varthabharthi

ಅನುಗಾಲ

ತಬ್ಬಲಿಯು ನೀನಾದೆ ಮಗನೆ!

ವಾರ್ತಾ ಭಾರತಿ : 8 Jun, 2017
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಕಾಶ್ಮೀರದಲ್ಲಿ ಮೇಜರ್ ಗೊಗೊಯ್ ಎಂಬ ಭಾರತೀಯ ಸೇನೆಯ ಅಧಿಕಾರಿಯೊಬ್ಬರು ಮನುಷ್ಯಜೀವಿಯೊಬ್ಬನನ್ನು ಜೀಪಿನೆದುರು ಕಟ್ಟಿ ಜನರನ್ನೆದುರಿಸಿದ ಸುದ್ದಿ ಜನಜನಿತವಾಗಿ ಸಾಕಷ್ಟು ವಿವಾದಗಳನ್ನು ಸೃಷ್ಟಿಸಿತು. ಕಾನೂನನ್ನು ಅನುಷ್ಠಾನಗೊಳಿಸಬೇಕಾಗಿದ್ದ ಅಧಿಕಾರಿಯೊಬ್ಬರು ಹೂಡಿದ ಇಂತಹ ತಂತ್ರ ಕಾನೂನಿನಡಿ ಮತ್ತು ಮಾನವ ಹಕ್ಕುಗಳ ವಿವೇಚನೆಯ ದೃಷ್ಟಿಯಲ್ಲಿ ಸರಿಯೇ ತಪ್ಪೇ ಎಂಬ ಬಗ್ಗೆ ವಿಚಾರಣೆ ನಡೆಯುವ ಹೊತ್ತಿನಲ್ಲೇ ಆ ಅಧಿಕಾರಿಗೆ ಪ್ರಶಸ್ತಿ ಪತ್ರ ನೀಡಲಾಗಿದೆ. ನಮ್ಮ ಭೂ ಸೇನಾ ಮುಖ್ಯಸ್ಥರು ಇದನ್ನು ಸಮರ್ಥಿಸಿಕೊಂಡು ಇದರಲ್ಲಿ ತಪ್ಪೇನೂ ಇಲ್ಲವೆಂದಿದ್ದಾರೆ.

ಅವರು ಹೇಳುವುದು ಸರಿಯೇ. (ಇದರಲ್ಲಿ ತಪ್ಪೇನೂ ಇಲ್ಲ: ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿರುವ ವ್ಯಕ್ತಿ-ಅದರಲ್ಲೂ ರಾಜಕಾರಣಿಗಳಿಗೆ ಪದ್ಮ ಪ್ರಶಸ್ತಿ ಕೊಡುವ ಈ ಕಾಲದಲ್ಲಿ ಪ್ರಶಸ್ತಿಗಳಿಗೂ ನಡತೆಗೂ ಸಂಬಂಧವನ್ನು ಕಲ್ಪಿಸುವುದೇ ತಪ್ಪು. ಇದಕ್ಕೆ ಹತ್ತಾರು ರಾಜಕಾರಣಿಗಳ ಉದಾಹರಣೆಗಳನ್ನು ನೀಡಬಹುದು.) ಮಹಾಭಾರತದಲ್ಲಿ ಅರ್ಜುನನು ಭೀಷ್ಮರನ್ನು ಸೋಲಿಸಿದ್ದು ಹೀಗೆಯೇ: ಅಮಾಯಕ ಶಿಖಂಡಿಯನ್ನು ಎದುರಿಟ್ಟುಕೊಂಡು ಯುದ್ಧ ಮಾಡಿದ್ದು. ಅದಕ್ಕೊಂದು ಕಥೆ. ಯಾರು ಸರಿ? ಎಲ್ಲವು ಕೃಷ್ಣಾರ್ಪಣ! ಮಾಧ್ಯಮಗಳಲ್ಲಿ ಪ್ರಕಟಗೊಂಡ ಒಂದು ವ್ಯಂಗ್ಯ ಚಿತ್ರದಲ್ಲಿ ಪಾಕಿಸ್ತಾನದ ಸೇನೆಯು ತನ್ನ ಸಮರಟ್ಯಾಂಕಿನ ಎದುರು ಗೋವನ್ನು ಕಟ್ಟಿ ಭಾರತದೆದುರು ಬರುತ್ತಿದೆ. ಎಂತಹ ಕ್ರೂರ ಆದರೆ ಸಾಧ್ಯತೆಯಿರುವ ಮತ್ತು ಭಾರತದ ಹುಚ್ಚು ಪರಿಕಲ್ಪನೆಗಳನ್ನು ಲೇವಡಿಮಾಡುವ ಪರಿಹಾಸ್ಯ!

ಹೇಗಾದರೂ ಗೆಲ್ಲಬಹುದೆಂಬ ಈ ತರ್ಕವು ಮಾಧ್ಯಮ ಮತ್ತು ಗುರಿಯ (means and ends) ಸಮೀಕರಣವನ್ನು ಪ್ರಶ್ನಿಸುತ್ತದೆ. ರೀತಿ, ವಿಧಾನ ಸರಿಯಿಲ್ಲದೆಯೂ ಸರಿಯುತ್ತರ ಬರೆದ ಗಣಿತದ ಉತ್ತರಪತ್ರಿಕೆಯಂತಿರುವ ಈ ವಿಚಾರವನ್ನು ಗಾಂಧಿ ಒಪ್ಪಿರಲಿಲ್ಲ. ಅವರ ಪಾಲಿಗೆ ಇದು ಸತ್ಯವನ್ನು ಧಿಕ್ಕರಿಸುವ ಯುಕ್ತಿ. ಗಾಂಧಿ ಒಪ್ಪದ ಈ ಯುಕ್ತಿಯನ್ನು ನಮ್ಮ ಸಿನೆಮಾ ನಿರ್ದೇಶಕರು ಬಹಳ ವರ್ಷಗಳಿಂದ ಮಾಡುತ್ತಲೇ ಬಂದಿದ್ದಾರೆ.

ಕೆಲವು ಉದಾಹರಣೆಗಳನ್ನು ಗಮನಿಸಿ: ‘ಒರು ಖೈದಿಯಿನ್ ಡೈರಿ’ ಸಿನೆಮಾದಲ್ಲಿ ನಾಯಕ (ಕಮಲ್ ಹಾಸನ್) ಭ್ರಷ್ಟ ಪೊಲೀಸ್ ಅಧಿಕಾರಿಯನ್ನು ಕ್ರೂರವಾಗಿ ಕೊಲ್ಲುವಾಗ ಅದಕ್ಕಿಷ್ಟು ಚಪ್ಪಾಳೆ.

‘ಅಪೂರ್ವ ಸಹೋದರಂಗಳ್’ ಸಿನೆಮಾದಲ್ಲಿ ಮತ್ತೆ ಅದೇ ನಾಯಕನು ಎದುರಾಳಿಗಳನ್ನು ತನ್ನ ಸರ್ಕಸ್ ಕೈಚಳಕದಿಂದ ಹಿಂಸಿಸಿ ಕೊಲ್ಲುವಾಗ ನಾವೇ ಈ ಕೆಲಸ ಮಾಡಿದಂತೆ ಖುಷಿ! ಪರಿಣಾಮವಾಗಿ ನಮ್ಮ ವ್ಯವಸ್ಥೆಯ ಯಾವ ನಿಯಂತ್ರಣವನ್ನೂ ನಂಬದೆ ತಾನೇ ಮಚ್ಚು, ಕೋವಿ ಹಿಡಿದು ದುಷ್ಟನಿಗ್ರಹ ಮಾಡುವ ನಾಯಕರು ಬೆಳ್ಳಿ ಪರದೆಯಲ್ಲಿ ಮಿಂಚಿದ್ದಾರೆ. ಅಂತಹ ಕನ್ನಡ ಸಿನೆಮಾ, ಝಂಝೀರ್, ಆಖ್ರೀ ರಾಸ್ತಾದಂತಹ ಹಿಂದಿ ಸಿನೆಮಾಗಳು ಹಿಂಸೆಯನ್ನು ವೈಭವೀಕರಿಸಿದ್ದನ್ನು ಮೆಚ್ಚಿದರೂ ಒಪ್ಪಿರಲಿಲ್ಲ. ಏಕೆಂದರೆ ಅವು ವ್ಯವಸ್ಥೆಯನ್ನು ಬೀದಿಪಾಲು ಮಾಡುವ, ಕ್ಷೋಭೆಯನ್ನು ಪ್ರೋತ್ಸಾಹಿಸುವ ಆದರ್ಶಗಳು. ಇದೇ ಆದರ್ಶವನ್ನು ಬೆಂಬತ್ತಿದ ಅನೇಕರು ಬೆಳ್ಳಿ ಪರದೆಯ ಹೊರಗೆ ಯಥಾರ್ಥದ ನೆಲದ ಮೇಲೆ ನಿಂತು ಹೀಗೆ ಮಾಡುವುದು ಎಷ್ಟು ಸರಿ ಎಂದು ನಮ್ಮ ಸಮಾಜವು ಚಿಂತಿಸುತ್ತಿತ್ತು. ಆದರೆ ಇಂದಿನ ಸಮಾಜವು ಈ ಬಗ್ಗೆ ತಲೆಕೆಡಿಸಿಕೊಳ್ಳದೆ ಗೋರಕ್ಷಕರ ಇಂತಹ ‘ಹಿರೋಯಿಕ್ಸ್’ಗಳನ್ನು ಪ್ರೋತ್ಸಾಹಿಸುವಂತಿದೆ.

ಹಿಂದೆಲ್ಲ ಗೋವುಗಳನ್ನು ರಕ್ಷಿಸುವ ಸಲುವಾಗಿ ಯಾರೂ ಇನ್ನೊಬ್ಬರನ್ನು ಹಿಂಸೆ ಪಡಿಸುತ್ತಿರಲಿಲ್ಲ. ಹಸುವನ್ನು ಕೊಂದಿತೆಂದು ಯಾರೂ ಹುಲಿಯನ್ನು ಕೊಂದ ಇತಿಹಾಸವಿಲ್ಲ. ಹಸುವಿಗೆ ಹಸುವಿನ ರೀತಿಯ ರಕ್ಷಣೆ. ಆದರೆ ಈಗ ಕೇಂದ್ರ ಸರಕಾರವೇ ಹಿಂಸೆಗೆ ಒಪ್ಪಿಗೆಯ ಮುದ್ರೆಯೊತ್ತಿದೆ. ಈಗಾಗಲೇ ಗೋರಕ್ಷಕರ ಹಾವಳಿಗೆ ಯಾವ ಕ್ರಮವನ್ನೂ ಕೈಗೊಳ್ಳದ ಸರಕಾರವು ಈ ಹಾವಳಿಗೆ ತುತ್ತಾದವರ ವಿರುದ್ಧ ಗೋವುಗಳ ಮೂಲ, ಒಡೆತನದ ಹಕ್ಕು ಮುಂತಾದವುಗಳ ಕುರಿತು ಪೊಲೀಸರ ಮೂಲಕ ತನಿಖೆ ನಡೆಸಿ ಇನ್ನು ಯಾರೂ ಗೋರಕ್ಷಕರ ವಿರುದ್ಧ ದೂರು ನೀಡದಂತೆ ವ್ಯವಸ್ಥೆ ಮಾಡಿದೆ.

ಅಂದರೆ ಎಲ್ಲೆಡೆ ಶಾಂತಿ ನೆಲೆಸಲು ಬೇಕಾದ ಎಲ್ಲ ಕ್ರಮಗಳೂ ನಡೆಯುತ್ತಿವೆ. ಇದರ ಮುಂದುವರಿದ ಭಾಗದಂತೆ ಈಚೆಗೆ ಗೋಹತ್ಯೆಯನ್ನು ನಿಷೇಧಿಸಿದಂತೆ ಕಾಣುವ ಹೊಸ ನಿಯಮಾವಳಿಯನ್ನು ಕೇಂದ್ರ ಸರಕಾರ ಜಾರಿಗೆ ತಂದಿತು. ಇದನ್ನು ಜಾರಿಗೆ ತಂದಿಲ್ಲ ಎಂದು ಕೆಲವರು ವಾದಿಸಿದರೆ ಇನ್ನು ಕೆಲವರು ಇಲ್ಲ, ಇದು ಜಾರಿಗೆ ಬಂದಿದೆ ಎಂದು ಪರ-ವಿರೋಧ ತರ್ಕ ನಡೆಸಿದರು. ವಿಚಿತ್ರವೆಂದರೆ ಈ ನಿಯಮಗಳು ಬಂದ ಕಾಯ್ದೆಯ ಹೆಸರು ಪ್ರಾಣಿಹಿಂಸೆಯ ತಡೆ ಕಾಯ್ದೆ! ಯಾವುದೇ ಪ್ರಾಣಿಹಿಂಸೆಯನ್ನು ನಿಷೇಧಿಸುವ ಕಾನೂನಾದರೆ ಅದೊಂದು ರೀತಿ. (ಸರಿಯೋ ತಪ್ಪೋ ಬೇರೆ!) ಆದರೆ ಈ ಪೈಕಿ ಗೋವಿಗೆ ಮಾತೆಯ ಸ್ಥಾನವನ್ನು ನೀಡಿ ಉಳಿದ ಎಲ್ಲ ಪ್ರಾಣಿಗಳನ್ನು (ಹಾಲು ನೀಡುವ ಎಮ್ಮೆ, ಮೇಕೆಗಳನ್ನೂ ಸೇರಿ) ವಧಾಸ್ಥಾನದ ಬುಟ್ಟಿಯಲ್ಲಿ ಹಾಕುವ ತಂತ್ರದ ಹಿಂದೆ ಗೋವಿನ ರಕ್ಷಣೆ, ಗೋವಿನ ಕುರಿತ ಗೌರವ ಇವೆಲ್ಲ ಮಾಯವಾಗಿ ಗೋವಿನ ಮೂಲಕ ಎಷ್ಟು ಮತ ಲಭಿಸೀತು ಮತ್ತು ಹಸುವಿನಂತಹ ಎಷ್ಟು ಜನರನ್ನು ಉಗ್ರರನ್ನಾಗಿಸಬಹುದು ಎಂಬ ಯೋಚನೆಯೇ ಕೆಲಸಮಾಡಿರಬೇಕು. ಇಂದಿರಾ ಕಾಂಗ್ರೆಸ್ ಪಕ್ಷವು ಹಸು-ಕರುವನ್ನು ತನ್ನ ಚುನಾವಣಾ ಚಿಹ್ನೆಯಾಗಿ ಮಾಡಿದಾಗಲೂ ಜನರ ಮತೀಯ ಭಾವನೆಗಳನ್ನು ಕೆರಳಿಸಿರಲಿಲ್ಲ. ಅದೊಂದು ಚಿಹ್ನೆಯಾಗಿತ್ತು, ಅಷ್ಟೇ. ಆದರೆ ಈಗ ಗೋವು ಯಾವುದೇ ಪಕ್ಷದ ಚಿಹ್ನೆಯಾಗದೆಯೂ ಮತದಾರರ ಮುಗ್ಧತೆಯನ್ನು ಮತ್ತು ಹುಚ್ಚನ್ನು ಏಕಕಾಲಕ್ಕೆ ಪ್ರೇರೇಪಿಸುವ ಸಂಕೇತವಾಗುತ್ತಿದೆ.

ಗೋಹತ್ಯೆ ನಿಷೇಧದ ಕುರಿತು ಈಗಾಗಲೇ ಈ ಬಗ್ಗೆ ವ್ಯಾಪಕ ಚರ್ಚೆಯಾಗಿದೆ. ಹಲವಾರು ರಾಜ್ಯ ಸರಕಾರಗಳು ಈ ನಿಯಮಗಳನ್ನು ವಿರೋಧಿಸಿವೆ. ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಈ ನಿಯಮಗಳನ್ನು ತಾವು ಅನುಸರಿಸುವುದಿಲ್ಲವೆಂದು ಘೋಷಿಸಿದ್ದಾರೆ. ಮದರಾಸು ಉಚ್ಚ ನ್ಯಾಯಾಲಯದ ಮಧುರೈ ಪೀಠವು ಇದಕ್ಕೆ ತಡೆಯಾಜ್ಞೆ ನೀಡಿದರೆ, ಕೇರಳದ ಪೀಠವು ಈ ನಿಷೇಧದ ನಿಯಮಗಳು ಗೋಹತ್ಯೆಯನ್ನು ನಿಯಂತ್ರಿಸುವಂತೆ ನಿರೂಪಿತವಾಗಿಲ್ಲವೆಂದು ವಿವರಿಸಿದೆ. ಸಂತೆಗೆ ಹೋಗಿ ಕಟುಕನಿಗೆ ಗೋವನ್ನು ಮಾರಬಾರದು ಎಂದಷ್ಟೇ ಈ ನಿಯಮಗಳ ಸಾರವೆಂದು ಹೇಳಿ ಈ ನಿಯಮಗಳನ್ನು ಮತ್ತು ಗೋರಕ್ಷಕರ ಉತ್ಸಾಹರಸವನ್ನು ನಿಸ್ಸಾರಗೊಳಿಸಿದೆ.

ಕೇಂದ್ರ ಸರಕಾರವೂ ಪರೋಕ್ಷವಾಗಿ ಕಾಲ ಹೆಬ್ಬೆರಳನ್ನು ಬಾಯೊಳಗಿಟ್ಟುಕೊಂಡು ಈ ಬಗ್ಗೆ ಚರ್ಚೆಗೆ ಸಿದ್ಧ, ಮತ್ತು ಎಲ್ಲ ಭಾಗೀದಾರರೊಂದಿಗೂ ಮುಕ್ತವಾಗಿ ಚರ್ಚಿಸೋಣವೆಂದು ಪಾದಗಳನ್ನು ಪ್ರೇತಕಾಂಡದಂತೆ ಹಿಮ್ಮುಖವಾಗಿ ಇಡಲಾರಂಭಿಸಿದೆ. ಮುಖ್ಯವಾಗಿ ಕೇಂದ್ರ ಸರಕಾರದ ಪಕ್ಷಗಳೇ ಆಳುವ ಗೋವಾ, ಮೇಘಾಲಯ ಮುಂತಾದೆಡೆಯೂ ಅತೃಪ್ತಿ ಗೋಚರಿಸಿದೆ. ಒಂದಿಬ್ಬರು ಭಾಜಪ ನಾಯಕರು/ಶಾಸಕರು ರಾಜೀನಾಮೆಯನ್ನೂ ನೀಡಿದ್ದಾರೆ. ಪ್ರಾಯಃ ಕೇಂದ್ರ ಸರಕಾರದ ಹಿಮ್ಮುಖ ನಡೆಗೆ ಇದೇ ಕಾರಣವಿರಬಹುದು. ಕೇಂದ್ರ ಸರಕಾರವು ಅರ್ಥ ಮಾಡಿಕೊಳ್ಳದ ಸಂಗತಿಯೆಂದರೆ ಈ ದೇಶದಲ್ಲಿ ಗೋಮಾಂಸವನ್ನು ತಿನ್ನುವವರು ಮುಸ್ಲಿಮರು ಮಾತ್ರವಲ್ಲ, ಹಿಂದೂಗಳು ಮತ್ತು ಇತರ ಮತಸ್ಥರೂ ಸಾಕಷ್ಟಿದ್ದಾರೆ.

ಬಿಹಾರ ಮತ್ತು ಉತ್ತರ ಪ್ರದೇಶಗಳಲ್ಲಿ ಹಸುಗಳನ್ನು ವಧೆಗಾಗಿ ಮಾರುವವರಲ್ಲಿ ಹಿಂದೂಗಳೇ ಹೆಚ್ಚೆಂದು ಲೆಜ ಸರದೇಶಪಾಂಡೆ ತಮ್ಮ ಕೃತಿಯಲ್ಲಿ ವಿವರಿಸಿದ್ದಾರೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಗೋವು ಅನ್ನುವುದು ಎಷ್ಟೇ ಗೌರವದ, ಪವಿತ್ರ ಪ್ರಾಣಿಯೆಂದರೂ ಅದಕ್ಕೂ ಒಂದು ಬೆಲೆ ಕಟ್ಟಲೇ ಬೇಕಲ್ಲ! ಆನೆಗೆ ಇದ್ದರೂ ಲಕ್ಷ ಸತ್ತರೂ ಲಕ್ಷ ಎನ್ನುತ್ತೇವೆ. ದನ ಇನ್ನೊಂದು ರೀತಿಯ ಮೌಲ್ಯ ವ್ಯವಸ್ಥೆಯ ಪ್ರಾಣಿ. ಹಾಲು ಕೊಡುವಾಗ ಒಂದು ಬೆಲೆ; ಅನಂತರ ಇನ್ನೊಂದು ಬೆಲೆ; ಸತ್ತರೆ ಸಿಕ್ಕಷ್ಟು-ಅಷ್ಟೇ. ನಮ್ಮ ಅನೇಕ ಗೋರಕ್ಷಕರ ನೀತಿಯೂ ಇಬ್ಬಗೆಯದೇ. ಬಹಳಷ್ಟು ಗೋರಕ್ಷಕರು ದನ ಸಾಕಿದವರೇ ಅಲ್ಲ. ಗೋರಕ್ಷಕ ಸ್ವಾಮೀಜಿಯೊಬ್ಬರು ದೇಸಿ ತಳಿಗಳು ಮಾತ್ರ ಗೋವುಗಳು ಎಂದು ಭಾವಿಸಿದ್ದಾರೆ ಮತ್ತು ತಮ್ಮ ಶಿಷ್ಯರಿಗೆ ಇದೇ ಸಮ್ಮೋಹಿನಿಯನ್ನು ಸಿಂಪಡಿಸಿದ್ದಾರೆ. ಅವರ ಪಾಲಿಗೆ ದೇಸಿತಳಿಯ ಗೋಭಕ್ಷಣೆ ಮಾತ್ರ ಪಾಪ. ಇದೊಂದು ಥರದ ಬಿಳಿಹೆಂಡ್ತಿ ನ್ಯಾಯ. ಇನ್ನು ದನ-ಎಮ್ಮೆ ತಾರತಮ್ಯವು ಹಿಂದೂ ಧರ್ಮದ ಅಸ್ಪಶ್ಯತೆಯ ಇನ್ನೊಂದು ಮುಖ.

ಈಗ ದನದ ಹೆಸರಿನಲ್ಲಿ ಹಫ್ತಾ (ಧನ!) ಸಂಗ್ರಹಿಸಿ ಹೀರೋಗಳಾಗುವವರು ಇವರೇ. ಹಸುವನ್ನು ಸರಿಯಾಗಿ ಸಾಕದೆ ಬೀದಿಯಲ್ಲಿ ಬಿಟ್ಟು ಅದರ ಕರುವಿಗೂ ಹಾಲು ಸಿಕ್ಕದಂತೆ ಕರೆದು ಅದಕ್ಕೂ ನೀರು ಸೇರಿಸಿ ಮಾರಿ ಧನಿಕರಾಗಿ ಏಕಕಾಲಕ್ಕೆ ದನಗಳನ್ನೂ ಮನುಷ್ಯರನ್ನೂ ಶೋಷಿಸುವ ಮಂದಿ ಇದ್ದಕ್ಕಿದ್ದಂತೆ ಮುರಳೀನಾದದ ಗೋಪಾಲಕೃಷ್ಣರಂತೆ ಮಾತನಾಡುವಾಗ, ವರ್ತಿಸುವಾಗ ನಮ್ಮೆಲ್ಲ ಗೋವುಗಳು ಈ ದೇಶದ ಕುರಿತು ಇರುವ ಎಲ್ಲ ಗೌರವವನ್ನೂ ತೊರೆದು ವಿದೇಶಗಳಿಗೆ ಹೋದಾವೆಂದು ಅನ್ನಿಸುತ್ತದೆ. ಏಕೆಂದರೆ ಅಲ್ಲಿ ಕನಿಷ್ಠ ಬದುಕಿರುವಷ್ಟು ದಿನವಾದರೂ ಸರಿಯಾಗಿ ಆರೈಕೆ ನಡೆಯುತ್ತದೆ.

ಕೇಂದ್ರ ಸರಕಾರಕ್ಕೆ ತನ್ನನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾಡುತ್ತಿರುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ದಾರಿ ಕಾಣುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ತನ್ನ ಟಿಆರ್‌ಪಿ ದರವನ್ನು ಕಾಯ್ದುಕೊಳ್ಳಬೇಕಾದರೆ ಅದು ಏನಾದರೂ ಗಿಮಿಕ್‌ಗಳನ್ನು ಮಾಡಲೇಬೇಕು. ಇದ್ದುದರಲ್ಲಿ ಮತಾಂಧರನ್ನು ಕೆರಳಿಸುವಷ್ಟು ಸುಲಭದ ತಂತ್ರ ಇನ್ಯಾವುದೂ ಇಲ್ಲ. ಇದೊಂದು ಹುಲಿಯ ಸವಾರಿಯಷ್ಟು ಅಪಾಯಕಾರಿಯಾದರೂ ಈಗಾಗಲೇ ಹುಲಿಯನ್ನೇರಿದ ಈ ಧೀರರು ತಾವು ಅಲ್ಲಿಂದ ಇಳಿದರೆ ಆಗುವ ಅಪಾಯವನ್ನು ಬಲ್ಲರು. ಹುಲಿಯಿಂದ ಪ್ರಾಣ ಉಳಿಸಿಕೊಳ್ಳಬೇಕಾದರೆ ಹಸುವೇ ಗತಿ! ಈಗಾಗಿರುವುದು ಅದೇ. ಇದು ವಿಫಲವಾದರೆ ಸೇನೆಗೆ ಪೂರ್ಣ ಸ್ವಾತಂತ್ರ್ಯ ನೀಡಿ ಪಾಕಿಸ್ತಾನದ ವಿರುದ್ಧ ಏರಿಹೋಗಬಹುದು.

ಗೋರಕ್ಷಕರೂ ನರಭಕ್ಷಕ ವ್ಯಾಘ್ರರೂ ಹೆಚ್ಚಾಗಿ ಮುಂದಿನ ದಿನಗಳು ಗೋಮಯವಾಗಿ ಅಯೋಮಯವಾಗುವತ್ತ ಸಾಗುತ್ತಿವೆ. ಅರ್ಬುದಾನೆಂಬೊಂದು ವ್ಯಾಘ್ರವು ಅಬ್ಬರಿಸಿ ಕೊಲ್ಲದೆಯೂ ಪುಣ್ಯಕೋಟಿಯ ಕರು ತಬ್ಬಲಿಯಾಗುವುದು ಖಚಿತ. ಏಕೆಂದರೆ ಕಾಡಿನಲ್ಲಿರುವುದಕ್ಕಿಂತ ಹೆಚ್ಚು ವ್ಯಾಘ್ರಗಳು ಗೋಮುಖದೊಂದಿಗೆ ಹಟ್ಟಿಯಲ್ಲಿವೆ!

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)