varthabharthi

ಅನುಗಾಲ

ರಾಜಕಾರಣಿಗಳೂ, ದಲಿತರ ಮನೆಯ ಊಟವೂ

ವಾರ್ತಾ ಭಾರತಿ : 22 Jun, 2017
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ದಲಿತರ ಮನೆಗಳಲ್ಲಿ ಊಟ ಮಾಡುವುದು ವಿಶೇಷವೆನಿಸಿಕೊಂಡಿದ್ದರೆ, ವಿಶೇಷವೆನಿಸಿಕೊಂಡರೆ ಹಿಂದೂ ಸಮಾಜದಲ್ಲಿ ಅಸ್ಪಶ್ಯತೆ ಇನ್ನೂ ಪೂರ್ಣ ಪ್ರಮಾಣದಲ್ಲಿದೆ ಎಂದೇ ಅರ್ಥ. ಅಂಗಾಂಗ ಊನವಿರುವ ಮಗುವನ್ನು ಬಗಲಲ್ಲಿಟ್ಟುಕೊಂಡು ಭಿಕ್ಷೆ ಬೇಡುವ ಪುರುಷ-ಮಹಿಳೆಯರನ್ನು ನೋಡುತ್ತೀರಲ್ಲ. ಅದೇ ಮಾದರಿಯ ಇನ್ನೊಂದು ರೂಪ ಇದು.


ಪಕ್ಷ ಭೇದವಿಲ್ಲದೆ ರಾಜಕಾರಣಿಗಳು ನಡೆಸುವ ಹಲವಾರು ತಂತ್ರಗಳಲ್ಲಿ ದಲಿತರ ಮನೆಯಲ್ಲಿ ವಾಸ, ಊಟ-ತಿಂಡಿಯೂ ಒಂದು. ಒಂದೊಂದು ಕಾಲದಲ್ಲಿ ಒಬ್ಬೊಬ್ಬರು ದಲಿತರನ್ನು ದಾಳಗಳನ್ನಾಗಿಸಿ ಇಂತಹ ತಂತ್ರಗಳನ್ನು ಹೂಡಿದ್ದಾರೆ; ಹೂಡುತ್ತಿದ್ದಾರೆ. ಮೊದಮೊದಲಿಗೆ ಇದೊಂದು ಕ್ರಾಂತಿಕಾರಿ ನಡೆಯಾಗಿ ಗೋಚರಿಸುತ್ತಿತ್ತು. ಅದರಿಂದ ಫಲ ಪಡೆದದ್ದೂ ಇತ್ತು. ಆದರೆ ಮತ್ತೆ ಮತ್ತೆ ಅದೇ ತಂತ್ರವನ್ನು ಹೂಡಿದರೆ ಅರ್ಥವಾಗದಷ್ಟು ಮೂರ್ಖರೇ ದಲಿತರು?

ದಲಿತರ ಮನೆಗಳಲ್ಲಿ ಊಟ ಮಾಡುವುದು ವಿಶೇಷವೆನಿಸಿಕೊಂಡಿದ್ದರೆ, ವಿಶೇಷವೆನಿಸಿಕೊಂಡರೆ ಹಿಂದೂ ಸಮಾಜದಲ್ಲಿ ಅಸ್ಪಶ್ಯತೆ ಇನ್ನೂ ಪೂರ್ಣ ಪ್ರಮಾಣದಲ್ಲಿದೆ ಎಂದೇ ಅರ್ಥ. ಅಂಗಾಂಗ ಊನವಿರುವ ಮಗುವನ್ನು ಬಗಲಲ್ಲಿಟ್ಟುಕೊಂಡು ಭಿಕ್ಷೆ ಬೇಡುವ ಪುರುಷ-ಮಹಿಳೆಯರನ್ನು ನೋಡುತ್ತೀರಲ್ಲ. ಅದೇ ಮಾದರಿಯ ಇನ್ನೊಂದು ರೂಪ ಇದು.

ಇಷ್ಟಕ್ಕೂ ದಲಿತರ ಮನೆಗೆ ಹಿಂದೆ ಮಹಾತ್ಮಾಗಾಂಧಿ ಭೇಟಿ ಕೊಡುತ್ತಿದ್ದ ಕಾಲಕ್ಕೂ ಇಂದಿಗೂ ಭಾರೀ ವ್ಯತ್ಯಾಸವಿದೆ. ವರ್ಣದ್ವೇಷವನ್ನು ಪ್ರತ್ಯಕ್ಷವಾಗಿ ಅನುಭವಿಸಿದ್ದ ಗಾಂಧಿ ತವರಿಗೆ ಮರಳಿದಾಗ ಅದು ಅಸ್ಪಶ್ಯತೆಯ ರೂಪದಲ್ಲಿ ಭಾರತದ ಸಮಾಜವನ್ನು ಆವರಿಸಿ ಆಳವಾಗಿ ಬೇರೂರಿದ್ದನ್ನು ಕಂಡರು. ಆಗ ದಲಿತರನ್ನು (ಅಥವಾ ಹಾಗೆ ಕರೆಸಿಕೊಳ್ಳುತ್ತಿದ್ದ ಕೆಳಜಾತಿ-ವರ್ಗಗಳಿದ್ದ ಮಂದಿಯನ್ನು) ಮೇಲ್ಜಾತಿ-ವರ್ಗದ (ಈ ಮೇಲು-ಕೀಳನ್ನು ನಿರೂಪಿಸಿದವರು ಯಾರು? ದಲಿತರೇ ಹೆಚ್ಚಿದ್ದರೆ ಅವರು ತಾವು ಮೇಲ್ಜಾತಿ-ವರ್ಗ ಎಂದೂ ಈಗಿನ ಮೇಲ್ಜಾತಿ-ವರ್ಗದವರು ಕೆಳಜಾತಿ-ವರ್ಗ ಎಂದೂ ಹೇಳದಿರಲಾರರೇ?) ಜನರು ಊರಿನಿಂದ ಹೊರಗೆ ನೆಲೆಸುವಂತೆ ಮಾಡಿ ಸಾರ್ವಜನಿಕ ದಾರಿ-ನೀರನ್ನು ಬಳಸದಂತೆ ನಿಷೇಧಿಸಿದ್ದರು.

ಡಾ.ಅಂಬೇಡ್ಕರ್ ನೇತೃತ್ವದಲ್ಲಿ ಮಹಾರಾಷ್ಟ್ರದ ದಲಿತರು ಸಾರ್ವಜನಿಕ ಕೆರೆಯ ನೀರನ್ನು ಬಳಸಲು ಚಳವಳಿ ಮಾಡಿದಾಗ ಭಾರೀ ಪ್ರಮಾಣದ ಹಿಂಸಾಚಾರ ನಡೆದಿತ್ತು. ಸ್ವಾತಂತ್ರ್ಯ ಪೂರ್ವದ ಅಸ್ಪಶ್ಯತೆಯ ಪ್ರಮಾಣ ಸ್ವಾತಂತ್ರ್ಯಾನಂತರವೂ ಮುಂದುವರಿದದ್ದು ಭಾರತದ ಇತಿಹಾಸದ ಮೂರ್ಖತನವನ್ನು ಸಾರಿ ಹೇಳುತ್ತದೆ. ಇದನ್ನು ವರ್ಣ ವ್ಯವಸ್ಥೆಯ ದೋಷವೆಂದಷ್ಟೇ ಹೇಳುವುದು ತಪ್ಪಾಗುತ್ತದೆ. ಬಹಳಷ್ಟು ದಲಿತರು ಕಡುಬಡವರಾಗಿರುವುದು, ಭೂಹೀನರಾಗಿರುವುದು, ದೈನಂದಿನ ದೈಹಿಕ ದುಡಿಮೆಯಿಂದಲೇ ಬದುಕುತ್ತಿರುವುದು ವರ್ಗಸಮಸ್ಯೆಯೂ ಆಗಿದೆ. (ಬಹುಪಾಲು ಮುಸ್ಲಿಮರೂ ಈ ಗತಿಯನ್ನು ಹೊಂದಿದ್ದಾರೆ.)

ಗುಲಾಮಗಿರಿಯನ್ನು ಅನುಭವಿಸುತ್ತಿದ್ದಾಗಲೂ ಈ ದೇಶದ ಮೇಲ್ಜಾತಿ ಮೇಲ್ವರ್ಗ ದಲಿತರ ಮೇಲೆ ಗುಲಾಮಗಿರಿಯನ್ನು ಹೇರಿ ಅವರನ್ನು ತುಚ್ಛವಾಗಿ ಕಾಣುತ್ತಿತ್ತು. ಆದರೆ ಬದಲಾದ ಸ್ವತಂತ್ರ ಪರಿಸ್ಥಿತಿ ಹೊಸ ಬೆಳಕನ್ನು ಎಲ್ಲರಿಗೂ ನೀಡುವ ಬದಲು ಕೆಲವರನ್ನಷ್ಟೇ ಹೆಚ್ಚು ಸಮಾನರೆಂದು ಕಂಡಿತು. ಕಳೆದ ಏಳು ದಶಕಗಳ ಅವಧಿಯಲ್ಲಿ ಈ ಪರಿಸ್ಥಿತಿ ಸ್ವಲ್ಪಮಟ್ಟಿಗೆ ಸುಧಾರಿಸಿದೆಯೆಂದು ವಾದಿಸಿದರೂ ಸಮಾನತೆಯ ತಿಳಿ ನೀರು ಸ್ವಚ್ಛಂದವಾಗಿ ಹರಿಯದೆ ಅಸಮಾನತೆಯ ಕೊಚ್ಚೆ ನೀರು ಇನ್ನೂ ಹರಿಯುತ್ತಿದೆ. ಇತಿಹಾಸದ ಅನ್ಯಾಯವನ್ನು ಸರಿಪಡಿಸಲೋಸುಗ ನೀಡಿದ ಮೀಸಲಾತಿ ಎಷ್ಟರ ಮಟ್ಟಿಗೆ ಸಾಮಾಜಿಕ ನ್ಯಾಯವನ್ನೊದಗಿಸಿದೆಯೆಂಬುದಕ್ಕೆ ಪ್ರತ್ಯೇಕ ಅಧ್ಯಯನ, ಅಂಕಿ-ಅಂಶಗಳ ಪೂರಕ ಅಗತ್ಯವಿದೆ.

ತಮಾಷೆಯೆಂದರೆ ಇತಿಹಾಸದ ಅನ್ಯಾಯವನ್ನು ಸರಿಪಡಿಸಲು ಎಂಬ ವಾದದೊಂದಿಗೆ ಅಯೋಧ್ಯೆಯ ಬಾಬರಿ ಮಸೀದಿ ಕೆಡವಿ ಅಲ್ಲಿ ಶ್ರೀರಾಮಮಂದಿರದ ನಿರ್ಮಾಣವನ್ನು ಬೆಂಬಲಿಸುವ ಮಂದಿ ಮೀಸಲಾತಿಯ ಮುಂದುವರಿಕೆಗೆ ಮಾತ್ರ ಆಕ್ಷೇಪವನ್ನೆತ್ತುತ್ತಿದ್ದಾರೆ. ಈ ಎರಡೂ ವಿಚಾರಗಳಿಗೆ ಅಗಾಧ ಅಂತರವಿದೆ. ಪೂರ್ವಕಾಲದ ಎಲ್ಲ ಅರಸೊತ್ತಿಗೆಗಳು ತಮ್ಮ ಛಾಪನ್ನು ಪೂಜಾಸ್ಥಳಗಳಲ್ಲಿ, ಅಲ್ಲಿನ ಶಿಲ್ಪಕಲೆಯಲ್ಲಿ, ಇನ್ನಿತರ ಅಂತಹ ಧಾರ್ಮಿಕ, ಸಾಂಸ್ಕೃತಿಕ ತಾಣಗಳಲ್ಲಿ ಮೂಡಿಸುತ್ತಿದ್ದರು. ಅದು ಅವರ ಬದುಕಿನ ನಂತರ-ಕೆಲವೊಮ್ಮೆ ಯುದ್ಧರಂಗದ ಸೋಲುಗಳಲ್ಲಿ-ಬದಲಾಗುತ್ತಿತ್ತು. ಯಾವುದು ದೇವಸ್ಥಾನ, ಯಾವುದು ಬೌದ್ಧ ಮಂದಿರ, ಯಾವುದು ಜೈನವಿಹಾರ, ಯಾವುದು ಚರ್ಚು, ಯಾವುದು ಮಸೀದಿ ಎಂಬುದಕ್ಕೆ ನಿರ್ದಿಷ್ಟ ಕಾಲಮಾನದ ಚರಿತ್ರೆಯನ್ನೇ ಅವಲಂಬಿಸಬೇಕು. ಕಾಲವನ್ನು ಹಿಂದೆ ತಳ್ಳುವುದರಿಂದ ಮತ್ತು ಅದನ್ನು ಸಾಮುದಾಯಿಕ ಅಗತ್ಯಗಳಲ್ಲದ ಭಾವನೆಗಳ ಉದ್ದೀಪನದಿಂದ ಪರಿವರ್ತಿಸುವುದು ಕ್ಷೋಭೆಯನ್ನು ಸೃಷ್ಟಿಸೀತೇ ಹೊರತು ಸಮಾಜವನ್ನು ಮುನ್ನಡೆಸಲಾರದು.

ಆದ್ದರಿಂದ ಸಾಮಾಜಿಕ ತುರ್ತಾದ ಸಮಾನತೆಗಾಗಿ ನಡೆಯುವ ಹೋರಾಟವೇ ಬೇರೆ; ರಾಮಮಂದಿರದಂತಹ ಭಾವನಾತ್ಮಕ ಮತ್ತು ನಂಬಿಕೆಯ ಹೊರತು ಇನ್ನಾವ ಆಧಾರವೂ ಇಲ್ಲದ ವಿಚಾರಕ್ಕಾಗಿ ನಡೆಯುವ ಹೋರಾಟವೇ ಬೇರೆ. ದುರದೃಷ್ಟವೆಂದರೆ ತಾವೇ ದಮನಕ್ಕೊಳಗಾಗುತ್ತಿದ್ದರೂ ಧಾರ್ಮಿಕ, ಮತೀಯ ಭಾವೋದ್ರೇಕಕ್ಕೆ ಅನೇಕ ದಲಿತರು ಒಳಗಾಗುತ್ತ ಉಗ್ರ ಹಿಂದುತ್ವಕ್ಕೆ ಸಾಕ್ಷಿಯಾಗುತ್ತಿರುವುದು; ಇದೊಂದು ರೀತಿಯಲ್ಲಿ ಸಿನೆಮಾದ ಖಳನಾಯಕನ ಪಡೆಯ ಮರಿಗೂಂಡಾಗಳಂತೆ ವರ್ತಿಸುವುದು; ಈ ವರ್ತನೆಯ ಲಾಭವನ್ನು ನೇಪಥ್ಯದ ಹಿಂದಿರುವ ಡಾನ್ ಪಡೆಯುವುದು. ಕರ್ನಾಟಕದ ಕರಾವಳಿಯ ಭಾಗಗಳಲ್ಲಿ ಸಾಕಷ್ಟು ಅಮಾಯಕ ದಲಿತ ಹುಡುಗರು ಇಂತಹ ಪ್ರವೃತ್ತಿಗೆ ಬಲಿ ಬೀಳುತ್ತಿದ್ದಾರೆ.

ಉಡುಪಿಯ ಕನಕನ ಕಿಂಡಿ, ಮಠ, ಕೃಷ್ಣ ದರ್ಶನ, ಇವೆಲ್ಲ ಕನಕನ ಕಾಲದಿಂದಲೂ ಗೊಂದಲದ ಗೂಡಾಗಿದೆ. ಪೇಜಾವರ ಮಠಾಧೀಶರು ಅಸ್ಪಶ್ಯತಾ ನಿವಾರಣೆಗೆಂದು ಹರಿಜನ ಕೇರಿಗೆ ಹೋದರು. ಪೂರ್ವಾವಲೋಕನ ಮಾಡಿದರೆ ಇದಕ್ಕೂ ನಮ್ಮ ರಾಜಕಾರಣಿಗಳು ನಡೆಸುವ ದಲಿತ ಮನೆಗಳಲ್ಲಿನ ಊಟಕ್ಕೂ ವಿಶೇಷ ವ್ಯತ್ಯಾಸವಿಲ್ಲ. ಮೇಲ್ಜಾತಿ- ವರ್ಗದವರು ದಲಿತರ ಮನೆಗೆ ಹೋಗುವುದಲ್ಲ; ದಲಿತರಿಗೆ ಎಲ್ಲರಂತೆ ಮನೆಗಳಲ್ಲಿ ಜಾತಿಭೇದವಿಲ್ಲದೆ, ಅಡ್ಡ ಪಂಕ್ತಿಯಿಲ್ಲದೆ, ಅಸ್ಪಶ್ಯತೆಯಿಲ್ಲದೆ ಊಟಮಾಡುವ, ಉಳಿಯುವ ವ್ಯವಸ್ಥೆ, ವ್ಯವಸ್ಥೆಗಿಂತಲೂ ಮನೋಭಾವ ಬರುವ ವರೆಗೂ ಈ ತಾರತಮ್ಯ ಮುಂದುವರಿಯಲಿದೆ.

ಮೇಲ್ಜಾತಿ-ವರ್ಗದ ಜನರೆಲ್ಲರೂ ಮಠ-ಮಂದಿರಕ್ಕೆ ಹೋಗುತ್ತಾರೆಂದೇ ನಿಲ್ಲ. ಅವರನ್ನು ನಾಸ್ತಿಕರು ಎಂದೋ ಉದ್ಧಟರು ಎಂದೋ ಮಡಿವಂತರು ಮತ್ತು ಮಠ-ಮಂದಿರಗಳ ಭಕ್ತಾಭಿಮಾನಿಗಳು ಕರೆಯುತ್ತಾರೆ. ಆದ್ದರಿಂದ ಎಲ್ಲರಿಗೂ ಮಠ-ಮಂದಿರಗಳು ಸಲ್ಲುತ್ತವೆಯೆಂದೇನೂ ಇಲ್ಲ. ಈ ಪ್ರವೃತ್ತಿಗೆ ಜಾತಿ-ವರ್ಗ ಮಾನದಂಡಗಳೇ ಅಲ್ಲ. ದಲಿತರಲ್ಲೂ ದೈವಭಕ್ತಿ, ಮಠಗಳ ಮೇಲೆ ಅಪಾರ ಅಭಿಮಾನವಿರುವ ಮಂದಿ ಇದ್ದಾರೆ. ಅಂತಹವರಿಗೆ ಇಷ್ಟಪಟ್ಟಲ್ಲಿ ಈ ಮಠ-ಮಂದಿರಗಳಲ್ಲಿ ಪೂಜಿಸುವ ಪ್ರವೇಶಾವಕಾಶವಿದೆಯೇ? ಅಂತಹ ಪ್ರವೇಶಾವಕಾಶ, ಪೂಜೆಯ ಹಕ್ಕು ದೊರೆತರೆ ನೈಜ ಸಮಾನತೆಯ ಅನಾವರಣವಾದೀತು. ಪೇಜಾವರದಂತಹವರು ಇದನ್ನು ಮಾಡುವವರೆಗೂ ಅವರ ಈ ಎಲ್ಲ ಭೇಟಿಗಳು ಒಂದು ತಂತ್ರವಾಗಿಯಷ್ಟೇ ಉಳಿಯುತ್ತವೆ.

ಇನ್ನು ದಲಿತರು ಮತ್ತು ಮೇಲ್ಜಾತಿ-ವರ್ಗದವರು ಸಂಬಂಧ ಬೆಳೆಸಬೇಕು ಇತ್ಯಾದಿಗಳು ಅವರವರ ಹೊಂದಾಣಿಕೆಗೆ ಸಂಬಂಧಿಸಿದವುಗಳು. ವಿದ್ಯಾವಂತರು, ಸ್ಫುರದ್ರೂಪಿಗಳು ಪರಸ್ಪರ ಬೆರೆತು ಅಂತರ್ಜಾತೀಯ ವಿವಾಹವಾದದ್ದಿದೆ. ಎಲ್ಲರೂ ಸುಖವಾಗಿದ್ದಾರೆಂದೇನಿಲ್ಲ (ಜಾತಿಯೊಳಗೇ ಮದುವೆಯಾದವರೂ ಸುಖವಾಗಿದ್ದಾರೆಂದೇನಿಲ್ಲ!). ಮೇಲ್ವರ್ಗದ ಅದರಲ್ಲೂ ವಿದ್ಯಾವಂತರ, ನಗರವಾಸಿಗಳ ಸಂಬಂಧಗಳಂತೂ ಇತ್ತೀಚೆಗೆ ವಿಚ್ಛೇದನಗಳಲ್ಲಿ ಪರ್ಯಾವಸಾನವಾಗುವುದೇ ಹೆಚ್ಚು. ನ್ಯಾಯಾಲಯಗಳಲ್ಲಿ ಸಿವಿಲ್ ವ್ಯಾಜ್ಯಗಳಿಗಿಂತ ಹೆಚ್ಚು ಕೌಟುಂಬಿಕ ಪ್ರಕರಣಗಳು ದಾಖಲಾಗುತ್ತಿವೆ.

ಇಂತಹ ಸಾಮಾಜಿಕ ಸಮಸ್ಯೆಗಳಿರುವಾಗ ರಾಜಕಾರಣಿಗಳು ದಲಿತರಲ್ಲಿ ಒಂದು ತಂಡವಾಗಿ ಹೋಗಿ ಅಲ್ಲಿ ವಿಶೇಷವಾಗಿ ಅಡುಗೆ ಮಾಡಿಸಿ, ಇಲ್ಲವೇ ಹತ್ತಿರದ ಹೊಟೇಲಿನಿಂದ ತರಿಸಿ, ಅಥವಾ ತಾವೇ ಹೋಗುವಾಗ ಕೊಂಡೊಯ್ದು ಉಂಡರೆ, ತಿಂದರೆ ಏನು ಸಾರ್ಥಕವಾದೀತು? ಇಷ್ಟೇ ಅಲ್ಲ, ಅವರ ಜೊತೆಗೆ ಈ ಉಣ್ಣುವ, ತಿನ್ನುವ, ಇನ್ನು ಕೆಲವೊಮ್ಮೆ ಮಲಗುವ ದೃಶ್ಯಾವಳಿಗಳನ್ನು ಚಿತ್ರೀಕರಿಸಲು ಮಾಧ್ಯಮದವರನ್ನೂ ಜೊತೆಗೆ ಕರೆದೊಯ್ಯುತ್ತಾರಲ್ಲ, ಅದು ಇನ್ನೂ ನೀಚತನ.

ಪತ್ರಿಕೆಗಳಲ್ಲಿ ದಲಿತರ ಮನೆಗಳಲ್ಲಿ ಸೊಗಸಾದ ಸ್ಟೀಲಿನ ಪಾತ್ರಪಗಡಿಗಳನ್ನು ನೋಡುವಾಗ ಇವು ಅವರದ್ದಲ್ಲವೆಂದು ರಾಜಕಾರಣಿಗಳು ತಮ್ಮ ಪಂಚತಾರಾ ಅನುಕೂಲಕ್ಕಾಗಿ ತಂದಂತಹವುಗಳೆಂದೂ ಮೇಲ್ನೋಟಕ್ಕೇ ಕಾಣಿಸುತ್ತದೆ. ಈ ಸಿನೆಮಾ ಸೆಟ್ಟಿಂಗುಗಳಂತಹ ಬದುಕಿನ ಫೋಟೊಗಳನ್ನು ನೋಡುವಾಗ ಮಾಯಾಬಝಾರ್ ಸಿನೆಮಾದ ಘಟೋತ್ಕಚನನ್ನು ನೆನಪಾಗಿ ವಾಕರಿಕೆ ಬಂದಂತಾಗುತ್ತದೆ. ಇನ್ನೂ ವಿಶೇಷವೆಂದರೆ ಈ ರಾಜಕಾರಣಿಗಳ ಆತಿಥೇಯರು ಉಣ್ಣುವ, ತಿನ್ನುವ ದೃಶ್ಯಗಳು ಇರುವುದಿಲ್ಲ. ಅವರು ಈ ಮಹಾಮಹಿಮರು ಬಂದ ಸಂತೋಷದಲ್ಲಿ ಉಪವಾಸ-ಜಾಗರಣೆಯಲ್ಲೇ ಇರುತ್ತಾರೇನೋ?

ದಲಿತರು ಇಂತಹ ತಂತ್ರಗಳನ್ನು ಸಾರಾಸಗಟಾಗಿ ತಿರಸ್ಕರಿಸುವುದಿಲ್ಲ ಯಾಕೆ? ಅವರಿಗೂ ಪ್ರಚಾರದ ಹುಚ್ಚೇ? ಅಥವಾ ಯಾವುದೋ ಸ್ವಾರ್ಥಕ್ಕೆ ಇಂತಹ ತಂತ್ರದಲ್ಲಿ ಪಾಲ್ಗೊಳ್ಳುತ್ತಾರೆಯೇ? ಅಥವಾ ದಲಿತರೆಂದು ಹೇಳಿಕೊಳ್ಳುವ ನಟನಾ ಚತುರರು ಇಂತಹ ನಾಟಕವನ್ನು ಸಿದ್ಧಗೊಳಿಸುತ್ತಾರೆಯೇ? ದಲಿತ ಸಂಘಟನೆಗಳು ಈ ವಿಚಾರದಲ್ಲಿ ಹೆಚ್ಚು ತಲೆಕೆಡಿಸಿಕೊಂಡಂತಿಲ್ಲ. ಈ ದೇಶದಲ್ಲಿ ಒಡೆದಾಳುವ ನೀತಿಯನ್ನು ಬ್ರಿಟಿಷರು ಯಾವಾಗ ತಂದರೋ ಅಲ್ಲಿಂದಲೇ ಭಾರತೀಯರು ಜಾತಿ ಭೇದವಿಲ್ಲದೆ ಇದನ್ನು ತಮ್ಮಿಳಗೇ ಅನುಷ್ಠಾನಕ್ಕೆ ತಂದಂತಿದೆ.

ಕೊನೇ ಪಕ್ಷ ದಲಿತರು ಈ ರಾಜಕಾರಣಿಗಳಿಗೆ ‘‘ಬನ್ನಿ ನಾವು ಉಣ್ಣುವ ತಿನ್ನುವ ಹಾಗೆಯೇ ನೀವೂ ತಿನ್ನಿ’’ ಎಂದು ಅವರದೇ ಸಂಪ್ರದಾಯದ ಆಹಾರವನ್ನು ತಿನ್ನಿಸಿದ್ದರೂ ಈ ರಾಜಕಾರಣಿಗಳು ಪಾಠ ಕಲಿಯುತ್ತಿದ್ದರು. ಆದರೆ ರಾಜಕಾರಣಿಗಳು ಬಂದರೆ ತಮ್ಮ ಮನೆಗಳು ಪಾವನವಾಗುತ್ತಾವೆಂದು ಕೃಷ್ಣನ ಬರವಿನಲ್ಲಿ ಮೈಮರೆತ ವಿದುರನಂತೆ ದಲಿತರು ಮನೆಗಳನ್ನು ಬಂಗಲೆಗಳಂತೆ ಶೃಂಗರಿಸಿ ಆದರಪೂರ್ವಕವಾಗಿ ವರ್ತಿಸುವಾಗ (ಅದು ಸಂಸ್ಕಾರ, ಸಂಸ್ಕೃತಿಯ ಗುಣವೆಂದು ಬಗೆದರೂ) ಯಾವಾಗ ಇವರಿಗೆ ಬುದ್ಧಿ ಬರುತ್ತದೋ ಎಂದು ಅನ್ನಿಸುತ್ತದೆ. ಪ್ರವೃತ್ತಿ ಮಠಗಳಲ್ಲಿ ಬಹಳವಾಗಿದೆ.

ಮಠಾಧೀಶರು ತಮ್ಮ ಜಾತಿ, ಪಂಗಡ, ಜನಾಂಗದಿಂದ ತಮಗೆ ಮತ್ತು ತಮ್ಮ ಪರಿವಾರಕ್ಕೆ ಬೇಕಾದ ಧನ-ಕನಕ-ವಸ್ತು-ಧಾನ್ಯಾದಿ ಆಹಾರ ಪದಾರ್ಥಗಳನ್ನು ಸಂಗ್ರಹಿಸುತ್ತಾರೆ. ಆನಂತರ ತಮ್ಮ ಮಠಗಳಲ್ಲಿ ದೊಡ್ಡ ಕಾರ್ಯಕ್ರಮಗಳನ್ನು ನಡೆಸುವಾಗ ಮಾತ್ರ ರಾಜಕಾರಣಿಗಳಿಗೆ ಮಣೆ ಹಾಕುತ್ತಾರೆ. ಹೆಚ್ಚು ಹಣ್ಣು-ಹೂವುಗಳಿರುವ ಮರ-ಗಿಡಗಳನ್ನು ತುಸುವೇ ಕುಲುಕಿದರೂ ಕೆಳಗೆ ಬೀಳುವ ಹಣ್ಣು-ಹೂವುಗಳ ಪ್ರಮಾಣ ಹೆಚ್ಚು. ಹಾಗೆಯೇ ರಾಜಕಾರಣಿಗಳೂ ಯಾವ ಜಾತಿ-ಮತ-ಪಂಥಗಳ ಮತ ತಮಗೆ ಬೀಳಬೇಕೆಂಬ ಲೆಕ್ಕಾಚಾರದಲ್ಲೇ ಆಯಾಯ ಮಠಗಳಿಗೆ ಭೇಟಿ ನೀಡುತ್ತಾರೆ. ಕೆಲವು ಮಠಗಳು ರಾಜಕಾರಣಿಗಳ ಕಪ್ಪುಹಣದ ಸಂಗ್ರಹಾಗಾರಗಳಾಗಿವೆಯೆಂಬ ವದಂತಿಯೂ ಇದೆ. ಈ ಕೊಡುಕೊಳ್ಳುವ ವ್ಯವಸ್ಥೆ ಮಠಗಳಿಂದ ದಲಿತ ಕೇರಿಗಳಿಗೆ ಹಬ್ಬುವುದು ದುರಂತ.

ದಲಿತರು ಅಂತಲ್ಲ ಎಲ್ಲ ಸಂತ್ರಸ್ತರ ಮನೆಗೂ ಭೇಟಿಕೊಡುವ ರಾಜಕಾರಣ ಒಂದು ಕಾರ್ಯಕಾರಣ. ಈಚೆಗೆ ಉತ್ತರ ಪ್ರದೇಶದ ಮುಖ್ಯ ಮಂತ್ರಿ ಮಡಿದ ಸೈನಿಕನೊಬ್ಬನ ಮನೆಗೆ ಭೇಟಿ ನೀಡುವ ಮೊದಲು ಅಲ್ಲಿ ಸೊಗಸಾದ ಸೋಫಾ ಸೆಟ್, ನೆಲಹಾಸು, ಹವಾನಿಯಂತ್ರಣ-ಅದಕ್ಕಾಗಿ ವಿದ್ಯುತ್ ಸಂಪರ್ಕ ಇವೆಲ್ಲವನ್ನೂ ಅಳವಡಿಸಲಾಗಿತ್ತಂತೆ. ಮುಖ್ಯಮಂತ್ರಿಯ ಭೇಟಿಗಲ್ಲದಿದ್ದರೂ ಈ ಸೌಕರ್ಯಗಳಿಗಾಗಿ ಆ ಮನೆಯವರು ಮುಖ್ಯ ಮಂತ್ರಿಗೆ ಧನ್ಯವಾದ ಹೇಳುವುದರಲ್ಲಿದ್ದರು; ಅಷ್ಟರಲ್ಲಿ ಅವರಿಗೆ ಇವೆಲ್ಲವೂ ಮುಖ್ಯಮಂತ್ರಿಯೊಂದಿಗೇ ಮರಳುತ್ತವೆ, ತೆರಳುತ್ತವೆ ಎಂದು ಗೊತ್ತಾಯಿತು. ಇಂತಹ ತೋರಿಕೆಯ ಕಣ್ಕಟ್ಟುಗಳು ರಾಜಕಾರಣಿಗಳಿಗಲ್ಲದೆ ಇನ್ಯಾರಿಗೆ ದಕ್ಕೀತು?

‘ದಲಿತರು ಬಂದರು ದಾರಿಬಿಡಿ’ ಎಂಬ ಕವಿವಾಣಿಗೆ ಬದಲಾಗಿ ‘ದಲಿತರ ಮನೆಗೆ ರಾಜಕಾರಣಿ ಬಂದರು, ದಾರಿ ಬಿಡಿ’ ಎಂದು ಹಾಡ ಬೇಕೇನೋ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)