varthabharthi

ಪ್ರಚಲಿತ

ಮೂರು ವರ್ಷ, ನೂರು ನಾಮ

ವಾರ್ತಾ ಭಾರತಿ : 29 May, 2017
ಸನತ್ ಕುಮಾರ ಬೆಳಗಲಿ

ಮೋದಿ ಅಧಿಕಾರಕ್ಕೆ ಬಂದ ಮೂರು ವರ್ಷಗಳಲ್ಲಿ ಸಾರ್ವಜನಿಕ ರಂಗದ ಉದ್ಯಮಗಳನ್ನು ಒಂದೊಂದಾಗಿ ಮುಚ್ಚಲಾಗುತ್ತಿದೆ. ಇನ್ನೊಂದೆಡೆ ಕೃಷಿ ಉತ್ಪಾದನೆ ಕುಸಿಯುತ್ತಿದೆ. ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಸಂಖ್ಯೆ ಹೆಚ್ಚಾಗುತ್ತಿದೆ. ಛತ್ತೀಸ್‌ಗಡ, ಒಡಿಶಾ, ಜಾರ್ಖಂಡ್‌ನಲ್ಲಿರುವ ಅಮೂಲ್ಯ ಗಣಿ ಸಂಪತ್ತು ಕೊಳ್ಳೆ ಹೊಡೆಯಲು ಅವಕಾಶ ನೀಡಲಾಗಿದೆ. ರಾಜ್ಯದ ಸಂಪತ್ತಿನ ಲೂಟಿಯಲ್ಲಿ ಅಂಬಾನಿ, ಅದಾನಿಯ ಜೊತೆಗೆ ಪೈಪೋಟಿಗೆ ಇಳಿದಿರುವ ಹರಿದ್ವಾರದ ಬಾಬಾ ರಾಮದೇವ್‌ಗೆ ಉದ್ಯಮ ಸ್ಥಾಪಿಸಲು ದೇಶದ ಎಲ್ಲ ರಾಜ್ಯಗಳಲ್ಲಿ ಲಕ್ಷಾಂತರ ಎಕರೆ ಭೂಮಿಯನ್ನು ನೀಡಲಾಗಿದೆ.

ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂದು ಮೂರು ವರ್ಷಗಳಾದವು. ಈ ಮೂರು ವರ್ಷದ ಸಂಭ್ರಮಾಚರಣೆಗಾಗಿ ದೇಶದ 900 ಕಡೆ ಮೋದಿ ಉತ್ಸವಗಳು ನಡೆಯಲಿವೆ. ಈ ಉತ್ಸವಗಳಲ್ಲಿ ಮೋದಿ ಸರಕಾರದ ಸಾಧನೆಗಳ ಬಗ್ಗೆ ಜನರಿಗೆ ಬಣ್ಣ ಹಚ್ಚಿ ಪ್ರಚಾರ ಮಾಡಲಾಗುತ್ತದೆ. ರಾಷ್ಟ್ರವನ್ನು ಉದ್ದೇಶಿಸಿ ಮೋದಿಯವರು ಮಾತನಾಡಿದ ‘ಮನ್ ಕಿ ಬಾತ್’ ಪುಸ್ತಕ ರೂಪದಲ್ಲಿ ಬಿಡುಗಡೆಯಾಗಿದೆ.

ಈ ಮೂರು ವರ್ಷಗಳ ಮೋದಿ ಸರಕಾರದ ಸಾಧನೆಗಳನ್ನು ಆಳುವ ಪಕ್ಷ ತನ್ನ ರಾಜಕೀಯ ಉದ್ದೇಶಗಳಿಗಾಗಿ ಪ್ರಚಾರ ಮಾಡುವುದು ಸಹಜ. ಆದರೆ ಈ ಬಾರಿ ಕೇಂದ್ರ ಸರಕಾರದ ವಾರ್ತಾ ಇಲಾಖೆ ಜೊತೆ ಪೈಪೋಟಿಗೆ ಬಿದ್ದಂತೆ ದೇಶದ ಪ್ರಮುಖ ಮಾಧ್ಯಮಗಳು ಕೂಡ ಮೋದಿ ಪ್ರಚಾರಕ್ಕೆ ಗಂಟೆಗಟ್ಟಲೆ ಕಾರ್ಯಕ್ರಮಗಳನ್ನು ಮೀಸಲಿಟ್ಟಿದ್ದರೆ, ಪತ್ರಿಕೆಗಳು ಪುಟಗಳನ್ನು ಅರ್ಪಿಸಿವೆ. ಸರಕಾರದ ಸಾಧನೆಗಳ ಬಗ್ಗೆ ಜನರಿಂದ ಅಭಿಪ್ರಾಯ ಸಂಗ್ರಹಿಸಿ ಪುಟಗಟ್ಟಲೆ ಪ್ರಕಟಿಸಿವೆ (ಜಾಹೀರಾತು ಇಲ್ಲ). ನಾವೀಗ ಸರಿ ದಾರಿಯಲ್ಲಿದ್ದೇವೆ ಎಂದು ಕರ್ನಾಟಕದಿಂದ ರಾಜ್ಯಸಭೆಗೆ ಚುನಾಯಿತರಾದ ಕೇರಳ ಮೂಲದ ಉದ್ಯಮಿಯೊಬ್ಬರು ತಮ್ಮ ಪತ್ರಿಕೆಯಲ್ಲಿ ಬರೆದುಕೊಂಡಿದ್ದಾರೆ.

ಆದರೆ ಮೂರು ವರ್ಷಗಳ ಸಾಧನೆ ಯಾವುದು ಎಂಬ ಪ್ರಶ್ನೆಗೆ ಸಮರ್ಪಕ ಉತ್ತರ ಎಲ್ಲಿಂದಲೂ ದೊರೆಯುತ್ತಿಲ್ಲ. ಕಮ್ಯುನಿಸ್ಟ್ ನಾಯಕ ಸೀತಾರಾಂ ಯೆಚೂರಿ ಅವರ ಪ್ರಕಾರ, ಮೂರು ವರ್ಷದ ವೈಫಲ್ಯದ ಉತ್ಸವವನ್ನು ಇವರು ಆಚರಿಸುತ್ತಿದ್ದಾರೆ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ. ಭಾರತದ 125 ಕೋಟಿ ಜನರಿಗೆ ತಿರುಪತಿ ನಾಮ ಬಳಿದ ಇಂತಹ ಪ್ರಧಾನಿ ಈ ದೇಶಕ್ಕೆ ಹಿಂದೆಂದೂ ಬಂದಿರಲಿಲ್ಲ. ಬಂಡವಾಳಶಾಹಿ ಮಾರುಕಟ್ಟೆ ವ್ಯವಸ್ಥೆಯಲ್ಲಿ ಕಳಪೆ ವಸ್ತುಗಳನ್ನು ಅಂದದ ಲೇಬಲ್ ಹಚ್ಚಿ ಮಾರಾಟ ಮಾಡುವಂತೆ ಕಾರ್ಪೊರೇಟ್ ಕಂಪೆನಿಗಳು ತಮ್ಮ ಕೈಗೊಂಬೆಯನ್ನು ಪ್ರಧಾನಿ ಸ್ಥಾನಕ್ಕೆ ತಂದು ಕೂರಿಸಿದವು. ತನ್ನ ಸ್ವಯಂ-ಸೇವಕನೊಬ್ಬ ಪ್ರಧಾನಿಯಾಗಲಿ ಎಂದು ಆರೆಸ್ಸೆಸ್ ಕೂಡ ಒತ್ತಾಸೆಯಾಗಿ ನಿಂತಿತು. ಆದರೆ ಕಳೆದ ಮೂರು ವರ್ಷಗಳಲ್ಲಿ ಇವರು ದೇಶಕ್ಕೆ ಮಾತನ್ನು ಬಿಟ್ಟರೆ ಮತ್ತೇನನ್ನೂ ನೀಡಲಿಲ್ಲ.

ಮೂರು ವರ್ಷಗಳ ಹಿಂದೆ ಅಧಿಕಾರಕ್ಕೆ ಬಂದ ನಂತರ ಕೆಲವೇ ತಿಂಗಳಲ್ಲಿ ನಡೆದ ದಿಲ್ಲಿ ಮತ್ತು ಬಿಹಾರದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮುಖಭಂಗ ಅನುಭವಿಸಿತು. ಆನಂತರ ಉತ್ತರಪ್ರದೇಶದಲ್ಲಿ ಚೇತರಿಸಿಕೊಂಡ ಬಿಜೆಪಿ ಕೋಮು ಧ್ರುವೀಕರಣದ ಮೂಲಕ ಅಧಿಕಾರಕ್ಕೆ ಬಂತು. ಜನರನ್ನು ಜಾತಿ, ಧರ್ಮದ ಹೆಸರಿನಲ್ಲಿ ವಿಭಜಿಸಿ ಅಧಿಕಾರಕ್ಕೆ ಬರುವ ಕಲೆ ಬಿಜೆಪಿಗೆ ಕರಗತವಾಗಿದೆ. ಏರುತ್ತಿರುವ ಬೆಲೆ, ಹೆಚ್ಚುತ್ತಿರುವ ನಿರುದ್ಯೋಗದ ಬಗ್ಗೆ ಜನ ಮಾತನಾಡದಂತೆ ಅವರಲ್ಲಿ ಕೋಮು ವಿಷಬೀಜ ಬಿತ್ತಿದ್ದಾರೆ.

ಅಂಬಾನಿ, ಅದಾನಿ, ಮಿತ್ತಲ್‌ಗಳಂತಹ ಕಾರ್ಪೊರೇಟ್ ಧಣಿಗಳಿಗೆ ಈ ಮೂರು ವರ್ಷ ಸುವರ್ಣ ಕಾಲವಾಗಿದ್ದರೆ, ದಲಿತರಿಗೆ, ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ ಮಹಿಳೆಯರಿಗೆ, ಮಕ್ಕಳಿಗೆ ಈ ಮೂರು ವರ್ಷ ಅಸಹನೀಯ ನರಕಯಾತನೆಯ ಕಾಲವಾಗಿದೆ. ಸಮಾಜದಲ್ಲಿ ಅಸಹನೆ ಅಟ್ಟಹಾಸದಿಂದ ವಿಜೃಂಭಿಸುತ್ತಿದೆ. ಈಗಿನ ಕಾಲಘಟ್ಟ ಹೇಗಿದೆಯೆಂದರೆ, ವೈಚಾರಿಕ ಭಿನ್ನಾಭಿಪ್ರಾಯವನ್ನು ಕೂಡ ಇವರು ಸಹಿಸುತ್ತಿಲ್ಲ. ಗೋವಿಂದ ಪನ್ಸಾರೆ, ನರೇಂದ್ರ ದಾಭೋಲ್ಕರ, ಎಂ.ಎಂ.ಕಲಬುರ್ಗಿಯವರ ಹತ್ಯೆಯೂ ಈ ದೇಶದಲ್ಲಿ ನಡೆಯಿತು. ಇವರ ಹಂತಕರನ್ನು ಈವರೆಗೆ ಪತ್ತೆ ಮಾಡಲಾಗಿಲ್ಲ. ಸರಕಾರವನ್ನು ವಿರೋಧಿಸುವ ಸಾಹಿತಿಗಳು, ಕಲಾವಿದರನ್ನು ದಬ್ಬಾಳಿಕೆಗೆ ಗುರಿಪಡಿಸಲಾಗುತ್ತದೆ. ಅಸಹಿಷ್ಣುತೆ ವಿರುದ್ಧ ಧ್ವನಿಯೆತ್ತಿದ ಶಾರುಖ್ ಖಾನ್, ಆಮಿರ್ ಖಾನ್ ಅವರ ಮೇಲೆ ದಾಳಿ ನಡೆಯುತ್ತಿದೆ. ಸಾಹಿತಿ ಅನಂತಮೂರ್ತಿಯವರಿಗೆ ವಿಮಾನ ಟಿಕೆಟ್ ಕಳುಹಿಸಿದಂತೆ ಶಾರುಖ್ ಖಾನ್, ಆಮಿರ್ ಖಾನ್ ಅವರಿಗೂ ಪಾಕಿಸ್ತಾನದ ವಿಮಾನ ಟಿಕೆಟ್ ಕಳುಹಿಸಲಾಯಿತು. ಗೋರಕ್ಷಣೆ ಹೆಸರಿನಲ್ಲಿ ಗೋರಕ್ಷಕ ಗೂಂಡಾಗಳ ದಾಳಿಗೆ ಅನೇಕ ಅಮಾಯಕರು ಬಲಿಯಾದರು. ಆದಿತ್ಯನಾಥ್ ಮುಖ್ಯಮಂತ್ರಿಯಾದ ನಂತರ ಉತ್ತರ ಪ್ರದೇಶದಲ್ಲಿ ದಲಿತರ, ಅಲ್ಪಸಂಖ್ಯಾತರ ಹತ್ಯಾಕಾಂಡ ನಡೆದಿದೆ.

ಹಿಂದುತ್ವದ ಸೋಗು ಹಾಕಿದ ಬಿಜೆಪಿ ನಾಯಕರು ಎಲ್ಲಾ ಬಗೆಯ ಸಮಾಜ ದ್ರೋಹಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ನೋಟು ಅಮಾನ್ಯದ ಕಠಿಣ ದಿನಗಳಲ್ಲೂ ಕೂಡ 22 ಲಕ್ಷ ಮತ್ತು 33 ಲಕ್ಷ ರೂಪಾಯಿ ವೌಲ್ಯದ ಹೊಸ ನೋಟುಗಳೊಂದಿಗೆ ಬಿಜೆಪಿ ನಾಯಕರು ಚೆನ್ನೈ ಮತ್ತು ಪಶ್ಚಿಮ ಬಂಗಾಳದಲ್ಲಿ ಸಿಕ್ಕಿಬಿದ್ದರು. ಮಧ್ಯಪ್ರದೇಶದ ಬಿಜೆಪಿ ನಾಯಕರು ಲೈಂಗಿಕ ದಂಧೆಯಲ್ಲಿ ತೊಡಗಿದ್ದಾರೆಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿತು. ಇದೇ ರಾಜ್ಯದಲ್ಲಿ ಪಾಕಿಸ್ತಾನ ಪರ ಬೇಹುಗಾರಿಕೆ ನಡೆಸಿದ ಧ್ರುವ ಸಕ್ಸೇನಾ ಎಂಬವನನ್ನು ಬಂಧಿಸಲಾಯತು. ಅಲ್ಲಿ ಬಿಜೆಪಿ ಸರಕಾರದಡಿ ನಡೆದ ವ್ಯಾಪಂ ಹಗರಣವನ್ನು ಮುಚ್ಚಿ ಹಾಕಲಾಗಿದೆ. ಭಯೋತ್ಪಾದಕ ಚಟುವಟಿಕೆಗೆ ಹಣಕಾಸಿನ ನೆರವು ನೀಡಿದ ಬಿಜೆಪಿ ನಾುಕರನ್ನು ಅಸ್ಸಾಂನಲ್ಲಿ ಬಂಧಿಸಲಾಗಿದೆ.

ಪಶ್ಚಿಮ ಬಂಗಾಳದ ಮಕ್ಕಳ ಕಳ್ಳ ಸಾಗಣೆ ಪ್ರಕರಣದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿಜಯ ವರ್ಗಿಯಾ ಮತ್ತು ಬಿಜೆಪಿ ಮಹಿಳಾ ಘಟಕದ ನಾಯಕಿ ರೂಪಾ ಗಂಗೂಲಿಯವರ ಹೆಸರು ಕೇಳಿ ಬಂದಿದೆ. ಇದನ್ನೆಲ್ಲ ಬಯಲಿಗೆಳೆದ ಜೆಎನ್‌ಯು ವಿದ್ಯಾರ್ಥಿ ನಾಯಕಿ ಶೆಹ್ಲಾ ರಶೀದ್ ತೇಜೋವಧೆಗೆ ಬಿಜೆಪಿ ನಾಯಕರು ಯತ್ನಿಸುತ್ತಿದ್ದಾರೆ. ಇವೆಲ್ಲ ಪ್ರಧಾನಿ ಮೋದಿಯವರ ಮೂರು ವರ್ಷದ ಸಾಧನೆಯ ಪಟ್ಟಿಗೆ ಸೇರುತ್ತವೆ.

ತಮ್ಮ ಅನೈತಿಕ ಕ್ರಿಮಿನಲ್ ಚಟುವಟಿಕೆಗಳನ್ನು ಯಾರೂ ಪ್ರಶ್ನಿಸಬಾರದು ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ‘ಕಾಂಗ್ರೆಸ್ ಮುಕ್ತ ಭಾರತ’ ಎಂಬ ಮಾತುಗಳನ್ನು ಆಡುತ್ತಿದ್ದಾರೆ. ಇದು ಮೇಲ್ನೋಟಕ್ಕೆ ಕಾಂಗ್ರೆಸ್ ಮುಕ್ತವೆಂದು ಕಂಡು ಬಂದರೂ ಇವರ ಗುರಿ ಎಡಪಕ್ಷ ಮುಕ್ತ ಭಾರತ, ಪ್ರಾದೇಶಿಕ ಪಕ್ಷ ಮುಕ್ತ ಭಾರತ, ದಲಿತ ಮುಕ್ತ ಭಾರತ ಮತ್ತು ಮುಸ್ಲಿಂ ಮುಕ್ತ ಭಾರತ ಹೀಗೆ ಹಂತಹಂತವಾಗಿ ಎಲ್ಲರನ್ನೂ ಮುಗಿಸಿ ಸಂವಿಧಾನವನ್ನು ತೆಗೆದು ಹಾಕಿ ಏಕಸಂಸ್ಕೃತಿ, ಏಕಧರ್ಮವನ್ನು ಹೇರುವುದಾಗಿದೆ. ಕಳೆದ ಶತಮಾನದ ಮೂವತ್ತರ ದಶಕದಲ್ಲಿ ಜರ್ಮನಿಯ ಅಡಾಲ್ಫ್ ಹಿಟ್ಲರ್ ಯಹೂದಿ ಮುಕ್ತ ಜರ್ಮನಿಯನ್ನು ಮಾಡಲು ಭಾರೀ ನರಮೇಧವನ್ನೇ ಮಾಡಿದ. ಆ ಹಿಟ್ಲರ್‌ನಿಂದ ಸ್ಫೂರ್ತಿ ಪಡೆದ ಗೋಳ್ವಾಲ್ಕರ್ ಅನುಯಾಯಿಗಳಾದ ಇವರು ಪ್ರಜಾಪ್ರಭುತ್ವ ವ್ಯವಸ್ಥೆ ಇಟ್ಟುಕೊಂಡೇ ದೇಶವನ್ನು ಸರ್ವನಾಶ ಮಾಡಲು ಹೊರಟಿದ್ದಾರೆ.

‘ಮೇಕ್ ಇನ್ ಇಂಡಿಯ’, ‘ಸಬ್ ಕಾ ಸಾಥ್-ಸಬ್ ಕಾ ವಿಕಾಸ್’ ಎಂಬ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಮೋದಿಯವರು ಈ ದೇಶದ ಭಾರೀ ಕಾರ್ಪೊರೇಟ್ ಕಂಪೆನಿಗಳ ಒಂದೂವರೆ ಲಕ್ಷ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದರು. ಬ್ಯಾಂಕ್‌ಗೆ ಟೋಪಿ ಹಾಕಿದ ವಿಜಯ ಮಲ್ಯಗೆ ವಿದೇಶಕ್ಕೆ ಹಾರಲು ಅನುವು ಮಾಡಿಕೊಟ್ಟರು. ಇದರ ಪರಿಣಾಮವಾಗಿ ದಿವಾಳಿಯಂಚಿಗೆ ಬಂದು ನಿಂತ ಬ್ಯಾಂಕುಗಳನ್ನು ಉಳಿಸಿಕೊಳ್ಳಲು, ಬ್ಯಾಂಕ್‌ನಲ್ಲಿ ಹಣವಿದೆಯೆಂದು ತೋರಿಸಿಕೊಡಲು ನೋಟು ನಿಷೇಧ ಮಾಡಿದರು. ಜನಸಾಮಾನ್ಯರು ಹಣಕ್ಕಾಗಿ ಪರದಾಡುವಂತಾಯಿತು. ಪ್ರತೀ ಬಾರಿ ಮನ್ ಕಿ ಬಾತ್‌ನಲ್ಲಿ ಸುಳ್ಳುಗಳನ್ನು ಹೇಳುತ್ತ, ಧ್ವನಿಯ ಏರಿಳಿತಗಳಿಂದ ಜನರನ್ನು ಮರುಳು ಮಾಡಿ, ತಮ್ಮ ತಪ್ಪುಗಳನ್ನು ಜನರು ಪ್ರಶ್ನಿಸದಂತೆ ಮಾಡಿದರು.

ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ವಿದೇಶದಲ್ಲಿರುವ ಕಪ್ಪು ಹಣವನ್ನು ತಂದು ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ರೂಪಾಯಿ ಜಮೆ ಮಾಡುವುದಾಗಿ ಅಧಿಕಾರಕ್ಕೆ ಬರುವ ಮುನ್ನ ಹೇಳಿಕೊಂಡರು. ಆ ಬಗ್ಗೆ ಪ್ರಶ್ನಿಸಿದರೆ, ಈಗ ಉತ್ತರಿಸುವುದಿಲ್ಲ. ಪ್ರತೀ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿದ್ದ ವಿಕಾಸ ಪುರುಷರು ಅರ್ಧ ಕೋಟಿಯಷ್ಟು ಜನರಿಗೆ ಕೆಲಸ ಕೊಡಿಸಲು ಸಾಧ್ಯವಾಗಲಿಲ್ಲ.

ಮೋದಿ ಅಧಿಕಾರಕ್ಕೆ ಬಂದ ಮೂರು ವರ್ಷಗಳಲ್ಲಿ ಸಾರ್ವಜನಿಕ ರಂಗದ ಉದ್ಯಮಗಳನ್ನು ಒಂದೊಂದಾಗಿ ಮುಚ್ಚಲಾಗುತ್ತಿದೆ. ಇನ್ನೊಂದೆಡೆ ಕೃಷಿ ಉತ್ಪಾದನೆ ಕುಸಿಯುತ್ತಿದೆ. ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಸಂಖ್ಯೆ ಹೆಚ್ಚಾಗುತ್ತಿದೆ. ಛತ್ತೀಸ್‌ಗಡ, ಒಡಿಶಾ, ಜಾರ್ಖಂಡ್‌ನಲ್ಲಿರುವ ಅಮೂಲ್ಯ ಗಣಿ ಸಂಪತ್ತು ಕೊಳ್ಳೆ ಹೊಡೆಯಲು ಅವಕಾಶ ನೀಡಲಾಗಿದೆ. ರಾಜ್ಯದ ಸಂಪತ್ತಿನ ಲೂಟಿಯಲ್ಲಿ ಅಂಬಾನಿ, ಅದಾನಿಯ ಜೊತೆಗೆ ಪೈಪೋಟಿಗೆ ಇಳಿದಿರುವ ಹರಿದ್ವಾರದ ಬಾಬಾ ರಾಮದೇವ್‌ಗೆ ಉದ್ಯಮ ಸ್ಥಾಪಿಸಲು ದೇಶದ ಎಲ್ಲ ರಾಜ್ಯಗಳಲ್ಲಿ ಲಕ್ಷಾಂತರ ಎಕರೆ ಭೂಮಿಯನ್ನು ನೀಡಲಾಗಿದೆ. ಅಸ್ಸಾಂ, ಅರುಣಾಚಲದಂತಹ ಪರಿಸರ ಸೂಕ್ಷ್ಮ ದಟ್ಟ ಅರಣ್ಯವುಳ್ಳ ಪ್ರದೇಶಗಳನ್ನು ಇವರ ಮಡಿಲಿಗೆ ಹಾಕಲಾಗಿದೆ.

ಒಂದೆಡೆ ದೇಶದ ಅಮೂಲ್ಯ ಸಂಪತ್ತನ್ನು ಕೊಳ್ಳೆಹೊಡೆಯಲು ಬಂಡವಾಳಶಾಹಿಗಳಿಗೆ ಮುಕ್ತ ಅವಕಾಶ ನೀಡಿದ್ದರೆ, ಇನ್ನೊಂದೆಡೆ ಜಾತ್ಯತೀತ ಜನತಾಂತ್ರಿಕ ಭಾರತವನ್ನು ಮನುವಾದಿ ಹಿಂದೂರಾಷ್ಟ್ರವನ್ನಾಗಿ ಮಾಡಲು ಯೋಜನೆ ರೂಪುಗೊಂಡಿದೆ. ಕಾರ್ಪೊರೇಟ್ ಮತ್ತು ಸಂಘ ಪರಿವಾರದ ಕೋಮುವಾದಿ ಶಕ್ತಿಗಳಿಂದ ದೇಶ ವಿನಾಶದ ಅಂಚಿಗೆ ಬಂದು ನಿಂತಿದೆ. ದೇಶದ ಕೋಟ್ಯಂತರ ಜನರಿಗೆ ತಿರುಪತಿ ನಾಮ ಬಳಿದ ನರೇಂದ್ರ-ಅಮಿತ್ ಶಾ ಜೋಡಿ ತಮ್ಮ ಈ ಸಾಧನೆಗಾಗಿ ಸಂಭ್ರಮಿಸುತ್ತಿದೆ. ಇದು ಈ ದೇಶದ ದುರಂತ. ಜನಸಾಮಾನ್ಯರ ಹೋರಾಟವೊಂದರಿಂದಲೇ ಈ ದೇಶವನ್ನು ಉಳಿಸಿಕೊಳ್ಳಲು ಸಾಧ್ಯ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)