ಡ್ರೋನ್ ಎಂಬ ವಿಧೇಯ ಸೇವಕನ ಆಗಮನ
ಕೊರಿಯರ್-ಕಾರ್ಗೋ ಪಾರ್ಸೆಲ್ಗಳು, ತಿಂಡಿ ತಿನಿಸು, ಹಣ್ಣು-ತರಕಾರಿಗಳು, ಆನ್ಲೈನ್ ಖರೀದಿಯ ವಸ್ತುಗಳನ್ನು ಮನೆ ಮನೆಗೆ ತಂದುಕೊಡುವ ಹಲವಾರು ಡೆಲಿವರಿ ಬಾಯ್ಸ ಕೆಲಸವನ್ನು ಮುಂಬರುವ ದಿನಗಳಲ್ಲಿ ಡ್ರೋನ್ ವಹಿಸಿಕೊಳ್ಳುತ್ತದೆ. ನಮ್ಮೆಲ್ಲರ ಜೀವನದಲ್ಲಿ ಒಂದು ಪಾತ್ರವಾಗಿದ್ದ ‘ಅಂಚೆಯಣ್ಣ’ ಕೂಡ ಇತಿಹಾಸ ಸೇರುತ್ತಾನೆ. ಡ್ರೋನ್ಗಳ ಉಪಯೋಗದ ಕ್ಷೇತ್ರ ಒಂದರಿಂದ ಮತ್ತೊಂದಕ್ಕೆ ದೊಡ್ದದಾಗುತ್ತಲೇ ಹೋಗುತ್ತಿದೆ.
ಇಂಟರ್ನೆಟ್ ಯುಗದಲ್ಲಿ ಬಯಸಿದ ವಿಷಯಗಳು ಬೆರಳ ತುದಿ ಯಲ್ಲಿ ಸಿಗುತ್ತದೆ ಎಂಬುದೇ ಒಂದು ಸೋಜಿಗ. ಆ ಸೋಜಿಗದಲ್ಲೇ ಅಂತರ್ಜಾಲದಲ್ಲಿ ನೆಟ್ಟ ಕಣ್ಣನ್ನು ಬೇರೆಡೆಗೆ ತಿರುಗಿಸುವ ಮುನ್ನವೇ ಮತ್ತೊಂದು ಯುಗದ ಆರಂಭವಾಗಿದೆ. ಬಯಸಿದ ವಸ್ತುಗಳನ್ನು ಕೈಗೇ ತಂದಿಡುವ ಮ್ಯಾಟರ್ನೆಟ್ (Matternet) ಯುಗ ಅಡಿಯಿಟ್ಟಿದೆ. ಇತ್ತೀಚೆಗೆ ಡ್ರೋನ್-ಮಾನವರಹಿತ ವಾಯುನೌಕೆಯಲ್ಲಾದ ಮಹತ್ತರ ತಾಂತ್ರಿಕ ಬದಲಾವಣೆಯೇ ಈ ಮ್ಯಾಟರ್ನೆಟ್ಗೆ ಮೂಲ ಕಾರಣ.
Unmanned Aerial Vehicles (UAVs) ಎಂದು ಕರೆಯಲ್ಪಡುವ ಡ್ರೋನ್ ಬಳಕೆ ತೀರ ಹೊಸದೇನಲ್ಲ. ಎರಡನೆಯ ವಿಶ್ವ ಯುದ್ಧದ ಸಂದರ್ಭದಲ್ಲಿಯೇ ಡ್ರೋನ್ಗಳನ್ನು ಬಳಸಲಾಗಿದೆ. ಆದರೆ ಇತ್ತೀಚಿನ ಇಲೆಕ್ಟ್ರಾನಿಕ್ಸ್ ಮತ್ತು ಸಿಲಿಕಾನ್ ವ್ಯಾಲಿಯಲ್ಲಿನ ತಂತ್ರಾಂಶ ಅಭಿವೃದ್ಧಿಯಿಂದ ಡ್ರೋನ್ ಬಳಕೆಗೆ ಹೊಸ ರೂಪ ಬಂದಿದೆ. ಬಳಕೆಯ ಕ್ಷೇತ್ರ ವಿಸ್ತಾರಗೊಂಡಿದೆ. ಡ್ರೋನ್ ಒಂದು ಹಾರಾಡುವ ರೋಬೋ ಎನ್ನಬಹುದು. ಇದನ್ನು ದೂರ ನಿಯಂತ್ರಣ ಸಾಧನದಿಂದ ನಿಯಂತ್ರಿಸಿಬಹುದು. ಸ್ವಯಂ ಚಾಲಿತ ಡ್ರೋನ್ಗಳನ್ನು ತಂತ್ರಾಂಶಗಳ ಅಳವಡಿಕೆಯಿಂದ ಕೂಡ ನಿಯಂತ್ರಿಸಬಹುದು. ಇದಕ್ಕೆ ಜಿಪಿಎಸ್, ಸಿಮ್, ಸೆನ್ಸಾರ್ಗಳನ್ನು ಅನುವುಗೊಳಿಸುವುದರಿಂದ ಮತ್ತಷ್ಟು ಕರಾರುವಾಕ್ಕು ಚಾಲನೆ ಸಿಗುತ್ತದೆ. ಡ್ರೋನ್ ತಂತ್ರಜ್ಞಾನವು ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿದೆ. ಪ್ರಪಂಚದ ಬಹುತೇಕ ಎಲ್ಲಾ ದೇಶಗಳು ಡ್ರೋನ್ಗಳ ಖರೀದಿಗೆ ಇಲ್ಲವೇ ತಯಾರಿಕೆಗೆ ಮುಂದಾಗಿವೆ. ಲಘು ತೂಕದ ವಸ್ತುವಿನಿಂದ ತಯಾರಾದ ನೌಕೆ, ಸರ್ಕ್ಯೂಟ್ ಬೋರ್ಡ್, ಚಿಪ್ಸೆಟ್ ಮತ್ತು ತಂತ್ರಾಂಶ ಡ್ರೋನ್ನಲ್ಲಿ ಮುಖ್ಯವಾಗಿ ಕಂಡುಬರುವ ಭಾಗಗಳು. ವೀಡಿಯೊ ಗೇಮುಗಳಲ್ಲಿನ ಜಾಯ್ಸ್ಟಿಕ್ ಅಥವಾ ಬಟನ್ಗಳಿಂದ ಡ್ರೋನ್ ಹಾರಾಟ ಮಾಡಿಸಬಹುದು. ಆದರೆ ಇಳಿಸಲು ಲ್ಯಾಂಡಿಂಗ್ ಪ್ಯಾಡ್ ಆವಶ್ಯಕ. ವಿವಿಧ ಗುಣಮಟ್ಟದ, ಆಕಾರದ ಲ್ಯಾಂಡಿಂಗ್ ಪ್ಯಾಡುಗಳು ಆನ್ಲೈನ್ ಮಾರುಕಟ್ಟೆಯಲ್ಲಿ ಸಿಗುತ್ತವೆ. ಮೇಲಿನ ಚಿತ್ರಗಳಲ್ಲಿ ತೋರಿಸಿ ರುವಂತೆ ಇದರ ಚಾಲನೆ ಕೂಡ ಸರಳ. ಸುರಕ್ಷಿತವಾಗಿ ಹಾರಾಡಿಸಲು ಮತ್ತು ಇಳಿಸಲು ಸ್ವಲ್ಪ ಅನುಭವ ಬೇಕಾಗುತ್ತದೆ. ಸ್ಮಾರ್ಟ್ಫೋನ್ಗಳಿಂದ ಕೂಡ ನಿರ್ವಹಿಸಬಹುದಾದ ಡ್ರೋನ್ಗಳು ಮಾರುಕಟ್ಟೆಗೆ ಬಂದಿವೆ. ಆಟಿಕೆಗಳಂಥ ನ್ಯಾನೋ ಡ್ರೋನ್ಗಳು ಒಂದೂವರೆ ಸಾವಿರ ರೂ.ಗೆ ಮಾರುಕಟ್ಟೆಯಲ್ಲಿ ಲಭ್ಯ.
ಚೀನಾದ ಪ್ರಾಬಲ್ಯ
ಡ್ರೋನ್, ಕ್ವಾಡ್ಕಾಪ್ಟರ್ ತಯಾರಿಕೆಯಲ್ಲಿ ಚೀನಾ ಅಗ್ರಸ್ಥಾನದಲ್ಲಿದೆ. ಡಿ.ಜೆ.ಐ. ಕಂಪೆನಿಯು ಹವ್ಯಾಸಿ ಹಾಗೂ ವೃತ್ತಿಪರ ಡ್ರೋನ್ಗಳನ್ನು ತಯಾರಿಸುತ್ತಿದ್ದು, ಜನಪ್ರಿಯ ಫ್ಯಾಂಟಮ್-2, 3, 4 ಸರಣಿಯ ಡ್ರೋನ್ಗಳು ಈ ಕಂಪೆನಿಯ ಉತ್ಪಾದನೆ. ಚೀನಾದ ಮತ್ತೊಂದು ಕಂಪೆನಿ ಯುನೀಕ್(Yuneec), ಪ್ರಪಂಚದಲ್ಲೇ ಮೊದಲ ಬಾರಿಗೆ ರೆಡಿ-ಟು-ಫ್ಲೈ ಡ್ರೋನ್ಗಳನ್ನು ಪರಿಚಯಿಸಿದ ಹಿರಿಮೆಯಿದೆ. ಟೈಫೂನ್ ಹೆಸರಿನ ಸರಣಿಯ ಡ್ರೋನ್ಗಳು ಅತ್ಯಂತ ಜನಪ್ರಿಯ. ಚೀನಾದ ಖಾಸಗಿ ಕಂಪೆನಿಗಳು ವರ್ಷಕ್ಕೆ ಹತ್ತು ಲಕ್ಷಕ್ಕೂ ಹೆಚ್ಚು ಡ್ರೋನ್ಗಳನ್ನು ತಯಾರಿಸಿ ಮಾರಾಟ ಮಾಡುತ್ತಿವೆ.
ಮೊದಮೊದಲು ಡ್ರೋನ್ಗಳನ್ನು ಸೇನೆಯಲ್ಲಿ ಕಣ್ಗಾವಲಿಗೆ, ಗುಪ್ತಚಾರಿ ಕೆಗೆ ಪ್ರಮುಖವಾಗಿ ಬಳಸಲಾಗುತ್ತಿತ್ತು. ಭೂಕಂಪ, ನೆರೆ ಮುಂತಾದ ವಿಪತ್ತಿಗೊಳಗಾದ ಪ್ರದೇಶಗಳಲ್ಲಿ ರಕ್ಷಕರು ತಮ್ಮ ಪ್ರಾಣ ಪಣಕ್ಕೊಡ್ಡಿ ಮುನ್ನುಗುವ ಅಪಾಯವನ್ನು ಡ್ರೋನ್ ಬಳಸಿ ನಿಯಂತ್ರಿಸಬಹುದು. ಬೃಹತ್ ಸೇತುವೆ, ಗಗನಚುಂಬಿ ಕಟ್ಟಡಗಳು, ವಿದ್ಯುತ್ ತಂತಿ, ವಿಂಡ್ ಟರ್ಬೈನ್ ಮುಂತಾದೆಡೆ ಮಾನವ ಪರಿವೀಕ್ಷಣೆ ಕಠಿಣವಾದದ್ದು. ಅಂಥ ಸಂದರ್ಭದಲ್ಲಿ ಡ್ರೋನ್ ಬಳಸಿ ಸುರಕ್ಷಿತವಾಗಿ ಮಾಪನ ಮಾಡಬಹುದು. ಏರಿಯಲ್ ವೀಡಿಯೊ, ಫೋಟೊಗ್ರಫಿಯಿಂದ ಮಾಧ್ಯಮದವರಿಗೂ ಅನುಕೂಲವಾಗಿದೆ. ವ್ಯವಸಾಯ ಕ್ಷೇತ್ರಕ್ಕೂ ಉಪಯೋಗವಾಗುತ್ತಿದೆ. ಕಾರ್ಗೋ ಕ್ಷೇತ್ರಕ್ಕೂ ಡ್ರೋನ್ ಬಳಕೆ ವರದಾನವಾಗಿದೆ. ಡ್ರೋನ್ ಬಳಕೆಯಂತೆ ದುರ್ಬಳಕೆಯೂ ಆಗುತ್ತಿದೆ. ಅಮೆರಿಕದ ಕೆಂಟಕಿ ರಾಜ್ಯದ ಸೆನೆಟರ್ ರ್ಯಾಂಡ್ ಪಾಲ್ ಅವರ ಮಾತಿನಲ್ಲೇ ಹೇಳಬೇಕೆಂದರೆ ‘‘ನನ್ನ ಸ್ನೇಹಿತನ ಮನೆಯ ಪಾರ್ಟಿಗೆ ಆಮಂತ್ರಣ ಇಲ್ಲದಿದ್ದರೂ ಡ್ರೋನ್ ಬಂದಿತ್ತು. ನಾನು ಎಲ್ಲಿ ಹೋಗ್ತೀನಿ, ಏನು ಮಾಡ್ತೀನಿ, ನನ್ನ ಪ್ರತಿಯೊಂದು ಚಲನವಲನವನ್ನು ಗಮನಿಸುವ ಅಗತ್ಯ ಸರಕಾರಕ್ಕೆ ಬೇಡ’’ ಎಂದಿದ್ದರು. ಹೀಗೆ ಹಲವಾರು ವೈಯಕ್ತಿಕ ನಿತ್ಯ ಜೀವನವನ್ನು ಡ್ರೋನ್ಗಳ ಮೂಲಕ ನಿಗಾವಹಿಸಿ ನೋಡಲಾಗುತ್ತಿದೆ. ಇದರಿಂದ ಖಾಸಗಿತನಕ್ಕೆ ಪೆಟ್ಟು ಬಿದ್ದಿದೆ. ಪಾಪಾರಾಜಿಗಳ ಡ್ರೋನ್ಗಳನ್ನು ತಮ್ಮಿಚ್ಛೆಯಂತೆ ಬಳಸುತ್ತಿದ್ದಾರೆ. ಅಸೂಕ್ಷ್ಮವಾದ ಡ್ರೋನ್ಗಳನ್ನು ಯುದ್ಧಗಳಲ್ಲಿ ಬಳಸುವುದರಿಂದ ಅಮಾಯಕ ನಾಗರಿಕರ ಸಾವುಗಳಾ ಗುತ್ತಿದೆ. ನಿರ್ಜೀವ ವಸ್ತುವೊಂದು ಜೀವಿಗಳನ್ನು ಕೊಲ್ಲುವುದು ಅಸ್ವಾಭಾವಿಕ ಮತ್ತು ಅಮಾನವೀಯ. 2009-14ರ ನಡುವೆ ಡ್ರೋನ್ನಿಂದ ಇರಾಕ್, ಲಿಬಿಯಾ ಹಾಗೂ ಅಫ್ಘಾನಿಸ್ತಾನದಲ್ಲಿ 2,400 ಜನ ಕೊಲ್ಲಲ್ಪಟ್ಟಿದ್ದಾರೆ ಎಂದು ಒಬಾಮಾ ಸರಕಾರ ಹೇಳಿಕೊಂಡಿತ್ತು. ಇವರಲ್ಲಿ ಅನೇಕರು ಸಾಮಾನ್ಯ ನಾಗರಿಕರಾಗಿದ್ದರೆಂಬುದು ದೃಢಪಟ್ಟಿದೆ.
ವಿಶೇಷ ಆಸ್ಥೆವಹಿಸಿ ಅಮೆರಿಕ ಡ್ರೋನ್ ತಂತ್ರಜ್ಞಾನದ ಅಭಿವೃದ್ಧಿಗೊಳಿಸಿ ಇತರ ದೇಶಗಳಿಗಿಂತ ಮುಂಚೂಣಿಯಲ್ಲಿದೆ. ಇಸ್ರೇಲ್ ಕೂಡ ಅಮೆರಿಕೆಗೆ ಸರಿಸಮಾನಾಗಿ ನಿಂತಿದೆ. ಚೀನಾ ತಡವಾಗಿ ಗಮನ ಹರಿಸಿಯೂ ಡ್ರೋನ್ ತಯಾರಿಕೆಯ ಪ್ರಮುಖ ದೇಶವಾಗಲು ಹೊರಟಿದೆ. ಡ್ರೋನ್ ರಫ್ತು ಮಾಡಲು ಬೃಹತ್ ಒಪ್ಪಂದವೊಂದಕ್ಕೆ ಚೀನಾ ಸಹಿ ಮಾಡಿ ದಾಖಲೆ ನಿರ್ಮಿಸಿದೆ.
ಡ್ರೋನ್ಗಳನ್ನು ಆಮದು ಮಾಡುಕೊಳ್ಳುತ್ತಿರುವ ದೇಶಗಳಲ್ಲಿ ಭಾರತ ಮುಂಚೂಣಿಯಲ್ಲಿದೆ. ಸಾರ್ವಜನಿಕ ಡ್ರೋನ್ ಬಳಕೆ ಅನುಮತಿ ನಮ್ಮ ದೇಶದಲ್ಲಿಲ್ಲ. ಸರಕಾರ ನೀತಿ ನಿಯಮಗಳನ್ನು ನಿರೂಪಿಸುತ್ತಿದೆ. ಮದುವೆ, ಮುಂಜಿ, ಕ್ರೀಡೆಗಳ ಚಿತ್ರೀಕರಣಕ್ಕೆ ಡ್ರೋನ್ ಕ್ಯಾಮರಾಗಳು ಹೆಚ್ಚಾಗಿ ಬಳಕೆಯಾಗುತ್ತಿವೆೆ. ಚಲನಚಿತ್ರಗಳ ಚಿತ್ರೀಕರಣಗಳಲ್ಲಿ ಸಮರ್ಪಕವಾಗಿ ಬಳಸಲಾಗುತ್ತಿದೆ. ಹಲವಾರು ದೇಶಗಳು ತಮ್ಮ ಗಡಿ ಕಾಯಲು ಅತ್ಯಾಧುನಿಕ ಡ್ರೋನ್ಗಳನ್ನು ನೇಮಿಸಿಕೊಂಡಿವೆ. ಕನ್ನಡದ ಜನಪ್ರಿಯ ಚಲನಚಿತ್ರಗಳಲ್ಲೊಂದಾದ ‘ಮುಂಗಾರು ಮಳೆ’ ಯಲ್ಲಿ ಜೋಗ್ ಜಲಪಾತವನ್ನು ತೋರಿಸಿರುವ ರೀತಿ ಕುತೂಹಲ ಹುಟ್ಟಿಸಿ ಮೆಚ್ಚುಗೆ ಗಳಿಸಿತ್ತು. ಆ ದೃಶ್ಯದ ಯಶಸ್ಸಿನ ಕ್ರೆಡಿಟ್ಟು ಡ್ರೋನಿಗೆ ಹೋಗ ಬೇಕು. ನಮಗೆ ಡ್ರೋನ್ ನೋಡುವ ಅವಕಾಶ ಸಿಕ್ಕಿದ್ದು 2009ರಲ್ಲಿ ಬಿಡುಗಡೆ ಯಾದ ‘3 ಈಡಿಯೆಟ್ಸ್’ ಚಿತ್ರದಲ್ಲಿ.
ಭವಿಷ್ಯದಲ್ಲಿ ಡ್ರೋನ್ ಪಾತ್ರ
ಕೊರಿಯರ್-ಕಾರ್ಗೋ ಪಾರ್ಸೆಲ್ಗಳು, ತಿಂಡಿ ತಿನಿಸು, ಹಣ್ಣು-ತರಕಾರಿಗಳು, ಆನ್ಲೈನ್ ಖರೀದಿಯ ವಸ್ತುಗಳನ್ನು ಮನೆ ಮನೆಗೆ ತಂದುಕೊಡುವ ಹಲವಾರು ಡೆಲಿವರಿ ಬಾಯ್ಸ ಕೆಲಸವನ್ನು ಮುಂಬರುವ ದಿನಗಳಲ್ಲಿ ಡ್ರೋನ್ ವಹಿಸಿಕೊಳ್ಳುತ್ತದೆ. ನಮ್ಮೆಲ್ಲರ ಜೀವನದಲಿ ್ಲ ಒಂದು ಪಾತ್ರವಾಗಿದ್ದ ‘ಅಂಚೆಯಣ್ಣ’ ಕೂಡ ಇತಿಹಾಸ ಸೇರುತ್ತಾನೆ. ಡ್ರೋನ್ಗಳ ಉಪಯೋಗದ ಕ್ಷೇತ್ರ ಒಂದರಿಂದ ಮತ್ತೊಂದಕ್ಕೆ ದೊಡ್ದದಾಗುತ್ತಲೇ ಹೋಗುತ್ತಿದೆ. ನಮ್ಮ ದೇಶದ ಆರ್ಥಿಕ ಸ್ಥಿತಿವಂತರ ಮನೆಯ ಮದುವೆ ಗಳಲ್ಲಿ ಡ್ರೋನ್ ಚಿತ್ರೀಕರಣ ಮಾಡುತ್ತಿದೆ. ಮದುವೆಯ ವೀಡಿಯೊಗ್ರಫಿ ನಿಧಾನವಾಗಿ ಸಿನೆಮಾಟೋಗ್ರಫಿಯಾಗಿ ಪರಿವರ್ತನೆಯಾಗುತ್ತಿದೆ. ಮನುಷ್ಯನಿಗೆ ಅಸಾಧ್ಯವಾದ ದೃಶ್ಯಗಳನ್ನು ಡ್ರೋನ್ ಸೆರೆ ಹಿಡಿಯುತ್ತದೆ. ಡಿಜೆಐ ಫ್ಯಾಂಟಮ್ 3 ಮತ್ತು 4 ಸರಣಿಯ ಡ್ರೋನ್ಗಳು ಮದುವೆ, ಪಾರ್ಟಿ ಮುಂತಾದ ಸಂದರ್ಭಗಳ ಚಿತ್ರೀಕರಣಕ್ಕೆ ಸೂಕ್ತವಾದವು. ಇಂಥ ಕಾರ್ಯಕ್ರಮಗಳಿಗೆ ಬೇಕಾಗುವ ಡ್ರೋನ್ಗಳ ಒಂದು ಲಕ್ಷ ರೂ.ಯ ಆಸುಪಾಸಿನಲ್ಲಿ ದೊರೆಯುತ್ತದೆ. ಎಲ್ಲಾ ಗ್ಯಾಡ್ಜೆಟ್ಟುಗಳಂತೆ ದಿನ ಕಳೆದಂತೆ ಅದರ ಬೆಲೆಗಳು ಕಡಿಮೆಯಾಗುವ ಸಂಭವವೇ ಹೆಚ್ಚು.
ಗ್ರಾಮೀಣ ಭಾಗದಲ್ಲಿರುವ ಕೂಲಿಯಾಳುಗಳ ಅಭಾವ, ಜಮೀನು ನಿರ್ವಹಣೆಯ ಸಮಸ್ಯೆಗಳಿಗೆ ಡ್ರೋನ್ ಒಂದು ವರದಾನವಾಗಲಿದೆ. ಉದಾಹರಣೆಗೆ ರಾಯ್ಪುರದ ರಾಹುಲ್ ಚಾವ್ಡಾ ಎಂಬ ರೈತ ಡ್ರೋನ್ಗಳನ್ನು ಬಳಸಿ ಕ್ರಿಮಿನಾಶಕದ ಕಂಟೈನರ್ ಮೂಲಕ ಸಿಂಪಡಿಸುತ್ತಿದ್ದಾರೆ. ಕೆಳ ಮಟ್ಟದಲ್ಲಿ ಹಾರುವ ಡ್ರೋನ್ಗಳ ಸಿಂಪಡಿಸುವಿಕೆ ಹೆಚ್ಚು ಪರಿಣಾಮಕಾರಿಯಾಗಿದ್ದು, ಒಂದು ಎಕರೆಗೆ ಕೇವಲ 15 ನಿಮಿಷಗಳಲ್ಲಿ ಕ್ರಿಮಿನಾಶಕವನ್ನು ಸಿಂಪಡಿಸಬಹುದೆಂದರೆ ಇದರಿಂದ ಉಳಿತಾಯವಾದ ಸಮಯ, ಹಣ, ಮಾನವ ಸಂಪನ್ಮೂಲವನ್ನು ಸುಲಭವಾಗಿ ಊಹಿಸಿಕೊಳ್ಳಬಹುದು. ಅಷ್ಟೇ ಅಲ್ಲದೇ, ಸಿಂಪಡಿಸಿರುವ ಪ್ರಮಾಣ, ಪ್ರದೇಶ, ಸಮಯದ ವಿವರಗಳು ದಾಖಲಾಗಿರುತ್ತವೆ. ಸಿಂಪಡಿಸು ವಿಕೆಗೆ ಮಾತ್ರವಲ್ಲದೇ ಪ್ರಾಣಿ, ಪಕ್ಷಿಗಳ ಚಲನವಲನ, ಪರಿವೀಕ್ಷಣೆ, ಬೆಳೆಯ ಅಂದಾಜು ಮುಂತಾದವಕ್ಕೆ ಡ್ರೋನ್ಗಳನ್ನು ಬಳಸಿಕೊಳ್ಳಬಹುದು. ಜಪಾನ್ 80ರ ದಶಕದಿಂದಲೇ ಡ್ರೋನ್ಗಳನ್ನು ಕೃಷಿ ಚಟುವಟಿಕೆಗೆ ಉಪಯೋಗಿಸಿಕೊಳ್ಳುತ್ತಿದೆ. ಭಾರತದ ರೈತನ ಮುಂದಿರುವ ಅನೇಕ ಸಮಸ್ಯೆಗಳ ನಡುವೆ ಡ್ರೋನ್ ಒಂದು ಆಶಾಕಿರಣ ವಾಗಬಹುದು. ಸ್ವತಃ ಚೀನಾದ ಪ್ರಮುಖ ಡ್ರೋನ್ ಉತ್ಪಾದಕ ಡಿಜೆಐ ಸಂಸ್ಥೆಯ ಅಧಿಕಾರಿಗಳು ಭಾರತಕ್ಕೆ ಬಂದು ಇಲ್ಲಿನ ರೈತರ ಆವಶ್ಯಕತೆಯನ್ನು ಆಭ್ಯಸಿಸಿ ಅಗತ್ಯಕ್ಕೆ ತಕ್ಕಂತೆ ಡ್ರೋನ್ಗಳನ್ನು ತಯಾರಿಸುವ ಭರವಸೆ ಕೊಟ್ಟಿದ್ದಾರೆ. ಖಂಡಿತ ವಾಗಲೂ ಮುಂಬರುವ ದಿನಗಳಲ್ಲಿ ಪ್ರತೀ ಕ್ಷೇತ್ರದಲ್ಲೂ ಡ್ರೋನ್ಗಳ ಸೇವೆ ಅಗತ್ಯವಾಗುತ್ತದೆ.
ಡ್ರೋನ್ನ ಕೆಲವು ಪ್ರಥಮಗಳು
► ವಿಶ್ವದಲ್ಲೇ ಪ್ರಥಮ ಬಾರಿಗೆ ಫಿಡ್ಜಾ ಡೆಲಿವರಿಯನ್ನು 2016ರ ನವೆಂಬರ್ನಲ್ಲಿ ಡೊಮಿನೋಸ್ ಕಂಪೆನಿ ಮಾಡಿತು.
► ಭಾರತ ಮೊದಲ ಮಾನವರಹಿತ ವಿಮಾನ ನೌಕೆಯನ್ನು ಇಸ್ರೇಲಿನಿಂದ 1998ರಲ್ಲಿ ತರಿಸಿಕೊಂಡಿತು.
►ಯು.ಕೆ. ತನ್ನ ಮೊದಲ ಡ್ರೋನ್ ಅನ್ನು ಕೆನಡಾದಿಂದ 1972ರಲ್ಲಿ ಆಮದು ಮಾಡಿಕೊಂಡಿತು.
► ವಿಶ್ವದಲ್ಲೇ ಮೊದಲ ಬಾರಿಗೆ ಡ್ರೋನ್ ಆಮದು ಮಾಡಿಕೊಂಡ ದೇಶ ಜಪಾನ್. 1968ರಲ್ಲಿ ಅಮೆರಿಕ ರಫ್ತು ಮಾಡಿತ್ತು.