varthabharthi

ನೇಸರ ನೋಡು

ಜಿ.ಎಚ್.ನಾಯಕರ ವಿಮರ್ಶಾ ‘ವಿನಯ’

ವಾರ್ತಾ ಭಾರತಿ : 25 Jun, 2017
ಜಿ.ಎನ್.ರಂಗನಾಥ ರಾವ್

ಆಧುನಿಕತೆಯನ್ನು ಒಪ್ಪಿಕೊಂಡರೂ ಅದಕ್ಕೆ ಅಧೀನರಾಗಲಿಲ್ಲ. ಪರಂಪರೆಯನ್ನು ಧಿಕ್ಕರಿಸಲಿಲ್ಲ ಅಥವಾ ಪರಂಪರೆಗೆ ಡೊಗ್ಗು ಸಲಾಮು ಹಾಕುವ ದಾಸರೂ ಆಗಲಿಲ್ಲ. ಡಾ.ಬಿ.ದಾಮೋದರ ರಾವ್ ಹೇಳಿರುವಂತೆ, ವಿಮರ್ಶಕನಲ್ಲಿ ಸಜ್ಜನಿಕೆಗಿಂತ ಸತ್ಯನಿಷ್ಠುರತೆಯೇ ಹೆಚ್ಚು ಬೆಲೆಯುಳ್ಳ ಗುಣ ಎಂಬ ಎಫ್.ಅರ್.ಲೀವಿಸನ ಮಾನದಂಡವೇ ನಾಯಕರ ಸಾಹಿತ್ಯ ವಿಮರ್ಶೆಯ ಮಾನದಂಡವಾಯಿತು.


ಕನ್ನಡ ನವ್ಯ ಸಾಹಿತ್ಯ ಮತ್ತು ನವ್ಯ ವಿಮರ್ಶೆ ಇಂಗ್ಲಿಷ್ ಪ್ರೊಫೆಸರುಗಳರಿಂದಲೇ ಹುಟ್ಟಿಬೆಳೆಯಿತೆಂಬ ಬಾಲಿಶ ಅಭಿಪ್ರಾಯಗಳನ್ನು ಸಾಹಿತ್ಯ ಚರಿತ್ರೆಯಲ್ಲಿ ದಾಖಲಿಸುವ ತಿರಸ್ಕರಣೀಯ ಪ್ರಯತ್ನಗಳು ನಡೆಯುತ್ತಿದ್ದ ದಿನಗಳಲ್ಲೇ ಕನ್ನಡದ ಸ್ವೋಪಜ್ಞತೆ ಮತ್ತು ಸಂವೇದನೆಗಳಿಂದ ಎದ್ದುಕಂಡವರು, ಇಂದು ಕನ್ನಡದ ನಿಷ್ಕಳಂಕ ವಿಮರ್ಶಕರೆಂದು ಖ್ಯಾತರಾಗಿರುವ ಜಿ.ಎಚ್.ನಾಯಕರು.

ಈ ವರ್ಷದ ಮಾಸ್ತಿ ಸಾಹಿತ್ಯ ಪ್ರಶಸ್ತಿಗೆ ಪಾತ್ರರಾಗಿರುವ ಜಿ.ಎಚ್.ನಾಯಕರು ಕನ್ನಡ ವಿಮರ್ಶೆಯ ಗೌರವವನ್ನು ಬೆಳೆಸಿದ ತೀನಂಶ್ರೀ, ಡಿ.ಎಲ್.ಎನ್. ಅವರುಗಳ ಪಾಂಡಿತ್ಯ ಪ್ರತಿಭಾ ಪರಂಪರೆಗೆ ಸೇರಿದವರು. ಇಪ್ಪತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಬರವಣಿಗೆ ಪ್ರಾರಂಭಿಸಿ ಇಂದಿನವರೆಗೆ ಕನ್ನಡ ವಿಮರ್ಶೆಯನ್ನು ಮುಂದಕ್ಕೆ ನಡೆಸಿದವರು. 1960-1980ರ ನಡುವಣ ಕಾಲಾವಧಿ ಕನ್ನಡ ನವ್ಯ ಸಾಹಿತ್ಯದ ಒಂದು ಮಹತ್ವದ ಘಟ್ಟ.ಕನ್ನಡ ಭಾಷೆ ನವ್ಯ ಸಾಹಿತ್ಯದ ಬೀಜಾಂಕುರದಿಂದ ಹಿಡಿದು ಫಲಭರಿತ ವೃಕ್ಷವೆಂಬ ರೂಪಕದ ಮರ್ಯಾದೆ ಪಡೆದ ಕಾಲಘಟ್ಟವಿದು.ಈ ಕಾಲಾವಧಿಯಲ್ಲಿ ಗೋಪಾಲಕೃಷ್ಣ ಅಡಿಗ, ಅನಂತ ಮೂರ್ತಿ, ಟಿ.ಜಿ.ರಾಘವ, ಲಂಕೇಶ, ಚಂಪಾ, ಸಿ.ಪ., ಮೊದಲಾದವರ ಸೃಜನಶೀಲತೆಯಲ್ಲಿ ಕನ್ನಡ ಸಾಹಿತ್ಯ ನವ್ಯಕ್ಕೆ ಹೊಡೆಮರಳಿ ಅಭಿವ್ಯಕ್ತಿ ಪಡೆದಂತೆ ಅದಕ್ಕೆ ಸರಿಗಟ್ಟುವಂತೆ ಕನ್ನಡ ವಿಮರ್ಶೆಯಲ್ಲೂ ಹೊಸ ದಿಗಂತವೊಂದು ಕಾಣಿಸಿಕೊಂಡಿತು. ವಸ್ತುನಿಷ್ಠತೆ-ಕೃತಿನಿಷ್ಠತೆ, ಮೌಲ್ಯಮಾಪನ,ವಿನಯ ಮೊದಲಾಗಿ ವಿಮರ್ಶೆಯಲ್ಲಿ ಹೊಸ ಪರಿಭಾಷೆಯೊಂದು ಸೃಷ್ಟಿಗೊಂಡಿತು. ಈ ಹೊಸ ವಿಮರ್ಶೆಯನ್ನು ರೂಪಿಸಿದವರಲ್ಲಿ ಎಂ.ಜಿ.ಕೃಷ್ಣ ಮೂರ್ತಿ,ದಾಮೋದರ ರಾವ್ ಮತ್ತು ಜಿ.ಎಚ್.ನಾಯಕ, ಗಿರಡ್ಡಿ ಗೋವಿಂದರಾಜ ಐತಿಹಾಸಿಕವಾಗಿ ಮುಖ್ಯರು.

 ಜಿ.ಎಚ್.ನಾಯಕರು ಮೂಲತಃ ಉತ್ತರ ಕನ್ನಡ ಜಿಲ್ಲೆಯವರು. ಹುಟ್ಟೂರು ಅಂಕೋಲ ತಾಲೂಕಿನ ಸೂರ್ವೆ .ಜನನ 1935ರ ಸೆಪ್ಟಂಬರ್ 18ರಂದು. ತಂದೆ ಶ್ರೀ ಹಮ್ಮಣ್ಣ ನಾಯಕರು,ಗಾಂಧಿವಾದಿಗಳು. ‘ಎರಡನೆಯ ಬಾರ್ದೋಲಿ’ಎಂದು ಸ್ವಾತಂತ್ರ್ಯ ಹೋರಾಟದ ಚರಿತ್ರೆಯಲ್ಲಿಪ್ರಖ್ಯಾತವಾಗಿರುವ ಅಂಕೋಲಾದಲ್ಲಿ ನಡೆದ ಕರನಿರಾಕರಣೆ,ಚಲೇಜಾವ್ ಚಳವಳಿಗಳಲ್ಲಿ ಭಾಗವಹಿಸಿದವರು. ಹೀಗೆ ಮನೆಯಲ್ಲಿನ ಸ್ವಾತಂತ್ರ್ಯ, ಸತ್ಯಾಗ್ರಹದ ವಾತಾವರಣ. ಜಿ.ಎಚ್.ನಾಯಕರು ಎಳವೆಯಿಂದಲೇ ಸ್ವತಂತ್ರ ಮನೋಭಾವ ಮತ್ತು ಸಾಮಾಜಿಕ ಪ್ರಜ್ಞೆಯನ್ನು ರೂಢಿಸಿಕೊಂಡವರು. ಉನ್ನತ ವ್ಯಾಸಂಗವೆಲ್ಲ ಮೈಸೂರಿನಲ್ಲಿ.

ಡಿ.ಎಲ್.ನರಸಿಂಹಾಚಾರ್, ತೀನಂಶ್ರೀ, ಜಿ.ಎಸ್.ಶಿವರುದ್ರಪ್ಪ, ಪ್ರಭುಶಂಕರ ಮೊದಲಾದಕನ್ನಡದ ಆಚಾರ್ಯರುಗಳ ಪಾಠಪ್ರವಚನಗಳಿಂದ ಸಾಹಿತ್ಯಾಧ್ಯಯನದಲ್ಲಿ ಆಸಕ್ತರಾದರು. ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಎಂ.ಎ.ಸ್ನಾತಕೋತ್ತರ ಪದವಿ ಪಡೆದರು. ನಂತರ ಮೈಸೂರು ಮಹಾರಾಜ ಕಾಲೇಜಿನಲ್ಲಿ ಅಧ್ಯಾಪನ ವೃತ್ತಿ ಆರಂಭಿಸಿದರು. ಅಧ್ಯಾಪನ ಮತ್ತು ಸಾಹಿತ್ಯಾಧ್ಯಯನಗಳೇ ವೃತ್ತಿಪ್ರವೃತ್ತಿ ಎಲ್ಲವೂ ಆಗಿ ಒಳ್ಳೆಯ ಮೇಷ್ಟ್ರು-ಒಳ್ಳೆಯ ವಿಮರ್ಶಕರು ಎನ್ನುವ ಹೆಗ್ಗಳಿಕೆಗೆ ಬಲುಬೇಗನೆ ಪಾತ್ರರಾದರು.

ನಾಯಕರು ಸಾಹಿತ್ಯ ವಿಮರ್ಶೆ ಬರೆಯಲಾರಂಭಿಸಿದ್ದು ನವ್ಯಪ್ರಜ್ಞೆ ಕನ್ನಡ ಸಾಹಿತ್ಯದ ವಾತಾವರಣವನ್ನು ಗಾಢವಾಗಿ ಕಲಕಿದ್ದ ದಿನಗಳಲ್ಲಿ. ಅಡಿಗ,ಅನಂತ ಮೂರ್ತಿಯವರುಗಳ ಒಡನಾಟ. ಸಹಜವಾಗಿಯೇ ಸಾಹಿತ್ಯದಲ್ಲಿ ಉಲ್ಲಸಿತವಾಗಿದ್ದ ಮನಸ್ಸು, ನವ್ಯದತ್ತ ವಾಲಿದ್ದರಲ್ಲಿ, ಹೊಸ ಸಂವೇದನೆಗಳು ಮೊಳೆತದ್ದರಲ್ಲಿ ಆಶ್ಚರ್ಯವೇನಿಲ್ಲ.

ಆದರೆ ಸೋಜಿಗದ ಸಂಗತಿ ಎಂದರೆ ನಾಯಕರು ಆಧುನಿಕತೆಯನ್ನು ಒಪ್ಪಿಕೊಂಡರೂ ಅದಕ್ಕೆ ಅಧೀನರಾಗಲಿಲ್ಲ. ಪರಂಪರೆಯನ್ನು ಧಿಕ್ಕರಿಸಲಿಲ್ಲ ಅಥವಾ ಪರಂಪರೆಗೆ ಡೊಗ್ಗು ಸಲಾಮು ಹಾಕುವ ದಾಸರೂ ಆಗಲಿಲ್ಲ. ಡಾ.ಬಿ.ದಾಮೋದರ ರಾವ್ ಹೇಳಿರುವಂತೆ, ವಿಮರ್ಶಕನಲ್ಲಿ ಸಜ್ಜನಿಕೆಗಿಂತ ಸತ್ಯನಿಷ್ಠುರತೆಯೇ ಹೆಚ್ಚು ಬೆಲೆಯುಳ್ಳ ಗುಣ ಎಂಬ ಎಫ್.ಅರ್.ಲೀವಿಸನ ಮಾನದಂಡವೇ ನಾಯಕರ ಸಾಹಿತ್ಯ ವಿಮರ್ಶೆಯ ಮಾನದಂಡವಾಯಿತು.

 ನವ್ಯ ಸಂವೇದನೆಯ ದಟ್ಟ ಪ್ರಭಾವವನ್ನೂ,ಕನ್ನಡದ ಬಸಿರೊಳಗೆ ಇನ್ನೂ ಜೀವಂತವಾಗಿದ್ದುಕೊಂಡು ಪುಳಕದ ಒದೆತಗಳನ್ನು ಕೊಡುತ್ತಿದ್ದ ಪರಂಪರೆ ಇವರೆಡನ್ನೂ ತಮ್ಮ ಪ್ರಜ್ಞೆಯ ಹಿಡಿತಕ್ಕೆ ತೆಗೆದುಕೊಂಡು ನಾಯಕರು ನಿರ್ವಹಿಸಿರುವ -ನಿಭಾಯಿಸಿರುವ ರೀತಿ, ತೋರಿರುವ ನೈತಿಕ ಸ್ಥೈರ್ಯ ಕನ್ನಡ ವಿಮರ್ಶೆಗೆ ಹೊಸ ಮೇಲ್ಪಂಕ್ತಿ ಹಾಕಿರುವ ರೀತಿಯದು. ನವ್ಯದ ಆಮಿಷಗಳಿಗೆ ಬಲಿಯಾಗದೇ, ಒಂದು ದೂರದಿಂದ ನವ್ಯವನ್ನು ಪರಾಮರ್ಶಿಸುವ ದೃಢಮನಸ್ಥಿತಿ ಹಾಗೂ ಪರಂಪರೆ ಎಂದರೆ ಭವ್ಯವೇ ಎನ್ನುವ ಅಂಧಆರಾಧಕತೆಯ ಜಾಡಿಗೂ ಬೀಳದೆ ಹಳಗನ್ನಡ ಮತ್ತು ನಡುಗನ್ನಡ ಕೃತಿಗಳ ಮರು ಓದಿನ ಮೂಲಕ ಸತ್ಯನಿಷ್ಠ ಮೌಲ್ಯಮಾಪನದಲ್ಲಿ ತೊಡಗಿದ್ದು ಜಿ.ಎಚ್.ನಾಯಕರ ವಿಮರ್ಶೆಯ ಅಸ್ಮಿತೆ, ವೈಶಿಷ್ಟ್ಯ.

ಇದರಿಂದಾಗಿ ಪಂಪ,ರನ್ನ,ರಾಘವಾಂಕರಿಂದ ಹಿಡಿದು ಹೊಸಗನ್ನಡದ ಕಾರಂತರವರೆಗೆ ಆಧುನಿಕತೆಯ ಬೆಳಕಿನಲ್ಲಿ ಕನ್ನಡ ಸಾಹಿತ್ಯದ ಮರು ಓದಿಗೆ ನಾಂದಿ ಹಾಡಿದರು.
ಜಿ.ಎಚ್.ನಾಯಕರ ವಿಮರ್ಶೆಯಲ್ಲಿ ಎರಡು ಮಾದರಿಗಳು ನಮಗೆ ಢಾಳವಾಗಿ ಗೋಚರಿಸುತ್ತವೆ. ಸಾಹಿತ್ಯ ಸಮೀಕ್ಷೆ ಅವರ ವಿಮರ್ಶೆಯ ಒಂದು ರಖಂ. ಮತ್ತೊಂದು ಮೌಲ್ಯಮಾಪನ ಕೇಂದ್ರಿತ ಕೃತಿನಿಷ್ಠ ವಿಮರ್ಶೆ. ಇದು ಇಂಗ್ಲಿಷಿನ ಪ್ರಾಕ್ಟಿಕಲ್ ಕ್ರಿಟಿಸಿಸಂಗೆ ಅವಿನಾಭಾವಿಯಾದದ್ದು. ನಾಯಕರ ಸಾಹಿತ್ಯ ಸಮೀಕ್ಷೆಗಳು ಸಾಮಾನ್ಯ ಅರ್ಥದ ಪತ್ರಿಕಾ ಸಮೀಕ್ಷೆಗಳಲ್ಲ. ಪತ್ರಿಕಾ ಸಮೀಕ್ಷೆಗಳಂತೆ, ಅವರೂ ಇದ್ದರು,ಇವರೂ ಬಂದರು, ಒಬ್ಬರ ವರ್ಚಸ್ಸು ಜೋರಾಗಿತ್ತು, ಮತ್ತೊಬ್ಬರದು ಕೆಳ ಮುಖವಾಗಿತ್ತು ರೀತಿಯ ಕಾನೇಷುಮಾರಿ.

ನಾಯಕರ ಸಮೀಕ್ಷೆಯೆಂದರೆ ಒಂದು ಕಾಲಘಟ್ಟದ ಚಾರಿತ್ರಿಕ ವಿಮರ್ಶೆ. ಒಂದು ಕಾಲಘಟ್ಟದ ಗುಣಲಕ್ಷಣಗಳೇನು, ಆಗಿನ ರುಚಿ-ಅಭಿರುಚಿಗಳು ಹೇಗಿದ್ದವು, ಅ ಕಾಲಘಟ್ಟದ ಚಾರಿತ್ರಕ ಹಿನ್ನೆಲೆಗಳೇನು, ನವೀನತೆ, ಸಂವೇದನೆಗಳೇನು ಇತ್ಯಾದಿಗಳೆಲ್ಲವನ್ನೂ ಸೂಕ್ಷ್ಮಾತಿಸೂಕ್ಷ್ಮವಾಗಿ ಪರಾಮರ್ಶಿಸಿ ಒಂದು ನಿರ್ಣಯಕ್ಕೆ ಬರುವುದು ನಾಯಕರ ಸಾಹಿತ್ಯ ಸಮೀಕ್ಷೆಗಳ ವೈಶಿಷ್ಟ್ಯ.ಅವರು ವೆಂಕನಾಣಿ ಶೀನರುಗಳನ್ನು ಪಟ್ಟಿಮಾಡುವುದಿಲ್ಲ. ಹಲವು ಹನ್ನೊಂದು ಕಾರಣಗಳಿಗಾಗಿ ,ಮುಖ್ಯವಾಗಿ ಸಾಹಿತ್ಯೇತರ ಕಾರಣಗಳಿಗಾಗಿ ಅನಾಮಧೇಯರನ್ನೂ ಸಿಂಹಾಸನದಲ್ಲಿ ಕೂರಿಸುವುದು ನಾಯಕರ ಸಾಹಿತ್ಯ ಸಮೀಕ್ಷೆಯ ಜಾಯಮಾನವಲ್ಲ.

ಚರಿತ್ರೆಯ ಒಂದು ಕಾಲಘಟ್ಟದ ಬದುಕನ್ನು,ಅದರ ಪ್ರಜ್ಞಾವಂತಿಕೆ, ಸಂವೇದನೆಗಳನ್ನು ಮುಖ್ಯವಾಗಿ ಗಮನದಲ್ಲಟ್ಟುಕೊಂಡು ಸಾಹಿತ್ಯವೂ ಸೇರಿದಂತೆ ಎಲ್ಲ ಕಲೆಗಳು ಹೇಗೆ ಅವಕ್ಕೆ ಪ್ರತಿಕ್ರಿಯಿಸಿವೆ, ಸಂವೇದಿಯಾಗಿವೆ ಎಂದು ಅವಲೋಕಿಸುವ ಪ್ರಯತ್ನವನ್ನು ವಿಮರ್ಶಕನೊಬ್ಬ ಮಾಡಿದಾಗ ಅಭಿರುಚಿ ಸಂಬಂಧಿತ ಸಂಘರ್ಷಗಳು ಉದ್ಭವಿಸುವುದು ಸಹಜ. ಜಿ.ಎಚ್.ನಾಯಕರ ವಿಮರ್ಶೆ ಇಂಥ ಅನೇಕ ಸಂಘರ್ಷಗಳನ್ನು ಎದುರಿಸಿದೆ. ಅವುಗಳಲ್ಲಿ ನನಗೆ ತಕ್ಷಣ ನೆನಪಿಗೆ ಬರುತ್ತಿರುವುದು ಅವರಿನ್ನೂ ಸಾಹಿತ್ಯ ವಿಮರ್ಶೆಯ ವ್ಯವಸಾಯ ಪ್ರಾರಂಭಿಸಿದ ತಾರುಣ್ಯದ ದಿನಗಳ ಒಂದು ಸಂಘರ್ಷ.

ವರ್ಷ: 1972. ಸ್ವಾತಂತ್ರ್ಯೋತ್ತರ ಕನ್ನಡ ಸಾಹಿತ್ಯ ಮಾರ್ಗಗಳ ಸಂಕ್ಷಿಪ್ತ ಸಮೀಕ್ಷೆ-ಜಿ.ಎಚ್.ನಾಯಕರ ಈ ಲೇಖನ ಕೇಂದ್ರ ಸಾಹಿತ್ಯ ಅಕಾಡಮಿಯ ಇಂಡಿಯನ್ ಲಿಟರೇಚರ್ ಸಿನ್ಸ್ ಇಂಡಿಪೆಂಡೆನ್ಸ್(1973) ಎಂಬ ಗ್ರಂಥದಲ್ಲಿ ಪ್ರಕಟವಾಯಿತು. ಈ ಗ್ರಂಥದ ಸಂಪಾದಕರು ಶ್ರೀ ಕೆ.ಆರ್.ಶ್ರೀನಿವಾಸ ಅಯ್ಯಂಗಾರರು. ಇದು ನಾಯಕರು ಕೇಂದ್ರ ಸಾಹಿತ್ಯ ಅಕಾಡಮಿಯ ಕೋರಿಕೆಯ ಮೇಲೆ ಬರೆದ ಲೇಖನ.ಈ ಲೇಖನ ಪ್ರಕಟವಾದದ್ದೇ ಕನ್ನಡ ಸಾಹಿತ್ಯ ಲೋಕದಲ್ಲಿ ಕೋಲಾಹಲವನ್ನೆಬ್ಬಿಸಿತು.ಇಂಥದೊಂದು ಬಿರುಗಾಳಿಯನ್ನು ಹುಟ್ಟುಹಾಕಿದವರು ಕನ್ನಡದ ಇನ್ನೊಬ್ಬ ನಾಯಕರು. ಅವರು ಹ.ಮಾ.ನಾಯಕರು. ಹಾಮಾನಾ ಅವರಿಗೆ ದೇಜಗೌ,ಶಂಕರ ಮೊಕಾಶಿ ಪುಣೇಕರ, ಪ್ರಭುಶಂಕರ,ಪರ್ವತವಾಣಿ,ಮೊದಲಾದವರು ಬೆಂಬಲವಾಗಿ ನಿಂತರು.

...ಇಪ್ಪತ್ತೈದು ವರ್ಷಗಳ ಕನ್ನಡ ಸಾಹಿತ್ಯದ ಸಮೀಕ್ಷೆ ನಡೆಸಿರುವ ಇಪ್ಪತ್ತು ಪುಟಗಳ ಲೇಖನದಲ್ಲಿ ನವ್ಯರಿಗೆ 13 ಪುಟ ಮೀಸಲಿಟ್ಟು,ಬೇಂದ್ರೆಯವರಿಗೆ 9 ಸಾಲು,ಕೆ.ವಿ.ಪುಟ್ಟಪ್ಪ ಅವರಿಗೆ ಒಂದು ಪುಟಕ್ಕಿಂತ ಕಡಿಮೆ ಸ್ಥಳಕೊಟ್ಟಿರುವ ಲೇಖಕರು,ಮಾಸ್ತಿ, ಡಿ.ವಿ.ಜಿ.,ಪು.ತಿನ.,ಭೈರಪ್ಪ ಅವರ ಹೆಸರನ್ನು ಹೇಳಿಲ್ಲ...ಹೊರಗಿನವರು ಕನ್ನಡ ಸಾಹಿತಿಗಳು ಮತ್ತು ಸಾಹಿತ್ಯದ ಬಗ್ಗೆ ಗುರುತಿಸಿ ಪ್ರಶಂಸಿಸುತ್ತಿರುವಾಗ ನಮಗೆ ನಮ್ಮವರು ಮಾಡಿರುವ ಕೆಲಸವೇ ಬಹಳ ಸಣ್ಣದಾಗಿ ಕಾಣಿಸುವುದು ದು:ಖದ ವಿಷಯ... ಸಾಹಿತ್ಯವನ್ನು ಸಮಗ್ರ ದೃಷ್ಟಿಯಿಂದ ನೋಡದ ಕೆಲವು ವಿಮರ್ಶಕರು ಇಂದು ಸಾಹಿತಿಗಳನ್ನಲ್ಲದಿದ್ದರೂ ಸಾಹಿತ್ಯವನ್ನು ಕೊಲ್ಲುತ್ತಿದ್ದಾರೆ.

ಇಂಥ ವಿಮರ್ಶಕರ ಬಗ್ಗೆ ಎಚ್ಚರ ಅಗತ್ಯ.. ಎಂದು ಹಾಮಾನಾ ಗದಾ ಪ್ರಹಾರ ಮಾಡಿದರು. ಜಿ.ಎಚ್.ನಾಯಕರ ಈ ಲೇಖನ ಕುರಿತಂತೆ ಪ್ರಜಾವಾಣಿಯಲ್ಲಿ ಈ ಅಂಕಣಕಾರನೂ ಸೇರಿದಂತೆ ಹಲವಾರು ಲೇಖಕರ ಪರ-ವಿರೋಧ ಪ್ರತಿಕ್ರಿಯೆಗಳ ಸುರಿಮಳೆಯಾಯಿತು. ಆದರೆ ಈ ವಾದ-ವಿವಾದಗಳು ಶುರುವಾಗುವುದಕ್ಕೂ ಮುಂಚೆಯೇ, ಡಾ.ಹಾ.ಮಾ.ನಾಯಕರೇ ಭಾರತ ಸ್ವಾತಂತ್ರ್ಯದ ಬೆಳ್ಳಿಹಬ್ಬದ ನೆನಪಿನಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ಕನ್ನಡ ಸಮ್ಮೇಳನವೊಂದರಲ್ಲಿ ಸ್ವಾತಂತ್ರ್ಯೋತ್ತರ ಕನ್ನಡ ಸಾಹಿತ್ಯಎಂಬ ಪ್ರಬಂಧ ಮಂಡಿಸಿದ್ದ ಡಾ.ಬಿ.ದಾಮೋದರ ರಾವ್ ಅವರು, ಜಿ.ಎಚ್.ನಾಯಕರ ಲೇಖನದ ಬಗ್ಗೆ ಹೀಗೆ ಹೇಳಿದ್ದಾರೆ:

ಸಮಕಾಲೀನ ಸಂವೇದನೆಯುಳ್ಳ ವಿಮರ್ಶಕ ಸಾಹಿತ್ಯದ ದಿಕ್ಕು-ದೆಸೆಯನ್ನು ನಿರ್ಣಯಿಸುವುದರಲ್ಲಿ ಭಾಗಿಯಾಗುವುದು ಸಾಧ್ಯ ಎಂಬ ಹೊಣೆಗಾರಿಕೆಯ ಎಚ್ಚರ ಜಿ.ಎಚ್.ನಾಯಕರ ಲೇಖನಗಳ ಒಂದು ಮುಖ್ಯ ಲಕ್ಷಣವಾಗಿದೆ. ಅವರ ‘ಸ್ವಾತಂತ್ರ್ಯೋತ್ತರ ಕನ್ನಡ ಸಾಹಿತ್ಯ ಮಾರ್ಗಗಳ ಸಮೀಕ್ಷೆ’ತನ್ನ ಶಿಷ್ಟ ನಾಜೂಕು(ಸೊಫೆಸ್ಟಿಕೇಶನ್) ಮತ್ತು ಸೂಕ್ಷ್ಮತೆಗಳಿಂದಾಗಿ ಸಾಂಪ್ರದಾಯಿಕ ಸಮೀಕ್ಷೆಯ ರೀತಿಗೆ ಗಂಭೀರ ವಿಮರ್ಶೆಯ ಆಯಾಮವನ್ನು ತಂದುಕೊಟ್ಟಿದೆ. ದಾಮೋದರ ರಾವ್ ಅವರ ಲೇಖನ ಹಾ.ಮಾ, ನಾಯಕರ ಸಂಪಾದಕತ್ವದ ‘ಬಿಡುಗಡೆ ಬೆಳ್ಳಿ’ಸಂಪುಟದಲ್ಲಿ ಪ್ರಕಟವಾಗಿದೆ.

ಹಾ.ಮಾ.ನಾಯಕರು ಇದನ್ನು ಇಲ್ಲಿಗೇ ಬಿಡಲಿಲ್ಲ. ಕೇಂದ್ರ ಸಾಹಿತ್ಯ ಅಕಾಡಮಿಯ ಕನ್ನಡ ಸಲಹಾ ಸಮಿತಿ ಸಭೆಯಲ್ಲಿ ಜಿ.ಎಚ್.ನಾಯಕರ ವಿರುದ್ಧ ಗದಾಪ್ರಹಾರ ಮುಂದುವರಿಸಿದರು. ಜಿ.ಎಚ್.ನಾಯಕರ ಲೇಖನವನ್ನು ಪರಿಷ್ಕರಿಸದೇ ಪುನರ್‌ಮುದ್ರಿಸಬಾರದೆಂದೂ, ಬೇರೆ ಭಾಷೆಗಳಿಗೆ ಅನುವಾದ ಮಾಡಿಸಬಾರದೆಂದೂ, ಇನ್ನು ಮುಂದೆ ಕನ್ನಡ ಸಾಹಿತ್ಯದ ಬಗ್ಗೆ ಲೇಖನಗಳನ್ನು ಜಿ.ಎಚ್.ನಾಯಕರಿಂದ ಬರೆಸಬಾರದೆಂದೂ ಠರಾವನ್ನು ಪಾಸು ಮಾಡಿಸುವುದರಲ್ಲಿ ಹಾಮನಾ ವರ್ಚಸ್ಸು ಸಫಲವಾಯಿತು.ಇದೆಲ್ಲ ಈಗ ಇತಿಹಾಸ. ಆದರೆ ಇದಾವುದೂ ನಾಯಕರ ಸತ್ಯನಿಷ್ಠ ವಿಮರ್ಶನ ಪ್ರಜ್ಞೆಯನ್ನು ಕುಗ್ಗಿಸಲಿಲ್ಲ, ಪ್ರತಿಯಾಗಿ ಚುರುಕೊಗೊಳಿಸಿತೆಂಬುದಕ್ಕೆ ನಂತರದ ವರ್ಷಗಳಲ್ಲಿ ಪ್ರಕಟವಾಗಿರುವ ಅವರ ವಿಮರ್ಶಾ ಕೃತಿಗಳೇ ಸಾಕ್ಷಿ.

‘ಸಮಕಾಲೀನ’ ಜಿ.ಎಚ್.ನಾಯಕರ ಪ್ರಥಮ ವಿಮರ್ಶಾ ಸಂಕಲನ 1973ರರಲ್ಲಿ ಪ್ರಕಟಗೊಂಡಿತು. ಈ ನಾಲ್ಕು ದಶಕಗಳಲ್ಲಿ ನಾಯಕರ ಎಂಟಕ್ಕೂ ಹೆಚ್ಚು ವಿಮರ್ಶಾ ಸಂಕಲನಗಳು ಪ್ರಕಟಗೊಂಡಿವೆ. ನಾಯಕರ ವಿಮರ್ಶೆಯ ಅಸ್ಮಿತೆಯ ಅನನ್ಯ ಛಾಪು ನಮಗೆ ಸ್ಪಷ್ಟವಾಗಿ ಗೋಚರಿಸುವುದು ಅವರ ‘ಸಾಹಿತ್ಯ ಸಮೀಕ್ಷೆ’ಗಳಲ್ಲಿ. 1972-1997ರ ಕಾಲಾವಧಿಯಲ್ಲಿ ಬರೆದ ಹತ್ತು ಪ್ರಬಂಧಗಳ ಸಂಕಲನ ‘ಸಾಹಿತ್ಯ ಸಮೀಕ್ಷೆ’. ಸ್ವಾತಂತ್ರೋತ್ತರ ಕನ್ನಡ ಸಾಹಿತ್ಯ ಮಾರ್ಗಗಳಿಂದ ಹಿಡಿದು,ಪರಂಪರೆ ಮತ್ತು ಸಮಕಾಲೀನ ಕನ್ನಡ ಸಾಹಿತ್ಯ,ಪ್ರಾಚೀನ ಮತ್ತು ಆಧುನಿಕ ಕನ್ನಡ ಸಾಹಿತ್ಯದವರೆಗೆ ವ್ಯಾಪಿಸಿದೆ ಇಲ್ಲಿನ ಲೇಖನಗಳ ಸಮೀಕ್ಷೆಯ ಹರಹು.

ಹೊಸಗನ್ನಡ ಕವಿತೆ, ಸಣ್ಣಕತೆ: ಒಲವುನಿಲುವುಗಳು, ಕನ್ನಡದಲ್ಲಿ ನವ್ಯ ಕಾವ್ಯ, ಆಧುನಿಕ ಕನ್ನಡ ಸಾಹಿತ್ಯ ಸಂದರ್ಭ ಮತ್ತು ಮುಸ್ಲಿಂ ಸಂವೇದನೆ ಮೊದಲಾದ ಲೇಖನಗಳು ಚಾರಿತ್ರಿಕ ಗತಿಯನ್ನೂ ಗಮನದಲ್ಲಿಟ್ಟುಕೊಂಡು, ದಾಮೋದರ ರಾವ್ ಹೇಳಿರುವಂತೆ, ಕನ್ನಡ ಸಾಹಿತ್ಯದ ದಿಕ್ಕುದಿಸೆಗಳನ್ನು ನಿರ್ಣಯಿಸುವ ಮಾದರಿಯ ಲೇಖನಗಳಾಗಿವೆ.ಈ ಸಮೀಕ್ಷಾ ಲೇಖನಗಳು ನಾಯಕರ ಚಾರಿತ್ರಕ ದೃಷ್ಟಿಕೋನ ಮತ್ತು ಪರಂಪರೆಯ ಪ್ರಜ್ಞೆಗೆ ಉತ್ತಮ ನಿದರ್ಶನಗಳಾಗಿವೆ.

ಇಲ್ಲಿಯವರೆಗಿನ ಕನ್ನಡ ಸಾಹಿತ್ಯ ಚರಿತ್ರೆಗಿಂತ ನಾಯಕರ ಈ ಸಮೀಕ್ಷಾ ಲೇಖನಗಳು ವಿಭಿನ್ನವಾಗಿ ಕಾಣುವುದು ಅವರು ಪ್ರಾಚೀನ ಸಾಹಿತ್ಯದ ಗುಣದೋಷಗಳನ್ನು ಗುರುತಿಸುವುದರಲ್ಲಿ ಹಾಗೂ ಭಾಷೆ-ಛಂದಸ್ಸು-ಶೈಲಿಗಳಲ್ಲಿನ ವೈವಿಧ್ಯ ಮತ್ತು ಬದಲಾವಣೆಗಳನ್ನು ತರ್ಕಬದ್ಧವಾಗಿ ವಿವೇಚಿಸುವುದರಲ್ಲಿ ಹಾಗೂ ಈ ವಿಮರ್ಶಾ ಕ್ರಮದಲ್ಲಿ ಕಂಡುಬರುವ ಕನ್ನಡ ಸಾಹಿತ್ಯ ಪರಂಪರೆಯ ಪುನರ್‌ಮೌಲ್ಯೀಕರಣದಿಂದಾಗಿ. ‘ಇಂದಿರಾ ಬಾಯಿ’ ಮತ್ತು ‘ಕನ್ನಡ ಕಾದಂಬರಿಯ ಮೊದಲ ಹೆಜ್ಜೆಗಳು’ ಕನ್ನಡ ಕಾದಂಬರಿಯ ಉಗಮ ಮತ್ತು ಸ್ವರೂಪವನ್ನು ವಿವೇಚಿಸುವ ಇತಿಹಾಸ ಪ್ರಬಂಧಗಳು. ಪಂಪನ ಅಭಿವ್ಯಕ್ತಿ ಮತ್ತು ‘ಪಂಪನ ಪದ್ಯವೊಂದರ ಪುನರ್ವಿಮರ್ಶೆ’, ‘ಹರಿಶ್ವಂದ್ರ ಕಾವ್ಯ’ ವಿಮರ್ಶೆಗಳು ಜಿ.ಎಚ್.ನಾಯಕರ ಕೃತಿನಿಷ್ಠ ಮೌಲ್ಯಮಾಪನ ವಿಮರ್ಶಾ ವಿಧಾನಕ್ಕೆ ತೋರು ಬೆರಳಂತಿವೆ.

ನಿಜವನ್ನು ಹೇಳುವ ನೈತಿಕ ಧೈರ್ಯ ಮತ್ತು ವಿನಯ ವಿಮರ್ಶೆಯಲ್ಲಿರಬೇಕಾದ ಆದರ್ಶ ಗುಣಗಳೆಂಬುದನ್ನು ನಾಯಕರು ಮನಗಂಡಿದ್ದಾರೆ.ಈ ನಿಲುವಿನೊಂದಿಗೆ ರಾಜಿಮಾಡಿಕೊಳ್ಳದ ಅಚಲ ಮನಸ್ಸು ಅವರ ವಿಮರ್ಶೆಗಳ ಉದ್ದಗಲ ನಮಗೆದುರಾಗುತ್ತವೆೆ.ವಿನಯವೆಂದರೆ ಮುಖವಾಡಧರಿಸಿದ ತೋರಿಕೆಯ ವಿನಯವಲ್ಲ. ಎಸ್.ಆರ್.ವಿಜಯಶಂಕರ್ ಹೇಳುವಂತೆ, ಜಿ.ಎಚ್.ನಾಯಕರದುಸಾಹಿತ್ಯದಲ್ಲಿ ವಿನಯವನ್ನು ಮರೆಯದ ಮೌಲ್ಯಮಾಪನ ಕ್ರಮದ ವಿಮರ್ಶೆ... ಎಂದರೆ ತನ್ನ ಅನುಭವ ಸತ್ಯವನ್ನು ಭಾಷೆಯಲ್ಲಿ ಸಾಕಾರಗೊಳಿಸುವ ಬರಹಗಾರ, ತನ್ನ ಸೃಜನಶೀಲ ಚೈತನ್ಯಕ್ಕೆ ತನ್ನನ್ನು ಅರ್ಪಿಸಿಕೊಳ್ಳುವಲ್ಲಿ ಪ್ರಕಟವಾಗುವ ವಿನಯ.ಜೀವನ ಪ್ರವಾಹದಲ್ಲಿ ಬರಹಗಾರನೊಬ್ಬನ ಮನಸ್ಸಿನಲ್ಲಿ ಅಂಕಿಸಿದ ಅನುಭವ ಪರಿಪೂರ್ಣ ಸತ್ಯವೇ ಆಗಿರಬೇಕಾಗಿಲ್ಲ.

ಅದು ಸಾಪೇಕ್ಷ ಸತ್ಯವೇ ಆಗಿದ್ದೀತು ಎಂಬ ಅರಿವು ಅವರ ವಿನಯದ ತಾತ್ವಿಕತೆ.ವಿಜಯಶಂಕರರ ಮಾತನ್ನೇ ಇನ್ನೂ ಸ್ವಲ್ಪ ವಿಶದಪಡಿಸಿ ಹೇಳುವುದಾದರೆ, ವಿಮರ್ಶಕನೊಬ್ಬ, ಬರಹಗಾರನ ಸೃಜನಶೀಲ ಚೈತನ್ಯವನ್ನು ಗೌರವಿಸುವ ಹಾಗೂ ಆ ಸೃಜನಶೀಲ ಚೈತನ್ಯಕ್ಕೆ ತನ್ನನ್ನು ಒಡ್ಡಿಕೊಳ್ಳುವ ವಿನಯವದು. ‘ಗುಣ ಗೌರವ’ದಲ್ಲಿನ ಶಿವರಾಮ ಕಾರಂತರು, ಪ್ರಭುಶಂಕರ, ಚದುರಂಗ, ಬಿ,ಜಿ.ಎಲ್.ಸ್ವಾಮಿ ಅವರುಗಳನ್ನು ಕುರಿತ ಲೇಖನಗಳು ಮೇಲಿನ ಮಾತಿಗೆ ಉತ್ತಮ ಉದಾಹರಣೆಯಾಗಬಲ್ಲವು.

 ಜಿ.ಎಚ್.ನಾಯಕರ ಈ ‘ವಿನಯಕ್ಕೆ’ ನಾಡು ತಡವಾಗಿಯಾದರೂ ಸ್ಪಂದಿಸಿರುವುದುಂಟು. ಪ್ರತಿಷ್ಠಿತ ಪಂಪ ಪ್ರಶಸ್ತಿ ಅವರಿಗೆ ಬಂದದ್ದೂ ತಡವಾಗಿ, ಪ್ರದಾನವಾದದ್ದೂ ತಡವಾಗಿ.ಇಂದು ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ವಲಯದ ಪ್ರತಿಷ್ಠಿತ ಮಾಸ್ತಿ ಪ್ರಶಸ್ತಿ ಪ್ರದಾನ. ನಾಯಕರಿಗೆ ಹೇಳೋಣ: ಸ್ವಸ್ತಿ-ಸ್ವಸ್ತಿ-ಸ್ವಸ್ತಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)