varthabharthi

ಭೀಮ ಚಿಂತನೆ

ಮಹಾತ್ಮ ಹೋದ, ಮನುಷ್ಯ ಉಳಿದ

ವಾರ್ತಾ ಭಾರತಿ : 9 Jun, 2017
ಡಾ. ಬಿ. ಆರ್. ಅಂಬೇಡ್ಕರ್ ಅವರ ಆಯ್ದ ಭಾಷಣ-ಬರಹಗಳು

ಭಾಗ - 1

‘‘ಪ್ರತಿಯೊಬ್ಬ ಇಂಗ್ಲಿಷ್ ಮನುಷ್ಯನು ಹಿಂಸೆಯ ಬದಲು ಅಹಿಂಸೆಯ ದಾರಿಯನ್ನು ಸ್ವೀಕರಿಸಬೇಕು. ಎದ್ದಿರುವ ವಾದ-ಜಗಳಗಳನ್ನು ಅಹಿಂಸೆಯ ದಾರಿಯಿಂದಲೇ ಬಗೆಹರಿಸಿಕೊಳ್ಳಬೇಕೆಂದು ಕೋರುತ್ತೇನೆ. ನಿಮಗೆ ಉಪದೇಶವನ್ನು ಮಾಡುವ ಧೈರ್ಯ ಈ ವರೆಗೆ ನನ್ನಲ್ಲಿ ಇರಲಿಲ್ಲ. ದೇವರ ದಯೆಯಿಂದ ಈವತ್ತು ನನಗೀ ಧೈರ್ಯ ಪ್ರಾಪ್ತವಾಯಿತು. ಹೀಗಾಗಿ ನಿಮಗೆ ಈ ಉಪದೇಶವನ್ನು ಮಾಡುತ್ತಿದ್ದೇನೆ. ಈ ಯುದ್ಧವನ್ನು ನಿಲ್ಲಿಸಿ, ಎಂದು ನಿಮಗೆ ಹೇಳಬಯಸುತ್ತೇನೆ. ನೀವು ಯುದ್ಧವನ್ನು ಕೈಗೊಳ್ಳಲು ಅಸಮರ್ಥರೆಂದು ನಾನು ನಿಮಗೆ ಹೇಳುತ್ತೇನೆ ಎಂದಲ್ಲ. ಬದಲು ಯುದ್ಧವು ತೀರ ಕೆಟ್ಟ ಸಂಗತಿಯಾದ್ದರಿಂದ ಇದನ್ನು ನಿಮಗೆ ಹೇಳು ತ್ತಿದ್ದೇನೆ. ಯಾವುದೇ ಕೆಲಸವು ಎಷ್ಟೇ ಪವಿತ್ರವಾಗಿದ್ದರೂ ಅದಕ್ಕಾಗಿ ಅಸಂಖ್ಯ ಜನರನ್ನು ಸಂಹರಿಸುವುದು ಸರಿಯಾಗಲಾರದು. ಇಷ್ಟೇ ಅಲ್ಲದೆ, ಯಾವ ಕಾರ್ಯದ ಪೂರ್ಣತೆಗಾಗಿ ಇಷ್ಟೊಂದು ಸಂಹಾರವನ್ನು ಮಾಡಬೇಕಾದರೆ ಆ ಕಾರ್ಯವು ಪವಿತ್ರವಾಗಿದೆಯೋ, ಇಲ್ಲವೊ ಎಂಬ ಬಗೆಗೆ ನನಗೆ ತುಂಬ ಸಂದೇಹವಿದೆ. ನೀವು ಜರ್ಮನ್ನರ ವಿರುದ್ಧ ಹೋರಾಡ ಬಯಸುತ್ತೀರಿ. ನಾನು ಅದನ್ನು ಒಪ್ಪುತ್ತೇನೆ. ಅದರಲ್ಲಿ ಇಂಗ್ಲಿಷರಿಗೆ ಸೋಲಾಗಲಿ ಎಂಬ ಇಚ್ಛೆ ಸುತರಾಂ ನನ್ನಲ್ಲಿಲ್ಲ. ನೀವು ನಾಝಿಗಳೊಡನೆ ಖಂಡಿತ ಹೋರಾಡಿ, ಆದರೆ ಅಹಿಂಸಾತ್ಮಕ ಸಾಧನಗಳಿಂದ ಹೋರಾಡಿ ಎಂದಷ್ಟೇ ನಿಮಗೆ ಹೇಳಲು ಬಯಸುತ್ತೇನೆ. ಕತ್ತಿ, ಬಂದೂಕು, ಮದ್ದು ಗುಂಡು, ಮೊದಲಾದ ಹಿಂಸಾತ್ಮಕ ಸಾಧನಗಳನ್ನು ಬಳಸಬೇಡಿ. ನೀವು ಇಂಗ್ಲಿಷ್ ಜನ ಹಿಟ್ಲರ್ ಹಾಗೂ ಮುಸಲೋನಿಗೆ, ‘ನಿಮಗೆ ನಮ್ಮಿಂದ ಏನೇನು ಬೇಕಿದೆಯೋ ಅದನ್ನೆಲ್ಲ ಬಂದು ಒಯ್ಯಿರಿ’ ಎಂದು ಕರೆ ಕಳುಹಿಸಬೇಕೆಂದು ಬಯಸುತ್ತೇನೆ. ಅವರು ಬರಲಿ, ನಿಮ್ಮ ದೇಶದಲ್ಲಿ ಬೇಕಿದ್ದುದು ಹಾಗೂ ಇಷ್ಟವಾದುದನ್ನೆಲ್ಲ ತೆಗೆದುಕೊಳ್ಳಲಿ. ಹಿಟ್ಲರ್ ಹಾಗೂ ಮುಸಲೋನಿಗೆ ನಿಮ್ಮ ಮನೆ ಮಠ ಬೇಕಿದ್ದರೆ ಅವುಗಳನ್ನು ತೆರವುಗೊಳಿಸಿ ಅವರ ವಶಕ್ಕೆ ಕೊಡಿ. ಅವರು ಮನೆಯಿಂದ ಹೊರಹೋಗಲು ನಿಮಗೆ ಅಪ್ಪಣೆ ಕೊಡದಿದ್ದರೆ ನಿಮ್ಮ ಗಂಡಸರು, ಹೆಂಗಸರು, ಮಕ್ಕಳು ಕೊಲೆಯಾಗಲು ಬಿಡಿ. ಆದರೆ ಹಿಂಸಾತ್ಮಾಕ ಪ್ರತೀಕಾರವನ್ನು ಮಾಡಬೇಡಿ. ನಿಮಗೀ ಉಪದೇಶವನ್ನು ಮಾಡುವ ನನ್ನನ್ನು ಒಬ್ಬ ತಿಳಿಗೇಡಿ ಎಂದು ಭಾವಿಸದಿರಿ. ಕಳೆದ ಐವತ್ತು ವರ್ಷಗಳ ಕಾಲ ಒಂದೇ ಸಮನೆ ಅಹಿಂಸೆಯ ಸಾಧನಗಳ ಅನುಭವವನ್ನು ಪಡೆದಿದ್ದೇನೆ. ನನ್ನ ಜೀವನದ ವ್ಯವಹಾರದಲ್ಲಿ, ಅಲ್ಲದೆ ಮನೆಯ, ಸಾರ್ವಜನಿಕ, ಆರ್ಥಿಕ, ಹಾಗೂ ರಾಜಕೀಯದ ಪ್ರತಿಯೊಂದು ಸನ್ನಿವೇಶದಲ್ಲಿ ನಾನೀ ಮಾರ್ಗವನ್ನು ಅವಲಂಬಿಸಿದೆ. ಅದರಲ್ಲಿ ನನಗೆಂದಿಗೂ ಅಪಯಶ ಬಂದಿಲ್ಲ.’’ (ಗಾಂಧಿ)

ಗಾಂಧಿಯವರು ಅಹಿಂಸೆಯನ್ನು ಕುರಿತು ಕಳೆದ ಒಂದು-ಒಂದೂವರೆ ತಿಂಗಳಲ್ಲಿ ಹಲವು ಹೇಳಿಕೆಗಳನ್ನು ನೀಡಿದ್ದುದು ಕಂಡು ಬರುತ್ತದೆ. ಕರ್ನಲ್ ಎಮರಿ ಇವರು ಕಳೆದ ತಿಂಗಳ 23ನೆಯ ತಾರೀಕಿನಂದು ಪಾರ್ಲಿಮೆಂಟ್‌ನಲ್ಲಿ ಮಾಡಿದ ಭಾಷಣಕ್ಕೆ ಪ್ರತಿಕ್ರಿಯಿಸುತ್ತ ಗಾಂಧಿಯವರು ಎಪ್ರಿಲ್ 27 ರಂದು ಒಂದು ದೀರ್ಘವಾದ ಹೇಳಿಕೆಯನ್ನು ಪ್ರಕಟಿಸಿದರು. ಅವರು ತಮ್ಮ ಹೇಳಿಕೆಯಲ್ಲಿ ಕರ್ನಲ್ ಎಮರಿ ಅವರನ್ನು ಉದ್ದೇಶಿಸಿ ಈ ಕೆಳಗಿನಂತೆ ಉದ್ಗರಿಸಿರುವರು.

ಗಾಂಧಿಯವರು ಹೀಗೆನ್ನುತ್ತಾರೆ: ಬ್ರಿಟಿಷ್ ಸರಕಾರಕ್ಕೆ ನಾನೊಂದು ಪ್ರಶ್ನೆಯನ್ನು ಕೇಳಬಯಸುತ್ತೇನೆ. ಬ್ರಿಟಿಷರು ತಮ್ಮ ರಾಜ್ಯವನ್ನು ಸ್ಥಾಪಿಸಿ ನೂರೈವತ್ತು ವರ್ಷಗಳು ಕಳೆದ ತರವಾಯವೂ ಬೆರಳೆಣಿಕೆಯಷ್ಟು ಕೆಲವು ಗೂಂಡಾಗಳನ್ನು ಎದುರಿಸುವ ಸಾಮರ್ಥ್ಯವು ಹಿಂದಿ ಜನರಲ್ಲಿ ಬರಲಿಲ್ಲವೇಕೆ? ಸಾವಿರಾರು ಜನರು ಕೆಲವು ಗೂಂಡಾಗಳ ಹೆದರಿಕೆಗೆ ಅಂಜಿ ತಮ್ಮ ಮನೆ ಮಠಗಳನ್ನು ತೊರೆದು ಓಡಿ ಹೋಗುತ್ತಾರೆಂಬ ಕಾರಣಕ್ಕೆ ಹಿಂದಿ ಜನಗಳಿಗಿಂತಲೂ ಬ್ರಿಟಿಷ್ ಜನರಿಗೆ ನಿಜವಾಗಿಯೂ ಹೆಚ್ಚು ನಾಚಿಕೆಯಾಗಬೇಕು.! ರಾಜ್ಯವನ್ನು ಆಳುವವರ ಮೊದಲ ಹೊಣೆಯೆಂದರೆ ಪ್ರಜೆಗಳಿಗೆ ಆತ್ಮ ರಕ್ಷಣೆಯ ತರಬೇತಿಯನ್ನು ನೀಡುವುದು. ಆದರೆ, ಹಿಂದಿ ಪ್ರಜೆಗಳ ಸಂರಕ್ಷಣೆಯ ಬಗೆಗೆ ಪರಕೀಯ ಬ್ರಿಟಿಷ್ ಸರಕಾರಕ್ಕೆ ಯಾವುದೇ ಹೊಣೆ ಎನಿಸಲಿಲ್ಲ. ಹೀಗಾಗಿ ಅದು ಪ್ರಜೆಗಳು ಶಸ್ತ್ರಗಳನ್ನು ಇರಿಸಿಕೊಳ್ಳುವುದನ್ನು ನಿಷೇಧಿಸಿತು.

‘‘ಕರ್ನಲ್ ಎಮರಿ ಅವರು ಹಿಂದಿ ಸೈನ್ಯದ ಶೌರ್ಯವನ್ನು ಕುರಿತು ಪಾರ್ಲಿಮೆಂಟ್‌ನಲ್ಲಿ ವ್ಯಕ್ತ ಪಡಿಸಿದ ಮೆಚ್ಚುಗೆ ಹಾಗೂ ಅಭಿನಂದನೆಗಳು ಹಿಂದೂಸ್ಥಾನದಲ್ಲಿ ಯಾವುದೇ ಬಗೆಯ ಪರಿಣಾಮವನ್ನು ಬೀರಲು ಸಾಧ್ಯವಿಲ್ಲ. ಏಕೆಂದರೆ, ಹಿಂದೂಸ್ಥಾನ ದೇಶವನ್ನು ಯುದ್ಧ ಸಾಮಗ್ರಿಯ ದೃಷ್ಟಿಯಿಂದ ಸಮೃದ್ಧಗೊಳಿಸಿದ್ದರೆ ಹಾಗೂ ಜನರಿಗೆ ಸೈನಿಕ ತರಬೇತಿಯನ್ನು ನೀಡಿದ್ದರೆ ಯುರೋಪಿನ ಯಾವುದೇ ದೇಶವು ಬ್ರಿಟಿಷ್ ಸಾಮ್ರಾಜ್ಯವನ್ನು ಕೆಣಕುವಂತಿರಲಿಲ್ಲ’’

ಕಳೆದ ತಿಂಗಳು 2ನೆ ತಾರೀಕಿನಂದು ಅಹ್ಮದಾಬಾದ್‌ನಲ್ಲಿ ನಡೆದ ಹಿಂದೂ-ಮುಸಲ್ಮಾನರ ದಂಗೆಯ ಸಂದರ್ಭದಲ್ಲಿ ಗಾಂಧೀಜಿ ಯವರು ಒಂದು ಕಮಿಟಿಯನ್ನು ಸ್ಥಾಪಿಸಿರುವರು. ಅವರು ಈ ಕಮಿಟಿಯ ಅಧ್ಯಕ್ಷರಾದ ಬೋಗೀಲಾಲ್ ಇವರಿಗೆ ಒಂದು ಪತ್ರವನ್ನು ಬರೆದಿರುವರು. ಅದರಲ್ಲಿ ಅವರು ಹಿಂಸೆ-ಅಹಿಂಸೆಗಳನ್ನು ಕುರಿತು ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಅದರಲ್ಲಿ ಕೆಳಗಿನ ಮಾತುಗಳನ್ನು ಗಮನಕ್ಕೆ ತಂದು ಕೊಳ್ಳುವಂತಿದೆ.

‘‘ಗೂಂಡಾಗಳ ಭಯದಿಂದ ಜನರು ಜೀವವನ್ನು ತಮ್ಮ ಮುಷ್ಟಿ ಯಲ್ಲಿ ಹಿಡಿದುಕೊಂಡು ಓಡುವುದು ಸಹಿಸಲಾಗದ ಸಂಗತಿ. ಗೂಂಡಾಗಳನ್ನು ಹಿಂಸೆ ಹಾಗೂ ಅಹಿಂಸೆಗಳಿಂದ ಎದುರಿಸುವ ಸಾಮರ್ಥ್ಯವು ಅವರಲ್ಲಿ ಇರತಕ್ಕದ್ದು. ನಾನು ಅರಿತುಕೊಂಡ ‘ಬ್ರೀದ್’(ಸಂಕಲ್ಪ) ಪದದ ಅರ್ಥ ನಿಜವಾಗಿದ್ದರೆ, ಕಾಂಗ್ರೆಸ್‌ನವರು ಅಹಿಂಸೆಯಿಂದಲೇ ಪ್ರತೀಕಾರವನ್ನು ಕೈಗೊಳ್ಳತಕ್ಕದ್ದು. ಅದರಲ್ಲಿ ಅವರು ಯಶಸ್ವಿಯಾಗುವರು. ಆದರೆ ಓಡಿಹೋಗುವುದು ತೀರ ಹೇಡಿತನ ಎಂಬುದನ್ನು ನಾನು ಜನರಿಗೆ ಬಲು ಸ್ಪಷ್ಟವಾಗಿ ಹೇಳುತ್ತೇನೆ. ಅವರು ಅಹಿಂಸೆಯಿಂದ ಪ್ರತೀಕಾರವನ್ನು ಕೈಗೊಳ್ಳಲು ಅಸಮರ್ಥರಾಗಿದ್ದರೆ, ಹಿಂಸೆಯಿಂದ ಪ್ರತೀಕಾರವನ್ನು ಕೈಕೊಳ್ಳುವುದು ಅವರ ಕರ್ತವ್ಯವಾಗಿದೆ.

ತಮ್ಮ ಇಲ್ಲವೆ ಇನ್ನೊಬ್ಬರ ಸಂರಕ್ಷಣೆಯನ್ನು ಹಿಂಸೆಯಿಂದ ಕೈಗೊಳ್ಳ ಬೇಕೆನ್ನುವ ಎಷ್ಟು ಜನ ಕಾಂಗ್ರೆಸ್‌ನಲ್ಲಿ ಇರುವರೆಂಬುದನ್ನು ಕಂಡು ಕೊಳ್ಳಬೇಕು. ಗೂಂಡಾಗಳ ದಾಳಿಗೆ ಹಿಂಸಾತ್ಮಕವಾದ ಪ್ರತೀಕಾರವನ್ನು ಕೈಗೊಳ್ಳಲೇ ಬೇಕು. ಅದು ಕಾಂಗ್ರೆಸ್‌ನ ಗುರಿಗೆ ವಿರುದ್ಧವಾದುದಲ್ಲ ಎಂಬುದು ಕಾಂಗ್ರೆಸ್ಸಿಗರ ಬಹುಮತದ ಅಭಿಪ್ರಾಯವಾಗಿದ್ದರೆ ಅವರು ಅದನ್ನು ಪ್ರಕಟವಾಗಿ ಘೋಷಿಸಿ ಜನರಿಗೆ ಅದರಂತೆ ಮಾರ್ಗದರ್ಶನವನ್ನು ಮಾಡಬೇಕು. ‘‘ಜೀವದ ರಕ್ಷಣೆಗಾಗಿ ಗೂಂಡಾಗಳಿಗೆ ಹೆದರಿ ಜನ ಓಡಿ ಹೋಗುವುದನ್ನು ಸಹಿಸಲಾಗದು. ಅದನ್ನು ಹಿಂಸಾತ್ಮಕ ಅಥವಾ ಅಹಿಂಸಾತ್ಮಕ ಬಗೆಯಿಂದ ಎದುರಿಸುವ ಸಾಮರ್ಥ್ಯವು ಆವಶ್ಯಕವಾದುದು.’’
ಕಾಂಗ್ರೆಸ್ ಸೈನ್ಯ ಇಲ್ಲವೆ ಪೊಲೀಸರ ನೆರವನ್ನು ಕೇಳಕೂಡದು. ಅಹಿಂಸೆಯನ್ನು ನಂಬುವವರು ಸರಕಾರದ ನೆರವನ್ನು ಕೇಳತಕ್ಕದ್ದು.

ಯಾವ ತಾಣದಲ್ಲಿ ಹಿಂಸಾತ್ಮಕವಾದ ದೈಹಿಕ ತರಬೇತಿಯನ್ನು ನೀಡಲಾಗುತ್ತದೋ ಅಂಥ ವ್ಯಾಯಾಮದ ಕಣದೊಂದಿಗೆ (ಅಖಾಡ) ಕಾಂಗ್ರೆಸ್ ಸಂಬಂಧವನ್ನು ಇರಿಸಕೂಡದು.

ಕಾಂಗ್ರೆಸ್ ದಂಗೆಯಲ್ಲಾದ ನಷ್ಟಕ್ಕಾಗಿ ಪರಿಹಾವನ್ನು ಕೇಳುವುದಿಲ್ಲ. ಅದು ಕಾಂಗ್ರೆಸ್‌ನ ಕಾರ್ಯವಲ್ಲ. ಜನತೆಯು ಸ್ವಸಂರಕ್ಷಣೆಯ ಬಗ್ಗೆ ದುರ್ಬಲವಾಗಿದ್ದರಿಂದ ನಷ್ಟವನ್ನು ಅನುಭವಿಸಲೇ ಬೇಕು, ಅದನ್ನು ಸಹಿಸಿಕೊಳ್ಳಬೇಕು. ‘‘ಭಯ್ಯೆ, ಶೀಖ್ ಅಥವಾ ಠಾಕೂರರಿಂದ ಸಂರಕ್ಷಣೆ ಪಡೆಯುವುದನ್ನು ಊಹಿಸಲಾರೆ.’’

‘‘ಮುಸಲ್ಮಾನ ವಸತಿಗಳಲ್ಲಿ ಇರುವ ಹಿಂದೂಗಳು ಅಲ್ಲಿಂದ ಕದಲಕೂಡದು. ಜೀವನವನ್ನು ಅಪಾಯಕ್ಕೆ ಒಡ್ಡಿಯಾದರೂ ಸರಿಯೇ, ಅವರು ಅಲ್ಲಿಯೆ ಇರತಕ್ಕದ್ದು.’’

‘‘ಹಿಂದೂಗಳು ಹಿಂದು ವಸತಿಯಲ್ಲಿರುವ ಮುಸಲ್ಮಾನರಿಗೆ ಪೂರ್ತಿ ಸಂರಕ್ಷಣೆಯನ್ನು ಒದಗಿಸತಕ್ಕದ್ದು.’’
ಗಾಂಧಿಯವರು 1940ರಲ್ಲಿ ಇಂಗ್ಲಿಷ್ ಜನರಿಗೆ ಬರೆದ ಪತ್ರ ಹಾಗೂ 1941ರಲ್ಲಿ ನೀಡಿದ ಈ ಮೇಲಿನ ಹೇಳಿಕೆಗಳನ್ನು ಹೊಂದಿಸಿ ನೋಡಿದವನು ಏನೆಂದಾನು? ಯಾವ ಗಾಂಧಿ ಒಂದು ಕಾಲಕ್ಕೆ ನಿಮ್ಮ ಶಸ್ತ್ರಾಸ್ತ್ರಗಳನ್ನು ಎಸೆದು ಬಿಡಿ, ಸೈನಿಕ ಮನೋಧರ್ಮವನ್ನು ತ್ಯಜಿಸಿ ಎಂದು ಇಂಗ್ಲಿಷ್ ಜನರಿಗೆ ಹೇಳುತ್ತಿದ್ದರೋ ಅದೇ ಗಾಂಧಿ ಹಿಂದೂಸ್ಥಾನದ ಜನರಿಗೆ ಸೈನಿಕ ತರಭೇತಿಯನ್ನು ಏಕೆ ನೀಡಲಿಲ್ಲ, ಶಸ್ತ್ರಾಸ್ತ್ರಗಳನ್ನು ಏಕೆ ನಿರ್ಮಿಸಲಿಲ್ಲ, ಹಿಂದಿ ಜನರಿಗೆ ಹಿಂಸಕರಿಂದ ಸಂರಕ್ಷಣೆಯನ್ನು ಮಾಡಲು ಏಕೆ ಕಲಿಸಲಿಲ್ಲ ಎಂದು ಹಲ್ಲುಕಚ್ಚುತ್ತಾರೆ, ತುಂಬ ಕೋಪಿಸಿಕೊಳ್ಳುತ್ತಾರೆ.

ಈ ಮನುಷ್ಯನಿಗೆ ಯಾವುದಾದರೂ ತತ್ವ ಇದೆಯೇ, ಇಲ್ಲವೇ, ಇವರ ಬುದ್ಧಿ ಸ್ಥಿರವಾಗಿ ಇದೆಯೇ, ಇಲ್ಲವೇ ಎಂಬ ಬಗೆಗೆ ಯಾರದೇ ಮನಸ್ಸಿನಲ್ಲಿ ಸಂದೇಹ ಮೂಡಿದರೆ ಅಂಥವನ ಮೇಲೆ ಯಾರು ತಪ್ಪು ಹೊರಿಸುವರು? ಯಾವ ಗಾಂಧಿ ಒಂದು ವರ್ಷದ ಕೆಳಗೆ, ನೀವು ಸಶಸ್ತ್ರವಾದ ಪ್ರತೀಕಾರವನ್ನು ಮಾಡಬೇಡಿ, ಹಿಟ್ಲರ್ ಮತ್ತು ಮುಸೋಲಿನಿ ಅವರಿಗೆ ಕರೆ ಕೊಡಿ, ಅವರು ಬಂದರೆ ಮನೆ ಮಠಗಳನ್ನು ತೆರೆದು, ಅವರು ತಮಗೆ ಬೇಕಿದ್ದುದನ್ನು ಒಯ್ಯಲು ಬಿಡಿ ಎಂದು ಇಂಗ್ಲಿಷ್ ಜನರಿಗೆ ಉಪದೇಶವನ್ನು ಮಾಡುತ್ತಿದ್ದರೋ ಅದೇ ಗಾಂಧಿ ಅಹ್ಮದಾಬಾದ್‌ನ ಜನರಿಗೆ ಇಂದು, ನೀವು ನಿಮ್ಮ ಮನೆಮಠಗಳನ್ನು ಬಿಟ್ಟು ಓಡಿ ಹೋಗಬೇಡಿ, ಓಡಿಹೋಗುವುದು ಹೇಡಿತನ, ನೀವು ಅಹಿಂಸೆಯಿಂದ ಪ್ರತೀಕಾರವನ್ನು ಮಾಡಲು ಸಾಧ್ಯವಿಲ್ಲದಿದ್ದರೆ ಹಿಂಸೆಯಿಂದ ಮಾಡಿ ಎಂದು ಸ್ಪಷ್ಟವಾಗಿ ಹೇಳುತ್ತಾರೆ. ಇವರು ಇಂಥ ಚಂಚಲ ಮನೋಧರ್ಮದವರು. ಜನ ಇವರನ್ನು ಮಾರ್ಗದಶರ್ಕರೆಂದು ಹೇಗೆ ಒಪ್ಪಿಕೊಳ್ಳಬೇಕು?-ಎಂದು ಯಾರಾದರೂ ಪ್ರಶ್ನೆ ಕೇಳಿದರೆ ಅವರನ್ನು ತಪ್ಪಿತಸ್ಥರು ಎನ್ನಲಾದೀತೇ?

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ- ಬರಹಗಳ ಸಂಪುಟ)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)