varthabharthi

ದಿಲ್ಲಿ ದರ್ಬಾರ್

ದಿಲ್ಲಿ ದರ್ಬಾರ್

ವಾರ್ತಾ ಭಾರತಿ : 4 Jun, 2017

ಶರದ್ ಯಾದವ್ ರಾಷ್ಟ್ರಪತಿ ಅಭ್ಯರ್ಥಿ?

 ರಾಷ್ಟ್ರಪತಿ ಚುನಾವಣೆ ಬಗೆಗಿನ ಕಾರ್ಯತಂತ್ರದ ಬಗ್ಗೆ ಚರ್ಚಿಸಲು ಇತ್ತೀಚೆಗೆ 17 ಪ್ರತಿಪಕ್ಷಗಳು ಸಭೆ ಸೇರಿದ್ದವು. ಒಂದು ವೇಳೆ ಪ್ರಧಾನಿ ಆರೆಸ್ಸೆಸ್ ನಂಟಿರುವ ವ್ಯಕ್ತಿಯನ್ನು ಆಡಳಿತಾರೂಢ ಎನ್‌ಡಿಎ ಒಕ್ಕೂಟದ ರಾಷ್ಟ್ರಪತಿ ಅಭ್ಯರ್ಥಿಯೆಂದು ಹೆಸರಿಸಿದಲ್ಲಿ, ಶರದ್ ಯಾವವ್‌ರನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಬಗ್ಗೆ ಅವು ಗಂಭೀರವಾಗಿ ಯೋಚಿಸುತ್ತಿವೆ. ಪ್ರತಿಪಕ್ಷಗಳ ಈ ಆಯ್ಕೆ ವಿಚಿತ್ರವೆಂಬಂತೆ ಕಾಣಬಹುದು. ಆದರೆ ಇದಕ್ಕೆೆ ಕಾರಣವೂ ಇದೆ.

ಯುವ ಸಮಾಜವಾದಿ ನಾಯಕನಾಗಿದ್ದ ಶರದ್ ಯಾದವ್ ಅವರು ಜಬಲ್‌ಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧ ಜಯಗಳಿಸುವ ಮೂಲಕ ಜಯಪ್ರಕಾಶ್ ನಾರಾಯಣ್ ನೇತೃತ್ವದ ಸರ್ವೋದಯ ಚಳವಳಿಯ ಕಿಡಿ ಹಚ್ಚಿದ್ದರು. ಆದರೆ ಶರದ್ ಯಾದವ್ ಅವರ ‘ಧಣಿ’ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನಿಲುವೇನೆಂಬುದು ಇನ್ನೂ ಸ್ಪಷ್ಟವಾಗಿಲ್ಲ. ಯಾದವ್ ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿ ನಿತೀಶ್ ಕುಮಾರ್ ಅನುಮೋದಿಸುವ ಬಗ್ಗೆ ಬಲವಾದ ಸಂದೇಹಗಳು ಮೂಡಿವೆ. ಇತ್ತೀಚಿನ ದಿನಗಳಲ್ಲಿ ನಿತೀಶ್ ಅವರು ತನ್ನ ಮಾಜಿ ಜೊತೆಗಾರನಾದ ಬಿಜೆಪಿಗೆ ಹತ್ತಿರವಾಗುತ್ತಿದ್ದಾರೆಂಬ ಪಿಸುಮಾತುಗಳು ಕೇಳಿಬರುತ್ತಿವೆ. ಸೋನಿಯಾ ಗಾಂಧಿ ಇತ್ತೀಚೆಗೆ ಏರ್ಪಡಿಸಿದ್ದ ಭೋಜನಕೂಟಕ್ಕೆ ಗೈರು ಹಾಜರಾಗಿದ್ದ ನಿತೀಶ್, ಪ್ರಧಾನಿ ನರೇಂದ್ರ ಮೋದಿ ಆತಿಥ್ಯದಲ್ಲಿ ನಡೆದ ಇದೇ ರೀತಿಯ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡು ಹಲವರ ಹುಬ್ಬೇರಿಸಿದ್ದರು. ಖಂಡಿತವಾಗಿಯೂ ಇದು ಶರದ್ ಯಾದವ್ ಅವರಿಗಾಗಲಿ ಅಥವಾ ಒಗ್ಗಟ್ಟಿನಲ್ಲಿರುವ ಪ್ರತಿಪಕ್ಷಗಳಿಗಾಗಲಿ ಒಳ್ಳೆಯ ಸುದ್ದಿಯಾಗಲಾರದು.

 ಆರ್‌ಜಿ ಅಥವಾ ಪಿಜಿವಿ... ಹೆಸರಲ್ಲೇನಿದೆ?

 ರಾಹುಲ್‌ಗಾಂಧಿ ನೇತೃತ್ವದ ಕಾಂಗ್ರೆಸ್‌ನಲ್ಲಿ ನಾಯಕರನ್ನು ಸಂಕ್ಷಿಪ್ತ ಹೆಸರುಗಳಿಂದ ಕರೆಯುವುದು ಈಗೀಗ ಹೆಚ್ಚು ರೂಢಿಯಲ್ಲಿದೆ. ರಕಬ್‌ಗಂಜ್ ಮಾರ್ಗ್ ( ಕಾಂಗ್ರೆಸ್‌ನ ಕಾರ್ಯತಂತ್ರ ಕೊಠಡಿ), 24 ಅಕ್ಬರ್ ರೋಡ್ (ಕಾಂಗ್ರೆಸ್ ಪ್ರಧಾನ ಕಾರ್ಯಾಲಯ) ಹಾಗೂ 12 ತುಘಲಕ್ ಲೇನ್ (ರಾಹುಲ್‌ರ ನಿವಾಸ ಹಾಗೂ ಕಚೇರಿ)ಗಳಲ್ಲಿ ಸ್ವತಃ ರಾಹುಲ್ ಆರ್‌ಜಿ ಎಂಬ ಸಂಕ್ಷಿಪ್ತ ಹೆಸರಿನಿಂದ ಕರೆಯಲ್ಪಡುತ್ತಿದ್ದಾರೆ. ಅದೇ ರೀತಿಯಲ್ಲಿ ರಾಹುಲ್‌ರ ಸೋದರಿ ಪ್ರಿಯಾಂಕಾ ಪಿಜಿವಿ ಎಂದು ಕರೆಯಲ್ಪಡುತ್ತಿದ್ದರೆ, ಅವರ ತಾಯಿ ಸೋನಿ ಸಿಪಿ (ಕಾಂಗ್ರೆಸ್ ಅಧ್ಯಕ್ಷೆ) ಎನಿಸಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ನಮೋ ಎಂಬ ಸಂಕ್ಷಿಪ್ತ ಹೆಸರಿನಿಂದ ಇಡೀ ದೇಶವನ್ನು ಮೋಡಿ ಮಾಡಿದಾಗಿನಿಂದ ಕಾಂಗ್ರೆಸ್‌ನಲ್ಲಿ ಈ ಪ್ರವೃತ್ತಿ ಹೆಚ್ಚಿದೆಯೆಂದು ವದಂತಿಗಳನ್ನು ಹರಡುವ ಕಿಡಿಗೇಡಿಗಳ ಅಂಬೋಣ. ಆದರೆ ಇಂತಹ ಸಂಕ್ಷಿಪ್ತ ನಾಮಗಳ ಬಗ್ಗೆ ಎಲ್ಲರೂ ಸಂತಸಗೊಂಡಿರುವಂತೆ ಕಾಣುತ್ತಿಲ್ಲ. ಮೋತಿಲಾಲ್ ವೋರಾ ಬಳಿಕ ಪಕ್ಷದ ಕೋಶಾಧಿಕಾರಿ ಸ್ಥಾನಕ್ಕೆ ನೇಮಕಗೊಳ್ಳಲಿರುವ ಕಾನಿಷ್ಕ ಸಿಂಗ್‌ಗೆ ತನ್ನನ್ನು ಸರಳವಾಗಿ ‘ಕೆ’ ಎಂದು ಕರೆಯುವುದು ಅವರಿಗೆ ಇಷ್ಟವಿಲ್ಲವಂತೆ. ಪಕ್ಷದಲ್ಲಿ ತಲೆಮಾರುಗಳು ಬದಲಾದ ಹಾಗೆ ಇಂತಹ ಹೆಸರುಗಳು ಹರಿದಾಡುವುದು ಸಾಮಾನ್ಯ. ಆದರೆ ಇದರಿಂದ ಪಕ್ಷದಲ್ಲಿ ಏನಾದರೂ ಬದಲಾವಣೆಯಾಗಲು ಸಾಧ್ಯವೇ ಎಂಬುದು ಇಲ್ಲಿ ಉದ್ಭವಿಸುವ ಮುಖ್ಯ ಪ್ರಶ್ನೆಯಾಗಿದೆ.

ರಾಜನಾಥ್‌ಸಿಂಗ್ ಉಡುಪು ಸಂಹಿತೆ

   ದೇಶದೊಳಗಿನ ಭದ್ರತಾ ವ್ಯವಸ್ಥೆಯನ್ನು ನಿಭಾಯಿಸುವ ವಿಷಯದಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್‌ಸಿಂಗ್ ಹಲವರಿಂದ ಅಪಹಾಸ್ಯಕ್ಕೊಳಗಾಗಿರಬಹುದು. ಆದರೆ ಕೆಲವು ವಿಷಯಗಳ ಬಗ್ಗೆ ಅವರು ತುರ್ತು ಗಮನಹರಿಸುತ್ತಾರೆಂಬುದರಲ್ಲಿ ಸಂದೇಹವಿಲ್ಲ. ಇತ್ತೀಚೆಗೆ ದಿಲ್ಲಿಯಲ್ಲಿ ಬಿಎಸ್‌ಎಫ್ ಪಡೆಯ ಯೋಧರು ಹಾಗೂ ಅಧಿಕಾರಿಗಳನ್ನು ಗೌರವಿಸುವ ಕಾರ್ಯಕ್ರಮದಲ್ಲಿ ರಾಜನಾಥ್‌ಸಿಂಗ್ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಕೆಲವು ಯೋಧರು ಹಾಗೂ ಅಧಿಕಾರಿಗಳ ಅಶಿಸ್ತಿನ ವರ್ತನೆಯನ್ನು ರಾಜನಾಥ್‌ಸಿಂಗ್ ಗಮನಿಸಿದ್ದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ‘‘ರಾಷ್ಟ್ರಗೀತೆ ಹಾಡುವ ವೇಳೆ, ಹೆಚ್ಚಿನ ಜವಾನರು ಕ್ಯಾಪ್ ಧರಿಸದಿರುವುದನ್ನು ನಾನು ಗಮನಿಸಿದ್ದೇನೆ. ಕ್ಯಾಪ್ ಧರಿಸುವುದು ಉಡುಪು ಸಂಹಿತೆಯ ಭಾಗವಾಗಿದೆ. ಐಪಿಎಸ್ ಅಧಿಕಾರಿಯೊಬ್ಬರು ಅವರ ಬೂಟಿನ ಲೇಸ್‌ಗಳನ್ನು ಸಮರ್ಪಕವಾಗಿ ಕಟ್ಟಿಕೊಂಡಿಲ್ಲ’’ ಎಂದರು. ಗೃಹ ಸಚಿವರ ಈ ವಿಮರ್ಶೆ ಕೆಲವರಿಗೆ ನಡುಕವುಂಟು ಮಾಡಿದರೆ, ಇನ್ನು ಕೆಲವರು ಸಚಿವರು ಶೂಲೇಸ್‌ಗಳು ಹಾಗೂ ಕ್ಯಾಪ್‌ಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಬದಲು ದೇಶದ ಆಂತರಿಕ ಭದ್ರತೆಯಲ್ಲಿರುವ ಲೋಪಗಳು ಹಾಗೂ ಅಲೆದಾಡುವ ಹಂತಕ ಗುಂಪುಗಳ ಬಗ್ಗೆ ಗಮನಹರಿಸಿದರೆ ಒಳ್ಳೆಯದಿತ್ತು ಎಂದು ವ್ಯಂಗ್ಯವಾಡಿದ್ದಾರೆ.

ಬಿಜೆಪಿಗೆ ತಲೆನೋವಾದ ಯೋಗಿ

 ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಅವರನ್ನು ನೇಮಿಸಿದ್ದಕ್ಕಾಗಿ ಬಿಜೆಪಿಯ ಕೇಂದ್ರೀಯ ನಾಯಕತ್ವ ಈಗ ಪಶ್ಚಾತ್ತಾಪಗೊಂಡಿರುವ ಸೂಚನೆಗಳು ಕಂಡುಬರುತ್ತಿವೆ. ಇತ್ತೀಚೆಗೆ ಸಹಾರನ್‌ಪುರದಲ್ಲಿ ಠಾಕೂರರು ಹಾಗೂ ದಲಿತ ಸಮುದಾಯಗಳ ನಡುವೆ ನಡೆದ ಗಲಭೆಯಲ್ಲಿ, ಆದಿತ್ಯನಾಥ್ ಸರಕಾರ ದಲಿತ ವಿರೋಧಿಯೆಂದು ಬಿಂಬಿಸಲ್ಪಟ್ಟಿತು. ಹೀಗಾಗಿ ಪಕ್ಷದ ವರ್ಚಸ್ಸನ್ನು ಕಾಪಾಡಲು ಸುಧಾರಣಾತ್ಮಕ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿಗೆ ಕೆಲವು ನಾಯಕರು ಸೂಚನೆ ನೀಡಬೇಕಾಯಿತು. 2019ರ ಲೋಕಸಭಾ ಚುನಾವಣೆಯು ಮುಂದಿನ ಅತೀ ದೊಡ್ಡ ಅಗ್ನಿ ಪರೀಕ್ಷೆಯಾಗಲಿರುವುದರಿಂದ ಮೋದಿ ಅಥವಾ ಶಾ, ರಾಜ್ಯದ ಪ್ರಸಕ್ತ ಸನ್ನಿವೇಶದಲ್ಲಿ ಯಾವುದೇ ಬದಲಾವಣೆಯಾಗುವುದನ್ನು ಬಯಸುವುದಿಲ್ಲ. ಆದರೆ ಆದಿತ್ಯನಾಥ್ ಸ್ವತಃ ಠಾಕೂರ್ ಜಾತಿಯವರಾಗಿದ್ದು, ಅವರು ನಡೆಸುತ್ತಿರುವ ಯುವಸಂಘಟನೆಯು ಸಂಪೂರ್ಣವಾಗಿ ಠಾಕೂರ್ ಯುವಕರಿಂದಲೇ ತುಂಬಿರುವು ದರಿಂದ, ಈ ಪ್ರಬಲ ಸಮುದಾಯದ ವಿರುದ್ಧ ಅವರು ಯಾವುದೇ ಕಠಿಣ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ. ಬಿಜೆಪಿಯು ಎಲ್ಲಾ ವರ್ಗಗಳನ್ನು ಓಲೈಸಿಕೊಂಡ ಪರಿಣಾಮವಾಗಿ ಚುನಾವಣೆಯಲ್ಲಿ ದೊಡ್ಡ ಅಂತರದೊಂದಿಗೆ ಜಯಗಳಿಸಿತ್ತು. ಆದರೆ ಮೇಲ್ಜಾತಿ ಹಾಗೂ ಕೆಳಜಾತಿಗಳ ನಡುವೆ ಘರ್ಷಣೆಗಳು ಮುಂದುವರಿದಲ್ಲಿ ಈ ಪರಿಸ್ಥಿತಿ ದೀರ್ಘಕಾಲ ಉಳಿಯಲಾರದು. ಇದು ಬಿಜೆಪಿ ನಾಯಕತ್ವದ ಚಿಂತೆಗೆ ಕಾರಣವಾಗಿದೆ.

ಬದಲಾದ ‘ದೀದಿ’

ಮಮತಾ ಬ್ಯಾನರ್ಜಿ ಸಂಸತ್ ಸದಸ್ಯೆ ಹಾಗೂ ರೈಲ್ವೆ ಸಚಿವೆಯಾಗಿ ದಿಲ್ಲಿಯಲ್ಲಿದ್ದಾಗ ಅವರ ಸರಳತೆಯನ್ನು ಜನ ಸ್ಮರಿಸಿಕೊಳ್ಳುತ್ತಿದ್ದರು. ಆದರೆ ಅದು ಹಳೆಯ ವಿಷಯವಾಯಿತು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾದ ಬಳಿಕ ಮಮತಾ ಬೆರಗುಗೊಳಿಸುವ ರೀತಿಯಲ್ಲಿ ಬದಲಾಗಿದ್ದಾರೆ. ಮಮತಾರಲ್ಲಿ ಈ ಹಿಂದೆ ಇದ್ದ ನೋಕಿಯಾ ಮೊಬೈಲ್ ಫೋನ್ ಸವೆದು ಹೋಗಿತ್ತು ಹಾಗೂ ಹಿಂಭಾಗದ ಕವರ್ ಬಿದ್ದುಹೋಗದಂತೆ ಅದಕ್ಕೆ ರಬ್ಬರ್‌ಬ್ಯಾಂಡ್ ಕಟ್ಟಲಾಗಿತ್ತು. ಹಲವು ವರ್ಷಗಳ ಕಾಲ ಮಮತಾ ಅದೇ ಫೋನ್ ಬಳಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ, ಮುಖ್ಯಮಂತ್ರಿ ಮಮತಾ ಅವರು ಎರಡು ಅತ್ಯಾಧುನಿಕ ಆವೃತ್ತಿಯ ಐಫೋನ್‌ಗಳನ್ನು ಕೊಂಡೊಯ್ಯುತ್ತಿದ್ದರು. ಆಕೆಯ ಪಾದರಕ್ಷೆ ಕೂಡಾ ಬದಲಾಗಿದೆ. ಈ ಮೊದಲು ಸರಳವಾದ ಹವಾಯಿ ಚಪ್ಪಲಿ ಧರಿಸುತ್ತಿದ್ದ ‘ದೀದಿ’ ಈಗ ತುಂಬಾ ದುಬಾರಿಯಾದ ಪಾದರಕ್ಷೆ ತೊಡುತ್ತಿದ್ದಾರೆ. ಅಧಿಕಾರ ಹೇಗೆ ಮನುಷ್ಯನನ್ನು ಎಷ್ಟು ವೇಗವಾಗಿ ಬದಲಾಯಿಸುತ್ತದೆ ನೋಡಿ..

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)