varthabharthi

ದಿಲ್ಲಿ ದರ್ಬಾರ್

ಪ್ರೆಸಿಡೆಂಟ್ ಪವಾರ್; ಇದು ಜೋಕಲ್ಲ

ವಾರ್ತಾ ಭಾರತಿ : 18 Jun, 2017

ಶರದ್ ಪವಾರ್ ಅವರು ರಾಷ್ಟ್ರಪತಿ ಸ್ಥಾನಕ್ಕೆ ವಿರೋಧ ಪಕ್ಷಗಳ ಅಭ್ಯರ್ಥಿಯಾಗಿ ರೇಸ್‌ನಲ್ಲಿದ್ದಾರೆ ಎಂಬ ವದಂತಿಗಳು ರಾಜಧಾನಿಯಲ್ಲಿ ಹರಿದಾಡುತ್ತಿವೆ. ಆದರೆ ಪವಾರ್ ಮಾತ್ರ ಈ ಬಗ್ಗೆ ಬಾಯಿ ಬಿಟ್ಟಿಲ್ಲ. ಇದು ಮತ್ತಷ್ಟು ಊಹೆಗಳಿಗೆ ಎಡೆಮಾಡಿಕೊಟ್ಟಿದೆ. ಪವಾರ್ ಬಗೆಗಿನ ವದಂತಿಯನ್ನು ವಿರೋಧ ಪಕ್ಷಗಳ ಮುಖಂಡರು ತಳ್ಳಿಹಾಕಿಲ್ಲ. ಆದರೆ ರಾಜ್ಯಸಭೆಯಲ್ಲಿ ಎನ್‌ಸಿಪಿ ಅಧ್ಯಕ್ಷರಾಗಿರುವ ಡಿ.ಪಿ.ತ್ರಿಪಾಠಿ ಅವರಿಗೆ ಮಾತ್ರ ವಾಸ್ತವ ಚಿತ್ರಣದ ಸ್ಪಷ್ಟ ಕಲ್ಪನೆ ಇದೆ. ಪಕ್ಷದ ಅಧ್ಯಕ್ಷರು ರಾಷ್ಟ್ರಪತಿ ಹುದ್ದೆಯ ರೇಸ್‌ನಲ್ಲಿದ್ದಾರೆಯೇ ಎಂದು ಇತ್ತೀಚೆಗೆ ಪತ್ರಕರ್ತರು ಪ್ರಶ್ನಿಸಿದಾಗ, ನಮ್ಮ ಅಧ್ಯಕ್ಷರು ಮೂರ್ಖರಲ್ಲ ಎಂದಷ್ಟೇ ಹೇಳಿದರು. ಹಾಗಾದರೆ ಪವಾರ್ ಏಕೆ ಮೌನವಾಗಿದ್ದಾರೆ? ನಾನು ರೇಸ್‌ನಲ್ಲಿಲ್ಲ ಎಂದು ಹೇಳುವ ಮೂಲಕ ಎಲ್ಲ ವದಂತಿಗಳಿಗೆ ತೆರೆ ಎಳೆಯಬಹುದಿತ್ತು. ಪವಾರ್ ಈ ವಂದತಿಗಳ ಮಜಾ ತೆಗೆದುಕೊಳ್ಳುತ್ತಿದ್ದಾರೆ ಎನ್ನುವುದು ತ್ರಿಪಾಠಿ ಅವರ ಅಭಿಮತ.

ಅಹ್ಲುವಾಲಿಯಾಗೆ ಬಿಸಿ ತುಪ್ಪ

ಎಸ್.ಎಸ್. ಅಹ್ಲುವಾಲಿಯಾ ಅವರ ಶಬ್ದಭಂಡಾರಕ್ಕೆ ಬರ ಇಲ್ಲ. ಆದರೆ ಮೋದಿ ಸರಕಾರದಲ್ಲಿ ಸಚಿವರಾಗಿರುವ ಇವರಿಗೆ ಇತ್ತೀಚಿನ ದಿನಗಳಲ್ಲಿ ಗಂಭೀರ ದ್ವಂದ್ವ ಎದುರಾಗಿದೆ. ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಿಂದ ಬಿಜೆಪಿ ಟಿಕೆಟ್‌ನಲ್ಲಿ ಅವರು ಸಂಸತ್ತಿಗೆ ಆಯ್ಕೆಯಾಗಿದ್ದಾರೆ. ಈ ಸ್ಥಾನದಲ್ಲಿ ಗೂರ್ಖಾಗಳ ಬೆಂಬಲದೊಂದಿಗೆ ಅವರು ಗೆಲುವು ಸಾಧಿಸಿದ್ದರು. ಆದರೆ ಈಗ ಗೂರ್ಖಾಗಳು ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಚಳವಳಿ ನಡೆಸುತ್ತಿದ್ದು, ಡಾರ್ಜಿಲಿಂಗ್ ಹೊತ್ತಿ ಉರಿಯುತ್ತಿದೆ. ಆದ್ದರಿಂದ ಅವರಿಗೆ ದಿಕ್ಕು ತೋಚದಾಗಿದೆ. ಅವರ ಪಕ್ಷ ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ಬೆಂಬಲಿಸುವಂತಿಲ್ಲ; ಏಕೆಂದರೆ ಬಿಜೆಪಿ ರಾಜ್ಯ ಘಟಕ ಅದನ್ನು ವಿರೋಧಿಸುತ್ತಿದೆ. ಅಂತೆಯೇ ಅವರು ಈ ಬೇಡಿಕೆಯಿಂದ ಅಂತರ ಕಾಯ್ದುಕೊಳ್ಳುವಂತಿಲ್ಲ. ಏಕೆಂದರೆ, ಹಾಗೆ ಮಾಡಿದರೆ ಅವರು 2019ರ ಚುನಾವಣೆಯಲ್ಲಿ ಗೂರ್ಖಾ ಬೆಂಬಲ ಕಳೆದುಕೊಳ್ಳಬೇಕಾಗುತ್ತದೆ. ಆದ್ದರಿಂದಲೇ ಅವರು ಮಾಧ್ಯಮಗಳ ಜತೆ ಇತ್ತೀಚಿನ ದಿನಗಳಲ್ಲಿ ಅಷ್ಟಾಗಿ ಮಾತನಾಡುತ್ತಿಲ್ಲ. ಅವರ ಜಾಯಮಾನಕ್ಕೆ ವಿರುದ್ಧವಾಗಿ ಶಬ್ದಗಳ ಬಳಕೆಯಲ್ಲೂ ಎಚ್ಚರ ವಹಿಸುತ್ತಾರೆ. ಆದರೆ ಗೂರ್ಖಾಗಳು ಅವರ ಸ್ಪಷ್ಟ ನಿಲುವಿಗೆ ಆಗ್ರಹಿಸುತ್ತಿರುವುದು ಅಹ್ಲುವಾಲಿಯಾ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಮುಂದಿನ ದಿನಗಳಲ್ಲಿ ಅವರ ಸಮಸ್ಯೆಗಳು ದೈತ್ಯರೂಪ ಪಡೆಯಲಿವೆ.

ಅಮಿತ್ ಶಾ ಮಾಸ್ಟರ್‌ಸ್ಟ್ರೋಕ್

ರಾಷ್ಟ್ರಪತಿ ಚುನಾವಣೆ ಬಗ್ಗೆ ವಿರೋಧ ಪಕ್ಷಗಳ ಸಲಹೆ ಪಡೆಯಲು ಬಿಜೆಪಿ ಸಮಿತಿಯೊಂದನ್ನು ರಚಿಸಿದೆ. ರಾಜನಾಥ್ ಸಿಂಗ್ ಹಾಗೂ ವೆಂಕಯ್ಯ ನಾಯ್ಡು ವಿರೋಧ ಪಕ್ಷಗಳ ಜತೆ ಸಂವಾದ ನಡೆಸುತ್ತಿರುವಾಗಲೇ, ಕೆಲ ವಿರೋಧ ಪಕ್ಷಗಳ ಮುಖಂಡರು, ಎಲ್ಲೋ ಏನೋ ಎಡವಟ್ಟಾಗಿದೆ ಎಂಬ ಸಂದೇಹ ವ್ಯಕ್ತಪಡಿಸುತ್ತಿದ್ದಾರೆ. ಇದು ಬಿಜೆಪಿಯ ಕಣ್ಣೊರಸುವ ತಂತ್ರ ಎಂದು ಸಿಪಿಎಂ ಮುಖಂಡ ಸೀತಾರಾಂ ಯೆಚೂರಿ ಹಾಗೂ ಇತರ ನಾಯಕರು ಸಂದೇಹ ವ್ಯಕ್ತಪಡಿಸಿದ್ದಾರೆ. ವಿರೋಧ ಪಕ್ಷದವರಿಗೆ ಬಂದಿರುವ ಇನ್ನೊಂದು ಸಂದೇಹವೆಂದರೆ, ಬಿಜೆಪಿಯ ಈ ಸಮಿತಿ ತಾನು ಯಾವ ಹೆಸರನ್ನೂ ಬಹಿರಂಗಗೊಳಿಸುತ್ತಿಲ್ಲ. ಬದಲಾಗಿ ಸಂಭಾವ್ಯ ರಾಷ್ಟ್ರಪತಿಗಳ ಗುಣಲಕ್ಷಣ ಹೀಗಿರಬೇಕು ಎಂದು ಹೇಳುತ್ತಿದೆ. ಇದು ಅಮಿತ್ ಶಾ ಹಾಗೂ ಮೋದಿ ಅವರ ಮಾಸ್ಟರ್‌ಸ್ಟ್ರೋಕ್ ಎನ್ನುವುದು ಬಹುತೇಕ ಬಿಜೆಪಿ ನಾಯಕರ ಅನಿಸಿಕೆ. ರಾಷ್ಟ್ರಪತಿ ಆಯ್ಕೆಗೆ ಸಂಬಂಧಿಸಿದಂತೆ ಅವರು ಈಗಾಗಲೇ ತಮ್ಮ ಹಾದಿ ಹಿಡಿದಿದ್ದಾರೆ. ಬಹುಶಃ ಸಂಘ ಪರಿವಾರದ ಜತೆ ನಿಕಟ ಸಂಬಂಧ ಇರುವವರು ಈ ಹುದ್ದೆ ಗಿಟ್ಟಿಸಿಕೊಳ್ಳಬಹುದು. ಒಮ್ಮತದ ಅಭ್ಯರ್ಥಿ ಆಯ್ಕೆ ಬಗ್ಗೆ ನಾವು ವಿರೋಧ ಪಕ್ಷಗಳ ಜತೆ ಮಾತುಕತೆ ನಡೆಸಿದ್ದವು. ಆದರೆ ಅವರು ಒಪ್ಪಿಕೊಳ್ಳಲಿಲ್ಲ ಎಂದು ಸಮರ್ಥಿಸಿಕೊಳ್ಳಲು ಬಿಜೆಪಿಗೆ ಅವಕಾಶವಿದೆ. ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ತಂತ್ರ.

ಚೌಹಾಣ್ ಹೃದಯ ಮಿಡಿಯಿತು!

ಮಂಡಸಾರ್ ಹೊತ್ತಿ ಉರಿಯುತ್ತಿದ್ದರೆ, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಹೊಗಳುಭಟರು ಬ್ಯುಸಿಯಾಗಿದ್ದರು. ತಮ್ಮ ಮನಸ್ಸಿಗೆ ಬಂದ ಕಥೆಗಳನ್ನೆಲ್ಲ ಪತ್ರಕರ್ತರಿಗೆ ಹೇಳಿ ನಂಬಿಸುವ ತರಾತುರಿಯಲ್ಲಿದ್ದರು. ರೈತರ ಹತ್ಯೆಯಿಂದ ಸಿಎಂ ಅವರಿಗೆ ತೀವ್ರ ಖೇದವಾಗಿದೆ ಎಂಬ ವಾಟ್ಸ್‌ಆ್ಯಪ್ ಸಂದೇಶಗಳು ಮಾಧ್ಯಮ ಮಿತ್ರರಿಗೆ ಬಂದವು. ‘‘ರೈತರ ಸಾವಿನ ಆಘಾತದಿಂದ ಸಿಎಂ ಊಟ ಮಾಡಲೂ ನಿರಾಕರಿಸಿದ್ದಾರೆ. ಆದ್ದರಿಂದ ಒಂದು ಚಪಾತಿಯನ್ನು ಒತ್ತಾಯಪೂರ್ವಕವಾಗಿ ತಿನ್ನಿಸಲಾಯಿತು’’ ಎಂದು ಒಬ್ಬ ಬಿಜೆಪಿ ನಾಯಕ ಸಂದೇಶ ರವಾನಿಸಿದರು. ‘‘ಅವರಿಗೆ ರಾತ್ರಿ ನಿದ್ದೆಯೇ ಬರಲಿಲ್ಲ’’ ಎಂದು ಮತ್ತೊಬ್ಬರು ಬಣ್ಣಿಸಿದರು. ಇವೆಲ್ಲದರ ಜತೆಗೆ ವರದಿಗಾರರಿಗೆ ಬಂದ ಒಂದು ಸಂದೇಶ ಹೀಗಿತ್ತು: ಚೌಹಾಣ್ ಅವರು ಸ್ವತಃ ರೈತ. ಈ ತುಂಬಲಾರದ ನಷ್ಟ ಅವರನ್ನು ಇಡೀ ರಾತ್ರಿ ಎಚ್ಚರ ಇರುವಂತೆ ಮಾಡಿತು. ಒಬ್ಬ ಪತ್ರಕರ್ತರಂತೂ ಸಿಎಂ ನಿವಾಸಕ್ಕೆ ಮಧ್ಯರಾತ್ರಿ ವೇಳೆ ಕರೆ ಮಾಡಿ, ಚೌಹಾಣ್ ಅವರಿಗೆ ದೂರವಾಣಿ ನೀಡುವಂತೆ ಕೋರಿದರು. ಅವರು ನಿದ್ದೆ ಮಾಡುತ್ತಿದ್ದಾರೆ ಎಂಬ ಉತ್ತರ ಆ ಕಡೆಯಿಂದ ಬಂತು. ಕನಿಷ್ಠ, ಬಿಜೆಪಿ ಹೊಗಳುಭಟರು, ರೈತರ ಸಂಕಷ್ಟದ ಹೆಸರಿನಲ್ಲಿ ಚೌಹಾಣ್ ಪರವಾಗಿ ಬ್ಯಾಟಿಂಗ್ ಮಾಡುವ ಪ್ರಯತ್ನ ಮಾಡಿದರು.

ಖುಲಾಯಿಸಿದ ಅದೃಷ್ಟ

ಸರ್ಜನ್ ಆಗಿದ್ದು, ರಾಜಕಾರಣಿಯಾಗಿ ಪರಿವರ್ತನೆಗೊಂಡ ಸಂಬಿತ್ ಪಾತ್ರ ಅವರ ‘ಪಾತ್ರ’ಕ್ಕೆ ಬೇಡಿಕೆ ಹೆಚ್ಚುತ್ತಿದೆ. ಎನ್‌ಡಿಟಿವಿಯ ನಿಧಿ ರಾಝ್ದಿನ್ ಜತೆಗಿನ ಅವರ ಸಿಡುಕು ಅವರಿಗೆ ಸ್ಟಾರ್ ಪಟ್ಟ ತಂದುಕೊಟ್ಟಿದೆ. ಎನ್‌ಡಿಟಿವಿ ಮೇಲೆ ದಾಳಿ ನಡೆದ ತಕ್ಷಣ, ರಾಝ್ದಿನ್ ಅವರ ಶೋದಿಂದ ಪಾತ್ರ ಅವರಿಗೆ ಕೊಕ್ ನೀಡಲಾಗಿದೆ. ಪಕ್ಷದಲ್ಲಿ ಬಿಜೆಪಿ ವಕ್ತಾರನ ವರ್ಚಸ್ಸು ಹೆಚ್ಚುತ್ತಿರುವುದನ್ನು ಇದು ಬಿಂಬಿಸುತ್ತದೆ. ಕಾಂಗ್ರೆಸ್ ಕಾರ್ಯಕಾರಿಣಿ ಸಭೆ, ಮೋದಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ ದಿನವಂತೂ ಪಾತ್ರ ಅವರ ಮಹತ್ವಕ್ಕೆ ವಿಶೇಷ ಬೆಲೆ ಬಂತು. ಶಹನವಾಝ್ ಹುಸೈನ್ ಅವರಿಗೆ ಮೊದಲು ಕಾಂಗ್ರೆಸ್ ವಿರುದ್ಧ ಪ್ರತಿದಾಳಿ ಮಾಡುವಂತೆ ಸೂಚಿಸಲಾಯಿತು. ರಾಜಕೀಯ ವನವಾಸದಲ್ಲಿರುವ ಹುಸೈನ್ ಈ ನಿಟ್ಟಿನಲ್ಲಿ ಸರ್ವ ಪ್ರಯತ್ನ ಮಾಡಿದರು. ದುರದೃಷ್ಟವೆಂದರೆ, ಅದು ಸಾಕಾಗಲಿಲ್ಲ. ಕೆಲ ಗಂಟೆಗಳ ಬಳಿಕ ಪಾತ್ರ ಅವರನ್ನು ಕಣಕ್ಕೆ ಇಳಿಸಲಾಯಿತು. ಏಕೆಂದರೆ, ಹುಸೈನ್ ಅವರ ವಾದ ಪ್ರಬಲವೂ ಆಗಿರಲಿಲ್ಲ ಮತ್ತು ಸ್ಪಷ್ಟತೆಯನ್ನೂ ಹೊಂದಿರಲಿಲ್ಲ ಎನ್ನುವುದು ನಾಯಕರ ಅಭಿಮತವಾಗಿತ್ತು. ಪಾತ್ರ, ಕಾಂಗ್ರೆಸ್ ಕಾರ್ಯಕಾರಿ ಮಂಡಳಿ ಸಭೆಯ ನಿರ್ಧಾರದ ಮೇಲೆ ವಾಗ್ದಾಳಿ ನಡೆಸಿದರು. ‘‘ಸಿಡಬ್ಲ್ಯುಸಿಗೆ ಈಗ ಕಾರ್ಯನಿರ್ವಹಿಸುವ ಕೈ ಉಳಿದಿಲ್ಲ’’ಎಂದು ಅಣಕವಾಡಿದರು. ಬಿಜೆಪಿ ನಾಯಕತ್ವಕ್ಕೆ ಪಾತ್ರ ವಾದ ಗಾಢ ಪ್ರಭಾವ ಬೀರಿತು.

***

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)