವೆಂದು ತಿಳಿಯದ ಅಲ್ಪಮತಿಗಳು ಬಹುಮತೀ ಯರಾಗಿರುವುದು ನಮ್ಮ ಪ್ರಜಾಪ್ರಭುತ್ವದ ಕ್ಷಿಪ್ರಪತನದ ಸಂಕೇತವಾಗಿದೆ.

ರಾಜಕೀಯ, ವ್ಯಾವಹಾರಿಕ ಮತ್ತು ವೈಯಕ್ತಿಕ ಕಾರಣಗಳಿಗಾಗಿ ಇಂತಹ ಪಡೆಗಳನ್ನು, ಬ್ರಿಗೇಡುಗಳನ್ನು ಪ್ರೋತ್ಸಾಹಿಸಿದ ಮಂದಿಗೂ ಈಗ ತಲೆಗೆ ಕೈಹೊತ್ತು ಕೂರುವ ಪರಿಸ್ಥಿತಿ ನಿರ್ಮಾಣವಾದದ್ದು ಕರಾವಳಿಯ ದುರಂತ. ಆದರೆ ಸಮುದ್ರದ ಅಲೆಗಳನ್ನು ನೋಡಿ ಬದುಕುವ ಜನರಿಗೆ ತಮ್ಮ ನಿತ್ಯ ಬದುಕಿನಲ್ಲಿ ಜಾತಿ, ಧರ್ಮದ ಸ್ಥಾನವು ಕೊನೆಯದ್ದು; ಮತ್ತು ಇಂತಹ ಅಪಾಯದ ಅಲೆಗಳು ಬಂದಾಗ ಅವನ್ನು ಮೀರಿ ಬದುಕಬಲ್ಲೆವು ಎಂಬುದರ ಅರಿವಿದೆಯೆಂದು ಭಾವಿಸುವುದಾದರೆ ಈ ಸಣ್ಣ ಸಂಗತಿಯು ಬೆಳೆಯಲಾರದು ಎಂದು ನಂಬೋಣ.

ಅದಲ್ಲದಿದ್ದರೆ ಯೇಸು ಶಿಲುಬೆಯಿಂದ ಆಡಿದ ‘‘ಇವರಿಗೆ ತಾವೇನು ಮಾಡುತ್ತಿದ್ದೇವೆಂಬ ಪರಿವೆಯಿಲ್ಲದ್ದರಿಂದ ಇವರನ್ನು ಕ್ಷಮಿಸು ದೇವರೇ’’ (Forgive them Oh Lord for they know not what they are doing) ಎಂಬ ಮಾತುಗಳನ್ನು ನಾವು ಆಡಬೇಕು ಅಲ್ಲವೇ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)