ಚಾನೆಲ್ಗಳ ಹೆಸರು ಇಂಗ್ಲಿಷ್ನಲ್ಲೇಕೆ?
ಮಾನ್ಯರೆ,
ಕನ್ನಡ ನಾಡು-ನುಡಿ, ನೆಲ-ಜಲ ವಿವಾದ ಉಂಟಾದಾಗ ದಿನವಿಡೀ ಸಮೂಹ ಮಾಧ್ಯಮದಲ್ಲಿ ಅದನ್ನೇ ತೋರಿಸಿ ಕನ್ನಡ ಪ್ರೇಮ ಮೆರೆಯುವ ಕನ್ನಡ ಸುದ್ದಿ ಮಾಧ್ಯಮ(ಟಿವಿ ಚಾನೆಲ್)ಗಳು ತಮ್ಮ ಚಾನೆಲ್ ಲೋಗೊಗಳನ್ನು ಮಾತ್ರ ಇಂಗ್ಲಿಷ್ ಬರಹದಲ್ಲೇ ಕಟ್ಟಿಕೊಂಡಿರುವುದು ಯಾವ ನ್ಯಾಯ.? ನಾಡಿನ ಜನರಿಗೆ ಜಾಗೃತಿ ಮೂಡಿಸುವ ಮಾಧ್ಯಮಗಳೇ ಹೀಗೆ ಕನ್ನಡ ಭಾಷೆಯನ್ನು ಕಡೆಗಣಿಸಿದರೆ ಇನ್ನು ಸಾಮಾನ್ಯ ಜನರಲ್ಲಿ ಕನ್ನಡ ಭಾಷಾಭಿಮಾನ ಹೇಗೆ ಮೂಡಲು ಸಾಧ್ಯ?. ಆದ್ದರಿಂದ ಕನ್ನಡ ಸುದ್ದಿ ಮಾಧ್ಯಮಗಳು ಇಂಗ್ಲಿಷ್ನಲ್ಲಿ ಇರುವ ತಮ್ಮ ಚಾನೆಲ್ಗಳ ಹೆಸರನ್ನು ಕನ್ನಡ ಭಾಷೆಗೆ ಬದಲಿಸಿ ನಂತರ ಜನರಲ್ಲಿ ಕನ್ನಡ ಜಾಗೃತಿ ಮೂಡಿಸಲಿ ಮೊದಲು ತಾವು ಬದಲಾಗಿ ಮತ್ತೆ ಸಮಾಜದ ಬದಲಾವಣೆಗೆ ಧ್ವನಿಯಾಗಲಿ.
ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಭಾಷೆ ಸಂಪೂರ್ಣ ಅವನತಿಯತ್ತ ತಲುಪಿದೆ. ಇಲ್ಲಿನ ಯಾವುದೇ ಬ್ಯಾಂಕು ಅಥವಾ ಇನ್ನಿತರ ಸಂಸ್ಥೆಗಳ ಕಚೇರಿಗಳಿಗೆ ಹೋದರೂ ಇಂಗ್ಲಿಷ್ ಅಥವಾ ಹಿಂದಿ ಮಾತನಾಡಬೇಕಾದ ಅನಿವಾರ್ಯತೆ ಬಂದೊದಗಿದೆ. ರಾಜ್ಯದಲ್ಲಿರುವ ಕನ್ನಡಿಗರೇ ಕನ್ನಡ ಭಾಷೆಯ ಕಗ್ಗೊಲೆ ಮಾಡುತ್ತಿರುವುದು ವಿಷಾದಕರ ಸಂಗತಿ.