varthabharthi

ಓ ಮೆಣಸೇ

ಓ ಮೆಣಸೇ...

ವಾರ್ತಾ ಭಾರತಿ : 12 Jun, 2017
ಪಿ.ಎ.ರೈ

ಭಾರತ ಒಂದು ಮಾಲಿನ್ಯ ಕಾರಕ ದೇಶ -ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ

ನಿಮ್ಮ ದೇಶದ ಮಾಲಿನ್ಯಗಳೆಲ್ಲ ನಮ್ಮಲ್ಲಿ ತಂದು ಸುರಿದರೆ ಇನ್ನೇನಾಗುತ್ತದೆ?
---------------------
ಕೆಪಿಸಿಸಿ ಅಧ್ಯಕ್ಷರೇ ಸಿಎಂ ಆಗುವುದು ವಾಡಿಕೆ - ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ

ಆದರೆ ಕೆಪಿಸಿಸಿ ಅಧ್ಯಕ್ಷರು ತಮ್ಮ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಗೆಲ್ಲುವುದು ವಾಡಿಕೆಯಲ್ಲಿ ಬರುವುದಿಲ್ಲವೇ?
---------------------
ದೇಶದಲ್ಲಿ ಎಲ್ಲರೂ ವಿದ್ಯಾವಂತರಾದರೆ ಬಡತನ ಕಡಿವೆುಯಾಗಬಹುದು -ಕೆ.ವಸಂತ ಬಂಗೇರ, ಶಾಸಕ

ವಿದ್ಯಾವಂತರು ಫೇಸ್‌ಬುಕ್‌ನಲ್ಲಿ ಗದ್ದೆ ಉತ್ತು ಅಕ್ಕಿ ಬೆಳೀತಾರೆ ಎಂದು ತಿಳಿದುಕೊಂಡಿರಬೇಕು.

---------------------

ದೇವರ ಮೇಲಿನ ನಂಬಿಕೆ ಮೂಢ ನಂಬಿಕೆಯಾಗಬಾರದು -ವಿ.ವಿಶ್ವನಾಥ ಶೆಟ್ಟಿ , ಲೋಕಾಯುಕ್ತ ನ್ಯಾಯಮೂರ್ತಿ

ಮೋದಿಯ ಮೇಲಿನ ನಂಬಿಕೆ ಕೂಡ.

---------------------
ಗೃಹ ಖಾತೆಯನ್ನು ಯಾರಿಗೂ ಕೊಡುವುದಿಲ್ಲ, ನಾನೇ ಇಟ್ಟುಕೊಳ್ಳುತ್ತೇನೆ - ಸಿದ್ದರಾಮಯ್ಯ, ಮುಖ್ಯಮಂತ್ರಿ

ಅದನ್ನು ನೀವಿಟ್ಟುಕೊಂಡು, ನಿಮ್ಮ ಮುಖ್ಯಮಂತ್ರಿ ಸ್ಥಾನವನ್ನು ನನಗೆ ಕೊಡಿ ಎನ್ನುತ್ತಿದ್ದಾರೆ ಪರಮೇಶ್ವರ್.

---------------------
ಭಯೋತ್ಪಾದನೆಯ ನೋವನ್ನು ಪ್ರಪಂಚ ಅರ್ಥ ಮಾಡಿಕೊಳ್ಳಬೇಕು - ಶೋಭಾ ಕರಂದ್ಲಾಜೆ, ಸಂಸದೆ

ಈಶ್ವರಪ್ಪರ ಭಯೋತ್ಪಾದನೆ ನಿಮಗೆ ಅಷ್ಟೂ ನೋವು ತಂದಿದೆಯೇ?
---------------------
ಸಾಲ ಮನ್ನಾ ಮಾಡಲು ಕೇಂದ್ರದ ಮೇಲೆ ಒತ್ತಡ ಹಾಕುವುದು ಸರಿಯಲ್ಲ - ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

ರೈತರ ಮೇಲೆ ಗೋಲಿಬಾರ್ ಮಾಡುವುದು ಸರಿ ಅನ್ನುತ್ತೀರಾ?
---------------------
ಗೋರಕ್ಷಣೆ ವಿಚಾರದಲ್ಲಿ ರಾಜಕೀಯ ಮಾಡಲಾಗುತ್ತಿದೆ - ಭಯ್ಯಿ ಜೋಶಿ, ಆರೆಸ್ಸೆಸ್ ನಾಯಕ

ಆದರೆ ಅದು ಆರೆಸ್ಸೆಸ್‌ನ ಸಂಚಾಲಕರಿಗೆ ಅರ್ಥವಾಗಬೇಕಲ್ಲ?
---------------------
ಉ.ಪ್ರ.ಮುಖ್ಯಮಂತ್ರಿ ಆದಿತ್ಯನಾಥ್ ರೀತಿ ಸಿದ್ದರಾಮಯ್ಯ ರೈತರ ಸಾಲ ಮನ್ನಾ ಮಾಡಲಿ -ಅನಂತ್ ಕುಮಾರ್, ಕೇಂದ್ರ ಸಚಿವ

ಉತ್ತರ ಪ್ರದೇಶದ ಮೇಲೆ ಕೇಂದ್ರ ಕೃಪೆ ತೋರಿದಂತೆ, ಕರ್ನಾಟಕ ಮೇಲೆ ಕೃಪೆ ತೋರುವುದಕ್ಕೆ ತಾವು ಒತ್ತಡ ಹಾಕಬಾರದೇ?
---------------------
ಕಾಂಗ್ರೆಸ್ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಕೊಡಲು ಹೋರಾಡಿದೆ - ವೆಂಕಯ್ಯ ನಾಯ್ಡು, ಕೇಂದ್ರ ಸಚಿವ

ನೀವೀಗ ದೇಶವನ್ನೇ ಅಮೆರಿಕಕ್ಕೆ ಕೊಟ್ಟು ಕಾಂಗ್ರೆಸ್ ವಿರುದ್ಧ ಸೇಡು ತೀರಿಸಲು ಹೊರಟಿದ್ದೀರಾ?
---------------------
ಕಾಂಗ್ರೆಸ್ ಪಕ್ಷದಲ್ಲಿ ಇರುವುದೋ ಬಿಡುವುದೋ ಗೊತ್ತಾಗ್ತಾಯಿಲ್ಲ - ಎಚ್.ವಿಶ್ವನಾಥ್, ಮಾಜಿ ಸಂಸದ

ನೀವೀಗ ಕಾಂಗ್ರೆಸ್ ಪಕ್ಷದಲ್ಲಿ ಇದ್ದೀರೋ ಇಲ್ಲವೋ ಎನ್ನುವ ಬಗ್ಗೆ ಜನರಿಗೂ ಗೊಂದಲವಿದೆ.

---------------------
ಬಿಜೆಪಿ ,ಆರೆಸ್ಸೆಸ್ ವಿರುದ್ಧ ಹೋರಾಡಲು ಭಗವದ್ಗೀತೆ, ಉಪನಿಷತ್ ಅಧ್ಯಯನ ಮಾಡುತ್ತಿದ್ದೇನೆ -ರಾಹುಲ್‌ಗಾಂಧಿ,  ಕಾಂಗ್ರೆಸ್ ಉಪಾಧ್ಯಕ್ಷ

ಮೊದಲು ದೇಶದ ರೈತರ ಕಷ್ಟ ಸುಖ ಅಧ್ಯಯನ ಮಾಡಿ. ಹೋರಾಡುವುದಕ್ಕಿರುವ ಮಾರ್ಗ ಅದೇ.

---------------------
ಭಯೋತ್ಪಾದನೆ ಮತ್ತು ಮಾತುಕತೆ ಒಂದೇ ಹಳಿಯಲ್ಲಿ ಸಾಗದು - ಸುಶ್ಮಾ ಸ್ವರಾಜ್,   ಕೇಂದ್ರ ಸಚಿವೆ

ಬಿಜೆಪಿ ಮತ್ತು ಆರೆಸ್ಸೆಸ್ ಇದ್ದಂತೆ ಎರಡು ಹಳಿ ಬೇಕು ಅಂತೀರಾ?
---------------------
ಕಲಾವಿದರು, ಕ್ರಿಕೆಟಿಗರೆಲ್ಲ ಬಾಂಬ್ ಹಾಕುವವರಲ್ಲ,ಅವರು ಸಂಬಂಧದ ಸೇತುಗಳು - ಪರೇಶ್‌ರಾವಲ್, ನಟ, ಸಂಸದ

ಅಮಾಯಕರನ್ನು ಮಿಲಿಟರಿ ಜೀಪಿಗೆ ಕಟ್ಟಲು ಹೇಳುವ ಕಲಾವಿದರ ಬಗ್ಗೆ ನಿಮ್ಮ ಅಭಿಪ್ರಾಯ?

---------------------
ನಾನಂತೂ ಪೂರ್ಣ ಪ್ರಮಾಣದ ಮಾಂಸಾಹಾರಿ - ವೆಂಕಯ್ಯ ನಾಯ್ಡು, ಕೆಂದ್ರ ಸಚಿವ

ಹಾಗಾದರೆ ನಿಮ್ಮ ಫ್ರಿಡ್ಜ್ಜ್‌ನ್ನೊಮ್ಮೆ ತಪಾಸಣೆ ಮಾಡಲೇ ಬೇಕು.

---------------------
ಸಂಗೊಳ್ಳಿರಾಯಣ್ಣ ಬ್ರಿಗೇಡ್ ಮುಗಿದ ಅಧ್ಯಾಯ - ಭಾರತಿ ಶೆಟ್ಟಿ, ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ

ಅಂದರೆ ರಾಯಣ್ಣನನ್ನು ಬ್ರಿಟಿಷರು ಮಾಡಿದಂತೆ, ಬ್ರಿಗೇಡ್‌ನ್ನು ನೇಣಿಗೇರಿಸಿ ಆಯಿತೇ?
---------------------
ಸದನದಲ್ಲಿ ಎಲ್ಲಿ ನೋಡಿದರೂ ಇಲಿ ,ಹೆಗ್ಗಣಗಳ ಕಾಟ ಇದೆ -ತಾರಾ ಅನುರಾಧಾ, ಬಿಜೆಪಿ ಸದಸ್ಯೆ

ಅದಕ್ಕೆ ಮತದಾರರೇ ಹೊಣೆ.

---------------------
ಶಿವಾಜಿ ಸ್ಥಾಪಿಸಿದ ಹಿಂದೂಸ್ಥಾನದಲ್ಲಿ ನಾನಿದ್ದೇನೆ. ನಾನು ಭಾಗ್ಯವಂತ - ಪಿ.ಪಿ.ಚೌಧರಿ, ಕೇಂದ್ರ ಸಚಿವ

ಶಿವಾಜಿ ಸ್ಥಾಪಿಸಿದ ಸಾಮ್ರಾಜ್ಯವನ್ನು ಪೇಶ್ವೆಗಳು ಕಿತ್ತುಕೊಂಡ ಇತಿಹಾಸ ನಿಮಗೆ ಗೊತ್ತಿಲ್ಲವೇ?
---------------------
ಭಾರತದಲ್ಲಿ ಪರಿವರ್ತನೆಯ ಹೊಸ ಗಾಳಿ ಬೀಸುತ್ತಿದೆ -ನಳಿನ್ ಕುಮಾರ್ ಕಟೀಲು, ಸಂಸದ

 ಹೌದು, ಬಡವರನ್ನು ಇನ್ನಷ್ಟು ಬಡವರನ್ನಾಗಿ ಪರಿವರ್ತಿಸುವ ಗಾಳಿ
    

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಇನ್ನಷ್ಟು ಓ ಮೆಣಸೇ ಸುದ್ದಿಗಳು