varthabharthi

ಅನುಗಾಲ

ಬೇಂದ್ರೆಯವರ ಹರಟೆಗಳು

ವಾರ್ತಾ ಭಾರತಿ : 15 Jun, 2017
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಕವಿ ಅಂಬಿಕಾತನಯದತ್ತರು ‘ಬೇಂದ್ರೆ’ ಎಂದೇ ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಪರಿಚಿತರು. ಬೇಂದ್ರೆ ಎಲ್ಲ ಸಂದರ್ಭಗಳಿಗೆ ಪ್ರತಿಕ್ರಿಯಿಸಿದವರು. ಆಂಗ್ಲರ ಅಧಿಕಾರದ ವಿರುದ್ಧ ದನಿಯೆತ್ತಿ ಪದ್ಯ ಬರೆದು ಜೈಲು ಸೇರಿದವರು. ಸಾಹಿತಿಗಳೊಂದಿಗೆ ಜಗಳವಾಡಿದವರು. ಅಸಂಗತವಾಗಿ ವಿರೋಧಾಭಾಸಗಳ ನಡುವೆ ಬದುಕಿದವರು. ಬದುಕಿನ ರಾಟವಾಳದಲ್ಲಿ ಸುಖ-ದುಃಖಗಳ ಏಳು-ಬೀಳುಗಳನ್ನು ಕಂಡವರು. ಬದುಕನ್ನು ವರ್ಣಮಯವಾಗಿಸಿ, ರಂಜನೀಯವಾಗಿಸಿ ‘‘ಇದು ಬರಿ ಬೆಳಗಲ್ಲೋ ಅಣ್ಣಾ’’ ಎಂದು ನಿರೂಪಿಸಿದವರು ಬೇಂದ್ರೆ.

ವರಕವಿ ಎಂದೇ ಜನಪ್ರಿಯರಾಗಿರುವ ಬೇಂದ್ರೆ, ಒಳ್ಳೆಯ ಗದ್ಯ ಬರಹಗಾರರೂ ಆಗಿದ್ದಾರಾದರೂ ನಾಟಕಕಾರ, ವಿಮರ್ಶಕ ಎಂದೆಲ್ಲ ಅವರನ್ನು ಕೊಂಡಾಡಿದ ಜನರು ಹೆಚ್ಚಿಲ್ಲ. ಸಾಹಿತ್ಯದ ವಿರಾಟ್ ಸ್ವರೂಪ ದಂತಹ ಮಹತ್ಕೃತಿಯಿಂದಲೇ ಅವರು ಕನ್ನಡದ ಅತ್ಯುತ್ತಮ ಲೇಖಕರಾಗಿ ಉಳಿಯುತ್ತಿದ್ದರು. ಆದರೆ ಕಾವ್ಯದ ಒಲವೇ ಅವರ ಬದುಕಾಗಿ, ಅವರ ಸಾಹಿತ್ಯದ ಅಗ್ರಮುಖವಾಗಿ, ಲಕ್ಷಣವಾಗಿ, ಪ್ರಸಾರ-ಪ್ರಚಾರ ಎರಡೂ ಆದದ್ದರಿಂದ ಅವರ ಇತರ ಸಾಹಿತ್ಯ ಅವರ ಕಾವ್ಯದಷ್ಟು ವಿಮರ್ಶೆಗೊಳಗಾಗಲಿಲ್ಲ.

‘ಸಾಯೋ ಆಟ’ದಂತಹ ಏಕಾಂಕ ನಾಟಕಗಳು ಅವರ ಅಸಂಗತ ಪ್ರಜ್ಞೆಯ ಹೊಳಹುಗಳನ್ನು ಸಾರುತ್ತವೆ. ಬಂಗಾಳೀ ಕಥೆಗಳನ್ನು ನೆನಪಿಸುವ ‘ನಿರಾಭರಣ ಸುಂದರಿ’ ಮುಂತಾದ ಕಥೆಗಳು ಆ ಕಾಲದ ಉತ್ತಮ ಸಾಹಿತ್ಯದ ಪ್ರತಿನಿಧಿಗಳಂತಿದ್ದವು. ಬೆಕ್ಕು ಹಾರುತಿದೆ ನೋಡಿದಿರಾ? ಎಂಬ ಅವರದೇ ಪದ್ಯದ ಅಣಕವನ್ನು ಮತ್ತು ಅಂತಹ ಇತರ ನಗೆಹಾಡುಗಳನ್ನು ಅವರು ಬರೆದಾಗ ಅವರ ಹಾಸ್ಯ ಭಾವ ಶಕ್ತವಾಗಿ ಹೊರಹೊಮ್ಮಿತ್ತು. ಸಮಗ್ರವಾಗಿ ಬೇಂದ್ರೆಯವರನ್ನು ಪರಿಚಯಿಸುವ ಸಮೀಕ್ಷೆಗಳಲ್ಲಿ ಮಾತ್ರ ಅವರ ಈ ಇತರ ಸಾಹಿತ್ಯ ಪ್ರಕಾರಗಳು ತಕ್ಕ ಮಟ್ಟಿಗೆ ಅಭಿವ್ಯಕ್ತಿಗೊಂಡಿವೆ. ಜಿ.ಎಸ್. ಅಮೂರರ ‘ಭುವನದ ಭಾಗ್ಯ’, ಎನ್ಕೆ ಕುಲಕರ್ಣಿ ಅವರ ‘ದ.ರಾ. ಬೇಂದ್ರೆ’ ತಕ್ಷಣಕ್ಕೆ ನೆಪಾಗುವ ಈ ಬಗೆಯ ಕೃತಿಗಳು.

ಬೇಂದ್ರೆಯವರ ಏಳು ಕಥೆಗಳು, ಮತ್ತು ಎಂಟು ಹರಟೆಗಳು ಹಾಗೂ ಆರು ನಗೆಹಾಡುಗಳನ್ನೊಳಗೊಂಡ ಕೃತಿ ‘ನಿರಾಭರಣ ಸುಂದರಿ’ ಮೊದಲು 1940ರಲ್ಲಿ ಪ್ರಕಟವಾಯಿತು; ಆನಂತರ 1956ರಲ್ಲಿ ಮರುಮುದ್ರಣವಾಯಿತು. ಇಂದಿನ ಸಂದರ್ಭಕ್ಕೆ ಅವರ ಹರಟೆಗಳು ಬಹಳ ಪ್ರಸ್ತುತವಾಗಿವೆಯೆಂಬುದನ್ನು ಹೇಳುವುದಕ್ಕೆ ಅವರ ಹರಟೆಗಳನ್ನು ಗಮನಿಸಬಹುದೆಂಬುದು ನನ್ನ ಉದ್ದೇಶ. ಕೃತಿಯಲ್ಲಿರುವ ಎಂಟು ಹರಟೆಗಳು ಒಂದೇ ಪ್ರಕಾರಕ್ಕೆ ಸಲ್ಲುವ ಹರಟೆಗಳಲ್ಲ. ಇವುಗಳಲ್ಲಿ ವ್ಯಂಗ್ಯವಿದೆ; ಲೇವಡಿಯಿದೆ; ಹಾಸ್ಯವಿದೆ, ಅಪಹಾಸ್ಯವಿದೆ, ವಿಡಂಬನೆಯಿದೆ, ಒಳನೋಟವೂ ವಿಷಾದದ ರೇಖೆಯೂ ಇದೆ.

ಒಂದೊಂದೂ ಒಂದೊಂದು ರೀತಿಯಲ್ಲಿ ಸ್ವತಂತ್ರವಾಗಿವೆ. ನನ್ನ ಅವತಾರವೆಂಬ ಹರಟೆಯಲ್ಲಿ ತನ್ನ ದೊಡ್ಡಸ್ತಿಕೆಯನ್ನು ವಿವರಿಸುವುದರ ಹಿಂದೆ ಅಂತಹ ಮನುಷ್ಯರ ಪೊಳ್ಳುತನದ ವಿಸ್ತಾರವಾದ ವ್ಯಂಗ್ಯವಿದೆ. ಶಬ್ದದಿಂದ, ಯುಕ್ತಿಯಿಂದ ಒಪ್ಪಿಸಲಾಗದಿದ್ದರೆ ಕೊನೆಗೆ ಅನುಭವವೆಂಬ ಹರಿತವಾದ ಆಯುಧದಿಂದ ಒಪ್ಪಿಸುವ ನಟನೆಯಿದೆ. ಇಲ್ಲಿನ ಭರತ ವಾಕ್ಯಗಳೇ ಮುಂದಿನ ಮಾತುಗಳಿಗೆ ದಿಕ್ಸೂಚಿಗಳಾಗಿವೆ: ‘‘ದೇವರು ಒಬ್ಬನೇ ಇದ್ದಾನೆ; ನಾನು ಒಬ್ಬನೇ ಇದ್ದೇನೆ; ಆದ ಕಾರಣ ನಾನು ದೇವರು’’ ಎಂಬ ಮಾತಿನ ಹಿಂದಿನ ಆಳವಾದ ತರ್ಕ ಎಂತಹ ಮೊಂಡುವಾದಿಗಳನ್ನೂ ಉದಾಹರಿಸಬಲ್ಲುದು. ಹಾಗೆಯೇ ‘‘ಅಹಂ ಬ್ರಹ್ಮಾ ಅಹಂ ವಿಷ್ಣುಃ ಅಹಂ ದೇವೋ ಮಹೇಶ್ವರಃಅಹಂ ಸಾಕ್ಷಾತ್ಪರಂ ಬ್ರಹ್ಮ ತಸ್ಮಾದ್ಮಾಂ ನಮಥ ಮಾನವಾಃ॥

‘‘ಈ ಅವತಾರದಲ್ಲಿ ನಾನು ಏನೂ ಕೆಲಸವನ್ನಿಟ್ಟುಕೊಂಡಿಲ್ಲ. ಇದೇ ಈ ಅವತಾರದ ಮಹತ್ವ. ಹತ್ತು ಅವತಾರಗಳಲ್ಲಿ ಎಷ್ಟು ತಿದ್ದುಪಡಿ ಮಾಡಿಯೂ ಜಗತ್ತಿನ ಸೊಟ್ಟ ಬಲವೂ ಸಮನಾಗಲೊಲ್ಲದು. ಆದ ಕಾರಣ ಈ ಸಲ ಸುಮ್ಮನಿದ್ದು ಸಾಕ್ಷಿಯಾಗಿ ಬರಿ ನೋಡಿಕೊಂಡು ಹೋಗಬೇಕೆಂದು ನಾನು ಇಳೆಗಿಳಿದಿದ್ದೇನೆ. ನಾನು ಅಡ್ಡಗೈ ಹಾಕುವುದರಿಂದಲೇ ಜಗತ್ತು ಸೊಟ್ಟಗಾಗುತ್ತಿರಬಹುದು. ಅದು ಏನೇ ಇರಲಿ. ಈ ಅವತಾರದಲ್ಲಿ ನಾನು ಏನೂ ಮಾಡತಕ್ಕವನಲ್ಲ. ತೀರ ಸಾಮಾನ್ಯ ಮನುಷ್ಯನಂತೆ ಸುಖ ದುಃಖ ಭೋಗಿಸಿ, ವಿವೇಕ-ಅವಿವೇಕ ಮಾಡಿ ದೇಹಬಿಟ್ಟು ಹೋಗತಕ್ಕವನು.

ಹೀಗಾಗಿ ಯಾರಿಗೂ ನಾನು ಅವತಾರಿಯೆಂಬ ಮಾತು ಲಕ್ಷ್ಯದಲ್ಲಿ ಬರಲಾರದು. ರಾಮಾಯಣ ಬರೆಸಲಾರೆ, ಗೀತೆ ಹೇಳಲಾರೆ; ಯಾವ ತರದ ಪ್ರಕಟನೆಯೂ ಬೇಡ, ಅದೆಲ್ಲ ಭಕ್ತರು ಮಾಡಿಕೊಂಡಿದ್ದದ್ದು. ನನಗೇನು ಬೇಕಾಗಿದೆ? ಹಾಗೇ ಹೋಗಬಾರದು ಎಂದು ಸುಮ್ಮನೆ ಇದೊಂದು ಲೇಖವನ್ನು ಬರೆದಿದ್ದೇನೆ. ಸೂಕ್ಷ್ಮವಾಗಿ ವಿಚಾರಿಸಿ ನೋಡಿದರೆ ನನ್ನ ಈ ಸುಪ್ತಸ್ವಯಂಭು ಅವತಾರವು ನನ್ನ ಹಿಂದಿನ ಎಲ್ಲ ಅವತಾರಗಳಿಗಿಂತ ಮೇಲೆಂದು ನಾನೆ ಕಾಣುವಂತಿದೆ. ಈ ಅವತಾರದಲ್ಲಿ ನನಗಾರೂ ವಿರೋಧಿಗಳೇ ಇಲ್ಲ. ಇದ್ದರೆ ಅವರನ್ನು ನಾನು ಲೆಕ್ಕಿಸಿಲ್ಲ. ವನವಾಸವಿಲ್ಲ; ಗೋಪಿಯರ ತ್ರಾಸವಿಲ್ಲ.’’

ಅವತಾರಗಳ ಕಲ್ಪನೆಯ ಅಸಂಗತತೆ ಮತ್ತು ವ್ಯರ್ಥತೆ ಹಾಗೂ ಸರಳ ಬದುಕಿನ ಯಾರೂ ದೇವರಾಗಿರಬಹುದಾದ ಆಯಾಮವೂ ಮತ್ತು ಅವರನ್ನು ಗುರುತು ಹಿಡಿಯಲಾಗದ ಗತಿಯೂ (ವೇಟಿಂಗ್ ಫೋರ್ ಗೋಡೋವಿನಂತೆ) ಈ ಹರಟೆಗಿದೆ. ಈ ಹರಟೆಯ ನೆರಳಿನಲ್ಲಿ ಇಂದಿನ ದೇವಮಾನವರನ್ನು ನೆನಪಿಸಿ ನಗಬಹುದು.

ಸಾವನ್ನು ಬಯಸುವ ಮತ್ತು ಅದು ಕೈಗೂಡದ ಕುರಿತ ಇನ್ನೊಂದು ಹರಟೆ ‘ಸಾವಿನ ಕೂಡ ಸರಸ’. ಸಾವಿನ ಕುರಿತ ವಿಭಿನ್ನ ನೆಲೆಗಳು ಈ ಹರಟೆಯಲ್ಲಿ ಸೂಕ್ಷ್ಮವಾಗಿ ನೆಲೆಗೊಳ್ಳುತ್ತವೆ. ಸಾವಿನ ಕುರಿತು ಯೋಚಿಸಿ ‘‘ಅಯ್ಯೋ ಬೇಸತ್ತೆ’’ ಎಂಬ ಪ್ರಯೋಗ ಅವರ ಭಾಷಾ ನೈಪುಣ್ಯವನ್ನೂ ಹೇಳುತ್ತದೆ. ಸಾಯಲು ಉಪಾಯ ಹುಡುಕುವ ಈ ಹರಟೆಯ ನಾಯಕನು ‘‘ಸತ್ತ ಹೊರತು ಸಾಯಲು ಬೇರೆ ಉಪಾಯವಿಲ್ಲ’’ ಎಂಬ ಸಿದ್ಧಾಂತಕ್ಕೆ ಬರುತ್ತಾನೆ. ಸಾವಿನ ಕುರಿತ ಮಾತುಗಳು ಹೀಗಿವೆ: ‘‘ಸುಲಭವಾಗಿ ಅಂದುಬಿಡುತ್ತೇವೆ-‘ನನಗೆ ಜೀವ ಬೇಡಾದರೆ ಸತ್ತುಬಿಡುತ್ತೇನೆ’’ ಎಂದು. ಅನ್ನುವುದು ಎಷ್ಟು ಸುಲಭ! ಮರಣವು ಇಷ್ಟು ಸುಲಭವಿದ್ದರೆ ಬಡಬಗ್ಗರು ಕೊಳೆಯುತ್ತಿರಲಿಲ್ಲ. ಮತ್ತು ಇಚ್ಛಾಮರಣವೆಂಬುದು ಒಂದು ದೊಡ್ಡ ಸಿದ್ಧಿಯೆಂದೂ ಎನಿಸಿಕೊಳ್ಳುತ್ತಿರಲಿಲ್ಲ.’’ ಉಸಿರುಗಟ್ಟಿ ಸಾಯುವ ಪ್ರಯತ್ನ ಪ್ರಾಣಾಯಾಮವಾಗಿ ಪರಿಣಮಿಸಿ ಆಯುವೃದ್ಧಿಯ ಪ್ರಯತ್ನವಾಗಿ ಪರಿಣಮಿಸುವ ಪ್ರಸಂಗವು ಈ ನಾಯಕನಿಗೆ ಎದುರಾಗುತ್ತದೆ. ಕೊನೆಗೆ ಎಲ್ಲ ಪ್ರಯತ್ನಗಳು ಫೇಲಾಗಿ ಆತ ಆರೋಗ್ಯವಂತನಾಗುತ್ತಾನೆ ಮತ್ತು ‘‘ಬೇನೆಯ ಜೀವಕ್ಕೆ ಬೇಸತ್ತು ಆಡಿದ ಮಾತನ್ನು ಆರೋಗ್ಯವಂತನಾದ ಮೇಲೂ ಹಾಗೆಯೇ ನಡೆಯಿಸಬೇಕೇ?’’ ಎಂಬ ತೀರ್ಮಾನಕ್ಕೆ ಬಂದು ಶಾಂತನಾಗುತ್ತಾನೆ. ಹರಟೆಯಾದರೂ ಇಲ್ಲಿ ಒಂದು ಗುಣಾತ್ಮಕ ವಿವರಣೆಯಿದೆ.

ಮಾನಪತ್ರ ಸಮಾರಂಭ ಎಂಬ ಇನ್ನೊಂದು ಹರಟೆಯು ಇಂದು ಬಹುವಾಗಿ ಕಾಣಿಸುವ ಮತ್ತು ಆ ಕಾಲದಲ್ಲೂ ಇತ್ತೆಂದು ಸಾಬೀತು ಮಾಡುವ ಒಂದು ವ್ಯಂಗ್ಯ ಲೇಖನ. ವಜಾ ಮಾಡಿದ ಆಳಿಗೂ ಒಂದು ತುಣುಕು ಮಾನಪತ್ರವನ್ನು ಕೊಟ್ಟೆನೆಂಬ ಮಾತು ಇಲ್ಲಿ ಬರುತ್ತದೆ. ಇದು ಅಂದೂ ಸತ್ಯ; ಇಂದೂ ಸತ್ಯ. ಮಾನಪತ್ರದ ಆಸೆಗೆ ಈ ವಾಕ್ಯಗಳು ಕನ್ನಡಿ ಹಿಡಿಯುತ್ತವೆ:

‘‘ಕಲೆಕ್ಟರ, ಜಡ್ಜ, ಡ್ರೈವರ, ಮಾಮಲೆದಾರ, ಚೋಪದಾರ ಇವರೆಲ್ಲರ ಆಶೆಗಳು ತೃಪ್ತವಾಗಿದ್ದರೂ ಪ್ರಯಾಣಕಾಲ ಸಮೀಪಿಸಿದಂತೆ, ಮಾನಪತ್ರದ ಆಶೆಯೊಂದು ಬಲವತ್ತರವಾಗುತ್ತದೆ. ಪರಲೋಕ ಪ್ರಯಾಣಮಾಡಲು ಸಿದ್ಧನಾದ ಮರಣಾಸನ್ನ ಮುದುಕನು ಮತ್ತೊಂದು ಪ್ರಾಂತದಲ್ಲಿ ನೌಕರಿಗಿರುವ ಮಗನ ಮೋರೆಯನ್ನಷ್ಟು ನೋಡಬೇಕೆಂದು ಆಶೆಪಡುವಂತೆ ಇವರಾದರೂ ನಿರಾಶೆಯಿಂದ ಮಾನಪತ್ರದ ಹಾದಿಯನ್ನು ಹಗಲಿರುಳು ಕಾಯುತ್ತಿರುತ್ತಾರೆ. ಮರಣೋನ್ಮುಖರ ಆಶೆಯುಳಿದರೆ ದೆವ್ವವಾಗಿ ಕಾಡಬಹುದೆಂಬ ಭೀತಿಯಿಂದ ಇವರ ಇಚ್ಛೆಗಳನ್ನು ಪೂರ್ಣಮಾಡಲು ಸುತ್ತಲಿನವರು ಯತ್ನಿಸುವಂತೆ ಕಡೆಗೊಮ್ಮೆ ಯಾವನಾದರೂ ದೀನದಾಸನು ಮಾನಪತ್ರವನ್ನು ಕೊಡುವನು.’’

ಮಾನಪತ್ರದ ವಿಡಂಬನೆಯ ನಂತರ ಲೇಖಕರು ಭಗವದ್ಗೀತೆಯನ್ನು (ಮಾನ-ಪತ್ರಂ ಪುಷ್ಪಂ ಫಲಂ ತೋಯಂ) ಉಲ್ಲೇಖಿಸಿ ಮಾನಪತ್ರದ ಶಿಷ್ಟಾಚಾರವು ಭಾರತದಲ್ಲೇ ಹುಟ್ಟಿರಬೇಕೆಂದು ಹಾಸ್ಯಮಾಡುತ್ತಾರೆ. ಕಸಬರಿಗೆಯ ಕುರಿತು ಒಂದು ಹರಟೆಯಿದೆ. ಕಸವನ್ನು ರಾಶಿ ಹಾಕುವ ಮನಸ್ಥಿತಿಯನ್ನು ವರ್ಣಿಸಿ ಕೊನೆಯಲ್ಲಿ ‘‘ಅಯ್ಯೋ! ಬುದ್ಧನೇ! ಭಾರತದ ಕಸಗುಡಿಸಿ ತಾನು ಮೂಲೆಗುಂಪಾದ ದೇವ! ಅಯ್ಯಿ, ಬುದ್ಧದೇವನನ್ನು ಕಸಬರಿಗೆ ಮಾಡಿಬಿಟ್ಟಿರುವಿರಿ! ಕಸಬರಿಗೆಯನ್ನಾದರೂ ಬುದ್ಧದೇವನನ್ನಾಗಿ ಮಾಡಿಕೊಳ್ಳಿ!’’ ಎಂದು ವ್ಯಂಗ್ಯವಾಡುತ್ತಾರೆ. (ಇಂದು ಗಾಂಧಿಯ ಪರಿಸ್ಥಿತಿಯೂ ಹೆಚ್ಚು ಕಡಿಮೆ ಹೀಗೇ ಆಗಿದೆ!)

ಉಗುಳುವುದು ಈ ವಿಚಾರದ ಬಗ್ಗೆ ಬಂದ ಮೊದಲ ಹರಟೆಯೇ ಇರಬಹುದು. ಇಂದು ನಮ್ಮನ್ನೆಲ್ಲ ಕಾಡುವ ಈ ಸಮಸ್ಯೆಯು ಅಂದು ಬೇಂದ್ರೆಯವರನ್ನು ಕಾಡುವಷ್ಟರ ಮಟ್ಟಿಗಿತ್ತೆಂಬುದನ್ನು ಗಮನಿಸಿದರೆ ಈ ದೇಶದ ಹುಚ್ಚಾಟಗಳು ಯಾವಾಗಲೂ ಒಂದೇ ರೀತಿ ಇರುತ್ತವೆನ್ನಿಸುತ್ತದೆ. ‘‘ಉಗುಳುವುದು ಮಾನವನ ಜನ್ಮಸಿದ್ಧ ಹಕ್ಕು’’, ‘‘ಮಂತ್ರಕ್ಕಿಂತ ಉಗುಳೇ ಬಹಳ’’ ಮುಂತಾದ ಉಕ್ತಿಗಳನ್ನು ಇಲ್ಲಿ ಉದಾಹರಿಸಲಾಗಿದೆ. ಸಾರ್ವಭೌಮ-ನಿರಂತರ-ವರ್ಷಾ-ಭವಿಷ್ಯ ಮತ್ತು ಹಸ್ತ ಸಾಮುದ್ರಿಕದ ಪ್ರಥಮ ಪಾಠಗಳು ಎಂಬ ಹರಟೆಗಳು ಒಂದೇ ಲೇಖನದ ಎರಡು ಭಾಗಗಳಂತಿವೆ. ನಮ್ಮ ಹಸ್ತ ಸಾಮುದ್ರಿಕ, ಜ್ಯೋತಿಷ್ಯ ಮುಂತಾದ ಮೂಢ ನಂಬಿಕೆಗಳು ಹೇಗೆ ವ್ಯವಹರಿಸುತ್ತವೆಯೆಂಬುದನ್ನು ತಿಳಿಹಾಸ್ಯದೊಂದಿಗೆ ಇಲ್ಲಿ ವಿವರಿಸಲಾಗಿದೆ.

ಆಸ್ತಿಕರಿಗೆ, ಆಚಾರವನ್ನು ಹೆಚ್ಚು ಅವಲಂಬಿಸುವವರಿಗೆ ಈ ಹರಟೆಯು ಅಪಥ್ಯವಾದೀತು. ಕೈ ತೋರಿಸಿ ಅವಲಕ್ಷಣ ಹೇಳಿಸಿಕೊಳ್ಳುವ ವಾಡಿಕೆಯ ಮಾತಿನಿಂದ ಕೇಳುವವರು ಗೊಂದಲಗೆಡುವಂತೆ ಮಾಡುವ ಮರ್ಮದ ವರೆಗೆ ಇಲ್ಲಿ ಅಪಾರ ವ್ಯಾಪ್ತಿಯ ವ್ಯಂಗ್ಯವಿದೆ.

ಕೊನೆಯ ಹರಟೆಯು ಸಾಹಿತ್ಯ ವಿಮರ್ಶಕರ ಕುರಿತ ನೇರ ವಿಡಂಬನೆ. ‘ವಿಮರ್ಶೆಗಾಗಿ’ ಎಂದರೆ ‘ಹೊಗಳಿಕೆಗಾಗಿ’ ಎಂದು ಬೇಂದ್ರೆ ವ್ಯಂಗ್ಯವಾಡುತ್ತಾರೆ. ವಿಮರ್ಶೆಯಲ್ಲಿ ದೋಷಾವಿಷ್ಕರಣಕ್ಕೆ ಸ್ಥಾನವೇ ಇಲ್ಲ ಎನ್ನುತ್ತಾರೆ. ಗ್ರಂಥಕರ್ತರು ಔಪಚಾರಿಕವೆಂಬಂತೆ, ಸೌಜನ್ಯಕ್ಕೆಂಬಂತೆ ‘‘ವ್ಯಾಕರಣ ಗೊತ್ತಿಲ್ಲ, ಛಂದಸ್ಸು ಗೊತ್ತಿಲ್ಲ; ಅಭ್ಯಾಸ ಮಾಡಿದವರಲ್ಲ; ಅನುಭವ ತೀರ ಕಡಿಮೆ’’ ಎಂದು ಬರೆದರೆ ಅದನ್ನು ಯಥಾರ್ಥವೆಂದು ಸ್ವೀಕರಿಸಬೇಕೆಂದು ಬೇಂದ್ರೆ ನಗೆಯಾಡುತ್ತಾರೆ.

ಭಾಷಾ ಗಾರುಡಿಗರಾದ ಬೇಂದ್ರೆಗೆ ಹಾಸ್ಯಕ್ಕೂ ಬೇಕಾದಂತೆ ಪದಗಳು ಸಿಗುತ್ತವೆ: ‘‘ಗ್ರಂಥದ್ದು ಒಂದು ಬಟ್ಟೆ, ಗ್ರಂಥಕರ್ತರದ್ದು ಎರಡನೆಯ ಬಟ್ಟೆ, ವಿಮರ್ಶಕರದ್ದು ಮೂರಾ ಬಟ್ಟೆ’’ ಎಂದಾಗ ಹೊಸ ಅರ್ಥವೇ ಹುಟ್ಟುತ್ತದೆ. ವರ್ತಮಾನ ಪತ್ರಿಕೆಗಳೊಳಗಿನ ವಿಮರ್ಶೆಗಳನ್ನು ನೋಡಿದರೆ-ಕವಿಗಳಿಗಿಂತ ವಿಮರ್ಶಕರೇ ನಿರಂಕುಶರೇನೋ ಎಂದೆನಿಸುವುದು. ಇಂದಿಗೂ ಈ ಚರ್ಚೆ ಬಗೆಹರಿದಿಲ್ಲ. ವಿಮರ್ಶಕರು ಈ ಹರಟೆಯನ್ನು ಓದಲೇಬೇಕು.

ಬೇಂದ್ರೆ ತಮ್ಮ ಪ್ರತಿಭೆಯನ್ನು ವಿವಿಧ ಹಂತಗಳಲ್ಲಿ ಅನಾವರಣಗೊಳಿಸಿ ದ್ದಾರೆ. ಶಬ್ದ ಮತ್ತು ಅರ್ಥಗಳ ಅನಂತವನ್ನು ಅವರು ಗದ್ಯ-ಪದ್ಯಗಳಲ್ಲಿ ತಮ್ಮ ಮೋಡಿಯ ಮೂಲಕ ತೋರಿಸುತ್ತಾರೆ. ಹರಟೆಗಳಲ್ಲೂ ಇವು ಓದುಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆಯೆಂಬುದು ಬೇಂದ್ರೆಯವರ ಕಾವ್ಯದ ವಿಸ್ಮಯವನ್ನು ಅನುಭವಿಸಿದವರಿಗೆ ಚೋದ್ಯದ ವಿಚಾರವೇನಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)