varthabharthi

ಅನುಗಾಲ

ದೇಶಕ್ಕೊಂದು ಜಾತಕ

ವಾರ್ತಾ ಭಾರತಿ : 1 Jun, 2017
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ನನಗೆ ಜಾತಕ-ಗೀತಕ (ಗೀತಕ ಅಂದರೇನು? ಅರ್ಥವಿಲ್ಲ; ಜಾತಕ ಪದದೊಂದಿಗಿನ ಯಮಳ ಪದ, ಅಷ್ಟೇ!) ಗಳಲ್ಲಿ ನಂಬಿಕೆಯಿಲ್ಲ. ಆದರೆ ಕೆಲವೊಮ್ಮೆ ಅಘಟಿತಗಳು ಘಟಿಸುವಾಗ ಇವಕ್ಕೆ ಕಾರಣಗಳೇನು ಎಂದು ತಲೆಕೆರೆದುಕೊಳ್ಳುತ್ತೇನೆ. ಖಂಡಿತ ಹೀಗಾಗಲು ಸಾಧ್ಯವಿಲ್ಲ ಎಂಬುದು ಇದ್ದಕ್ಕಿದ್ದಂತೆ ಸಂಭವಿಸುವಾಗ ಅದರ ಕಾರ್ಯಕಾರಣ ಅರ್ಥವಾಗುವುದಿಲ್ಲ.

ಮೃತ್ಯುಂಜಯ ಜಪ ಪಠಿಸಿ ಯಜ್ಞ ಮಾಡಿದ ತಕ್ಷಣವೇ ಸತ್ತು ಹೋದರೆ ಅದಕ್ಕೆ ಹೊಣೆ ಯಾರು? ಪ್ರಾಯಃ ದೇವರು ಅಥವಾ ದೇವತೆಗಳು (ಎಂಬವರಿದ್ದರೆೆ) ವರ ಅಥವಾ ಶಾಪ ನೀಡುವಾಗ ಅದಕ್ಕೊಂದು ವಿಮುಕ್ತಿಯನ್ನೂ ಕರುಣಿಸು ತ್ತಾರಲ್ಲವೇ? ಅಮರತ್ವ ನೀಡುವಾಗಲೂ ಮನುಷ್ಯನಿಂದ, ಮೃಗದಿಂದ, ಹಗಲು ಹೊತ್ತು, ರಾತ್ರಿ ಹೊತ್ತು, ನೆಲದಲ್ಲಿ, ಆಕಾಶದಲ್ಲಿ, ಮನೆಯೊಳಗೆ, ಹೊರಗೆ ಸಾವು ಬರಬಾರದು ಎಂದೆಲ್ಲ (ಕಂಪೆನಿಗಳ ಶೇರ್ ಅಪ್ಲಿಕೇಷನ್‌ನ ನಿಯಮಾವಳಿಯಂತೆ) ಷರತ್ತುಗಳಿದ್ದರೂ ವರಬಲ ಗರ್ವಿತನ ನಿರ್ನಾಮಕ್ಕೆ ಮನುಷ್ಯನೂ ಅಲ್ಲದ, ಮೃಗವೂ ಅಲ್ಲದ ನರಸಿಂಹಾವತಾರ ತಾಳಿ, ಹಗಲು-ಇರುಳುಗಳ ನಡುವಣ ಮುಸ್ಸಂಜೆ, ಹೊರಗು-ಒಳಗಿನ ನಡುವಣ ಹೊಸ್ತಿಲಲ್ಲಿ, ನೆಲ-ಆಗಸದ ನಡುವೆ ತೊಡೆಯ ಮೇಲೆ ಮಲಗಿಸಿ ಸಂಹರಿಸಿದ್ದು ಪುರಾಣ. ಹೀಗೆಯೆ ರಾಜ್ಯ-ಸಾಮ್ರಾಜ್ಯಗಳ ಉಳಿವು-ಅಳಿವು ಕೂಡಾ ಒಂದು ಅರ್ಥವಾಗದ ರಹಸ್ಯ. ಪ್ರತಿಯೊಬ್ಬ ದೊರೆಯೂ ತಾನು ಮತ್ತು ತನ್ನ ಆಳ್ವಿಕೆ ಶಾಶ್ವತವಲ್ಲದಿದ್ದರೂ ಅದು ತನ್ನ ವಂಶ ಪಾರಂಪರ್ಯವಾಗಿ ಸೂರ್ಯಚಂದ್ರರಿರುವಲ್ಲಿಯವರೆಗೆ ಮುಂದುವರಿಯುತ್ತದೆಂದು ಲೆಕ್ಕ ಹಾಕಿದ್ದರು ಮತ್ತು ಇದನ್ನು ಶಾಸನದಲ್ಲಿ ಕೆತ್ತಿ ಉಳಿಸುವ ಪ್ರಯತ್ನ ಮಾಡಿದ್ದರು. ಆದರೆ ಇದ್ಯಾವುದೂ ಉಳಿಯಲಿಲ್ಲ.

ಇನ್ನು ನಿತ್ಯ ಉದಯಿಸುವ ರವಿ ಕಂಡಿದ್ದ; ಮತ್ತು ಜನರ ಅನಧಿಕೃತ ಪ್ರತಿನಿಧಿಗಳೆಂಬಂತಿರುವ ಕವಿಗಳೂ ಕಂಡಿದ್ದರು. ಪಂಪನ ಆದಿಪುರಾಣದಲ್ಲಿ ಭರತನು ತನ್ನ ವಿಜಯಧ್ವಜವನ್ನೂರಲು ಗಿರಿಯ ಶಿಖರಕ್ಕೆ ಹೋದರೆ ಅಲ್ಲಿ ಧ್ವಜವೂರಲೂ ಜಾಗವಿರದಷ್ಟು ವಿಜಯಧ್ವಜಗಳು ಇದ್ದುವೆಂಬ ವರ್ಣನೆ ಯಿದೆ. ಪುರಂದರದಾಸರು ತಮ್ಮ ಒಂದು ಕೀರ್ತನೆಯಲ್ಲಿ ‘‘ಮುನ್ನ ಶತಕೋಟಿ ರಾಯರುಗಳಾಳಿದ ನೆಲವ ತನ್ನದೆಂದೆಣಿಸುತ್ತ ಶಾಸನವ ಬರೆಸಿ’’ ಎಂದು ಇದನ್ನೇ ಹೇಳಿದ್ದಾರೆ. ಬೇಂದ್ರೆಯವರು ತಮ್ಮ ಕವಿತೆಯಲ್ಲಿ ಕಾಲದ ಬಲೆಗೆ ಸಿಕ್ಕಿ ಮುಪ್ಪುರಿಗೊಳ್ಳುವ ಈ ಪತನದ ಕಥೆಯನ್ನು ‘‘ರಾಜ್ಯದ ಸಾಮ್ರಾ ಜ್ಯದ ತೆನೆ ಒಕ್ಕಿ ಮಂಡಲ-ಗಿಂಡಲಗಳ ಗಡ ಮುಕ್ಕಿ ತೇಲಿಸಿ ಮುಳುಗಿಸಿ ಖಂಡ-ಖಂಡಗಳ ಸಾರ್ವಭೌಮರಾ ನೆತ್ತಿಯ ಕುಕ್ಕಿ ಹಕ್ಕಿ ಹಾರುತಿದೆ ನೋಡಿದಿರಾ?’’ ಎಂಬ ಭಯಾನಕ ರೂಪಕದ ಮೂಲಕ ಕಾಣಿಸಿದ್ದಾರೆ.

ವಿಶ್ವದ ಎಲ್ಲೆಡೆ ಪುರಾಣಗಳು ಇಂತಹ ಕಥೆಗಳನ್ನು ಹೇಳಿದರೂ, ಇತಿಹಾಸದುದ್ದಕ್ಕೂ ಮೆರೆದ ಮಂದಿ ಭೀಕರ ನಾಶಕ್ಕೆ ತುತ್ತಾದರೂ ಜನರು ಭಯಭೀತರಾಗಿಲ್ಲವೆಂಬುದೇ ಬೆರಗಿನ ವಿಚಾರ. ವಿಶ್ವವಿಜೇತರೆನಿಸಿದವರೂ ನಿರ್ನಾಮ ಹೊಂದಿದ್ದಾರೆ; ಅಲೆಗ್ಸಾಂಡರ್, ಚೆಂಗೀಸ್ ಖಾನ್, ಜೂಲಿಯಸ್ ಸೀಸರ್ ಮುಂತಾದ ಅಪ್ರತಿಮರೆನಿಸಿದ ವೀರ ಚಕ್ರವರ್ತಿಗಳು ಕೊನೆಗೆ ತಮ್ಮ ವಂಶದ ಒಬ್ಬ ಕುಡಿಯೂ ಉಳಿಯುವಷ್ಟು ಸ್ಥಿರತೆಯನ್ನು ಕಾಪಾಡಲಾಗಲಿಲ್ಲ.

ಮೊಗಲರೂ ಸೇರಿದಂತೆ ಭಾರತದಲ್ಲಿ ಆಳಿದ ಬಹಳಷ್ಟು ಚಕ್ರಾಧಿಪತ್ಯಗಳು ದಿಲ್ಲಿಯಲ್ಲೇ ಅಳಿದರು. ಪೋರ್ಚುಗೀಸರಾಗಲಿ, ಡಚ್ಚರಾಗಲಿ, ಫ್ರೆಂಚರಾಗಲಿ, ಇವರೆಲ್ಲರಿಗಿಂತ ಹೆಚ್ಚು ಕಾಲ ವಸಾಹತುಶಾಹಿ ಯನ್ನು ಬೆಳೆಸಿದ, ಸೂರ್ಯ ಮುಳುಗದ ಚಕ್ರಾಧಿಪತ್ಯದ ಗರ್ವದ ಬ್ರಿಟಿಷರಾಗಲಿ ತಮ್ಮ ಇರವನ್ನು ಮರೆತು ಬಿಲಸೇರಿದರು. ಒಮ್ಮೆ ಈ ಎಲ್ಲ ಬೆಳವಣಿಗೆಯನ್ನು ಗಮನಿಸಿದರೆ ಸರಿ ಸುಮಾರು ಏಳು ತಲೆಮಾರಿಗಿಂತ ಹೆಚ್ಚು ಯಾವ ವಂಶವೂ ಉಳಿದಂತೆ ಕಾಣುವುದಿಲ್ಲ. ಹಾಗೆ ನೋಡಿದರೆ ಪ್ರಾಣಿಗಳು, ಮನುಷ್ಯರು ಉಳಿದು ಬಂದಿದ್ದಾರೆ. ಸಮರ್ಥ ಮತ್ತು ಶಕ್ತಿಶಾಲಿ ಪ್ರಾಣಿಗಳೆಂದು ನಂಬುವ ಡೈನೊಸಾರ್‌ನಂತಹ ಪ್ರಾಣಿಗಳೇ ನಶಿಸಿದ್ದಾವೆಂಬುದನ್ನು ಗಮನಿಸಿದರೆ ಉಳಿವಿಗೂ ಅಳಿವಿಗೂ ಯಾವುದೇ ತರ್ಕ ಬೇಕಿಲ್ಲವೆಂದು ಕಾಣುತ್ತದೆ. ಒಂದು ರೀತಿಯಲ್ಲಿ ಎಲ್ಲವೂ ಬಾಂಡ್ ಸಿನೆಮಾದ ಹೀರೋವಿನ ಹಾಗೆ ಇನ್ನೊಂದು ದಿನ ಬದುಕುವ ಅವಕಾಶಗಳು, ಅಷ್ಟೇ.

ಭಾರತದಂತಹ ದೇಶ ಬ್ರಿಟಿಷರು ಬಿಟ್ಟು ಹೋಗುವಾಗ ಉದಿಸಿದ ಕೂಸು. ನಮ್ಮಲ್ಲನೇಕರು ಭವ್ಯಭಾರತದ ಪರಂಪರೆ ಹಾಗೂ ವಿಶ್ವಕ್ಕೆ ಭಾರತದ ಕೊಡುಗೆ ಎಂದೆಲ್ಲ ಮಾತನಾಡುವಾಗ, ವಾದಿಸುವಾಗ, ಭಾರತ ಎಂಬ ಅಮೂರ್ತ ಕಲ್ಪನೆಯಷ್ಟೇ ಇಂತಹ ಆಡು-ನುಡಿಗಳಿಗೆ ಪ್ರೇರಣೆಯೆಂಬ ಸಂಶಯವು ಹುಟ್ಟುತ್ತದೆ. ಭಾರತ ಭೂಖಂಡವು ಅನೇಕ ಚಿಕ್ಕ-ದೊಡ್ಡ ರಾಜ್ಯಗಳ, ಸಂಸ್ಥಾನಗಳ, ಪಾಳೆಯಗಳ ಒಂದು ಭೂಪ್ರದೇಶವಾಗಿದ್ದಿತು. ಇಲ್ಲಿ ಪರಸ್ಪರ ಹೊಡೆದಾಡಿಕೊಳ್ಳುತ್ತಲೂ ತಮ್ಮ ತಮ್ಮ ಅಸ್ತಿತ್ವವನ್ನು ಕಲಾತ್ಮಕವಾಗಿ ಬಿಂಬಿಸಿಕೊಳ್ಳಲು ಅರಸೊತ್ತಿಗೆಗಳು ಮಾಡಿದ ಯತ್ನಗಳೇ ಸಂಸ್ಕೃತಿಯ ಉಗಮ, ವಿಕಾಸ ಮತ್ತು ಪ್ರಸಾರಕ್ಕೆ ಕಾರಣವಾದವು.

ಇವೆಲ್ಲವೂ ಒಟ್ಟಾಗಿ ಭಾರತವೆಂದು ಎಂದೂ ಕರೆಸಿಕೊಳ್ಳಲಿಲ್ಲ. ಆಗ ವಿಜಯನಗರವಿದ್ದಿತು, ಮರಾಠಾ ಸಂಸ್ಥಾನವಿದ್ದಿತು, ಇಂತಹ ಹತ್ತು-ಹಲವು ಮಾತ್ರವಲ್ಲ ನೂರಾರು ಆಳ್ವಿಕೆಗಳು ಉಗಮಿಸಿ ಹೃಸ್ವ-ದೀರ್ಘ ಪರಂಪರೆಯನ್ನು ಬಿಟ್ಟುಹೋದವು. ಆದ್ದರಿಂದ ಯಾವುದೇ ಭೂಭಾಗವನ್ನು ಹುಡುಕಿದರೂ ಅಲ್ಲಿ ಇಂತಹ ಸಂಸ್ಕೃತಿಯೇ ಇದ್ದಿತೆಂಬ ಭಾವ ಹೊಮ್ಮಲು ಸಾಧ್ಯವಿಲ್ಲ. ಉಳಿದ ದೇವಸ್ಥಾನಗಳು ಒಂದೊಂದು ಕಾಲದ ಧಾರ್ಮಿಕ ನಂಬಿಕೆಗಳ ಕುರುಹೇ ಹೊರತು ಅವೇ ಶಾಶ್ವತ ಸಂಸ್ಕೃತಿ ಎಂದಲ್ಲ. ನಮ್ಮಲ್ಲಿರುವ ನೂರಾರು ವಿಭಿನ್ನ ಕಲಾ ಪ್ರಕಾರಗಳನ್ನು ಗಮನಿಸಿದರೂ ಈ ವೈವಿಧ್ಯ ಕಂಡುಬರುತ್ತದೆ. ಆಯಾಯ ಕಾಲದ, ಆಯಾಯ ಪ್ರದೇಶದ ಜನರು, ಆಳುವವರು ಬಾಳಿಸಿದ ಕಲೆಗಳು ಅಲ್ಲ್ಲಿಯ ಜಾನಪದ ಇಲ್ಲವೆ ಶಿಷ್ಟ ಕಲೆಗಳಾಗಿ ಉಳಿದಿವೆ.

ಇವುಗಳ ಮುಂದುವರಿಕೆಯ ಮಾಧ್ಯಮಗಳು ಅನಕ್ಷರಸ್ಥರೂ ಇರಬಹುದು; ಸುಶಿಕ್ಷಿತರೂ ಇರಬಹುದು. ನಾವು ಬಳಸುವ ಭಾಷೆಯನ್ನೇ ಉದಾಹರಿಸಿದರೂ ಕೆಲವು ಉಳಿದಿವೆ, ಕೆಲವು ಅಳಿದಿವೆ; ಉಳಿದವು ಅಳಿದವುಗಳಿಗಿಂತ ಶ್ರೇಷ್ಠವೆಂದಲ್ಲ. ಬಹಳ ಒಳ್ಳೆಯ ಮತ್ತು ಬಳಸಲು ಸುಲಭವಾದ ಭಾಷೆಯೆಂದು ಕೆಲವಾದರೂ ಪಂಡಿತರು ಉಲ್ಲೇಖಿಸುವ ಸಂಸ್ಕೃತವು ಉಳಿದಿದೆಯೋ ಎಂದರೆ ಉಳಿದಿದೆ; ಹಾಗೆಂದು ಸಾರ್ವತ್ರಿಕವಾಗಿ ಬಳಸಲ್ಪಡುವುದಿಲ್ಲ. ಹಠ ಕಟ್ಟಿ ಬಳಸಿದರೂ ಅದು ಜನಮಾನಸದ ಮೂಲಕವೇ ಭವಿಷ್ಯಕ್ಕೆ ಹಾದಿ ಹುಡುಕಿಕೊಂಡು ಹೋಗಬೇಕೇ ವಿನಾ ಕಾಲಕೋಶದಲ್ಲಿಟ್ಟು ಜತನದಿಂದ ಕಾಪಾಡಿದರೂ ಗೋವಾದ ಚರ್ಚಿನಲ್ಲಿ ಐದೋ ಆರೋ ಶತಮಾನಗಳಿಂದ ಕಾದಿರಿಸಿದ ಪ್ರವಾದಿಯ ದೇಹಕ್ಕಿಂತ ಹೆಚ್ಚೇನೂ ಸಾಧನೆಗೊಳ್ಳದು; ಉಳಿಯಲಾರದು. ಇಂದಿರುವವೆಲ್ಲ ಶ್ರೇಷ್ಠವೆಂದಾಗಲೀ ಆರಂಭದಿಂದಲೂ ಇದ್ದವೆಂದೂ ಅರ್ಥವಲ್ಲ. ಹೊಳೆದದ್ದು ತಾರೆ; ಉಳಿದದ್ದು ಆಕಾಶ ಎಂಬಂತೆ ಈ ಉಳಿದ ಕಲೆಗಳನ್ನು ನಾವು ಶಾಶ್ವತದ ನಕ್ಷತ್ರಗಳಂತೆ ವಿವರಿಸುತ್ತೇವೆ; ನಿರೂಪಿಸುತ್ತೇವೆ. ಅಳಿದ ಪ್ರಕಾರಗಳು ಇವಕ್ಕೂ ನೂರ್ಪಟ್ಟು ಶ್ರೇಷ್ಠವಾಗಿದ್ದವೋ ಯಾರು ಬಲ್ಲರು?

ಒಂದು ಭಾಷೆ, ಒಂದು ಸಂಸ್ಕೃತಿ, ಒಂದು ಜನಸಮುದಾಯ, ಒಂದು ಕಲೆ ಯಾಕೆ ಉಳಿಯುತ್ತದೆ, ಯಾಕೆ ಅಳಿಯುತ್ತದೆ ಎಂಬುದನ್ನು ಡಾರ್ವಿನ್‌ನಾಗಲೀ ಉಳಿದ ಪ್ರಮೇಯಕಾರರಾಗಲೀ ಸಮರ್ಥವಾಗಿ ನಿರೂಪಿಸಲಾಗುವುದಿಲ್ಲ. ಭವಿಷ್ಯದಲ್ಲಿ ಯಾವುದು ಉಳಿದೀತು, ಯಾವುದು ಅಳಿದೀತು ಗೊತ್ತಿಲ್ಲ. ಹಿಂದೆ ನಾವು ಬಳಸಿಕೊಂಡು ಬಂದ ಗುಡಿಕೈಗಾರಿಕೆಗಳು ಇಂದು ಮ್ಯೂಸಿಯಂನಲ್ಲೂ ಕಾಣಸಿಗುವುದಿಲ್ಲ. ವಿಜ್ಞಾನವು ಜನಜೀವನವನ್ನು ಎಷ್ಟು ಪ್ರಭಾವಿಸಿದೆಯೆಂದರೆ ಯಾವುದೂ ತತ್ಕಾಲೀನ ಸಂಗಾತಿಯೆನಿಸಿದೆ. ಪೇಜರ್, ಕ್ಯಾಸೆಟ್, ಟೇಪ್ ರೆಕಾರ್ಡರ್ ಎಲ್ಲಿ ಹೋದವು? ಎತ್ತಿನ ಗಾಡಿ, ಕುದುರೆ ಟಾಂಗಾ, ಇವೆಯೇ? ಟೆಲಿಗ್ರಾಂ ಸತ್ತೇ ಹೋಯಿತು. ಬದುಕಿನ ಅವಿನಾಭಾವ ಸಂಬಂಧಿಯಂತಿದ್ದ ರೇಡಿಯೋ, ಪತ್ರಿಕೆಗಳು, ಟಿವಿ, ಅಂಚೆ ಕಚೇರಿಗಳು, ಪತ್ರಗಳು, ಸಂಗೀತದ ಉಪಕರಣಗಳು ಎಲ್ಲವೂ ನಿಧಾನವಾಗಿಯಾದರೂ ಮಾಯವಾಗುವ ವಸ್ತುಗಳೇ. ಕೊರಿಯರ್ ಬಂದ ನಂತರ ಅಂಚೆ ಚೀಟಿಗಳು ಮರೆತುಹೋಗುತ್ತಿವೆ. ಯಾವುದೂ ಒಂದು ತಲೆಮಾರಿನಷ್ಟು ಉದ್ದಕ್ಕೂ ಹಾಸಿ ನಿಲ್ಲಲಾರವು ಎಂಬಂತೆ ಈ ಜಗತ್ತು ಬದಲಾಗುತ್ತಿದೆ.

ಇಷ್ಟೆಲ್ಲ ಇದ್ದರೂ ದೇಶ-ರಾಜ್ಯಗಳನ್ನು ಆಳುವ ಧೀರರು ತಾವು ಶಾಶ್ವತವೆಂಬಂತೆ ಮಾತನಾಡುವಾಗ ಮತ್ತು ತಮ್ಮನ್ನು ಚಿರಯುವಕರಾಗಿಸಿ, ಸ್ಥಿರಾಯುಗಳಾಗಿ ಬದುಕಿಸಿ ಉಳಿಸುವ ಪ್ರಚಾರ-ಪ್ರಸಾರವನ್ನು ಕೈಗೊಳ್ಳುವಾಗ ಅಚ್ಚರಿ ಮತ್ತು ವಿಷಾದವಾಗುತ್ತದೆ. ಈ ದೇಶ ಹೀಗೇ ಉಳಿಯುತ್ತದೆಯೆಂಬುದಕ್ಕೆ ಏನು ಅಧಾರವಿದೆ? ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಯಾವುದನ್ನು ಉಳಿಸಿಕೊಳ್ಳುತ್ತೇವೆಂದು ನಾವು ಹಟಕಟ್ಟುತ್ತೇವೋ ಅದು ನಮ್ಮದೇ ಆಗಿ ಉಳಿಯುತ್ತದೆಂಬುದಕ್ಕೆ ಏನು ಖಾತ್ರಿಯಿದೆ? ಬುದ್ಧ-ಮಹಾವೀರ-ಬಸವರೇ ಸಮಾಜದಲ್ಲಿ ಜನರು ತಮ್ಮನ್ನು ಉಳಿಸಿಕೊಳ್ಳುವುದಕ್ಕಾಗಿ ಇತರರನ್ನು ನಾಶಗೊಳಿಸುವ ಪ್ರವೃತ್ತಿಯನ್ನು ಮತ್ತು ಸಾಮಾಜಿಕ ಸಮುದ್ರ ಮಥನದಲ್ಲಿ ಹುಟ್ಟುವ ಈ ವಿಷಸಂಚಾರದ ಅನಿವಾರ್ಯತೆಯನ್ನು ಮನಗಂಡು ಎಲ್ಲರಿಂದ ದೂರ ನಡೆಯುವ ಪ್ರಯತ್ನಮಾಡಿದರು.

ಅವರು ಉಳಿಯಲಿಲ್ಲ; ಅವರ ತತ್ವ ಚಿಂತನೆಗಳೂ ಜಗತ್ತಿನಲ್ಲಿ- ಹೋಗಲಿ, ಅವರು ಬದುಕುಳಿದ ಭೂಪ್ರದೇಶದಲ್ಲಿ, ಸೀಮಿತ ಪರಿಧಿಯಲ್ಲೂ ಶಾಶ್ವತ ಶಾಂತಿಯನ್ನು ಸ್ಥಾಪಿಸಲು ಯಶಸ್ವಿಯಾಗಲಿಲ್ಲ. ಮಾರ್ಕಂಡೇಯನಿಗೆ ಹದಿನಾರು ವರ್ಷ ಆಯುಷ್ಯವೆಂದರೂ ಶಿವಲಿಂಗವನ್ನು ಬಳಸಿ ಮೊರೆಯಿಟ್ಟದ್ದಕ್ಕೆ ಉಳಿದನೆಂಬ ಕಥೆಯಿದೆ. ಈಗ ಆತನ ಜಾತಕದ ಕಥೆಯೇನಾಯಿತು? ಸತ್ಯವಾನನ ಸಾವು ಯಮನ ಲೆಕ್ಕಕ್ಕೆ ಸಿಕ್ಕಲೇ ಇಲ್ಲ. ನೇರ ಬದುಕಿನ ಖಾತೆಗೆ ಮರಳಿತು. ಯಮಲೋಕಕ್ಕೆ ಹೋದ ಉಪನಿಷತ್ತಿನ ನಚಿಕೇತನು ತನ್ನ ಹೆಸರಿನ ಅಗ್ನಿಯನ್ನು ಹೊತ್ತು ಭೂಮಿಗೆ ಬಂದನಂತೆ. ಇವೆಲ್ಲ ತರ್ಕವನ್ನು ಮೀರಿದ ಮೀಮಾಂಸೆಗಳು. ನಮ್ಮನ್ನು ಮೀರಿದ- ವಿಧಿಯೆಂದು ಆಸ್ತಿಕರು ಹೇಳುವ, ಪ್ರಕೃತಿಯೆಂದು ಪ್ರಜ್ಞಾವಂತರು, ವಿಜ್ಞಾನಿಗಳು ಹೇಳುವ ಒಂದು ವಿಶೇಷ ಶಕ್ತಿ ಎಲ್ಲ ಸತ್ಯಗಳನ್ನೂ ವರ್ತಮಾನಕ್ಕೆ ಸೀಮಿತಗೊಳಿಸಿ ಭವಿಷ್ಯದಲ್ಲಿ ಸುಳ್ಳಾಗಿಸಬಲ್ಲುದು. ಅದಕ್ಕೇ ಕುವೆಂಪು ‘‘ನಿನ್ನೆ ನಿನ್ನೆಗೆ, ಇಂದು ಇಂದಿಗೆ, ಇರಲಿ ನಾಳೆಯು ನಾಳೆೆಗೆ’’ ಎಂದರು.

ಒಂದು ದೇಶದ ಕಥೆ ಇದಕ್ಕೆ ಹೊರತಾಗುವುದಿಲ್ಲ. ನನ್ನ ಹಿರಿಯ ಸ್ನೇಹಿತ ರೊಬ್ಬರು(ಅವರು ಕೃಷಿ ವಿಜ್ಞಾನಿ.) ಈ ದೇಶದ ಎಲ್ಲ ಪಾಡುಗಳನ್ನು ಗಮನಿಸುತ್ತ ಇದೆಲ್ಲ ಯಾಕೆ ಹೀಗೆ ಆಗುತ್ತಿದೆ ಎಂದರೆ ಅದು ದೇಶದ ಜಾತಕ ಎನ್ನುತ್ತಿದ್ದರು. ಮನುಷ್ಯನಿಗೆ ಜಾತಕ ಇದೆಯೆಂದೂ ಹಾಗೆಯೇ ದೇಶಕ್ಕೂ ಒಂದು ಜಾತಕವಿದೆ ಎನ್ನುತ್ತಿದ್ದರು. ಈ ದೇಶ 1947ರಲ್ಲಿ ಹುಟ್ಟಿದ್ದು ಅದಿನ್ನು ಎಷ್ಟು ಕಾಲ ಉಳಿಯುತ್ತದೋ ಆ ಜಾತಕ ಸೃಷ್ಟಿಸಿದ ವನೇ ಬಲ್ಲ ಎಂದು ನಿಟ್ಟುರಿಸಿಟ್ಟು ಉದ್ಗರಿಸುತ್ತಿದ್ದರು. ಇಲ್ಲಿರುವ ಎಲ್ಲ ಲೋಪದೋಷಗಳೂ, ರಕ್ತಸಿಕ್ತ ಕೇಡುಗಳೂ ಭ್ರಷ್ಟಾಚಾರವೇ ಮುಂತಾದ ಪಿಡುಗುಗಳೂ ಮನುಷ್ಯ ನಿರ್ಮಿತವೆಂದು ಮತ್ತು ಅವನ್ನು ನಾವು ಪ್ರಯತ್ನಿಸಿದರೆ ಪರಿಹರಿಸಬಲ್ಲೆವೆಂದು ನಾನು ವಾದಿಸಿದರೆ, ಅವೆಲ್ಲ ನಿಮ್ಮ ಆಸೆಗಳಷ್ಟೇ ಹೊರತು ಅವು ಪರಿಹಾರವಾಗುವ ಕಾಲಕ್ಕೇ ಪರಿಹಾರವಾಗುತ್ತವೆ-ಆಗಬೇಕೆಂದಿದ್ದರೆ ಎಂದು ನನಗೆ ಸಮಾಧಾನ ಮತ್ತು ಸಮಜಾಯಿಷಿಕೆ ಹೇಳುತ್ತಿದ್ದರು.

ಅವರ ಮಾತುಗಳು ಆಕರ್ಷಕ ಮತ್ತು ಚಿಂತಿಸತಕ್ಕದ್ದು ಎಂದನ್ನಿಸಿದಾಗಲೂ ನಾನವರ ಮಾತನ್ನು ನಂಬಿರಲಿಲ್ಲ. ನಂಬಲು ಮನಸ್ಸೂ ಬರುವುದಿಲ್ಲ- ಒಂದು ಥರದ ಭಯದಿಂದ. ಆದರೆ ‘‘ಯುಗಯುಗಗಳ ಹಣೆಬರೆಹವ ಒರಸಿಮನ್ವಂತರಗಳ ಭಾಗ್ಯವ ತೆರೆಸಿ ರೆಕ್ಕೆಯ ಬೀಸುವ ಚೇತನೆಗೊಳಿಸಿಹೊಸಗಾಲದ ಹಸುಮಕ್ಕಳ ಹರಸಿ’’ ಹಾರುವ ಕಾಲವೆಂಬ ಹಕ್ಕಿಯನ್ನು ನೋಡುವಾಗ ನಮ್ಮ ನಿರೀಕ್ಷೆಯನ್ನು, ಕಲ್ಪನೆಯನ್ನು ಧಿಕ್ಕರಿಸಿ ಸಾಗುವ ಮಾಯಾಜಾಲವೊಂದಿದೆಯೆಂದು ಅನ್ನಿಸುವುದು ಅಸಹಜವೇನಲ್ಲ. ಹೀಗೆ ನಂಬಿಕೆ ಮತ್ತು ಅಪನಂಬಿಕೆಗಳ ಘಟನಾವಳಿಗಳ ದಡಿಗವೆಣಂಗಳ ನಡುವೆ ಶ್ಮಶಾನ ಕುರುಕ್ಷೇತ್ರದಲ್ಲಿ ಕಾಲಿಡುತ್ತ ನಡೆಯುವಾಗ ಹದಿನೆಂಟನೆಯ ದಿನದ ಕೌರವನ ಒಂಟಿತನ ಕಾಡಿದರೂ ಅಚ್ಚರಿಯಿಲ್ಲ- ಅಲ್ಲವೇ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)