varthabharthi

ನೇಸರ ನೋಡು

ಆಡುವುದೊಂದು ಮಾಡುವುದು ಮತ್ತೊಂದು

ವಾರ್ತಾ ಭಾರತಿ : 11 Jun, 2017
ಜಿ.ಎನ್.ರಂಗನಾಥ ರಾವ್

ಸ್ವಲ್ಪಕಾಲದಿಂದ ನರೇಂದ್ರ ಮೋದಿಯವರ ಸರಕಾರ ಎನ್‌ಡಿಟಿವಿಯ ಬೆನ್ನುಹತ್ತಿರುವುದು ಮಾಧ್ಯಮ ವಲಯಗಳಲ್ಲಿ ಗುಟ್ಟಾಗಿ ಉಳಿದಿಲ್ಲ. ಇತರ ವಾಹಿನಿಗಳಂತೆ ಎನ್‌ಡಿಟಿವಿ ಮೋದಿ ಸರಕಾರದ ಖಯಾಲಿಗಳಿಗೆ ಮಣಿದಿಲ್ಲ. ಎನ್‌ಡಿಟಿವಿ ಮೋದಿ ಸರಕಾರದ ಕೆಂಗಣ್ಣಿಗೆ ಗುರಿಯಾಗಿರುವುದು ಇದೇ ಮೊದಲನೆಯ ಸಲವೂ ಅಲ್ಲ.


ಕಂಕುಳಲ್ಲಿ ದೊಣ್ಣೆ, ಕೈಯಲ್ಲಿ ಶರಣಾರ್ಥಿ.
-ಇದೊಂದು ಕನ್ನಡದ ಗಾದೆ. ನರೇಂದ್ರ ಮೋದಿಯವರ ಸರಕಾರಕ್ಕೆ ಲಗತ್ತಿಸಲು ಲಾಯಕ್ಕಾದ ಗಾದೆ. ನೋಡಿ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಇಲ್ಲ ಎನ್ನುತ್ತಾರೆ ಮೋದಿಯವರು. ಆದರೆ ಅವರ ಸರಕಾರ ಅಭಿವ್ಯಕ್ತಿ ಸ್ವಾತಂತ್ರ್ಯದ ತಳಹದಿ ಕ್ಷಯಿಸಲು ಏನು ಬೇಕೋ ಅದೆಲ್ಲವನ್ನೂ ಮಾಡುತ್ತದೆ. ದೇಶದಲ್ಲಿ ಅಸಹನೆ, ಅಸಹಿಷ್ಣುತೆ ಇಲ್ಲ ಎನ್ನುತ್ತಾರೆ. ಆದರೆ ಸರಕಾರದ ಮೌನ ಬೆಂಬಲದಿಂದ, ಬಜರಂಗ ದಳ, ಹಿಂದೂ ಸೇನೆ, ಶ್ರೀ ರಾಮ ಸೇನೆ ಮೊದಲಾದ ಪುಂಡು ಸೇನೆಗಳು ಗೋರಕ್ಷಣೆ ನೆಪದಲ್ಲಿ, ಸಾಂಸ್ಕೃತಿಕ ದಾದಾಗಿರಿ ನೆಪದಲ್ಲಿ ಸಹಿಷ್ಣುತೆ ಕದಡುವಂಥ ಕೃತ್ಯಗಳನ್ನು ಎಸಗುತ್ತಲೇ ಇವೆ. ಮೋದಿಯವರು ಇಂಥ ಕೃತ್ಯಗಳನ್ನು ಖಂಡಿಸುವಂಥ ಒಂದು ಮಾತನ್ನೂ ಆಡಿಲ್ಲ. ಮೋದಿಯವರು ಸಂದರ್ಭ ಸಿಕ್ಕಾಗಲೆಲ್ಲ ಪ್ರಜಾಪ್ರಭುತ್ವವನ್ನು ಬಲಪಡಿಸುವ ಅಗತ್ಯ ಕುರಿತು ಮಾತಾಡುತ್ತಾರೆ.

ಇತ್ತೀಚಿನ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಅವರು ಪ್ರಜಾಸತ್ತೆ ಸಾಯದೆ ಜೀವಂತ ಇರಬೇಕಾದರೆ ಆರೋಗ್ಯಪೂರ್ಣ ಟೀಕೆ-ವಿಮರ್ಶೆಗಳು ಅಗತ್ಯ ಎಂದಿದ್ದಾರೆ. ಇದೊಂದು ಸ್ವಾಗತಾರ್ಹವಾದ ಮಾತೇ ಸರಿ. ಆದರೆ ಅವರ ಸರಕಾರದ ಕ್ರಮಗಳು, ವಿಶೇಷವಾಗಿ, ಮಾಧ್ಯಮಕ್ಕೆ ಸಂಬಂಧಿಸಿದ ಕ್ರಮಗಳು ಸರ್ವಾಧಿಕಾರಿ ಮನೋವೃತ್ತಿಯ ಹೊಡೆತಗಳೇ ಆಗಿರುತ್ತವೆ. ಈ ಮಾತಿಗೆ ಇತ್ತೀಚಿನ ನಿದರ್ಶನವಾಗಿ ಎನ್‌ಡಿಟಿವಿ ಪ್ರಕರಣವನ್ನೇ ನೋಡಬಹುದು.

ಕೇಂದ್ರ ತನಿಖಾ ಮಂಡಲಿ (ಸಿಬಿಐ) ಇತ್ತೀಚೆಗೆ ಎನ್‌ಡಿಟಿವಿ ಮಾಲಕರ ಮನೆಯ ಮೇಲೆ ದಾಳಿ ನಡೆಸಿತು. ಖಾಸಗಿ ಬ್ಯಾಂಕ್ ಒಂದಕ್ಕೆ ನಲವತ್ತೆಂಟು ಕೋಟಿ ರೂಪಾಯಿ ನಷ್ಟ ಉಂಟುಮಾಡಿತೆನ್ನಲಾದ ಷೇರು ವ್ಯವಹಾರ ವಹಿವಾಟನ್ನು ‘ಸೆಬಿ’ಯ (ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ) ಗಮನಕ್ಕೆ ತರದೆ ಗೋಪ್ಯವಾಗಿರಿಸಿತ್ತು ಎನ್ನಲಾದ ವಿದ್ಯಮಾನ ಒಂದಕ್ಕೆ ಸಂಬಂಧಿಸಿದಂತೆ ದಾಳಿ ನಡೆಸಲಾಯಿತು. ‘‘ಅದೇ ಹಳೆಯ ಸುಳ್ಳು ಆಪಾದನೆಯೊಂದಕ್ಕೆ ಸಂಬಂಧಿಸಿದಂತೆ ನಡೆಸಿರುವ ದಾಳಿ. ಬೇಡವಾದವರನ್ನು ಬೇಟೆಯಾಡುವ ಚಾಳಿ’’ ಎಂದು ಎನ್‌ಡಿಟಿವಿ ಸಿಬಿಐ ದಾಳಿಯನ್ನು ವ್ಯಾಖ್ಯಾನಿಸಿದೆ. ಪ್ರಣವ್ ರಾಯ್ ಮತ್ತು ರಾಧಿಕಾ ರಾಯ್ ಮಾಲಕತ್ವದ ಈ ಟಿವಿ ವಾಹಿನಿ ಮೇಲೆ ನಡೆಸಿರುವ ದಾಳಿಯನ್ನು, ವೃತ್ತಿಬಾಂಧವರು ಮತ್ತು ಮಾಧ್ಯಮ ವೃತ್ತಿಯ ಸಂಘ ಸಂಸ್ಥೆಗಳು ಖಂಡಿಸಿವೆ. ಸಿಬಿಐ ಆರೋಪಗಳನ್ನು ಕಟ್ಟುಕತೆ ಎಂದು ಬಣ್ಣಿಸಿವೆ.

ಪ್ರಣವ್ ರಾಯ್ ದಂಪತಿ ಸತ್ಯ-ಪ್ರಾಮಾಣಿಕತೆಗಳಿಗೆ ಬದ್ಧರಾಗಿ ಪತ್ರಿಕಾ ವೃತ್ತಿಯಲ್ಲಿ ಸ್ವಪ್ರಯತ್ನದಿಂದ ಮೇಲೆ ಬಂದವರು. ಸಿಬಿಐ ಹೇಳುತ್ತಿರುವ ವ್ಯಾಪಾರ ವಹಿವಾಟಿನಲ್ಲಿ ಕೆಲವು ತಪ್ಪುಗಳಿರಬಹುದು, ಆದರೆ ವಂಚನೆಯ ಹುನ್ನಾರ ಖಂಡಿತಾ ಸಾಧ್ಯವಿಲ್ಲ ಎಂಬುದು ವೃತ್ತಿಬಾಂಧವರ ಅಂಬೋಣ. ಆದರೆ ಸಿಬಿಐ, ಆರ್‌ಆರ್‌ಪಿಆರ್ ಹೋಲ್ಡಿಂಗ್ಸ್ ಎಂಬ ಖಾಸಗಿ ಕಂಪೆನಿ, ಪ್ರಣವ್ ರಾಯ್, ಅವರ ಪತ್ನಿ ರಾಧಿಕಾ ರಾಯ್ ಮತ್ತು ಐಸಿಐಸಿಐ ಬ್ಯಾಂಕಿನ ಕೆಲವು ಆಧಿಕಾರಿಗಳ ವಿರುದ್ಧ ಕ್ರಿಮಿನಲ್ ಸಂಚು, ವಂಚನೆ ಮತ್ತು ಭ್ರಷ್ಟಾಚಾರಗಳ ಆಪಾದನೆ ಹೊರಿಸಿ ಮೊಕದ್ದಮೆ ದಾಖಲು ಮಾಡಿಕೊಂಡಿದೆ. ಆರ್‌ಆರ್‌ಪಿಆರ್ ಹೋಲ್ಡಿಂಗ್ಸ್ ಎಂಬ ಕಂಪೆನಿ, ಎನ್‌ಡಿಟಿವಿಯ ಷೇರುಗಳನ್ನು ಸಾರ್ವಜನಿಕರಿಂದ ಖರೀದಿಸಲು ‘ಇಂಡಿಯಾ ಬುಲ್ಸ್’ ಎಂಬ ಖಾಸಗಿ ಸಂಸ್ಥೆಯಿಂದ 500 ಕೋಟಿ ರೂಪಾಯಿ ಸಾಲ ತೆಗೆದುಕೊಂಡಿದೆ ಎಂದು ಆರೋಪ ಪಟ್ಟಿಯಲ್ಲಿ ಆಪಾದಿಸಲಾಗಿದೆ.

ಇಂಡಿಯಾ ಬುಲ್ಸ್‌ನಿಂದ ಪಡೆದ ಸಾಲವನ್ನು ಮರುಪಾವತಿಸಲು ಆರ್‌ಆರ್‌ಪಿಆರ್ ಹೋಲ್ಡಿಂಗ್ಸ್ ಐಸಿಐಸಿಐ ಬ್ಯಾಂಕಿನಿಂದ ಶೇ.19ರ ಬಡ್ಡಿ ದರದಲ್ಲಿ 375 ಕೋಟಿ ಸಾಲ ಪಡೆದಿದೆ ಎಂಬುದು ಸಿಬಿಐ ಆರೋಪ. ಎನ್‌ಡಿಟಿವಿಯ ಪ್ರವರ್ತಕರು ತಮ್ಮ ಸ್ವಾಮ್ಯದ ಎಲ್ಲ ಷೇರುಗಳನ್ನೂ ಈ ಸಾಲಕ್ಕೆ ಸಹಭದ್ರತೆಯಾಗಿ ಐಸಿಐಸಿಐ ಬ್ಯಾಂಕಿಗೆ ಒತ್ತೆಯಿಟ್ಟಿದ್ದಾರೆಂದೂ ಸಿಬಿಐ ಆಪಾದಿಸಿದೆ. ಇದರಲ್ಲಿ ಅಪರಾಧವೇನು ಎನ್ನುತ್ತೀರ? ಷೇರುಗಳನ್ನು ಒತ್ತೆಯಿಟ್ಟ ಸಂಗತಿಯನ್ನು ಸೆಬಿಗೆ ಮತ್ತು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಶಾಖೆಗೆ ತಿಳಿಸದೆ ಗೋಪ್ಯವಾಗಿಡಲಾಗಿದೆ.

ಶೇ. 61ರಷ್ಟು ಬಂಡವಾಳ ಸೃಷ್ಟಿಸುವ ಸಲುವಾಗಿ ಇದನ್ನು ಗೋಪ್ಯವಾಗಿರಿಸಲಾಗಿದೆ. ಇದರಿಂದ ಬ್ಯಾಂಕಿಂಗ್ ಕಾಯ್ದೆಯ ಉಲ್ಲಂಘನೆಯಾಗಿದೆ. ಜೊತೆಗೆ ಐಸಿಐಸಿಐ ಬ್ಯಾಂಕ್ ಶೇ.10ರಷ್ಟು ಬಡ್ಡಿಯನ್ನು ಮನ್ನಾ ಮಾಡಿದೆ ಎಂಬುದು ಸಿಬಿಐ ಆರೋಪ. ಸಾಲಗಳನ್ನೆಲ್ಲ ತೀರಿಸಲಾಗಿದೆ ಎಂದು ತಿಳಿಸಿರುವ ಎನ್‌ಡಿಟಿವಿ ಅದನ್ನು ದೃಢೀಕರಿಸುವ ದಾಖಲೆಗಳನ್ನು ಒದಗಿಸಿದೆ. ಎನ್‌ಡಿಟಿವಿಯಾಗಲೀ ಅಥವಾ ಅದರ ಪ್ರವರ್ತಕರಾಗಲೀ ಐಸಿಐಸಿಐ ಬ್ಯಾಂಕ್ ಅಥವಾ ಬೇರೆ ಯಾವುದೇ ಬ್ಯಾಂಕುಗಳ ಸಾಲವನ್ನೆಲ್ಲ ತೀರಿಸಿದೆ. ಬಾಕಿ ಉಳಿಸಿಕೊಂಡಿಲ್ಲ ಎಂದೂ ಎನ್‌ಡಿಟಿವಿಯ ಅಂತರ್ಜಾಲ ಪ್ರಕಟನೆೆ ತಿಳಿಸಿದೆ.

‘‘ಎನ್‌ಡಿಟಿವಿ ಸ್ವತಂತ್ರ ಹಾಗೂ ನಿರ್ಭೀತ ಪತ್ರಿಕಾ ವ್ಯವಸಾಯಕ್ಕೆ ಬದ್ಧವಾದ ಮಾಧ್ಯಮ ಸಂಸ್ಥೆ. ತಮ್ಮ ವಾಹಿನಿಯ ಪತ್ರಕರ್ತರು ಮತ್ತು ಪ್ರಸಾರ ತಂಡದ ಈ ಗುಣವಿಶೇಷಗಳನ್ನು ಅರಗಿಸಿಕೊಳ್ಳಲಾಗದ ಅಧಿಕಾರಾರೂಢ ಪಕ್ಷದ ರಾಜಕಾರಣಿಗಳು ತಮ್ಮ ಬಾಯಿಮುಚ್ಚಿಸಲು ನಡೆಸಿರುವ ಕುಟಿಲೋಪಾಯ ಈ ಸಿಬಿಐ ದಾಳಿ’’ ಎಂದು ಎನ್‌ಡಿಟಿವಿ ಹೇಳಿಕೆಯಲ್ಲಿ ಖಂಡತುಂಡವಾಗಿ ಹೇಳಿದೆ.

ಹಿಂದಿನ ಕೆಲವು ಪ್ರಕರಣಗಳನ್ನು ಗಮನಿಸಿದಾಗ ಎನ್‌ಡಿಟಿವಿಯ ಹೇಳಿಕೆಯಲ್ಲಿ ಹುರುಳಿಲ್ಲದೇ ಇಲ್ಲ ಎಂದು ಭಾಸವಾಗುತ್ತದೆ. ಸ್ವಲ್ಪಕಾಲದಿಂದ ನರೇಂದ್ರ ಮೋದಿಯವರ ಸರಕಾರ ಎನ್‌ಡಿಟಿವಿಯ ಬೆನ್ನುಹತ್ತಿರುವುದು ಮಾಧ್ಯಮ ವಲಯಗಳಲ್ಲಿ ಗುಟ್ಟಾಗಿ ಉಳಿದಿಲ್ಲ. ಇತರ ವಾಹಿನಿಗಳಂತೆ ಎನ್‌ಡಿಟಿವಿ ಮೋದಿ ಸರಕಾರದ ಖಯಾಲಿಗಳಿಗೆ ಮಣಿದಿಲ್ಲ. ಎನ್‌ಡಿಟಿವಿ ಮೋದಿ ಸರಕಾರದ ಕೆಂಗಣ್ಣಿಗೆ ಗುರಿಯಾಗಿರುವುದು ಇದೇ ಮೊದಲನೆಯ ಸಲವೂ ಅಲ್ಲ. ಕಳೆದ ವರ್ಷ ಜನವರಿಯಲ್ಲಿ ಪಠಾಣ್‌ಕೋಟ್ ವಾಯು ನೆಲೆಯ ಮೇಲೆ ಸಂಭವಿಸಿದ ಭಯೋತ್ಪಾದಕರ ದಾಳಿಯ ಸೂಕ್ಷ್ಮಸಂವೇದಿ ವಿವರಗಳನ್ನು ಪ್ರಸಾರಮಾಡಿದ್ದಕ್ಕಾಗಿ ಎನ್‌ಡಿಟಿವಿಯ ಹಿಂದಿ ವಾಹಿನಿಯ ಪ್ರಸಾರವನ್ನು ಕೇಂದ್ರ ಸರಕಾರ ಒಂದು ದಿನದ ಮಟ್ಟಿಗೆ ನಿಷೇಧಿಸಿತ್ತು.

ಪಠಾಣ್‌ಕೋಟ್ ನೆಲೆಯ ಮೇಲೆ ಭಯೋತ್ಪಾದಕರು ನಡೆಸಿದ ದಾಳಿ ವಿವರಗಳ ಪ್ರಸಾರದಲ್ಲಿ ‘‘ರಕ್ಷಣಾ ವ್ಯೆಹಗಳಿಗೆ ಸಂಬಂಧಿಸಿದ ಸೂಕ್ಷ್ಮಸಂವೇದನೆಯ ಮಾಹಿತಿಗಳನ್ನು ಬಹಿರಂಗಪಡಿಸಲಾಗಿತ್ತು’’ ಎಂಬುದು ಹಿಂದಿ ವಾಹಿನಿ ಮೇಲೆ ನಿಷೇಧ ಹೇರಿದ ಕೇಂದ್ರ ವಾರ್ತೆ ಮತ್ತು ಪ್ರಸಾರ ಶಾಖೆಯ ಸಮಜಾಯಿಷಿ. ಈ ನಿಷೇಧಾಜ್ಞೆ ಪ್ರಶ್ನಿಸಿ ಎನ್‌ಡಿಟಿವಿ ಆಡಳಿತ ವರ್ಗ ಸುಪ್ರೀಂ ಕೋರ್ಟಿನ ಮೆಟ್ಟಿಲು ಹತ್ತಿತ್ತು. ತಮ್ಮ ವಾಹಿನಿ ಪ್ರಸಾರ ಮಾಡಿದ ವರದಿ-ವಿವರಗಳು ಅಧಿಕೃತ ಮಾಹಿತಿಯನ್ನೇ ಆಧರಿಸಿದವಾಗಿತ್ತು. ತಮ್ಮ ವಾಹಿನಿ ಬಹಿರಂಗ ಪಡಿಸಿದ ವಿವರಗಳನ್ನು ಪ್ರಸಾರ ಮಾಡಿದ ಇತರ ವಾಹಿನಿಗಳನ್ನು ಶಿಕ್ಷಿಸದ ಸರಕಾರ ತಮ್ಮನ್ನು ಮಾತ್ರ ಶಿಕ್ಷೆಗೆ ಗುರಿಪಡಿಸಿದೆ ಎಂದು ಎನ್‌ಡಿಟಿವಿ ಸರ್ವೋಚ್ಚ ನ್ಯಾಯಾಲಯದ ಮುಂದೆ ಅಹವಾಲು ತೋಡಿಕೊಂಡಿತ್ತು.

‘‘ಇತರ ವಾಹಿನಿಗಳು ಮತ್ತು ಪತ್ರಿಕೆಗಳು ಬಹಿರಂಗ ಪಡಿಸಿರುವ ವಿವರಗಳಿಗಿಂತ ಭಿನ್ನವಾದ ವಿವರಗಳನ್ನು ತಮ್ಮ ವಾಹಿನಿ ಪ್ರಸಾರ ಮಾಡಿಲ್ಲ ಎಂಬುದನ್ನು ಸಾಕ್ಷ್ಯಾಧಾರ ಸಮೇತ ಋಜುವಾತು ಪಡಿಸಲು ತಮಗೆ ನ್ಯಾಯೋಚಿತವಾದ ಅವಕಾಶ ನೀಡಲಿಲ್ಲ’’ ಎಂದು ಎನ್‌ಡಿಟಿವಿ ಪ್ರತಿನಿಧಿಗಳು ಕೇಂದ್ರ ವಾರ್ತೆ ಮತ್ತು ಪ್ರಸಾರ ಖಾತೆ ಸಚಿವರಿಗೆ ಸಲ್ಲಿಸಿದ ಮನವಿಯಲ್ಲಿ ದೂರಿದ್ದಾರೆ.

ಸಹಜವಾಗಿಯೇ ಇದಕ್ಕೆ ಮಾಧ್ಯಮ ವಲಯದಲ್ಲಿ ತೀವ್ರ ಪ್ರತಿಭಟನೆ ವ್ಯಕ್ತವಾಯಿತು. ಪತ್ರಕರ್ತರು ಮತ್ತು ಪತ್ರಿಕಾ ಸಂಪಾದಕರು ನಿಷೇಧವನ್ನು ತೀವ್ರವಾಗಿ ಖಂಡಿಸಿದರು. ಪತ್ರಿಕಾ ಮಂಡಳಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ನಿಷೇಧಾಜ್ಞೆಯನ್ನು ಸಂವಿಧಾನ ದತ್ತವಾದ ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕಿದ 1970ರ ತುರ್ತು ಪರಿಸ್ಥಿತಿಗೆ ಹೋಲಿಸಿತು. ಒಂದು ದಿನದ ಮಟ್ಟಿಗೆ ಪ್ರಸಾರ ನಿಷೇಧಿಸುವ ಸರಕಾರದ ಆಜ್ಞೆ ಅಭೂತಪೂರ್ವವಾದದ್ದು.

‘‘ಮಾಧ್ಯಮದ ಕಾರ್ಯನಿರ್ವಹಣೆಯಲ್ಲಿ ಮಧ್ಯಪ್ರವೇಶಿಸುವ ಹಾಗೂ ಮಾಧ್ಯಮಗಳ ಪ್ರಸಾರ ಇಷ್ಟವಾಗದ ಸಂದರ್ಭಗಳಲ್ಲಿ ಅವುಗಳನ್ನು ದಂಡಿಸುವ ಅಧಿಕಾರವನ್ನು ಸರಕಾರ ಕೈಗೆತ್ತಿಕೊಂಡಿರುವಂತೆ ತೋರುತ್ತದೆ’’ ಎಂದು ಇಂಡಿಯನ್ ಎಡಿಟರ್ಸ್‌ ಗಿಲ್ಡ್ ತೀವ್ರ ವಿರೋಧವನ್ನು ವ್ಯಕ್ತಪಡಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ವಾರ್ತಾ ಸಚಿವ ವೆಂಕಯ್ಯ ನಾಯ್ಡು ಅವರು, ‘‘ರಾಷ್ಟ್ರದ ಭದ್ರತೆಯ ದೃಷ್ಟಿಯಿಂದ ಅನಿವಾರ್ಯ’’ವಾಗಿತ್ತೆಂದು ನಿಷೇಧಾಜ್ಞೆಯನ್ನು ಸಮರ್ಥಿಸಿಕೊಂಡಿದ್ದರು ಹಾಗೂ ಸರಕಾರದ ಈ ಕ್ರಮದ ವಿರುದ್ಧ ವ್ಯಕ್ತವಾಗಿರುವ ಪ್ರತಿಕ್ರಿಯೆಗಳು ರಾಜಕೀಯ ಪ್ರೇರಿತವಾದವು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಕೊನೆ ಘಳಿಗೆಯಲ್ಲಿ ಕೇಂದ್ರ ಸರಕಾರ ನಿಷೇಧಾಜ್ಞೆಯನ್ನು ಹಿಂದಕ್ಕೆ ತೆಗೆದುಕೊಂಡಿತು.

ಈಗ ಆರ್ಥಿಕ ಆರೋಪ ಹೊರಿಸಿ ಸಿಬಿಐ ದಾಳಿ ನಡೆಸಿದೆ. ಸಿಬಿಐ ದಾಳಿ ಕುರಿತಂತೆಯೂ ಸಚಿವ ವೆಂಕಯ್ಯ ನಾಯ್ಡು ಅವರ ಪ್ರತಿಕ್ರಿಯೆ, ನಿಷೇಧಾಜ್ಞೆಗೆ ಸಂಬಂಧಿಸಿದಂತೆ ನೀಡಿದ ಪ್ರತಿಕ್ರಿಯೆಗಿಂತ ಭಿನ್ನವಾಗಿಲ್ಲ. ಸಿಬಿಐ ದಾಳಿಯಲ್ಲಿ ರಾಜಕೀಯ ಹಸ್ತಕ್ಷೇಪವಿಲ್ಲ ಎಂದಿರುವ ನಾಯ್ಡು ಅವರು, ‘‘ಯಾರಾದರೂ ತಪ್ಪುಮಾಡಿದಲ್ಲಿ, ಅವರು ಮಾಧ್ಯಮದವರು ಎಂಬ ಕಾರಣದಿಂದಾಗಿ ಸರಕಾರ ಮೌನದಿಂದರಬೇಕೆಂದು ನಿರೀಕ್ಷಿಸಲಾಗದು’’ ಎನ್ನುವ ಮಾತನ್ನೂ ಆಡಿದ್ದಾರೆ. ತಪ್ಪು ಮಾಡಿದವರು ಯಾರೇ ಆಗಲಿ ಅವರು ಶಿಕ್ಷಾರ್ಹರು. ಮಾಧ್ಯಮದವರು ತಪ್ಪುಮಾಡಿದಾಗ ಸರಕಾರ ಮೂಕ ಪ್ರೇಕ್ಷಕನಂತಿರಬೇಕೆಂದು ಮಾಧ್ಯಮದವರೂ ನಿರೀಕ್ಷಿಸುವುದಿಲ್ಲ. ಸರಕಾರದ ಅರ್ಥಾತ್ ನರೇಂದ್ರ ಮೋದಿಯವರ ಕೋಪ-ಕ್ರೋಧಗಳಿಗೆ ಗುರಿಯಾಗುವಂಥಾದ್ದೇನನ್ನು ಆ ವಾಹಿನಿ ಮಾಡಿತ್ತು ಎನ್ನುವ ಸತ್ಯವನ್ನು ತಿಳಿಯುವುದಷ್ಟೆ ಪತ್ರಕರ್ತರ ಇರಾದೆ.

ಮೇಲಿನವರ ಸಮ್ಮತಿ ಇಲ್ಲದೆ ಸಚಿವರು ನಿಷೇಧಾಜ್ಞೆಯಂಥ ಕ್ರಮಕ್ಕೆ ಮುಂದಾಗಿರಲಾರರು. ಸಚಿವರೇನಿದ್ದರೂ ಕೈಗೊಡಲಿ ಇದ್ದಂತೆ. ಮೇಲಿನಿಂದ ಬರುವ ಆಜ್ಞೆಯನ್ನು ಸಚಿವರು ಪರಿಪಾಲಿಸಲೇ ಬೇಕು. ಕೂತರೆ ನಿಂತರೆ ಮೋದಿಯವರ ಹೆಸರು ಜಪಿಸುವ, ಎಲ್ಲವೂ ಮೋದಿಯವರ ವರಪ್ರಸಾದವೆಂದು ಗಿಳಿಪಾಠವೊಪ್ಪಿಸುವ ಈಗಿನ ಮಂತ್ರಿಗಳ ಮಟ್ಟಿಗಂತೂ ಇದು ನೂರಕ್ಕೆ ನೂರು ಸತ್ಯ. ವಿರೋಧಿಗಳ ಬಾಯಿಮುಚ್ಚಿಸಲು, ಭಿನ್ನಮತದ ದನಿ ಅಡಗಿಸಲು ಸರಕಾರ ರಾಜದ್ರೋಹದ ಕಾನೂನುಗಳನ್ನು ಬಳಸುತ್ತಿದೆ. ಈ ಸಂದರ್ಭದಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಎನ್‌ಡಿಟಿವಿಯ ವರದಿಗಾರಿಕೆ. ಎನ್‌ಡಿಟಿವಿಯ ವಾರ್ತಾ ವರದಿ ವೈಖರಿ ಮೋದಿಯವರ ಹಿಂದೂ ರಾಷ್ಟ್ರೀಯವಾದಿ ಬಿಜೆಪಿಗಳಿಗೆ ಕಿರಿಕಿರಿಯುಂಟುಮಾಡಿದ್ದರೆ ಅದರಲ್ಲಿ ಆಶ್ಚರ್ಯವೇನಿಲ್ಲ.

ಸಿಬಿಐ ದಾಳಿಗೆ ಒಂದೆರಡು ದಿನಗಳ ಮುಂಚೆಯಷ್ಟೆ ವಾಹಿನಿಯ ವಿಚಾರ ಸಂಕಿರಣ ಮಾದರಿಯ ಕಾರ್ಯಕ್ರಮವೊಂದರಲ್ಲಿ ಕಾರ್ಯಕ್ರಮ ನಿರೂಪಕಿಗೂ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಹಿತ್ ಪಾತ್ರ ಅವರಿಗೂ ಜಟಾಪಟಿಯಾಗಿತ್ತು. ಎನ್‌ಡಿಟಿವಿ ಏನಕೇನ ಬಿಜೆಪಿಯನ್ನು ವಿರೋಧಿಸುವ ಏಕಮಾತ್ರ ಕಾರ್ಯಸೂಚಿಯನ್ನು ಹೊಂದಿದೆ ಎಂಬರ್ಥದ ಮಾತುಗಳನ್ನಾಡಿದ ಸಂಹಿತ್ ಪಾತ್ರ ಅವರನ್ನು ಕಾರ್ಯಕ್ರಮದಿಂದ ಹೊರಹೋಗುವಂತೆ ನಿರೂಪಕಿ ತಾಕೀತು ಮಾಡಿದ್ದನ್ನು ಮರೆಯುವಂತಿಲ್ಲ

ಪ್ರಜಾಪ್ರಭುತ್ವವನ್ನು ಬಲಪಡಿಸುವಂಥ ಮಾತುಗಳನ್ನು ಸಂದರ್ಭ ಸಿಕ್ಕಾಗಲೆಲ್ಲ ಉಲಿಯುವ ಮೋದಿಯವರ ಸರಕಾರ ಕಾರ್ಯತ: ಇದಕ್ಕೆ ವಿರುದ್ಧವಾದುದನ್ನೇ ಮಾಡುತ್ತಿದೆ. ಯಾವುದೇ ಪಕ್ಷ ಸರಕಾರ ವಿರಲಿ ವೈರಿಗಳನ್ನು ಸದೆಬಡಿಯಲು ಸಿಬಿಐಯನ್ನು ದಾಳವಾಗಿ ಬಳಸಿಕೊಳ್ಳುವುದು ಒಂದು ಚಾಳಿಯಾಗಿಬಿಟ್ಟಿದೆ. ಹೀಗಾಗಿ ಸಿಬಿಐ ಜನತೆಯ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ. ಮಾಧ್ಯಮದ ಮೇಲೆ ಸಿಬಿಐಯನ್ನು ಛೂ ಬಿಟ್ಟಿರುವುದಂತೂ ನಿರಂಕುಶ ಪ್ರಭುತ್ವದ ಢಾಣಾಢಂಗುರ ಪ್ರದರ್ಶನವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)